ಹಿಂದೂ ಧರ್ಮದ ಪುರಾಣಗಳ ಪ್ರಕಾರ ಏಳು ಜನ ಋಷಿಗಳೇ ಸಪ್ತರ್ಷಿಗಳು. ಕಶ್ಯಪ, ವಸಿಷ್ಠ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ ಮತ್ತು ಗೌತಮ ಮಹರ್ಷಿಗಳನ್ನು ಸಪ್ತರ್ಷಿಗಳೆಂದು ಕರೆಯಲಾಗುತ್ತದೆ.
ಕಶ್ಯಪ
ಕಶ್ಯಪ ಸಪ್ತರ್ಷಿಗಳಲ್ಲಿ ಒಬ್ಬ.ಮರೀಚಿ ಮಹರ್ಷಿಯ ಮಗ. ಅತ್ಯಂತ ಪ್ರಾಚೀನನೆಂದು ಶ್ರುತಿಗಳು ಹೇಳುತ್ತವೆ. ವೇದಮಂತ್ರ ದ್ರಷ್ಟಾರನಾದ ಈತನ ವ್ಯಕ್ತಿತ್ವ ಬಹುಮುಖಶಕ್ತಿಯ ಪ್ರತೀಕವಾಗಿ ತೋರುತ್ತದೆ.ಪ್ರಜಾಪಿತ ಬ್ರಹ್ಮನ ಮಗನಾದ ಮರೀಚಿ ಮಹರ್ಷಿ ಕರ್ದಮ ಮುನಿಯ ಮಗಳಾದ ಕಲಾಳನ್ನು ಮದುವೆಯಾದರು. ಈ ದಂಪತಿಗಳಿಗೆ ಜನಿಸಿದ ಮಗನೇ ಕಶ್ಯಪ. ಈತನಿಗೆ ದಿತಿ, ಅದಿತಿ, ದನು, ಕಲಾ, ದನಾಯು, ಸಿಂಹಿಕಾ, ಕ್ರೋಧಾ, ಪ್ರಾಧಾ, ವಿಶ್ವಾ, ವಿನತಾ, ಕಪಿಲಾ, ಮುನಿ, ಕದ್ರು ಎಂಬ ಹದಿಮೂರು ಮಂದಿ ಹೆಂಡತಿಯರು. ಅದಿತಿಯ ಮಕ್ಕಳೇ ಆದಿತ್ಯರು. ದಿತಿಯ ಮಕ್ಕಳು ದೈತ್ಯರು. ಉಳಿದ ಪತ್ನಿಯರಲ್ಲಿ ನಾಗರು, ಉರಗರು ಮೊದಲಾದವರ ಉತ್ಪತ್ತಿಯಾಯಿತು. ದಿವಸ್ವಂತನಿಗೂ ಗರುಡನಿಗೂ ಕಶ್ಯಪನೇ ತಂದೆ. ಈತ ಒಬ್ಬ ಪ್ರಜಾಪತಿಯೂ ಆಗಿದ್ದ. ವಾಮನಾವತಾರದಲ್ಲಿ ವಿಷ್ಣುವಿಗೆ ಈತ ಪಿತ, ಪರಶುರಾಮನಿಗೂ ದಾಶರಥಿ ರಾಮನಿಗೂ ಪುರೋಹಿತ.
ವಸಿಷ್ಠ

ವಸಿಷ್ಠ ಬ್ರಹ್ಮರ್ಷಿ, ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ. ಕಶ್ಯಪನಿಗೆ ಅದಿತಿಯಲ್ಲಿ ಮಿತ್ರಾ ವರುಣರೆಂಬ ಅವಳಿ ಮಕ್ಕಳು ಹುಟ್ಟಿದರು. ಇವರಿಬ್ಬರು ಒಮ್ಮೆ ಮಾಡಿದ ಯಜ್ಞಕ್ಕೆ ದೇವತೆಗಳು, ಗಂಧರ್ವರು, ಪಿತೃಗಳಲ್ಲದೆ, ಅಪ್ಸರೆಯರಲ್ಲೆಲ್ಲ ಹೆಚ್ಚು ಸುಂದರಿಯಾದ ಊರ್ವಶಿಯೂ ಬಂದಳು. ದೀಕ್ಷಾಬದ್ಧರಾಗಿದ್ದ ಇವರಿಬ್ಬರ ದೃಷ್ಟಿ ಊರ್ವಶಿಯ ಮೇಲೆ ಬಿತ್ತು. ಇಬ್ಬರೂ ವಿಕಾರ ವಶರಾದರು. ಅಖಂಡನಿಷ್ಠೆಯಿಂದ ಪಾಲಿಸಿದ್ದ ಇವರ ಬ್ರಹ್ಮಚರ್ಯ ಸಡಿಲವಾಯಿತು. ಇಬ್ಬರಿಗೂ ವೀರ್ಯಸ್ಖಲನವಾಗಿ ಅದನ್ನು ಒಂದು ಕುಂಭದಲ್ಲಿಟ್ಟರು. ಅದರಲ್ಲಿ ಇಬ್ಬರು ಮಕ್ಕಳು ಜನಿಸಿದರು. ಮೊದಲನೆಯ ಮಗು ಅಗಸ್ತ್ಯ. ಆಮೇಲೆ ಕುಂಭದಲ್ಲಿದ್ದ ನೀರನ್ನು ಸರೋವರದಲ್ಲಿ ಚೆಲ್ಲಿದಾಗ ಅದರಲ್ಲಿದ್ದ ಎರಡನೆಯ ಮಗು ಸರೋವರದಲ್ಲಿ ತೇಲುತ್ತ ಬಂದು ಒಂದು ಕಮಲ ದಳದ ಮೇಲೆ ಕುಳಿತಿತು. ಇದು ವಿಶಿಷ್ಟರೀತಿಯಲ್ಲಿ ಜನಿಸಿದ್ದರಿಂದ ಇದಕ್ಕೆ ವಸಿಷ್ಠನೆಂದು ಹೆಸರಾಯಿತು. ಅಗಸ್ತ್ಯ ಹುಟ್ಟಿದ ಕೂಡಲೆ ಮಿತ್ರನಿಗೆ ನಾನು ನಿನ್ನ ವೀರ್ಯದಿಂದ ಹುಟ್ಟಿದವನಲ್ಲ ಎಂದುದರಿಂದ ವಸಿಷ್ಠ ಮಿತ್ರನ ಮಗನೆಂದಾಯಿತು.
ಅತ್ರಿ
ಅತ್ರಿ ಬ್ರಹ್ಮನ ಮಾನಸಪುತ್ರ. ಸಪ್ತರ್ಷಿಗಳಲ್ಲಿ ಒಬ್ಬ. ಮಂತ್ರದ್ರಷ್ಟನಾದ ಮಹರ್ಷಿ. ಕರ್ದಮ ಬ್ರಹ್ಮನ ಮಗಳಾದ ಅನಸೂಯೆಯನ್ನು ಮದುವೆಯಾಗಿ ಚಂದ್ರ, ದತ್ತಾತ್ರೇಯ ಮತ್ತು ದೂರ್ವಾಸರನ್ನು ಪಡೆದ. ವನವಾಸದಲ್ಲಿದ್ದ ಶ್ರೀರಾಮ, ಈತನ ಆಶ್ರಮಕ್ಕೆ ಬಂದಾಗ ಅನೇಕ ಧರ್ಮರಹಸ್ಯಗಳನ್ನು ಅವನಿಗೆ ಬೋಧಿಸಿದ. ಕೆಲವು ಕಾಲ ಬ್ರಹ್ಮಪಟ್ಟದಲ್ಲಿದ್ದ.
ವಿಶ್ವಾಮಿತ್ರ
ವಿಶ್ವಾಮಿತ್ರ ಪ್ರಾಚೀನ ಭಾರತದಲ್ಲಿ ಬಹಳ ಪೂಜನೀಯರಾದ ಸನ್ಯಾಸಿಗಳಲ್ಲಿ ಒಬ್ಬರು. ಋಗ್ವೇದದ ೩ನೇ ಮಂಡಲದ ಬಹುಪಾಲು ಮಂತ್ರಗಳನ್ನು ರಚಿಸಿದ ಒಬ್ಬ ಮಹಾನ್ ಸಂತ. ಸನ್ಯಾಸಿಯಾಗುವ ಮುನ್ನಿನ ಜೀವನದಲ್ಲಿ ಒಬ್ಬ ಚಂದ್ರವಂಶದಲ್ಲಿ ವಿಶ್ವರಥ ಹೆಸರಿನ ಕ್ಷತ್ರಿಯ ರಾಜನಾಗಿದ್ದ.
ಜಮದಗ್ನಿ
ಜಮದಗ್ನಿಯು ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬ. ರೇಣುಕಾದೇವಿ ಈತನ ಪತ್ನಿ. ಈತನಿಗೆ ಐದು ಜನ ಮಕ್ಕಳಿದ್ದರು. ವಿಷ್ಣುವಿನ ಅವತಾರವಾದ ಪರಶುರಾಮ ಈತನ ಕೊನೆಯ ಮಗ.
ಭಾರದ್ವಾಜ
ಭಾರದ್ವಾಜರು (ಅಥವಾ ಬೃಹಸ್ಪತ್ಯ) ಪ್ರಾಚೀನ ಭಾರತದ ಪೂಜನೀಯ ವೈದಿಕ ಋಷಿಗಳಲ್ಲಿ ಒಬ್ಬರು. ಇವರು ಹೆಸರುವಾಸಿ ವಿದ್ವಾಂಸ, ಅರ್ಥಶಾಸ್ತ್ರಜ್ಞ ಹಾಗೂ ಶ್ರೇಷ್ಠ ವೈದ್ಯನಾಗಿದ್ದರು. ಇವರು ಸಪ್ತರ್ಷಿಗಳಲ್ಲಿ ಒಬ್ಬರು. ಪ್ರಾಚೀನ ಭಾರತೀಯ ಸಾಹಿತ್ಯ, ಮುಖ್ಯವಾಗಿ ಪುರಾಣಗಳು ಹಾಗೂ ಋಗ್ವೇದದಲ್ಲಿ ಇವರ ಕೊಡುಗೆಗಳು ಅಂದಿನ ಭಾರತೀಯ ಸಮಾಜದಲ್ಲಿ ಒಳನೋಟ ನೀಡುವಲ್ಲಿ ಗಣನೀಯ ಪಾತ್ರ ವಹಿಸಿದವು.ಇವರು ಮತ್ತು ಇವರ ಶಿಷ್ಯವರ್ಗವು ಋಗ್ವೇದದ ಆರನೇ ಗ್ರಂಥದ ಲೇಖಕರು ಎಂದು ಪರಿಗಣಿಸಲಾಗಿದೆ. ಭಾರದ್ವಾಜರು ಪಾಂಡವರು ಹಾಗೂ ಕೌರವರಿಬ್ಬರಿಗೂ ಗುರುವಾಗಿದ್ದರು, ಮಹಾಭಾರತದ ಒಬ್ಬ ಮುಖ್ಯ ಪಾತ್ರನಾಗಿದ್ದ ಬ್ರಾಹ್ಮಣಯೋಧ ದ್ರೋಣನ ತಂದೆಯಾಗಿದ್ದರು.

ಗೌತಮ ಮಹರ್ಷಿ
ಗೌತಮ ಮಹರ್ಷಿಸಪ್ತರ್ಷಿಗಳಲ್ಲಿ ಒಬ್ಬ. ದೀರ್ಘತಮ ಮತ್ತು ಪ್ರದ್ವೇಷಿಣಿಯರ ಮಗ. ಈತನ ತಂದೆ ಆಂಗಿರಸ ಕುಲದವನಿದ್ದು ಬೃಹಸ್ಪತಿಯ ಶಾಪದ ಮೂಲಕ ಹುಟ್ಟುಕುರುಡನಾಗಿದ್ದ. ಎಷ್ಟೋ ಕಡೆಗಳಲ್ಲಿ ದೀರ್ಘತಮ ತಾನೇ ಗೌತಮ ಎಂದು ಹೇಳಿಕೊಂಡಿದ್ದಾನೆ. ಗೌತಮನಿಗೆ ಔಶೀನರೀ ಎಂಬ ಶೂದ್ರ ಸ್ತ್ರೀಯಲ್ಲಿ ಕಕ್ಷೀವಾನ ಮುಂತಾದ ಮಕ್ಕಳು ಹುಟ್ಟಿದರು. ಸನತ್ಕುಮಾರ ಈತನಿಗೆ ಬ್ರಹ್ಮವಿದ್ಯೆ ಹೇಳಿಕೊಟ್ಟ ಗುರು. ಗೌತಮನಿಗೆ ಹಂಸ ಮತ್ತು ಪರಮಹಂಸ ಧ್ಯಾನವನ್ನು ಹೇಗೆ ಮಾಡಬೇಕೆಂದು ಗುರು ಹೇಳಿಕೊಟ್ಟ. ಗೌತಮನನ್ನು ಬ್ರಹ್ಮರ್ಷಿ ಎಂದು ಕರೆಯಲಾಗಿದೆ. ಬ್ರಹ್ಮದೇವನ ಮಾನಸಕನ್ಯೆ ಅಹಲ್ಯೆ ಈತನ ಹೆಂಡತಿ. ಗೌತಮೀ ಎಂಬುದು ಈಕೆಯ ಒಂದು ಹೆಸರು. ಶತಾನಂದ ಈಕೆಯ ಮಗ. ಈಕೆಯ ಹೆಸರಿನಿಂದಲೇ ಗೋದಾವರಿ ನದಿಗೆ ಗೌತಮೀ ಎಂಬ ಹೆಸರು ಬಂದಿದೆ. ವೃಷಾದರ್ಭಿ ಎಂಬ ರಾಜ ತನ್ನ ರಾಜ್ಯದಲ್ಲಿ ಅನ್ನ ಕ್ಷಾಮ ಒದಗಿದ್ದರಿಂದ ಋಷಿಗಳಿಗೆ ದಾನ ಕೊಡಲು ನಿಶ್ಚಯಿಸಿದಾಗ ಆ ದಾನವನ್ನು ನಿರಾಕರಿಸಿದ ಏಳು ಋಷಿಗಳಲ್ಲಿ ಗೌತಮನೂ ಒಬ್ಬ. ತನ್ನ ಶಿಷ್ಯ ಉದಂಕನಿಗೇ ಮಗಳನ್ನು ಕೊಟ್ಟು ಲಗ್ನ ಮಾಡಿದನೆನ್ನಲಾಗಿದೆ.
ಧನ್ಯವಾದಗಳು.
GIPHY App Key not set. Please check settings