ತುಳುನಾಡಿನ ಜನಪದ ಕಲೆಗಳಲ್ಲಿ ಪುರುಷ ಕುಣಿತ ಎಂಬುದು ಕೂಡ ಒಂದು. ಈ ಕುಣಿತಕ್ಕೆ ತುಳುನಾಡಿನ ಹಳ್ಳಿಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಪುರುಷ ಪ್ರಧಾನವಾದ ಈ ಕುಣಿತವನ್ನು ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಕುಣಿತ ಮಾಡುವುದು ಕಲೆಯ ವಿಶೇಷತೆಯಾಗಿದೆ.
ತುಳುನಾಡಿನ ಜನಪದ ಕುಣಿತಗಳಲ್ಲಿ ಆಚರಣಾತ್ಮಕ ಕುಣಿತಗಳು ಮತ್ತು ಮನೋರಂಜನಾತ್ಮಕ ಕುಣಿತಗಳೆಂಬ ಎರಡು ರೀತಿಯ ಕುಣಿತಗಳಿವೆ. ಅದರಲ್ಲಿ ಪ್ರಮುಖ ಕುಣಿತಗಳಲ್ಲಿ ಒಂದು ‘ಪುರುಷರ ಕುಣಿತ’. ಈ ಕುಣಿತ ಐವೆರ್ ಪುರುಷೆರ್, ಪುಂಡುಪುರುಷೆರ್, ಮಾಯಿದ ಪುರುಷೆರ್, ಜೋಗಿ ಪುರುಷೆರ್ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಕುಣಿತ ಆಚರಣಾತ್ಮಕವೂ, ಹೌದು ಮನೋರಂಜನೆಯೂ ಹೌದು.
ಇದರ ಹಿನ್ನೆಲೆಯೇನೆಂದರೆ ಒಬ್ಬಳು ಹೆಂಗಸು ತನಗೆ ಮಕ್ಕಳು ಇಲ್ಲದೆ ಕೊರಗುತ್ತಿರುವಾಗ ಒಂದು ಸಂದರ್ಭದಲ್ಲಿ ಕದ್ರಿ ಮಂಜುನಾಥ ದೇವರಿಗೆ ಹರಕೆ ಹೇಳಿಕೊಳ್ಳುತ್ತಾಳೆ. ದೇವರ ಅನುಗ್ರಹದಿಂದ ಅವಳಿಗೆ ಐದು ಜನ ಗಂಡುಮಕ್ಕಳು ಹುಟ್ಟುತ್ತಾರೆ. ಹರಕೆ ತೀರಿಸಲು ಕದ್ರಿ ಮಂಜುನಾಥನ ಸನ್ನಿಧಾನಕ್ಕೆ ಹೋದಾಗ ಆ ಐವರು ಮಕ್ಕಳು ಅದೃಶ್ಯರಾಗುತ್ತಾರೆ. ಆಗ ಅತೀವ ದು:ಖಿತಳಾದ ತಾಯಿಗೆ ಮಂಜುನಾಥ ಸ್ವಾಮಿಯು ದರ್ಶನವಾಗಿ ಅಭಯವನ್ನು ನೀಡುತ್ತಾನೆ. ಅದೇನೆಂದರೆ ‘ಪುರುಷ ಕುಣಿತ’ ಎಂಬ ಆಚರಣೆಯನ್ನು ಮಾಡಿ ಅದರಲ್ಲಿ ಐವರು ಮಕ್ಕಳನ್ನು ಕಾಣು ಎಂಬ ಮಾತನ್ನು ನೀಡಿ ಆಶೀರ್ವಾದ ನೀಡುತ್ತಾರೆ. ಆ ಮಕ್ಕಳೆ ಇಂದು ಪುರುಷ ಕುಣಿತದಲ್ಲಿ ನಾವು ಕಾಣುವ ಹಾಳೆಯ ಕಿರೀಟವನ್ನು ಸಾಂಕೇತಿಕವಾಗಿ ಧರಿಸಿರುವ ಮಕ್ಕಳಾಗಿರುತ್ತಾರೆ. ಪುರುಷ ಕುಣಿತವನ್ನು ನಾಥ ಪಂಥದ ಮೂಲತ: ಅನುಯಾಯಿಗಳಾದ ಗೌಡ ಜನಾಂಗದವರು ಹಿಂದಿನ ಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ. ಆದರೆ ತುಳುನಾಡಿನ ಜಾತಿಗಳ ನಡುವಿನ ಸಾಮರಸ್ಯದಿಂದಾಗಿ ಕಾಲಕ್ರಮೇಣ ಇತರೆ ಸವರ್ಣೀಯ ಜಾತಿಗಳ ಜನಾಂಗದವರು ಸೇರಿಕೊಂಡಿದ್ದಾರೆ. ನಾಥಪಂಥದ ಆರಾಧ್ಯ ದೇವರು ಕದ್ರಿ ಮಂಜುನಾಥ ಇಲ್ಲಿ ಪ್ರಮುಖನಾಗಿರುತ್ತಾನೆ. ಗೌಡ ಜನಾಂಗದ ಮೂಲ ಭಾಷೆ ಕನ್ನಡ ಆಗಿರುವುದರಿಂದ ಇಂದು ಕೂಡಾ ಕುಣಿತದಲ್ಲಿ ಅಲ್ಲಲ್ಲಿ ಕನ್ನಡ ಭಾಷೆ ಬಳಕೆಯಾಗುವುದನ್ನು ನಾವು ಕಾಣುತ್ತೇವೆ. ನಾಥಪಂಥ ಮೂಲತ: ಬೌದ್ದ ಧರ್ಮದ ಮಹಾಯಾನ ಶಾಖೆಯ ವಜ್ರಯಾನದಿಂದ ಹುಟ್ಟಿದ ಬೌದ್ದ ತಾಂತ್ರಿಕ ಸಂಪ್ರದಾಯಕ್ಕೆ ಸೇರಿದೆ. ಇದು ಕಾಲದ ಪ್ರಭಾವಕ್ಕೆ ಸಿಲುಕಿ ನಂತರ ಶೈವ ಧರ್ಮದ ತೆಕ್ಕೆಗೆ ಬಂದು ಅದರ ತಾಂತ್ರಿಕ ಶಾಖೆಯಾಗಿ ಪರಿವರ್ತನೆಯಾಯಿತು. ಇಲ್ಲಿ ಧರ್ಮಗಳ ಉಗಮದ ನಂತರ ಆ ಧರ್ಮಗಳು ರಾಜತ್ವದ ಸೆಳೆತಕ್ಕೆ ಸಿಲುಕಿ ಅಲ್ಲಲ್ಲಿ ವಿವಿಧ ಪಂಥಗಳಾಗಿ ಆಯಾಯ ಕಾಲದ ಪ್ರಭಾವಕ್ಕೆ ಒಳಗಾಗಿ ತನ್ನದೇ ಆದ ಅಸ್ತಿತ್ವವನ್ನು ಕೆಲವು ಪಂಥಗಳು ಕಳೆದುಕೊಂಡಿವೆ. ಇನ್ನೂ ಕೆಲವು ಪಂಥಗಳು ತನ್ನ ನೆಲೆಯನ್ನು ಗಟ್ಟಿಗೊಳಿಸಿವೆ.
ಮತ್ಸ್ಯೇಂದ್ರನಾಥನು ನಾಥ ಪಂಥದ ಪ್ರವರ್ತಕನಾಗಿದ್ದು ಈತ ಕದಳೀ ಅಥವಾ ಕದ್ರಿಯಲ್ಲಿ ಸ್ಥಾಪಿಸಿದ ಶಿವಲಿಂಗವೇ ಮಂಜುನಾಥ ಎಂಬ ಹೆಸರು ಪಡೆದು ಪ್ರಖ್ಯಾತಿಯನ್ನು ಹೊಂದಿತು. ನಾಥಪಂಥದಲ್ಲಿ ಹನ್ನೆರಡು ಗುಂಪುಗಳಿವೆ. ನಾಥ ಪಂಥಕ್ಕೆ ಸಂಬಂಧಿಸಿದ ಪೂಜಾ ಸ್ಥಳಗಳಾಗಿ ಮಠ, ದೇವಸ್ಥಾನ ಹಾಗೂ ಸಮಾಧಿಗಳು ಮುಖ್ಯವಾಗಿ ಗುರುತಿಸಿಕೊಳ್ಳುತ್ತವೆ. ನೇಪಾಳ ಹಾಗೂ ಪಾಕಿಸ್ತಾನಗಳಲ್ಲಿ ಈ ಪಂಥದ ಪೂಜಾ ಸ್ಥಳಗಳು ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ವ್ಯಕ್ತಿಯೂ ಸನ್ಯಾಸಿಯಾಗಿ ಯೋಗಸಾಧನೆ ಮಾಡುವುದೇ ಮುಕ್ತಿಗೆ ದಾರಿ ಎಂಬ ನಂಬಿಕೆ ಈ ಪಂಥದ್ದಾಗಿದೆ. ಈ ಪಂಥದ ಅನುಯಾಯಿಗಳನ್ನು ಯೋಗಿ ಅಥವಾ ಜೋಗಿ ಎಂದು ಕರೆಯುತ್ತಾರೆ. ಮಂಗಳೂರಿನ ಕದ್ರಿಗುಡ್ಡ ನಾಥಪಂಥದ ಪ್ರಮುಖ ಕೇಂದ್ರ 10-11ನೇ ಶತಮಾನದಲ್ಲಿ ಕದ್ರಿಯು ದಕ್ಷಿಣ ಭಾರತದಲ್ಲಿ ಪ್ರಮುಖವಾದ ಮಠವಾಗಿತ್ತು. ಇಲ್ಲಿ ಮಂಜುನಾಥನಲ್ಲದೆ ತುಳುನಾಡ ದೈವಗಳು ಕೂಡಾ ಪೂಜಿಸಲ್ಪಡುತ್ತಿತ್ತು. ಅದನ್ನು ಇಂದು ಕೂಡ ಆಚರಿಸಿಕೊಂಡು ಬರಲಾಗಿದೆ. ಗುರುಪುರ, ವಿಟ್ಲ, ಪುತ್ತೂರು, ಸೂಡ, ಕೊಡಚಾದ್ರಿಗಳಲ್ಲಿಯೂ ಜೋಗಿ ಮಠಗಳಿವೆ. ತುಳುನಾಡಿನೆಲ್ಲೆಡೆ ಈ ಪಂಥದ ಅನುಯಾಯಿಗಳು ಕಂಡುಬರುತ್ತಾರೆ. ಚುಂಚನಗಿರಿ ಮಠ ಕೂಡ ಜೋಗಿ ಸಂಪ್ರದಾಯಕ್ಕೆ ಸೇರಿದೆ.
ಪುತ್ತೂರು, ಸುಳ್ಯದಲ್ಲಿ ಇಂದು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಅಲ್ಲಲ್ಲಿ ಕಂಡುಬರುತ್ತಿರುವ ಪುರುಷರ ಕುಣಿತವನ್ನು ರಾತ್ರಿ ಸಮಯ ಮಾಡುತ್ತಾರೆ. ಗದ್ದೆಯಲ್ಲಿ ಅಥವಾ ಒಬ್ಬ ಗೌಡ ಮುಖಂಡನ ಮನೆಯಲ್ಲಿ ಸಂಬಂಧ ಪಟ್ಟ ಸ್ಥಳ ಸಾನಿಧ್ಯ ದೈವ ದೇವರುಗಳಿಗೆ ಕೈ ಮುಗಿದು ಆ ಕುಣಿತಕ್ಕೆ ಸಂಬಂಧಿಸಿದ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಹಲವಾರು ವಿಧಿವಿಧಾನಗಳನ್ನು ಆಚರಿಸಿ ವೇಷ ಹಾಕಲು ಪ್ರಾರಂಭಿಸುತ್ತಾರೆ. ಮಂಜುನಾಥ ಸ್ವಾಮಿಯ ದೇವರ ಎದುರು ಆಯಾಯ ವೇಷಕ್ಕೆ ನಿಗದಿಯಾದ ವ್ಯಕ್ತಿಗಳು ಭಕ್ತಿ ಶ್ರದ್ಧೆಯಿಂದ ವೇಷ ಧರಿಸಿ ಆ ವೇಷಗಳಿಗೆ ಜೀವ ತುಂಬುತ್ತಾರೆ. ಆರಾಧನಾ ವೇಷಗಳಿಗೆ ಸಂಬಂಧಿಸಿದಂತೆ (ದೇವರ ಬಲಿ, ದೈವದ ಪಾತ್ರಿ ಇತ್ಯಾದಿ) ಒಂದು ವೇಷಕ್ಕೆ ನಿಗದಿಯಾದ ವ್ಯಕ್ತಿಯೇ ಎಲ್ಲಾ ದಿನವು ಅದೇ ವೇಷವನ್ನು ನಿರ್ವಹಿಸುತ್ತಾರೆ. ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ವೇಷಧಾರಿಗಳು, ವಾಲಗದವರು ಹಾಗೂ ಇತರರು ಒಟ್ಟು ಸೇರಿ ಡಿಂಬಿಸಾಲೆ (ದಿಮಿಸೋಲೆ) ಎಂಬ ಉದ್ಘೋಷವನ್ನು ಹಾಕುತ್ತಾರೆ. ಆ ನಂತರ ಎಲ್ಲರೂ ಒಟ್ಟಾಗಿ ಊರಿನ ಗುತ್ತಿನ ಮನೆಯಿಂದ ಆರಂಭಿಸಿ ಮನೆಮನೆಗೆ ಕುಣಿತ ಮಾಡಿಕೊಂಡು ಹೋಗಿ ಪ್ರತಿಯೊಂದು ಮನೆಯಲ್ಲೂ ಎಲ್ಲಾ ವೇಷಧಾರಿಗಳು ತಾವು ಧರಿಸಿದ ಪಾತ್ರದ ಪ್ರದರ್ಶನವನ್ನು ನೀಡುತ್ತಾರೆ. ಪ್ರತಿ ಮನೆಯಲ್ಲೂ ಕೂಡ ಮಂಜುನಾಥನಿಗೆ ಪೂಜೆ ಸಲ್ಲಿಸಲಾಗುತ್ತದೆ. ನಾಥಪಂಥದ ಪ್ರಮುಖ ದೇವರು ಕದ್ರಿ ಮಂಜುನಾಥನನ್ನು ಮನೆಮನೆಗೆ ತಲುಪಿಸುವ ಕಾರ್ಯ ಇಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ನಾಥಪಂಥದ ಪ್ರಚಾರವು ಇಲ್ಲಿ ಮುಖ್ಯ ಉದ್ದೇಶವಾಗಿತ್ತು.
ಬ್ರಾಹ್ಮಣ, ಜೈನ, ದಲಿತ ಹಾಗೂ ಅನ್ಯಧರ್ಮದವರನ್ನು ಹೊರತುಪಡಿಸಿ ಉಳಿದ ಸವರ್ಣೀಯರು ಈ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ಮಂಜುನಾಥಲ್ಲದೆ ದೈವವಾಗಿ ಕೊಡಮಣಿತ್ತಾಯ (ಮಾಣಿಯೆಚ್ಚಿ), ನಿಯಂತ್ರಕ ಪಾತ್ರಧಾರಿಗಳಾಗಿ 2-3 ಮುಸ್ಲಿಂ ವೇಷಧಾರಿಗಳು ಇವರನ್ನು ಸಾಯಿಬರು ಎಂದು ಕರೆಯಲಾಗುತ್ತದೆ. ಕರಡಿ, ಕಾಲೆ, ಸ್ತ್ರೀವೇಷ, ಬೈದೆರ್ಲು, ಭೂತ, ಪಂಡಿತ, ಕಳ್ಳ, ಸಿಂಗಾರಿ, ಬ್ರಾಹ್ಮಣ, ಕಿರೀಟ, ಮನ್ಸೆ, ನರ್ಸಣ್ಣ, ಕ್ರೈಸ್ತ, ಸವಾಲೆ ಬೀಸುವುದು ಇತ್ಯಾದಿ ಜಾತಿ ಸಂಬಂಧಿ, ವೃತ್ತಿ ಸಂಬಂಧಿ, ಪ್ರಾಣಿ ಸಂಬಂಧಿ, ಆಚರಣಾ ಸಂಬಂಧಿ ವೇಷಗಳಿರುತ್ತದೆ. ವಾದ್ಯ ಪರಿಕರಗಳಾಗಿ ಟಾಸೆ, ಡೋಳು, ನಾಗಸ್ಪರ, ಶ್ರುತಿ ಇರುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೆಲವು ವೇಷಗಳಲ್ಲಿ ವೈವಿಧ್ಯತೆಯಿದೆ.
ಬ್ರಿಟಿಷರು ತಮ್ಮ ಧರ್ಮವನ್ನು ಶ್ರೇಷ್ಠ ಎಂದು ಹೇಳಲು ತುಳುನಾಡಿನ ದೈವರಾಧನೆಯನ್ನು ಡೆವಿಲ್ ವರ್ಷಿಪ್ (ದೆವ್ವಗಳ ಆರಾಧನೆ) ಎಂದು ಹೇಳಿದಂತೆ. ಬೇರೆಕಡೆಯಿಂದ ತುಳುನಾಡಿಗೆ ವಲಸೆ ಬಂದ ಗೌಡ ಜನಾಂಗ ತಮ್ಮ ನಾಥಪಂಥದ ಶ್ರೇಷ್ಠತೆಯನ್ನು ಪ್ರಚಾರಗೊಳಿಸಲು ಇಲ್ಲಿನ ಜಾತಿ, ವೃತ್ತಿ, ಧರ್ಮಗಳನ್ನು ಅಣಕಗೊಳಿಸಲು ಪ್ರಾರಂಭಿಸಿದರು. ಇಂದಿಗೂ ದೇವರನ್ನು ಹೊರತುಪಡಿಸಿ ಉಳಿದೆಲ್ಲಾ ವೇಷಗಳಲ್ಲಿ ವ್ಯಂಗ್ಯ, ಅಣಕ ಎದ್ದುಕಾಣುತ್ತದೆ. ಹೇಳಬಾರದ ಮಾತುಗಳನ್ನು ಆಡಬಾರದ ಆಟಗಳನ್ನು ಮಾಡುತ್ತಾರೆ. ಪ್ರತಿಮನೆಯಿಂದ ಅಕ್ಕಿ, ತೆಂಗಿನಕಾಯಿ, ಹಣವನ್ನು ಸಂಗ್ರಹಿಸಿ ಅದರ ಪೂಜೆಯ ಸಂದರ್ಭದಲ್ಲಿ ಖರ್ಚುವೆಚ್ಚಗಳಿಗೆ ಬಳಸುತ್ತಾರೆ. ಹಾಗೂ ವೇಷಭೂಷಣ ಖರೀದಿಗೆ ಉಪಯೋಗಿಸುತ್ತಾರೆ. ಪುರುಷರು ಮಾತ್ರ ಭಾಗವಹಿಸುವ ಈ ಕುಣಿತದಲ್ಲಿ ಮಹಿಳೆಯರಿಗೆ ಯಾವುದೇ ಅವಕಾಶವಿಲ್ಲ. ಇದರಲ್ಲಿ ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರೂ ಭಾಗವಹಿಸುತ್ತಾರೆ. ಸಿದ್ಧವೇಷದಲ್ಲಿರುವಂತೆ ಜನದ ಮಿತಿ ಪುರುಷ ಕುಣಿತದಲ್ಲಿಲ್ಲ. ಎಷ್ಟು ಜನ ಬೇಕಾದರೂ ಪಾಲ್ಗೊಗೊಳ್ಳಬಹುದು. ರಾತ್ರಿ ಕ್ರಮದಂತೆ ಹೊರಟು ಪ್ರತಿದಿನ ಬೆಳಿಗ್ಗೆ ಕಾಸರಕ ಮರದ ಅಡಿಯಲ್ಲಿ ಕ್ರಮದಂತೆ ಪಿರಿಪುನ (ಬಿರಿಪುನ) ಕ್ರಮ ಇದೆ. ಕುಣಿತ ಆದ 1 ಅಥವಾ 2 ದಿನ ಬಿಟ್ಟು ಊರವರ ಕೂಡುವಿಕೆಯಲ್ಲಿ ಪೂಜೆ ನಡೆಯುತ್ತದೆ. ಕುಣಿತ ಸಂದರ್ಭದಲ್ಲಿ ಯಾರಿಗೂ ಗಾಯ ಆಗಲ್ಲ, ಪೂಜೆ ಆಗದೆ ನೆಮ್ಮದಿ ಇರಲ್ಲ, ಸ್ನಾನ ಮಾಡದೆ ಮನೆಯೊಳಗೆ ಹೋಗಬಾರದು. ಕುಣಿತಕ್ಕೆ ಹೋಗುವಾಗ ಸಿಗುವ ದೈವ ಮತ್ತು ದೇವಸ್ಥಾನಗಳಿಗೆ ಕೈ ಮುಗಿಯುವ ಕ್ರಮವಿದೆ ಮುಂತಾದ ಹಲವಾರು ನಂಬಿಕೆಗಳಿವೆ.
ಈ ಕುಣಿತಕ್ಕೆ ಸಂಬಂಧಿಸಿದಂತೆ ಹಲವಾರು ನಂಬಿಕೆಗಳನ್ನು ಕೂಡ ಪಾಲಿಸಿಕೊಂಡು ಬಂದಿದ್ದಾರೆ. ಅದೇನೆಂದರೆ, ರಾತ್ರಿ ಸಮಯದಲ್ಲಿ ಹೋಗುವಾಗ ದಾರಿ ಮಧ್ಯದಲ್ಲಿ ಸಿಗುವ ದೈವಸ್ಥಾನ ದೇವಾಸ್ಥಾನಗಳಿಗೆ ಕೈ ಮುಗಿದು ಪ್ರಾರ್ಥಿಸುತ್ತಾರೆ. ಮನೆಮನೆಗೆ ಹೋಗುವಾಗ ಅಪ್ಪಿತಪ್ಪಿ ಬಿದ್ದರೆ ಯಾವುದೇ ಗಾಯ ಆಗುವುದಿಲ್ಲ. ವೇಷಧಾರಿಗಳು ತಮ್ಮ ಮನೆಯಲ್ಲಿ ಕುಣಿತ ಮಾಡುವುದಿಲ್ಲ, ಪುರುಷ ಕುಣಿತಕ್ಕೆ ಬಳಸಿದ ಬಟ್ಟೆಗಳನ್ನು ತೊಳೆಯದೆ ಮನೆಯೊಳಗೆ ಕೊಂಡೊಗುವಂತೆ ಇಲ್ಲ.
ಕುಣಿತದಲ್ಲಿ ಪಾಲ್ಗೊಂಡ ವ್ಯಕ್ತಿಗಳು ಸಹ ಸ್ನಾನ ಮಾಡದೆ ಮನೆಯೊಳಗೆ ಹೋಗುವಂತೆ ಇಲ್ಲ. ಡಿಂಬಿಸಾಲೆ ಎಂಬ ಘೋಷವನ್ನು ಈ ಸಂದರ್ಭದಲ್ಲಿ ಮಾತ್ರವಲ್ಲದೆ ಬೇರೆ ಸಮಯಗಳಲ್ಲಿ ಹೇಳುವುದನ್ನು ನಿಷೇಧಿಸಿದೆ, ಪುರುಷ ಕುಣಿತಕ್ಕೆ ಹೋದವರಿಗೆ ಪುರುಷ ಪೂಜೆ ಆಗದೆ ದೇಹಕ್ಕೆ ಉಲ್ಲಾಸವಿರುವುದಿಲ್ಲ ಎಂಬ ನಂಬಿಕೆ ಇದೆ. ಪುರುಷ ಕುಣಿತದ ಕೊನೆಯ ದಿನ ಎಲ್ಲರೂ ಒಟ್ಟು ಸೇರಿ ಪೂಜೆಯ ದಿನ ನಿಗದಿ ಪಡಿಸುತ್ತಾರೆ. ಪೂಜಾ ದಿನದ ಹಿಂದಿನ ದಿನ ಕದ್ರಿ ಮಂಜುನಾಥ, ಊರಿನ ದೈವ, ದೇವಸ್ಥಾನ, ಬೈದೆರೆ ಗರಡಿಗಳಿಗೆ ಸಂಗ್ರಹವಾದ ಹಣದಲ್ಲಿ ಸ್ವಲ್ಪ ಹರಕೆ ಸಲ್ಲಿಸಿ ಪ್ರಸಾದ ತಂದು ಪೂಜೆಯ ದಿನದ ಅವಲಕ್ಕಿ ರಾಶಿಗೆ ಬೆರೆಸಿ ಬಂದ ಊರಿನವರಿಗೆ ಹಂಚುತ್ತಾರೆ. ಈ ದಿನ ಮಹಿಳೆಯರು ಸಹ ಪೂಜೆಯಲ್ಲಿ ಪಾಲ್ಗೊಗೊಳ್ಳುತ್ತಾರೆ. ಪುರುಷ ಕಟ್ಟಲು ಹೋದವರಿಗೆ ದಿನಕ್ಕೆ ಒಂದು ಸೇರಿನಂತೆ ಅವಲಕ್ಕಿ ಪ್ರಸಾದ ಕೊಡುತ್ತಾರೆ. ಆ ದಿನ ಪ್ರತಿಯೊಬ್ಬ ವೇಷಧಾರಿಯೂ ಅಲ್ಲಿ ವೇಷಧರಿಸಿ ದೇವರ ಕೃಪೆಗೆ ಪಾತ್ರನಾಗುತ್ತಾನೆ. ನಂತರ ಎಲ್ಲಾ ಕುಣಿತ ವಿಧಿವಿಧಾನಗಳನ್ನು , ಕ್ರಮಗಳನ್ನು ಮಾಡಿ ಸ್ಥಳ ಸಾನಿಧ್ಯ ದೈವದೇವರುಗಳಲ್ಲಿ ಕ್ಷಮೆ ಕೇಳುತ್ತಾರೆ.
ಧನ್ಯವಾದಗಳು.
GIPHY App Key not set. Please check settings