ನೈಲ್ ನದಿಯು ಆಫ್ರಿಕಾದಲ್ಲಿ ಉತ್ತರಾಭಿಮುಖವಾಗಿ ಹರಿಯುವ ಪ್ರಮುಖ ನದಿಗಳಲ್ಲಿ ಒಂದು. ಸಾಮಾನ್ಯವಾಗಿ ನೈಲ್ ನದಿಯು ಜಗತ್ತಿನ ಅತ್ಯಂತ ಉದ್ದದ ನದಿಯೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ಅನ್ವೇಷಣೆಗಳು ಅಮೆಜಾನ್ ನದಿಯೇ ಬಹುಶ ಜಗತ್ತಿನ ಅತಿ ಉದ್ದದ ನದಿಯಾಗಿದೆಯೆಂದು ಸೂಚಿಸುತ್ತವೆ. ನೈಲ್ ನದಿಯ ಪ್ರಮುಖ ಉಪನದಿಗಳು ಎರಡು. ಅವೆಂದರೆ ಶ್ವೇತ ನೈಲ್ ಅಂದರೆ ಬಿಳಿ ನೈಲ್ ಮತ್ತು ನೀಲ ನೈಲ್ ಅಂದರೆ ನೀಲಿ ನೈಲ್. ನದಿಯಲ್ಲಿನ ಹೆಚ್ಚಿನ ಪ್ರಮಾಣದ ನೀರು ಮತ್ತು ಫಲವತ್ತಾದ ಮಣ್ಣು ನೀಲ ನೈಲ್ ನಿಂದಲೇ ಒದಗುತ್ತವೆ. ಬಿಳಿ ನೈಲ್ ಮಧ್ಯ ಆಫ್ರಿಕಾದ ಮಹಾಸರೋವರಗಳ ಪ್ರದೇಶದಲ್ಲಿ ಉಗಮಿಸುವುದು. ಇದರ ಉಗಮಸ್ಥಾನವು ರುವಾಂಡಾ ದೇಶದ ದಕ್ಷಿಣ ಭಾಗದಲ್ಲಿ ಎಂದು ಗುರುತಿಸಲಾಗಿದೆ. ಅಲ್ಲಿಂದ ಬಿಳಿ ನೈಲ್ ಉತ್ತರಕ್ಕೆ ಹರಿದು ಟಾಂಜಾನಿಯಾ, ವಿಕ್ಟೋರಿಯಾ ಸರೋವರ, ಉಗಾಂಡಾ ಮತ್ತು ದಕ್ಷಿಣ ಸುಡಾನ್ ಗಳನ್ನು ಹಾದು ಹೋಗುತ್ತದೆ. ನೀಲ ನೈಲ್ ಇಥಿಯೋಪಿಯಾದ ಟಾನಾ ಸರೋವರದಿಂದ ಉಗಮಿಸಿ ಸುಡಾನ್ ದೇಶವನ್ನು ಪ್ರವೇಶಿಸುತ್ತದೆ. ಸುಡಾನಿನ ರಾಜಧಾನಿ ಖಾರ್ಟೂಮ್ ಬಳಿ ಬಿಳಿ ನೈಲ್ ಮತ್ತು ನೀಲಿ ನೈಲ್ ಸಂಗಮಿಸಿ ನೈಲ್ ನದಿಯೆಂಬ ಹೆಸರಿನಿಂದ ಉತ್ತರಾಭಿಮುಖವಾಗಿ ಹರಿಯುವುದು.
ನೈಲ್ ನದಿಯ ಉತ್ತರದಂಶವು ಹೆಚ್ಚೂಕಡಿಮೆ ಸುಡಾನ್ ಮತ್ತು ಈಜಿಪ್ಟ್ ಗಳ ಮರುಭೂಮಿಯಲ್ಲಿಯೇ ಹರಿಯುವುದು. ಈಜಿಪ್ಟ್ ನಲ್ಲಿ ದೊಡ್ಡ ಮುಖಜಭೂಮಿಯನ್ನು ನಿರ್ಮಿಸಿ ನಂತರ ನೈಲ್ ನದಿಯು ಮೆಡಿಟೆರೇನಿಯನ್ ಸಮುದ್ರವನ್ನು ಸೇರುತ್ತದೆ. ಪ್ರಾಚೀನ ಕಾಲದಿಂದಲೂ ಈಜಿಪ್ಟಿನ ನಾಗರಿಕತೆಯು ಸಂಪೂರ್ಣವಾಗಿ ನೈಲ್ ನದಿಯನ್ನೇ ಅವಲಂಬಿಸಿದೆ. ಪ್ರಾಚೀನ ಈಜಿಪ್ಟಿನ ಎಲ್ಲಾ ಸಾಂಸ್ಕೃತಿಕ ಮತ್ತು ಐತಿಹಾಸಿಕ ತಾಣಗಳು ನೈಲ್ ನದಿಯ ದಡದಲ್ಲಿಯೇ ಇವೆ.

ನೈಲ್ ನದಿಯ ಜಲಾನಯನ ಪ್ರದೇಶದ ಒಟ್ಟು ವಿಸ್ತಾರ ೩೨,೫೪,೫೫೫ ಚ. ಕಿ.ಮೀ. ಗಳು. ಇದು ಇಡಿ ಆಫ್ರಿಕಾ ಖಂಡದ ವಿಸ್ತೀರ್ಣದ ೧೦% ದಷ್ಟು ಭಾಗ. ನೈಲ್ ನದಿಯ ಎರಡು ಮುಖ್ಯ ಉಪನದಿಗಳಾದ ಬಿಳಿ ನೈಲ್ ಮತ್ತು ನೀಲ ನೈಲ್ ಗಳು ಪೂರ್ವ ಆಫ್ರಿಕಾದ ಬಿರುಕಿನ ಮಗ್ಗುಲಲ್ಲಿ ಇವೆ. ಇವುಗಳ ಸಂಗಮದ ನಂತರ ನೈಲ್ ನದಿಯನ್ನು ಸೇರುವ ಏಕೈಕ ದೊಡ್ಡ ಉಪನದಿಯೆಂದರೆ ಅತ್ಬಾರಾ ನದಿ. ಇದು ೮೦೦ ಕಿ.ಮೀ. ಉದ್ದವಾಗಿದ್ದು ಇಥಿಯೋಪಿಯಾದಲ್ಲಿ ಹುಟ್ಟಿ ಸುಡಾನಿನ ಖಾರ್ಟೂಮ್ ನಗರದ ಉತ್ತರಕ್ಕೆ ಸುಮಾರು ೩೦೦ ಕಿ.ಮೀ. ದೂರದಲ್ಲಿ ನೈಲ್ ನದಿಯನ್ನು ಸೇರುವುದು. ಈ ಅತ್ಬಾರಾ ನದಿಯಲ್ಲಿ ಮಳೆಗಾಲದಲ್ಲಿ ಮಾತ್ರ ನೀರಿದ್ದು ಬಲು ಬೇಗ ಬತ್ತಿಹೋಗುವುದು. ಈ ಸಂಗಮಸ್ಥಾನದ ಉತ್ತರಕ್ಕೆ ನೈಲ್ ನದಿಯ ಗಾತ್ರವು ಕಿರಿದಾಗುತ್ತಾ ಹೋಗುವುದು. ತೀವ್ರ ಬಿಸಿಲಿನಿಂದಾಗಿ ನದಿಯ ನೀರು ಬಹಳವಾಗಿ ಆವಿಯಾಗುವುದೇ ಇದಕ್ಕೆ ಕಾರಣ. ಸಾಮಾನ್ಯವಾಗಿ ಉತ್ತರಕ್ಕೇ ಹರಿಯುವ ನೈಲ್ ನದಿಯು ಸುಡಾನಿನಲ್ಲಿ ಮಾತ್ರ ಹಲವು ಬಾರಿ ತಿರುವುಗಳನ್ನು ಹೊಂದಿದೆ. ಕೈರೋದ ಉತ್ತರಕ್ಕೆ ನೈಲ್ ನದಿಯು ಎರಡು ಶಾಖೆಗಳಾಗಿ ಒಡೆದು ಮೆಡಿಟೆರೇನಿಯನ್ ಸಮುದ್ರವನ್ನು ಸೇರುವುದು. ಈ ಶಾಖೆಗಳೆಂದರೆ ಪಶ್ಚಿಮದ ರೋಸೆಟ್ಟಾ ಮತ್ತು ಪೂರ್ವದ ಡೇಮಿಯೆಟ್ಟಾ. ಈ ಎರಡು ಶಾಖೆಗಳ ನಡುವಣ ಪ್ರದೇಶವು ವಿಸ್ತಾರವಾದ ನೈಲ್ ಮುಖಜಭೂಮಿಯಾಗಿರುವುದು.
ಬಿಳಿ ನೈಲ್
ಕೆಲವೊಮ್ಮೆ ವಿಕ್ಟೋರಿಯಾ ಸರೋವರವನ್ನು ನೈಲ್ ನದಿಯ ಉಗಮಸ್ಥಾನವೆಂದು ಭಾವಿಸಲಾಗಿದೆ. ಆದರೆ ವಿಕ್ಟೋರಿಯಾ ಸರೋವರಕ್ಕೇ ಹಲವು ಗಣನೀಯ ಗಾತ್ರದ ಪೂರಕ ನದಿಗಳು ಸೇರುವುವು. ಹೀಗಾಗಿ ಇವುಗಳ ಪೈಕಿ ಅತಿ ದೂರದಿಂದ ಹರಿದುಬರುವ ಝರಿಯನ್ನು ನೈಲ್ ನದಿಯ ಅಂಗವಾಗಿ ಪರಿಗಣಿಸಲಾಗಿದೆ. ಈ ಝರಿಯು ರುವಾಂಡಾದ ಎನ್ಯುಂಗ್ವೆ ಅರಣ್ಯದಿಂದ ಹೊರಬರುತ್ತದೆ. ಮುಂದೆ ಇದು ವಿಕ್ಟೋರಿಯಾ ಸರೋವರವನ್ನು ಟಾಂಜಾನಿಯಾದ ಬುಕೋಬಾದ ಬಳಿ ಸೇರುತ್ತದೆ.

ಉಗಾಂಡಾದ ಜಿಂಜಾ ಜಲಪಾತದ ಬಳಿ ನೈಲ್ ನದಿಯು ವಿಕ್ಟೋರಿಯಾ ಸರೋವರದಿಂದ ಹೊರಬೀಳುತ್ತದೆ. ಅಲ್ಲಿಂದ ೫೦೦ ಕಿ.ಮೀ. ಮುಂದೆ ಹರಿದು ಕ್ಯೋಗಾ ಸರೋವರದ ಮೂಲಕ ಹಾದು ಆಲ್ಬರ್ಟ್ ಸರೋವರವನ್ನು ತಲುಪುತ್ತದೆ. ಆಲ್ಬರ್ಟ್ ಸರೋವರದಿಂದ ಹೊರಬಿದ್ದ ನೈಲ್ ನದಿಗೆ ಆಲ್ಬರ್ಟ್ ನೈಲ್ ಎಂದು ಹೆಸರು. ಮುಂದೆ ನೈಲ್ ನದಿಯು ಸುಡಾನ್ ನಲ್ಲಿ ಹರಿಯುತ್ತದೆ. ಇಲ್ಲಿ ಅದನ್ನು ಬಹ್ರ್ ಅಲ್ ಜಬಲ್ ಎಂದು ಕರೆಲಾಗುತ್ತದೆ. ಬಹ್ರ್ ಅಲ್ ಜಬಲ್ ನದಿಯು ಬಹ್ರ್ ಅಲ್ ಘಝಲ್ ನದಿಯೊಡನೆ ಸೇರಿಕೊಂಡು ಬಹ್ರ್ ಅಲ್ ಅಬ್ಯಾದ್ ಅಥವಾ ಬಿಳಿ ನೈಲ್ ಆಗುವುದು. ಇಲ್ಲಿ ನದಿಯ ನೀರಿನಲ್ಲಿ ಬೆರೆತಿರುವ ಮಣ್ಣಿನ ಬಣ್ಣವು ಬಿಳಿಯಾಗಿರುವುದರಿಂದ ಈ ಹೆಸರು ಬಂದಿದೆ. ಮುಂದೆ ಬಿಳಿ ನೈಲ್ ಖಾರ್ಟೂಮ್ ನತ್ತ ಪಯಣಿಸುವುದು.
ನೀಲ ನೈಲ್
ನೀಲ ನೈಲ್ ಇಥಿಯೋಪಿಯಾದ ಟಾನಾ ಸರೋವರದಿಂದ ಉಗಮಿಸುತ್ತದೆ. ಅಲ್ಲಿಂದ ಸುಮಾರು ೧೪೦೦ ಕಿ.ಮೀ. ವರೆಗೆ ನೈಋತ್ಯಕ್ಕೆ ಹರಿದು ಖಾರ್ಟೂಮ್ ಬಳಿ ಬಿಳಿ ನೈಲ್ ಒಂದಿಗೆ ಸಂಗಮಿಸಿ ಮುಖ್ಯ ನೈಲ್ ನದಿಯನ್ನು ಸೃಷ್ಟಿಸುತ್ತದೆ. ನೈಲ್ ನದಿಯಲ್ಲಿರುವ ೯೦% ನೀರು ಮತ್ತು ೯೬% ಮೆಕ್ಕಲುಮಣ್ಣು ಇಥಿಯೋಪಿಯಾದಿಂದ ನೀಲ ನೈಲ್ ಮತ್ತು ಇತರ ಸಣ್ಣ ಉಪನದಿಗಳ ಮೂಲಕ ಬರುವುವು. ಇಥಿಯೋಪಿಯಾದ ಪ್ರಸ್ಥಭೂಮಿಯಲ್ಲಿ ಹೆಚ್ಚಾಗಿ ಮಳೆಯಾಗುವ ಸಮಯದಲ್ಲಿ ನೈಲ್ ನದಿಗೆ ನೀರು ಮತ್ತು ಮೆಕ್ಕಲುಮಣ್ಣಿನ ಪ್ರಮಾಣ ಹೆಚ್ಚು. ಉಳಿದ ಸಮಯದಲ್ಲಿ ನೀಲ ನೈಲ್ ಬಲಹೀನ.
ನೈಲ್ ನದಿಯು ಪ್ರಾಚೀನ ಈಜಿಪ್ಟ್ ನಾಗರಿಕತೆಯ ಜೀವನಾಡಿಯಾಗಿತ್ತು. ಅಂದಿನ ನಾಗರಿಕತೆಯ ಹೆಚ್ಚಿನ ಜನತೆ ಮತ್ತು ಎಲ್ಲಾ ನಗರಗಳೂ ನೈಲ್ ನದಿಯ ದಂಡೆಯಲ್ಲಿದ್ದುವು. ಶಿಲಾಯುಗದಿಂದಲೂ ಈಜಿಪ್ಟಿನ ಸಂಸ್ಕೃತಿಗೆ ನೈಲ್ ನದಿಯು ಆಧಾರವಾಗಿತ್ತು. ಅಂದು ಹಸುರಿನಿಂದ ಕೂಡಿದ್ದ ಈಜಿಪ್ಟಿನ ಬಯಲು ಪ್ರದೇಶವು ಹವಾಮಾನ ವೈಪರೀತ್ಯ ಮತ್ತು ಅತಿಯಾದ ಪಶು ಸಂಗೋಪನೆಯಿಂದಾಗಿ ಮರುಭೂಮಿಯಾಗಿ ಪರಿವರ್ತಿತವಾಯಿತು. ಕ್ರಿ.ಪೂ. ಸುಮಾರು ೮೦೦೦ ದ ಸಮಯಕ್ಕೆ ಈ ಬದಲಾವಣೆ ಕಂಡುಬಂದು ಪರಿಣಾಮವಾಗಿ ನಾಡಿನ ಎಲ್ಲೆಡೆಯ ಜನತೆ ನೈಲ್ ನದಿಯ ತೀರದಲ್ಲಿ ನೆಲೆಯಾಗಿ ಕೃಷಿಪ್ರಧಾನ ಮತ್ತು ಹೆಚ್ಚು ಕೇಂದ್ರೀಕೃತ ಜೀವನ ವ್ಯವಸ್ಥೆಯನ್ನು ರೂಪಿಸಿಕೊಂಡರೆಂದು ಊಹಿಸಲಾಗಿದೆ. ದಾಖಲಾಗಿರುವ ಇತಿಹಾಸದ ಪ್ರಕಾರ ಕ್ರಿ. ಶ. ೮೨೯ ಮತ್ತು ೧೦೧೦ ರಲ್ಲಿ ನೈಲ್ ನದಿಯು ಹೆಪ್ಪುಗಟ್ಟಿತ್ತು.

ಈಜಿಪ್ಟಿನ ನಾಗರಿಕತೆಯ ರೂಪುಗೊಳ್ಳುವಿಕೆಯಲ್ಲಿ ಜೀವನಾಧಾರ ಒಂದು ಮುಖ್ಯ ಅಂಶವಾಗಿತ್ತು. ನೈಲ್ ನದಿಯು ಈ ಆಧಾರವನ್ನು ಸಕಲ ರೀತಿಯಲ್ಲಿ ಪೂರೈಸಿತು. ನದಿಯ ಪ್ರವಾಹವು ತೀರದ ಮತ್ತು ಆಸುಪಾಸಿನ ಪ್ರದೇಶವನ್ನು ಅತ್ಯಂತ ಫಲವತ್ತಾದ ನೆಲವನ್ನಾಗಿಸಿತು. ಇದರ ಫಲಸ್ವರೂಪವಾಗಿ ಜನರು ಬತ್ತ ಮತ್ತು ಗೋಧಿಗಳನ್ನು ಬೆಳೆದು ನಾಡಿಗಾಗುವಷ್ಟು ಆಹಾರ ಒದಗಿಸುವಲ್ಲಿ ಸಫಲರಾದರು. ನೀರಿಗಾಗಿ ನದಿಯ ಬಳಿ ಬರುತ್ತಿದ್ದ ಎಮ್ಮೆ, ಕೋಣಗಳನ್ನು ಬೇಟೆಯಾಡಿ ಮಾಂಸವನ್ನು ಸಹ ಒದಗಿಸಿಕೊಳ್ಳುತ್ತಿದ್ದರು. ಮುಂದೆ ಕ್ರಿ. ಪೂ. ೭ನೆಯ ಶತಮಾನದಲ್ಲಿ ಪರ್ಷಿಯನ್ನರು ಈ ಪ್ರದೇಶಕ್ಕೆ ಒಂಟೆಯನ್ನು ಪರಿಚಯಿಸಿದರು. ಒಂಟೆಗಳು ಈಜಿಫ್ಟಿನ ಜನತೆಗೆ ಮಾಂಸಾಹಾರವಾಗಿ, ಪಳಗಿಸಿದ ದುಡಿಮೆಯ ಪ್ರಾಣಿಯಾಗಿ ಮತ್ತು ಸವಾರಿಯಾಗಿ ಉಪಯೋಗಕ್ಕೆ ಬಂದಿತು. ನೈಲ್ ನದಿಯು ಜನರ ಸಂಚಾರಕ್ಕಾಗಿ ಮತ್ತು ಸರಕುಗಳ ಸಾಗಾಣಿಕೆಗಾಗಿ ಅನುಕೂಲಕರವಾಗಿತ್ತು. ಹೀಗೆ ಸಮೃದ್ಧ ನೈಲ್ ನದಿಯ ಪರಿಸರದಲ್ಲಿ ರೂಪುಗೊಂಡ ಈಜಿಪ್ಟಿನ ನಾಗರಿಕತೆ ಬಹುಕಾಲ ಸಧೃಢವಾಗಿ ಮತ್ತು ಸ್ಥಿರವಾಗಿ ಮುಂದುವರೆಯಿತು.
ಅಂದಿನ ಸಾಮಾಜಿಕ ಜೀವನದಲ್ಲಿ ಮತ್ತು ರಾಜಕಾರಣದಲ್ಲಿ ನೈಲ್ ನದಿಯು ಮುಖ್ಯ ಪಾತ್ರ ವಹಿಸಿತ್ತು. ಫರೋ ನೈಲ್ ನದಿಯಲ್ಲಿ ಕೃತ್ರಿಮವಾದ ಪ್ರವಾಹಗಳನ್ನು ಉಂಟುಮಾಡುತ್ತಿದ್ದನು. ಇದರಿಂದಾಗಿ ನಾಡಿನ ಜನತೆಗೆ ಸಮೃದ್ಧ ನೀರು ಮತ್ತು ಫಲವತ್ತಾದ ನೆಲ ದೊರೆತು ಅವರು ಅದರಲ್ಲಿ ಬೇಸಾಯ ನಡೆಸಿ ಉತ್ಪತ್ತಿಯ ಒಂದು ಪಾಲನ್ನು ತಮ್ಮ ದೊರೆಗೆ ಕೃತಜ್ಞತೆಯ ಕುರುಹಾಗಿ ಮತ್ತು ಕಂದಾಯದ ರೂಪದಲ್ಲಿ ಸಲ್ಲಿಸುತ್ತಿದ್ದರು. ಅರಸನು ಹೀಗೆ ಕೂಡಿಬಂದ ಸಂಪತ್ತನ್ನು ಮತ್ತೆ ನಾಡಿನ ಜನತೆಯ ಒಳಿತಿಗಾಗಿಯೇ ಬಳಸುತ್ತಿದ್ದನು.
ಧನ್ಯವಾದಗಳು.
GIPHY App Key not set. Please check settings