in

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ

ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ. ಈ ದೇವಾಲಯದ ಸುತ್ತುಮುತ್ತಲಿನ ಪರಿಸರ ಎಲ್ಲರ ಗಮನ ಸೆಳೆಯುವಂತಹದ್ದು. ನೇತ್ರಾವತಿಯ ದಕ್ಷಿಣ ದಂಡೆಯಲ್ಲಿರುವ ಈ ದೇವಾಲಯದ ಸುತ್ತಲ ಪರಿಸರ ಅತ್ಯಂತ ರಮಣೀಯವಾದುದು. ಉತ್ತರ ದಿಕ್ಕಿನಲ್ಲಿ ಪಾಪನಾಶಿನಿ ನೇತ್ರಾವತಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತಾ ದೇವಳದ ಪಾವಿತ್ರ್ಯತೆಗೆ ಮೆರುಗನ್ನು ನೀಡುತ್ತಿದ್ದಾಳೆ.

ಪಶ್ಚಿಮ ದಿಕ್ಕಿಗೆ, ಪುರಾತನ ಹಾಗೂ ಆಧುನಿಕ ಯುಗಕ್ಕೆ ಸಮನ್ವಯತೆಯ ಸಂಕೇತವೆಂಬಂತೆ ರೈಲು ಹಳಿಗಳ ಮೇಲೆ ಓಡುತ್ತಿರುವ ಉಗಿಬಂಡಿಗಳ ಭರಾಟೆ, ದಕ್ಷಿಣ ಭಾಗಕ್ಕೆ ಪುರಾತನದಲ್ಲಿ ಆಳಿಹೋದ ಬಂಗರಸರು ಕಟ್ಟಿದ ಮಣ್ಣಿನ ಕೋಟೆ ಕೊತ್ತಲಗಳು ಇದ್ದುವು ಅನ್ನುವುದನ್ನು ಸಾರಿಹೇಳುವ ಸವೆದು ಹೋದ ಅವಶೇಷಗಳು, ಸಮೀಪದಲ್ಲೆ ಕಡತದಲ್ಲಷ್ಟೆ ಸುಮಾರು ಐದು ಸೆಂಟ್ಸ್ ಜಾಗವನ್ನು ತನ್ನ ಹೆಸರಿನಲ್ಲಿನ್ನೂ ಉಳಿಸಿಕೊಂಡಿರುವ, ಬಂಗರಸರಿಂದಲೇ ಕಟ್ಟಿಸಲ್ಪಟ್ಟ ವೀರಭದ್ರ ದೇವಾಲಯ ಇತ್ತೆನ್ನುವುದರ ಕುರುಹಾಗಿ, ಮೂರ್ತಿಯ ಹೊರತಾಗಿ ಗಟ್ಟಿಮುಟ್ಟಾದ ದಪ್ಪ ಗೋಡೆಯ ಕಪ್ಪು ಶಿಲೆಯ ಕಲಾತ್ಮಕವಾದ ಕಟ್ಟಡವೊಂದಿದೆ. ಹತ್ತಿರದಲ್ಲೇ ಧ್ವಜ ಸ್ಥಂಭವಿದ್ದು ಬಾವಟೆ ಹಿತ್ಲು ಎಂಬಲ್ಲಿ ಅದರ ಕುರುಹು ಇಂದಿಗೂ ಇದೆ. ಅದೇ ರೀತಿ ಇಂದೂ ಪೂಜೆಗೊಳ್ಳುತ್ತಿರುವ ಶ್ರೀ ವೀರಮಾರುತಿ ದೇಗುಲ (ಕೋಟೆ ಮುಖ್ಯಪ್ರಾಣ); ಸುತ್ತಲಿನ ಜನ ಹೇಳುವಂತೆ ಇತ್ತುಗಳ ಧ್ವಜಗಳನ್ನಷ್ಟೇ ಹೊತ್ತಿರುವ ಆದೀಶ್ವರ ಸ್ವಾಮಿಯ ಬಸದಿ, ಮುಸಲ್ಮಾನರಿಗಾಗಿ ಮಸೀದಿ ಹಾಗೆಯೇ ಪಿಲಿಚಾಮುಂಡಿ ದೈವಸ್ಥಾನ.

ವಿಶೇಷವೆಂದರೆ, ಜಾಲಕೆರೆ ಎಂಬ ಹೆಸರಿನಿಂದ ಕರೆಯಲ್ಪಡುವ ಕೆರೆ, ಕೆರೆಯಿಂದ ನೀರು ಹರಿದು ಹೋಗಲು ಕಲ್ಲಿನ ತೂಬು ಇವನ್ನು ಇಂದಿಗೂ ಕಾಣಬಹುದು. ಈ ಮೂಲಕ ನೀರಾವರಿಗೆ ಅಂದಿನ ರಾಜರ ಕೊಡುಗೆ ವೇದ್ಯವಾಗುತ್ತದೆ. ಇದರ ಪಶ್ಚಿಮಕ್ಕೆ ಅರಸರು ವಿಹಾರಕ್ಕಾಗಿ ಬಳಸುತ್ತಿದ್ದ ವಿಶಾಲವಾದ ಎತ್ತರದ ಪ್ರದೇಶವಿದ್ದು ‘ಅರಮನೆ ಗುಡ್ಡ’ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಪ್ರಕೃತ ಹಚ್ಚಹಸುರಿನಿಂದ ಕಂಗೊಳಿಸುತ್ತಿರುವ ದೇವಾಲಯದ ಪೂರ್ವಭಾಗ ಈ ಹಿಂದೆ ಅರಮನೆ ಇದ್ದ ಜಾಗವಾಗಿತ್ತು. ಅದಕ್ಕಾಗಿಯೊ ಏನೊ ಇಂದೂ ಕೂಡ ಆ ಪ್ರದೇಶವನ್ನು ಅರಮನೆ ಹಿತ್ತಿಲು ಎಂದೇ ಕರೆಯಲಾಗುತ್ತಿದೆ.

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ
ಜಾಲ ಕೆರೆ

ಸೋಮನಾಥ ಚಾವಡಿ ಎಂದು ಹೆಸರಿಸಲ್ಪಡುವ ರಾಜ ಒಡ್ಡೋಲಗ ಕೊಡುತ್ತಿದ್ದ ಜಾಗವನ್ನು ಅಲ್ಲಿನ ಜನ ಈಗಲೂ ತೋರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಇದೇ ಅರಮನೆಗೆ ಸಂಬಂಧಪಟ್ಟ ಬಾವಿ ಹಾಗೂ ಅದನ್ನು ಸಮೀಪಿಸಲು ಇರುವ ಕಲ್ಲಿನ ಮೆಟ್ಟಿಲುಗಳು ಗೋಚರವಾಗುತ್ತಿವೆ. ಅರಮನೆಯ ಮುಂಭಾಗದಲ್ಲಿ ಅಂಗಣಮಾರು ಹೆಸರಿನ ಸುಮಾರು ಹನ್ನೆರಡು ಎಕ್ರೆ ಜಾಗವಿತ್ತಂತೆ, ಇದನ್ನು ಕುದುರೆಗಳನ್ನು ಕಟ್ಟಿಹಾಕಲು ಉಪಯೋಗಿಸುತ್ತಿದ್ದರು ಅನ್ನುವುದು ಸುತ್ತಮುತ್ತಲಿನವರ ಮಾತು. ಈಗ ಹರಿದು ಹಂಚಾಗಿ ಹೋಗಿದ್ದರೂ ಕಣ್ಣಳತೆಗೆ ಸಿಗದಷ್ಟು ದೂರಕ್ಕೆ ಸಮತಟ್ಟಾದ ಜಾಗ ಹಾಸಿಕೊಂಡಿರುವುದನ್ನು ಕಾಣಬಹುದು. ಮಳೆಗಾಲದಲ್ಲೊಂದು ದಿನ ಎಲ್ಲಿಂದಲೋ ಕೊಪ್ಪರಿಗೆಯೊಂದು ಉರುಳಿಕೊಂಡು ಬಂದು ಅರಮನೆಯ ಸಮೀಪ ತಂಗಿತ್ತಂತೆ; ಅರಸನ ಊಳಿಗದವರು ಬಂದು ಅದನ್ನು ಸ್ವೀಕರಿಸುವಂತೆ ರಾಜನಲ್ಲಿ ಕೇಳಿಕೊಂಡರಂತೆ, ಆದರೆ ರಾಜ ತನಗೀಗಾಗಲೇ ಬೇಕಾದಷ್ಟು ಸಂಪತ್ತಿದೆಯೆಂದೂ ಕೊಪ್ಪರಿಗೆಯ ಅವಶ್ಯಕತೆಯಿಲ್ಲವೆಂದು ಹೇಳಲಾಗಿ ಆ ಕೊಪ್ಪರಿಗೆಯು ನೀರಿಗೆ ಜಾರಿ ಹೋಯಿತಂತೆ; ಆ ಜಾಗವಿಂದು ಪಂಬದ ಗುಂಡಿ ಅನ್ನುವ ಹೆಸರನ್ನು ಪಡೆದಿದೆ.

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ
ಶಂಕರನಾರಾಯಣ ದೇವರು

ಸೋಮನಾಥ ದೇವಾಲಯದ ಪೂಜೆ ಭಟ್ಟರ ‘ಕಂಕಣ’ ಅನ್ನುವ ಹೆಸರಿನ ಮಗಳು ಬಂಗರಸರ ಕೀಟಲೆಗೆ ಒಳಗಾದಾಗ ಆಕೆ ಅಪಮಾನವನ್ನು ಸಹಿಸಿಕೊಳ್ಳಲಾಗದೆ ಮರ್ಯಾದೆಗಾಗಿ ನದಿಗೆ ಹಾರಿ ಪ್ರಾಣ ತ್ಯಾಗ ಮಾಡಿಕೊಂಡ ಸ್ಥಳ ಕಂಕಣ ಗುಂಡಿ ಎನ್ನುವ ಹೆಸರು ಪಡೆಯಿತು. (ಬಂಗರಸರು ಇಂತಹ ಕೀಳು ಕೆಲಸಕ್ಕೆ ಇಳಿದ ಘಟನೆಗಳು ನಮಗೆ ಇತಿಹಾಸದಲ್ಲಿ ಕಂಡುಬರುತ್ತಿಲ್ಲ; ಆದರೆ, ಈ ಕಳಂಕ ನಂದರಸರಿಗೆ ಅಂಟಿದ್ದಿದೆ) ಇದರ ಸ್ವಲ್ಪವೇ ಅಂತರದಲ್ಲಿ ಸಿಕ್ಖರು ವಾಸಮಾಡುತ್ತಿದ್ದ ಪ್ರದೇಶ ಸಿಂಗರ ಗುಂಡಿ ಎಂಬ ಹೆಸರನ್ನು ಪಡೆಯಿತು. ನೇತ್ರಾವತಿಯ ಇನ್ನೊಂದು ದಡದಲ್ಲಿ, ಅಂದರೆ ನದಿಯ ಉತ್ತರ ಭಾಗದಲ್ಲಿ ಹಿಂದೂ ರುದ್ರ ಭೂಮಿಯಿದೆ; ಇದಕ್ಕೆ ಅಭಿಮುಖವಾಗಿ, ನದಿಯ ದಕ್ಷಿಣ ದಂಡೆಯಲ್ಲಿ ಉತ್ತರಕ್ರಿಯಾದಿಗಳು ನಡೆಯುತ್ತವೆ.

ನಂದಾವರದಲ್ಲಿ ರಾಜಗಂಭೀರ ವಾತಾವರಣವಿದೆ. ನಾಲ್ಕು ಎಕರೆ ಭೂ ಪ್ರದೇಶವನ್ನು ಕೋಟೆಯು ಆವರಿಸಿತ್ತಂತೆ. ಆದರೆ ಇಂದು ನಂದಾವರದಲ್ಲಿ ಅರಮನೆಯಿಲ್ಲ, ಕೋಟೆ ಕೊತ್ತಲಗಳಿಲ್ಲ. ಆದರೆ ಈ ಪ್ರದೇಶಗಳ ಸುತ್ತೆಲ್ಲ ಅಡ್ಡಾಡಿದರೆ ಮೊದಲು ಇಲ್ಲೆಲ್ಲವೂ ಇತ್ತೆಂಬುದನ್ನು ಸಾರಿ ಹೇಳುವ ಅವಶೇಷಗಳು, ಕುರುಹುಗಳು ನಿರ್ಜೀವ ಸ್ಮಾರಕಗಳಾದರೂ ಅವುಗಳ ಒಳಗಣ ವೈಭವದ ದಿನಗಳು ಗೋಚರವಾಗುತ್ತವೆ. ಬಹಳ ಪ್ರಾಚೀನ ಹಾಗೂ ಚಾರಿತ್ರಿಕವಾಗಿ ಪ್ರಸಿದ್ಧವಾದ ನಂದಾವರವು ಶತಶತಮಾನಗಳ ಕಾಲ ಒಂದು ಐತಿಹಾಸಿಕ ಕೇಂದ್ರವಾಗಿ ಮೆರೆದಾಡಿದ ಸ್ಥಳವೆಂಬುವುದು ತಿಳಿಯುತ್ತದೆ. ಈ ಪ್ರದೇಶವನ್ನು ಅದೆಷ್ಟು ಮಂದಿ ರಾಜರುಗಳು ಆಳಿ ಹೋಗಿದ್ದಾರೆಯೋ, ಅದೆಷ್ಟು ಮಂದಿ ಈ ನಂದಾವರದ ಏಳಿಗೆಯನ್ನು ಬಯಸಿ ಗತಪ್ರಾಣರಾಗಿದ್ದಾರೆಯೋ ಅದೆಲ್ಲವೂ ಇಂದಿಗೆ ಕಾಲ ಗರ್ಭಕ್ಕೆ ಸೇರಿ ಹೋಗಿದೆ.

ಒಂದರ್ಥದಲ್ಲಿ, ಪರಂಪರಾಗತವಾಗಿ ರಾಜ ವೈಭವದಿಂದ ಒಂದು ಸರಕಾರದ ಕಾರ್ಯಕ್ರಮದಂತೆ ಎಲ್ಲವೂ ಇಲ್ಲಿ ಸುಸೂತ್ರವಾಗಿ ನಡೆದು ಬಂದಿತ್ತು; ಚರಿತ್ರೆಯ ಎಳೆಎಳೆಯನ್ನು ಬಿಡಿಸುವಾಗ, ಇಲ್ಲಿನ ಗತ ವೈಭವದ ಸಾಹಿತ್ಯ ತಿಳಿಯುವಾಗ ‘ನಂದಾವರ’ ವೈಭವದಿಂದ ಮೆರೆದ ಸಂಸ್ಥಾನವಾಗಿತ್ತು ಅನ್ನುವುದನ್ನು ಖಂಡಿತವಾಗಿ ಹೇಳಬಹುದಾಗಿದೆ ಮಾತ್ರವಲ್ಲ ಶ್ರದ್ಧಾ ಭಕ್ತಿಗಳ ಕೇಂದ್ರವೂ ಆಗಿತ್ತು ಎಂದು ತಿಳಿದು ಬರುತ್ತದೆ.

ನಂದಾವರಕ್ಕೊಂದು ಐತಿಹಾಸಿಕ ಹಿನ್ನೆಲೆ ಇಲ್ಲಿನ ಊರಿನವರ ಪ್ರಕಾರ ನಂದಾವರವನ್ನು ಆಳಿದ್ದ ಬಂಗರಸು ಎಂಬವನು ಆಶ್ರಿತ ರಾಜ. ಬಲ್ಲಾಳನೂ ಆಗಿದ್ದಿರಬಹುದು. ಈತನು ಪ್ರಜಾ ಪರಿವಾರವನ್ನು ತನ್ನವರೆಂದು ಅರಿತು ಧರ್ಮ ಸತ್ಯ ನಿಷ್ಠೆಗಳಿಂದ ಆಡಳಿತ ನಡೆಸಿ ಜನಾನುರಾಗಿಯಾಗಿದ್ದನು. ಅರಮನೆಯಲ್ಲಿ ತನ್ನ ಅಧೀನದಲ್ಲಿದ್ದ ಅಧಿಕಾರಿಗಳನ್ನು, ಚಾಕರಿಯವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದನು. ಹೀಗೆ ನಿಷ್ಠೆಯಿಂದ ರಾಜ್ಯಾಡಳಿತ ನಡೆಸುತ್ತಿದ್ದ ಕಾಲದಲ್ಲಿ ಒಮ್ಮೆ ತೀರ ಬಡವನಾಗಿದ್ದ, ಜಾತಿಯಲ್ಲಿ ಚಮಗಾರನಾಗಿದ್ದ ನಂದನೆಂಬವನು ಅರಸನ ಮುಂದೆ ತನ್ನ ಕಷ್ಟವನ್ನು ತೋಡಿಕೊಂಡು ಒಂದು ಕೋಣ ಮಲಗುವಷ್ಟು ಅಂದರೆ ಕಡಿಮೆ ವಿಸ್ತಾರದ ಜಾಗವನ್ನು, ವಾಮನನು ಬಲಿಯಲ್ಲಿ ಮೂರಡಿ ಭೂಮಿಯನ್ನು ಬೇಡಿದಂತೆ ಬೇಡಿದನಂತೆ. ಅರಸನು ಸಂತೋಷಗೊಂಡು ಅವನ ಬೇಡಿಕೆಯನ್ನು ಈಡೇರಿಸುವ ಅಭಯವನ್ನು ನೀಡಿದನಂತೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲನಾದರೆ ಬೊಕ್ಕಸವನ್ನೇ ನಿನಗೆ ಬಿಟ್ಟುಕೊಡುತ್ತೇನೆ ಎಂದು ಭಾಷೆ ಇತ್ತನಂತೆ. ಇತ್ತ ನಂದನು ಕೋಣದ ಚರ್ಮದಿಂದ ನೂಲಿನಂತಹ ಎಳೆಗಳನ್ನು ಮಾಡಿ ಒಂದಕ್ಕೊಂದು ಜೋಡಿಸಿ, ಅರಮನೆಯನ್ನು ಸುತ್ತುವರಿಯುವಂತೆ ಮಾಡಿದನಂತೆ. ಕೊಟ್ಟ ಮಾತಿಗೆ ತಪ್ಪದೆ ದೊರೆಯು ಬೊಕ್ಕಸವನ್ನು ನೀಡಿ ನಂದನಿಗೇ ಅಡಿಯಾಳಾಗಬೇಕಾಗಿ ಬಂತಂತೆ! ಹೀಗೆ ತನ್ನ ವಶವಾದ ಈ ಪ್ರದೇಶಕ್ಕೆ ತನ್ನ ಹೆಸರನ್ನು ಸೇರಿಸಿ ರಾಜ್ಯವಾಳತೊಡಗಿದನಂತೆ ನಂದ. ನೀಚನಾಗಿದ್ದ ಈತನ ಆಳ್ವಿಕೆಯಲ್ಲಿ ಪ್ರಜೆಗಳಿಗೆ ನೆಮ್ಮದಿ ದೂರವಾಗಿ ಜನ ಶಪಿಸತೊಡಗಿದರಂತೆ. ಕಾಮಪಿಪಾಸುವಾದ ಈತನು ಊರಿನ ಹೆಂಗಳೆಯರನ್ನು ಪೀಡಿಸತೊಡಗಿದನಂತೆ. ಅರಮನೆಯ ಬೊಕ್ಕಸವನ್ನು ಭೋಗ ಜೀವನಕ್ಕೆ ಬರಿದು ಮಾಡಿದ ಈತನು ಮುಂದೆ ಚರ್ಮದ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೂ ತಂದನಂತೆ.

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ
ನಂದಾವರ ವಿನಾಯಕ

ಒಂದು ಐತಿಹ್ಯದಂತೆ, ಮಯೂರ ವರ್ಮ(ಶರ್ಮ)ಎಂಬ ದೊರೆಯು ತನ್ನ ರಾಣಿ ಹಾಗೂ ಪರಿವಾರದೊಂದಿಗೆ ವಿಹಾರಕ್ಕಾಗಿ ನಂದಾವರದತ್ತ ಬಂದನಂತೆ. ನಂದಾವರವನ್ನು ಸಂದರ್ಶಿಸುವ ಉತ್ಸಾಹ ತೋರಿದ ಇವನ ರಾಣಿಗೆ ನದಿ ದಾಟಿ ಬರಬೇಕಾದ ಪ್ರಮೇಯ ಬಂದೊದಗಿದಂತೆ. ಅಂಬಿಗನ ಸಹಾಯದಿಂದ ರಾಣಿಯೊಬ್ಬಳೇ ನದಿ ದಾಟಿ ನಂದ ರಾಜನ ಊರನ್ನು ಪ್ರವೇಶಿಸಿದ ಸಂಗತಿ ಕಾಮುಕ ದೊರೆ ನಂದ ರಾಜನ ಕಿವಿಗೂ ಮುಟ್ಟಿತಂತೆ. ರಾಣಿಯ ಸೌಂದರ್ಯಕ್ಕೆ ಮನಸೋತ ನಂದ ರಾಜನು ರಾಣಿಯು ತನ್ನ ಅರಮನೆಯಲ್ಲಿಯೇ ರಾತ್ರಿ ಕಳೆಯುವಂತೆ ಮಾಡಲು ಅಂಬಿಗನನ್ನು ತಡೆದನಂತೆ. ತನಗೆ ಬಂದೊದಗಿದ ಅಪಾಯವನ್ನು ಮನಗಂಡ ರಾಣಿಯು ನಂದರಾಜನ ರಾಣಿಯ ಮೊರೆಹೊಕ್ಕು ಆಕೆಯ ನೆರವಿನಿಂದ ದೊರೆಗೆ ತಿಳಿಯದಂತೆ ನದಿ ದಾಟಿ ಪಾರಾದಳಂತೆ. ನಂದರಾಜನ ರಾಣಿ ಆಕೆಯ ಮಾನ ಉಳಿಸಿ, ಮಾನವೀಯತೆ ಮೆರೆದಳಂತೆ. ಮಯೂರ ವರ್ಮನು ನಂದರಾಜನಿಂದ ತನ್ನ ರಾಣಿಗೆ ಬಂದೊದಗಿದ್ದ ಗಂಡಾಂತರವನ್ನು ತಿಳಿದು, ಇಂತಹ ದುಷ್ಟನಿದ್ದರೆ ದೇಶಕ್ಕೇ ಕೇಡು ಎಂದು ಬಗೆದು ಆತನ ಮೇಲೆ ಆಕ್ರಮಣ ಮಾಡಿ ನಂದ ರಾಜನನ್ನು ಕೊಂದನಂತೆ. ರಾಣಿಯ ಮಾನ ಉಳಿಸುವಲ್ಲಿ ನೆರವಾದ ಅಂಬಿಗನನ್ನು ಪುರಸ್ಕರಿಸಿ, ಕಡವಿನ ಅಧಿಕಾರವನ್ನು ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬರುವಂತೆ ತಾಮ್ರ ಶಾಸನವನ್ನು ಬರೆದು ನೀಡಿದನಂತೆ. ಮುಂದೆ ಸುರಿದ ಭಾರೀ ಮಳೆಗೆ ನಂದ ರಾಜನು ಚಲಾವಣೆಗೆ ತಂದಿದ್ದ ಚರ್ಮದ ನಾಣ್ಯಗಳು ಒದ್ದೆಯಾಗಿ ವಾಸನೆ ಹುಟ್ಟಿ ನರಿ ನಾಯಿಗಳಿಗೆ ಆಹಾರವಾದುವಂತೆ. ಇದರಿಂದಲೇ “ನಂದರಾಯನ ಬದುಕು ನರಿ ನಾಯಿ ತಿಂದು ಹೋಯಿತು” ಎಂಬ ಉಕ್ತಿ ಇಂದಿಗೂ ಉಳಿದು ಬಂದಿದೆಯಂತೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಲಿಖಿತ ಆಧಾರಗಳು ಸಿಗುವುದಿಲ್ಲ.’ನಂದಾವರ’ ಎಂಬ ಊರಿನ ಹೆಸರು ಮೂಲತಃ ನಂದ ವಂಶದ ರಾಜರ ಹೆಸರಿನಿಂದ ಬಂದಿದೆ ಎಂಬುದಕ್ಕೆ ಎರಡು ಐತಿಹಾಸಿಕ ದಾಖಲೆಗಳಿವೆ. ನಂದ ಅರಸು ಮನೆತನದ ರಾಜಧಾನಿಯಾಗಿದ್ದ ಈ ಊರನ್ನು ‘ನಂದಪುರ’ ಎಂದು ಕರೆಯುತ್ತಿದ್ದರು. ಕಾಲ ಕ್ರಮೇಣ ಇಲ್ಲಿರುವ ‘ಪ’ಕಾರ ಶಿಥಿಲಗೊಂಡು, ಕೊನೆಯಲ್ಲಿ ‘ವ’ಕಾರವಾಗಿ ‘ನಂದವುರ’ ಆಗಿ, ಶ್ರಮ ಪರಿಹಾರಾರ್ಥವಾಗಿ ಎನ್ನುವಂತೆ ‘ನಂದವ್ರ’ ಆಗಿ ಮುಂದಕ್ಕೆ ‘ನಂದಾವರ’ ಆಗಿರುವ ಸಾಧ್ಯತೆಗಳಿವೆ.

ಎರಡನೆಯದಾಗಿ ನಂದ ವಂಶದ ಈ ಅರಸರು ಈ ಪಟ್ಟಣದ ಸುತ್ತಲೂ ಆವರಣ ಅಥವಾ ಸುತ್ತು ಗೋಡೆಯನ್ನು ಕಟ್ಟಿಸಿದ್ದರಿಂದ ಇದನ್ನು ನಂದಾವರವೆಂದು ಕರೆಯಾಲಾಯಿತು. ನಂದ ವಂಶದ ಅರಸರು ಇಲ್ಲಿ ಆಡಳಿತ ನಡೆಸುತ್ತಿದ್ದರೆಂಬುದು ಸ್ಪಷ್ಟ. ಇಲ್ಲಿನ ಸ್ಥಳೀಯರು ಹೇಳುವಂತೆ ನಂದರಸರು, ಹರಿಜನ ಜಾತಿಯವರಾಗಿದ್ದರೆಂದೂ ಹೆಚ್ಚಿನಂಶ ಇಲ್ಲಿನ ಸ್ಥಳೀಯ ಜನರೇ ಆಗಿರುವ ಸಾಧ್ಯತೆಗಳಿವೆಯೆಂದೂ ಅವರ ಅಭಿಪ್ರಾಯ. ಆದ್ದರಿಂದ ಬಹಳಷ್ಟು ಪುರಾತನದಿಂದಲೇ ಇಲ್ಲಿ ಇವರೇ ಆಡಳಿತ ನಡೆಸುತ್ತಿದ್ದರೆಂದೂ ಅವರದ್ದೇ ಹೆಸರು ಈ ಊರಿಗೆ ಶಾಶ್ವತವಾಗಿ ನಿಂತಿತೆಂದೂ ಹೇಳಬಹುದು; ಆದರೆ ಲಭ್ಯ ಮಾಹಿತಿಗಳನ್ನು ಆಧರಿಸಿ ಇವರು ಯಾವ ಕಾಲದಲ್ಲಿ ಮತ್ತು ಎಷ್ಟು ಕಾಲ ಆಡಳಿತ ನಡೆಸಿದರೆಂಬುದನ್ನು ಮಾತ್ರ ಹೇಳಲು ಸಾಧ್ಯವಿಲ್ಲ. ನಂದ ರಾಜ ವಂಶದ ಹೆಸರು ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಕಂಡುಬರುತ್ತದೆ. ಪ್ರಸಿದ್ಧನಾದ ಅಶೋಕ ಚಕ್ರವರ್ತಿಯ ಪಿತಾಮಹನಾದ ಸಮುದ್ರಗುಪ್ತ ಮೌರ್ಯನು ಚಾಣಕ್ಯನ ಸಹಾಯದಿಂದ ನಂದ ಅರಸರನ್ನು ಸೋಲಿಸಿ, ನಾಶಪಡಿಸಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಆ ನಂದ ವಂಶದ ಒಂದು ಶಾಖೆಯೇ ಇಲ್ಲಿಗಾಗಮಿಸಿ, ಇಲ್ಲಿಂದಲೂ ರಾಜ್ಯವಾಳುತ್ತಿದ್ದರೋ ಏನೋ ಎಂಬುದಾಗಿ ಹೇಳುತ್ತಾರೆ. ಮುಂದುವರಿಯುತ್ತಾ ಈ ಎರಡೂ ಮನೆತನಗಳ ಹೆಸರುಗಳಲ್ಲಿ ಪೂರ್ಣ ಸಾಮ್ಯವಿದೆ. ನಂದಾವರವನ್ನು ಆಳುತ್ತಿದ್ದ ನಂದರು ಹರಿಜನರಾಗಿದ್ದಂತೆ ಉತ್ತರ ಭಾರತದ ಆ ಮೌರ್ಯ ಪೂರ್ವ ಕಾಲದ ನಂದರೂ ಚತುರ್ವವರ್ಣ ಪದ್ಧತಿಯಲ್ಲಿ ಮೊದಲ ಮೂರು ವರ್ಗಕ್ಕೆ ಸೇರಿದವರಲ್ಲ; ಅವರ ಆಚಾರ ವಿಚಾರ, ಆಹಾರ ಅಭ್ಯಾಸಗಳ ಅಧ್ಯಯನದಿಂದ ಅವರು ಅಂದಿನ ನಾಲ್ಕನೇ ವರ್ಗಕ್ಕೆ ಸೇರಿದವರೆಂದು ಹೇಳಬೇಕಾಗುತ್ತದೆ. ಆದುದರಿಂದ ಹೆಸರು ಮಾತ್ರವಲ್ಲದೆ ಈ ಎರಡೂ ಮನೆತನಗಳಲ್ಲಿ ಸಾಮ್ಯವೂ ಕಂಡುಬರುತ್ತದೆ. ಆದರೆ ಇವಾವುದಕ್ಕೂ ಲಿಖಿತ ದಾಖಲೆಗಳಿಲ್ಲ.

ನಂದ ಅರಸರು ಈ ನೇತ್ರಾವತೀ ತಟವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಇಲ್ಲಿ ಕೋಟೆ, ಅರಮನೆ, ಮಂತ್ರಿ, ಅಧಿಕಾರಿಗಳ ನಿವಾಸಗಳು; ಪರಿಚಾರಕ, ಸೈನಿಕ, ವ್ಯಾಪಾರಿ ಮುಂತಾದವರ ಮನೆಗಳನ್ನು ಕಟ್ಟಿಸಿದ್ದರಿಂದ ಈ ಪ್ರದೇಶವು ನಂದವುರ ಹಾಗೂ ಮುಂದೆ ನಂದಾವರ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಇವರು ಕ್ರಿ.ಶ 15ನೇ ಶತಮಾನದವರೆಗೆ ಇಲ್ಲಿ ಆಡಳಿತೆ ನಡೆಸುತ್ತಿದ್ದರೆಂದು ತಿಳಿದುಬರುತ್ತದೆ. ಒಂದನೇ ಲಕ್ಷ್ಮಪ್ಪರಸ ಬಂಗರಾಜ(ಕ್ರಿ.ಶ.1400-1455) ಉಪ್ಪಿನಂಗಡಿಯಿಂದ ದೋಣಿ ಹತ್ತಿಕೊಂಡು ಮಂಗಳೂರಿಗೆ ಹೋಗುವಾಗ ನಂದಾವರದ ಮಹಾಗಣಪತಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ಒಂದು ಜೋಡು ಕವಡೆಗಳು ರಾತ್ರೆ 5 ಘಳಿಗೆ ಸಮಯ ಸಮನೆಲದಲ್ಲಿ ಕೂತು ಕೂಗುತ್ತಿದ್ದವು. ಆಗ ಹತ್ತಿರವಿದ್ದ ಜೋಯಿಸನು ಈ ಸಮಯ ಹಕ್ಕಿಗಳು ಕೂಗಿದ್ದರಿಂದ ಆ ಸ್ಥಳದಲ್ಲಿ ಐಶ್ವರ್ಯ ತುಂಬಿದೆ ಮತ್ತು ಅರಮನೆ ಕಟ್ಟಲಿಕ್ಕೂ ಯೋಗ್ಯವಾದ ಸ್ಥಳವೂ ಆಗಿದೆ ಎಂದು ಹೇಳಿದನು, ಆಗ ಎಲ್ಲರು ದೋಣಿಯಿಂದ ಕೆಳಗಿಳಿದು ಆ ಸ್ಥಳದಲ್ಲಿ ಒಂದು ಕೋಲು ಊರಿ ಗುರುತನ್ನು ಮಾಡಿ ಪುನಹ ದೋಣಿ ಹತ್ತಿ ಮಂಗಳೂರಿಗೆ ಹೋದರು. ಅನಂತರ ತಿರುಗಿ ನಂದಾವರಕ್ಕೆ ಬಂದು ಸಜೀಪ ಸೀಮೆಯ ನಂದಿರಾಯ ಬಲ್ಲಾಳನ ಸಹಾಯದಿಂದ ಅರಮನೆ ಕಟ್ಟಲು ಬುನಾದಿ ಕಲ್ಲು ಹಾಕಲಿಕ್ಕೆ ಅಗೆದಾಗ ದ್ರವ್ಯವು ಸಿಕ್ಕಿತು. ಶಾ.ಶ. 1336ನೇ ಜಯ ನಾಮ ಸಂವತ್ಸರದ ಮಾಘ ಶುದ್ಧ 7 ಯು ದಿವಸ ಬಹಳ ವಿಜೃಂಭಣೆಯಿಂದ ಅರಮನೆಯ ಪ್ರವೇಶವಾಯಿತು. ಅರಮನೆಯನ್ನು ಕಟ್ಟಿದ ಮೇಲೆ ಅದರ ದಕ್ಷಿಣದಲ್ಲಿ ಒಂದು ಕೋಟೆಯನ್ನು ಕಟ್ಟಿಸಿ ಅದರಲ್ಲಿ ವೀರಭದ್ರ ದೇವರ ಪ್ರತಿಷ್ಠೆ ಮಾಡಿಸಿದನು. ಪಿಲಿ ಚಾಮುಂಡಿ ದೈವಕ್ಕೆ ಒಂದು ಗುಡಿಯನ್ನು ಸಹ ಕಟ್ಟಿಸಿದನು. ಅರಮನೆಯ ಪೂರ್ವ ದಕ್ಷಿಣ ಭಾಗದಲ್ಲಿ ಪಗಡೆ ಸಾಲಿನಲ್ಲಿ ಪೇಟೆಯನ್ನು ಕಟ್ಟಿಸಿ ಸಾಮಾಜಿಕರು ಮುಂತಾದವರಿಗೆ ಅವರವರ ತರವರಿತು ಮನೆಗಳನ್ನು ಕಟ್ಟಿಸಿಕೊಟ್ಟು ಅರಮನೆಯ ಪೂರ್ವ ದಿಕ್ಕಿನಲ್ಲಿ ಒಂದು ವೀರ ಮಾರುತಿ ದೇವಸ್ಥಾನವನ್ನೂ ದಕ್ಷಿಣ ಭಾಗದಲಿ ಆದೀಶ್ವರ ಬಸದಿಯನ್ನೂ ಮುಸಲ್ಮಾನರಿಗೆ ಮತ್ತು ಮಾಪಿಳ್ಳೆಯರಿಗೆ ಒಂದು ಮಸೀದಿಯನ್ನೂ ಕಟ್ಟಿಸಿದನು. ಇವುಗಳಲ್ಲಿ ಮಸೀದಿ ದೇವಸ್ಥಾನ ಬಸದಿಗಳಿಗೆ ಉಂಬಳಿ ಬಿಟ್ಟು, ಸಜೀಪ ನಡುಬೈಲು ದೈವಗಳಿಗೂ ಬೇಕಾದಷ್ಟು ಆಭರಣ ಮುಂತಾದ್ದನ್ನು ಮಾಡಿಸಿಕೊಟ್ಟನು.

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ
ನಂದಾವರ ಉತ್ಸವದ ದಿನ ಕಂಗೊಳಿಸುತ್ತಿರುವುದು

ಈ ಅರಸನ ಕಾಲದಲ್ಲಿ ಬಂಗಾಡಿ, ಬೆಳ್ತಂಗಡಿ, ಮಂಗಳೂರು, ನಂದಾವರ ಎಂಬ ನಾಲ್ಕು ಅರಮನೆಗಳಾದುವು. ಬಂಗ ಅರಸನು ಇಲ್ಲಿ ತನ್ನ ಅರಮನೆಯನ್ನು ಕಟ್ಟಿಸುವ ಸಂದರ್ಭದಲ್ಲಿ ಇಲ್ಲಿಂದ ಆಳುತ್ತಿದ್ದ ನಂದರಾಯನೊಡನೆ ಯುದ್ಧ ಹೂಡಿದನು. ಜನ ಬೆಂಬಲವೂ ಇಲ್ಲದ, ಅಂದಿನ ಮಟ್ಟಿಗೆ ಕೀಳು ಜಾತಿಯವನೂ ಆಗಿದ್ದ ನಂದರಾಯನ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಇದರಿಂದಾಗಿ, ಜೀವವನ್ನು ಕಳೆದುಕೊಂಡ ನಂದರಾಯನ ಸಂಪತ್ತನ್ನು ಯಾರ್ಯಾರೋ ದೋಚಿಕೊಂಡು ಹೋದರು, ತಿಂದು ಹಾಕಿದರು. ಹೀಗೆ ನಂದರಾಯನ ಬದುಕು ನರಿನಾಯಿ ತಿಂದು ಹೋಯಿತು ಎಂಬ ನಾಣ್ಣುಡಿ ರೂಢಿಗೆ ಬಂತು; ಹೀಗೆ ದಾರುಣವಾಗಿ ನಂದ ವಂಶವು ಅಸ್ತಂಗತವಾಗಿ ಈ ನಂದಪುರದಲ್ಲಿ ದುಃಖದ ಕತ್ತಲು ಕವಿಯಿತು.

ದುರದೃಷ್ಟವೆಂದರೆ, ಎಷ್ಟು ಮಂದಿ ನಂದ ವಂಶದ ಅರಸರು ಈ ನಂದಾವರವನ್ನು ಆಳಿದ್ದಾರೆ ಅನ್ನುವುದು ತಿಳಿದು ಬರುತ್ತಿಲ್ಲ, ಅಲ್ಲೊಬ್ಬ ನಂದರಾಯ ಮಯೂರ ಶರ್ಮನಿಂದ ಸತ್ತರೆ ಇಲ್ಲೊಬ್ಬ ನಂದರಾಯ ಬಂಗರಸನಿಂದ ಹತನಾದ. ಒಂದಂತೂ ಸತ್ಯ, ನಂದರು ನಂದಾವರದಲ್ಲಿ ಆಡಳಿತ ನಡೆಸಿದ್ದಾರೆ, ಆದರೆ ಯಾವ ಹೆಸರಿನ ಎಷ್ಟು ಮಂದಿ ಅರಸರು ಅನ್ನುವುದನ್ನು ನಿರ್ಣಯಿಸಲು ಸಾಧ್ಯವಿಲ್ಲವಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದೆಹಲಿಯ ಪಾಕಪದ್ದತಿ

ದೆಹಲಿಯ ಪಾಕಪದ್ದತಿಗಳು ಹೀಗಿವೆ ನೋಡಿ

ಪುನೀತ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ

ಪುನೀತ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ, ಆದರೆ ಗಂಧದ ಗುಡಿ ನೋಡಿದಾಗ ಮತ್ತೆ ಕಣ್ಣಮುಂದೆ ಬಂದಹಾಗೆ ಅನ್ನಿಸುತ್ತೆ