ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸವಲ್ಲದೆ ಬೇರೆ ಏನೂ ಅಲ್ಲ.
ಪ್ರತಿಯೊಬ್ಬ ಮನುಷ್ಯನು ಹುಟ್ಟುವಾಗ ಒಂಟಿ ಸಾಯುವಾಗ ಒಂಟಿ. ಇವೆರಡರ ನಡುವೆ ಸುಮಾರು ಅನುಬಂಧಗಳು ಇರುತ್ತವೆ. ಅದರಲ್ಲಿ ಕೆಲವು ಅನಿವಾರ್ಯ ಇನ್ನು ಕೆಲವು ಆಯ್ಕೆ ಹಾಗೂ ಕೆಲವು ದೇವಲೋಕದ ಉಡುಗೊರೆ. ಅಂತಹವುಗಳಲ್ಲಿ ತಂದೆ-ತಾಯಿ ಹಾಗೂ ಒಡಹುಟ್ಟಿದವರು ನಮಗಾಗಿ ನಿಶ್ಚಯವಾದ ಸಂಬಂಧಗಳು. ಸಾಮಾನ್ಯವಾಗಿ ಸಿಬ್ಲಿಂಗ್ ಎಂದರೆ ಒಡಹುಟ್ಟಿದವರು ಎಂಬ ಅರ್ಥ ನೀಡುತ್ತದೆ. ಈ ರೀತಿ ಒಡಹುಟ್ಟಿದವರು ಅಣ್ಣ- ತಮ್ಮ, ಅಕ್ಕ-ತಂಗಿ, ಅಕ್ಕ-ತಮ್ಮ,ಅಣ್ಣ- ತಂಗಿ ಆಗಿರಬಹುದು. ಅದೇ ರೀತಿ ಕೆಲವರ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳು ಕೂಡ ಇರುತ್ತಾರೆ. ಆ ಮಕ್ಕಳ ಮಧ್ಯದಲ್ಲಿ ಸಾಮಾನ್ಯವಾಗಿ ಪ್ರೀತಿ , ದ್ವೇಶ, ಕೋಪ ಇದ್ದೇ ಇರುತ್ತದೆ. ಎಷ್ಟೇ ಜಗಳವಾಡಿದರೂ ಕೂಡ ಅವರು ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾರರು. ಆದರೆ ಹಿರಿಯರು ಹೇಳಿದಂತೆ ಅವರ ಜಗಳವೇ ಅವರ ಪ್ರೀತಿ ಎಂಬ ಮಾತು ಸತ್ಯ. ಅದರೆ ಕೆಲವು ಸಮಯಗಳಲ್ಲಿ ಸಿಬ್ಲಿಂಗ್ ಒಟ್ಟಿಗೆ ಇರುವುದಿಲ್ಲ ಏಕೆಂದರೆ ತಂದೆ ತಾಯಿ ಜಗಳವಾಡಿ ಮಕ್ಕಳನ್ನು ದೂರಪಡಿಸಿರಬಹುದು ಅಂದರೆ ಒಂದು ಮಗು ತಂದೆ ಹತ್ತಿರ ಹಾಗೂ ಇನ್ನೊಂದು ಮಗು ತಾಯಿಯ ಹತ್ತಿರ ಬೆಳದು ದೂರವಾಗಿರುತ್ತಾರೆ ಅಥವಾ ಓದಿನ ಕಾರಣದಿಂದ ದೂರ ಬೆಳೆಯುತಾರೆ.
ಹೆತ್ತ ತಂದೆತಾಯಿ ಇರುವವರೆಗೆ ಮಾತ್ರ ಊರು ಒಡಹುಟ್ಟಿದವರು ಬಂಧು ಮಿತ್ರರು ಎಂಬ ಕೊಂಡಿ ಬೆಸೆದುಕೊಂಡಿರುತ್ತದೆ, ಅವರೇ ಕಾಲವಾದ ನಂತರ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ದೂರಾಗುತ್ತಲೇ ಹೋಗುತ್ತಾರೆ. ಇದು ಎಲ್ಲಾ ರೀತಿಯ ಕುಟುಂಬಗಳಿಗೂ ಅನ್ವಯಿಸುವುದಂತೂ ನಿಜ. ನಾವು ಎಷ್ಟೇ ಕಷ್ಟಪಟ್ಟು ಹಿಡಿದಿಟ್ಟುಕೊಂಡ ಬಾಂಧವ್ಯದ ಕೊಂಡಿಗಳು ಕಾಲಕ್ರಮೇಣ ಸಡಿಲವಾಗಿ ಎಲ್ಲೋ ಒಂದು ಕಡೆ ಜಾರುವ ಸಂದರ್ಭಗಳು ಬರಬಹುದು. ಅಂತಹ ಕ್ಷಣವನ್ನು ಧೈರ್ಯದಿಂದ ಎದುರಿಸಲು ಈಗಿನಿಂದಲೇ ತಯಾರಿ ನಡೆಸಿದರೆ ಉತ್ತಮ. ಏಕೆಂದರೆ ಕೆಲವರು ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ, ಅಂತಹವರಿಗೆ ಇಂತಹ ಪರಿಸ್ಥಿತಿಯನ್ನು ತಕ್ಷಣವೇ ಸುಧಾರಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಇದಂತೂ ಕಟುಸತ್ಯ, ಸಂಬಂಧಗಳೇನಿದ್ದರೂ ತಂದೆತಾಯಿ ಒಡಹುಟ್ಟಿದವರೊಂದಿಗೆ ಬೆಸೆದುಕೊಂಡಿರುತ್ತದೆ.
ಕಾಲಕ್ರಮೇಣ ಕುಟುಂಬ ಬೆಳೆದಂತೆ ಪ್ರತಿಯೊಬ್ಬರೂ ಅವರವರ ಸಂಸಾರಕ್ಕೆ ಪ್ರಾಮುಖ್ಯತೆ ಕೊಟ್ಟು ಹೆಂಡತಿ ಮಕ್ಕಳೆನ್ನುವ ಮಮಕಾರಕ್ಕೆ ಸಿಲುಕಿ ಅಸಹಾಯಕರಾಗಿ ಹಿಂದಿನಷ್ಟು ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹಾಗೋ ಹೀಗೋ ತಂದೆತಾಯಿ ಬದುಕಿರುವವರೆಗೆ ಅವರ ಮನಸ್ಸಂತೋಷಕ್ಕಾಗಿ ಯಾದರೂ ಅಗಾಗ್ಗೆ ಉಳಿದ ಅಣ್ಣತಮ್ಮಂದಿರೊಂದಿಗೆ ಹಾಗೂ ಅಕ್ಕತಂಗಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಒಮ್ಮೆ ಹಳೆಯ ಕೊಂಡಿ ಎನಿಸಿಕೊಂಡ ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ.
ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ನಿದರ್ಶನಗಳು ನೋಡಲು ಸಿಗುತ್ತದೆ. ಇಂತಹ ಒಂದು ಬೆಳವಣಿಗೆಗೆ ಮುಖ್ಯ ಕಾರಣ ನಮ್ಮ ಒಳಗಿರುವ ಸ್ವಾರ್ಥ ಹಾಗೂ ಅಹಂ ಕಾರಣವಷ್ಟೇ ಅಲ್ಲದೆ ಬೇರೇನೂ ಅಲ್ಲ. ಒಂದೇ ಕುಟುಂಬದವರಾದರೂ ಕೂಡ ಪ್ರತ್ಯೇಕ ಸಂಸಾರಹೂಡಿದ ಮೇಲೆ ತಮ್ಮ ಪ್ರತಿಷ್ಠೆ ಮೆರೆಯಲು ಇತರರನ್ನು ತುಚ್ಚವಾಗಿ ಕಾಣುವುದು ಹಾಗೂ ಎಲ್ಲಾ ವಿಷಯದಲ್ಲೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. ಇಂತಹ ಒಂದು ಮನಸ್ಥಿತಿ ಅನೇಕ ಕುಟುಂಬಗಳನ್ನು ಒಡೆದು ಪರದೇಶಿ ಬದುಕುಬಾಳುವಂತೆ ಮಾಡುವುದು ಮಾತ್ರ ನಿಶ್ಚಿತ. ತಮ್ಮ ಮಕ್ಕಳನ್ನು ಕುಟುಂಬದ ಇತರ ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವುಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಹಸ್ತಕ್ಷೇಪ ಮಾಡಿ ದ್ವೇಷದ ಕಿಡಿ ಬಿತ್ತುವುದು, ಮುಂದೆ ಅವರಿಗೂ ಕುಟುಂಬದ ಸದಸ್ಯರ ಬಗ್ಗೆ ಅಸಮಾಧಾನವಾಗುವಂತೆ ಪ್ರಚೋದಿಸುವುದು ಸಾಮಾನ್ಯ ವಾಗಿಬಿಟ್ಟಿದೆ. ತಮಗೆ ಸಂಬಂಧವಿಲ್ಲದ ಅನೇಕ ವಿಷಯಗಳಲ್ಲಿ ಅನಾವಶ್ಯಕ ಮೂಗುತೂರಿಸಿ ಇಲ್ಲಸಲ್ಲದ ಪಿತೂರಿ ನಡೆಸುವವರ ಹಾಗೂ ಇನ್ನೊಬ್ಬರ ಭಾವನೆಗಳಿಗೆ ವಿಕೃತವಾಗಿ ಸ್ಪಂದಿಸಿ ಅಪಹಾಸ್ಯಮಾಡುವ ಪ್ರವೃತ್ತಿಯವರು ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಇಂತಹ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ನಮ್ಮವರೊಂದಿಗೇ ಅಪರಿಚಿತರಾಗುತ್ತಿರುವ ಸಂಶಯ ಮನಸ್ಸಿನಲ್ಲಿ ಮೂಡುವುದು ನಿಜವಲ್ಲವೇ ಸ್ನೇಹಿತರೆ.
ಹೆತ್ತವರು ಬದುಕಿರುವವರೆಗೂ ಕುಟುಂಬದಲ್ಲಿ ಒಂದು ಭದ್ರತೆ ಇರುತ್ತದೆ, ಯಾವುದೇ ವಿಚಾರವಾದರೂ ಸಮಯೋಚಿತವಾಗಿ ಯೋಚಿಸಿ ಬುದ್ದಿಹೇಳುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿಯೊಬ್ಬ ಮಕ್ಕಳನ್ನು ಆಗಾಗ ನೋಡಬೇಕೆಂಬ ಹಂಬಲದಿಂದ ಎಷ್ಟೇ ದೂರವಿದ್ದರೂ ತಮ್ಮಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಬ್ಬಹರಿದಿನಗಳೆಂದರೆ ಎಲ್ಲರೂ ಜೊತೆಯಾಗಿಯೇ ಆಚರಿಸಿಕೊಳ್ಳಬೇಕೆನ್ನುವ ಅಪೇಕ್ಷೆಯಂತೆ ಸಾಧ್ಯವಾದಷ್ಟು ಕುಟುಂಬದ ಐಕ್ಯತೆಯನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಇದನ್ನು ಎಲ್ಲರೂ ತಮ್ಮ ಕಾಲಾನಂತವೂ ನಡೆಸಿಕೊಂಡು ಹೋಗಬೇಕೆನ್ನುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಅದರೆ ಇಂದಿನ ಜೀವನ ಶೈಲಿ ಈ ತಲೆಮಾರಿನ ತೋರಿಕೆಯ ಪ್ರೀತಿ ವಿಶ್ವಾಸ ಇಂತಹ ಒಂದು ಬಾಂಧವ್ಯದ ಕೊಂಡಿಬೆಸೆಯುವಲ್ಲಿ ವಿಫಲವಾಗಿದೆ ಎನ್ನಬಹುದು. ಬಹಳಷ್ಟು ಕುಟುಂಬಗಳು ಹಂಚಿಹರಡಿ ಪ್ರತ್ಯೇಕ ಸಂಸಾರಗಳಾಗಿ ಅಷ್ಟಕ್ಕೇ ಸೀಮಿತಗೊಂಡಿವೆ ಅವರ ಆಚರಣೆ ಹಾಗೂ ಬಾಂಧವ್ಯ… ತವರಿನ ಸಂಪರ್ಕಕಳೆದುಕೊಂಡು ಮನಸ್ಸಿನಲ್ಲೇ ದುಃಖಿಸುತ್ತಿರುವ ಎಷ್ಟೋ ಜನರನ್ನು ನಾವು ನೋಡುತ್ತಿದ್ದೇವೆ… ಇವತ್ತಿಗೂ ಜನಮಾನಸದಲ್ಲಿ ಉಳಿದಿರುವುದು ಮಾತ್ರ ತಂದೆತಾಯಿಗಳು ಬದುಕಿರುವವರೆಗೆ ಅನುಭವಿಸಿದ ಸಂಭ್ರಮದ ದಿನಗಳು ಹಾಗೂ ಆದರಾಥಿತ್ಯದ ಪ್ರೀತಿ ವಿಶ್ವಾಸದಿಂದ ಒಡಹುಟ್ಟಿದವರೊಂದಿಗೆ ನಕ್ಕುನಲಿದ ಕ್ಷಣಗಳು. ಎಲ್ಲಾ ಸದಸ್ಯರನ್ನೂ ಸಮಾನವಾಗಿ ಕಾಣುವ ಮನಸ್ಸು ಇರಬೇಕು, ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸಂತೋಷವನ್ನು ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು.
ಧನ್ಯವಾದಗಳು.
GIPHY App Key not set. Please check settings