in

ಕನ್ನಡ ಭಾಷೆಯ ನಾನಾ ರೂಪಗಳು

ಕನ್ನಡ ಭಾಷೆಯ ನಾನಾ ರೂಪಗಳು
ಕನ್ನಡ ಭಾಷೆಯ ನಾನಾ ರೂಪಗಳು

ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. 

ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಹಾಗೂ ದಮನ್ ಹಾಗೂ ದಿಯುಗಳಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ. ಈ ನೆಲದ ಮೇಲೆ ಪ್ರಭಾವ ಬೀರಿದ ಪ್ರಾದೇಶಿಕ ವ್ಯತ್ಯಾಸಗಳಿಗೆ ಅನುಗುಣವಾಗಿ ಭಾಷೆಯು ವಿವಿಧ ರೂಪ ಹಾಗೂ ಶೈಲಿಯ ಉಪಭಾಷೆ ಅಥವಾ ಪ್ರಾಂತೇಯ ಭಾಷೆಗಳನ್ನು ಪಡೆದುಕೊಂಡಿದೆ.

ವಿವಿಧ ಪ್ರಾದೇಶಿಕ ಪ್ರಾಂತೀಯ ಭಾಷೆಗಳ ವ್ಯತ್ಯಾಸಗಳನ್ನು ಹೊಂದಿದ, ದ್ರಾವಿಡ ಗುಂಪಿನ ಭಾಷೆಗಳೆಂದು ಜನಪ್ರಿಯವಾಗಿರುವ ದಕ್ಷಿಣ ಭಾರತದ ಭಾಷೆಗಳ ಗುಂಪಿಗೆ ಕನ್ನಡವು ಸೇರಿದೆ. ಪ್ರಸ್ತುತದಲ್ಲಿ, ಕನಿಷ್ಠ ಮೂರು ಪ್ರಾದೇಶಿಕ ಉಪಭಾಷೆಗಳಾದ, ಮೈಸೂರು ಕನ್ನಡ, ಧಾರವಾಡ-ಕನ್ನಡ ಹಾಗೂ ಮಂಗಳೂರು-ಕನ್ನಡಗಳ ಜನಪ್ರಿಯವಾದ ಭಾಷಾ ಶೈಲಿಗಳನ್ನು, ಕ್ರಮವಾಗಿ ಮೂರು ಸಾಂಸ್ಕೃತಿಕ ಕೇಂದ್ರಗಳಾದ ಮೈಸೂರು, ಧಾರವಾಡ ಹಾಗೂ ಮಂಗಳೂರು ಪ್ರದೇಶಗಳಲ್ಲಿ ಮಾತನಾಡಲಾಗುತ್ತದೆ. ಈ ಮುಖ್ಯ ವಿಭಾಗಗಳೊಳಗೆ, ಇತರ ಹಲವಾರು ಪ್ರಾಂತೀಯ ಉಪ-ವಿಭಾಗಗಳಾದ ಹವ್ಯಕ, ಬಡಗ, ನಾಡವ, ಕೂಸ, ಮುಂತಾದವುಗಳಿದ್ದು, ಅವು ಇತರ ಭಾಷಾ ಸ್ವರೂಪಗಳೊಂದಿಗೆ ಬೆರೆತ ಸ್ಥಳೀಯ ಉಪವಿಭಾಗಗಳಾಗಿವೆ.

*ಮೈಸೂರು ಕನ್ನಡ

ಕನ್ನಡ ಭಾಷೆಯ ನಾನಾ ರೂಪಗಳು
ಮೈಸೂರು

ಮೈಸೂರು, ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ,ಕೋಲಾರ, ತುಮಕೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಮತ್ತು ಚಿಕ್ಕಮಗಳೂರು- ಈ ಜಿಲ್ಲೆಗಳಲ್ಲಿ ಆಡುವ ಕನ್ನಡಭಾಷೆಯನ್ನು ಮೈಸೂರು ಕನ್ನಡ ಎಂದು ಕರೆಯುವುದು ವಾಡಿಕೆ. ಮೈಸೂರು ಕನ್ನಡದ ವಿದ್ಯಾವಂತ ಹಾಗೂ ಅವಿದ್ಯಾವಂತರ ಭಾಷೆಗಳ ನಡುವೆ ವ್ಯಾಕರಣ ವಿಚಾರಗಳಲ್ಲಿ ಕೇವಲ ಸ್ವಲ್ಪ ಅಂತರ ಕಂಡುಬರುತ್ತದೆ. ಅವನು ಎಂಬುದನ್ನು ಅವ್ನು, ಅವ ಎಂತಲೂ ಕೆಲವು ರೂಪಗಳು ವ್ಯತ್ಯಾಸಗೊಂಡು ಬಳಕೆಯಲ್ಲಿರುವುದನ್ನು ಗಮನಿಸಬಹುದು. ಹಾಗೆಯೇ ಮಾಡುತ್ತೇನೆ, ಮಾಡ್ತೇನೆ, ಮಾಡ್ತಿನಿ, ನೋಡುತ್ತೇನೆ, ನೋಡ್ತೇನೆ, ನೋಡುವ, ಮಾಡೋಣ, ಮಾಡುವ ಎಂಬ ವಿಧ್ಯರ್ಥಕ ರೂಪಗಳೂ ವಿದ್ಯಾವಂತ ಹಾಗೂ ಅವಿದ್ಯಾವಂತರ ನಡುವೆ ವ್ಯತ್ಯಸ್ತಗೊಂಡು ಉಚ್ಚಾರಗೊಳ್ಳುವುದನ್ನು ಕಾಣಬಹುದು.

*ಕರಾವಳಿ ಕನ್ನಡ

ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ರೀತಿಯ ಕನ್ನಡ ಬಳಕೆಯಲ್ಲಿದೆ. ತುಳು, ಕೊಂಕಣಿ, ಮರಾಠಿ, ಮಲೆಯಾಳಂ ಮೊದಲಾದ ಭಾಷೆಗಳನ್ನು ಮನೆಮಾತಾಗಿ ಬಳಸುವ ಜನರು ಪರಸ್ಪರ ಸಾಧನೆಗಾಗಿ ಬಳಸುವ ಕನ್ನಡ ಒಂದು ರೀತಿಯದಾದರೆ ನಾಡವರು, ಹವ್ಯಕ, ಗೌಡ, ಕೋಟ, ಕುಂಬಾರ, ಬೈರ ಮೊದಲಾದ ಸಮಾಜಗಳಿಗೆ ಸೇರಿದ ಜನ ತಮ್ಮತಮ್ಮೊಳಗೆ ಬಳಸುವ ಕನ್ನಡ ಇನ್ನೊಂದು ರೀತಿಯದು. ಇವುಗಳಲ್ಲಿ ಮೊದಲಿನದನ್ನು ಸಾಂಪರ್ಕಿಕ ಕನ್ನಡವೆಂದು ಎರಡನೆಯದನ್ನು ತಾಯಿನುಡಿ ಕನ್ನಡವೆಂದೂ ಪ್ರತ್ಯೇಕಿಸಿ ಹೇಳಬಹುದು. ಹೊರಗಿನಿಂದ ಬಂದವರಿಗೆ ಈ ಜಿಲ್ಲೆಯಲ್ಲಿ ಮೊದಲಿಗೆ ಕೇಳಿಸುವುದು ಸಾಂಪರ್ಕಿಕ ಕನ್ನಡ. ಇದನ್ನು ಆಡುವವರು ಬೇರೆ ಬೇರೆ ಭಾಷೆಗಳನ್ನು ಮನೆಮಾತಾಗಿ ಬಳಸುವವರಾದ್ದರಿಂದ, ಈ ನುಡಿಯಲ್ಲಿ ತುಳು, ಕೊಂಕಣಿ ಮೊದಲಾದ ಭಾಷೆಗಳ ಪ್ರಭಾವ ಹೆಚ್ಚು ಕಾಣಿಸುತ್ತದೆ. ಅಲ್ಲದೆ, ಈ ಕನ್ನಡವನ್ನು ಬಹುಮಂದಿ ಶಾಲೆ, ಕಾಲೇಜು, ಪುಸ್ತಕ, ಪತ್ರಿಕೆ ಇವುಗಳ ಮೂಲಕ ಮತ್ತು ಸಭೆ, ನಾಟಕಗಳ ಮೂಲಕ ಪಡೆದಿರುವರಾದ್ದರಿಂದ ಇದು ಆಡುನುಡಿಗಿಂತಲೂ ಬರೆಹದ ಕನ್ನಡವನ್ನೇ ಹೆಚ್ಚು ಹೋಲುತ್ತದೆ. ಸಾಂಪರ್ಕಿಕ ಕನ್ನಡ ಯಾವ ರೀತಿಯಲ್ಲಿ ಬೆಳೆದುಬಂದಿದೆ. 

*ಸಿರ್ಸಿ ಕನ್ನಡ

ಸಿರ್ಸಿ ಕನ್ನಡ ವನ್ನು ಮಲೆನಾಡಿನ ಸಿರ್ಸಿ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಾದ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ದಾಂಡೇಲಿ, ಸೊರಬ, ಹಳಿಯಾಳ ತಾಲೂಕಿನಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ಪಶ್ಚಿಮ ಘಟ್ಟ ಶ್ರೇಣಿಗಳ ತಪ್ಪಲಿನಲ್ಲಿ ಬರುವ ಸಿರ್ಸಿ ನಗರವು ಕನ್ನಡದ ಮೊದಲ ರಾಜವಂಶ ಕದಂಬರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಸಿರ್ಸಿ ಕನ್ನಡದಲ್ಲಿ ಹಳೆಗನ್ನಡ ಮತ್ತು ಮಲೆನಾಡಿನ ಕನ್ನಡಗಳ ಶಬ್ದವು ಹೆಚ್ಚಾಗಿ ಬಳಕೆಯಲ್ಲಿವೆ.

*ಧಾರವಾಡ ಕನ್ನಡ

ಇದು ಕನ್ನಡದ ಪ್ರಾದೇಶಿಕ ಉಪಭಾಷೆಗಳಲ್ಲಿ ಪ್ರಮುಖ ಉಪಭಾಷಾಪ್ರಭೇದ. ಇದರಲ್ಲಿ ಧಾರವಾಡ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಭಾಷಾರೂಪಗಳು ಸಮಾವೇಶಗೊಳ್ಳುತ್ತವೆ. ಜಿಲ್ಲೆ ಜಿಲ್ಲೆಗೆ, ತಾಲ್ಲೂಕು ತಾಲ್ಲೂಕಿಗೆ, ಮತ್ತೆ ಒಳಭೇದಗಳು ಕಂಡುಬಂದರೂ ಈ ಪ್ರದೇಶದ ವಿಶಿಷ್ಟ ರೂಪಗಳೆನ್ನಲು ಬರುವಂಥ ಪ್ರಯೋಗಗಳಿವೆ. ಈ ಪ್ರಯೋಗಗಳನ್ನು ಇತರ ಉಪಭಾಷಾ ಪ್ರಭೇದಗಳಲ್ಲಿ ಕಂಡುಬರುವ ರೂಪಗಳೊಡನೆ ಹೋಲಿಸಿ ನೋಡಿದಾಗ ಧಾರವಾಡ ಕನ್ನಡದ ವೈಶಿಷ್ಟ್ಯಗಳು ವಿಶಿಷ್ಟವಾಗಿ ಕಂಡುಬಂದು, ಅದಕ್ಕೆ ಒಂದು ಬಿನ್ಹಸ್ಥಾನ ಒದಗಿಸಿಕೊಡುತ್ತವೆ.

*ಗುಲ್ಬರ್ಗಾ ಕನ್ನಡ

ಕನ್ನಡ ಭಾಷೆಯ ನಾನಾ ರೂಪಗಳು
ಗುಲ್ಬರ್ಗಾ

ಗುಲ್ಬರ್ಗಾ, ಬಿದರೆ, ರಾಯಚೂರು ಜಿಲ್ಲೆಗಳ ಕನ್ನಡವನ್ನು ಹೈದರಾಬಾದ್ ಕರ್ನಾಟಕ ಕನ್ನಡ ಎಂದೂ ಕರೆಯುವುದುಂಟು. ಈ ಉಪಭಾಷೆಯ ಮೇಲೆ ಮರಾಠಿ, ಉರ್ದು, ಸಂಸ್ಕೃತಗಳ ಪ್ರಭಾವ ತೀವ್ರತರವಾಗಿ ಆಗಿದೆ. ಮೊದಲಿಗೆ ಈ ಉಪಭಾಷೆಯನ್ನಾಡುವ ಪ್ರದೇಶ ಹೈದರಾಬಾದ್ ನಿಜಾಮರ ಆಳಿಕೆಗೆ ಒಳಗಾಗಿತ್ತಾದ ಕಾರಣ ಉರ್ದು ಈ ಭಾಷೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಈ ಉಪಭಾಷೆಯಲ್ಲೂ ಉಳಿದ ಕನ್ನಡದ ಉಪ ಭಾಷೆಗಳಲ್ಲಿ ಕಂಡುಬರುವಂತೆ ಆ ಧ್ವನಿಮಾ ಆ್ಯ ಮತ್ತು ಆ ಎಂಬ ಎರಡು ಧ್ವನಿಮಾ ಆಗಿ ರೂಪ ತಾಳಿದೆ. ಚ ಮತ್ತು ಜ ಎಂಬ ಈಷತ್ ಸ್ಪರ್ಶ ವ್ಯಂಜನ ಧ್ವನಿಮಾಗಳು ಈ ಕನ್ನಡದಲ್ಲಿ ಕಂಡುಬರುತ್ತವೆ. ಇವುಗಳ ಜೊತೆಗೆ ಚ ಜ ಎಂಬ ತಾಲವ್ಯ ಸ್ಪರ್ಶವ್ಯಂಜನ ಧ್ವನಿಮಾಗಳೂ ಬಳಕೆಯಲ್ಲಿವೆ. ಎಷ್ಟೋ ವೇಳೆ ಉರ್ದುವಿನ ಪ್ರಭಾವದಿಂದ ಕನ್ನಡದ ಜ ವ್ಯಂಜನ ಧ್ವನಿಮಾಕ್ಕೆ ಬದಲು ಜ ಬಳಕೆಯಾಗುತ್ತದೆ.

*ಸೋಲಿಗ ಕನ್ನಡ

ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ, ಮೈಸೂರು ಜಿಲ್ಲೆಯ, ಹೆಗ್ಗಡದೇವನಕೋಟೆ, ಕಾಕನಕೋಟೆ ಹಾಗೂ ಬೆಂಗಳೂರು, ಮಂಡ್ಯ, ತುಮಕೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಾಸವಾಗಿರುವ ಸೋಲಿಗ ಎಂಬ ಆದಿವಾಸಿ ಜನಾಂಗದವರ ಆಡು ಭಾಷೆ. ಸೋಲಿಗ ಭಾಷೆಯನ್ನು ಸಾಮಾನ್ಯವಾಗಿ ಸೋಲಿಗ ಕನ್ನಡ ಎಂದು ಕರೆಯುವುದು ರೂಡಿ. ಮೈಸೂರು ಜಿಲ್ಲೆಯ ಕೊಳ್ಳೇಗಾಲ, ಯಳಂದೂರು ಮತ್ತು ಚಾಮರಾಜನಗರದ ಸುತ್ತಮುತ್ತಲ ಪ್ರದೇಶದ ಕನ್ನಡ ಭಾಷೆಯಲ್ಲಿ. ಸೋಲಿಗಕನ್ನಡದಲ್ಲಿ ಕಂಡುಬರುವ ಕೆಲವು ವೈಶಿಷ್ಟಗಳನ್ನು ಕಾಣಬಹುದು.  ಮಗು, ಮಕ್ಕಳು ಎಂಬ ಪದ ಈ ಸುತ್ತಮುತ್ತಲ ಪ್ರದೇಶಗಳಲ್ಲಿಯ ಕನ್ನಡದಲ್ಲಿ ಮಕ್ಕ, ಮಕ್ಕಗ ಎಂದು ಬಳಕೆಯಲ್ಲಿದೆ. 

*ಬಡಗ ಭಾಷೆ

ಈ ಭಾಷೆಯನ್ನು ಇತ್ತೀಚೆಗೆ ಕೆಲವು ವಿದ್ವಾಂಸರು ಒಂದು ಸ್ವತಂತ್ರ ದ್ರಾವಿಡ ಭಾಷೆ ಎಂದು ಪರಿಗಣಿಸಿದ್ದಾರೆ. ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸಾಲಾಗಿ ಹಬ್ಬಿರುವ ಮಧುಮಲೈ ಮತ್ತು ನೀಲಗಿರಿಬೆಟ್ಟಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಾಗಿರುವ ಸು.ಒಂದು ಲಕ್ಷಕ್ಕೂ ಹೆಚ್ಚು ಬಡಗರು ಈ ಭಾಷೆಯನ್ನಾಡುವರು. ಬಡಗ ಭಾಷೆಯಲ್ಲಿ ಹತ್ತು ಸ್ವರಧ್ವನಿಮಾಗಳು, 19 ವ್ಯಂಜನ ಧ್ವನಿಮಾಗಳು ಪ್ರಧಾನವಾಗಿ ಕಂಡುಬರುತ್ತವೆ. ಕನ್ನಡದಲ್ಲಿ ಪ ಕಾರ ಹ ಕಾರವಾಗಿ ಪರಿವರ್ತನೆಗೊಂಡಿರುವಂತೆ ಬಡಗದಲ್ಲಿ ಈ ಪರಿವರ್ತನೆ ಕಂಡುಬರುವುದಿಲ್ಲ. ಅನೇಕ ವ್ಯಾಕರಣಾಂಶಗಳಲ್ಲಿ ಬಡಗಭಾಷೆ ಕನ್ನಡ ಭಾಷೆಯನ್ನೇ ಹೆಚ್ಚು ಹೋಲುತ್ತದೆ. ಹಳಗನ್ನಡದ ಎಷ್ಟೋ ಧ್ವನಿಗಳೂ ಧ್ವನಿಮಾಗಳು, ಪದಗಳು ಮತ್ತು ವ್ಯಾಕರಣ ವೈಶಿಷ್ಟ್ಯಗಳು ಈ ಭಾಷೆಯಲ್ಲಿ ಕಂಡುಬರುತ್ತವೆ. ಬಡಗ ಭಾಷೆಯ ಮೇಲೆ ತಮಿಳು ಮತ್ತು ಮಲೆಯಾಳಂ ಭಾಷೆಗಳ ಪ್ರಭಾವ ತೀವ್ರತರವಾಗಿ ಕಂಡುಬಂದರೂ ಇದನ್ನು ತಮಿಳು ಭಾಷೆಯ ಅಥವಾ ಮಲೆಯಾಳಂ ಭಾಷೆಯ ಉಪಭಾಷೆ ಎಂದು ಹೇಳಲು ಬರುವುದಿಲ್ಲ.

*ಕುರುಬ ಕನ್ನಡ

ಕೇರಳದ ವೈನಾಡು, ತಮಿಳು ನಾಡಿನ ನೀಲಗಿರಿ, ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಬೆಟ್ಟಗುಡ್ಡಗಳಲ್ಲಿ ವಾಸಿಸುವ ಕುರುಬ ಎಂಬ ಆದಿವಾಸಿ ಜನಾಂಗದವರು ಈ ಭಾಷೆಯನ್ನಾಡುತ್ತಾರೆ. ಕುರುಬರಲ್ಲಿ ಪ್ರಮುಖವಾಗಿ ಊರುಕುರುಬ, ಕಾಡುಕುರುಬ ಎಂಬ ಎರಡು ಪಂಗಡಗಳಿವೆ. ಈ ಪಂಗಡಗಳಲ್ಲಿಯೂ ಹಲವಾರು ಒಳಪಂಗಡಗಳಿವೆ. ಇವರು ಆಡುವ ಭಾಷೆಯನ್ನು ಕುರುಬಕನ್ನಡ ಎಂದು ಕರೆಯುತ್ತಾರೆ. ಕನ್ನಡ ಭಾಷೆಯಲ್ಲಿ ಕಂಡುಬರುವ ಕೆಲವು ಸ್ವರ ಮತ್ತು ವ್ಯಂಜನ ಧ್ವನಿಮಾಗಳು ಈ ಭಾಷೆಯಲ್ಲೂ ಕಂಡುಬರುತ್ತವೆ. ಕಾಡುಕುರುಬರ ಭಾಷೆಯಲ್ಲಿ ಹಳಗನ್ನಡದ ಭಾಷಾಂಶಗಳು ಹೆಚ್ಚು. ಈ ಭಾಷೆಯ ಮೇಲೆ ತಮಿಳು ಮತ್ತು ಮಲೆಯಾಳಂ ಭಾಷೆಗಳು ಪ್ರಭಾವ ಬೀರಿದ್ದು ಕೆಲವರು ಭಾಷಾತಜ್ಞರು ಕುರುಬ ಭಾಷೆಯನ್ನು ಕನ್ನಡದ ಉಪಭಾಷೆ ಎಂದೂ ಮತ್ತೆ ಕೆಲವರು ತಮಿಳಿನ ಉಪಭಾಷೆ ಎಂದೂ ಅನುಮಾನಿಸಿದ್ದಾರೆ.

ಭಾಷೆ ಯಾವುದೇ ರೀತಿ ಮಾತಾಡಿದರೂ ಕೂಡ ಪರಸ್ಪರ ವಿನಿಮಯ ಮಾಡಿಕೊಳ್ಳುವ ವಿಷಯ ಬದಲಾಗುವುದಿಲ್ಲ. ಒಂದು ವಿಷಯವನ್ನು ಒಬ್ಬರಿಗೆ ತಿಳಿಸಿಕೊಡಬೇಕಾದರೆ ಇಂತಹ ಭಾಷೆ ಬೇಕು ಅಂತ ಇಲ್ಲ ಮಾತು ಬರೆದವರು ಕೂಡ ಮೂಕ ಮಾತಿನ ಮೂಲಕ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳುತ್ತಾರೆ. ಮುಖ್ಯವಾಗಿ ನಮ್ಮಲ್ಲಿ ಇರಬೇಕಾದದ್ದು ಇಷ್ಟೇ, ಯಾವುದೇ ಭಾಷೆ ಆದರೂ ಸರಿ ಒಬ್ಬ ವ್ಯಕ್ತಿಗೆ ಅಥವಾ ಅವನ ಸಂಸ್ಕೃತಿಗೆ ಅವನ ಭಾಷೆಗೆ ಬೆಲೆ ಕೊಡುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗೋಕುಲಭಾಯ್ ಭಟ್ ಜನ್ಮದಿನ

ಫೆಬ್ರವರಿ 19 ರಂದು, ಗೋಕುಲಭಾಯ್ ಭಟ್ ಜನ್ಮದಿನ, ಭಾರತದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು

ಆದಾಯ ತೆರಿಗೆ ಮರು ಪಾವತಿ ಮಾಡಿಕೊಳ್ಳಲು ಏನು ಮಾಡಬೇಕು?

ಆದಾಯ ತೆರಿಗೆ ಮರು ಪಾವತಿ ಮಾಡಿಕೊಳ್ಳಲು ಏನು ಮಾಡಬೇಕು?