in

ತುಳು ನಾಡಿನ ಮಲಯಾಳಿ ಮಾತಾಡುವ ದೇವಿ, ದೇವಿ ಭಗವತಿ

ದೇವಿ ಭಗವತಿ
ದೇವಿ ಭಗವತಿ

ಭಗವತಿ ಇದು ಸಂಸ್ಕೃತ ಮೂಲದ ಒಂದು ಪದವಾಗಿದೆ . ಈ ಪದವನ್ನು ಭಾರತದಲ್ಲಿ ಸಭ್ಯ ರೂಪವಾಗಿ ಪರಿಹರಿಸಲು ಅಥವಾ ಹಿಂದೂ ಧರ್ಮದಲ್ಲಿ ಸ್ತ್ರೀ ದೇವತೆಗಳಿಗೆ ಗೌರವಯುತ ಶೀರ್ಷಿಕೆಯಾಗಿ ಬಳಸಲಾಗುತ್ತದೆ. ಭಗವತಿಯ ಪುರುಷ ಸಮಾನ ಭಗವಾನ್. ದೇವಿ ಅಥವಾ ಈಶ್ವರಿ ಬದಲಿಗೆ “ಭಗವತಿ” ಎಂಬ ಪದವನ್ನು ಬಳಸುವುದು.

“ತುಳು ನಾಡಿನ ಮಲಯಾಳಿ ಮಾತಾಡುವ ದೇವಿ” ಭಗವತಿ ದೇವಿ ದಕ್ಷಿಣ ಕನ್ನಡದ ಒಂದು ಭಾಗದಲ್ಲಿ ಬಂದು ನೆಲೆಯಾಗಲು ಒಂದು ದಂತ ಕಥೆ ಇದೆ.

ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯು ದೇವತೆಗಳ ನಾಡು ಎಂದು ಕರೆಯಲ್ಪಡುತ್ತದೆ. ಇಲ್ಲಿ ಹಲವಾರು ಕಾರಣೀಕ ಶಕ್ತಿಗಳ ಹಾಗೂ ದೈವ-ದೇವತೆಗಳ ನೆಲೆಬೀಡು. ತುಳುವರು ದೇವರನ್ನು ಆರಾಧನೆ ಮಾಡುವುದಕ್ಕಿಂತಲೂ ಹೆಚ್ಚು ದೈವಗಳನ್ನು ತಮ್ಮವರಂತೆ ಆರಾಧನೆ ಮಾಡುತ್ತಾ ನೇಮ, ಕೋಲ, ಬೋಗ ಹಾಗೂ ನಡಾವಳಿಗಳನ್ನು ನಡೆಸಿಕೊಂಡು ಬರುತ್ತಾರೆ. ತುಳುವನಾಡಿನಲ್ಲಿ ಪ್ರತಿ ಮನೆ-ಮನೆಯಲ್ಲೂ ದೈವಸ್ಥಾನಗಳನ್ನು ತಮ್ಮ ತರವಾಡು ಮನೆ ಅಥವಾ ಮೂಲ ಮನೆಯಲ್ಲಿ ಸ್ಥಾಪಿಸಿ ಅಲ್ಲಿ ನೇಮಾದಿಗಳನ್ನು ಹಾಗೂ ಬಲಿ – ಉತ್ಸವಾಧಿಗಳನ್ನು ನಡೆಸಿಕೊಂಡು ಬರುವ ಪದ್ದತಿ ಇದೆ.

ತುಳು ನಾಡಿನ ಮಲಯಾಳಿ ಮಾತಾಡುವ ದೇವಿ, ದೇವಿ ಭಗವತಿ
ದೇವಿ ಭಗವತಿ

ಹೀಗೆ ಜಾತಿಭೇಧವಿಲ್ಲದೆ ಭಕ್ತಿಯಿಂದ ಏನನ್ನಾದರೂ ಸಾಧಿಸಬಹುದೆಂಬುದನ್ನು ಹಿಂದಿನ ಹಲವಾರು ಕಥನಗಳು ಹಾಗೂ ಪುರಾಣಗಳು ಸಾರುತ್ತದೆ. ಅಂಥಹ ಪುಣ್ಯ ಕ್ಷೇತ್ರಗಳ ಸಾಲಿನಲ್ಲಿ ಮಂಗಳೂರು ತಾಲೂಕಿನ ಹಳೆಯಂಗಡಿಯಿಂದ ಮುಕ್ಕದ ಮೂಲಕ ಸಾಗಿದರೆ ಕಡಲ ತಡಿಯ ನಡುವೆ ಕಂಗೊಳಿಸುವ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನವು ಒಂದಾಗಿದೆ.

ಶ್ರೀ ಕ್ಷೇತ್ರವು ಇಂದು ಅತ್ಯಂತ ಕಾರಣಿಕ ಮತ್ತು ಮಹಾ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಮಾತೃತೆ ಶಕ್ತಿಯಾದ ಭಗವತಿಯು ಇಲ್ಲಿ ವಿರಾಜಮಾನವಾಗಿ ಭಕ್ತರ ಕಾಯ್ವ ಮಹಾತಾಯಿಯಾಗಿದ್ದಾಳೆ. ಮಾತೆಯು ಬೇಡಿ ಬರುವ ಭಕ್ತರ ಪಾಲಿನ ಅಭಿಷ್ಠಪ್ರದಾಯಿನಿಯಾಗಿದ್ದಾಳೆ

ಈ ಸ್ಥಳದ ಪುರಾಣ ಹೀಗೆ ಇದೆ :
ಹಿಂದೆ ಶೋನಿತಪುರದಲ್ಲಿ ದಾರಿಗಾಸುರನೆಂಬ ಮದಪ್ರಮತ್ತನಾದ ರಕ್ಕಸ ಭೂಮಂಡಲದಲ್ಲಿ ಮರೆಯುತ್ತಿರಲು ದೇವಾನುದೇವತೆಗಳು ಹಾಗೂ ಭೂಮಿಯ ಜನರು ಮಹಾನ್ ದೈತ್ಯನಿಂದ ಕಷ್ಟ-ಕಾರ್ಪಣ್ಯಗಳಿಗೆ ತುತ್ತಾದರು. ದಾರಿಗಾಸುರನು ಬ್ರಹ್ಮದೇವನಿಂದ ವರವನ್ನು ಪಡೆದು ಯೋನಿಜರಿಂದ ಸಾವು ಬರಬಾರದೆಂದು ಹಾಗೂ ಪುರುಷ ಜೀವಿಯಿಂದ ಸಾವು ಬರಬಾರದೆಂದು ಅಜೇಯತೆಯನ್ನು ಪಡೆದಿದ್ದನು. ಅಂತೆಯೇ ಮಹಾವಿಷ್ಣುವಿನೊಂದಿಗೆ ಹೋರಾಡಿ ಸುದರ್ಶನ ಚಕ್ರವನ್ನು ತನ್ನ ವಶ ಮಾಡಿಕೊಂಡಿದ್ದನು. ಹೀಗೆ ಭೂಮಂಡದಲ್ಲಿ ಆಗುತ್ತಿರುವ ಅನಾಚಾರಗಳನ್ನು ಕಂಡು ದೇವತೆಗಳಲ್ಲಿ ಭಕ್ತಾದಿಗಳು ದೇವರಲ್ಲಿ ಮೊರೆಯಿಟ್ಟರು. ಆಗ ಲೋಕದ ಒಡೆಯನಾದ ಪರಶಿವನು ಆದರೆ ಕೆಲವೊಂದು ಪುರಾಣಾನುಸಾರ ಮಹಾವಿಷ್ಣು – ಪರಶಿವ ಮತ್ತು ಮಹಾವಿಷ್ಣುವಿನಲ್ಲಿ ಭೇದಗಳಿಲ್ಲ , ಚಿಂತಾಕ್ರಾಂತಾರಾಗಿರಲು ಶಿವನ ಕಂಗಳ ಹನಿಯಿಂದ ಸಪ್ತ ದುರ್ಗೆಯರು ಉದಿಸಿದರು. ಅದರಲ್ಲಿಭಗವತಿಯು ಮೊದಲನೇಯವಳು. ಹೀಗೆ ಶಿವನ ಹಣೆಗಣ್ಣಿನಿಂದ ಜನಿಸಿ ಬಂದ ಆದಿಪರಾಶಕ್ತಿಯಾದ ಭಗವತಿ ಸಮೇತ ಸಪ್ತ ದುರ್ಗೆಯರು ದುರುಳ ದಾನವನಾದ ದಾರಿಗಾಸುರನ ಮದವನ್ನು ಅಡಗಿಸಿ ಅವನ ಸಂಹಾರಕ್ಕೆ ಹೊರಟರು. ಹೀಗೆ ಮುಂದೆ ಸಾಗಿ ದಾರಿಗಾಸುರನ ಮನೆಗೆ ಸಾಗಿದ ಭಗವತಿಯು ಒಂದು ವೃದ್ದ ಮಹಿಳೆಯ ವೇಶವನ್ನು ಧಾರಣೆ ಮಾಡಿ ಅವನ ಮನೆಯಲ್ಲಿರುವ ಶ್ರೀ ಕೃಷ್ಣನ ಸುದರ್ಶನ ಚಕ್ರವನ್ನು ಉಪಾಯದಿಂದ ಅಸುರನ ಹೆಂಡತಿಯಿಂದ ಪಡೆಯುತ್ತಾಳೆ. ಮುಂದೆ ಸಾಗಿದ ಭಗವತಿಯು ಭದ್ರಕಾಳಿಕೆಯ ಸ್ವರೂಪವನ್ನು ತಾಳಿ ದಾರಿಗಾಸುರನ ವಧೆಯನ್ನು ಮಾಡುತ್ತಾಳೆ.

ತುಳು ನಾಡಿನ ಮಲಯಾಳಿ ಮಾತಾಡುವ ದೇವಿ, ದೇವಿ ಭಗವತಿ
ದೇವಿ ಭಗವತಿ

ದುರುಳ ದಾನವನ ದಮನ ಮಾಡಿ ಮುಂದೆ ಭೋಲೊಕದಲ್ಲಿ ತನ್ನ ಸೋದರಿಯರೊಡಗೂಡಿ ಸತ್ಯಶೋಧನೆಯಲ್ಲಿ ತೊಡಗಿ ತಾವು ಮುಂದೆ ನೆಲೆಯಾಗಬೇಕಾದ ಸ್ಥಾನವನ್ನು ಅರಸುತ್ತಾ ಮುಂದೆ ಸಾಗುತ್ತಾರೆ. ಹೀಗೆ ಮುಂದೆ ಸಾಗುವ ವೇಳೆಯಲ್ಲಿ ಇವರಿಗೆ ಹೋಗುವ ದಾರಿಯಲ್ಲಿ ಆದಿ ಭೇತಾಳನೆಂಬವನು ಅಡ್ಡಲಾಗಿ ಮಲಗಿರುತ್ತಾನೆ. ಮಾತೆಯು ಅವನನ್ನು ದಾರಿಬಿಡುವಂತೆ ಕೇಳಿದಾಗ ಅವನು ವಿರೋಧವನ್ನು ವ್ಯಕ್ತ ಪಡಿಸುತ್ತಾನೆ. ಆಗ ಮಾತೆಯು ತನ್ನ ದಿವ್ಯಶಕ್ತಿಯಿಂದ ಅವನಲ್ಲಿ ಜ್ಞಾನವನ್ನು ಮೂಡಿಸುತ್ತಾಳೆ. ಆಗ ಆದಿವೇತಾಳನಾದ ಗುಳಿಗನು ಮಾತೆಯಲ್ಲಿ ಕ್ಷಮೆಯಾಚಿಸಿ, ಅಮ್ಮ ನಿಮ್ಮ ಜೊತೆಯಲ್ಲಿ ನಾನೆಂದು ಇರುತ್ತೇನೆ, ಎಂದಿಗೂ ನಿಮ್ಮ ಸೇವೆಯನ್ನು ಮಾಡುವ ಭಾಗ್ಯಾಧಿಗಳನ್ನು ನನಗೆ ಕರುಣಿಸಿರಿ ಎಂದು ಬೇಡಿಕೊಂಡಾಗ ಭಗವತಿಯು ಆದಿವೇತಾಳನನ್ನು ನೀನು ನನ್ನ ಸೇವಕನಾಗಿ ನಮಗೆ ಸಹಾಯವನ್ನು ಮಾಡಿಕೊಂಡು ಇರು ಎಂಬುದಾಗಿ ಹೇಳುತ್ತಾಳೆ.
ಮುಂದೆ ಸಾಗುತ್ತಾ ಸಾಗುತ್ತಾ ಘಟ್ಟದಿಂದ ಪಂಜನ್ನು ಹಿಡಿದು ಉರುಳುರುಳಿ ಬಂದ ‘ಪಂಜುರ್ಳಿ’ ದೈವವು ಮಾತೆಯ ಶಕ್ತಿಯನ್ನು ತಿಳಿಯದೆ ಭಗವತಿಯೊಂದಿಗೆ ಸಮರಕ್ಕೆ ನಿಲ್ಲುತ್ತದೆ. ಆದರೆ ಭಗವತಿ ತನ್ನ ಶಕ್ತಿಯಿಂದ ಆ ದೈವವನ್ನು ಮೆಟ್ಟಿನಿಲ್ಲುತ್ತಾಳೆ. ಹೀಗೆ ಆ ದೈವವು ಕೂಡಾ ಭಗವತಿಯೊಡಗೂಡಿ ಮುಂದೆ ಸಾಗುವಾಗ ಸಮುದ್ರವನ್ನು ದಾಟುವ ಸಂದರ್ಭದಲ್ಲಿ ದೋಣಿಯ ಅವಶ್ಯಕತೆಯು ಇರುತ್ತದೆ. ಆಗ ಒಂದು ಗಂಧದ ಮರವನ್ನು ದೋಣಿಯನ್ನಾಗಿಸಲು ಮುಂದಾಗುತ್ತಾರೆ. ಆಗ ಅದನ್ನು ಮಾಡಲು ಹಾಗೂ ಭೂಲೋಕದಲ್ಲಿ ತಮ್ಮ ಶಕ್ತಿಯನ್ನು ತೋರ್ಪಡಿಸುವ ಉದ್ದೇಶದಿಂದ ಸಪ್ತ ದುರ್ಗೆಯರು ಸಾಮಾನ್ಯರಂತೆ ಬಂದು ಒಬ್ಬ ಧನಿಕನಲ್ಲಿ ಹಣವನ್ನು ಕೇಳುತ್ತಾರೆ. ಅದಕ್ಕೆ ಧನಿಕನು ನೀವು ಹಣದ ಬದಲು ಬೇರೆ ಯಾವುದಾದರೂ ವಸ್ತುವನ್ನು ಇಡಬೇಕು ಎಂದು ಅಂಹಂಕಾರದಿಂದ ಹೇಳುತ್ತಾನೆ. ಆಗ ಭಗವತಿಯು ತನ್ನ ಕಾಲಿನ ಗೆಜ್ಜೆಯನ್ನು ತೆಗೆದುಕೊಟ್ಟು ಹಣವನ್ನು ಪಡೆದು ಹೋಗುತ್ತಾಳೆ. ಆದರೆ ಹೋಗುವ ಮುನ್ನ ಧನಿಕನಲ್ಲಿ ನಾನು ಬರುವ ಮೊದಲು ಇದನ್ನು ನೀವು ಬಳಸಕೂಡದು ಎಂದು ಮುಂದೆ ನಡೆಯುತ್ತಾರೆ. ಆದರೆ ಧನಿಕನು ಭಗವತಿಯ ಶಕ್ತಿಯನ್ನು ತಿಳಿಯದೆ ಅಹಂಕಾರದಿಂದ ಮಾತೆಯ ಕಾಲುಗೆಜ್ಜೆಯನ್ನು ತನ್ನ ಮಗನಿಗೆ ಕಾಲಿಗೆ ಕಟ್ಟಿ ಮಗನಿಂದ ನೃತ್ಯ ಮಾಡಿಸುತ್ತಾನೆ. ಇದರಿಂದ ಕುಪಿಳಾದ ಭಗವತಿಯು ಧನಿಕನ ಮಗನನ್ನು ಮಾಯವಾಗಿಸುತ್ತಾಳೆ. ಆ ಕ್ಷಣದಲ್ಲಿ ಧಣಿಕ ಬೆರಗಾಗಿ ಮಾತೆಯಲ್ಲಿ ಅಳುತ್ತಾ ಅಮ್ಮಾ ನನ್ನ ಮಗನನ್ನು ನನಗೆ ಮರಳಿಸು, ನಾನು ಮಾಡಿದ ತಪ್ಪಿನ ಅರಿವು ನನಗೆ ಆಗಿದೆ ಎಂದಾಗ ಮಾತೆಯು ಮುಂದೆ ನಿನಗೆ ಒಂದಕ್ಕೆ ಹತ್ತು ಮಕ್ಕಳ ಭಾಗ್ಯವನ್ನು ಕರುಣಿಸುತ್ತೇನೆ ಎಂದು ಹೇಳಿ ಮಾಯವಾಗುತ್ತಾಳೆ.

ಗಂಧದ ದೋಣಿಯನ್ನು ಮಾಡಿಕೊಂಡು ಭಗವತಿ ತನ್ನ ಸೋದರಿಯರೊಂದಿಗೆ ಆಪ್ರ ಸೇವಕ ಗುಳಿಕನ ಸಂಗಡವಾಗಿ ಸಾಗುವಾಗ ಸಮುದ್ರದಲ್ಲಿ ಪಂಜುರ್ಳಿಯನ್ನು ದೋಣಿ ನಡೆಸಲು ತಿಳಿಸುತ್ತಾಳೆ. ಆಗ ಪಂಜುರ್ಳಿಯು ಅಲ್ಲಿ ಮೋಸವೆಸಗುತ್ತಾನೆ. ಆಗ ಭಗವತಿಯು ಉಗ್ರವಾಗಿ ಪಂಜುರ್ಳಿ ದೈವವನ್ನು ತನ್ನ ಕಾಲಿನಿಂದ ಘಟ್ಟಕ್ಕೆ ಎಸೆಯುತ್ತಾಳೆ. ಆ ದೈವವು ತನ್ನ ತಪ್ಪನ್ನು ತಿಳಿದು ತಾಯಿಯಲ್ಲಿ ಕ್ಷಮೇಯಾಚಿಸಿ ಅಮ್ಮನಲ್ಲಿ ಶರಣಾಗುತ್ತದೆ.

ಹೀಗೆ ಮುಂದೆ ಸಾಗುತ್ತಾ ಒಂದು ಸಮುದ್ರ ತೀರದಲ್ಲಿ ಬಂದು ಇಳಿಯುತ್ತಾರೆ. ಅದೆ ಇಂದಿನ ಸಸಿಹಿತ್ಲು ಕ್ಷೇತ್ರ. ಅಲ್ಲಿಗೆ ಬಂದಾಗ ಭಗವತಿಗೆ ಆಯಾಸವಾಗುತ್ತದೆ. ಅದಕ್ಕೆ ಭಗವತಿಯು ಹಾಗೂ ತನ್ನ ಪರಿವಾರದೊಂದಿಗೆ ಅಲ್ಲಿನ ತೆಂಗಿನ ತೋಟದ ಬಳಿ ಇರುವ ಆಲದ ಮರದ ಮೇಲೆ ವಿಶ್ರಾಂತಿಯನ್ನು ಪಡೆಯುತ್ತಾರೆ. ಆ ವೇಳೆಯಲ್ಲಿ ಆ ತೋಟದ ಒಡೆಯನಾದ ಶೇಂದಿ ತೆಗೆಯುವ ಕೊಂದಕಣ್ಣಾಯನೆಂಬ ಮಲಯಾಳಿ ಬಿಲ್ಲವನು ಅಲ್ಲಿ ಕಾಣಿಸುತ್ತಾನೆ. ಆತನಿಗೆ ಭಗವತಿಯ ಪರಿವಾರವು ಸಾಮಾನ್ಯರಂತೆ ಕಾಣಿಸುತ್ತದೆ. ಹಾಗೇ ಸಾಮಾನ್ಯವಾಗಿ ಅವರನ್ನು ಮಾತನಾಡಿಸಿದ ತೀಯ(ಬೆಲ್ಚಡ) ಅವರಲ್ಲಿ ತನ್ನ ತೋಟದಲ್ಲಿ ಏನು ಮಾಡುವಿರೆಂದು ಕೇಳುತ್ತಾನೆ. ಆದರೂ ಕೂಡಾ ಭಗವತಿಯ ಪರಿವಾರದಲ್ಲಿ ಏನೋ ಒಂದು ಭವ್ಯವಾದ ತೇಜಸ್ಸು ಕಾಣಿಸುತ್ತದೆ. ಹೀಗೆ ಭಗವತಿಯ ಪರಿವಾರ ಕುಡಿಯಲು ಕೊಂದಕಣ್ಣನಲ್ಲಿ ಸಿಯಾಳವನ್ನು ಕೇಳಿದಾಗ ಅವನು ಮೊದಲಿಗೆ ಒಪ್ಪುವುದಿಲ್ಲ, ಆಗ ಗುಳಿಗನು ನೀನು ಒಂದು ಸೀಯಾಳ ಕೊಟ್ಟರೆ ನಾನು ಅದಕ್ಕೆ 10 ಸಿಯಾಳವನ್ನು ಮರಳಿ ಕೊಡುತ್ತೇನೆಂದು ಹೇಳುತ್ತಾನೆ. ಅದಕ್ಕೆ ನಿರಾಕರಿಸಿ ವಾದದಲ್ಲಿ ತೊಡಗಿದಾಗ ಗುಳಿಗನು ತನ್ನ ದೃಷ್ಠಿಯಿಂದಲೆ ಸಿಯಾಳವನ್ನು ಮರದಿಂದ ಉದುರಿಸುತ್ತಾನೆ. ಆಗ ತೀಯ(ಬೆಲ್ಚಡ) ಆಶ್ವರ್ಯಗೊಂಡು ಇವರು ಸಾಮಾನ್ಯರಲ್ಲ ಎಂದು ಭಾವಿಸಿ ಅವರಲ್ಲಿ ಕ್ಷಮೆ ಯಾಚಿಸಿ ಅವರಿಗೆ ಸಿಯಾಳವನ್ನು ಕೊಯ್ಯುತ್ತಾನೆ. ಹಾಗೆ ಅದನ್ನು ಕೇವಲ ಕೆತ್ತಿ ಕೊಡಲು ಹೇಳುತ್ತಾರೆ. ಹೀಗೆ ಎಲ್ಲರಿಗೂ ಕೆತ್ತಿ ಕೊಡಲು ಭಗವತಿಯ ಸರದಿ ಬರುವಾಗ ಸಿಯಾಳವು ಕತ್ತಿಯ ಮೊನೆ ತಾಗಿ ತೂತಾಗುತ್ತದೆ. ಆಗ ಭಗವತಿಯು ಅದನ್ನು ಅವಸರದಿಂದು ಕುಡಿದು ಬಿಡುತ್ತಾಳೆ. ಆಗ ಭಗವತಿಯ ತಂಗಿ ದುರ್ಗೆಯು ಅಕ್ಕಾ ನೀನು ಏನು ಮಾಡಿದೇ? ತೀಯ(ಬೆಲ್ಚಡ) ಕೊಟ್ಟ ಸಿಯಾಳವನ್ನು ಕುಡಿದೆಯಾ ಎಂದು ಹೇಳಿ ಮುಂದೆ ಸಾಗಲು ಹೊರಟಾಗ ಭಗವತಿಯು ಆಗ ಸೋದರಿಯನ್ನು ಕುರಿತು ಸೋದರಿ ಜಾತಿ-ಮತಗಳು ಕೇವಲ ಕ್ಷಣಿಕ ಹಾಗೂ ಅವುಗಳು ಮುಖ್ಯವಲ್ಲ. ಯಾರಲ್ಲಿ ಪ್ರೇಮತುಂಬಿದ ಭಕ್ತಿ ಇರುವುದೊ ಅವರು ನನ್ನ ಮಕ್ಕಳಾಗುತ್ತಾರೆ ಎಂದಾಗ ದುರ್ಗೆಯು ಭಗವತಿಯ ಲೋಕ ಕಲ್ಯಾಣವನ್ನು ಅರಿತು ಅಕ್ಕಾ ನಾನು ನಿನ್ನ ಮಹಿಮೆಯನ್ನು ಅರಿತಿದ್ದೆನೆ, ಕ್ಷಮಿಸು ಎಂದಾಗ ಭಗವತಿ ದುರ್ಗೆ ಇದು ವಿಧಿ. ಇದೆ ಆಗಬೇಕು ಎಂಬುದು ಪರಮೇಶನ ಇಚ್ಚೇ ಎಂದಳು. ಹಾಗೇ ಭಗವತಿಯು ಹಾಗೂ ಅವಳ ಪರಿವಾರಗಳು ದೇವರ ರೂಪದಿಂದ ಕೊಂದಕಣ್ಣಾಯನ ಮುಂದೆ ಪ್ರತ್ಯಕ್ಷವಾಗಿ ತೀಯ(ಬೆಲ್ಚಡ) ಸಂತುಷ್ಟರಾಗಿ ಮುಂದೆ ನನಗೆ ಇಲ್ಲಿ ದೇವಾಲಯವನ್ನು ನಿರ್ಮಿಸು. ನೀನು ಮುಂದೆ ನನ್ನ (ಕಾರ್ನವರು) ಅರ್ಚಕನಾಗಿ ನನ್ನ ಪರಿವಾರದಲ್ಲಿ ಇರುವ ಗುಳಿಗ ಹಾಗೂ ಉಳಿದ ದೈವಗಳ ಸೇವೆಯನ್ನು ಮಾಡಿಕೊಂಡು ಇರು. ನಾನು ಇದೆ ಸಸಿಹಿತ್ಲುವಿನಲ್ಲಿ ನೆಲೆಯಾಗುತ್ತೇನೆ ಎಂದು ಅಭಯವನ್ನು ನೀಡುತ್ತಾಳೆ.

ಅಂತೆಯೇ ಭಗವತಿಯ ಪಂಚ ಸೋದರಿಯರು ದುರ್ಗೆಯರಾಗಿ ಶಾಂಬವಿ ನದಿಯಲ್ಲಿ ಪಂಚಲಿಂಗರೂಪದಲ್ಲಿ ಉದಿಸಿ ಮುಂದೆ ಬಪ್ಪಬ್ಯಾರಿಯ ಮುಖಾಂತರ ಬಪ್ಪನಾಡಿನಲ್ಲಿ ಭಕ್ತರ ಕಾಯ್ವ ಮಹಾಮಾಯೆಯಾಗುತ್ತಾಳೆ. ಪ್ರತಿ ವರ್ಷ ಬಪ್ಪನಾಡು ಜಾತ್ರೆಯಂದು ಭಗವತಿಯು ಬಪ್ಪನಾಡಿಗೆ ಬರುವ ಸಂಪ್ರದಾಯವಿದೆ.

ದೇವಾಲಯದಲ್ಲಿ ವಾಷಿಕ ಜಾತ್ರಾ ಮಹೋತ್ಸವವು ಮಾರ್ಚ ಏಪ್ರೀಲ್ ನಲ್ಲಿ ಬರುತ್ತದೆ. ಇಲ್ಲಿ ಕಂಚೀಲು ಸೇವೆಯು ಬಹು ವಿಶೇಷವಾದದ್ದು. ಶ್ರೀ ದೇವಿಯ ಯಕ್ಷಗಾನ ಮೇಳವು ಕೂಡಾ ಇದ್ದು ಮಾತೆಗೆ ಇಷ್ಟವಾದ ಬೆಳಕಿನ ಸೇವೆಯ ಹರಕೆಯು ಇಲ್ಲಿ ನಡೆಯುತ್ತದೆ.
ದೇವಿ ಇಂದಿಗೂ ತನ್ನ ಭಕ್ತರಲ್ಲಿ ಇಂದಿಗೂ ಮಳಯಾಳಿಯಲ್ಲಿ ಮಾತನಾಡುತಾಳೆ.

ತೀಯ ಜಾತಿಯವರಿಂದ ಆರಾದಿಸಲ್ಪಡುವ 18 ಕ್ಷೇತ್ರಗಳಲ್ಲಿ ಸಸಿಹಿತ್ಲು ಪ್ರಥಮ ವಾದುದು ಇಲ್ಲಿಂದ ಕ್ರಮವಾಗಿ
“ಕುದ್ರೊಳಿ ಭಗವತೀ “
“ಉಳ್ಳಲ ಭಗವತೀ”
“ಮಂಜೆಶ್ವರ” ಹೀಗೆ ಮುಂದುವರಿಯುತದೆ.

ತೀಯಾ ಜಾತಿಯ ಕೊಂದಕಣ್ಣಾಯನಿಗೆ ಒಲಿದು ಭಕ್ತಿಗೆ ಒಲಿವ ಭಗವತಿಯಾಗಿ ಸಸಿಹಿತ್ಲುವಿನ ಮಹಾನ್ ಕಾರಣೀಕ ಶಕ್ತಿಯಾಗಿ ಮೆರೆವ ಪರಾಶಕ್ತಿಯ ಕಥಾನಕವನ್ನು ಓದಿದ ನಿಮಗೆಲ್ಲರಿಗೂ ಅಂಬಿಕೆಯು ಸನ್ಮಂಗಳವನ್ನುಂಟು ಮಾಡಲಿ.

ಈ ಕ್ಷೇತ್ರಕ್ಕೆ ಹೋಗಲು ಬಯಸುವವರು:ಶ್ರೀ ಕ್ಷೇತ್ರವನ್ನು ತಲುಪಲು ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಸಾಗುವಾಗ ಸುರತ್ಕಲ್ ಮುಕ್ಕ ಸಮೀಪದ ವೃತ್ರದ ಮೂಲಕ ಸಮುದ್ರ ಕಿನಾರೆಯತ್ತ ಸರಿಸುಮಾರು 4-5 ಕಿ.ಮೀ ಸಾಗಿದರೆ ಸಮುದ್ರ ತಟಿಯ ಸುಂದರ ಮನೋಹರ ಸೊಬಗಿನ ನಡುವೆ ದೇವಾಯಲವು ಕಂಗೊಳಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಏಪ್ರಿಲ್ 30 ವರ್ಷದ ಮೊದಲ ಸೂರ್ಯಗ್ರಹಣದ ವಿಶೇಷ ರಾಶಿ ಫಲ

ಏಪ್ರಿಲ್ 30 ವರ್ಷದ ಮೊದಲ ಸೂರ್ಯಗ್ರಹಣದ ವಿಶೇಷ ರಾಶಿ ಫಲ

ಪುನೀತ್ ರಾಜಕುಮಾರ ಮನೆಗೆ ಬಂದು ಮಗಳಿಗೆ ಎಂತಹ ಉಡುಗೊರೆ ಕೊಟ್ಟಿದ್ದಾರೆ ನೋಡಿ ಕಣ್ಣೀರಿಟ್ಟ ಅಶ್ವಿನಿ.

ಪುನೀತ್ ರಾಜಕುಮಾರ ಮನೆಗೆ ಬಂದು ಮಗಳಿಗೆ ಎಂತಹ ಉಡುಗೊರೆ ಕೊಟ್ಟಿದ್ದಾರೆ ನೋಡಿ ಕಣ್ಣೀರಿಟ್ಟ ಅಶ್ವಿನಿ.