in

ಬಸವಣ್ಣನವರ ಕೆಲವೊಂದು ವಚನಗಳು

ಬಸವಣ್ಣನವರ ಕೆಲವೊಂದು ವಚನಗಳು
ಬಸವಣ್ಣನವರ ಕೆಲವೊಂದು ವಚನಗಳು

12ನೇ ಶತಮಾಣದ ವಚನಕಾರರ ಪೈಕಿ ಬಸವಣ್ಣನವರಿಗೆ ದೊಡ್ಡ ಸ್ಥಾನ. ಅಕ್ಕ ಮಹಾದೇವಿ, ಅಲ್ಲಮ ಪ್ರಭು ದಾರಿಯಲ್ಲೇ ಸಾಗಿದ್ರೂ ಬಸವಣ್ಣನವರ ದೃಷ್ಟಿ ಮಾತ್ರ ವಿಭಿನ್ನವಾಗಿತ್ತು. ಹೀಗಾಗಿ ಬಸವಣ್ಣನವರ ವಚನಗಳು ಬಹಳಷ್ಟು ಪ್ರಸಿದ್ಧಿ ಪಡೆದಿವೆ. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿಯನ್ನು ತಿಳಿಸುತ್ತವೆ.

ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ 1134 ರಲ್ಲಿ ಜನಿಸಿದರು. ಶ್ರೀ ಮಾದರಸ ಮತ್ತು ಮಾದಲಾಂಬಿಕೆ ಬಸವಣ್ಣನರ ಅಪ್ಪ-ಅಮ್ಮ. ಬಸವಣ್ಣನವರು ಲಿಂಗಾಯತ ಸಮುದಾಯದ ಸ್ಥಾಪಕರು. ಬಸವಣ್ಣನವರು ಎಂಟನೇ ವಯಸಿನಲ್ಲಿ ಇದ್ದಾಗ ಅವರಿಗೆ ಜನಿವಾರ ಕಟ್ಟಲು ಹೋದಾಗ ಅವರು ತಮಗಿಂತ ದೊಡ್ಡವಳಾದ ಸಹೋದರಿ ನಾಗಮ್ಮ ನಿಗೆ ಕಟ್ಟಲು ಹೇಳುತ್ತಾರೆ. ಆ ಸಮಯದಲ್ಲಿ ಹಿರಿಯರು ಇದು ಪುರುಷರಿಗೆ ಮಾತ್ರ ಕಟ್ಟಬೇಕು ಮಹಿಳೆಯರಿಗೆ ಕಟ್ಟುವಂತಿಲ್ಲ ಎಂದು ಹೇಳಿದಾಗ ಪುರುಷ ಮತ್ತು ಮಹಿಳೆಯ ಮಧ್ಯ ಸಮಾನತೆ ಇರಬೇಕು ಬೇಧ ಭಾವ ಇರಬಾರದು ಎಂದು ಹೇಳಿ ಮನೆ ಬಿಟ್ಟು ಹೊರಟು ಹೋಗುತ್ತಾರೆ. ನಂತರ ಬಸವಣ್ಣ ಕೂಡಲ ಸಂಗಮಕ್ಕೆ ತೆರಳುತ್ತಾರೆ. ಸುಮಾರು 12 ವರ್ಷಗಳ ಕಾಲ ಕೂಡಲ ಸಂಗಮದಲ್ಲೇ ಅಧ್ಯಾಯನದಲ್ಲಿ ತೊಡಗಿಸಿಕೊಳ್ಳುತ್ತಾರೆ. ದೇವರು ಬೇರೆ ಎಲ್ಲಿಯೂ ಇಲ್ಲ ಅವನು ನಮ್ಮೊಳಗೆ ಇದ್ದಾನೆ ಎಂದು ಬಸವಣ್ಣ ನಂಬಿದ್ದರು. 

ಸುಳ್ಳು ಹೇಳುವುದು, ಕೊಲೆ ಸುಲಿಗೆ, ಪ್ರಾಣಿ ಬಲಿ/ ಹಿಂಸೆ ಯಾವುದು ಇಷ್ಟವಾಗುತ್ತಿರಲಿಲ್ಲ. ಇವೆಲ್ಲವನ್ನೂ ಬಸವಣ್ಣ ವಿರೋಧಿಸುತ್ತಿದ್ದರು. ಬಸವಣ್ಣನವರಿಗೆ ಕ್ರಾಂತಿಯೋಗಿ ಬಸವಣ್ಣ, ಮಹಾಮಾನತಾವಾದಿ ಎಂಬ ಹೆಸರುಗಳು ಕೂಡ ಇವೆ. ಸಮಾನತೆ, ಕಾಯಕ, ತತ್ವಗಳನ್ನು ಆಚರಿಸುವ ಮತ್ತು ಪಾಲಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಅನ್ನೋದು ಬಸವಣ್ಣನವರ ದೃಷ್ಟಿಕೋನವಾಗಿತ್ತು. ಬಸವಣ್ಣನವರ ವಚನಗಳ ಅಂಕಿತ “ಕೂಡಲಸಂಗಮದೇವ”, ಕಾಯಕವೇ ಕೈಲಾಸ , ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಹೀಗೆ ಹಲವು ವಚನಗಳನ್ನು ಹೇಳಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಬಸವಣ್ಣನವರ ಸುಮಾರು 1500 ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹ ಮಾಡಲಾಗಿದೆ. 

ಸಮಾನತೆ ಇರಬೇಕು ಎಂದು ಬಯಸಿದ್ದ ಬಸವಣ್ಣ 1196 ರಲ್ಲಿ ಕೂಡಲ ಸಂಗಮದಲ್ಲಿ ನಿಧನ ಹೊಂದಿದ್ದರು. 

ಬಸವಣ್ಣನವರ ಕೆಲವೊಂದು ವಚನಗಳು

ಬಸವಣ್ಣನವರ ಕೆಲವು ಜನಪ್ರಿಯ ವಚನಗಳು :

1.ಉಳ್ಳವರು ಶಿವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯ!!

ಎನ್ನ ಕಾಲೇ ಕಂಬ, ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ!!

ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

2.ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,

ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,

ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,

ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,

ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,

ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

3.ದಯವಿಲ್ಲದ ಧರ್ಮವಾವುದಯ್ಯಾ ?

ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ

ದಯವೇ ಧರ್ಮದ ಮೂಲವಯ್ಯೂ ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯೂ !! 

4. ಆನು ಒಬ್ಬನು; ಸುಡುವರೈವರು.

ಮೇಲೆ ಕಿಚ್ಚು ಘನ, ನಿಲಲು ಬಾರದು

ಕಾಡುಬಸವನ ಹುಲಿ ಕೊಂಡೊಯ್ದರೆ ಆರೈಯಲಾಗದೆ

ಕೂಡಲಸಂಗಮದೇವ ? 

5.ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ, 

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,

ಕೂಡಲಸಂಗಮದೇವಯ್ಯಾ,

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

6.ಚೆನ್ನಯ್ಯನ ಮನೆಯ ದಾಸನ ಮಗನು,

ಕಕ್ಕಯ್ಯನ ಮನೆಯ ದಾಸಿಯ ಮಗಳು,

ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, 

ಸಂಗವ ಮಾಡಿದರು.

ಇವರಿಬ್ಬರಿಗೆ ಹುಟ್ಟಿದ ಮಗ ನಾನು,

ಕೂಡಲಸಂಗಮದೇವ ಸಾಕ್ಷಿಯಾಗಿ.

7. ಮನವೇ ಸರ್ಪ, ತನುವೇ ಹೇಳಿಗೆ!

ಹಾವಿನೊಡತಣ ಹುದುವಾಳಿಗೆ!

ಇನ್ನಾವಾಗ ಕೊಂದಹುದೆಂದರಿಯೆ

ಇನ್ನಾವಾಗ ತಿಂದಹುದೆಂದರಿಯೆ

ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ ಅದೇ ಗಾರುಡ

ಕೂಡಲಸಂಗಮದೇವ. 

8. ಕಳ್ಳ ನಾಗರ ಕಂಡರೆ ಹಾಲನೆರೆ ಎಂಬುದು

ದಿಟದ ನಾಗರ ಕೊಲ್ಲೆಂಬರಯ್ಯ

ಉಂಬ ಜಂಗಮ ಬಂದರೆ ನಡೆಯೆಂಬುದು

ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು

ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದರೆ ಕಲ್ಲತಾಗಿದ ಮಿಟ್ಟಿಯಂತಪ್ಪರಯ್ಯ

 9. ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ!

ಇದಾವ ಪರಿಯಲ್ಲಿ ಕಾಡಿತ್ತು ಮಾಯೆ ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ,

ನೀವೇ ಬಲ್ಲಿರಿ ಕೂಡಲಸಂಗಮದೇವಾ. 

10.ಜನ್ಮ ಜನ್ಮಕ್ಕೆ ಹೊಗಲೀಯದೆ,

ಸೋಹಂ ಎಂದೆನಿಸದೆ ದಾಸೋsಹಂ ಎಂದೆನಿಸಯ್ಯಾ.

ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ

ಕೂಡಲಸಂಗಮದೇವಾ.

ಬಸವಣ್ಣನವರ ಕೆಲವೊಂದು ವಚನಗಳು

11.ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ

ಕೇಳಿರಯ್ಯಾ ಎರಡಾಳಿನ ಭಾಷೆಯ

ಕೊಲುವೆನೆಂಬ ಭಾಷೆ ದೇವನದು, 

ಗೆಲುವೆನೆಂಬ ಭಾಷೆ ಭಕ್ತನದು.

ಸತ್ಯವೆಂಬ ಕೂರಲಗನೆ ಕಳೆದುಕೊಂಡು

ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.

12.ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,

ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ.

ಈ ಮಾಯೆಯ ಕಳೆವಡೆ ಎನ್ನಳವಲ್ಲ,

ನೀವೆ ಬಲ್ಲಿರಿ ಕೂಡಲಸಂಗಮದೇವಾ !

13. ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ

ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಾ

ಕೂಡಲಸಂಗಮದೇವಾ

ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ. 

14. ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ

ನೆನೆನೆನೆದು ಸುಖಿಯಾಗಿಯಾನು ಬದುಕಿದೆನಯ್ಯಾ.

ಅದೇನು ಕಾರಣ ತಂದೆಯಿಂದರಿದೆನಯ್ಯಾ

ಅರಿದರಿದು ನಿಮ್ಮ ಶರಣನು ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.

15. ಸಕ್ಕರೆಯ ಕೊಡನ ತುಂಬಿ ಹೊರಗ ಸವಿದರೆ ರುಚಿಯುಂಟೆ ?

ತಕ್ಕೈಸಿ ಭುಜತುಂಬಿ, ಲಿಂಗಸ್ಪರ್ಶನವ ಮಾಡದೆ,

ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!

ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!

ಕೂಡಲಸಂಗಮದೇವ

16.ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.

ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.

ಕೇಳು, ಕೂಡಲಸಂಗಮದೇವಾ,

ಮರಣವೆ ಮಹಾನವಮಿ.

17.ಜಾತಿವಿಡಿದು ಸೂತಕವನರಸುವೆ

ಜ್ಯೋತಿವಿಡಿದು ಕತ್ತಲೆಯನರಸುವೆ !

ಇದೇಕೊ ಮರುಳುಮಾನವಾ

ಜಾತಿಯಲ್ಲಿ ಅಧಿಕನೆಂಬೆ !

ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ

‘ಭಕ್ತನೆ ಶಿಖಾಮಣ’ ಎಂದುದು ವಚನ.

ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,

ಕೆಡಬೇಡ ಮಾನವಾ.

18.ಸ್ವಾಮಿ ನೀನು, ಶಾಶ್ವತ ನೀನು

ಎತ್ತಿದೆ ಬಿರುದ ಜಗವೆಲ್ಲರಿಯಲು

ಮಹಾದೇವ, ಮಹಾದೇವ!

ಇಲ್ಲಿಂದ ಮೇಲೆ ಶಬ್ದವಿಲ್ಲ!

ಪಶುಪತಿ ಜಗಕ್ಕೆ ಏಕೋದೇವ;

ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;

ಕೂಡಲಸಂಗಮದೇವ.

19.ತಂದೆ ನೀನು ತಾಯಿ ನೀನು, 

ಬಂಧು ನೀನು ಬಳಗ ನೀನು.

ನೀನಲ್ಲದೆ ಮತ್ತಾರೂ ಇಲ್ಲಯ್ಯಾ,

ಕೂಡಲಸಂಗಮದೇವಾ,

ಹಾಲಲದ್ದು, ನೀರಲದ್ದು.

20.ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,

ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,

ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,

ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,

ಕೂಡಲಸಂಗನ ಶರಣರ ಅನುಭಾವದ ಬಲದಿಂದ

ಎನ್ನ ಭವದ ಕೇಡು ನೋಡಯ್ಯಾ.

21.ತನುವ ಕೊಟ್ಟು ಗುರುವನೊಲಿಸಬೇಕು,

ಮನವ ಕೊಟ್ಟು ಲಿಂಗವನೊಲಿಸಬೇಕು,

ಧನವ ಕೊಟ್ಟು ಜಂಗಮವನೊಲಿಸಬೇಕು.

ಈ ತ್ರಿವಿಧವ ಹೊರಗು ಮಾಡಿ,

ಹರೆಯ ಹೊುಸಿ, ಕುರುಹ ಪೂಜಿಸುವ ಗೊರವರ ಮೆಚ್ಚ

ಕೂಡಲಸಂಗಮದೇವ.

22.ಗಂಡ ಶಿವಲಿಂಗದೇವರ ಭಕ್ತ,

ಹೆಂಡತಿ ಮಾರಿ ಮಸಣಿಯ ಭಕ್ತೆ.

ಗಂಡ ಕೊಂಬುದು ಪಾದೋದಕ-ಪ್ರಸಾದ,

ಹೆಂಡತಿ ಕೊಂಬುದು ಸುರೆ-ಮಾಂಸ.

ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ

ಹೆಂಡದ ಮಡಿಕೆಯ ಹೊರಗೆ ತೊಳೆದಂತೆ

ಕೂಡಲಸಂಗಮದೇವಾ.

23.ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ

 ಮನೆಯಲು ಕಿಚ್ಚೆದ್ದು ಸುಡುವಾಗ

ಬಚ್ಚಲ ನೀರ, ಬೀದಿಯ ದೂಳ ಹೊಯ್ದು

ಬೊಬ್ಬಿಟ್ಟೆಲ್ಲರ ಕರೆವರಯ್ಯಾ.

ಕೂಡಲಸಂಗಮದೇವಾ,

ವಂದನೆಯ ಮರೆದು ನಿಂದಿಸುತ್ತಿದ್ದರು.

24.ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ

ಕುಲವೇನೊ ಅವದಿರ ಕುಲವೇನೊ !

ಸಕಲಜೀವಾತ್ಮರಿಗೆ ಲೇಸನೆ ಬಯಸುವ

ನಮ್ಮ ಕೂಡಲಸಂಗನ ಶರಣರೆ ಕುಲಜರು.

25.ಗುರು ಮುನಿದಡೆ ಒಂದು ದಿನ ತಾಳುವೆ,

ಲಿಂಗ ಮುನಿದಡೆ ದಿನವರೆ ತಾಳುವೆ.

ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ,

ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ.

ಬಸವಣ್ಣನವರ ಕೆಲವೊಂದು ವಚನಗಳು

26.ಗುರುಲಿಂಗಜಂಗಮದ ಹೆಸರಿನಿಂದ ಕಾಯಕವ ಮಾಡಿ,

ಗುರು ಚರಕೆ ವಂಚಿಸಿ,ತಾಯಿ ತಂದೆ, ಬಂಧುಬಳಗ, ಹೆಂಡತಿ,

ಒಡಹುಟ್ಟಿದವರು ಎಂದು ಸಮಸ್ತಪದಾರ್ಥವ ಚಾಗೆಯ

ಮಾಡುವನೊಬ್ಬ ಭಕ್ತದ್ರೋಹಿ ನೋಡಾ,

 ಕೂಡಲಸಂಗಮದೇವಾ.

27.ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ

ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.

ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ

ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.

ಲಿಂಗಭಕ್ತನು ಲಿಂಗಪಥವ ಹೇಳಿದಡೆ

ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.

28.ತಾಳಮಾನ ಸರಿಸವನರಿಯೆ,

ಓಜೆ ಬಜಾವಣೆಯ ಲೆಕ್ಕವನರಿಯೆ,

ಅಮೃತಗಣ ದೇವಗಣವನರಿಯೆ,

ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ.

29.ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ

ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ

ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.

30.ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.

ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ

ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆುತ್ತು.

ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು.

ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು

ಕೂಡಲಸಂಗಮದೇವನು ‘ಇತ್ತ ಬಾ ಎಂದು ಎತ್ತಿಕೊಂಡನು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಫೆಬ್ರವರಿ 26 ರಂದು, ಪಿಸ್ತಾ ದಿನವನ್ನು ಆಚರಿಸಲಾಗುತ್ತದೆ

ಫೆಬ್ರವರಿ 26 ರಂದು, ಪಿಸ್ತಾ ದಿನವನ್ನು ಆಚರಿಸಲಾಗುತ್ತದೆ

ಕನ್ನಡದ ಪ್ರಮುಖ ಪತ್ರಿಕೆಗಳು

ಕನ್ನಡದ ಪ್ರಮುಖ ಪತ್ರಿಕೆಗಳು