in ,

ಹಾಸನ ಜಿಲ್ಲೆಯ ಅರಸೀಕೆರೆ ಶಿವಾಲಯ

ಅರಸೀಕೆರೆ ಶಿವಾಲಯ
ಅರಸೀಕೆರೆ ಶಿವಾಲಯ

ಅರಸೀಕೆರೆಯ ಶಿವಾಲಯವು ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳನ ದಂಡನಾಯಕನಾಗಿದ್ದ ರಾಚಿಮಯ್ಯನಿಂದ ೧೨೨೦ರಲ್ಲ್ಕಿ ನಿರ್ಮಿಸಲ್ಪಟ್ಟಿತು. ಆಗಿನ ಕಾಲದ ಹೊಯ್ಸಳ ವಾಸ್ತು ರಚನೆಗಳಲ್ಲೇ ಇದು ಅತ್ಯಂತ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಇದು ತನ್ನ ವಿಶೇಷ ರಚನೆ ಹಾಗು ಭಿನ್ನತೆಗಳಿಂದ ಗಮನ ಸೆಳೆಯುತ್ತದೆ. ಮೊದಲನೆಯದಾಗಿ ಆ ಕಾಲದ ಎಲ್ಲ ಹೊಯ್ಸಳ ದೇವಾಲಯಗಳಿಗಿರುವಂತೆ ಜಗತಿಯ ಮೇಲೆ ಇದನ್ನು ನಿರ್ಮಿಸಲಾಗಿಲ್ಲ ಬದಲಾಗಿ ಗಟ್ಟಿ ನೆಲದ ಮೇಲೆ ತೊಲೆಗಳನ್ನಿಟ್ಟು ಅದರ ಮೇಲೆ ನಿರ್ಮಿಸಲಾಗಿದೆ. ಎರಡನೆಯದಾಗಿ ಸಾಮಾನ್ಯವಾಗಿ ಇರಬೇಕಾದ ೫ ಅಥವಾ ೬ ಹಂತದ ಚಿತ್ರಪಟ್ಟಿಕೆಗಳಿಲ್ಲ. ಅದರ ಬದಲಾಗಿ ಆ ಸ್ಥಳದಲ್ಲಿ ದೇವಮಾಡುಗಳಿದ್ದು ಒಟ್ಟು ೧೨೦ ದೇವತಾ ಮೂರ್ತಿಗಳ ಕೆತ್ತನೆಯಿದೆ. ಈ ಪ್ರತಿಯೊಂದು ಮೂರ್ತಿಯನ್ನು ಕಪೋತದವರೆಗೆ ಕೆತ್ತಿರುವ ವಿವಿಧ ಮಾದರಿಯ ಅಲಂಕೃತ ಕಂಬಗಳ ಮಾಡುಗಳಲ್ಲಿ ಕಂಡರಿಸಲಾಗಿದೆ. ಇನ್ನೂ ವಿಶೇಷವೆಂದರೆ ಪ್ರತಿಯೊಂದು ಶಿಲ್ಪದ ಕೆಳಗೆ ಶಿಲ್ಪದ ಹೆಸರು ಮತ್ತು ಅದನ್ನು ಕೆತ್ತಿದ ರೂವಾರಿಯ ಹೆಸರನ್ನು ಕೆತ್ತಲಾಗಿದೆ.

ಶಿವಾಲಯವು ಹಾಸನ ಜಿಲ್ಲೆಯ ಅರಿಸೀಕೆರೆಯಲ್ಲಿದೆ. ಅರಸೀಕೆರೆಯ ಬಸ್ಸು ಅಥವ ರೈಲು ನಿಲ್ದಾಣದಿಂದ ೧ ಕಿಮಿ ದೂರದಲ್ಲಿದೆ. ಈ ದೇವಾಲಯವು ಬೆಂಗಳೂರಿನಿಂದ ೨೪೦ ಕಿಮೀ, ಶಿವಮೊಗ್ಗದಿಂದ ೯೫ ಕಿ ಮೀ ದೂರವಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಶಿವಾಲಯ
ಶಿವ ಗರ್ಭಗುಡಿ

ಅರಸೀಕೆರೆಯು ೬ನೇ ಚಾಲುಕ್ಯ ದೊರೆ ತ್ರಿಭುವನಮಲ್ಲ ವಿಕ್ರಮಾದಿತ್ಯ ಕಾಲಕ್ಕಾಗಲೇ ದೊಡ್ಡ ಪಟ್ಟಣವಾಗಿತ್ತು. ಚಾಲುಕ್ಯ ವಂಶದ ಅರಸಿಯೊಬ್ಬಳು ಕಟ್ಟಿಸಿದ ಕೆರೆಯಿಂದ ಈ ಊರಿಗೆ “ಅರಸೀಕೆರೆ” ಎಂಬ ಹೆಸರು ಬಂದಿದೆ. ಹೊಯ್ಸಳ ದೊರೆ ಎರೆಯಂಗನ ಹೆಂಡತಿ ಮಹಾದೇವಿ ಎಂಬುವವಳು ಇಲ್ಲಿ ವಿಶಾಲವಾದ ಕೆರೆಯೊಂದನ್ನು ಕಟ್ಟಿಸಿದಳು ಎಂಬುದೊಂದು ನಂಬಿಕೆಯಿದೆ. ಎರೆಯಂಗನ ನಂತರದ ಅರಸ ಇಮ್ಮಡಿ ಬಲ್ಲಾಳನ ದಂಡನಾಯಕನಾಗಿದ್ದ ರಾಚಿಮಯ್ಯ ಎಂಬುವನು ಇಲ್ಲಿ ಶಿವಾಲಯವನ್ನು ಕಟ್ಟಿಸಿದ.

ಈ ದೇವಸ್ಥಾನ ಗರ್ಭಗೃಹ, ಸುಕನಾಸಿ, ನವರಂಗ ಹಾಗು ಸಭಾಮಂಟಪ ಹೊಂದಿದೆ. ಮೊದಲ ಮೂರು ಅಂದರೆ ಗರ್ಭಗೃಹ, ಸುಕನಾಸಿ ಹಾಗು ನವರಂಗಗಳ ರಚನೆ ನಕ್ಷತ್ರಾಕಾರದಲ್ಲಿದ್ದರೂ ಈ ನಕ್ಷತ್ರಾಕಾರ ಸಮಭುಜಗಳನ್ನು ಹೊಂದಿರದೇ ತುಂಬ ಸಂಕೀರ್ಣವಾಗಿದೆ. ಅಲ್ಲದೇ ಎಲ್ಲಕ್ಕಿಂತ ಹೊರಗಿರುವ ಸಭಾ ಮಂಟಪವೇ ಈ ದೇವಾಲಅಯದ ಪ್ರಮುಖ ಆಕರ್ಷಣೆ. ಈ ದೇವಾಲಯದ ಪ್ರಮುಖ ಆಕರ್ಷಣೆಯಾದ ಇನ್ನೊಂದು ಮುಖಮಂಟಪವು 16 ಮೂಲೆಗಳನ್ನು ಹೊಂದಿದ್ದು ನಕ್ಷತ್ರಾಕಾರದಲ್ಲದೆ. ಇದು ತೆರೆದ ಮಂಟಪವಾಗಿದ್ದು ಮೇಲಿನಿಂದ ನೋಡಿದರೆ ಬೋರಲು ಹಾಕಿದ ಹರಿಗೋಲಿನಂತೆ ಕಾಣುತ್ತದೆ. ಇಂಥ ಸಭಾಮಂಟಪವು ಇನ್ನಾವುದೇ ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುವುದಿಲ್ಲ. 25 ಅಡಿ ವ್ಯಾಸದ ಅಳತೆ ಹೊಂದಿರುವ ಇದರ ಮಧ್ಯದಲ್ಲಿ ಸ್ವಲ್ಪವೇ ಎತ್ತರಿಸಿದ ಭಾಗವಿದ್ದು ಅಲ್ಲಿ ಸಾಂಸ್ಕ್ರುತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದನ್ನು ಕುಳಿತು ನೋಡಲು ಮಂಟಪದ ಸುತ್ತಲೂ ಎತ್ತರಿಸಿದ ಕಟ್ಟೆಗಳಿದ್ದು ಈ ಕಟ್ಟೆಗಳನ್ನು ಮುಖಾಮುಖಿಯಾದ ಆನೆಗಳು ಹೊತ್ತು ನಿಂತಂತೆ ಕೆತ್ತಲಾಗಿರುವುದು ತುಂಬ ವಿಶೇಷವಾದ್ದು. ಇಂಥದೇ ಇನ್ನೊಂದು ಕಕ್ಷಾಸನ ನೋಡಲು ಸಿಗುವುದು ಬೆಳವಾಡಿಯ ವೀರನಾರಾಯಣನ ದೇವಸ್ಥಾನದಲ್ಲಿ. ಈ ಕಟ್ಟೆಯ ಮೇಲೆ ಕುಳಿತು ಒರಗಿಗೊಳ್ಳಲು ಜಾರುಬಂಡಿಯಂಥ ಆಸರೆ ಮಾಡಿರುವುದೊಂದು ವಿಶೇಷ. ಇದರಲ್ಲೂ ಒಟ್ಟು 21 ಕಂಬಗಳಿರುದ್ದು ಹೊರಗಿನ 13 ಕಂಬಗಳು ಚೌಕಾಕಾರದ್ದಾಗಿದ್ದು ಒಳಗಿನ 8 ಕಂಬಗಳು ಗಂಟೆಯಾಕಾರದ ರಚನೆ ಹೊಂದಿವೆ. ಈ ಕಂಬಗಳ ಮೇಲಿನ ಮಣಿ-ಮುತ್ತಿನ ಕೆತ್ತನೆ ತುಂಬ ನಯಗಾಗಿಕೆಯಿಂದ ಕೂಡಿದೆ. ಇಲ್ಲಿನ ಭುವನೇಶ್ವರಿಯಲ್ಲಿ ಮೂರುವರೆ ಅಡಿ ಉದ್ದದ ಇಳಿ ಬಿದ್ದಿರುವ ಕಮಲದ ಹೂವಿನ ಕೆತ್ತನೆ ಸುಂದರವಾಗಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಶಿವಾಲಯ
ದೇವಾಲಯದ ಶಿಲ್ಪಕಲೆ

ಇಬ್ಬಗೆಯಲ್ಲೂ ದ್ವಾರಪಾಲಕರಿಂದ ಕೂಡಿದ ಗರ್ಭಗೃಹದ ಬಾಗಿಲುವಾಡದ ಮೇಲೆ ಗಜಲಕ್ಷ್ಮಿ ಚಿತ್ರವಿದ್ದು ಒಳಗಿರುವ ಭುವನೇಶ್ವರಿಯಲ್ಲಿ ತಾಂಡವ ನೃತ್ಯ ಮಾಡುತ್ತಿರುವ ಶಿವ, ಸುತ್ತಲೂ ದಿಕ್ಪಾಲಕರು ಹಾಗು ವಾದ್ಯ ನುಡಿಸುತ್ತಿರುವ ವಿದ್ಯಾಧರರನ್ನು ಕೆತ್ತಿದ್ದಾರೆ. ಅಲ್ಲಿ ಶಿವ 2 ಅಡಿ ಎತ್ತರದ ಲಿಂಗದ ರೂಪಿನಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ಸುಕನಾಸಿಯ ಅಂದರೆ ಗರ್ಭಗೃಹದ ಮುಂಭಾಗದ ಸ್ಥಳದ ಮೇಲ್ಛಾವಣಿಯಲ್ಲಿ ಕೆಲ ವಿಶೇಷ ಕೆತ್ತನೆಗಳಿವೆ. ಪಾಂಡವರಿಗೆ ಪುರಾಣ ಶ್ರವಣ ದೃಶ್ಯ,, ದ್ರೋಣಾಚಾರ್ಯರು ಧನುರ್ವಿದ್ಯೆ ಕಲಿಸುತ್ತಿರುವುದು, ದ್ಯೂತವಾಡುತ್ತಿರುವ ಕೌರವ-ಪಾಂಡವರು, ಸಮುದ್ರ ಮಥನ, ಹಾಗು ಶಿವತಾಂಡವ ನೃತ್ಯದ ಕೆತ್ತನೆಗಳಿವೆ. ಇದು ಮುಚ್ಚಿದ ನವರಂಗವಾಗಿದ್ದು, ಇದರಲ್ಲಿ ಒಟ್ಟು 8 ಕಂಬಗಳಿದ್ದು ಹೊರಸುತ್ತಿನ 4 ಕಂಬಗಳು ಚೌಕಾಕಾರದವುಗಳಾಗಿವೆ. ಒಳಸುತ್ತಿನ ಉಳಿದ 4 ಕಂಬಗಳು ಲೇತ್ನಿಂದ ತಿರುಗಿಸಿ ಮಾಡಿದ ಹೊಳೆಯುವ ಕಂಬಗಳಾಗಿವೆ. ಇವುಗಳ ಮೇಲೆ ಕೆತ್ತಿದ ಮಣಿಮಾಲೆಗಳ ಕೆತ್ತನೆ ಗಮನ ಸೆಳೆಯುತ್ತದೆ. ಇಲ್ಲಿರುವ ಭುವನೇಶ್ವರಿಯ ಪೂರ್ವಕ್ಕೆ 12 ಆದಿತ್ಯರ ಹಾಗು ಪಶ್ವಿಮಕ್ಕೆ ರುದ್ರರ ಕೆತ್ತನೆಯಿದ್ದು ಉತ್ತರ ಹಾಗು ದಕ್ಷಿಣದಲ್ಲಿ ವಿಷ್ಣುವಿನ 24 ಅವತಾರಗಳ ಕೆತ್ತನೆಯಿದೆ. ಇದರ ಗೋಪುರವು ತುಂಬ ಸುಂದರವಾಗಿದ್ದು ಐದು ಸ್ಥರದ ವೇಸರ ಶೈಲಿಯದ್ದಾಗಿದೆ. ಇಲ್ಲೊಂದು ವಿಶೇಷತೆಯಿದೆ. ಸಾಮಾನ್ಯವಾಗಿ ಎಲ್ಲ ಹೊಯ್ಸಳ ದೇವಾಲಯಗಳಲ್ಲಿ ಸುಕನಾಸಿಯ ಮೇಲೆ ಹುಲಿಯನ್ನು ಕೊಲ್ಲುತ್ತಿರುವ ಸಳನ ಶಿಲ್ಪವಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸಳನ ಶಿಲ್ಪವಿರಬೇಕಾದ ಸ್ಥಳದಲ್ಲಿ ಗಾರೆಯಿಂದ ಮಾಡಿದ ಬಸವನ ಮೂರ್ತಿ ಇದೆ. ಬಹುಶ: ಇದೂ ಕೂಡ ವೀರಶೈವ ಪಂಥವು ಪ್ರಾಬಲ್ಯಕ್ಕೆ ಬಂದಾಗ ಈ ದೇವಾಲಯ ದಾಳಿಗೆ ಒಳಗಾಗಿರುವುದನ್ನು ಸೂಚಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪಟಾಕಿ ತಯಾರಿಸುವ ಪ್ರದೇಶ

ಶಿವಕಾಶಿ ಇತಿಹಾಸ ಹಾಗೂ ಪಟಾಕಿ ತಯಾರಿಸುವ ಪ್ರದೇಶ

ಚನ್ನರಾಯಪಟ್ಟಣ

ನಗರವನ್ನು ಆಳುತಿದ್ದ ರಾಜನ ಹೆಸರಿನಿಂದ ಬಂದಿದ್ದು ಚನ್ನರಾಯಪಟ್ಟಣ