in ,

ಅಜಿಲ ಮನೆತನ : ವ್ಯಾಪಕವಾದ ಅಕ್ಕಿಯ ಉತ್ಪಾದನೆಗಾಗಿ ಈ ಹೆಸರು ಬಂದಿದೆ ಎನ್ನುತ್ತಾರೆ

ಅಜಿಲ ಮನೆತನ
ಅಜಿಲ ಮನೆತನ

ಇತಿಹಾಸದ ಪುಟವನ್ನೊಮ್ಮೆ ತಿರುವುತ್ತಾ ಹೋದಂತೆ, ಅವೆಷ್ಟು ರಾಜಮನೆತನಗಳು, ಅವೆಷ್ಟು ವಾಸ್ತುಶಿಲ್ಪಗಳು., ಐತಿಹ್ಯಗಳು ಕಾಣಸಿಗುತ್ತವೆ. ಇವೆಲ್ಲರ ನಡುವೆ ಸುಮಾರು ೮೦೦ ವರ್ಷಗಳ ಇತಿಹಾಸವಿರುವ ಅಜಿಲ ಮನೆತನವು ತನ್ನ ಅಪೂರ್ವ ವೈಭವದೊಂದಿಗೆ ಕಂಗೊಳಿಸುತ್ತಿದೆ. ಸುಮಾರು ಮೂವತ್ತೆರಡು ಗ್ರಾಮಗಳಲ್ಲಿ ತನ್ನ ಬಾಹುವನ್ನು ವಿಸ್ತರಿಸಿದ ಈ ಸೀಮೆಯಲ್ಲಿ ನಾಲ್ಕು ಅರಮನೆಗಳು, ಬರಾಯ, ಅಳದಂಗಡಿ, ವೇಣೂರು, ಕೆಳಗ್ರಾಮಗಳಲ್ಲಿ ಕಂಡುಬರುತ್ತದೆ.

ಪ್ರಸ್ತುತ ಅಜಿಲ ಮನೆತನದ ಇಪ್ಪತ್ತನಾಲ್ಕನೆಯ ರೂವಾರಿಯಾದಂತಹ ಡಾ.ಪದ್ಮಪ್ರಸಾದ್ ಅಜಿಲರು ಈ ಮನೆತನದ ಪರಂಪರಾಗತ ಸಂಪ್ರದಾಯವನ್ನು ಮುನ್ನಡೆಸುತ್ತಿದ್ದಾರೆ. ಸಾಂಸ್ಕೃತಿಕ ವ್ಯೆಶಿಷ್ಟ್ಯತೆಯಳ್ಳ ಆಚರಣೆಗಳು, ರಾಜ ಪರಂಪರೆಯ ಜೀವಂತಿಕೆಗೆ ಇನ್ನೊಂದು ಸೂಚಕ. ಈಗಿನ ಪ್ರಜಾಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ರಾಜ ಪರಂಪರೆಯ ಗಾಂಭೀರ್ಯತೆಗೆ ಅವಕಾಶವಿಲ್ಲವಾದರೂ, ಸಾಂಸ್ಕೃತಿಕ ವಿಭಿನ್ನತೆಗೆ ತಡೆಯಿಲ್ಲ. ಆದ್ದರಿಂದ ಅಜಿಲ ಮನೆತನದಲ್ಲಿ ಇಂದಿಗೂ ಸಾಂಸ್ಕೃತಿಕ ಉತ್ಸಾಹ, ವೈಭವವನ್ನು ಕಾಣಬಹುದು. ಅಜಿಲ ಮನೆತನದಲ್ಲಿ ಅತೀ ಉತ್ಸಾಹ ಮತ್ತು ರಾಜಗಾಂಭೀರ್ಯದಿಂದ ಮನರಂಜನಕ್ಕಾಗಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದವು.

ಅವುಗಳಲ್ಲಿ ದಕ್ಷಿಣ ಕನ್ನಡದ ಜನಪ್ರಿಯ ಕ್ರೀಡೆ ‘ಕಂಬಳ’ವು ಒಂದು. ಇದನ್ನು ಇಲ್ಲಿನ ಜನರು ಬಹಳ ಗೌರವದಿಂದ ‘ಅರಸು ಕಂಬಳ’ವೆಂದು ಕರೆಯುತ್ತಿದ್ದರು. ಅಜಿಲರ ಅರಮನೆಯಿಂದ ಸ್ವಲ್ಪ ದೂರಕ್ಕೆ ಎಡಭಾಗದಲ್ಲಿ ಬಹಳ ವಿಸ್ತಾರವಾದಂತಹ ಕೆಸರುಗದ್ದೆಯು ಕಂಬಳಕ್ಕೆಂದೇ ರಚಿಸಿದ್ದಾರೆ. ಆ ವಿಶಾಲವಾದ ಗದ್ದೆಯನ್ನು ನೋಡಿದರೆ ರೋಮಾಂಚನವಾಗುತ್ತದೆ. ಸಮತಟ್ಟಾದ ಆ ಪ್ರದೇಶದಲ್ಲಿ ನಡೆಯುವ ಕಂಬಳವಂತೂ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ‘ಅಜಿಲ’ರನ್ನು ಅಕ್ಕಿಯ ಅಜಿಲರು ಎಂದು ಜನ ಗುರುತಿಸಿಕೊಂಡಿದ್ದರು. ವ್ಯಾಪಕವಾದ ಅಕ್ಕಿಯ ಉತ್ಪಾದನೆಗಾಗಿ ಈ ಹೆಸರು ಬಂದಿದೆ ಎನ್ನುತ್ತಾರೆ. ಆದ್ದರಿಂದ ಈ ಪ್ರದೇಶದಲ್ಲಿ ವಿಸ್ತಾರವಾದ ಗದ್ದೆಗಳಿಗೆ ಕೊರತೆಯಿಲ್ಲ. ಕಂಬಳ ಗದ್ದೆಯು ಸಮತಟ್ಟಾಗಿ ಕೋಣಗಳ ಓಟಕ್ಕೆಂದೇ ಮಾಡಲಾಗಿದೆ. ಸುಮಾರು ಮೂರು ದಿನಗಳ ಕಾಲ ಈ ‘ಅರಸು ಕಂಬಳ’ ನಡೆಯುತ್ತದೆ. ಕಂಬಳ ನಡೆಯುವ ದಿನವನ್ನು ಒಂದು ನಿಗದಿತ ಪರ್ವದಲ್ಲಿ ಸೂಚಿಸಿರುತ್ತಾರೆ. ನಂತರ ಕಂಬಳ ಗದ್ದೆಯ ಸ್ವಚ್ಛತೆ ಆರಂಭಗೊಳ್ಳುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಜನರು ಬಹಳ ಗೌರವದಿಂದ ಅರಮನೆ ಕೆಲಸಲ್ಲಿ ಪಾಲ್ಗೊಳ್ಳುತ್ತಾರೆ. ಕಂಬಳದ ಮೊದಲ ದಿನ ಕೊರಗರು (ಒಂದು ಪಂಗಡ) ಪೂರ್ಣ ರಾತ್ರಿ ಕಂಬಳ ಗದ್ದೆಯನ್ನು ಕಾಯುತ್ತಾರೆ.

ಅಜಿಲ ಮನೆತನ : ವ್ಯಾಪಕವಾದ ಅಕ್ಕಿಯ ಉತ್ಪಾದನೆಗಾಗಿ ಈ ಹೆಸರು ಬಂದಿದೆ ಎನ್ನುತ್ತಾರೆ
ಕಂಬಳದ ಕೋಣಗಳು ಗದ್ದೆಯಲ್ಲಿ ಓಡುವುದು

ಕಂಬಳದ ಅರಂಭದ ದಿನ ಬಹಳ ಸಾಂಪ್ರದಾಯಿಕವಾಗಿ ನೆರವೇರುತ್ತದೆ. ತಲಾಂತರಗಳಿಂದ ಬಂದಂತಹ ಕಲ್ಲಿನ ಚಕ್ರ ಒಟ್ಟು ನಾಲ್ಕು ಚಕ್ರಗಳು ಈ ಕಂಬಳ ಗದ್ದೆಯ ಅಸುಪಾಸಿನಲ್ಲಿ ಕಾಣಸಿಗುತ್ತದೆ. ಇದನ್ನು ‘ಪೂಕರೆ’ ಎಂದು ಕರೆಯಲಾಗುತ್ತದೆ. ಈ ಪೂಕರೆಯನ್ನು ಕಂಬಳ ಗದ್ದೆಯ ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕಂಬಳದ ಈ ಮೊದಲ ದಿನವನ್ನು ಡಕೋರಿ ಎಂದು ಕರೆಯುತ್ತಾರೆ. ಆ ದಿನ ಅಜಿಲರು ರಾಜಮೆರವಣಿಗೆಯಲ್ಲಿ ಕಂಬಳಗದ್ದೆಗೆ ಬರುತ್ತಾರೆ. ಕಂಬಳ ಗದ್ದೆಯ ಮುಂಭಾಗದಲ್ಲಿ ಎತ್ತರದ ಆಸನಗಳನ್ನು ಮಾಡಿರುತ್ತಾರೆ. ಇದರಲ್ಲಿ ಆಸೀನರಾದಂತಹ ಅಜಿಲರು ಕಾರ್ಯಕ್ರಮದ ಉನ್ನತಿಗಾಗಿ ಹರಸುತ್ತಾರೆ. ನಂತರ ಅರಮನೆಯ ಕೋಣಗಳನ್ನು ಕೆಸರುಗದ್ದೆಗೆ ಇಳಿಸಿ ಸರದಿಯಲ್ಲಿ ಗುತ್ತು ಮಾಗಣೆ ಮತ್ತು ಎಲ್ಲಾ ಗ್ರಾಮದ ಎತ್ತುಗಳನ್ನು ಕಂಬಳಗದ್ದೆಯಲ್ಲಿ ಓಡಿಸಲಾಗುತ್ತದೆ. ಆದರೆ ಅರಮನೆಯ ಕೋಣಗಳು ಸ್ಪರ್ಧಿಸುವಂತಿಲ್ಲ.

ಎರಡನೆಯ ದಿನ ‘ಕಂಬಳಕೋರಿ’ ಈ ದಿನ ಅರಸರು ಪಲ್ಲಕ್ಕಿಯಲ್ಲಿ ಬಂದು ಕಂಬಳ ವೀಕ್ಷಿಸುತ್ತಾರೆ. ಹಿಂದಿನ ದಿನದಂತೆಯೇ ಮೊದಲು ಅರಮನೆ ಕೋಣಗಳನ್ನು ಓಡಿಸಿದ ನಂತರ ಹಿಂದಿನ ದಿನದ ಕಂಬಳದ ಪೂರ್ಣ ಮಾಹಿತಿಯೊಂದಿಗೆ ಕಂಬಳ ಮುಂದುವವರಿಯುತ್ತದೆ. ಮೂರನೆಯ ದಿನ ಕಂಬಳ ನಡೆಯುವುದಿಲ್ಲ ಬದಲಾಗಿ ಇಲ್ಲಿನ ಇನ್ನೊಂದು ಜಾನಪದ ಕ್ರೀಡೆಯಾದ ಕೋಳಿ ಅಂಕವನ್ನು ಮಾಡುತ್ತಾರೆ. ಒಂದು ನಿಗದಿತ ಸ್ಥಳದಲ್ಲಿ ಕೋಳಿ ಅಂಕವನ್ನು ನಡೆಸುವ ಸೂಚ್ಯಂಕವಾಗಿ ಮರದ ಗೂಟವನ್ನು ನೆಟ್ಟಿರುತ್ತಾರೆ. ಕೋಳಿ ಅಂಕದ ದಿನ ಅರಮನೆಯಿಂದ ಅಜಿಲರು ಬಂದು ಆ ಗೂಟವನ್ನು ಕಿತ್ತು ಕೋಳಿ ಅಂಕಕ್ಕೆ ಚಾಲನೆ ನೀಡುತ್ತಾರೆ. ಅದರಲ್ಲಿ ಗೆದ್ದಂತಹ ತಂಡಗಳಿಗೆ ಬಹುಮಾನ ವಿತರಿಸಲಾಗುತ್ತದೆ.

ನಂತರದ ಪರ್ವಗಳಲ್ಲಿ ‘ನಾಲೇರು ಕಂಬಳ’ ಎಂದು ಆಚರಿಸುತ್ತಾರೆ. ಆದರೆ ಇದು ಅರಸು ಕಂಬಳದ ರೀತಿಯಲ್ಲ ಬದಲಾಗಿ ಇದು ಅಜಿಲರ ಸೀಮೆಯ ಗದ್ದೆಯ ಉಳುಮೆ ಆರಂಭವಾಗುವುದನ್ನು ಸೂಚಿಸುವ ಹಬ್ಬ.ವಿಶೇಷವಾಗಿ ಗಣೇಶ ಚತುರ್ಥಿಯ ಅವಧಿಯಲ್ಲಿ ಮಾಡಲಾಗುತ್ತದೆ. ಹೊಸತಾಗಿ ತಯಾರಿಸಿದ ನೊಗ ನೇಗಿಲನ್ನು ದೇವರ ಸನ್ನಿಧಿಯಲ್ಲಿಟ್ಟು ಗದ್ದೆಉತ್ತು, ಬೀಜ ಬಿತ್ತಿ ಅಡಿಕೆ ಮರದ ಹೂವನ್ನು ನೆಟ್ಟು ಬಹಳ ಭಕ್ತಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ಅರಮನೆಯಲ್ಲಿ ನವರಾತ್ರಿ ಉತ್ಸವವನ್ನು ಆಚರಿಸುತ್ತಾರೆ. ಅರಮನೆಯ ಮುಂಭಾಗದಲ್ಲಿ ಪಲ್ಲಕ್ಕಿಯನ್ನು ಇಳಿಸುತ್ತಾರೆ. ಇಡೀ ಅರಮನೆಯನ್ನು ದೀಪದಿಂದ ಅಲಂಕರಿಸಲಾಗುತ್ತದೆ. ಆಯುಧ ಪೂಜೆಯಂದು ಅರಮನೆಯಲ್ಲಿರುವ ಎಲ್ಲಾ ಪುರಾತನ ಆಯುಧಗಳನ್ನು ಹೊರಗಿಟ್ಟು ವಿಶೇಷ ಪೂಜೆ ನೆರವೇರುತ್ತದೆ. ಹಾಗೆಯೇ ದೀಪಾವಳಿಯನ್ನು ಕೂಡ ಬಹಳ ವಿಜ್ರಂಭಣೆಯಿಂದ ಆಚರಿಸುತ್ತಾರೆ. ಬಂದಂತಹ ಎಲ್ಲಾ ಊರ ಪರವೂರ ಬಾಂಧವರಿಗೆ ವಿಶೇಷವಾಗಿ ಸತ್ಕರಿಸಲಾಗುತ್ತದೆ.ಅಳದಂಗಡಿ ಅಜಿಲರ ತಲೆಮಾರು ಇಂದಿಗೂ ಶಾಶ್ವತವಾಗಿಯೇ ಉಳಿದಿದೆ, ಪಟ್ಟಾಭಿಷೇಕವೂ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಅಜಿಲ ಮನೆತನದಲ್ಲಿ ಪಟ್ಟಾಭಿಷೇಕವು ತೀರಿಕೊಂಡ ಅರಸನ, ಅಳಿಯನಿಗೆ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ಶತಮಾನದಿಂದ(ಸ್ವಾತಂತ್ರ್ಯೋತ್ತರ)ಹಿರಿಯ ಅರಸರಿಂದ ಹಿರಿಯ ಮಗನಿಗೆ ನೀಡಲಾಗುತ್ತದೆ.

ಅಜಿಲ ಮನೆತನ : ವ್ಯಾಪಕವಾದ ಅಕ್ಕಿಯ ಉತ್ಪಾದನೆಗಾಗಿ ಈ ಹೆಸರು ಬಂದಿದೆ ಎನ್ನುತ್ತಾರೆ
ಪಟ್ಟಾಭಿಷೇಕ ಕ್ರಮ

ಈ ಪದ್ದತಿಯನ್ನು ಬದಲಾಯಿಸಿದ್ದು ಕೇವಲ ಈ ಪರಂಪರೆಯ ಉಳಿವಿಕೆಗಾಗಿ. ಪಟ್ಟಾಭಿಷೇಕದ ವಿಧಿವಿದಾನಗಳು ಹಿರಿಯ ಅರಸ ತೀರಿಕೊಂಡಂದಿನಿಂದ ಆರಂಭವಾಗುತ್ತದೆ, ಅಜಿಲ ವಂಶಸ್ಥರಲ್ಲಿ ವಂಶಾವಳಿಯಿಂದ ಬಂದಂತಹ ರಾಜ ಉಂಗುರವೊಂದಿದೆ. ಈ ಉಂಗುರವು ಪಟ್ಟಾಭಿಷೇಕವಾಗುವ ಅರಸನಿಗೆ ಒಮ್ಮೆ ತೊಡಿಸಿದರೆ ಮತ್ತೆ ತೆಗೆಯುವಂತಿಲ್ಲ. ಮೃತ ಅರಸನ ಕೈಯಲ್ಲಿರುವಂತಹ ರಾಜ ಉಂಗುರವನ್ನು ಮಗ(ರಾಜಕುಮಾರ)ನ ಬಲಗೈಯ ನಡು ಬೆರಳಿಗೆ ನೂಲಿನ ಮುಖಾಂತರ ಗುರಿಕಾರರು ರವಾನಿಸುತ್ತಾರೆ. ನಂತರ ರಾಜಕುಮಾರನು ಅಲ್ಲಿ ನಿಲ್ಲುವಂತಿಲ್ಲ. ತಿರುಗಿ ಬಸದಿಗೆ ಹೋಗಿ ಧ್ಯಾನಾಸಕ್ತನಾಗಬೇಕು. ಯಾವುದೇ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಮೃತದೇಹದ ಎಲ್ಲಾ ವಿಧಿವಿಧಾನಗಳನ್ನು ಪೂರೈಸಿದ ನಂತರ ಪಟ್ಟಾಭೀಷೇಕ ನಡೆಯುತ್ತದೆ.

ಪಟ್ಟಾಭೀಷೇಕದ ಸಂದರ್ಭದಲ್ಲಿ ನಾಲ್ಕು ಗುತ್ತಿನವರಿಗೂ ಒಂದೊಂದು ಕೆಲಸವಿರುತ್ತದೆ. ಅರಸರನ್ನು ಪಟ್ಟದಲ್ಲಿ ಕೂರಿಸುವಂತಹದ್ದು, ಪಟ್ಟದುಂಗುರ ತೊಡಿಸುವುದು, ಪಟ್ಟದ ಕತ್ತಿಧಾರಣೆ ಮಾಡುವುದು, ಪಟ್ಟದ ಹೆಸರುಗಳಾದ ‘ಪಾಂಡ್ಯಪ್ಪ’ ಅಥವಾ ‘ತಿಮ್ಮರಸ’ಗಳನ್ನು ಸೂಚಿಸುವುದು. ಇತ್ಯಾದಿ.ಈ ಮನೆತನಕ್ಕೆ ‘ಅಜಿಲ’ ಎಂಬ ಹೆಸರು ಬರಲು ಕಾರಣ:ಅಕ್ಕಿಯ ಉತ್ಪಾದನೆಗೆ ಪ್ರೋತ್ಸಾಹಸಂಪದ್ಭರಿತವಾಗಿ ಹರಿಯುವ ಪಲ್ಗುಣಿ ನದಿಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಇಳುವರಿ ಯನ್ನು ಕಂಡು, ಅಕ್ಕಿಯ ಮೊದಲ ಅಕ್ಷರವಾದ ‘ಅ’ದಿಂದ ‘ಅಜಿಲ’ ಎಂದು ಕರೆಯಲ್ಪಟ್ಟಿತು ಎನ್ನುವ ಪ್ರತೀತಿ ಇದೆ.

ವಂಶದ ಕುರಿತಾದ ಐತಿಹಾಸಿಕ ದಾಖಲೆ : ಅಜಿಲ ಮನೆತನಕ್ಕೆ ಸಂಬಂಧಿಸಿದ ದಾಖಲೆಗಳು, ಕುರುಹುಗಳು ಕಾಣಸಿಗುತ್ತವೆ. ಅಳದಂಗಡಿಯಲ್ಲಿ ಐತಿಹಾಸಿಕ ದಾಖಲೆಗಳಾದ ಅರಮನೆ, ಬಸದಿ, ಬರಾಯದ ಅರಮನೆ. ಬರಾಯದ ಅರಮನೆ ಸ್ವಲ್ಪ ಮಟ್ಟಿಗೆ ಶಿಥಿಲಗೊಂಡಿದ್ದರೂ ಅರಮನೆಯ ಕುರುಹುಗಳನ್ನು ಕಾಣಬಹುದು. ಅಳದಂಗಡಿಯ ಸೋಮನಾಥೇಶ್ವರಿ ದೇವಾಲಯ, ಹಾಗೂ ಗೋಮಟೇಶ್ವರ ಪ್ರತಿಮೆ ವೇಣೂರಿನಲ್ಲಿದೆ. ಅದರ ಅಕ್ಕ-ಪಕ್ಕದಲ್ಲಿ ಅಕ್ಕಂಗಳ ಬಸದಿ ಇದೆ. ಅದು ಮಧುರಕ್ಕಾದೇವಿಯ ಕಾಲದಲ್ಲಿ ಅವರಿಬ್ಬರೂ ಕಟ್ಟಿಸಿದ್ದಾಗಿವೆ. ಅಲ್ಲಿ ಅರಮನೆಯ ಕುರುಹುಗಳಾವುದು ಇಲ್ಲದಿದ್ದರೂ ಅರಮನೆಯ ತಳಪಾಯ ಕಾಣ ಸಿಗುತ್ತವೆ.

ಗುರಿಕಾರರ ನೇಮಕ : ಕೆಲವೊಂದು ಅರ್ಹತೆಯ ಮೇರೆಗೆ ಗಮನಿಸಿ ನಂತರ ತಮ್ಮ ಆಯ್ಕೆಯ ವ್ಯಕ್ತಿಯನ್ನು ಕರೆಯಿಸಿ ‘ಪಟ್ಟಿ’ ಎಂಬುದನ್ನು ಕೊಡುವುದು. ನಂತರ ಆ ವ್ಯಕ್ತಿಯು ಪ್ರತಿಜ್ಞೆಗಳನ್ನು ಮಾಡುವ ಕ್ರಮವಿದೆ. ಗುತ್ತಿಗೆದಾರರ ಕಾರ್ಯಗಳು: ಗುತ್ತಿಗೆದಾರರು ಪಟ್ಟಾಭಿಷೇಕದ ಅವಧಿಯಲ್ಲಿ ಉಂಗುರವನ್ನು ರವಾನಿಸುವುದು, ಪಟ್ಟದ ಕತ್ತಿಯನ್ನು ನೀಡುವುದು, ಹಾಗೆ ಹೊಸ ನಾಮ ವಾಚಿಸಿ ಅಧಿಕಾರ ಘೋಷಿಸುವ, ಅಧಿಕಾರ ಹೊಂದಿರುತ್ತಾರೆ.

ಹೊಸ ಹೆಸರು ನೀಡುವುದು : ಎಂದರೆ, ಪಟ್ಟಾಭಿಷೇಕದ ಸಂದರ್ಭದಲ್ಲಿ ಬಿರುದಿನ ಮೂಲಕ ಹೆಸರನ್ನು ಹೇಳುವುದು ಅಥವಾ ಒಬ್ಬ ಪ್ರಸಿದ್ಧ ಅರಸನ ಹೆಸರನ್ನು ಸೇರ್ಪಡೆಗೊಳಿಸುವುದು. ಸಾಂಪ್ರದಾಯಿಕ ವಿಧಿ ವಿಧಾನಗಳು : ಹಿಂದಿನ ಕಾಲದಿಂದಲೂ ಸಂಪ್ರದಾಯಬದ್ಧವಾಗಿಯೇ ನಡೆದುಕೊಂಡು ಬಂದಿರುವುದರಿಂದ, ಪಟ್ಟಾಭಿಷೇಕ ಹಾಗೂ ವಿಜಯದಶಮಿಯ ಹಬ್ಬವನ್ನು ಸಾಂಪ್ರದಾಯಿಕ ರೀತಿ ನೀತಿಗಳನ್ನು ಅನುಸರಿಸಿ, ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪಟ್ಟಾಭಿಷೇಕದ ವಿಧಿ ವಿಧಾನಗಳು : ಹಿರಿಯ ತಲೆಮಾರಿನಿಂದಲೂ ಪಟ್ಟಾಭಿಷೇಕ ಕಾರ್ಯಕ್ರಮ ಬಹಳ ಸುಸಜ್ಜಿತವಾಗಿ ನಡೆಯುತ್ತಾ ಬರುತ್ತಿದೆ. ಒಬ್ಬ ಅರಸ ತೀರಿಕೊಂಡಾಗ ಆತನ ಹಿರಿಯ ಮಗನಿಗೆ ಪಟ್ಟವಾಗುವುದು ಪದ್ದತಿ. ಶವವನ್ನು ವಿಧಿ ವಿಧಾನದಂತೆ ರಾಜ ಉಡುಪಿನಲ್ಲಿ ಅಲಂಕರಿಸುತ್ತಾರೆ. ನಂತರ ಪಟ್ಟದ ಉಂಗುರವನ್ನು ಮೃತ ರಾಜನ ಬೆರಳಿಗೆ ಆತನ ಮಗನ ಬೆರಳನ್ನು ಜೋಡಿಸಿ ನೂಲಿನ ಮುಖೇನ ಜಾರಿಸಿ ತೊಡಿಸುತ್ತಾರೆ. ಮತ್ತೆ ಗುರಿಕಾರರು ಅವರ ವಿಧಾನವನ್ನು ಮಾಡಿ ಮುಗಿಸುತ್ತಾರೆ.

ಅಜಿಲ ಮನೆತನ : ವ್ಯಾಪಕವಾದ ಅಕ್ಕಿಯ ಉತ್ಪಾದನೆಗಾಗಿ ಈ ಹೆಸರು ಬಂದಿದೆ ಎನ್ನುತ್ತಾರೆ
ಅರಮನೆಯ ಒಳಭಾಗ

ವಿಜಯದಶಮಿ ಹಬ್ಬದ ಆಚರಣೆ : ವಿಜಯದಶಮಿಯಂದು ಅರಸರು ಸ್ನಾನ ಮಾಡಿ ರಾಜ ಉಡುಪುಗಳನ್ನು ಧರಿಸಿ ಪಟ್ಟದ ಉಂಗುರವನ್ನು ದೇವರ ಸಾನಿಧ್ಯದಿಂದ ತಂದು ತೊಟ್ಟುಕೊಳ್ಳುತ್ತಾರೆ. ನಂತರ ಉಯ್ಯಾಲೆಯನ್ನು ಕೆಳಗಿಳಿಸಿ ಕುಳಿತುಕೊಂಡ ನಂತರ ಅಳದಂಗಡಿಯ ರಾಜ ಬೀದಿಯಲ್ಲಿ, ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗುತ್ತಾರೆ.

ಖಾಸಗಿ ದರ್ಬಾರ್ : ಅಳದಂಗಡಿಯ ಸುತ್ತಮುತ್ತಲಿನ ಪ್ರದೇಶದ ಜನರ ತೊಂದರೆಗಳನ್ನು ಗಮನಿಸಿ, ಪರಿಹಾರ ಸೂಚಿಸುವುದು ಮತ್ತು ಜಗಳ ವೈಮನಸ್ಸುಗಳಂತಹ ಸಂದರ್ಭದಲ್ಲಿ ನ್ಯಾಯ ತೀರ್ಮಾನಿಸುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

ಭಾಯಿ ದೂಜ್

ಭಾಯಿ ದೂಜ್: ಈ ದಿನದ ಆಚರಣೆಗಳು ರಕ್ಷಾ ಬಂಧನದ ಹಬ್ಬವನ್ನು ಹೋಲುತ್ತದೆ

ಶ್ರೀ ಸೋಮನಾಥ ದೇವಸ್ಥಾನ

ಶ್ರೀ ಸೋಮನಾಥ ದೇವಸ್ಥಾನ, ಸೋಮೇಶ್ವರ