in

ತುಳುವ ನಾಡಿನ ಅಮರ್ ಬೊಳ್ಳಿಳು, ಕೋಟಿ ಚೆನ್ನಯರು

ಕೋಟಿ ಚೆನ್ನಯ ತುಳುನಾಡಿನಲ್ಲಿ ತುಂಬ ಹೆಸರಾದ ಯೋಧರಾಗಿದ್ದು ಅವರನ್ನು ತುಂಬಾ ಮಂದಿ ದೈವ ಎಂದು ಆರಾಧಿಸುತ್ತಾರೆ. ಕೋಟಿ ಮತ್ತು ಚೆನ್ನಯ ಎಂಬ ಸೋದರರು ಯೋಧರಾಗಿದ್ದು ಹೋರಾಡಿ ಮಡಿದ ಕಥೆ ಮುಂದೆ ಅದುವೇ ಭೂತಾರಾಧನೆಯಾಯಿತು. ಇವರು ಪುತ್ತೂರು ತಾಲೂಕಿನ ಪಡುಮಲೆ ಎಂಬಲ್ಲಿ ಜನಿಸಿದರು.ತುಳುನಾಡಿನ ದಿವ್ಯ ಶಕ್ತಿಗೆ ಸೇರಿದ ದೇಯಿ ಬೈದೆತಿ(ಇವಳ ಮೂಲ ಹೆಸರು ಸ್ವರ್ಣ ಕೇದಗೆ) ಮಕ್ಕಳಾಗಿ ಜನಿಸಿದರು. ದೇಯಿಬೈದ್ಯೆತಿಯ ಹುಟ್ಟಿನ ಬಗ್ಗೆ ಜನಪದರು  ಕಥೆ ಹೆಣೆದಿದ್ದಾರೆ. ದೇವರ ಅನುಗ್ರಹದಿಂದ ಕೇಂಜವ ಹಕ್ಕಿಗಳ ಮೊಟ್ಟೆಯಿಂದ ಈಕೆ ಹುಟ್ಟಿಕೊಂಡವಳಂದು ಪಾಡ್ದಾನದಲ್ಲಿ ಹೇಳಿದೆ. ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿದ್ದ ಪೆಜನಾರ್ ಬ್ರಾಹ್ಮಣ ದಂಪತಿಗಳು ಈ ಮಗುವನ್ನು ಕಂಡು ತಮಗೆ ದೇವರು ಕರುಣಿಸಿದ ವರವೆಂದು ಭಾವಿಸಿ ಆಕೆ ಸ್ವರ್ಣಕೇದಗೆ ಎಂದು ನಾಮಕರಣ ಮಾಡಿ ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಮದುವೆಗೆ ಮೊದಲೆ ಋತುಮತಿಯಾಗುವ ಕಾರಣ ಕೇದಗೆಯ ಕಣ್ಣಿಗೆ ಬಟ್ಟೆ ಕಟ್ಟಿ ಸಂಕಮಲೆ ಕಾಡಿನಲ್ಲಿ ಬಿಟ್ಟು ಬರುತ್ತಾನೆ. ಅಲ್ಲಿ ಮೂರ್ತೆದಾರಿಕೆ ನಡೆಸುತ್ತಿದ್ದ ಸಾಯನ ಬೈದ್ಯನು ಅವಳನ್ನು ಕಂಡು ಮನೆಗೆ ಕರೆದುಕೊಂಡು ಬಂದು ಸಹೋದರಿಯಂತೆ ಸಾಕಿ ತನ್ನ ಭಾವ ಕಾಂತಣ್ಣ ಬೈದ್ಯನಿಗೆ ಮದುವೆ ಮಾಡಿ ಕೊಡುವನು.

ಬೈದೆತಿ ತಂದೆ ತಾಯಿ ಗರ್ಭಿಣಿಯಾಗಿದ್ದಾಗಲೇ ತೀರಿಕೊಂಡಿದ್ದರು. ಪಡುಮಲೆ ಬಲ್ಲಾಳರಿಗೆ ಮೃಗವನ್ನು ಬೇಟೆಯಾಡುವ ಸಮಯದಲ್ಲಿ ಕಾಲಿಗೆ ಕಾಸರಕದ ಮುಳ್ಳುತಾಗಿ ಗಾಯ ಉಲ್ಬಣಿಸಿ, ಪ್ರಾಣಾಂತಿಕ ಸ್ಥಿತಿಯಲ್ಲಿ ನೋವಿನಿಂದ ಅವರು ಒದ್ದಾಡುತ್ತಾರೆ. ಯಾವ ವೈದ್ಯರ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಆಗ ಬಲ್ಲಾಳರು ದೇಯಿಯನ್ನು ಕರೆತರಲು ಓಲೆಮಾನಿಯನ್ನು ಕಳುಹಿಸುವರು. ಏಳು ತಿಂಗಳು ತುಂಬಿತ್ತು. ಆ ಸಮಯದಲ್ಲಿ ಅವಳು ತನ್ನ ವೃತ್ತಿಗೆ ಅನುಗುಣವಾಗಿ ಅರಸರ ಕರೆಯನ್ನು ತಿರಸ್ಕರಿಸಲಾಗದೆ ಬಲ್ಲಾಳರ ಚಿಕಿತ್ಸೆಗಾಗಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಲ್ಲಾಳರು ಕಳುಹಿಸಿದ್ದ ಪಲ್ಲಕಿಯನ್ನು ಬಳಸದೆ ಅದಕ್ಕೆ ಗೌರವ ಸೂಚಕವಾಗಿ ಬಾಳೆ ಎಲೆಯಲ್ಲಿ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ ಇಟ್ಟು ಕಾಲ್ನಡಿಗೆಯಲ್ಲಿ ಹೊರಡುತ್ತಾಳೆ. ಪಾಡ್ದನದಲ್ಲಿ ಹೇಳುವಂತೆ ಮುಂದಿನಿಂದ ಗಂಡ ,  ಹಿಂದಿನಿಂದ ಅಣ್ಣ ಸಾಯನ ಬೈದ್ಯನ ಜೊತೆಯಲ್ಲಿ ಪಡುಮಲೆಗೆ ಪ್ರಯಾಣ ಬೆಳೆಸುತ್ತಾಳೆ. ಬೀಡಿನಲ್ಲಿ ದೇಯಿಯು ಬಲ್ಲಾಳರ ಕಾಲಿನ ಗಾಯಕ್ಕೆ ಚಿಕಿತ್ಸೆ ಪ್ರಾರಂಭಿಸುತ್ತಾಳೆ. ಆ ಕಾಲದ ವೈದ್ಯ ಪದ್ಧತಿಯಂತೆ ಮೊದಲು ಕುಲ ದೈವಕ್ಕೆ ವಂದಿಸಿ ಬಲ್ಲಾಳರ ಕಾಲಿಗೆ ರಕ್ಷೆಯ ನೂಲು ಕಟ್ಟುತ್ತಾಳೆ. ಅನಂತರ ಚಿಕಿತ್ಸೆ ಪ್ರಾರಂಭಿಸುತ್ತಾಳೆ.ಚಿಕಿತ್ಸೆ ಬಗ್ಗೆ ಪಾಡ್ದಾನದಲ್ಲಿ ಈ ರೀತಿ ಹೇಳಿದೆ “ದೇಯಿಯು ಒಂದು ವರ್ಷದಲ್ಲಿ ನೀಡಬೇಕಾದ ಚಿಕಿತ್ಸೆಯನ್ನು ಮೂವತ್ತು ಅರುವತ್ತು ದಿನಗಳಲ್ಲಿ ಮಾಡುವಳು ” ಎಂದು ಹೇಳಿದೆ. ಬಲ್ಲಾಳರ ಕಾಲಿನ ಗಾಯ ಗುಣವಾಗುತ್ತಾದೆ. ಅವರು ಸಂತೋಷದಿಂದ ಆಕೆಗೆ ಆಭರಣ , ಸೀರೆ, ಕಾಣಿಕೆಗಳನ್ನು ನೀಡಿ ಗೌರವಿಸುತ್ತಾರೆ. ಇದರಿಂದಾಗಿ ಆಕೆಯ ಹೆರಿಗೆಯ ವ್ಯವಸ್ಥೆಯನ್ನು ಪೆರುಮಾಳು ಬಲ್ಲಾಳನು ತನ್ನ  ಅರಮನೆಯಲ್ಲೇ ಮಾಡಿಸಿದನು. ಅಲ್ಲದೆ ಮುಂದೆ ಭವಿಷ್ಯತ್ತಿನಲ್ಲಿ ಆಕೆ ಗಂಡುಮಗು ಹೆತ್ತರೆ ಅವರಿಗೆ ವ್ಯವಸಾಯ ಮಾಡಲು ಗದ್ದೆಯನ್ನು ನೀಡುವುದಾಗಿಯು ಮಾತು ನೀಡುತ್ತಾರೆ. ಅವಳಿ ಮಕ್ಕಳನ್ನು ಹಡೆದ ನಂತರ ಕೆಲವು ದಿನಗಳಲ್ಲೇ ದೇಯಿ ಬೈದತಿಯು ಅಸುನೀಗಿದಳು.

ಕೋಟಿ ಚೆನ್ನಯ ದೈವ ಕಾರ್ಯ ನಿಮಿತ್ತ ಭೂಮಿಗೆ ಬಂದವರು ಯಾವುದೆ ಜಾತಿಗೆ ಸಂಭಂಧ ಪಟ್ಟವರಲ್ಲ.

ತುಳುವ ನಾಡಿನ ಅಮರ್ ಬೊಳ್ಳಿಳು, ಕೋಟಿ ಚೆನ್ನಯರು

ಪೆರುಮಾಳು ಬಲ್ಲಾಳನು ಸಾಯಿನ ಬೈದ್ಯನೆಂಬುವವನಿಗೆ ಕೋಟಿ ಚೆನ್ನಯರನ್ನು ಸಾಕುವ ಜವಾಬ್ದಾರಿಯನ್ನು ಸಾಯಿನ ಬೈದನಿಗೆ ನೀಡಿದನು. ಮಕ್ಕಳು ದಷ್ಟಪುಷ್ಟರಾಗಿ ಬೆಳೆದರು. ಪೆರುಮಾಳ ಬಲ್ಲಾಳನ ಮಂತ್ರಿಯಾದ ಮಲ್ಲಯ್ಯ ಬುದ್ಯಂತನಿಗೆ ಮೊದಲಿನಿಂದಲೂ ದೇಯಿ ಬೈದೆತಿಯೊಂದಿಗೆ, ಕೋಟಿ ಚೆನ್ನಯರೊಂದಿಗೆ ವೈರವಿತ್ತು. ಮಲ್ಲಯ್ಯ ಬುದ್ಯಂತನ ಮಕ್ಕಳಿಗೂ ಕೋಟಿಚೆನ್ನಯರಿಗೂ ಚೆಂಡಾಟವಾಡುವಾಗ ಜಗಳವಾಗಿ ಈ ವಿರೋಧ ಮತ್ತೂ ಬೆಳೆಯಿತು. ಕೋಟಿಚೆನ್ನಯರು ಬೆಳೆದು ನಿಂತು ಕೃಷಿಕಾರ್ಯಗಳ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದರು. ಕೃಷಿಕಾರ್ಯದ ವಿಚಾರದಲ್ಲಿ ಜಗಳವುಂಟಾಗಿ ಚೆನ್ನಯನು ಮಲ್ಲಯ್ಯ ಬುದ್ಯಂತನನ್ನು ಕೊಂದನು. ಇದರಿಂದಾಗಿ ವಿಚಾರಣೆಗೆ ಕರೆಸಿದಾಗ ಕೋಟಿಚೆನ್ನಯ್ಯರು ನ್ಯಾಯದ ಮಾತುಗಳನ್ನಾಡಿ ಚಾವಡಿಯಿಂದ ಹೊರನಡೆದರು. ಪೆರುಮಾಳ ಬಲ್ಲಾಳನು ಅವರನ್ನು ಬಂಧಿಸಲು ಆಜ್ಞೆ ಹೊರಡಿಸಿದ. ಆದರೆ ಕೋಟಿಚೆನ್ನಯರು ಪೆರುಮಾಳು ಸೀಮೆಯ ಗಡಿಭಾಗದಿಂದ ಪಂಜಸೀಮೆಯನ್ನು ಪ್ರವೇಶಿಸಿದರು. ಪ್ರವೇಶಿಸುವಾಗ ಸುಂಕದ ಕಟ್ಟೆಯಲ್ಲಿ ಜ್ಯೋತಿಷಿಯೊಬ್ಬರಲ್ಲಿ ಮುಂದಿನ ದಿನಗಳ ಬಗೆಗೂ ಕೇಳಿದರು. ಪಂಜದಲ್ಲಿ ಕೋಟಿಚೆನ್ನಯರ ಅಕ್ಕ ಕಿನ್ನಿದಾರು ವಾಸಿಸುತ್ತಿದ್ದಳು. ಪಂಜದಲ್ಲಿ ಕಿನ್ನಿದಾರುವಿನ ಮನೆಯಲ್ಲಿ ಕೋಟಿಚೆನ್ನಯರು ಆಶ್ರಯ ಪಡೆದರು. ಪಂಜದ ಅಧಿಕಾರಿಗಳಲ್ಲೊಬ್ಬನಾದ ಚೆಂದುಗಿಡಿಯು ಕೋಟಿಚೆನ್ನಯರ ಏಳ್ಗೆಯನ್ನು ಸಹಿಸದೇ ಉಪಾಯವಾಗಿ ಅವರಿಬ್ಬರನ್ನೂ ಬಂಧಿಸಿದ. ತದೇಕಚಿತ್ತದಿಂದ ಕುಲದೇವತೆಯಾದ ಕೆರ್ಮಲೆಯ ಬ್ರಹ್ಮನನ್ನು ಸ್ತುತಿಸಿದ ಕೋಟಿಚೆನ್ನಯರು ಕಿಟಕಿಯ ಮೂಲಕ ಪಾರಾಗಿ ಎಣ್ಮೂರು ಸೀಮೆಯನ್ನು ತಲುಪಿದರು.

ಎಣ್ಮೂರು ಸೀಮೆಗೂ ಪಂಜಸೀಮೆಗೂ ಗಡಿವಿಚಾರದಲ್ಲಿ ಕಲಹವಿತ್ತು. ಪಂಜದ ಕೇಮರ ಬಲ್ಲಾಳನು ಗಡಿಕಲ್ಲನ್ನು ಮುಂದೆ ಹಾಕಿ ಎಣ್ಮೂರಿನ ಭೂಮಿಯನ್ನು ಕಬಳಿಸಿದ್ದ. ಕೋಟಿಚೆನ್ನಯರು ಮಣಭಾರದ ಗಡಿಕಲ್ಲನ್ನು ಪುನಃ ಸ್ವಸ್ಥಾನದಲ್ಲಿ ನೆಟ್ಟರು. ಆ ವೇಳೆಗಾಗಲೇ ಎಣ್ಮೂರು ಸೀಮೆಯಲ್ಲಿ ಕೋಟಿಚೆನ್ನಯರು ಪ್ರಸಿದ್ಧರಾಗಿದ್ದರು. ಎಣ್ಮೂರಿನ ದೇವಬಲ್ಲಾಳನು ಕೋಟಿಚೆನ್ನಯರನ್ನು ಸ್ವಾಗತಿಸಿ, ಕೋಟಿಚೆನ್ನಯರ ಆಶಯದಂತೆ ವಿವಾದಿತ ಸ್ಥಳದಲ್ಲಿ ಅವರಿಗೆ ವಾಸವಾಗಲು ಅನುಮತಿ ನೀಡಿದನು.

ಪಡುಮಲೆಯ ಪೆರುಮಾಳು ಬಲ್ಲಾಳನೂ, ಪಂಜದ ಕೇಮರ ಬಲ್ಲಾಳನೂ ಕೋಟಿಚೆನ್ನಯರನ್ನು ಬಂಧಿಸುವುದನ್ನೇ ಗುರಿಯಾಗಿರಿಸಿಕೊಂಡು ಎಣ್ಮೂರಿನ ಮೇಲೆ ದಂಡೆತ್ತಿ ಬಂದರು. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಕೋಟಿಚೆನ್ನಯರು ಎಣ್ಮೂರು ಶಿವದೇವಾಲಯದ ಅಂಗಣದಲ್ಲೇ ವೀರಮರಣವನ್ನಪ್ಪಿದರು. ಮರಣಾನಂತರ ಪೆರುಮಾಳು ಬಲ್ಲಾಳನೂ ಕೇಮರ ಬಲ್ಲಾಳನೂ ತುಂಬಾ ವ್ಯಥೆಪಟ್ಟರು. ಸುಂಕದ ಕಟ್ಟೆಯಲ್ಲಿ ಜ್ಯೋತಿಷ ಹೇಳಿದ್ದವರ ಕುಟುಂಬವೇ ಮುಂದೆ ಶಿವದೇವಾಲಯದ ಪೂಜೆ ಮಾಡಬೇಕು ಎಂಬುವುದು ಕೋಟಿಚೆನ್ನಯರ ಕೊನೆಯ ಆಸೆಯಾಗಿತ್ತು.

ಕೋಟಿಚೆನ್ನಯರ ಅನೇಕ ಸಮಾಜಮುಖಿ ಕೆಲಸಗಳು ಪಾಡ್ದನಗಳಲ್ಲಿ ಉಲ್ಲೇಖವಾಗಿವೆ. ಶ್ರೀಮಂತರ ಶೋಷಣೆಯ ವಿರುದ್ಧವಾಗಿ ಕೋಟಿಚೆನ್ನಯರು ಆರಂಭದಿಂದಲೇ ದನಿಯೆತ್ತಿದರು. ತಮ್ಮ ತೋಳ್ಬಲದಿಂದ ಅನೇಕ ಕೆರೆ ಕುಂಟೆಗಳನ್ನು ನಿರ್ಮಿಸಿದರು. ಕಾಡುಮೃಗಗಳಿಂದ ನಾಡಿನ ಕೃಷಿಯನ್ನು ರಕ್ಷಿಸಿದರು ಮೊದಲಾದಂತಹ ಅನೇಕ ವರ್ಣನೆಗಳಿವೆ. ಆದ್ದರಿಂದಲೇ ಕೋಟಿಚೆನ್ನಯರನ್ನು ದೈವತ್ವಕ್ಕೇರಿಸಿ ತುಳುನಾಡಿನ ಅನೇಕ ಕಡೆಗಳಲ್ಲಿ ಗರಡಿಗಳನ್ನು ಕಟ್ಟಿಸಲಾಗಿದೆ.

ಇಂದಿಗೂ ತುಳುನಾಡಿನ ಗರಡಿಗಳಲ್ಲಿ ನೇಮ , ಹರಕೆಗಳು ಶ್ರದ್ದಾ ಭಕ್ತಿಯಿಂದ ನಡೆಯುತ್ತದೆ. ಕೋಟಿ ಚೆನ್ನಯರ ಕಾರ್ಣಿಕಕ್ಕೆ ತುಳುನಾಡಿನ ಜನತೆಯೇ ಸಾಕ್ಷಿ. ಇಂದಿಗೂ ನಂಬಿಕೆ ಏನೆಂದರೆ ವರ್ಷಕೊಮ್ಮೆ ಜರುಗುವ ನೇಮದಲ್ಲಿ ನಮಗೆ ಬರುವ ಕಷ್ಟಗಳನ್ನು ಬಂದು ಪರಿಹರಸಿ ಹೋಗುತ್ತಾರೆ ಎಂದು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶಬರಿಮಲೆಗೆ ಹೆಣ್ಣುಮಕ್ಕಳು ಯಾಕೆ ಹೋಗಬಾರದು? ಎನ್ನುವುದಕ್ಕೆ ಶಾಸ್ತ್ರದ ಪ್ರಕಾರ ಕಾರಣ

ಗಂಗೆ ಭಗವಂತ ಶಿವನ ಪತ್ನಿಯೋ ಅಥವಾ ಮಾನವನಾದ ಶಂತನು ಪತ್ನಿಯೋ, ಗಂಗೆ ಭೂಮಿಗೆ ಬರಲು ಭಗೀರಥ ಪ್ರಯತ್ನ ಎನ್ನುವರು ಯಾಕೆ?