ಹಣ ಸಂಪಾದನೆ ಮಾಡಿ ಸಂಪತ್ತು ಸೃಷ್ಟಿಸುವ ಹಾಗೂ ಆ ಮೂಲಕ ಜೀವನವನ್ನು ಸುಖಮಯ ಹಾಗೂ ಅರ್ಥಪೂರ್ಣವಾಗಿ ಬದುಕುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಇದೆಲ್ಲವನ್ನು ಸಾಧಿಸಲು ಒಂದು ಪ್ರಮುಖ ಅಂಶವನ್ನು ಜೀವನದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕು.
ಹಣ ಹೂಡಿಕೆ ಮಾಡಲು ಬಯಸುವವರು ಕೇವಲ ಲಾಭ ಮಾತ್ರ ಗಮನಿಸದೇ ಮಾರುಕಟ್ಟೆ ಮತ್ತು ನಿಮ್ಮ ಹಣದ ಮೇಲೆ ಪರಿಣಾಮ ಬೀರುವ ಎಲ್ಲಾ ಅಂಶಗಳನ್ನು ಗಮನಿಸಿರಬೇಕು.
ಮಾರುಕಟ್ಟೆಯಲ್ಲಿ ಲಾಭದ ಬೆನ್ನತ್ತಿ ಹೂಡಿಕೆ ಮಾಡುತ್ತಿದ್ರೆ ಇದು ಒಂದು ದಿನಿ ನಿಮ್ಮ ಹಣವನ್ನು ಮುಳುಗಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಹೂಡಿಕೆ ಮಾಡುವಾಗ ಮಾರುಕಟ್ಟೆಯ ಇತರೆ ಅಂಶಗಳನ್ನು ಸಹ ಗಮನಿಸಬೇಕು.
ಅನೇಕರು ತಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲೇ ಹಣ ಇರಿಸುವುದನ್ನು ಅಥವಾ ಉಳಿಯ ಬಿಡುವುದನ್ನು ಹೂಡಿಕೆ ಎಂದು ಭಾವಿಸುತ್ತಾರೆ. ಇದಕ್ಕೆ ಕೇವಲ ಅಜ್ಞಾನವೊಂದೇ ಕಾರಣವಲ್ಲ; ನಮಗೆ ಬೇಕೆಂದಾಗ ಹಣ ನಮ್ಮ ಕೈಗೆ ಸಿಗುವಂತಿರಬೇಕು ಎಂಬುದೇ ಅವರ ವಾದವಾಗಿರುತ್ತದೆ. ಇದು ನಿಜವೂ ಹೌದು; ನಮ್ಮ ಕಷ್ಟಕ್ಕೆ ಒದಗಬೇಕಾದ ನಮ್ಮ ಹಣ ನಮಗೆ ಸಕಾಲದಲ್ಲಿ ಸಿಗದಿದ್ದರೆ ಏನು ಪುರುಷಾರ್ಥ ಸಾಧಿಸಿದಂತಾಯಿತು ಎಂಬುದೇ ಅನೇಕರ ಅಭಿಪ್ರಾಯ.
ವಾಸ್ತವವೇನೆಂದರೆ, ಉಳಿತಾಯದ ವಿಷಯದಲ್ಲಿ ಹೆಚ್ಚಿನ ಶಿಸ್ತು ರೂಢಿಸಿಕೊಂಡ ಹೂಡಿಕೆದಾರರಿಗೇ ಪ್ರತಿ ತಿಂಗಳು ನಿಶ್ಚಿತ ಮೊತ್ತವನ್ನು ದೀರ್ಘಾವಧಿವರೆಗೆ ಉಳಿತಾಯ ಮಾಡುವುದು ಕಷ್ಟವಾಗುತ್ತದೆ. ಇದಕ್ಕೆ ಕಾರಣಗಳು ಹಲವು ಇರಬಹುದು. ಹಾಗಾಗಿ, ಪ್ರತಿ ತಿಂಗಳ ನಿಮ್ಮ ದುಡಿಮೆಯ ಹಣ ಕೈಸೇರುವ ಮುನ್ನ ಸ್ವಲ್ಪ ಮೊತ್ತ ಉಳಿತಾಯಕ್ಕೆ ಹೋಗುವಂತಾದರೆ ಅದನ್ನು ನೀವು ತಪ್ಪದೇ ಪಾಲಿಸುತ್ತಾ ಹೋಗುತ್ತೀರಿ. ಆದ್ದರಿಂದ ದುಡಿಮೆಯ ಶೇ.1ರಷ್ಟು ಹೆಚ್ಚಿನ ಹಣವನ್ನು ಸ್ವಯಂ ಭವಿಷ್ಯನಿಧಿಯಲ್ಲಿ ತೊಡಗಿಸುವಂತೆ ನಿಮ್ಮ ಉದ್ಯೋಗದಾತರಿಗೆ ಮನವಿ ಮಾಡಿ.
ಭವಿಷ್ಯ ನಿಧಿಗೆ ಮಾಡಿಕೊಳ್ಳುತ್ತಿರುವ ವೇತನ ಕಡಿತ ಪ್ರಮಾಣ ಹೆಚ್ಚಿಸುವಂತೆ ನೀವು ಕೆಲಸ ಮಾಡುವ ಸಂಸ್ಥೆ, ಕಂಪನಿಯ ಹಣಕಾಸು ವಿಭಾಗಕ್ಕೆ ಮನವಿ ಸಲ್ಲಿಸಿ. ಇದೊಂದು ಸರಳವಾದ ಕ್ರಮ. ಹೆಚ್ಚುವರಿಯಾಗಿ ಕಡಿತವಾಗುವ ಹಣ ಸಣ್ಣ ಮೊತ್ತವಾಗಿರುತ್ತದೆ. ಅದರಿಂದ ಯಾರಿಗೂ ಅಡಚಣೆ ಆಗದು. ಆದರೆ, ದೀರ್ಘಾವಧಿಯಲ್ಲಿ ನಿಮಗೆ ಆದು ಆಸರೆ ಒದಗಿಸುತ್ತದೆ.
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ ಸಂಯೋಜನೆಯ ಲಾಭವನ್ನು ಪಡೆಯುತ್ತೀರಿ. ಆದ್ದರಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಬೇಕು. ಈ ದೀರ್ಘಾವಧಿ ಹೂಡಿಕೆ ಭವಿಷ್ಯದಲ್ಲಿ ನಿಮಗೆ ದೊಡ್ಡ ಮೊತ್ತ ನೀಡಲಿದೆ.
ಬ್ಯಾಂಕ್ ಶಾಖೆಗಳ ಸ್ಥಾನಕ್ಕೆ ಎಟಿಎಂಗಳು ಲಗ್ಗೆ ಇಟ್ಟಾಯ್ತು. ಎಟಿಎಂಗಳ ಸ್ಥಾನವನ್ನು ನೆಟ್ ಬ್ಯಾಂಕಿಂಗ್ ಕಬಳಿಸಿ ಆಯ್ತು. ಇದೀಗ ಮೊಬೈಲ್ ಬ್ಯಾಂಕಿಂಗ್‌ನದೇ ಕಾರುಬಾರು. ಗ್ರಾಹಕರ ಬ್ಯಾಂಕಿಂಗ್ ವ್ಯವಹಾರಗಳನ್ನು ಇದು ಅತಿಸುಲಭವಾಗಿಸಿದೆ. ಮೊಬೈಲ್ ಬ್ಯಾಂಕಿಂಗ್ ಸೇವೆಗೆ ನಿಮ್ಮ ಬ್ಯಾಂಕ್ ಶಾಖೆ ಎಷ್ಟು ಉತ್ತಮವಾಗಿದೆ ಎಂಬುದನ್ನು ದಢಪಡಿಸಿಕೊಳ್ಳಿ. ಈ ಸೇವೆಯಲ್ಲಿ ತೊಂದರೆ, ತಾಪತ್ರಯಗಳು ಇದ್ದರೆ, ಸಾಕಷ್ಟು ಸೌಲಭ್ಯಗಳು ಸಿಗದಿದ್ದರೆ, ಬ್ಯಾಂಕ್ ಬದಲಿಸಲು ಹಿಂದೆ ಮುಂದೆ ನೋಡಬೇಡಿ.
SIP ಮೂಲಕ ಹೂಡಿಕೆ ಮಾಡಲು ಪ್ರಾರಂಭಿಸಿದ್ರೆ ಹಣ ಪ್ರತಿವರ್ಷ ಶೇ.10ರಂತೆ ಬೆಳೆಯಬೇಕು. ಈ ಹೂಡಿಕೆ ನಿಮ್ಮ ಸಂಬಳ ಅಥವಾ ಆದಾಯದ ಮೇಲೆ ನಿರ್ಧರಿತವಾಗುತ್ತದೆ. ನಿಮ್ಮ ಎಲ್ಲಾ ಖರ್ಚು ವೆಚ್ಚ ಕಳೆದು ಹೂಡಿಕೆ ಮೊತ್ತ ಎಷ್ಟು ಎಂಬುದನ್ನು ನಿರ್ಧರಿಸಿಕೊಳ್ಳಿ.
ರಾಷ್ಟ್ರೀಯ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ನಿವೃತ್ತಿಯ ನಂತರ ನಿಮಗೆ ಸ್ಥಿರ ಆದಾಯವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಭಾರತದಲ್ಲಿ ಪಿಂಚಣಿ ನಿಧಿಗಳ ನಿಯಂತ್ರಕ ಸಂಸ್ಥೆಯಾಗಿರುವ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಇದನ್ನು ನಿರ್ವಹಿಸುತ್ತದೆ. NPS ಒಂದು ಹೈಬ್ರಿಡ್ ಹೂಡಿಕೆ ಯೋಜನೆಯಾಗಿದ್ದು, ಈಕ್ವಿಟಿ ಮತ್ತು ಸಾಲ ಎರಡರಲ್ಲೂ ಹೂಡಿಕೆ ಮಾಡುತ್ತದೆ. ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದರೆ, ನೀವು ಬದುಕುವವರೆಗೆ ಸ್ಥಿರ ಮಾಸಿಕ ಪಿಂಚಣಿಯನ್ನು ಪಡೆಯುತ್ತೀರಿ ಮತ್ತು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ಪಡೆಯುತ್ತೀರಿ. ನೀವು ಎನ್‌ಪಿಎಸ್‌ನಿಂದ ಒಂದೇ ಬಾರಿಗೆ ಮುಕ್ತಾಯದ ಮೊತ್ತದ ಶೇಕಡಾ 60 ರಷ್ಟು ಹಿಂಪಡೆಯಬಹುದು ಮತ್ತು ಉಳಿದ ಹಣದೊಂದಿಗೆ ಜೀವ ವಿಮಾ ಕಂಪನಿಯಿಂದ ವರ್ಷಾಶನವನ್ನು ಖರೀದಿಸಬೇಕು.
ಬ್ಯಾಂಕ್ ನಿರಖು ಠೇವಣಿಗಳು ಅಥವಾ ಎಫ್ ಡಿ ಗಳು ಜನಸಾಮಾನ್ಯರಿಗೆ ಅತ್ಯುತ್ತಮ ಹೂಡಿಕೆ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಏರುವ ಹಣದುಬ್ಬರವನ್ನು ಹತ್ತಿಕ್ಕುವ ಸಲುವಾಗಿ ಆರ್ಬಿಐ ಸಾಲದ ಮೇಲಿನ ಬಡ್ಡಿ ದರಗಳನ್ನು ಏರಿಸುವ ಠೇವಣಿ ಮೇಲಿನ ಬಡ್ಡಿ ದರವನ್ನೂ ಏರಿಸುತ್ತದೆ ಎಂಬುದು ಗಮನಾರ್ಹ. ಪ್ರಕೃತ 1ರಿಂದ 10 ವರ್ಷ ವರೆಗಿನ ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿ ಶೇ.7.50 ವರೆಗೂ ಇದೆ. ಕೆಲವು ಖಾಸಗಿ ಬ್ಯಾಂಕುಗಳ ಇನ್ನೂ ಹೆಚ್ಚು ಬಡ್ಡಿ ನೀಡುತ್ತವೆ. ಒಂದು ಲಕ್ಷ ರೂ. ವರೆಗಿನ ಠೇವಣಿ ಮೇಲೆ ವಿಮೆಯೂ ಇರುತ್ತದೆ.
ಹೂಡಿಕೆ ಮಾಡಿದ ನಂತರ ಸೆಕ್ಷನ್ 80 ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂಪಾಯಿಗಳ ತೆರಿಗೆ ಕಡಿತದ ಲಾಭವನ್ನು ಪಡೆದುಕೊಳ್ಳಿ. ದೀರ್ಘಾವಧಿಗೆ ನೀವು PPF ನಂತಹ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.
ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸುವುದು ಅತ್ಯಾಕರ್ಷಕವಾಗಿರುತ್ತದೆ. ಏಕೆಂದರೆ ಇಲ್ಲಿ ಒಂದು, ಮೂರು ಮತ್ತು ಐದು ವರ್ಷಗಳ ಹೂಡಿಕೆಯ ಮೇಲೆ ಸಿಗುವ ಇಳುವರಿಯು ಅನುಕ್ರಮವಾಗಿ ಶೇ.9, ಶೇ 12, ಮತ್ತು ಶೇ.15ರಷ್ಟು ಇರುತ್ತದೆ.
ಪ್ರತಿ ತಿಂಗಳು ಆಗುತ್ತಿರುವ ಖರ್ಚು-ವೆಚ್ಚಗಳ ಪಟ್ಟಿಯ ಮೇಲೆ ಕಣ್ಣಾಡಿಸಿ. ಅದರಲ್ಲಿ ಯಾವುದು ಅನಿವಾರ್ಯ ಮತ್ತು ಯಾವುದು ಅನಗತ್ಯ ಎಂಬುದನ್ನು ಪಟ್ಟಿ ಮಾಡಿ. ಅನಗತ್ಯ ವೆಚ್ಚಗಳನ್ನು ದೂರ ಮಾಡಿ. ಇದಕ್ಕೆ ದಢ ನಿಶ್ಚಯ ಅಗತ್ಯ. ನಿಮ್ಮದೇ ಆದ ಜೀವನ ಶೈಲಿಯನ್ನು ರೂಪಿಸಿಕೊಂಡರೆ, ಹಣ ಉಳಿಸುವುದು ಎಷ್ಟು ಸುಲಭ ಅಲ್ವಾ.
ಚಿನ್ನದ ಮೇಲಿನ ಹೂಡಿಕೆಗಳು 1, 2 ಮತ್ತು 3 ವರ್ಷದ ನೆಲೆಯಲ್ಲಿ ಶೇ.10, ಶೇ.5 ಮತ್ತು ಶೇ.2.7ರ ಅನುಕ್ರಮ ಇಳುವರಿಯನ್ನು ಕೊಡುತ್ತವೆ. ಆಭರಣ ರೂಪದಲ್ಲಿ ಚಿನ್ನವನ್ನು ಹೊಂದುವುದು ಹೂಡಿಕೆಯ ದೃಷ್ಟಿಕೋನದಿಂದ ದುಬಾರಿಯೂ ತುಟ್ಟಿಯೂ ಆಗಿರುತ್ತದೆ.
ನಾಣ್ಯ, ಬಿಸ್ಕತ್ತು, ಬಾರ್ ರೂಪದಲ್ಲಿ ಚಿನ್ನವನ್ನು ಹೂಡಿಕೆಯಾಗಿ ಇರಿಸಿಕೊಂಡು ವರ್ಷದ ಅವಧಿಯೊಳಗೆ ಮಾರಿದರೆ ಶೇ.10ರ ಲಾಭ ಸಿಗುವುದುಂಟು. ಚಿನ್ನವನ್ನು ಗೋಲ್ಡ್ ಇಟಿಎಫ್ ಸ್ಕೀಮ್ ಮೂಲಕವೂ ಅಭೌತಿಕವಾಗಿ ಖರೀದಿಸಬಹುದು.
ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ, ಪಾವತಿ ವಿಳಂಬವಾಗದಂತೆ ನೋಡಿಕೊಳ್ಳುವುದು ಅಗತ್ಯ. ಒಂದೆರಡು ದಿನ ಪಾವತಿ ವಿಳಂಬವಾದರೂ ಬಡ್ಡಿ ಮತ್ತು ದಂಡ ರೂಪದಲ್ಲಿ ಭಾರೀ ಮೊತ್ತ ತೆರಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ಸಿಗುವ ರಿವಾರ್ಡ್ ಪಾಯಿಂಟ್‌ಗಳನ್ನು ಆದಷ್ಟು ಬೇಗ ಸದುಪಯೋಗ ಮಾಡಿಕೊಳ್ಳಲು ಮರೆಯಬೇಡಿ. ಏಕೆಂದರೆ, ನೀವು ಖರೀದಿಸಿದ ವಸ್ತುವಿನ ಮೌಲ್ಯಕ್ಕೆ ನೀಡಿರುವ ಅಂಕಗಳು ತಡ ಮಾಡಿದರೆ ಆ ವಸ್ತುವಿನ ಬೆಲೆ ದುಬಾರಿಯಾಗುತ್ತದೆ. ಆಗ ರಿವಾರ್ಡ್ ಪಾಯಿಂಟ್‌ನ ಮೌಲ್ಯವೇ ಕುಸಿಯುತ್ತದೆ. ರಿವಾರ್ಡ್ ಪಾಯಿಂಟ್‌ಗಳ ಮೂಲಕ ಕಾರ್ಡ್‌ನ ಬಿಲ್ ಪಾವತಿಸಲು ಸಹ ಅವಕಾಶ ಇದೆ ಎಂಬುದನ್ನು ನೆನಪಿಡಿ.
ಧನ್ಯವಾದಗಳು.
GIPHY App Key not set. Please check settings