in ,

ಸ್ವಾತಿ ತಿರುನಾಳ್ ರಾಮ ವರ್ಮ ಇವರಿಂದ ಸಂಗೀತ ಕಲೆ ಇಂದಿಗೂ ಜೀವಂತ ಇದೆ ಅನ್ನಬಹುದು

ಸ್ವಾತಿ ತಿರುನಾಳ್ ರಾಮ ವರ್ಮ
ಸ್ವಾತಿ ತಿರುನಾಳ್ ರಾಮ ವರ್ಮ

೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದನ್ನು, ಆ ಒಂದು ಶತಮಾನಕಾಲವನ್ನು ‘ಸಂಗೀತ ಯುಗ’ ಎಂದೇ ಹೇಳಬೇಕು. ಆ ಒಂದುನೂರು ವರುಷ ಕಾಲದಲ್ಲೇ ದಕ್ಷಿಣ ಭಾರತದಲ್ಲಿ ಬಾಳಿ ಬದುಕಿದ ವಾಗ್ಗೇಯಕಾರರು, ಸಂಗೀತ ವಿದ್ವಾಂಸರು ಹಲವರು. ಅವರಲ್ಲಿ ಸ್ವಾತಿ ತಿರುನಾಳ್ ಸಹ ಒಬ್ಬರು.

ತಂದೆ ರಾಜಾ ರಾಜವರ್ಮರೊಂದಿಗೆ ಸ್ವಾತಿ ತಿರುನಾಳ್ ರಾಜವರ್ಮ. ಕರ್ನಾಟಕ ಸಂಗೀತರ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿಗಳು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಹಲವಾರು ವಿದ್ವಾಂಸರೆಲ್ಲ ಸ್ವಾತಿತ್ತಿರುನಾಳ್ ಅವರ ಸಮಕಾಲೀನರು. ಅಪಾರವಾದ ಸಂಗೀತಜ್ಞಾನವನ್ನೂ ಆಳವಾದ ಪಾಂಡಿತ್ಯವನ್ನೂ ಪಡೆದಿದ್ದ ಸ್ವಾತಿತಿರುನಾಳ್, ಸಂಗೀತ ಪ್ರಪಂಚಕ್ಕೆ ಅಮಿತಸೇವೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರ ನಂತರ ಸಂಗೀತ ಪ್ರಪಂಚ ಅವರನ್ನು ‘ಅಭಿನವ ತ್ಯಾಗರಾಜ’ ಎಂಬ ಹೆಸರಿನಿಂದ ಗೌರವಿಸಲಾರಂಭಿಸಿತು.

ಸ್ವತಃ ಮಹಾರಾಜನಾದರೂ ವಿದ್ಯೆಯ ದಾಹ ಇವರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಭಾರತದ ವಿವಿಧ ಭಾಷೆಗಳಲ್ಲಿ ಸಾಹಿತ್ಯಗಳನ್ನು ವ್ಯಾಸಂಗ ಮಾಡಬೇಕೆಂಬ ಹಂಬಲದಿಂದಲೇ ಅವರು ತಮ್ಮ ತಾಯ್ನುಡಿಯಾದ ಮಲಯಾಳದ ಜೊತೆಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್, ಪರ್ಷಿಯನ್ ಭಾಷೆಗಳ ವ್ಯಾಸಂಗ ಮಾಡಿದರಲ್ಲದೆ ಗಣಿತ ಶಾಸ್ತ್ರ, ರಾಜಕೀಯ ಶಾಸ್ತ್ರ, ವೇದಾಂತ ಮೊದಲಾದವುಗಳಲ್ಲಿಯೂ ಅಪಾರ ಜ್ಞಾನ ಹೊಂದಿದ್ದರು.

ಸ್ವಾತಿತಿರುನಾಳ್ ಅವರ ಕಾಲಕ್ಕೆ ಮೊದಲು, ಕೇರಳದಲ್ಲಿ ಸಂಗೀತವು ತನ್ನದೇ‌ ಆದ ರೀತಿಯಲ್ಲಿ ಬೆಳಗುತ್ತಿತ್ತು. ಅದಕ್ಕೆ ‘ಆಟಕಥಾ ಸಂಗೀತ’ ಎಂದು ಹೆಸರಿತ್ತು.

ಅಶ್ವಿನಿತ್ತಿರುನಾಳ್ ಎಂಬ ವಾಗ್ಗೇಯಕಾರರು ರಚಿಸಿದ ಕೆಲವು ಕೀರ್ತನೆಗಳು ಪ್ರಚಾರದಲ್ಲಿದ್ದವು. ರಾಮಪುರಂ ವಾರಿಯರ್ ಎಂಬುವವರು ರಚಿಸಿದ ಗೀತಗೋವಿಂದ ಮೊದಲಾದ ಕೃತಿಗಳೂ ಪ್ರಚಾರದಲ್ಲಿದ್ದವು. ಕಥಕ್ಕಳಿ ನೃತ್ಯದಲ್ಲೂ ಸಂಗೀತ ಬೆರೆತುಕೊಂಡಿತ್ತು. ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು.

ಪದ್ಮನಾಭಸ್ವಾಮಿಯ ಭಕ್ತರಾಗಿದ್ದ ಸ್ವಾತಿತ್ತಿರುನಾಳ್ ಅವರು, ಶ್ರೀರಾಮಭಕ್ತರೂ, ಕರ್ನಾಟಕ ಸಂಗೀತಕ್ಕೆ ಮಕುಟಪ್ರಾಯರೂ ಆಗಿರುವ ತ್ಯಾಗರಾಜರ ಮೆಚ್ಚುಗೆ ಪಡೆದಿದ್ದರೆಂದರೆ, ಅವರಿಗಿದ್ದ ಸಂಗೀತಜ್ಞಾನ, ರಚನಾಸಾಮರ್ಥ್ಯ ಎಷ್ಟರಮಟ್ಟಿನದು ಎಂದು ಊಹಿಸಬಹುದು.

ಸ್ವಾತಿ ತಿರುನಾಳ್ ರಾಮ ವರ್ಮ ಇವರಿಂದ ಸಂಗೀತ ಕಲೆ ಇಂದಿಗೂ ಜೀವಂತ ಇದೆ ಅನ್ನಬಹುದು
ತಂದೆ ರಾಜಾ ರಾಜವರ್ಮರೊಂದಿಗೆ ಸ್ವಾತಿ ತಿರುನಾಳ್ ರಾಜವರ್ಮ

ತಿರುವಾಂಕೂರು ಅರಸು ಮನೆತನದಲ್ಲಿ ೧೮೧೩ನೇ ಇಸವಿಯ ಏಪ್ರಿಲ್ ೧೬ನೇ ತಾರೀಖು ಸ್ವಾತಿತ್ತಿರುನಾಳ್ ಅವರು ಜನಿಸಿದರು. ಹುಟ್ಟುವಾಗಲೇ ಮಕುಟ ಧರಿಸುವ ಯೋಗ ಇವರಿಗಾಯಿತು. ಇವರ ಹಿಂದಿನ ದೊರೆ ಬಾಲರಾಮವರ್ಮ ಮಹಾರಾಜರ ಕಾಲ ೧೮೧೧ನೇ ಇಸವಿಗೆ ಮುಗಿದು ಅವರಿಗೆ ಗಂಡು ಸಂತಾನವಿಲ್ಲದಿದ್ದರಿಂದ ಅವರ ತಂಗಿ ರಾಣಿ ಸೇತುಕ್ಷ್ಮಿಬಾಯಿಯೇ ಗದ್ದುಗೆ ಏರಿದರು. ಇವರು ಶ್ರೀ ಪದ್ಮನಾಭಸ್ವಾಮಿಯ ಅನನ್ಯ ಭಕ್ತರು. ಆ ಸ್ವಾಮಿಯ ಅನುಗ್ರಹದಿಂದ ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಕುಮಾರನೇ ಸ್ವಾತಿ ತಿರುನಾಳ್.

ಚಿಕ್ಕಂದಿನಲ್ಲೇ ಮಾತೆಯನ್ನು ಕಳೆದುಕೊಂಡ ಸ್ವಾತಿತ್ತಿರುನಾಳ್ ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದರು. ಶುಕ್ಲ ಪಕ್ಷದ ಚಂದ್ರನಂತೆ ಇವರ ದೇಹ, ಮನಸ್ಸು, ಬುದ್ಧಿ ಎಲ್ಲವೂ ಬೆಳೆದವು, ಬೆಳಗಿದವು. ಬಾಲ್ಯದಲ್ಲೇ ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಸಾಹಿತ್ಯ, ಅಂಗಸಾಧನೆ ಕಲೆ, ಯುದ್ಧಕಲೆ, ಹೀಗೆ ಎಲ್ಲದರಲ್ಲೂ ಮಹಾಮೇಧಾವಿ ಎನಿಸಿಕೊಂಡರು.

೧೬ನೇ ವಯಸ್ಸಿನಲ್ಲಿ, ಚಿಕ್ಕಮ್ಮ ಗೌರಿ ಪಾರ್ವತಿಬಾಯಿ ಅವರು ತಮ್ಮ ಅಮೃತ ಹಸ್ತದಿಂದ ಸ್ವಾತಿತ್ತಿರುನಾಳ್ ಅವರಿಗೆ ಮಕುಟಾಭಿಷೇಕ ಮಾಡಿದರು.

ಮಹಾದೈವಭಕ್ತರೂ, ಚತುರರೂ, ರಾಜತಂತ್ರಜ್ಞರೂ ಆಗಿದ್ದ ಇವರು ರಾಜ್ಯಭಾರವನ್ನು ಅದ್ಭುತವಾದ ರೀತಿಯಲ್ಲಿ ನಿರ್ವಹಿಸಿದರು. ಕಲಾವಿದರಿಗೆ ಇವರು ಕೊಡಿತ್ತಿದ್ದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅನೇಕ ಸಂಗೀತಗಾರರಿಗೆ, ಕಲಾವಿದರಿಗೆ ಸ್ವತಃ ಧನಸಹಾಯ ನೀಡಿ ವಿದ್ಯೆಕಲಿಸುವ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿಭೆ ಇರುವವರಿಗೆ ವಿಶೇಷ ಗೌರವ ಸಲ್ಲಿಸಿ ಪ್ರಶಸ್ತಿ ನೀಡುತ್ತಿದ್ದರು.

ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ತಮಿಳು ದೇಶಗಳಿಂದೆಲ್ಲ ಸಂಗೀತ ವಿದ್ವಾಂಸರನ್ನು ಕರೆಸಿ ಗೌರವಿಸುತ್ತಿದ್ದರು. ಅವರಲ್ಲಿ ಹಲವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡಿದ್ದರು. ಇವರ ಆಳ್ವಿಕೆಯಲ್ಲಿ ರಾಜ್ಯವು ಸಂಪತ್ಸಮೃದ್ಧವಾಗಿತ್ತಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳಾದವು.

ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬಿ ಮುದಲಿಯಾರ್, ವಡಿವೇಲು, ಮೇರುಸ್ವಾಮಿ, ಕನ್ನಯ್ಯ, ಅನಂತಪದ್ಮನಾಭಗೋಸ್ವಾಮಿ, ಗೋವಿಂದಮಾರಾರ್ ಎಂಬುವವರು ಪ್ರಮುಖರು. ಪ್ರಸಿದ್ಧ ಸಾಹಿತಿಗಳಾದ ಕೋಯಿಲ್ ತಂಬುರಾನ್, ಇರಯಿಮ್ಮನ್ ತಂಬಿ, ರಾಮವಾರಿಯರ್ ಅವರುಗಳೂ ಇದ್ದರು.

ಸ್ವಾತಿ ತಿರುನಾಳ್ ರಾಮ ವರ್ಮ ಇವರಿಂದ ಸಂಗೀತ ಕಲೆ ಇಂದಿಗೂ ಜೀವಂತ ಇದೆ ಅನ್ನಬಹುದು
ಸ್ವಾತಿ ತಿರುನಾಳ್ ರಾಜವರ್ಮ

ಸ್ವಾತಿತಿರುನಾಳ್ ಅವರೇ ಕೇರಳದಲ್ಲಿ ಹರಿಕಥೆ ಸಂಪ್ರದಾಯವನ್ನು ರೂಢಿಗೆ ತಂದವರು. ಸಂಗೀತ ಮತ್ತು ಸಾಹಿತ್ಯದ ಪ್ರಚಾರಕ್ಕೆ ಇದೊಂದು ಮುಖ್ಯವಾದ ಸಾಧನವೆಂಬುದೇ ಅವರ ಉದ್ದೇಶವಾಗಿತ್ತು. ಇದಕ್ಕಾಗಿಯೇ ‘ಕುಚೇಲೋಪಾಖ್ಯಾನ’, ‘ಅಜಮಿಳೋಪಾಖ್ಯಾನ’ ಎಂಬ ಎರಡು ಕಥೆಗಳನ್ನು ಸಂಸ್ಕೃತದಲ್ಲಿ ರಚಿಸಿದರು. ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ‘ಹರಿಕಥೆ ಸಂಪ್ರದಾಯ’ ೧೯ನೇ ಶತಮಾನದಲ್ಲಿ ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆಯಿತು.

ಈ ಮೊದಲೇ ಹೇಳಿರುವಂತೆ ಅನಂತಪದ್ಮನಾಭಗೋಸ್ವಾಮಿ ಎಂಬ ಪ್ರಸಿದ್ಧ ಹರಿಕಥೆ ಭಾಗವತರು, ತಂಜಾವೂರಿನ ಮಹಾರಾಜರಾದ ಶರಭೋಜಿಯವರ ಆಸ್ಥಾನದಲ್ಲಿದ್ದರು. ಸ್ವಾತಿತ್ತಿರುನಾಳ್ ಅವರು ಭಾಗವತರನ್ನು ಆಹ್ವಾನಿಸಿ, ಗೌರವಿಸಿ, ತಮ್ಮ ‘ಗುರು’ ಎಂದೇ ಭಾವಿಸಿ, ಅವರು ರಚಿಸಿದ ಎರಡು ಉಪಾಖ್ಯಾನಗಳನ್ನು ಭಾಗವತರಿಗೆ ಅರ್ಪಿಸಿ, ಕಥೋಪನ್ಯಾಸ ಮಾಡಿ ಅನುಗ್ರಹಿಸಬೇಕೆಂದು ಕೋರಿದರು. ‘ಉತ್ಸವ ಪ್ರಬಂಧ’ ಎಂಬ ಮತ್ತೊಂದು ಕೃತಿಯನ್ನು ಸ್ವಾತಿತ್ತಿರುನಾಳ್ ರಚಿಸಿದರು.

ಕೇರಳದಲ್ಲಿ ಇವರ ಕಾಲದಲ್ಲಿದ್ದ ಸಂಗೀತ ಸಂಪ್ರದಾಯಕ್ಕೆ ‘ಸೋಪಾನ ಸಂಪ್ರದಾಯ’ ಎಂದು ಹೆಸರಿತ್ತು. ಹಿಂದೂಸ್ತಾನಿ ಸಂಗೀತದ ಕುರಿತು ಆಗ ಅಲ್ಲಿಯವರಿಗಿನ್ನೂ ತಿಳಿದಿರಲಿಲ್ಲ. ಆ ಕಾರಣಕ್ಕೇ ತಂಜಾವೂರಿಗೆ ಹಿಂದೂಸ್ತಾನಿ ಸಂಗೀತವನ್ನು ಪರಿಚಯಿಸಿದ ರಂಗಯ್ಯಂಗಾರರನ್ನೂ, ರಘುನಾಥರಾಯರೆಂಬ ವೈಣಿಕರನ್ನೂ, ಸಾರಂಗಿ ವಿದ್ವಾನ್ ಚಿಂತಾಮಣಿ ಭಾಗವತರನ್ನೂ ಗೌರವಿಸಿ ಆದರದಿಂದ ಬರಮಾಡಿಕೊಂಡರು.

ವಾಗ್ಗೇಯಕಾರರ ಶ್ರೇಣಿಯಲ್ಲಿ ಸ್ವಾತಿತಿರುನಾಳ್ಮ ಹಾರಾಜರಿಗೆ ವಿಶೇಷ ಸ್ಥಾನವಿದೆ. ಹಲವಾರು ಭಾಷೆಗಳಲ್ಲಿ ಅವರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಸುಮಾರು ೬೦೦ ಕೀರ್ತನೆಗಳು ಈಗಾಗಲೇ ಗ್ರಂಥರೂಪದಲ್ಲಿ ಬಂದಿವೆ.

ಇವರ ರಚನೆಗಳು, ಕೀರ್ತನೆಗಳು, ಪದ, ವರ್ಣ, ತಿಲ್ಲಾನ, ಪ್ರಬಂಧಗಳೆಂಬ ಐದು ಭಾಗಗಳಿವೆ. ಅವರ ನವರತ್ನಮಾಲಿಕಾ, ನವವಿಧ ಭಕ್ತಿ ಮಂಜರಿ ಮೊದಲಾದವುಗಳಿಗೆ ವಿಶಿಷ್ಟ ಸ್ಥಾನವಿದೆ. ಕೇವಲ ಕೀರ್ತನೆಗಳೇ ಮುನ್ನೂರಕ್ಕೂ ಹೆಚ್ಚಿವೆ. ನೃತ್ಯಕ್ಕಾಗಿಯೇ ಮೀಸಲಿಡುವಂತೆ ಶೃಂಗಾರರಸ ಪ್ರಧಾನವಾದ ಅನೇಕ ಪದಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಆತ್ಮ-ಪರಮಾತ್ಮರ ಸಂಬಂಧವು, ನಾಯಕಿ-ನಾಯಕರ ಸಂಬಂಧವಾಗಿವೆ. ತಿರುವಾಂಕೂರು ರಾಜ ಮನೆತನದ ಕುಲಸ್ವಾಮಿ ಶ್ರೀ ಪದ್ಮನಾಭನೇ ನಾಯಕ! ಉದಾ: ‘ಪನ್ನಗೇಂದ್ರಶಯನ’ ಎಂಬ ಪದದ ಎಂಟು ಚರಣಗಳಲ್ಲಿ ನಾಯಕಿಯ ಅಂತರ್ಭಾವವನ್ನು ಅದ್ಭುತ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಜತಿಸ್ವರ, ಸ್ವರಜತಿ, ತಾನವರ್ಣ, ಪದವರ್ಣ ಮೊದಲಾದವುಗಳನ್ನು ಇವರು ರಚಿಸಿದ್ದಾರೆ. ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳಂತೆ ಸ್ವಾತಿತಿರುನಾಳ್ ಅವರೂ ಕೃಗುಚ್ಛವನ್ನು ರಚಿಸಿದ್ದಾರೆ. ಅದುವೇ ‘ನವರಾತ್ರಿ ಕೀರ್ತನೆಗಳು’.

ಇವರು ತಮ್ಮ ಕೃತಿಗಳಿಗೆ ತಮ್ಮ ಕುಲಸ್ವಾಮಿಯಾದ ಶ್ರೀ ಪದ್ಮನಾಭಸ್ವಾಮಿಯ ಶ್ರೀನಾಮಗಳೆ ಆದ ‘ಜಲಜನಾಭ’, ‘ಸರಸಿಜನಾಭ’, ‘ಕಂಜನಾಭ’, ‘ಸರಸೀರುಹನಾಭ’ ಎಂಬ ಮುದ್ರೆಗಳನ್ನಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅವರ ಹಾಗೂ ಅವರ ಸಮಕಾಲೀನರಾದ ತ್ಯಾಗರಾಜರ ನಡುವೆ ಇದ್ದ ಸ್ನೇಹ-ಸಂಬಂಧವನ್ನು ನೆನೆಸಿಕೊಂಡರೆ ಮೈನವಿರೇಳುವುದು.

ತ್ಯಾಗರಾಜರ ‘ದರ್ಶನ’

ಸ್ವಾತಿತ್ತಿರುನಾಳ್ ಅವರು ತ್ಯಾಗರಾಜರ ಅನೇಕ ಕೃತಿಗಳನ್ನು ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ಕನ್ನೈಯ ಭಾಗವತರ ಮೂಲಕ ಕೇಳಿದ್ದರು. ಅವರ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ದೊರೆಯಲ್ಲಿ ಮೂಡಿತು. ತಮ್ಮ ಆಸ್ಥಾನ ವಿದ್ವಾಂಸರಲ್ಲಿ ಒಬ್ಬರಾಗಿದ್ದ, ವಯಸ್ಸಿನಲ್ಲಿ ತಮಗಿಂತ ಮೂರು ವರ್ಷಹಿರಿಯರಾದ ವಡಿವೇಲು ಎಂಬುವವರಿಗೆ ತ್ಯಾಗರಾಜರನ್ನು ಕರೆದು ತರಲು ದೊರೆ ಹೇಳಿದರು. ವಡಿವೇಲು ಅವರು ಪ್ರಸಿದ್ಧ ಹಾಡುಗಾರರಲ್ಲದೇ ಪಿಟೀಲು ವಿದ್ವಾಂಸರು ಕೂಡ ಆಗಿದ್ದರು. ವಡಿವೇಲು ಅವರು ತ್ಯಾಗರಾಜರನ್ನು ಕಂಡಿದ್ದರು. ಅದಲ್ಲದೆ, ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ವೀಣಾ ಕುಪ್ಪಯ್ಯರ್ ಅವರ ಗೆಳೆಯ ಕೂಡ. ಆದರೆ, ತ್ಯಾಗರಾಜರಿಗೆ ವಡಿವೇಲು ಅವರ ಪರಿಚಯವಿರಲಿಲ್ಲ.

ವಡಿವೇಲು ಅವರು ತಿರುವಯ್ಯಾರಿಗೆ ಬಂದು ತಿರುಮಂಜನವೆಂಬ ಬೀದಿಯ ಒಂದು ಮನೆಯಲ್ಲಿ ತಂಗಿದರು. ಅದೇ ಬೀದಿಯಲ್ಲಿ ತ್ಯಾಗರಾಜರೂ ಇದ್ದರು. ವಡಿವೇಲು ತಂಗಿದ್ದ ಮನೆ, ತ್ಯಾಗರಾಜರ ಮನೆಯ ಸಾಲಿನ ಎದುರು ಸಾಲಿನಲ್ಲಿ, ನದಿಗೆ ಇಳಿಯುವ ಬಳಿ ಇತ್ತು. ಸ್ನಾನ ಸಂಧ್ಯಾವಂದನೆಗಳಿಗೆ ನದಿಗೆ ಹೋಗುತ್ತಿದ್ದ ತ್ಯಾಗರಾಜರು ವಡಿವೇಲು ತಂಗಿದ್ದ ಮನೆಯ ಮುಂದೆಯೇ ಹೋಗಬೇಕಾಗಿತ್ತು. ತ್ಯಾಗರಾಜರ ಗಮನ ಸೆಳೆಯಲು ವಡಿವೇಲು ಒಂದು ಉಪಾಯ ಹೂಡಿದರು. ದಿನವೂ ತ್ಯಾಗರಾಜರು ನದಿಗೆ ಹೋಗುವ ಸಮಯದಲ್ಲಿ ತಾವು ಸ್ವಾತಿತ್ತಿರುನಾಳ್ ಅವರ ರಚನೆಗಳನ್ನು ಹಾಡುತ್ತಿದ್ದರು. ಮೊದಲನೆಯ ದಿನವೇ ಅವರ ಹಾಡು ಕೇಳಿ ತ್ಯಾಗರಾಜರು ಚಕಿತರಾದರು. ಅರೆಕ್ಷಣ , ಅಲ್ಲೇ ನಿಂತು ಕೇಳ ತೊಡಗಿದರು. ಎರಡನೆಯ ದಿನ ಇನ್ನೂ ಹೆಚ್ಚು ಕಾಲ ಹೊರಗೇ ನಿಂತು ‘ಈತನೊಬ್ಬ ದೊಡ್ಡಾ ವಿದ್ವಾಂಸ’ ಎಂದುಕೊಂಡರು.

ಸ್ವಾತಿ ತಿರುನಾಳ್ ರಾಮ ವರ್ಮ ಇವರಿಂದ ಸಂಗೀತ ಕಲೆ ಇಂದಿಗೂ ಜೀವಂತ ಇದೆ ಅನ್ನಬಹುದು
ಸ್ವಾತಿ ತಿರುನಾಳ್ ರಾಜವರ್ಮ

ಮೂರನೆಯ ದಿನ, ತ್ಯಾಗರಾಜರ ಕುತೂಹಲ ಎಲ್ಲೆ ಮೀರಿತು. ಹಾಡುತ್ತಿರುವ ಮೇಧಾವಿ ಯಾರು ಎಂದು ನೋಡಲೇಬೇಕೆಂದು ವಡಿವೇಲು ಇದ್ದ ಮನೆಯ ಒಳಕ್ಕೆ ಪ್ರವೇಶಿಸಿದರು. ಕೂಡಲೇ ವಡಿವೇಲು ಎದ್ದು ಬಂದು ನಮಸ್ಕರಿಸಿ, ಸ್ವಾಗತಿಸಿದರು. ‘ಧನ್ಯ ಸ್ವಾಮಿ, ನಾನು ಧನ್ಯ. ತಾವೇಕೆ ಶ್ರಮ ವಹಿಸಿದಿರಿ? ಒಂದು ಮಾತು ಹೇಳಿಕಳಿಸಿದ್ದರೆ, ನಿಮ್ಮ ಸನ್ನಿಧಾನಕ್ಕೆ ನಾನೇ ಬರುತ್ತಿದ್ದೆ’ ಎಂದು ವಿನಮ್ರದಿಂದ ಹೇಳಿದರು. ತ್ಯಾಗರಾಜರು ವಡಿವೇಲು ಅವರ ಅಮೋಘವಾದ ವಿದ್ವತ್ತನ್ನು ಮುಕ್ತಕಂಠದಿಂದ ಹೊಗಳಿದರು. ತಮ್ಮ ಮನೆಗೆ ಬಂದು (ಮರುದಿನವೇ) ಹಾಡಬೇಕೆಂದು ಹೇಳಿದರು. ಈ ಅವಕಾಶಕ್ಕೇ ಕಾದಿದ್ದ ವಡಿವೇಲು, ತ್ಯಾಗರಾಜರರ ಆಮಂತ್ರಣವನ್ನು ಸ್ವೀಕರಿಸಿ ಅವರ ಆದರಕ್ಕೆ ಪಾತ್ರರಾದರು.

ತ್ಯಾಗರಾಜರ ಮನೆಯಲ್ಲಿ ವಡಿವೇಲು, ತಮ್ಮ ಮಧುರವಾದ ಕಂಠದಿಂದ, ಸ್ವಾತಿತ್ತಿರುನಾಳ್ಅವರ ಹಲವಾರು ಕೃತಿಗಳನ್ನು ಹಾಡಿದರು. ತ್ಯಾಗರಾಜರು ಆನಂದಪರವಶರಾದರು. ಪದ್ಮನಾಭನೇ ಕಣ್ಣೆದುರು ಬಂದು ನಿಂತಂತಾಯಿತೇನೋ! ‘ಭೇಷ್ ವಡಿವೇಲು! ಪರಮ ಸುಪ್ರೀತನಾಗಿದ್ದೇನೆ ನಾನು. ನಿನಗೇನು ವರ ಬೇಕೋ ಕೇಳು!’ ಎಂದರು. ಆಗ ವಡಿವೇಲು ‘ಸ್ವಾಮಿನ್! ತಿರುವಾಂಕೂರು ಮಹಾರಾಜರು ತಮ್ಮನ್ನು ಕಾಣಬೇಕೆಂದು ತವಕಿಸುತ್ತಿದ್ದಾರೆ. ಆದುದರಿಂದ ತಾವು…’ ಎಂದು ವಡಿವೇಲು ತಮ್ಮ ಪ್ರಾರ್ಥನೆಯನ್ನು ಹೇಳಿ ಮುಗಿಸುವ ಮುನ್ನವೇ ಶ್ರೀ ತ್ಯಾಗರಾಜರು ಚಕಿತರಾದುದನ್ನು ಕಂಡು ಅಷ್ಟಕ್ಕೇ ನಿಲ್ಲಿಸಿದರು.

ಕೆಲಕಾಲ ಕಣ್ಣುಮುಚ್ಚಿ ಧ್ಯಾನಕ್ಕೆ ಕುಳಿತರು. ನಂತರ ತ್ಯಾಗರಾಜರು ‘ಸ್ವಾತಿತ್ತಿರುನಾಳ್ ಅವರನ್ನು ನಾನು ಖಂಡಿತವಾಗಿಯೂ ಭೇಟಿಯಾಗುತ್ತೇನೆ. ನನ್ನ ಆಶ್ವಾಸನೆ ಖಂಡಿತ ನೆರವೇರುತ್ತದೆ. ಆದರೆ ನನ್ನ – ಅವರ ಭೇಟಿ ಈ ಪ್ರಪಂಚದಲ್ಲಿ ಅಲ್ಲ. ಸ್ವರ್ಗದಲ್ಲಿ! ಅವರ ಆರಾಧ್ಯ ದೈವನೂ (ಪದ್ಮನಾಭ) ನನ್ನ ಆರಾಧ್ಯ ದೈವನೂ (ಶ್ರೀರಾಮ) ಒಬ್ಬನೇ.’ ಎಂದು ಹೇಳಿದರು. ನಿರಾಶರಾದ ವಡಿವೇಲು ತಿರುವಾಂಕೂರಿಗೆ ಮರಳಿ, ನಡೆದ ಸಂಗತಿಯನ್ನೆಲ್ಲಾ ದೊರೆಗೆ ತಿಳಿಸಿದರು.

ಮಹಾರಾಜ ಸ್ವಾತಿತ್ತಿರುನಾಳ್ ಸ್ವತಃ ತಾವೇ ತಿರುವಯ್ಯಾರಿಗೆ ಹೋಗಬೇಕೆಂದು ಎಷ್ಟೋ ಬಾರಿ ಪ್ರಯತ್ನಿಸಿದರು. ಆದರೆ, ರಾಜಕಾರ್ಯ ಅವರನ್ನು ಬಿಡಲಿಲ್ಲ. ರಾಜಕಾರ್ಯ ಬಿಡಲಿಲ್ಲವೋ, ತ್ಯಾಗರಾಜರ ಮಾತು ನಿಜವಾಗಬೇಕೆಂಬ ದೈವಸಂಕಲ್ಪವೋ ಏನೋ, ಈ ಘಟನೆ ನಡೆದ ಬಳಿಕ ಸುಮಾರು ಹನ್ನೆರಡು ವರ್ಷಗಳ ಕಾಲ ಸ್ವಾತಿತ್ತಿರುನಾಳ್ ಅವರು ಬದುಕಿದ್ದರೂ, ತ್ಯಾಗರಾಜರನ್ನು ಭೇಟಿಯಾಗಲು ತಿರುವಯ್ಯಾರಿಗೆ ಹೋಗುವುದಕ್ಕಾಗಲೇ ಇಲ್ಲ.

ಕೊನೆಗೆ ಸ್ವಾತಿತ್ತಿರುನಾಳ್ ಅವರೇ ತ್ಯಾಗರಾಜರ ಭೇಟಿಗಾಗಿ ಅವರಿಗಿಂತ ೧೨ದಿನಗಳ ಮೊದಲೇ ಸ್ವರ್ಗದಲ್ಲಿ ಕಾದು ಕುಳಿತರು! ಸ್ವಾತಿತ್ತಿರುನಾಳ್ ಅವರು ೧೮೪೬ನೇ ಡಿಸೆಂಬರ್ ೨೫ರಂದು, ಅಂದರೆ, ಪುಷ್ಯ ಶುಕ್ಲ ಅಷ್ಟಮಿಯಂದು ಸ್ವರ್ಗಸ್ಥರಾದರು. ತ್ಯಾಗರಾಜರು ೧೮೪೭ನೇ ಜನವರಿ ೬ರಂದು, ಅಂದರೆ, ಪುಷ್ಯ ಬಹುಳ ಪಂಚಮಿಯಂದು ಸ್ವಾತಿತ್ತಿರುನಾಳ್ ಅವರನ್ನು ನೋಡಲು ಸ್ವರ್ಗಕ್ಕೆ ಹೊರಟರು.

ಮಹಾಮೇಧಾವಿಯೂ, ಸಾಹಿತಿಯೂ, ರಾಜಕಾರಣಿಯೂ, ರಸಿಕರೂ, ವಾಗ್ಗೇಯಕಾರರೂ ಆಗಿ ಬಾಳಿ ಕೇವಲ ೩೪ವರ್ಷಗಳಲ್ಲೇ, ಮಹಾ ಪ್ರತಿಭಾನ್ವಿತರೆನಿಸಿಕೊಂಡ ಮಹಾರಾಜ ಸ್ವಾತಿತ್ತಿರುನಾಳ್ ಅವರ ಹೆಸರನ್ನು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಇಂತಹ ದೊಡ್ಡಾ ಸಾಧನೆ ಮಾಡಿರುವ ವಾಗ್ಗೇಯಕಾರರು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಇಲ್ಲವೆಂದೇ ಹೇಳಬೇಕು. ಅವರು ನಮಗೆ, ಸಂಗೀತ ಪ್ರಪಂಚಕ್ಕೆ, ಬಿಟ್ಟು ಹೋಗಿರುವ ಆಸ್ತಿ ಅಮರವಾಗಿರುತ್ತದೆ. ಅವರ ಕೀರ್ತಿ ಆಚಂದ್ರಾರ್ಕ ಬೆಳಗುತ್ತಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತಿರುಚಿರಾಪಳ್ಳಿ ರಾಕ್ ಫೋರ್ಟ್

ತಿರುಚಿರಾಪಳ್ಳಿ ರಾಕ್ ಫೋರ್ಟ್

ಅನಂತ ಪದ್ಮನಾಭ ದೇವಸ್ಥಾನದ ಸಸ್ಯಾಹಾರಿ 'ಬಬಿಯಾ' ಇಹಲೋಕ ತ್ಯಜಿಸಿದೆ

ಅನಂತ ಪದ್ಮನಾಭ ದೇವಸ್ಥಾನದ ಸಸ್ಯಾಹಾರಿ ‘ಬಬಿಯಾ’ ಇಹಲೋಕ ತ್ಯಜಿಸಿದೆ