in ,

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಇನ್ನಿಬ್ಬರು ಶ್ಯಾಮಾ ಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರು

ಶ್ಯಾಮಾ ಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರು
ಶ್ಯಾಮಾ ಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರು

ಶ್ಯಾಮಾ ಶಾಸ್ತ್ರಿಗಳು ಹುಟ್ಟಿದ್ದು ತೆಲುಗು ಮೂಲದ ಬ್ರಾಹ್ಮಣ ಕುಟುಂಬದಲ್ಲಿ. ಶಾಸ್ತ್ರಿಗಳ ಹಿರಿಯರು ಆಂಧ್ರಪ್ರದೇಶದ ಕುಂಭಮ್‌ನಿಂದ ತಮಿಳುನಾಡಿಗೆ ವಲಸೆ ಬಂದವರೆಂದು ಹೇಳಲಾಗುತ್ತದೆ. ಹಾಗಾಗಿ ಇವರ ಮನೆಭಾಷೆ ತೆಲುಗು. ತಂದೆ ವಿಶ್ವನಾಥ ಅಯ್ಯರ್ ಇವರು ಹುಟ್ಟಿದ್ದು ತಮಿಳುನಾಡಿನ ತಿರುವಾರೂರಿನಲ್ಲಿ. ಇವರ ಪೂರ್ವಜರು ಅರ್ಚಕ ವೃತ್ತಿಯವರಾಗಿದ್ದರು. ಬಾಲಕ ವೆಂಕಟಕೃಷ್ಣನಿಗೆ ಬಹಳ ಸುಮಧುರವಾದ ಧ್ವನಿಯಿದ್ದುದರಿಂದ, ರೂಢಿಯ ಸಂಸ್ಕೃತದ ಜೊತೆ ಸ್ವಲ್ಪ ಸಂಗೀತದ ಬಾಲಪಾಠಗಳೂ ಆದವು. ಸುಮಾರು ಬಾಲಕ ವೆಂಕಟಕೃಷ್ಣನಿಗೆ ಹದಿನೆಂಟು ವರ್ಷವಾದ ನಂತರ ವೆಂಕಟಕೃಷ್ಣನ ಕುಟುಂಬ ತಂಜಾವೂರಿಗೆ ತೆರಳಿದರು. ಅಲ್ಲಿ ಒಮ್ಮೆ ಆಂಧ್ರಪ್ರದೇಶದಿಂದ ತೀರ್ಥಯಾತ್ರೆಗಾಗಿ ಬಂದು ಚಾತುರ್ಮಾಸಕ್ಕಾಗಿ ನೆಲೆನಿಂತ, ಬ್ರಾಹ್ಮಣ ಸನ್ಯಾಸಿಯಾಗಿದ್ದ ಸಂಗೀತಸ್ವಾಮಿ ಎಂಬವರು, ಈ ಬಾಲಕನ ಕಂಠಸಿರಿಗೆ ಮಾರುಹೋಗಿ ಕೆಲವೇ ಸಮಯದಲ್ಲಿ ಈತನನ್ನು ಉತ್ತಮ ಸಂಗೀತಗಾರನನ್ನಾಗಿ ಮಾಡಿದರು.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಇನ್ನಿಬ್ಬರು ಶ್ಯಾಮಾ ಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರು
ಶ್ಯಾಮಾ ಶಾಸ್ತ್ರಿಗಳು

ಕಾಂಚೀಪುರದ ಕಾಮಾಕ್ಷಿಯ ಭಕ್ತರಾದ ಶ್ಯಾಮಾಶಾಸ್ತ್ರಿಯವರ ಬಹುಪಾಲು ಕೃತಿಗಳು ಕಾಮಾಕ್ಷಿಯನ್ನು ಕುರಿತವು. ತಂಜಾವೂರಿನ ಬಂಗಾರು ಕಾಮಾಕ್ಷಿ ದೇವಾಲಯದಲ್ಲಿ ಅರ್ಚಕರಾಗಿದ್ದ ಆದಿ ಅಪ್ಪಯ್ಯ, ಶ್ಯಾಮಾಶಾಸ್ತ್ರಿಗಳ ಇನ್ನೊಬ್ಬ ಗುರುಗಳು. ಶಾಸ್ತ್ರಿಗಳು ಒಟ್ಟು ೩೦೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರೆಂದು ಹೇಳಲಾಗುತ್ತದೆ ಆದರೂ ಈಗ ಲಭ್ಯವಿರುವುದು ಸುಮಾರು ೬೦-೭೦ರಷ್ಟು ಕೃತಿಗಳು ಮಾತ್ರ. ಇವರ ಕೃತಿಗಳು ಹೆಚ್ಚಾಗಿ ತೆಲುಗು, ಮತ್ತು ಸ್ವಲ್ಪ ಮಟ್ಟಿಗೆ ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿವೆ. ಮದುರೈಯ ಮೀನಾಕ್ಷಿಯನ್ನು ಕುರಿತು ರಚಿಸಿದ ‘ನವರತ್ನಮಾಲಿಕೆ’ ಶ್ಯಾಮಾ ಶಾಸ್ತ್ರಿಗಳ ಪ್ರಸಿದ್ಧ ಕೃತಿಗಳಲ್ಲಿ ಒಂದು.

ಮುತ್ತುಸ್ವಾಮಿ ದೀಕ್ಷಿತರು :

ಮುತ್ತುಸ್ವಾಮಿ ದೀಕ್ಷಿತರು (ಮಾರ್ಚ್ ೨೪, ೧೭೭೫) ಬಹುತೇಕ ವಾಗ್ಗೇಯಕಾರರು ತೆಲುಗಿನಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದ್ದರೆ ದೀಕ್ಷಿತರ ಕೃತಿಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿರುವುದು ಮಹತ್ವದ ವಿಚಾರವಾಗಿದೆ. ‘ಗುರುಗುಹ’ ಎಂಬ ಕಾವ್ಯನಾಮದ ಹಾಸುಹೊಕ್ಕು ದೀಕ್ಷಿತರ ಕೃತಿಗಳಲ್ಲಿ ಕಂಡುಬರುವುದು ಮತ್ತೊಂದು ಪ್ರಧಾನ ಅಂಶ. ಕರ್ಣಾಟಕ ಸಂಗೀತದಲ್ಲಿ ಹಂಸಧ್ವನಿಯಲ್ಲಿರುವ ‘ವಾತಾಪಿ ಗಣಪತಿಂ ಭಜೇ’ ಕೃತಿಯನ್ನು ಅರಿಯದವರೇ ಇಲ್ಲ. ಅಂತಹ ಅಸಂಖ್ಯಾತ ಮಹಾನ್ ಕೃತಿಗಳ ಕರ್ತಾರರಾದವರು ಮುತ್ತುಸ್ವಾಮಿ ದೀಕ್ಷಿತರು. ಇವರ ಸಂಗೀತ ಶೈಲಿಯನ್ನು ನಾರಿಕೇಳಪಾಕಕ್ಕೆ ಹೋಲಿಸಲಾಗುತ್ತದೆ. ತೆಂಗಿನಕಾಯಿಯಲ್ಲಿ, ಹೇಗೆ ಹೊರಗೆ ಕಠಿಣವಾದ ಕರಟವಿದ್ದು ಒಳಗೆ ಸವಿಯಾದ ಎಳನೀರೂ, ರುಚಿಯಾದ ಕಾಯಿಯೂ ಇರುತ್ತದೋ ಅದೇ ರೀತಿ, ಮೇಲ್ನೋಟಕ್ಕೆ ಇವರ ಕೃತಿಗಳು ಕಠಿಣವಾಗಿ ತೋರಿದರೂ, ಅವುಗಳಲ್ಲಿನ ಸಂಗೀತ ಸಾಹಿತ್ಯದ ಅಂಶಗಳಿಂದಾಗಿ, ಅವರ ಅತಿ ಉತ್ತಮ ದರ್ಜೆಯ ವಾಗ್ಗೇಯಕಾರತ್ವಕ್ಕೆ ನಿದರ್ಶನವಾಗಿವೆ.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಇನ್ನಿಬ್ಬರು ಶ್ಯಾಮಾ ಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರು
ಮುತ್ತುಸ್ವಾಮಿ ದೀಕ್ಷಿತರು

ಈ ಪರಿಯಾಗಿ ಮುತ್ತುಸ್ವಾಮಿ ದೀಕ್ಷಿತರು ಅಸಂಖ್ಯಾತ ಕೀರ್ತನೆಗಳನ್ನು ರಚಿಸಿದ್ದಾರೆ. ಇದುವರೆಗೆ ಗುರುತಿಸಲಾಗಿರುವ ಅವರ ಕೃತಿಗಳ ಸಂಖ್ಯೆಯೇ ಐದು ನೂರಕ್ಕೂ ಹೆಚ್ಚಿನದು. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಏಕದಂತಂ ಭಜೇಹಂ, ಸಿದ್ದಿ ವಿನಾಯಕಂ ಅನಿಶಂ, ಶ್ರೀಮಹಾ ಗಣಪತಿರವತುಮಾಂ, ವಾತಾಪಿ ಗಣಪತಿಂ, ಸುಬ್ರಮಣ್ಯೇನ ರಕ್ಷಿತೋಹಂ, ಸ್ವಾಮಿನಾಥ ಪರಿಪಾಲಯಾ ಸುಮಾಂ, ಕಾಮಕೋಟಿ ಪೀಠವಾಸಿನಿ ಸೌಗಂಧಿಂ, ಕಂಜದಳಾಯತಾಕ್ಷಿ ಕಾಮಾಕ್ಷಿ, ಶಿವಕಾಮೇಶ್ವರಿಂ ಚಿಂತಯೇಹಂ, ಶ್ರೀವಿಶ್ವನಾಥಂ ಭಜೇಹಂ, ಮಾಮವ ಪಟ್ಟಾಭಿರಾಮ, ಶ್ರೀ ರಾಮಂ ರವಿ ಕುಲಾಬ್ಧಿ ಸೋಮಂ, ಶ್ರೀರಂಗಪುರವಿಹಾರ, ಶ್ರೀವರಲಕ್ಷ್ಮಿ ನಮಸ್ತುಭ್ಯಂ, ಶ್ರೀ ಸರಸ್ವತಿ ನಮೋಸ್ತುತೆ, ವೀಣಾ ಪುಸ್ತಕಧಾರಿಣಿಂ ಆಶ್ರಯೇ, ಸರಸಿಜನಾಭ ಸೋದರಿ ಶಂಕರಿ ಮುಂತಾದವುಗಳು ಜನಸಾಮಾನ್ಯರಲ್ಲೂ ಅತ್ಯಂತ ಜನಪ್ರಿಯವಾಗಿವೆ. ಶ್ರೀ ದೀಕ್ಷಿತರು ಪಂಚ ತತ್ವಗಳನ್ನೊಳಗೊಂಡ ಪ್ರದೇಶಗಳಲ್ಲಿ ಪರಮೇಶ್ವರ ಕುರಿತಾದ ವಿಶೇಷ ಕೃತಿಗಳನ್ನು ರಚಿಸಿದ್ದಾರೆ. ನವಗ್ರಹ ಕೃತಿಗಳು, ನವಾವರಣ ಕೃತಿಗಳು, ನೀಲೋತ್ಪಲಾಂಬಿಕಾ ಕೃತಿಗಳು ಎಂಬ ಅನೇಕ ಗುಚ್ಛಗಳನ್ನು ರಚಿಸಿದ್ದಾರೆ.

ಆಶ್ವೀಜ ಬಹುಳ ಚತುರ್ದಶಿ – ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು (ಅಕ್ಟೋಬರ್ ೨೧, ೧೮೩೫) ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ “ಮೀನಾಕ್ಷಿ ಮುದಂ ದೇಹಿ” ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. “ಮೀನಲೋಚನಿ ಪಾಶಮೋಚನಿ” ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ, ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ, ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ. ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು “ದೀಕ್ಷಿತರ ದಿನ” ಎಂದೇ ಆಚರಿಸಲಾಗುತ್ತಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜೋಳದ ಬೆಳೆ

ಎಲ್ಲರಿಗೂ ಇಷ್ಟವಾಗುವ ಜೋಳದ ಬೆಳೆ

ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್ ವಾಹನಗಳು

ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್ ವಾಹನಗಳು, ಮಹತ್ವಾಕಾಂಕ್ಷೆಯ ಯೋಜನೆ