ನಾಯಿಕಡಿತವನ್ನು ತಪ್ಪಿಸುವುದು ಹೇಗೆ ಮತ್ತು ನಾಯಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕುತೂಹಲ ಹೊಂದಿರುವ ಮಕ್ಕಳಿಗೆ ನಾಯಿ ಕಡಿತ ಕೂಡಾ ಅಷ್ಟೇ ಅಪಾಯ ಅನ್ನುವ ಅರಿವು ಮೂಡಿಸುವುದು ಬಹಳ ಮುಖ್ಯ.
ರೇಬೀಸ್ ಪ್ರತಿ ವರ್ಷ ಸುಮಾರು 55,000 ಜನರ ಸಾವಿಗೆ ಕಾರಣವಾಗುತ್ತದೆ, ಹೆಚ್ಚಿನ ಕಾರಣಗಳು ನಾಯಿ ಕಡಿತದಿಂದ ಉಂಟಾಗುತ್ತದೆ.
ಸಾಕು ನಾಯಿರಲಿ, ಬೀದಿ ನಾಯಿರಲಿ ನಾಯಿ ಕಚ್ಚಿದರೆ ಚುಚ್ಚುಮದ್ದುಗಳು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಮನೆ ನಾಯಿ ಕಚ್ಚಿದ್ದು ಆದ್ದರಿಂದ ತೊಂದರೆಯಿಲ್ಲ ಎಂದು ಭಾವಿಸಲೇಬಾರದು, ಏಕೆಂದರೆ ಒಂದು ವೇಳೆ ಆ ನಾಯಿಗೆ ಯಾವುದಾದರೂ ಹುಚ್ಚು ನಾಯಿ ಬಂದು ಕಚ್ಚಿ ಹೋಗಿದ್ದರೆ? ಆದ್ದರಿಂದ ನಾಯಿ ಕಚ್ಚಿದರೆ ನಿರ್ಲಕ್ಷ್ಯ ಮಾಡಲೇಬಾರದು.
ಅಪರಿಚಿತ ನಾಯಿಯನ್ನು ಸಮೀಪಿಸುವುದಾಗಲೀ, ಅದನ್ನು ಮುಟ್ಟುವುದಾಗಲೀ ಅಥವಾ ಆಹಾರ ನೀಡಲು ಪ್ರತ್ನಿಸುವುದಾಗಲೀ ಮಾಡಬಾರದು.
ಮನೆಯ ನಾಯಿಯೇ ಆಗಲಿ ಅಥವಾ ಪರಿಚಿತ ನಾಯಿಯೇ ಆಗಲಿ, ಅವುಗಳನ್ನು ರೇಗಿಸಿಯಾಗಲೀ ಅಥವಾ ಕೀಟಲೆ ಮಾಡಿಯಾಗಲೀ ಕಚ್ಚಲು ಪ್ರೇರೇಪಿಸಬಾರದು.
ನಾಯಿ ನಮ್ಮನ್ನು ನೋಡಿ ಬೊಗಳಲಾರಂಭಿಸಿದಾಗ, ಕೂಡಲೇ ಅದಕ್ಕೆ ಬೆನ್ನು ತೋರಿಸಿ ವೇಗವಾಗಿ ದೂರ ಓಡುವ ಪ್ರಯತ್ನ ಬೇಡ, ಬದಲಿಗೆ ಮೆಲ್ಲಗೆ ಅಲ್ಲಿಂದ ಹೋಗುವ ಪ್ರಯತ್ನ ಮಾಡಬೇಕು.
ನಾಯಿಗಳಿಂದ ನೆಕ್ಕಿಸಿಕೊಳ್ಳುವುದೂ ಕೂಡ ಅಪಾಯಕಾರಿಯಾಗಬಲ್ಲದು. ಏಕೆಂದರೆ ನೆಕ್ಕಿದ ಸ್ಥಳದಲ್ಲಿ ಬರಿಯ ಕಣ್ಣಿಗೆ ಕಾಣದ, ನಮ್ಮ ಅರಿವಿಗೇ ಬಾರದಂತೆ ಉಂಟಾಗಿರುವ ಸೂಕ್ಷ್ಮ ಗಾಯಗಳಿರುವ ಸಾಧ್ಯತೆಯಿದ್ದು, ಅವುಗಳ ಮೂಲಕ ವೈರಸ್ ಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆಯಿರುತ್ತದೆ.
ನಿದ್ರಿಸುತ್ತಿರುವ, ಆಹಾರ ಸೇವಿಸುತ್ತಿರುವ, ಮರಿಗಳೊಂದಿಗೆ ಇರುವ, ಪರಸ್ಪರ ಕಚ್ಚಾಡುತ್ತಿರುವ ನಾಯಿಗಳಿಂದ ದೂರವಿರಬೇಕು.
ನಾಯಿ ನಮ್ಮ ಮೇಲೆ ಆಕ್ರಮಣ ನಡೆಸುವ ಸೂಚನೆ ಕಂಡಾಗ, ಅವಕಾಶವಿದ್ದರೆ ನಮ್ಮ ಮತ್ತು ಅದರ ನಡುವೆ ಏನಾದರೂ ಅಡ್ಡ ಇರುವಂತೆ ನೋಡಿಕೊಳ್ಳಬೇಕು.
ಅದು ಹತ್ತಿರ ಬರುವ ಸೂಚನೆ ಕಂಡಾಗ ನೆಲಕ್ಕೆ ಬಾಗಿ ಕಲ್ಲು ಎತ್ತಿಕೊಂಡು ಅದರ ಕಡೆಗೆ ಎಸೆಯಬಹುದು ಅಥವಾ ಆ ರೀತಿ ನಟಿಸಬಹುದು. ಹಾಗೂ ಕೈಯಲ್ಲಿರುವ ಯಾವುದದರೂ ವಸ್ತುವಿನಿಂದ ಹೊಡೆಯುವಂತೆ ತೋರಿಸಬಹುದು.
ನಾಯಿ ಕಚ್ಚಿದಾಗ ಪ್ರಥಮ ಚಿಕಿತ್ಸೆ
ಕಚ್ಚಿದ ಗಾಯವನ್ನು ಯಾವುದೇ ಸೋಪು ಮತ್ತು ಯಥೇಚ್ಛ ನೀರು ಬಳಸಿ ಕನಿಷ್ಠ ಹತ್ತು ಸಲ ಒತ್ತಡದೊಂದಿಗೆ ತಿಕ್ಕಿ ತಿಕ್ಕಿ ತೊಳೆಯಬೇಕು. ನಲ್ಲಿಯಿಂದ ರಭಸವಾಗಿ ಬೀಳುತ್ತಿರುವ ನೀರಾದರೆ ಒಳ್ಳೆಯದು. ಅದು ಲಭ್ಯವಿಲ್ಲದಿದ್ದರೆ ನೀರನ್ನು ಎತ್ತರದಿಂದ ಹಾಕುತ್ತಾ ತೊಳೆಯಬಹುದು. ಸೋಪು ಯಾವುದಾದರೂ ಆಗಬಹುದು. ಸಿಕ್ಕಿದರೆ ಡಿಟರ್ಜೆಂಟ್ ಕೇಕ್ ಅಥವಾ ಕಾರ್ಬಾಲಿಕ್ ಸೋಪು ಇನ್ನೂ ಉತ್ತಮ.
ಹೀಗೆ ತೊಳೆಯುವುದರಿಂದ ಗಾಯ ದೊಡ್ಡದಾಗಬಹುದು ಅಥವಾ ರಕ್ತಸ್ರಾವ ಹೆಚ್ಚಾಗಬಹುದು ಎಂದು ಚಿಂತಿಸುವ ಅಗತ್ಯವಿಲ್ಲ.
ಹೀಗೆ ತೊಳೆದಾದ ಮೇಲೆ ಲಭ್ಯವಿದ್ದರೆ ಟಿಂಚರ್ ಅಯೋಡಿನ್ ಇತ್ಯಾದಿ ಯಾವುದಾದರೂ ನಂಜುನಿರೋಧಕ ದ್ರಾವಣ ಲೇಪಿಸಬಹುದು.
ಸಾಮಾನ್ಯವಾಗಿ ಕಚ್ಚಿದ ನಾಯಿಯನ್ನು ಹತ್ತು ದಿನಗಳು ಗಮನಿಸಲು ವೈದ್ಯರು ತಿಳಿಸುತ್ತಾರೆ. ಆ ಹತ್ತು ದಿನಗಳು ನಾಯಿ ಆರೋಗ್ಯವಾಗಿದ್ದರೆ ಅದು ರೇಬಿಸ್ ಪೀಡಿತವಲ್ಲವೆಂದು ನಿರ್ಧರಿಸಬಹುದು. ಒಂದು ವೇಳೆ ಕಚ್ಚಿದ ನಾಯಿ ಗಮನಿಸಲು ಸಿಕ್ಕುವುದಿಲ್ಲವಾದರೆ, ಲಸಿಕೆ ಪಡೆಯುವುದು ಕ್ಷೇಮ.
ಗಮನದಲ್ಲಿ ಇರಲಿ : ಹುಚ್ಚುನಾಯಿಯ ಜೊಲ್ಲಿನಲ್ಲಿರಬಹುದಾದ ರೇಬಿಸ್ ವೈರಸ್ ಗಳು ದೇಹದ ಒಳಹೋಗಿ ನರವ್ಯೂಹ ಸೇರಿದ ನಂತರ ಎಷ್ಟು ಬಲಿಷ್ಠವೋ, ಹೊರಗೆ ಅಥವಾ ನರವ್ಯೂಹ ಸೇರುವ ವೊದಲು ಅಷ್ಟೇ ಶಕ್ತಿಹೀನ. ಆಗ ಅವುಗಳನ್ನು ನಾಶಪಡಿಸುವುದು ಸುಲಭ. ಆದ್ದರಿಂದ ನಾಯಿ ಕಡಿತದ ಕೂಡಲೇ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಾರ್ಯೋನ್ಮುಖರಾಗಬೇಕು.
ನಾಯಿಯ ಮಾಲೀಕರು ತಮ್ಮ ನಾಯಿಯು ಜನರಿಗೆ ಅಥವಾ ಇತರ ನಾಯಿಗಳಿಗೆ ಉಂಟುಮಾಡುವ ಕಡಿತ ಮತ್ತು ಗಾಯಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗಿರಬಹುದು. ಹೆಚ್ಚುವರಿಯಾಗಿ, ರಾಜ್ಯಗಳು ಮತ್ತು ಸ್ಥಳೀಯ ಸರ್ಕಾರಗಳು ಕಾನೂನು ಮತ್ತು ಸುಗ್ರೀವಾಜ್ಞೆಗಳನ್ನು ಅಂಗೀಕರಿಸಿದ್ದು ಅದು ಅಪಾಯಕಾರಿ ಎಂದು ಪರಿಗಣಿಸಲಾದ ನಾಯಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ, ನಾಯಿಯ ಮಾಲೀಕರು ಇನ್ನೊಬ್ಬ ವ್ಯಕ್ತಿಯ ಮೇಲೆ ನಾಯಿ ದಾಳಿಗೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದು. ಮನೆಮಾಲೀಕರ ವಿಮಾ ಪಾಲಿಸಿಗಳು ಸಾಮಾನ್ಯವಾಗಿ ವಿಮೆ ಮಾಡಿದ ಆಸ್ತಿಗಳ ಮೇಲೆ ಸಂಭವಿಸುವ ನಾಯಿ ಕಡಿತಕ್ಕೆ ಕೆಲವು ಹೊಣೆಗಾರಿಕೆಯ ವ್ಯಾಪ್ತಿಯನ್ನು ಒದಗಿಸುತ್ತವೆ.
ಸಾಕು ನಾಯಿ ಕಚ್ಚಿದರೆ ಅದರ ಮಾಲೀಕರು ಹೊಣೆಗಾರರು ಆದರೆ ಬೀದಿ ನಾಯಿ ಕಚ್ಚಿದರೆ ಯಾರು ಹಹೊಣೆಗಾರರು?
ಧನ್ಯವಾದಗಳು.