ಉಪ್ಪಗೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಒಂದು ಮರ. ಔಷಧೀಯ ಗುಣಗಳುಳ್ಳ ಹಣ್ಣುಗಳನ್ನು ಬಿಡುತ್ತವೆ. ಸಸ್ಯಶಾಸ್ತ್ರದಲ್ಲಿ ಗಾರ್ಸಿನಿಯಾ ಕುಟುಂಬದಲ್ಲಿ ಬರುವ ಇವು ಗಾರ್ಸಿನೀಯಾ ಗಮ್ಮಿಗಟ್ಟ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿವೆ. ಗಾಂಬೋಜ್, ಕಾಚ್ ಪುಳಿ, ಕಾಚಂಪುಳಿ, ಪಣಪ್ಪುಳಿ, ಮಂತುಹುಳಿ ಹೀಗೆ ಉಪ್ಪಾಗೆಗೆ ವಿವಿಧ ಹೆಸರುಗಳಿವೆ. ತಮಿಳು ಮತ್ತು ಮಲಯಾಳಂನಲ್ಲಿ ಕೋಡಂಪುಳಿ ಎಂದು ಕರೆಯಲ್ಪಡುತ್ತದೆ. ಈ ಮರದ ೩೫ ಪ್ರಬೇಧಗಳು ಭಾರತದಲ್ಲಿದೆ. ಕರ್ನಾಟಕ ಮತ್ತು ಕೇರಳದ ಪಶ್ಚಿಮಘಟ್ಟದ ಕಾಡುಗಳಲ್ಲದೇ ಇಂಡೋನೇಷ್ಯಾ ಮತ್ತು ಆಫ್ರಿಕಾದಲ್ಲೂ ಇವು ಬೆಳೆಯುತ್ತವೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಪಶ್ಚಿಮಘಟ್ಟದ ಪ್ರದೇಶದಲ್ಲಿ ೧೦ ಪ್ರಬೇಧಗಳು ಕಾಣಸಿಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಅರಣ್ಯಗಳಲ್ಲಿ ಉಪ್ಪಗೆ, ಮುರಗಲು, ಅರಿಸಿಣಗುರಗಿ, ಜಾಣಗೆ, ಕಾಡುಮುರಗಲು ಪ್ರಬೇಧಗಳು ಕಾಣಸಿಗುತ್ತವೆ. ನಿತ್ಯಹರಿದ್ವರ್ಣ ಮತ್ತು ಸೋಲಾ ಕಾಡುಗಳ ತಂಪು ಹಾಗೂ ತೇವಾಂಶಗಳಿರುವಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ತಂಪಗಿನ ವಾತಾವರಣದಲ್ಲಿ ನೆಟ್ಟು ಬೆಳೆಸಬಹುದು. ಇದು ಶಂಖುವಿನಾಕಾರದಲ್ಲಿರುವ ಮರವಾಗಿದ್ದು ಸರಿಸುಮಾರು ೧೦ ರಿಂದ ೨೦ ಮೀಟರ್ ಬೆಳೆಯುವ ಇವು ೩೦ ಮಿ.ವರೆಗೂ ಬೆಳೆಯಬಲ್ಲವು. ಹೆಣ್ಣುಮರಗಳು ಮಾತ್ರ ಹಣ್ಣುಗಳನ್ನು ಬಿಡುತ್ತವೆ. ಹೂಗಳು ಕೆಂಫು ಮಿಶ್ರಿತ ಹಳದಿ ಬಣ್ಣದಿಂದ ಕೂಡಿರುತ್ತವೆ.
ಫೆಬ್ರುವರಿ-ಮಾರ್ಚನಲ್ಲಿ ಹೂ ಬಿಡುವ ಉಪ್ಪಾಗೆ ಹಣ್ಣಾಗುವುದು ಜೂನ್-ಜುಲೈ ತಿಂಗಳ ಮಳೆಗಾಲದಲ್ಲಿ. ಹಣ್ಣುಗಳು ತಿಳಿಹಳದಿ ಬಣ್ಣದಿಂದ ಕೂಡಿದ್ದು ಉಬ್ಬು ತಗ್ಗಿನ ಮೇಲ್ಮೈ ಹೊಂದಿ ಚಿಕ್ಕ ಕುಂಬಳಕಾಯಿಯ ರೂಪ ಅಕಾರ ಇರುತ್ತದೆ. ಹಣ್ಣಿನ ಮೇಲ್ಭಾಗ ೬-೮ ಉಬ್ಬಿದ ಗೆರೆಗಳಿಂದ ಕೂಡಿದ್ದು ಒಂದು ಹಣ್ಣಿನಲ್ಲಿ ೬-೮ ಬೀಜಗಳಿರುತ್ತವೆ. ಉಪ್ಪಾಗೆ ಹಣ್ಣುಗಳು ಆಹಾರ ಮತ್ತು ಔಷಧೀಯ ಕಾರಣಕ್ಕಾಗಿ ಬಳಸಲ್ಪಡುತ್ತವೆ. ಬೀಜದ ಗಿಡ ಬೆಳೆ ಕೊಡಲು ಹತ್ತು-ಹನ್ನೆರಡು ವರ್ಷ ತೆಗೆದುಕೊಳ್ಳುತ್ತದೆ. ಕಸಿ ಗಿಡಕ್ಕೆ ಮೂರು ವರ್ಷ ಸಾಕು. ಇದು ಕಾಚಂಪುಳಿ ಅಥವಾ ಮಂತಪುಳಿ ಎಂದು ಕೊಡಗು ಜಿಲ್ಲೆಯಲ್ಲಿ ಹೆಸರಾಗಿದೆ. ಕೊಡಗಿನಲ್ಲಿ ಸುಮಾರು ೩೦-೪೦ ಪ್ರಭೇದಗಳಿವೆ. ಕೊಡಗಿನ ಕಾಫಿಯ ತೋಟಗಳ ನಡುವೆ ಅಲ್ಲಲ್ಲಿ ಕಂಡುಬರುವ ಉಪ್ಪಾಗೆಯ ಮರಗಳು ೬೦-೮೦ ಅಡಿ ಎತ್ತರ ಹಾಗೂ ಅದಕ್ಕೆ ಸಮನಾದ ದಪ್ಪ ಮತ್ತು ವಿಸ್ತಾರಗಳನ್ನೊಳಗೊಂಡಂತೆ ಬೃಹದಾಕಾರವಾಗಿ ಬೆಳೆಯಬಲ್ಲದು. ಉತ್ತಮ ಫಸಲು ದೊರೆತರೆ ಒಂದು ದೊಡ್ಡ ಮರದಲ್ಲಿ ೧೫ ರಿಂದ ೨೦ ಕ್ವಿಂಟಲ್ ಹಣ್ಣುಗಳು ದೊರೆಯುತ್ತವೆ.
ಈ ಹಣ್ಣಿನ ಒಣಸಿಪ್ಪೆ ಸಂಸ್ಕರಿಸಿ ಮಂದಸಾರ ತಯಾರಿಸುತ್ತಾರೆ. ಇದು ಕೊಡಗು ಹಾಗೂ ಕೇರಳದಲ್ಲಿ ಹಂದಿಮಾಂಸದ ಮತ್ತು ಮೀನಿನ ಅಡುಗೆಗಳಿಗೆ ಬಳಸಲ್ಪಡುತ್ತದೆ. ಕೊಡಗಿನಲ್ಲಿ ಕೃಷಿಕರು ಮಳೆಗಾಲದಲ್ಲಿ ಉಪ್ಪಾಗೆ ಹಣ್ಣನ್ನು ಸಂಗ್ರಹಿಸಿ ಒಣಗಿಸಿಡುತ್ತಾರೆ. ಇದನ್ನು ಮಾಂಸಹಾರಕ್ಕೆ ಹುಳಿ ಪದಾರ್ಥವಾಗಿ ಬಳಸುತ್ತಾರೆ. ಕೆಲವು ಪದಾರ್ಥಗಳಿಗೆ ಉಪ್ಪಾಗೆಯ ಒಣಗಿಸಿದ ಸಿಪ್ಪೆಯನ್ನು ಉಪಯೋಗಿಸಿದರೆ ಹಣ್ಣಿನ ನೀರನ್ನು ಇಂಗಿಸಿ ತಯಾರಿಸಿದ ಹುಳಿನೀರು ಕೂಡ ಹೆಚ್ಚಾಗಿ ಬಳಸುತ್ತಾರೆ. ಒಂದುಕಿಲೋ ಒಣಸಿಪ್ಪೆ ಆಗಲು ಸುಮಾರು ಮೂರುಕಿಲೋ ಹಣ್ಣುಗಳು ಬೇಕಾಗುತ್ತವೆ. ಸರಿಯಾಗಿ ಒಣಗಿದೆ ಸಿಪ್ಪೆಯನ್ನು ಎರಡು ವರ್ಷಗಳ ಕಾಲ ಕೆಡದೇ ಇಡಬಹುದು. ಉಪ್ಪು ಸೇರಿಸಿ ಗಾಳಿಯಾಡದಂತೆ ಕಟ್ಟಿಟ್ಟರೆ ಇನ್ನೂ ಹೆಚ್ಚಿನ ಕಾಲ ಇಡಬಹುದು.
ಮಾನವನ ದೇಹದ ಕೊಬ್ಬು ಮತ್ತು ಬೊಜ್ಜನ್ನು ಕರಗಿಸಲು ಸಹಾಯವಾಗುವುದೆಂದು ಹೇಳಲಾಗುವ ಹೈಡ್ರಾಕ್ಸಿ ಸಿಟ್ರಿಕ್ ಅಂಶ ಉಪ್ಪಾಗೆ ಹೊಂದಿರುವುದರಿಂದ ಇದಕ್ಕೆ ಬಹುಬೇಡಿಕೆಯಿದೆ. ಉಪ್ಪಾಗೆ ಹಣ್ಣಿನ ಸೇವನೆಯಿಂದ ಮಲಬದ್ದತೆ, ಮುಟ್ಟಿನತೊಂದರೆ, ಜಂತುಹುಳದ ಬಾಧೆ ಮುಂತಾದವುಗಳನ್ನು ನಿವಾರಿಸಬಹುದು. ಕಣ್ಣುತುರಿ, ಕಾಲಿನ ಒಡಕಿಗೂ ಇದು ಮದ್ದು.
ಹಣ್ಣಿನ ಬೀಜವು ಕೊಬ್ಬಿನಂಶ ಹೊಂದಿದ್ದು ಇದರಿಂದ ತುಪ್ಪವನ್ನು ತೆಗೆಯಲಾಗುತ್ತದೆ. ಇದರ ಬೀಜಗಳನ್ನು ಒಣಗಿಸಿ ಕುಟ್ಟಿ ಬೇಯಿಸಿದರೆ ಇದರ ಕೊಬ್ಬು ಖಾದ್ಯ ತೈಲವಾಗಿ ಲಭ್ಯ. ಇದು ಹಳದಿ ಬಣ್ಣದಿಂದ ತುಪ್ಪದಂತೆ ಗಟ್ಟಿಯಾಗುವ ಗುಣವನ್ನು ಹೊಂದಿದ್ದು ತಿಂಡಿತಿನಿಸುಗಳ ತಯಾರಿಗೆ ಯೋಗ್ಯವಾಗಿದೆ. ಮಲೆನಾಡಿನಲ್ಲಿ ಇದು ಉಪ್ಪಾಗೆ ತುಪ್ಪ ಎಂದು ಬಳಸಲ್ಪಡುತ್ತದೆ.
ಪುನರ್ಪುಳಿಯಂತೆ ಶರಬತ್ತು ಕೂಡ ತಯಾರುಮಾಡಬಹುದು.
ಆರೋರೂಟ್
ಸಸ್ಯಜನ್ಯ ಪಿಷ್ಠ, ರೂಢನಾಮ ಸಬ್ಬಕ್ಕಿ. ಅನೇಕ ತರಹ ಸಸ್ಯಗಳು ತಮ್ಮ ಗೆಡ್ಡೆಗೆಣಸುಗಳಲ್ಲಿ ಶೇಖರಿಸುವ ಪಿಷ್ಟ ಪದಾರ್ಥ ಇದರ ಮೂಲ. ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಸಬ್ಬಕ್ಕಿ ಮಾರಾಟ ಮತ್ತು ಕರ್ಕ್ಯೂಮ ಎಂಬ ಸಸ್ಯಗಳ ಪಿಷ್ಟ ಮೂಲಗಳಿಂದ ದೊರೆತದ್ದು. ಬೇರೆ ಬೇರೆ ಜಾತಿಯ ಇನ್ನಿತರ ಸಸ್ಯಗಳ ಪಿಷ್ಟ ಮೂಲಗಳನ್ನೂ ಸಬ್ಬಕ್ಕಿಯ ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಅಂಗಡಿಗಳಲ್ಲಿ ದೊರೆಯುವ ಸಬ್ಬಕ್ಕಿ ರಾಗಿ ಕಾಳಿನ ಪ್ರಮಾಣದಲ್ಲಿದೆ. ಬಣ್ಣ ಬಿಳುಪು. ನೀರಿನಲ್ಲಿ ಕುದಿಸಿದಮೇಲೆ ಬಿಳುಪು ಬಣ್ಣ ಬದಲಾಗಿ ಬಣ್ಣವೇ ಇಲ್ಲದ ಸ್ಪರ್ಶಿಸಿದರೆ ನುಣುಚಿಕೊಳ್ಳುವ ಪದಾರ್ಥವಾಗಿ ಮಾರ್ಪಾಟು ಹೊಂದುತ್ತದೆ. ರೋಗಿಗಳ ಗಂಜಿಗೂ ಇನ್ನಿತರ ಅಡಿಗೆ ಪದಾರ್ಥಗಳ ತಯಾರಿಕೆಯಲ್ಲೂ ಇದನ್ನು ಬಳಸುವರು. ಅಂಗರಾಗಚೂರ್ಣ ಮತ್ತು ಇತರ ಅಲಂಕಾರ ಸಾಮಗ್ರಿಗಳ ತಯಾರಿಕೆಯಲ್ಲೂ ಇದನ್ನು ಉಪಯೋಗಿಸುವರು. ಬಾರ್ಲಿ ಗಂಜಿಯ ಬದಲಾಗಿ ಸಬ್ಬಕ್ಕಿ ಗಂಜಿಯನ್ನು ಸೇವಿಸುವುದುಂಟು. ಪಿಷ್ಟಪದಾರ್ಥ ಅಗತ್ಯವೆನಿಸುವ ವಸ್ತುಗಳ ತಯಾರಿಕೆಯಲ್ಲಿ ಬಹುಮಟ್ಟಿಗೆ ಆರೋರೂಟನ್ನು ಬಳಸುವರು. ಭಾರತದಲ್ಲಿ ಆರೋರೂಟ್ ಅಥವಾ ಅದರ ಸಮಾನವೆನಿಸುವ ಬೆರಕೆ ಪದಾರ್ಥಗಳ ತಯಾರಿಕೆಯಲ್ಲಿ ಕೆಲವು ಸಸ್ಯಗಳ ಉತ್ಪನ್ನಗಳನ್ನು ಬಳಸುವರು.
ಮಾರಾಂಟ ಗಿಡ ಭಾರತದ ಕೆಲವು ಕಡೆಗಳಲ್ಲಿ ತಾನಾಗಿ ಬೆಳೆಯುತ್ತದೆ. ಉತ್ತರ ಪ್ರದೇಶ, ಬಿಹಾರ್, ಒಡಿಶಾ, ಬಂಗಾಳ ಮತ್ತು ಕೇರಳಗಳಲ್ಲಿ ಇದನ್ನು ಬೆಳೆಸುವರು. ಈ ಗಿಡ ಮರಳು ಮಿಶ್ರಿತಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಅದನ್ನು ನೆಟ್ಟ ೧೦-೧೧ ತಿಂಗಳಲ್ಲಿ ಗೆಡ್ಡೆ ಬಲಿತು ಸಿದ್ಧವಾಗುತ್ತದೆ. ಎಕರೆಗೆ ಸಾಧಾರಣವಾಗಿ ೪ -೭ ಟನ್ಗಳವರೆಗೂ ಫಸಲು ಕೊಡುತ್ತದೆ. ಗೆಡ್ಡೆಗಳಲ್ಲಿ ನೀಲಿ ಮತ್ತು ಹಳದಿ ಸಿಪ್ಪೆಯ ಹೊದಿಕೆಯುಳ್ಳ ಎರಡು ಬಗೆಗಳಿವೆ. ನೀಲಿ ಛಾಯೆಯ ಗೆಡ್ಡೆ ಹೆಚ್ಚು ಪ್ರಮಾಣದಲ್ಲಿ ಫಸಲು ಕೊಡುತ್ತದೆ.
ಕಕೂಯ್ರ್ಮ್ ಗಿಡ ಮಧ್ಯಪ್ರದೇಶ, ಬಂಗಾಳ, ಮುಂಬಯಿ, ಮದ್ರಾಸ್ ಮತ್ತು ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿ ಬೆಳೆಯುತ್ತದೆ. ಗಿಡವನ್ನು ಸಾಧಾರಣವಾಗಿ ಆಗಸ್ಟ್ ಸೆಪ್ಟೆಂಬರ್ ತಿಂಗಳುಗಳಲ್ಲಿ ನೆಟ್ಟು ಜನವರಿ ಹೊತ್ತಿಗೆ ಫಸಲು ತೆಗೆಯುತ್ತಾರೆ. ಸರಾಸರಿ ಎಕರೆಗೆ ೧೫೦೦-೧೮೦೦ ಕೆಜಿಗಳವರೆಗೆ ಗೆಡ್ಡೆ ಉತ್ಪತ್ತಿಯಾಗು ತ್ತದೆ. ಮೇಲೆ ಹೇಳಿದ ಈ ಎರಡೇ ಗಿಡಗಳಿಂದ ಸಾಚಾ ಆರೋರೂಟನ್ನು ತಯಾರಿಸಿದರೂ ಇತರ ಕೆಲವು ಸಸ್ಯಗಳ ಗೆಡ್ಡೆಗೆಣಸುಗಳ ಪಿಷ್ಠಮೂಲಗಳಿಂದಲೂ ಆರೋರೂಟನ್ನು ಹೋಲುವ ಪದಾರ್ಥಗಳನ್ನು ತಯಾರಿಸುವರು. ಕೇರಳ ಪ್ರಾಂತ್ಯದ ಜನರಿಗೆ ಅಕ್ಕಿಯ ಬದಲು ಉಪಯೋಗಕ್ಕೆ ಬರುವ ಆಹಾರವೆಂದರೆ ಇದೇ. ಸಾಮಾನ್ಯವಾಗಿ ಇದನ್ನು ಟ್ಯಾಪಿಯೋಕ ಎಂದೂ ಕರೆಯುತ್ತಾರೆ. ಕೇರಳದಲ್ಲಿ ಸುಮಾರು ೬,೧೮,೦೦೦ ಎಕರೆಗಳಲ್ಲಿ ಇದನ್ನು ಬೆಳೆಯುತ್ತಾರೆ. ಕೆಲವು ಶತಮಾನಗಳ ಹಿಂದೆ ಪೋರ್ಚುಗೀಸರು ಕೇರಳಕ್ಕೆ ಈ ಸಸ್ಯವನ್ನು ತಂದರಂತೆ. ಇದು ಒಂದು ಎಕರೆಗೆ ಸರಾಸರಿ ೩೬೦೦ ಕೆಜಿಗಳಷ್ಟು ಗೆಡ್ಡೆಯ ಫಸಲನ್ನು ಕೊಡುತ್ತದೆ.
ಬಿಹಾರ್ ರಾಜ್ಯದ ಸರಾಮ್, ಚಂಪಾರಣ್ಯ, ಮಿಜಾಪುರ, ದರ್ಭಾಂಗ ಜಿಲ್ಲೆಗಳಲ್ಲೂ ಉತ್ತರ ಪ್ರದೇಶದ ಸುಲ್ತಾನ್ಪುರ, ಈಟಾ, ಪ್ರತಾಪ್ಘಡ, ಫರೂಕಾಬಾದ್ ಮತ್ತು ಗೊಂಡಾ ಜಿಲ್ಲೆಗಳಲ್ಲೂ ಪಶ್ಚಿಮ ಬಂಗಾಳದ ಮಿಡ್ನಾಪುರ ಮತ್ತು ಹೂಗ್ಲಿ ಜಿಲ್ಲೆಗಳಲ್ಲೂ ತಮಿಳುನಾಡಿನ ತಿರುಚಿರಾಪಳ್ಳಿ ಮತ್ತು ದಕ್ಷಿಣ ಆರ್ಕಾಟ್ ಜಿಲ್ಲೆಗಳಲ್ಲೂ ಆಂಧ್ರ ಪ್ರದೇಶದ ವಿಶಾಖಪಟ್ಟಣ, ಶ್ರೀಕಾಕುಳಂ, ಕಡಪ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲೂ ಮೈಸೂರಿನ ಬೆಳಗಾವಿ, ಕೆನರಾ, ಹಾಸನ ಮತ್ತು ಕೋಲಾರ ಜಿಲ್ಲೆಗಳಲ್ಲೂ ಕೇರಳದ ಮಲಬಾರ್ ಜಿಲ್ಲೆಯಲ್ಲಿಯೂ ಅತ್ಯಧಿಕವಾಗಿ ವ್ಯವಸಾಯದ ಲ್ಲಿದೆ. ಡಯೋಸ್ಕೋರಿಯ ಎಸ್ಕುಲೆಂಟ ಮತ್ತು ಡಯೋಸ್ಕೋರಿಯ ಅಲೇಟ ಎಂಬುವು ಮುಂಬಯಿನ ತೀರ ಪ್ರದೇಶದಲ್ಲೂ ಮಲಬಾರ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ್, ಒರಿಸ್ಸಗಳಲ್ಲೂ ಬೆಳೆಯುವ ಗಿಡಗಳು. ಈ ಗಿಡಗಳ ಗೆಣಸುಗಳನ್ನು ಸಹ ಆರೋರೂಟಿನಂತೆ ಪಿಷ್ಟದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಆರೋರೂಟನ್ನು ತಯಾರಿಸುವ ಕ್ರಮ
ಚೆನ್ನಾಗಿ ಬಲಿತ ಮ್ಯಾನಿಹಾಟ್ ಅಥವಾ ಕಕೂರ್ಯ್ಮ್ಗಳ ಗೆಡ್ಡೆಗಳನ್ನು ಮೊದಲು ಶೇಖರಿಸಿ ಆ ಗೆಡ್ಡೆಗಳ ಉಪಯೋಗಕ್ಕೆ ಬಾರದಿರುವ ಭಾಗಗಳನ್ನು ಕತ್ತರಿಸಿ ತೆಗೆದುಹಾಕಬೇಕು. ಅನಂತರ ಗೆಡ್ಡೆಗಳ ಮೇಲಿನ ಸಿಪ್ಪೆಯನ್ನು ಸುಲಿದು ಚೆನ್ನಾಗಿ ಜಜ್ಜಿ ಹಿಟ್ಟಿನ ರೂಪಕ್ಕೆ ತರಬೇಕು. ಯಂತ್ರಗಳು ಇದನ್ನು ನೆರವೇರಿಸುತ್ತವೆ. ಹಿಟ್ಟನ್ನು ನೀರಿನಲ್ಲಿ ಕದಡಿ ಸ್ವಲ್ಪ ಮದುಡಾಗಿರುವ ಬಟ್ಟೆಗಳ ಮುಖಾಂತರ ಶೋಧಿಸಬೇಕು. ಆಗ ಕಸಕಡ್ಡಿಗಳು ಬೇರೆಯಾಗುತ್ತವೆ. ತಳದಲ್ಲಿ ನಿಲ್ಲುವ ಹಾಲಿನಂಥ ಬಗ್ಗಡವನ್ನು ಅತಿ ನುಣುಪಾದ ಕಡಾಯಿಗಳಲ್ಲಿ ಶೇಖರಿಸಬೇಕು. ಕೆಲವು ಗಂಟೆಗಳ ತರುವಾಯ ಮೇಲೆ ಕಟ್ಟುವ ತಿಳಿ ನೀರನ್ನು ವಿಸರ್ಜಿಸಿ ಮತ್ತೆ ಶುಭ್ರವಾದ ನೀರಿನಿಂದ ಅಡಿಯಲ್ಲಿ ಹೆಕ್ಕಳಿಕೆ ಹೆಕ್ಕಳಿಕೆಯಾಗಿ ನಿಂತಿರುವ ಪಿಷ್ಟವನ್ನು ತೊಳೆದು ಶುದ್ಧಿಪಡಿಸಬೇಕು. ಹೀಗೆ ಶುದ್ಧಿಪಡಿಸಿದ ಪಿಷ್ಠದ ಹೆಕ್ಕಳಿಕೆಗಳನ್ನು ಬಿಸಿಲಲ್ಲಾಗಲಿ, ಬೆಂಕಿಯ ಕಾವಿನಲ್ಲಾಗಲಿ ಒಣಗಿಸಬೇಕು. ಈ ಪದಾರ್ಥವನ್ನು ಶೈತ್ಯ ತಡೆಯುವ ಹೊದಿಕೆಯುಳ್ಳ ಡಬ್ಬಗಳಲ್ಲಿ ಶೇಖರಿಸಬೇಕು. ಆರೋರೂಟನ್ನು ರಾಗಿ ಕಾಳಿನಂತೆಯೋ, ಹಿಟ್ಟಿನ ರೂಪದಲ್ಲಿ ಉಪಯೋಗಿಸಬಹುದು.
ಧನ್ಯವಾದಗಳು.
GIPHY App Key not set. Please check settings