in

ಆಹಾರ ಸಸ್ಯಗಳು ಎಂದರೆ ಏನು ಎಂದು ತಿಳಿಯೋಣ

ಆಹಾರ ಸಸ್ಯಗಳು
ಆಹಾರ ಸಸ್ಯಗಳು

ಮನುಷ್ಯನ ಮತ್ತು ಪ್ರಾಣಿಗಳ ದೇಹದ ಬೆಳೆವಣಿಗೆಗೆ ಅತ್ಯಾವಶ್ಯಕವಾದ ಪಿಷ್ಟಪದಾರ್ಥಗಳು, ನೈಟ್ರೊಜನ್, ಮೇದಸ್ಸು, ಜೀವಸತ್ವಗಳು, ಲವಣ, ಕ್ಯಾಲ್ಸಿಯಂ, ಫಾಸ್ಫರಸ್ ಮುಂತಾದ ಪೋಷಕಾಂಶಗಳನ್ನು ಒದಗಿಸುವ, ತಿನ್ನಲು ಯೋಗ್ಯವಾದ ಸಸ್ಯಗಳು. ಈ ಸಸ್ಯಗಳ ಕಾಯಿ ಹಣ್ಣುಗಳನ್ನೋ ನೇರವಾಗಿ ಅವುಗಳ ಸೊಪ್ಪನ್ನೋ ಗೆಡ್ಡೆ ಬೇರು ದಿಂಡುಗಳನ್ನೋ ಬಳಸುವುದು ರೂಢಿ. ಈ ಎಲ್ಲ ಅಂಶಗಳೂ ಒಂದೇ ಜಾತಿಯ ಸಸ್ಯ ಅಥವಾ ಸಸ್ಯಭಾಗದಲ್ಲಿ ಕೂಡಿರುವುದಿಲ್ಲ. ಬೇರೆ ಬೇರೆ ಸಸ್ಯಗಳಲ್ಲಿ ಬೇರೆ ಬೇರೆ ಪೋಷಕಾಂಶಗಳಿರುತ್ತವೆ. ಆದ್ದರಿಂದ ಬೇರೆ ಬೇರೆ ಆಹಾರ ಸಸ್ಯಗಳನ್ನು ಅವು ನೀಡುವ ಫಲವನ್ನು ಯುಕ್ತರೀತಿಯಲ್ಲಿ ಉಪಯೋಗಿಸಬೇಕು. ಈ ಪೋಷಕಾಂಶಗಳನ್ನು ಪಡೆಯುವಲ್ಲಿ ಸಸ್ಯದ ಉತ್ಪನ್ನಗಳನ್ನು ಬಹುವಾಗಿ ಬಳಸಿದ ಅನಂತರ ಉಳಿದ ಭಾಗವನ್ನು ಪ್ರಾಣಿಗಳ ಸೇವನೆಗೆ ಉಳಿಸುವುದು ರೂಢಿ.

ಆಹಾರ ಸಸ್ಯಗಳ ಪಂಗಡ : ಪ್ರಾಣಿಗಳ ಆಹಾರಕ್ಕೆ ಹಲವು ಸಸ್ಯಗಳು ಮಾತ್ರ ಉಪಯುಕ್ತ. ಅಂಥ ಸಸ್ಯಗಳ ಪುರ್ಣಭಾಗ ಪ್ರಾಣಿಗಳಿಗೆ ಆಹಾರವಾಗುತ್ತದೆ. ಉದಾಹರಣೆಗೆ ಬತ್ತ, ರಾಗಿ, ಗೋದಿ. ಇನ್ನು ಕೆಲವು ಸಸ್ಯದ ಕೆಲಭಾಗ ಮಾತ್ರ ಉಪಯುಕ್ತವಾಗುತ್ತವೆ – ಆಲೂಗೆಡ್ಡೆ, ವಿವಿಧ ಹಣ್ಣಿನ ಮರಗಳು. ಪೋಷಕಾಂಶಗಳನ್ನು ಪ್ರಾಣಿಗಳಿಗೆ ಒದಗಿಸುವ ಸಸ್ಯಗಳನ್ನು ಅವುಗಳ ಉಪಯುಕ್ತತೆ ಮತ್ತು ಆ ಸಸ್ಯಗಳಲ್ಲಿರುವ ಪೋಷಕಾಂಶಗಳ ದೃಷ್ಟಿಯಿಂದ ಮೂರು ಮುಖ್ಯ ಪಂಗಡವಾಗಿ ವಿಂಗಡಿಸಬಹುದು :೧. ಧಾನ್ಯ, ೨. ತರಕಾರಿ. ೩. ಹಣ್ಣುಹಂಪಲು.

ಆಹಾರ ಸಸ್ಯಗಳು ಎಂದರೆ ಏನು ಎಂದು ತಿಳಿಯೋಣ
ತರಕಾರಿಗಳು

ಆಹಾರದಲ್ಲಿ ತರಕಾರಿಗಳ ಪಾತ್ರ ಬಲು ಹಿರಿದು. ಧಾನ್ಯಗಳಿಗಿಂತ ಇವು ಅತಿಮುಖ್ಯ ಆಹಾರವಾದರೂ ಅವುಗಳ ಬಳಕೆ ಸಮಂಜಸವಾಗಿಲ್ಲ. ಅತ್ಯಲ್ಪ ಕಾಲದಲ್ಲಿಯೇ ಹೆಚ್ಚು ಪ್ರಮಾಣದ ಪೋಷಕಾಂಶಗಳನ್ನು ಇವುಗಳಿಂದ ಪಡೆಯಬಹುದು. ವಿವಿಧಜಾತಿಯ ಸೊಪ್ಪುಗಳು ಮತ್ತು ತಿಂಗಳ ಹುರುಳಿ ಇತ್ಯಾದಿ ಈ ಗುಂಪಿನ ಆಹಾರಕ್ಕೆ ಸೇರಿವೆ. ಒಂದು ನಿಯತ ಅವಧಿಯಲ್ಲಿ ಒಂದು ನಿರ್ದಿಷ್ಟಪ್ರದೇಶದಲ್ಲಿ ಬೆಳೆಯುವ ಧಾನ್ಯಗಳಿಗಿಂತ 4-5ರಷ್ಟು ಹೆಚ್ಚು ಪ್ರಮಾಣದಲ್ಲಿ ತರಕಾರಿಗಳನ್ನು ಬೆಳೆಸಬಹುದು. ಇವುಗಳಲ್ಲಿ ಪಿಷ್ಟಪದಾರ್ಥದ ಜೊತೆಗೆ ಲವಣಾಂಶಗಳೂ ಸಾರಜನಿಕ ಅಂಶ ಮತ್ತು ಅತಿಮುಖ್ಯವಾದ ಜೀವಸತ್ವಗಳೂ ಹೆಚ್ಚಾಗಿರುವುದರಿಂದ ಧಾನ್ಯಗಳೊಡನೆ ಇದನ್ನು ಸೇರಿಸಿ ಸೇವಿಸಿದರೆ ದೇಹಕ್ಕೆ ಹೆಚ್ಚಿನ ಪುಷ್ಟಿ ದೊರಕುತ್ತದೆ.

ಉಪಯುಕ್ತ ಸಸ್ಯಭಾಗಗಳ ಆಧಾರವನ್ನನುಸರಿಸಿ ತರಕಾರಿಗಳನ್ನು ನಾಲ್ಕು ಮುಖ್ಯ ಪಂಗಡಗಳಾಗಿ ವಿಂಗಡಿಸಬಹುದು :

೧. ಆಲೂಗೆಡ್ಡೆ, ಗೆಣಸು, ಮರಗೆಣಸು ಮುಂತಾದುವು. ಇವು ಧಾನ್ಯಗಳಂತೆಯೇ ಹೆಚ್ಚಿನ ಪಿಷ್ಟಾಂಶಗಳನ್ನು ಒದಗಿಸುತ್ತವೆ. ಇವು ಭೂಮಿಯೊಳಗಡೆ ಬೆಳೆಯುವ ಆಹಾರವಸ್ತುಗಳು. ಬೇರು ಅಥವಾ ಭೂಮಿಯೊಳಗಿನ ರೆಂಬೆಗಳಲ್ಲಿ ಆಹಾರ ಶೇಖರಿಸಲ್ಪಡುತ್ತದೆ. ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಈರುಳ್ಳಿ, ಬೆಳ್ಳುಳ್ಳಿ, ಸುವರ್ಣಗಡ್ಡೆ ಮುಂತಾದುವುಗಳೆಲ್ಲ ಉತ್ತಮ ಆಹಾರ ಒದಗಿಸುವ ತರಕಾರಿಗಳು.

ಆಹಾರ ಸಸ್ಯಗಳು ಎಂದರೆ ಏನು ಎಂದು ತಿಳಿಯೋಣ
ಲೆಟಿಸ್ ಎಲೆಕೋಸು, ಪುದೀನ, ಬಸಳೆ

೨. ಕಾಂಡ ಮತ್ತು ಎಲೆಗಳನ್ನು ಆಹಾರಕ್ಕಾಗಿ ಒದಗಿಸುವ ಸಸ್ಯಗಳು. ಈ ಬಗೆಯ ಸಸ್ಯಗಳು ದೇಹದಲ್ಲಿ ಮಲಬದ್ಧತೆಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುತ್ತವೆ. ವಿವಿಧ ಜೀವಸತ್ವಗಳನ್ನು ಒದಗಿಸುವ ವಿವಿಧ ಜಾತಿಯ ಸೊಪ್ಪುಗಳಲ್ಲಿ ಲೆಟಿಸ್ ಎಲೆಕೋಸು, ಪುದೀನ, ಬಸಳೆ ಮುಖ್ಯವಾದವು. ಇವುಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸಿ ಮತ್ತು ಎ ಜೀವಸತ್ವಗಳು ಹೆಚ್ಚು.

೩. ಕಾಯಿ ಮತ್ತು ಹಣ್ಣುಗಳನ್ನು ಮಾತ್ರ ಒದಗಿಸುವ ಸಸ್ಯಗಳು ಮೂರನೆಯ ವರ್ಗ. ಇವುಗಳ ಬೇರು, ಕಾಂಡ ಮತ್ತು ಎಲೆ ಉಪಯುಕ್ತವಾಗುವುದಿಲ್ಲ. ಕಾಯಿ ಮತ್ತು ಹಣ್ಣುಗಳು ಉತ್ತಮ ಆಹಾರವಾಗುತ್ತವೆ. ಬದನೆ, ಬೆಂಡೆ, ಟೊಮ್ಯಾಟೊ, ಕುಂಬಳ, ಸೋರೆ, ಪಡವಲ, ಸೌತೆ, ಹಾಗಲ, ಹೀರೆ, ಇವೆಲ್ಲವೂ ಈ ಗುಂಪಿನವು. ಸಿ, ಬಿ, ಮತ್ತು ಎ ಜೀವಸತ್ವಗಳು ಇವುಗಳಲ್ಲಿವೆ.

೪.ನಾಲ್ಕನೆಯದು ಸಣ್ಣ ಪಂಗಡ. ಅವುಗಳಲ್ಲಿ ಹೂ ಮಾತ್ರ ಉಪಯುಕ್ತ. ಸಾಮಾನ್ಯವಾಗಿ ಸಮಶೀತೋಷ್ಣ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವ ಹೂಕೋಸು ಮತ್ತು ಬಾಳೆಯ ಮೋತೆ ಈ ಗುಂಪಿಗೆ ಸೇರಿವೆ.

ಆಹಾರ ಸಸ್ಯಗಳು ಎಂದರೆ ಏನು ಎಂದು ತಿಳಿಯೋಣ
ಹಣ್ಣುಗಳು

ಹಣ್ಣುಗಳ ವಿಭಾಗಕ್ಕೆ ವಿವಿಧ ಉಪಯುಕ್ತ ಬೀಜಗಳೂ ಸೇರುತ್ತವೆ. ಹಣ್ಣುಗಳಲ್ಲಿ ಹೊರತಿರುಳು ಅಥವಾ ಒಳಬೀಜ ಉಪಯುಕ್ತವಾಗುತ್ತವೆ. ಹಲವು ಹಣ್ಣುಗಳನ್ನು ಪುರ್ಣವಾಗಿ ಉಪಯೋಗಿಸಲಾಗುವುದು. ಉದಾ: ಮಾವು, ಹಲಸು, ಸಪೋಟ, ಸೀಬೆ, ನಿಂಬೆ, ಕಿತ್ತಳೆ ಜಾತಿಗಳು, ಪರಂಗಿ, ಬಾಳೆ, ದ್ರಾಕ್ಷಿ, ಸೇಬು, ದಾಳಿಂಬೆ. ಇವುಗಳಲ್ಲೆಲ್ಲ ಸಿ ಜೀವಸತ್ವ ಅಧಿಕವಿರುತ್ತದೆ. ಮಾವು ಮತ್ತು ಪರಂಗಿ ಹಣ್ಣುಗಳಲ್ಲಿ ಎ ಜೀವಸತ್ವ ಇದೆ. ಹಣ್ಣುಗಳಲ್ಲಿ ಕೆಲವನ್ನು ಒಣಗಿಸಿ ಬಲುಕಾಲ ಇಟ್ಟು ಅನಂತರ ಉಪಯೋಗಿಸಬಹುದು. ಖರ್ಜೂರ ಮತ್ತು ದ್ರಾಕ್ಷಿ ಇವುಗಳಿಗೆ ಮುಖ್ಯ ಉದಾಹರಣೆ. ಇವುಗಳಲ್ಲಿ ಕಬ್ಬಿಣದ ಅಂಶ ಹೆಚ್ಚು. ಬಾಳೆಯಲ್ಲಿ ಪಿಷ್ಟಪದಾರ್ಥ ಮತ್ತು ಕೆ ಜೀವಸತ್ವ ಇರುತ್ತವೆ. ಹಣ್ಣುಗಳ ಒಳತಿರುಳು ಆಹಾರಕ್ಕೆ ಉಪಯುಕ್ತವಲ್ಲದೆ, ಕೇವಲ ಬೀಜ ಉಪಯುಕ್ತವಾಗುವುದೂ ಉಂಟು. ನೆಲಗಡಲೆ ಮತ್ತಿತರ ಎಣ್ಣೆಬೀಜಗಳು, ಬಾದಾಮಿ, ಗೋಡಂಬಿ, ಪಿಸ್ತ ಇವುಗಳಲ್ಲಿ ಕೊಬ್ಬಿನ ಅಂಶ ಹೆಚ್ಚು. ಇವು ಉತ್ತಮ ಪೋಷಕ ಆಹಾರ ವಸ್ತುಗಳು. ಈ ಆಹಾರಸಸ್ಯಗಳಲ್ಲದೆ, ನಾವು ಪ್ರತಿನಿತ್ಯ ಸೇವಿಸುವ ಆಹಾರಕ್ಕೆ ಒಳ್ಳೆಯ ರುಚಿಯನ್ನುಂಟುಮಾಡುವ ಹಲವು ವಸ್ತುಗಳು ಆಹಾರಸಸ್ಯವರ್ಗಕ್ಕೆ ಸಂಬಂಧಿಸಿವೆ. ಮೆಣಸಿನಕಾಯಿ, ಮೆಣಸು, ಏಲಕ್ಕಿ, ದಾಲ್ಚಿನ್ನಿ, ಲವಂಗ, ಮುಂತಾದುವು ರುಚಿಪ್ರಧಾನವಾಗಿ ಉಪಯುಕ್ತವಾದರೂ ಅವುಗಳಲ್ಲಿ ಆಹಾರಾಂಶಗಳೂ ಇವೆ. ಹಸಿ ಮೆಣಸಿನಕಾಯಿಯಲ್ಲಿ ಸಿ ಜೀವಸತ್ವ ಇದೆ. ಮೆಣಸಿನಕಾಯಿ, ಕೊತ್ತಂಬರಿಯಲ್ಲಿ ಕೆರೋಟಿನ್ ಹೆಚ್ಚಾಗಿದೆ. ಅರಿಸಿನ ಮತ್ತು ಹುಣಿಸೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿದೆ. ಅಲ್ಲದೆ ಇಂಗು ಮತ್ತು ಬೆಳ್ಳುಳ್ಳಿಯಲ್ಲಿನ ಸತ್ತ್ವ ಜೀರ್ಣಕಾರಿಯಾದ ಸೂಕ್ಷ್ಮಜೀವಿಗಳನ್ನು ಕರುಳಿನಲ್ಲಿ ವೃದ್ಧಿಸಿ ಜೀರ್ಣಶಕ್ತಿ ಹೆಚ್ಚಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಐರಿಸ್ - ಹೂವು

ಐರಿಸ್ – ಹೂವು ಕಾಮನಬಿಲ್ಲಿನಂತೆ ಕಂಗೊಳಿಸುತ್ತದೆ

ಸೌರ ವಿದ್ಯುತ್ ವಾಹನ

ಸೌರ ವಿದ್ಯುತ್ ವಾಹನ ಎಂದರೆ ಏನು?