ಕ್ರಿಕೆಟ್ ನಲ್ಲಿ ಉತ್ತಮ ಪ್ರತಿಭೆ ಜತೆಗೆ ವಿದ್ಯೆಯ ಬಲ ಇರುವವರು ತೀರಾ ಕಡಿಮೆ. ಆದರೆ, ಕುಂಬ್ಳೆ ಅವರು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದುಕೊಂಡಿದ್ದಾರೆ. ಛಾಯಾಗ್ರಹಣ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನಿಲ್ ಕುಂಬ್ಳೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ನಡೆಸುವ ಜವಾಬ್ದಾರಿ, ಐಸಿಸಿ ಕ್ರಿಕೆಟ್ ಕಮಿಟಿ ಕ್ರಿಕೆಟ್ ಸಮಿತಿಯ ಚೇರ್ಮನ್ ಆಗಿ ಸಮರ್ಥರಾಗಿ ಕಾರ್ಯನಿರ್ವಹಿಸಿದ್ದರು.
ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ ಜನನ : ಅಕ್ಟೋಬರ್ ೧೭, ೧೯೭೦ ಬೆಂಗಳೂರಿನಲ್ಲಿ. ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ. ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು,ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.

ಭಾರತ ೧೯೯೨ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಾಗ ಇವರು ತಮ್ಮ ಗುಣಮಟ್ಟವನ್ನು ಸ್ಥಾಪಿಸಿದರು, ೨ನೇ ಟೆಸ್ಟ್‌ನಲ್ಲಿ ೮ ವಿಕೆಟ್‌ಗಳನ್ನು ಉರುಳಿಸಿದರು. ಅದೇ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಬಂದಾಗ, ಕೇವಲ ೩ ಪಂದ್ಯಗಳಲ್ಲಿ ೨೧ ವಿಕೆಟ್‌ಗಳನ್ನು ಸರಾಸರಿ ೧೯.೮ ರಲ್ಲಿ ತೆಗೆದುಕೊಂಡರು. ಇವರು ಮೊದಲ ೫೦ ವಿಕೆಟ್‌ಗಳನ್ನು ಕೇವಲ ೧೦ ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಇದನ್ನು ಸಾಧಿಸಿದ ಭಾರತದ ಏಕೈಕ ಬೌಲರ್ ಆಗಿ ಉಳಿದಿದ್ದಾರೆ. ಎರಪಳ್ಳಿ ಪ್ರಸನ್ನರವರಾದ ಮೇಲೆ ೧೦೦ ಟೆಸ್ಟ್ ವಿಕೆಟ್‌ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಇವರಾದರು. ಇವರು ಇದನ್ನು ಸಾಧಿಸಿದ್ದು ೨೧ ಪಂದ್ಯಗಳಲ್ಲಿ. ಒಂದುದಿನದ ಪಂದ್ಯಗಳಲ್ಲಿ, ಇವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ ೨೭, ೧೯೯೩ ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ, ಇವರು ಕೇವಲ ೧೨ ರನ್‌ಗಳಿಗೆ ೬ ವಿಕೆಟ್‌ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್‌ನ ಅತ್ಯುತ್ತಮ ಸಾಧನೆಗಿಂತ ಹಿರಿದಾದುದಲ್ಲದೆ, ೧೦ ವರ್ಷಗಳಿಂದಲೂ ಇದು ಖಾಯಂ ಆಗಿ ಯಾರಿಂದಲೂ ಮುರಿಯದೆಯೇ ಉಳಿದಿದೆ. ವರ್ಷವಾರು ನೋಡಿದಲ್ಲಿ, ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು ೧೯೯೬ರಲ್ಲಿ. ಈ ವರ್ಷದಲ್ಲಿ ಇವರು ೬೧ ವಿಕೆಟ್‌ಗಳನ್ನು ಉರುಳಿಸಿದರು, ಒಟ್ಟು ೨೦.೨೪ ಸರಾಸರಿಯಲ್ಲಿ. ಇವರ ಎಕಾನಮಿ ರೇಟ್ ೪.೦೬ ಆಗಿತ್ತು. ಇದೇ ವರ್ಷ ಏಶಿಯಾದಲ್ಲಿ ವಿಶ್ವ ಕಪ್ ನಡೆದದ್ದು.
ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ ಫೆಬ್ರವರಿ ೪-ಫೆಬ್ರವರಿ ೮ ೧೯೯೯ನಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ ಎಂದು ನಾಮಕರಣ ಮಾಡಲಾಗಿದೆ.

ಡಿಸೆಂಬರ್ ೧೦, ೨೦೦೪ – ಕಪಿಲ್ ದೇವ್ ಅವರ ೪೩೪ ವಿಕೆಟುಗಳನ್ನು ದಾಟಿದ ಅನಿಲ್ ಕುಂಬ್ಳೆ. ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್‍ಗಳನ್ನು ಪಡೆದ ಭಾರತದ ಬೌಲರ್ ಎಂಬ ಕೀರ್ತಿ.
ಮಾರ್ಚ್ ೧೧, ೨೦೦೬ – ೫೦೦ ಟೆಸ್ಟ್ ವಿಕೆಟುಗಳ ಸಾಧನೆ.
ಜೂನ್ ೧೧, ೨೦೦೬ – ವೆಸ್ಟ್ ಇಂಡೀಸಿನ ಕರ್ಟ್ನಿ ವಾಲ್ಷ್ ಅವರ ೫೨೦ ವಿಕೆಟುಗಳ ಗುರಿ ದಾಟಿದ ಕುಂಬ್ಳೆ.
ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್‍ಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಮುನ್ನಡೆ.
೩೦೦ ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್.
ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪೈಕಿ ಮೂರನೆಯವರು. ( ೫೬೬ ವಿಕೆಟ್).
ಫೆಬ್ರುವರೀ ೧೯೯೯ರಲ್ಲಿ ಪಾಕಿಸ್ತಾನದ ವಿರುದ್ದ ದೆಹಲಿಯಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ೧೦ ವಿಕೆಟ್.
ಅನಿಲ್ ಕುಂಬ್ಳೆ ಒಂಬತ್ತು ವಿಕೆಟ್ ಗಳಿಸಿದಾಗ ವಿಶ್ವದಾಖಲೆಯನ್ನು ತಪ್ಪಿಸಲು ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ಪರಿಶ್ರಮಿಸಿದ್ದರು. ಆದರೆ ಅನಿಲ್ ಕುಂಬ್ಳೆ ಚಮತ್ಕಾರದ ಮುಂದೆ ಏನೂ ನಡೆಯಲಿಲ್ಲ. 26.3 ಓವರ್‌ಗಳನ್ನು ಎಸೆದಿದ್ದ ಅನಿಲ್ ಕುಂಬ್ಳೆ 74 ರನ್ನಿಗೆ 10 ವಿಕೆಟ್ ಪಡೆದು ಜೀವಮಾನ ಶ್ರೇಷ್ಠ ಸಾಧನೆ ಮಾಡಿದರು. ಈ ಮೂಲಕ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುವಂತಾಯಿತು. ತಂಡದೆಲ್ಲ ಆಟಗಾರರು ಅನಿಲ್ ಕುಂಬ್ಳೆ ಅವರನ್ನು ತಬ್ಬಿಕೊಂಡರು. ಪಂದ್ಯವನ್ನು ಭಾರತ 212 ರನ್ ಅಂತರದಲ್ಲಿ ವಶಪಡಿಸಿಕೊಂಡಿತು.
ಅನಿಲ್ ಕುಂಬ್ಳೆ ಜುಂಬೋ ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ಜುಂಬೋ ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings