ಎತ್ತಿನ ಭುಜ ಅಂದರೆ ಎತ್ತಿನ ಭುಜವು ಕರ್ನಾಟಕದಲ್ಲಿ ಅನ್ವೇಷಿಸದ ಚಾರಣಗಳಲ್ಲಿ ಒಂದಾಗಿದೆ. ಸ್ಥಳೀಯರು ಈ ಚಾರಣವನ್ನು ಶಿಶಿಲ ಗುಡ್ಡ ಚಾರಣ ಎಂದು ಕರೆಯುತ್ತಾರೆ.
ಎತ್ತಿನ ಭುಜದ ಆಕಾರವನ್ನು ಹೋಲುವ ಬೆಟ್ಟ ಇದಾದ ಕಾರಣದಿಂದಾಗಿ ಇದಕ್ಕೆ ಎತ್ತಿನ ಭುಜ ಎಂಬ ಹೆಸರಿಡಲಾಗಿದೆ. ಶಿಶಿಲದ ದಾರಿಯಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರಿಯಿಂದ ಸುಮಾರು 20km ಬೈರಾಪುರ ಮಾರ್ಗವಾಗಿ ಇಲ್ಲಿಗೆ ಬಂದು ಚಾರಣ ಮಾಡಬಹುದು. ಬೈರಾಪುರದಲ್ಲಿ ಹೊಯ್ಸಳರ ಕಾಲದ ನಾಣ್ಯ ಭೈರವೇಶ್ವರ ದೇವಸ್ಥಾನವೊಂದಿದೆ. ಇದರ ಸಮೀಪ ನಾಣ್ಯವನ್ನು ಟಂಕಿಸುವ ಟಂಕಸಾಲೆಯಿದ್ದ ಕಾರಣ ಇದನ್ನು ನಾಣ್ಯ ಭೈರವೇಶ್ವರ ದೇವಸ್ಥಾನ ಎಂದು ಕರೆಯುತ್ತಾರೆ. ಅಲ್ಲದೆ ಬೆಟ್ಟದ ಬುಡದಲ್ಲಿರುವ ಕಾರಣ ಬೆಟ್ಟದ ಭೈರವೇಶ್ವರ ದೇವಸ್ಥಾನ ಎಂಬ ಹೆಸರೂ ಇದೆ. ದೇವಸ್ಥಾನದ ಬುಡದಲ್ಲಿ ವಾಹನ ಪಾರ್ಕ್ ಮಾಡಿ ಎತ್ತಿನ ಭುಜದ ತುತ್ತತುದಿಗೆ ಸುಮಾರು 5 ಕಿಲೋಮೀಟರ್ ನಾವು ಚಾರಣ ಮಾಡಬಹುದು.
ಸುತ್ತಲೂ ಹಚ್ಚ ಹಸುರಿನ ವನಸಿರಿ, ಸಸ್ಯಶ್ಯಾಮಲೆಯ ಮಧ್ಯೆ ಸಾಗುವ ಕಿರಿದಾದ ರಸ್ತೆಗಳ ಇಕ್ಕೆಲಗಳಲ್ಲಿ ತಲೆ ಎತ್ತಿ ನಿಂತಿರುವ ಗಿರಿ ಶಿಖರಗಳು. ಅಲ್ಲಿಂದ ಚಿಮ್ಮಿ ಬರುವ ಜಲಧಾರೆ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಾವು ಕಣ್ತುಂಬಿಕೊಳ್ಳಬಹುದಾದ ಸರ್ವೇ ಸಾಮಾನ್ಯ ದೃಶ್ಯಗಳು.
ಕಾಡಿನೊಳಗೆ ಟ್ರೆಕ್ಕಿಂಗ್ ಮಾಡುವುದು ಚಾರಣದ ಅತ್ಯಂತ ರೋಮಾಂಚನಕಾರಿ ಭಾಗವಾಗಿದೆ. ಹಿನ್ನಲೆಯಲ್ಲಿ ಕೂಗುವ ಹಕ್ಕಿಗಳು ಮತ್ತು ಗಾಳಿಯಲ್ಲಿ ಎಲೆಗಳು ಜುಮ್ಮೆನಿಸುತ್ತವೆ, ಅರಣ್ಯವನ್ನು ಪ್ರವೇಶಿಸಿದ ತಕ್ಷಣ ಸುತ್ತಮುತ್ತಲಿನ ವಾತಾವರಣದಲ್ಲಿ ಹಠಾತ್ ಬದಲಾವಣೆಯನ್ನು ಗಮನಿಸಬಹುದು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುತ್ತಲೂ ಸಂಚರಿಸುತ್ತಿದ್ದರೆ ಇಂತಹ ಬೆಟ್ಟಗಳು ಸಾಲು ಸಾಲಾಗಿ ಕಾಣಸಿಗುತ್ತವೆ. ಇಂತಹ ಬೆಟ್ಟಗಳ ಸಾಲಿನಲ್ಲಿ ಎತ್ತರವಾಗಿ ಎತ್ತಿನ ಭುಜದಂತಹ ರಚನೆ ಹೊಂದಿರುವ ಶಿಖರವೇ ಎತ್ತಿನ ಭುಜ. ಇದರ ತಪ್ಪಲಿನಲ್ಲಿ ನೃತ್ಯ ಭಂಗಿಯಲ್ಲಿ ನಿಂತಿರುವವನೇ ನಾಣ್ಯ ಭೈರವೇಶ್ವರ.
ಎತ್ತಿನಭುಜ ಬೆಟ್ಟದ ಉತ್ತರದಲ್ಲಿ ನಾಣ್ಯ ಭೈರವೇಶ್ವರ ದೇವಸ್ಥಾನ, ದಕ್ಷಿಣದಲ್ಲಿ ಶಿಶಿಲೇಶ್ವರ ದೇವಸ್ಥಾನ ಮತ್ತು ಸುಂದರ ಜೈನ ಬಸದಿಯೊಂದಿಗೆ. ದಕ್ಷಿಣಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸಂಗಮ ಸ್ಥಳದಲ್ಲಿ ಈ ಅತ್ಯಪೂರ್ವವಾದ ಬೆಟ್ಟವಿದ್ದು ಪಕೃತಿಯ ಅದ್ಭುತ ಸೌಂದರ್ಯಯಕ್ಕೆ ಸಾಕ್ಷಿಯಾಗಿ ನಿಂತಿದೆ.
ಚಾರ್ಮಾಡಿ ಶ್ರೇಣಿ ಮತ್ತು ಶಿಶಿಲಾ ಕಣಿವೆಯ ವಿಹಂಗಮ ನೋಟಗಳನ್ನು ಶಿಖರದಿಂದ ನೋಡಬಹುದು. ಇದು ದೀಪದಕಲ್ಲು, ಅಮೆಡಿಕಲ್ಲು, ಒಂಬಟ್ಟು ಗುಡ್ಡ ಮತ್ತು ಜೇನುಕಲ್ಲು ಗುಡ್ಡಗಳಂತಹ ಇನ್ನೂ ಅನೇಕ ಬೆಟ್ಟಗಳಿಂದ ಆವೃತವಾಗಿದೆ.
ಚಾರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿರುವ ಎತ್ತಿನಭುಜಕ್ಕೆ ಹೋಗಲು ಪ್ರಮುಖವಾಗಿ ಎರಡು ದಾರಿಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲಕ್ಕೆ ಬಂದು ಇಲ್ಲಿಗೆ 11km ಗಳ ಚಾರಣ ಮಾಡಬಹುದು. ಶಿಶಿಲ ಎಂಬ ಸ್ಥಳದಲ್ಲಿ ಕಪಿಲಾ ನದಿಯ ತಟದಲ್ಲಿ ಅತ್ಯಂತ ಪುರಾತನವಾದ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಒಳಗೊಂಡ ಶಿಶಿಲೇಶ್ವರ ದೇವಸ್ಥಾನವಿದೆ. ಪ್ರಾಚೀನ ಕಾಲದಲ್ಲಿ ಶಿಶಿಲೇಶ್ವರನ ಮೂಲಸ್ಥಾನವಾದ ಕುಮಾರಗುಡ್ಡೆಯಲ್ಲಿ ಕಂದ ಮೂಲಗಳಾದ ನರೆ, ಕುರುಡುಗಳನ್ನು ಆಹಾರಕ್ಕಾಗಿ ಅಗೆದು ಸಂಗ್ರಹಿಸುತ್ತಿದ್ದ, ಪರಿಶಿಷ್ಟ ಜಾತಿಯ ‘ದೆಸಿಲು’ ಎಂಬವಳಿಗೆ ಮೊತ್ತಮೊದಲು ಅಲ್ಲಿ ಶಿಶಿಲೇಶ್ವರನ ಲಿಂಗವು ಗೋಚರಿಸಿತು. ಅವಳು ತನ್ನ ಜೊತೆಗಿದ್ದ ಬಂಧು ಕಿಲಮರತ್ತಾಯನಿಗೆ ಈ ವಿಚಾರವನ್ನಿ ತಿಳಿಸಿದಳು. ಇವರಿಬ್ಬರ ಮೂಲಕ ಈ ವಿವರವು ಇಡೀ ಊರಿಗೆ ಹಬ್ಬಿತು.ಹೀಗೆ ಊರಿಗೆ ತಿಳಿಸಲು ಕಾರಣಳಾದ ಈ ಮಹಿಳೆಯ ಹೆಸರನ್ನು ಊರವರು ತಮ್ಮ ಊರಿಗೆ ಕೃತಜ್ಞತಾ ಪೂರ್ವಕವಾಗಿ ಇಟ್ಟುಕೊಂಡರು. ಹೀಗಾಗಿ ಅತೀ ಪ್ರಾಚೀನ ಕಾಲದಿಂದಲೂ ಈ ಊರಿಗೆ ‘ದೆಸಿಲು’ ಎಂಬ ಹೆಸರು ಕೂಡ ರೂಢಿಯಲ್ಲಿದೆ.
ಕಲ್ಲಿನಲ್ಲಿ ನಿರ್ಮಿಸಿದ ಇಲ್ಲಿನ ದೇವಸ್ಥಾನವು ಜೈನ ಬಸದಿಯನ್ನು ಹೋಲುತ್ತದೆ. ಶಿಶಿಲೇಶ್ವರ ದೇವಾಲಯದ ಎಡಬದಿಯಲ್ಲಿ ಪ್ರವಹಿಸುತ್ತಿರುವ ಕಪಿಲಾ ನದಿಯಲ್ಲಿ ಪೆರುವೇಲು ಮೀನುಗಳ ಮತ್ಸ್ಯ ತೀರ್ಥವಿದೆ. ಈ ಬ್ರಹದಾಕಾರದ ಮನಮೋಹಕ ಮತ್ಸ್ಯ ಸಂಕುಲವು ಈ ಭಾಗದ ನೀರನ್ನು ಶುದ್ದಗೊಳಿಸುವುದರಿಂದ ಇಲ್ಲಿಗೆ ಮತ್ಸ್ಯತೀರ್ಥ ವೆಂಬ ಹೆಸರಾಗಿದೆ. ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಈ ದೇವಾಲಯದಲ್ಲಿ ಬಾವಿ ಇರುವುದಿಲ್ಲ.ಈ ಮತ್ಸ್ಯತೀರ್ಥವನ್ನೇ ದೇವರಿಗೆ ಅಭಿಷೇಕ ಮಾಡುವುದು ಇಲ್ಲಿಯ ವೈಶಿಷ್ಟ್ಯ. ಇಲ್ಲಿನ ಮತ್ಸ್ಯಗಳಿಗೆ ಆಹಾರ ನೀಡುದಾಗಿ ಹರಕೆ ಹೊತ್ತುಕೊಂಡರೆ ನಮ್ಮ ಬಯಕೆಗಳು ಈಡೇರುತ್ತದೆ ಎಂಬ ಪ್ರತಿತಿಯೂ ಇದೆ. ಮತ್ಸ್ಯತಿರ್ಥದ ಪಕ್ಕದಲ್ಲಿ, ಹುಲಿಕಲ್ಲು ಇದೆ! ಹಿಂದೆ ದನವು ಈ ನದಿಗೆ ಹಾರಿದಾಗ, ಹುಲಿಯೂ ಅದರ ಆಸೆಗೆ ಹಾರಿತೆಂದು, ಆಗ ದೈವ ಸಂಕಲ್ಪದಂತೆ ಹುಲಿ ಕಲ್ಲಾಯಿತು ಎಂಬ ಐತಿಹ್ಯವಿದೆ. ಅಲ್ಲದೆ 1992ರಲ್ಲಿ ಇಲ್ಲಿ ಲಕ್ಷಾಂತರ ಮತ್ಸ್ಯಗಳ ಅಕಾಲಿಕ ಸಾವಾಯಿತು ಈ ಕಹಿ ಘಟನೆಯ ನೆನಪಿಗೆ ಮತ್ಸ್ಯಸ್ಮಾರಕವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.
ಒಂದೇ ದಿನದಲ್ಲಿ ದೇವಾಲಯ ನಿರ್ಮಾಣ!
ಹೊಯ್ಸಳ ಅರಸರು ಚನ್ನಕೇಶ್ವರ ದೇವಾಲಯ ನಿರ್ಮಿಸುವ ಸಂದರ್ಭದಲ್ಲಿ ಅಷ್ಟದಿಕ್ಪಾಲಕರಾಗಿ ಅಷ್ಟ ಭೈರವೇಶ್ವರ ಸನ್ನಿಧಾನವನ್ನು ನಿರ್ಮಿಸಿದರೆಂದು ಇತಿಹಾಸ ಸಾರುತ್ತದೆ. ದುರ್ಗದಹಳ್ಳಿ, ದೇವರಮನೆ, ಭೈರಾಪುರ, ಮರಗುಂದ, ಕುಂಬರಹಳ್ಳಿ, ಕಬ್ಬಿನಹಳ್ಳಿಗಳಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದ್ದು ಕೇವಲ ಒಂದೇ ದಿನದಲ್ಲಿ ಈ ದೇವಾಲಯಗಳು ನಿರ್ಮಿಸಲ್ಪಟ್ಟಿದ್ದು ವಿಶೇಷ. ಅಷ್ಟ ದೇವಾಲಯಗಳ ಪಟ್ಟಿಯಲ್ಲಿ ಈ ಸನ್ನಿಧಾನವೂ ಒಂದು.
ದ್ರಾವಿಡ – ನಾಗಾರ ಮಿಶ್ರಿತ ಹೊಯ್ಸಳ ವಾಸ್ತುಶಿಲ್ಪ. ದ್ರಾವಿಡ ಮತ್ತು ನಾಗರ ಮಿಶ್ರಿತ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಈ ದೇವಾಲಯದ ನಿರ್ಮಾಣದಲ್ಲಿ ಬಳಸಿರುವುದನ್ನು ನಾವಿಲ್ಲಿ ನೋಡಬಹುದಾಗಿದೆ. ಭೈರವ ವಾಹನ ಶ್ವಾನ, ಹೊಯ್ಸಳರ ಲಾಂಭನ ಹೊಂದಿರುವ ಪ್ರವೇಶದ್ವಾರ, ಬಾಗಿಲುಗಳ ಮೇಲಿನ ಕೆತ್ತನೆಗಳು, ಕಂಬಗಳ ಮೇಲಿನ ರಚನಾತ್ಮಕ ಕೆತ್ತನೆ ಕೆಲಸಗಳು ಮನಸೂರೆಗೊಳಿಸುತ್ತವೆ.
ದೇವಸ್ಥಾನದ ಸಮೀಪದಲ್ಲೇ 15ನೇ ಶತಮಾನದ ಇತಿಹಾಸವಿರುವ ಜೈನ ಬಸದಿಯೊಂದಿಗೆ. ಕಾಲದಚಕ್ರಕ್ಕೆ ಸಿಕ್ಕಿ ಶಿಥಿಲಗೊಂಡಿದ್ದ ಆ ಬಸದಿಯನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಯಿತು. ಇಲ್ಲಿಂದ 5 ಕಿಲೋಮೀಟರ್ ವಾಹನದಲ್ಲಿ ತೆರಳಿ ಅಲ್ಲಿಂದ ನಾವು ಎತ್ತಿನ ಭುಜಕ್ಕೆ ಸುಮಾರು 11km ಗಳ ಚಾರಣವನ್ನು ಪ್ರಾರಂಭಿಸಬಹುದು.
ಪುಷ್ಕರಣಿಯಲ್ಲಿದೆ ಕೌತುಕದ ಸುರಂಗ ಮಾರ್ಗ
ಈ ದೇವಾಲಯದಲ್ಲಿ ಹಿಂದೆ ಜೋಗಿ ಪುರುಷರು ಪೂಜೆ ಮಾಡುತ್ತಿದ್ದು ಸುರಂಗದ ಮೂಲಕ ಕಲ್ಯಾಣಿಗೆ ಬಂದು ಅಲ್ಲಿ ಸ್ನಾನ ಮಾಡಿ ದೇವಾಲಯದಲ್ಲಿ ಪೂಜಾದಿಗಳನ್ನು ಮುಗಿಸಿ ತೆರಳುತ್ತಿದ್ದರಂತೆ. ಹೀಗೆ ಬಂದು ತೆರಳುವಾಗ ಯಾರೂ ಅವರನ್ನು ನೋಡಬಾರದೆಂಬ ಕಟ್ಟುಪಾಡಿತ್ತು. ಒಮ್ಮೆ ಮೂರ್ತೆದಾರನೊಬ್ಬ ನೋಡಿದ ಮೇಲೆ ಈ ಜೋಗಿ ಪುರುಷರು ಕುಂಡಕ್ಕೆ ಹಾರಿ ಇಹಲೋಕ ತ್ಯಜಿಸಿದರು ಎಂಬ ಜನಪದ ಕಥೆ ಇದೆ. ಇದರ ಕುರುಹಾಗಿ ಇಂದಿಗೂ ಕಲ್ಯಾಣಿಯ ಬಳಿ ಸುರಂಗ ಮಾರ್ಗವಿದೆ. ಇದೇ ಮಾರ್ಗದಿಂದ ನೀರು ಬರುತ್ತಿದ್ದು ಇದನ್ನೇ ಇಂದಿಗೂ ಅಭಿಷೇಕಕ್ಕೆ ಬಳಸಲಾಗುತ್ತದೆ.
ನಾಟ್ಯ ರೂಪದಲ್ಲಿರುವ ಕಾರಣ ಇದಕ್ಕೆ ನಾಟ್ಯ ಭೈರವೇಶ್ವರ ಎಂದು ಹೆಸರು ಬಂದಿದೆ. ಇದುವೇ ನಾಣ್ಯ ಭೈರವೇಶ್ವರ ಆಯಿತೆಂಬುದು ಪ್ರತೀತಿ. ಇಲ್ಲಿ ಹಿಂದೆ ನವಿಲು ನಾಟ್ಯವಾಡುತ್ತಿತ್ತು ಎಂಬ ಉಲ್ಲೇಖವೂ ಇದೆ. ದೇವಾಲಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಾಕಷ್ಟು ನಗನಾಣ್ಯಗಳನ್ನು ಇರಿಸಿದ್ದರಿಂದ ನಾಣ್ಯಭೈರವೇಶ್ವರ ಎಂಬ ಹೆಸರು ಬಂದಿದೆ ಎನ್ನುವ ಅಭಿಪ್ರಾಯ ಸ್ಥಳೀಯರಲ್ಲಿದೆ.
ಧನ್ಯವಾದಗಳು.
GIPHY App Key not set. Please check settings