in ,

ಶಿವಮೊಗ್ಗ ಇತಿಹಾಸ ಕಥೆ

ಶಿವಮೊಗ್ಗ ಇತಿಹಾಸ
ಶಿವಮೊಗ್ಗ ಇತಿಹಾಸ

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ ೮ ಕಿ.ಮೀ. ದೂರದಲ್ಲಿರುವ ಗ್ರಾಮ.

ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ, ಊರು ಪ್ರಬುದ್ಧಮಾನಕ್ಕೆ ಬಂದುದು ೧೬ನೆಯ ಶತಮಾನದ ಆರಂಭದಲ್ಲಿ, ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ. ಇಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತುದಾಗಿಯೂ ಅದರ ಸಹಾಯದಿಂದ ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಐತಿಹ್ಯವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣೆಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ. ಹೀಗೆ ಕೆಳದಿ ಸು.೧೫೦೦ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು. ಊರು ಬಹು ಬೇಗ ಬೆಳೆಯಿತು. ಅರಮನೆ, ಕೋಟೆ, ಕೆರೆಗಳನ್ನು ಇಲ್ಲಿ ಚೌಡಪ್ಪ ನಾಯಕ ಕಟ್ಟಿಸಿದ. ಜೊತೆಗೆ ಸುಂದರವಾದ ರಾಮೇಶ್ವರ ದೇವಾಲಯವನ್ನೂ ಕಟ್ಟಿಸಿದ. ಮುಂದೆ ೬೦ ವರ್ಷಗಳ ಕಾಲ ಇವನ ವಂಶದವರ ರಾಜಧಾನಿಯಾಗಿ ಅನಂತರ ರಾಜಧಾನಿ ಮೊದಲು ಇದರ ಸಮೀಪದಲ್ಲಿಯೇ ಇದ್ದ ಇಕ್ಕೇರಿಗೂ ಅನಂತರ ಬಿದನೂರಿಗೂ ಬದಲಾಯಿಸಲಾಯಿತಾದರೂ ಈ ಊರು ನಾಯಕರ ಆಳ್ವಿಕೆ ಕೊನೆಗೊಳ್ಳುವವರೆಗೂ ಆ ರಾಜ್ಯದ ಒಂದು ಪ್ರಮುಖ ನಗರವಾಗಿಯೇ ಮುಂದುವರೆಯಿತು. ಆದರೆ ಅನಂತರ ಇದರ ಪ್ರಾಮುಖ್ಯತೆ ಇಳಿಮುಖವಾಗಿ ಕಡೆಗೆ ಒಂದು ಸಾಮಾನ್ಯವಾದ ಹಳ್ಳಿಯಾಗಿ ಉಳಿಯಿತು. ಇಲ್ಲಿ ವಿಸ್ತಾರವಾಗಿ ಹರಡಿರುವ ಹಳೆಯ ಊರಿನ ನಿವೇಶನಗಳೂ ದೇವಾಲಯಗಳೂ, ಕೆರೆ, ಮಠಗಳೂ ಅದರ ಹಿಂದಿನ ವೈಭವಕ್ಕೆ ತೋರುಬೆರಳಾಗಿ ನಿಂತಿವೆ. ಇಲ್ಲಿ ಹೊಯ್ಸಳ-ದ್ರಾವಿಡ ಶೈಲಿಯಲ್ಲಿರುವ ರಾಮೇಶ್ವರ ದೇವಾಲಯ ಪ್ರಖ್ಯಾತವಾಗಿದೆ.

ಯಾದವ ಮುರಾರಿಯರ ಕಥೆ :

ಕೆಳದಿಗೆ ಹೋಗ್ತಾ ನಮ್ಮೂರು ದಾಟಿದ ಮೇಲೆ ಸಿಗೋ ಊರು ಹಳ್ಳಿಬೈಲು. ಕೆಳದಿಯಲ್ಲಿ ಈಗಿರೋ ರಾಮೇಶ್ವರ, ವೀರಭದ್ರ ದೇವಸ್ಥಾನಗಳ ಕಾಲಕ್ಕೆ ಹೋಗೋಣ.. ಹಳ್ಳಿಬೈಲಲ್ಲಿದ್ದ ಚೌಡಗೌಡ, ಭದ್ರಗೌಡ ಎಂಬ ಅಣ್ಣತಮ್ಮಂದಿರಿಗೆ ಯಾದವ, ಮುರಾರಿ ಎಂಬ ಸೇವಕರು. ಒಮ್ಮೆ ಚೌಡಗೌಡನಿಗೆ ಹೊಲ ಉಳುವ ಸಮಯದಲ್ಲಿ ನೇಗಿಲಿಗೆ ನಿಧಿಯ ಕೊಪ್ಪರಿಗೆಯ ಬಾಯಿ ಸಿಗುತ್ತದೆ. ಅದನ್ನು ತೆಗೆಯಲು ಹೆದರಿ ಹಾಗೇ ಬಿಟ್ಟ ಆತನಿಗೆ ರಾತ್ರಿ ನರಬಲಿ ಕೊಟ್ಟರೆ ಆ ನಿಧಿಯನ್ನು ಪಡೆಯಬಹುದೆಂಬ ಕನಸು ಬೀಳುತ್ತದೆ. ಒಡೆಯನಿಗಾಗಿ ಯಾದವ, ಮುರಾರಿ ತಮ್ಮ ನಾಗಮುರಿ ಕತ್ತಿಯಲ್ಲೇ ಬಲಿಯಾಗುತ್ತಾರೆ. ನಂತರ ಪಡೆದ ಸಂಪತ್ತಿನಿಂದ ಚೌಡಗೌಡ ಪುಟ್ಟ ಪಾಳೇಗಾರನಾಗಿ ಸುತ್ತಮುತ್ತಲ ಊರುಗಳನ್ನು ಆಳಲಾರಂಭಿಸುತ್ತಾನೆ. ಸುದ್ದಿ ತಿಳಿದ ವಿಜಯನಗರ ಅರಸರು ಈತನನ್ನು ಬಂಧಿಸುತ್ತಾರೆ. ಅದೇ ಸಮಯದಲ್ಲಿ ಬೈಲಹೊಲದ ಪಾಳೇಗಾರ ವಿಜಯನಗರದ ವಿರುದ್ದ ದಂಗೆ ಎದ್ದಿರುತ್ತಾನೆ. ಅವನನ್ನು ಸದೆ ಬಡಿದ ಚೌಡಗೌಡನ ಮತ್ತೆ ವಿಜಯನಗರದ ಕೃಪೆಗೆ ಪಾತ್ರನಾಗಿ ಮುದ್ರೆಯೊಂದನ್ನು ಪಡೆಯುತ್ತಾನೆ. ಹುಟ್ಟೂರಿಗೆ ಮರಳಿ ರಾಮೇಶ್ವರ ದೇವಸ್ಥಾನವನ್ನು ಕಟ್ಟಿಸುತ್ತಾನೆ. ನಂತರ ಕೆಳದಿ ವೀರಭೂಮಿ ಎಂದರಿತು ಅಲ್ಲೇ ವಿಜಯನಗರಕ್ಕೆ ಅಧೀನನಾಗಿ ತನ್ನ ಸಾರ್ಮಾಜ್ಯ ಸ್ಥಾಪಿಸುತ್ತಾನೆ. ನಂತರ ವಿಜಯನಗರದ ಸದಾಶಿವರಾಯನ ಕೃಪೆಗೆ ಪಾತ್ರ ಎಂದು ಈತನ ಮಗ ಸದಾಶಿವನಾಯಕನೆಂದು ರಾಜ್ಯವಾಳಲು ಪ್ರಾರಂಭಿಸುತ್ತಾನೆ.

ಶಿವಮೊಗ್ಗ ಇತಿಹಾಸ ಕಥೆ
ಕೆಳದಿಯ ರಾಮೇಶ್ವರ ದೇವಸ್ಥಾನ

ರಾಮೇಶ್ವರ ಶಿವಲಿಂಗ ಸಿಕ್ಕ ಕಥೆ:

ಹೀಗೇ ಒಂದು ದಿನ ಹೊಲವೊಂದರ ಹುತ್ತದ ಮೇಲೆ ಹಸು ಹಾಲು ಸುರಿಸುತ್ತಿರುವ ಆಶ್ಚರ್ಯದ ದೃಶ್ಯವನ್ನು ಚೌಡ ನಾಯಕ‌ ನೋಡುತ್ತಾನೆ. ಆ ಹುತ್ತವನ್ನು ಅಗೆದು ನೋಡಿದಾಗ ಅಲ್ಲೊಂದು ಶಿವಲಿಂಗ ಸಿಗುತ್ತದೆ. ಅದಕ್ಕೆ ಪುಟ್ಟಗುಡಿಯನ್ನು ಕಟ್ಟಿಸುತ್ತಾನೆ. ನಂತರ ವಿಜಯನಗರ ಸಾಮ್ರಾಜ್ಯದ ಮೊಹರನ್ನು ಪಡೆದು, ಅವರ ಅಧೀನರೆಂದು ಸಾಮ್ರಾಜ್ಯ ಕಟ್ಟೋ ಸಂಭ್ರಮದಲ್ಲಿ ರಾಮೇಶ್ವರ ದೇಗುಲವನ್ನು ಕಟ್ಟಿಸುತ್ತಾನೆ.

ಯಾದವ, ಮುರಾರಿ ಸಹೋದರರು ಒಮ್ಮೆ ಹೊಲವೂಳುತ್ತಿದ್ದಾಗ ಖಡ್ಗವೊಂದು ಅವರ ನೇಗಿಲಿಗೆ ಸಿಗುತ್ತದೆ. ಅದರ ಮಹತ್ವವೇನೆಂದು ಅರಿಯದಿದ್ದರೂ ಅದನ್ನು ತಂದು ಮನೆಯ ಸೂರಿನ ಮೇಲೆ ಇಡುತ್ತಾರೆ. ಕೆಲದಿನಗಳಲ್ಲೇ ಮನೆಯ ಸೂರಿನ ಮೇಲೆ ಬಂದು ಕೂರುವ ಯಾವುದೇ ಹಕ್ಕಿಯನ್ನು ಈ ಕತ್ತಿ ಹಾವಿನ ರೂಪ ತಾಳಿ ಕೊಲ್ಲುವ ಸೋಜಿಗವನ್ನು ಈ ಅಣ್ಣತಮ್ಮಂದಿರು ನೋಡುತ್ತಾರೆ. ಅಂದೇ ಅದನ್ನು ನಾಗರಮುರಿ ಅಂತ ಹೆಸರಿಟ್ಟು, ಚೆನ್ನಾಗಿ ತೊಳೆದು ಮನೆಯ ಒಳಗೆ ತಂದು ಇಡುತ್ತಾರೆ.

ಕೆಳದಿ ಚೌಡಪ್ಪಗೌಡ/ಚೌಡಪ್ಪನಾಯಕ ವಿಜಯನಗರದಿಂದ ತನ್ನೂರಿಗೆ ಮರಳುತ್ತಿರುವಾಗ ಒಂದೆಡೆ ಚಿಗರೆಯೊಂದು ಚಿರತೆಯನ್ನು ಬೆನ್ನಟ್ಟೋ ದೃಶ್ಯವನ್ನು ನೋಡುತ್ತಾನೆ. ಈ ಅಪೂರ್ವ ದೃಶ್ಯದಿಂದ ಬೆರಗಾದ ಆತ ಈ ನೆಲ ಸಾಮಾನ್ಯದ್ದಲ್ಲ. ಇದು ವೀರಭೂಮಿ ಎಂದು ತನ್ನ ಸಾಮ್ರಾಜ್ಯವನ್ನು ಅಲ್ಲೇ ಪ್ರಾರಂಭಿಸುತ್ತಾನೆ. ಕೆಳದಿಯ ಸುತ್ತಮುತ್ತಲು ಈಗಲೂ ಅಲ್ಲಲ್ಲಿ ಯುದ್ದದಲ್ಲಿ ಮಡಿದ ವೀರರ ವೀರಗಲ್ಲುಗಳು, ಸತಿಯಾದವರ ಸತಿ ಕಲ್ಲುಗಳು ಸಿಕ್ಕುತ್ತವೆ.

ಕೆಳದಿಗೆ ಹೋಗುತ್ತಿದ್ದಂತೆಯೇ ಎದುರಿಗೆ ರಾಮೇಶ್ವರ ದೇವಸ್ಥಾನ. ರಾಮೇಶ್ವರನ ಎಡಭಾಗದಲ್ಲಿ ಪಾರ್ವತಿ, ಬಲಭಾಗದಲ್ಲಿ ವೀರಭದ್ರನ ಗುಡಿಗಳಿವೆ. ಇವುಗಳೆಲ್ಲಾ ಹೊಯ್ಸಳ ದ್ರಾವಿಡ ಶೈಲಿಯಲ್ಲಿರೋ ದೇವಸ್ಥಾನಗಳು.

ಪಾರ್ವತಿ ದೇವಸ್ಥಾನ :
ಮೊದಲು ಸಿಗುವುದು ಪಾರ್ವತೀ ದೇವಸ್ಥಾನ. ಇಲ್ಲಿನ ಛಾವಣಿಯೇ ಇಲ್ಲಿನ ಆಕರ್ಷಣೆಗಳಲ್ಲೊಂದು. ಇಲ್ಲಿರೋ ೪೦-೫೦ ಬಗೆಯ ಹೂವಿನ ಕೆತ್ತನೆಗಳಲ್ಲಿ ಪ್ರತಿಯೊಂದೂ ಭಿನ್ನವಾಗಿರೋದು ಆ ಶಿಲ್ಪಿಗಳ ಕರಕುಶಲತೆಗೆ, ಸೃಜನ ಶೀಲತೆಗೆ ಸಾಕ್ಷಿ. ಇಲ್ಲಿನ ಮೇಲ್ಚಾವಣಿಯಲ್ಲಿ ದೇವಾನು ದೇವತೆಗಳ ಕೆತ್ತನೆಗಳಿವೆ. ಇಲ್ಲಿ ೩೨ ಕೈಗಳ ಗಣಪತಿಯ ವಿಗ್ರಹವೊಂದಿದೆ. ಇಕ್ಕೇರಿಯ ಅಘೋರೇಶ್ವರ ದೇಗುಲದ ೩೨ ಕೈಗಳ ಗಣಪನನ್ನು ಮಾಡುವ ಮೊದಲು ಸಣ್ಣ ಪ್ರಮಾಣದಲ್ಲಿ ಇದನ್ನು ಕೆತ್ತಿದ್ದರು ಎನ್ನುವ ಪ್ರತೀತಿಯಿದೆ. ಇದರ ಬಲಭಾಗದಲ್ಲಿರುವುದು ಶ್ರೀ ರಾಮೇಶ್ವರ ದೇವಸ್ಥಾನ. ಪಾರ್ವತಿ- ರಾಮೇಶ್ವರ ದೇಗುಲಗಳ ಮಧ್ಯೆ ಇರೋ ಪ್ರದಕ್ಷಿಣಾ ಪಥದ ಇಕ್ಕೆಲಗಳ ಗೋಡೆಗಳಲ್ಲಿ ಅನೇಕ ದೇವಾನುದೇವತೆಗಳ, ಅಪ್ಸರೆಯರ, ರಾಮಾಯಣ ಮಹಾಭಾರತಗಳ ಕೆತ್ತನೆಗಳನ್ನು ನೋಡಬಹುದು.

ರಾಮೇಶ್ವರ ದೇವಸ್ಥಾನ :
ರಾಮೇಶ್ವರ ದೇಗುಲದಲ್ಲಿ ಇಕ್ಕೇರಿ, ಬನವಾಸಿಗಳಲ್ಲಿದ್ದಂತೆ ಆಳೆತ್ತರದ ನಂದಿಯಿರದೇ, ಶಿವನೆದುರು ಪುಟ್ಟ ನಂದಿಯಿದ್ದಾನೆ. ಬೆಳಗ್ಗಿನ ಸಮಯದಲ್ಲಿ ಅಥವಾ ಸಂಜೆ ೫ ರ ಮೇಲೆ ಹೋದರೆ ದೇವರ ದರ್ಶನ ಪಡೆಯಬಹುದು. ಈ ದೇಗುಲದ ಎದುರಿನ ನೆಲದಲ್ಲಿ ಹುಲಿ ಹಸು ಆಟದ ಪಟವನ್ನು, ಹಳಗನ್ನಡದ ಬರಹಗಳನ್ನೂ ಕಾಣಬಹುದು.

ಶಿವಮೊಗ್ಗ ಇತಿಹಾಸ ಕಥೆ
ರಾಮೇಶ್ವರ ದೇವಸ್ಥಾನ

ವೀರಭದ್ರ ದೇವಸ್ಥಾನ :
ವೀರಭದ್ರನ ಗುಡಿಯ ಮೇಲ್ಛಾವಣಿಯಲ್ಲಿ ಕೆಳದಿ ಸಾಮ್ರಾಜ್ಯದ ಲಾಂಛನ ಗಂಢಭೇರುಂಡವನ್ನು ಕಾಣಬಹುದು. ಆಗ ಕೆಲವು ಸಾರ್ಮಾಜ್ಯಗಳದ್ದು ಆನೆ ಲಾಂಛನವಾಗಿತ್ತು, ಕೆಲವದ್ದು ಸಿಂಹ. ಈ ಆನೆ, ಸಿಂಹಗಳೆರಡನ್ನು ತನ್ನ ಕಾಲುಗಳಲ್ಲಿ ಬಂಧಿಸಿದ ಎರಡು ತಲೆಯ ಗಂಢಭೇರುಂಡವನ್ನು ಲಾಂಛನವನ್ನಾಗಿಸಿದ ಕೆಳದಿಯ ಅರಸರು ತಮ್ಮ ಸಾರ್ಮಾಜ್ಯ ಎಲ್ಲರಿಗಿಂತಲೂ ಶಕ್ತಿಶಾಲಿಯಾಗಿ ಬೆಳೆಯಲೆಂಬ ಆಸೆ ಪಟ್ಟಿದ್ದರು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ವೀರಭದ್ರನ ಗುಡಿಯ ಗರ್ಭಗೃಹದ ಬಾಗಿಲನ್ನು ನೋಡಿದರೆ ಮೇಲ್ಗಡೆ ಕೃಷ್ಣನ ಪುಟ್ಟ ವಿಗ್ರಹ ಕಾಣುತ್ತದೆ. ವಿಜಯನಗರದ ಸಾರ್ಮಾಜ್ಯದ ಶ್ರೀ ಕೃಷ್ಣದೇವರಾಯನಿಗೆ ಸಾಮಂತರಾದ ಕೆಳದಿ ಅರಸರ ಗೌರವವನ್ನು ಇದು ಬಿಂಬಿಸುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಈ ದೇಗುಲದಲ್ಲಿ ಶುಕಭಾಷಿಣಿ, ಗಾರ್ಧಭ ಮಾನವ ಮುಂತಾದ ಕೆತ್ತನೆಗಳನ್ನು ಕಾಣಬಹುದು.ವೀರಭದ್ರ ದೇವಸ್ಥಾನದಿಂದ ಗಂಡಭೇರುಂಡ ಇರುವ ದಿಕ್ಕಿನ ಬಾಗಿಲಲ್ಲಿ ಹೊರಬಂದರೆ ಒಂದು ಧ್ವಜ ಸ್ಥಂಬ ಸಿಗುತ್ತದೆ. ಸಪ್ತ ಮಾತೃಕೆಯರು, ಗಣಪತಿ ಇದರ ವಿಶೇಷತೆ. ಶಿವಾಜಿಯ ಮಗ ರಾಜಾರಾಮನಿಗೆ ಔರಂಗಜೇಬನಿಂದ ರಕ್ಷಣೆ ಕೊಟ್ಟ ಕುರುಹಿನ ಶಿಲ್ಪಗಳು ಎಂದು ಧ್ವಜಸ್ಥಂಭದ ಶಿಲ್ಪಗಳ ಬಗ್ಗೆ ಕೆಲವರು ಅಭಿಪ್ರಾಯ ಪಡುತ್ತಾರೆ. ಇದೇ ಕಂಬದ ಮೇಲೆ ದೇಗುಲ ಸ್ಥಾಪನೆಯ ಬಗ್ಗೆ ಹಳಗನ್ನಡದಲ್ಲಿ ಬರೆಯಲಾಗಿದೆ. ಈ ದೇಗುಲದ ಹೊರ ಗೋಡೆಗಳ ಮೇಲೆ ದಶಾವತಾರದ ಕೆತ್ತನೆಗಳಿವೆ. ಜೊತೆಯಲ್ಲಿ ವಾಸ್ತುಪುರುಷ, ಶುಕಮುನಿ ಮತ್ತು ಗಿಳಿ, ನರಸಿಂಹ ಹೀಗೆ ಹಲವಾರು ಕೆತ್ತನೆಗಳನ್ನು ನೋಡಬಹುದು.

ದೇಗುಲಗಳ ಹೊರಾಂಗಣದಲ್ಲಿ ಒಂದೆಡೆ ನಾಗರಬನವಿದೆ. ಅದರ ಪಕ್ಕದಲ್ಲಿ ಆಗಿನ ಕಾಲದ ಪಣತವನ್ನು ಕಾಣಬಹುದು.

ವಾಸ್ತುಪುರುಷ :
ಇದು ವೀರಭದ್ರ ದೇಗುಲದ ಹೊರಾಂಗಣದ ಪ್ರಮುಖ ಆಕರ್ಷಣೆ. ಸುಧಾರಿತ ಅಳತೆ,ತೆರಿಗೆ ಪದ್ದತಿಗೆ ಒತ್ತುಕೊಟ್ಟರೆಂದು ನಂಬಲಾದ ಕೆಳದಿ ಅರಸರ ಕಾಲದ ಅಳತೆಪಟ್ಟಿಯನ್ನು ಈ ಮೂರ್ತಿಯ ಪಕ್ಕದಲ್ಲಿ ನೋಡಬಹುದು.ವಾಸ್ತುಪುರುಷನ ಪಕ್ಕದಲ್ಲಿ ತಾಗಿಕೊಂಡಿರೋ ವೀರಭದ್ರ ರಾಮೇಶ್ವರ ದೇಗುಲದ ಮಧ್ಯೆ ಒಂದು ಕಳ್ಳದಾರಿ. ವೀರಭದ್ರ ದೇಗುಲದ ಪ್ರಧಾನ ಬಾಗಿಲ ಬಳಿ ತೆರೆಯೋ ಈ ಕಳ್ಳದಾರಿಗೆ ಸಾಗೋ ಮಾರ್ಗದಲ್ಲಿ ರಾಹುಕೇತು, ಸಪ್ತಮಾತೃಕೆಯರು ಮುಂತಾದ ಕೆತ್ತನೆಗಳಿವೆ.

ಗೋಪಾಲಕೃಷ್ಣ ದೇವಸ್ಥಾನ :
ಕೆಳದಿಯಿಂದ ಸಾಗರದತ್ತ ವಾಪಾಸ್ ಬರುವಾಗ ಗೋಪಾಲಕೃಷ್ಣ ದೇವಸ್ಥಾನವನ್ನು ಅದರ ಪಕ್ಕದಲ್ಲಿರೋ ತೊಟ್ಟಿಲಕೆರೆಯನ್ನೂ ಕಾಣಬಹುದು. ಶಿಥಿಲಾವಸ್ಥೆಯಲ್ಲಿದ್ದ ಈ ದೇಗುಲ ಈಗ ಜೀರ್ಣೋದ್ದಾರಗೊಂಡಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹಿಂದೂ ಧರ್ಮ

ಹಿಂದೂ ಧರ್ಮದ ಬಗ್ಗೆ ಕೆಲವೊಂದು ವಿಷಯಗಳು

ಬೀಟ್ರೂಟ್

ಬೀಟ್ರೂಟ್ ಬಗ್ಗೆ ಹಾಗೂ ಆರೋಗ್ಯ ಲಾಭ