in ,

ಗೋದಾವರಿ ಘಟ್ಟಗಳು ಮತ್ತು ಸುತ್ತಲಿನ ಐತಿಹಾಸಿಕ ದೇಗುಲಗಳು

ಗೋದಾವರಿ ಘಟ್ಟ
ಗೋದಾವರಿ ಘಟ್ಟ

ಗೋದಾವರಿ ನದಿಯನ್ನು ದಕ್ಷಿಣದ ಗಂಗೆ ಎಂದು ಕರೆಯುತ್ತಾರೆ. ಇದು ಆದಿಲಾಬಾದ್ ಜಿಲ್ಲೆಯ ಬಸರಾದಲ್ಲಿ ತೆಲಂಗಾಣವನ್ನು ಪ್ರವೇಶಿಸುತ್ತದೆ. ಆಂಧ್ರ ಪ್ರದೇಶದ ಮೂಲಕ ಹಾದುಹೋಗುವಾಗ ಧರ್ಮಪುರಿಯ ಹತ್ತಿರ ಹಾದುಹೋಗುತ್ತದೆ. ಈ ಧರ್ಮಪುರಿಯು ಒಂದು ಯಾತ್ರಾಸ್ಥಳವಾಗಿದ್ದು ಇಲ್ಲಿ ಅನೇಕ ಪುರಾತನ ದೇವಸ್ಥಾನಗಳಿದ್ದು ಇಲ್ಲಿ ಗೋದಾವರಿ ನದಿಯ ಸ್ನಾನವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ನಂತರ ಡೆಕ್ಕನ್ ಪ್ರಸ್ಥಭೂಮಿ ದಾಟುವ ಮತ್ತು ಹಾಗೆಯೇ ಎರಡು ಕವಲಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಬಸರಾ ಕ್ಷೇತ್ರವು, ಆದಿಲಾಬಾದ್ ಜಿಲ್ಲೆಯಲ್ಲಿ ಗೋದಾವರಿ ತೀರದಲ್ಲಿರುವ , ಸರಸ್ವತಿಯ ಪ್ರಸಿದ್ಧ ದೇವಸ್ಥಾನವನ್ನು ಹೊಂದಿದೆ. ಇದು ಭಾರತದಲ್ಲಿ ಸರಸ್ವತಿಯ ಎರಡನೇ ದೇವಾಲಯವಾಗಿದೆ. ಮೊದಲನೆಯದು ಪಾಕ್ ಆಕ್ರಮಿತ ಕಾಶ್ಮೀರದ ಕಿಷನ್ ಗಂಗಾ ಕಣಿವೆಯಲ್ಲಿನ ಶಾರದಿ ಎಂಬ ಹಳ್ಳಿಯಲ್ಲಿದೆ.

ಗೋದಾವರಿ ಐತಿಹಾಸಿಕ ದೇಗುಲಗಳು ಮತ್ತು ಸ್ನಾನಘಟ್ಟಗಳು :

೧. ರಾಮಕುಂಡದ ಗೋದಾವರಿ ಸ್ನಾನಘಟ್ಟ

ಗೋದಾವರಿ ಘಟ್ಟಗಳು ಮತ್ತು ಸುತ್ತಲಿನ ಐತಿಹಾಸಿಕ ದೇಗುಲಗಳು

ಪವಿತ್ರ ಗೋದಾವರಿ ನದಿಯ ನೀರಿನಲ್ಲಿ ಮಿಂದು ಪುನೀತರಾಗಲು ನಾಶಿಕ್ ನಗರದ ಹೃದಯ ಭಾಗದಲ್ಲಿ ಕಟ್ಟಿಸಿರುವ ಬಹಳ ವರ್ಷಗಳಷ್ಟು ಹಳೆಯದಾದ ಸ್ನಾನ ಘಟ್ಟಗಳಿಗೆ ರಾಮಕುಂಡ ಎಂದು ಹೆಸರು. 

ಗೋಮುಖದಿಂದ ಗೋದಾವರಿ ನದಿಯ ನೀರು ಸುರಿಯುವಂತಿರುವ ರಚನೆಯ ಎದುರಾಗಿ ನಿಂತಿರುವ ಶಿವನ ದೇಗುಲವನ್ನು ಸ್ಥಳೀಯರು ಗೋರಾನಂದಿ ದೇವಾಲಯವೆಂದು ಕರೆಯುತ್ತಾರೆ. ಶಿವಲಿಂಗದ ಎದುರಿಗೆ ದೇವಾಲಯದ ಹೊರಗಿರುವ ನಂದಿಯ ಶಿಲ್ಪ ಅಮೃತಶಿಲೆಯಿಂದ ಕೆತ್ತಲ್ಪಟ್ಟಿದ್ದು ಬಿಳಿಯ (ಗೋರಾ) ಬಣ್ಣಕ್ಕಿದೆ. ಇದು ನಾಶಿಕ್ ನಗರವು ೧೮ನೇ ಶತಮಾನದ ಆರಂಭದಲ್ಲಿ ಇಂದೂರಿನ ಹೋಳ್ಕರ್ ರಾಜಮನೆತನಕ್ಕೆ ಸೇರಿದ್ದ ಸಂದರ್ಭದಲ್ಲಿ ಅವರು ಕಟ್ಟಿಸಿದ ಮಂದಿರ.

 ೨. ರಾಮಕುಂಡದ ಗೋರಾನಂದಿ ಮಂದಿರ

ರಾಮಕುಂಡದಲ್ಲೇ ಅತ್ಯಂತ ಮನೋಹರವಾದ ನರೋಶಂಕರ ಶಿವ ದೇವಾಲಯ ಗೋರಾನಂದಿ ದೇವಾಲಯದ ಎಡಕ್ಕೆ ಅನತಿ ದೂರದಲ್ಲಿ ಕಾಣುತ್ತದೆ. ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಹೋಲುವಂತೆ ಮೂರ್ನಾಲ್ಕು ಅಡಿ ಎತ್ತರದ ಜಗಲಿಯ ಮೇಲೆ ಕಟ್ಟಲ್ಪಟ್ಟಿರುವ ಈ ದೇಗುಲದ ಮೂಲ ದೇವರು ರಾಮೇಶ್ವರ ಶಿವಲಿಂಗ. ೧೭೪೭ರಲ್ಲಿ ನರೋಶಂಕರ ರಾಜೇಬಹಾದ್ದೂರರಿಂದ ನಿರ್ಮಿತವಾದ ಈ ದೇವಾಲಯ ಮೂರು ಶಿಖರಗಳನ್ನು ಹೊಂದಿರುವ ರಚನೆಯಷ್ಟೇ ಅಲ್ಲದೆ ಹೊರಭಾಗದಲ್ಲಿ ನಿಲ್ಲಿಸಿರುವ ಆಳೆತ್ತರದ ಗೋಡೆಯ ಮೇಲೆ ಅಡ್ಡವಾಗಿ ಮತ್ತೂ ಮೂರು ಗೋಪುರಗಳನ್ನು ಪಡೆದಿದೆ. ಹೊರಬಾಗಿಲಿನ ಮೇಲಿರುವ ಟೊಳ್ಳಾದ ಗೋಪುರದೊಳಗೆ ಪ್ರಸಿದ್ಧ ನರೋಶಂಕರ ಗಂಟೆಯನ್ನು ತೂಗುಹಾಕಲಾಗಿದೆ. ಈ ಗಂಟೆಯು ಪೋರ್ತುಗೀಸರ ಮೇಲೆ ಪೇಶ್ವೆಯವರು ಸಾಧಿಸಿದ ಜಯದ ಪ್ರತೀಕವಾಗಿದೆ. ದೇಗುಲದ ಮೂರು ಶಿಖರಗಳಲ್ಲಿ ಮೊದಲನೆಯದು ಸ್ವಲ್ಪ ಮಟ್ಟಿನ ಹಾನಿ ಅನುಭವಿಸಿರುವಿದು ಕಂಡರೆ ಎರಡನೆಯ ವಿಶಾಲವಾದ ಶಿಖರ ತನ್ನ ಅನುರೂಪತೆಯಿಂದ ಚಕಿತಗೊಳಿಸುತ್ತದೆ. ಅದರ ಮೇಲಿರುವ ಆನೆಗಳ ಮತ್ತು ಸಿಂಹಗಳ ಸುಂದರ ಕೆತ್ತನೆಗಳೂ ಮನ ಸೂರೆಗೊಳ್ಳುತ್ತವೆ. ದೇವಾಲಯದ ಹೊರಗೋಡೆಗಳಲ್ಲಿ ದತ್ತಾತ್ರೇಯ, ಗಣೇಶ, ಕಾಲಭೈರವ, ಧ್ಯಾನದಲ್ಲಿ ಮುಳುಗಿರುವ ಯತಿಗಳ, ಮತ್ತೂ ಹಲವು ಶಿಲ್ಪಗಳನ್ನು ಕೆತ್ತಲಾಗಿದೆ.

 ೩.ನರೋಶಂಕರ ದೇವಾಲಯ, ಕಪ್ಪು ಕಲ್ಲಿನಲ್ಲಿ ಕಟ್ಟಿದ ನೀಲಕಂಠೇಶ್ವರ ಮಂದಿರ

ಗೋದಾವರಿ ಘಟ್ಟಗಳು ಮತ್ತು ಸುತ್ತಲಿನ ಐತಿಹಾಸಿಕ ದೇಗುಲಗಳು
ಕಪ್ಪು ಕಲ್ಲಿನಲ್ಲಿ ಕಟ್ಟಿದ ನೀಲಕಂಠೇಶ್ವರ ಮಂದಿರ

ನರೋಶಂಕರ ದೇವಾಲಯದ ಎದುರಿಗೆ ರಾಮಕುಂಡದ ಆಚೆಗಿನ ಭಾಗದಲ್ಲಿ ಕಾಣುವ ಕಪ್ಪು ಕಲ್ಲಿನ ಮತ್ತೊಂದು ದೇವಾಲಯವೇ ನೀಲಕಂಠೇಶ್ವರ ದೇವಾಲಯ. ವಾಸ್ತುಶಿಲ್ಪದಲ್ಲಿ ಗೋರಾನಂದಿ ದೇವಾಲಯವನ್ನೇ ಹೋಲುವ ಈ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗ ಅಮೃತಶಿಲೆಯದಾಗಿದ್ದು ಮೊದಲಿದ್ದ ವಿಗ್ರಹವು ಭಿನ್ನವಾದಾಗ ಸ್ಥಾಪಿಸಲಾದ ಹೊಸ ಲಿಂಗದಂತೆ ಕಂಡುಬರುತ್ತದೆ.

೪.ಸುಂದರನಾರಾಯಣ ದೇಗುಲ

ಗೋದಾವರಿ ನದಿಯ ಅಡ್ಡಲಾಗಿರುವ ಅಹಲ್ಯಾಬಾಯಿ ಹೋಳ್ಕರ್ ಸೇತುವೆಯನ್ನು ದಾಟಿ ಸ್ವಲ್ಪ ದೂರ ಹೋದರೆ ಭವ್ಯವಾದ ಸುಂದರನಾರಾಯಣ ದೇಗುಲ ಕಾಣಸಿಗುತ್ತದೆ. ಹಿಂದೆ ಈ ಭಾಗದಲ್ಲಿ ಜಲಂಧರನೆಂಬ ಮಹಾ ಶಿವಭಕ್ತನಾದ ರಕ್ಕಸ ಮತ್ತು ಅವನ ಪತಿವ್ರತಾ ಪತ್ನಿ ವೃಂದಾದೇವಿ ವಾಸಿಸುತ್ತಿದ್ದರಂತೆ. ಜಲಂಧರನ ತಪಸ್ಸು ಮತ್ತು ವೃಂದಾದೇವಿಯ ಪಾತಿವ್ರತ್ಯವನ್ನು ಮೆಚ್ಚಿ ಶಿವನು ಜಲಂಧರನಿಗೆ ಚಿರಂಜೀವಿಯಾಗುವ ವರವನ್ನಿತ್ತನಂತೆ. ಆ ನಂತರ ಕ್ರೌರ್ಯವನ್ನು ಪ್ರದರ್ಶಿಸಲಾರಂಭಿಸಿದ ಜಲಂಧರ ಸಕಲ ಜೀವಜಂತುಗಳಿಗೂ ಮತ್ತು ದೇವತೆಗಳಿಗೂ ಕೆಡುಕನ್ನುಂಟುಮಾಡಲಾರಂಭಿಸಿದನಂತೆ. ಅಮರನಾದ ಜಲಂಧರನಿಗೆ ನೇರವಾಗಿ ಏನನ್ನೂ ಮಾಡಲಾಗದ ಪರಿಸ್ಥಿತಿಯನ್ನು ಸುಧಾರಿಸಲು ವಿಷ್ಣು ಜಲಂಧರನ ವೇಷ ಧರಿಸಿ ವೃಂದಾಳೊಡನೆ ಗಂಡನಾಗಿ ಜೀವಿಸಿ ಅವಳ ಪಾತಿವ್ರತ್ಯವನ್ನು ಪ್ರಶ್ನಿಸುವಂತೆ ಮಾಡಿದಾಗ ಶಿವನು ತಾನು ಕೊಟ್ಟಿದ್ದ ವರವನ್ನು ವಾಪಸ್ ಪಡೆದನಂತೆ. ಇದರ ನಂತರ ಜಲಂಧರನ ಸಂಹಾರ ಒಂದೆಡೆಯಾದರೆ ಈ ದ್ರೋಹದಿಂದ ಕುಪಿತಳಾದ ವೃಂದಾದೇವಿ ಮತ್ತೊಂದೆಡೆ ವಿಷ್ಣುವಿಗೆ ಕುರೂಪಿಯಾಗೆಂದು ಶಾಪವನ್ನಿತ್ತಳಂತೆ. ವಿಷ್ಣು ಶಾಪವಿಮೋಚನೆಗಾಗಿ ಗೋದಾವರಿಯಲ್ಲಿ ಪವಿತ್ರ ಸ್ನಾನ ಮಾಡಿ ಮತ್ತೆ ತನ್ನ ಸೌಂದರ್ಯವನ್ನು ಗಳಿಸಿಕೊಂಡಿದ್ದರಿಂದ ಅವನಿಗೆ ಇಲ್ಲಿ ಸುಂದರನಾರಾಯಣ ಎಂಬ ಹೆಸರಾಯಿತು ಎಂಬ ಪ್ರತೀತಿ.

ದೇವಾಲಯದಲ್ಲಿ ಸುಂದರನಾರಾಯಣನು ಲಕ್ಷ್ಮಿ ಮತ್ತು ವೃಂದಾದೇವಿ ಸಮೇತರಾಗಿ ಸ್ಥಾಪಿತನಾಗಿದ್ದು ಮೂರ್ತಿಗಳು ಬಹಳ ಆಕರ್ಷಕವಾಗಿವೆ. ದೇಗುಲದ ಒಳಗೂ ಹೊರಗೂ ವಿಗ್ರಹಗಳ ಕೆತ್ತನೆಯಿದ್ದು ಬಹಳ ಅಪರೂಪವಾಗಿ ಕಾಣಸಿಗುವ ನಿಂತಿರುವ ಗಣೇಶ ಮತ್ತು ಒಂಟಿಯಾಗಿ ಕುಳಿತಿರುವ ಹನುಮಂತನ ವಿಗ್ರಹಗಳು ಗಮನ ಸೆಳೆಯುತ್ತವೆ.

೫.ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ  

ನಾಶಿಕ್ ನಗರದಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿರುವುದು ಭಾರತದ ಉದ್ದಗಲಕ್ಕೂ ಹರಡಿರುವ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದಾದ ತ್ರ್ಯಂಬಕೇಶ್ವರ. ದೇಗುಲದಿಂದಾಗಿ ಈ ಊರಿಗೂ ತ್ರ್ಯಂಬಕೇಶ್ವರವೆಂದೇ ಹೆಸರು ಬಂದಿದೆ. ನಗರದ ಮೆರುಗು ಹೆಚ್ಚಿಸುವಂತಿರುವ ಬ್ರಹ್ಮಗಿರಿ ಬೆಟ್ಟ ಬಹಳ ದೂರದಿಂದಲೇ ಕಣ್ಮನ ಸೆಳೆಯುತ್ತದೆ. ಪುರಾಣಗಳ ಪ್ರಕಾರ ಇದೇ ಬೆಟ್ಟದ ಮೇಲೆ ಕುಳಿತು ತಪಸ್ಸು ಮಾಡಿ ಗೌತಮಮುನಿಯು ಶಿವನನ್ನು ಮೆಚ್ಚಿಸಿ ಗಂಗೆಯೇ ಈ ಕ್ಷೇತ್ರದಲ್ಲಿ ಗೋದಾವರಿಯಾಗಿ ಹರಿಯುವಂತೆ ವರ ಪಡೆದದ್ದು. ಹೀಗಾಗಿ ಬ್ರಹ್ಮಗಿರಿ ಗೋದಾವರಿ ನದಿಯ ಉಗಮಸ್ಥಾನ. ಗೋಹತ್ಯಾದೋಷವನ್ನು ತೊಳೆದುಕೊಳ್ಳಲೋಸುಗ ಗಂಗಾಸ್ನಾನವನ್ನು ಮಾಡುವ ಸಲುವಾಗಿ ಗಂಗೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಗೌತಮರು ಮಾಡಿದ ಘೋರ ತಪಸ್ಸನ್ನು ಮೆಚ್ಚಿ ಶಿವನು ಗಂಗೆಯನ್ನು ತನ್ನ ಜಟೆಯಿಂದ ಹರಿಯಬಿಟ್ಟರೂ ಸಹ ನದಿಯು ಒಂದೆಡೆ ನಿಲ್ಲದೆ ಬೆಟ್ಟದಿಂದ ಕೆಳಜಾರುತ್ತ ಕಣ್ಣುಮುಚ್ಚಾಲೆಯಾಡುತ್ತ ಓಡುತ್ತಿರಲು ಗೌತಮರು ಬೆಟ್ಟದ ತಪ್ಪಲಿನಲ್ಲಿ ತಮ್ಮ ತಪಶ್ಶಕ್ತಿಯನ್ನು ಉಪಯೋಗಿಸಿ ಹುಲ್ಲಿನ ಜೊಂಡಿನಿಂದ ಸ್ವಲ್ಪ ಜಾಗವನ್ನು ಸುತ್ತುವರಿಸಿ ಗಂಗೆಯು ಅಲ್ಲೇ ನಿಲ್ಲುವಂತೆ ಮಾಡಿದರು. ಹೀಗೆ ರಚಿತವಾದ ಪವಿತ್ರವಾದ ಕುಂಡವೇ ಕುಶಾವರ್ತ.

೬.ಕುಶಾವರ್ತ

ಬ್ರಹ್ಮಗಿರಿಯಲ್ಲಿ ಜನಿಸಿದ ಗೋದಾವರಿ ಕುಶಾವರ್ತ ಕುಂಡದ ಮೂಲಕ ಹಾದುಹೋಗಿ ತ್ರ್ಯಂಬಕೇಶ್ವರ ಲಿಂಗದಲ್ಲಿ ಮತ್ತೆ ಉದ್ಭವಿಸುತ್ತಾಳೆ. ಕುಶಾವರ್ತದಲ್ಲಿ ಮಿಂದು ಪುನೀತರಾಗಲು ದಿನವೂ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ.

ಕುಶಾವರ್ತದಿಂದ ಸ್ವಲ್ಪ ದೂರದಲ್ಲೇ ಇರುವುದು ಗೌತಮ ಕೊಳ, ಮತ್ತದರ ಮುಂಭಾಗಕ್ಕೆ ಘನಗಾಂಭೀರ್ಯ ತೋರುವ ಮನೋಹರ ತ್ರ್ಯಂಬಕೇಶ್ವರ ಮಂದಿರ. ನಾನಾಸಾಹೇಬನೆಂದೇ ಪ್ರಖ್ಯಾತನಾದ ಬಾಲಾಜಿ ಬಾಜಿರಾವ್ ಪೇಶ್ವೆ ಈಗಿರುವ ಈ ಭವ್ಯ ಕಪ್ಪುಶಿಲೆಯ ಮಂದಿರವನ್ನು ಕಟ್ಟಿಸಿದ್ದು. ಮೂರು ಬಾಗಿಲುಗಳು ಮತ್ತು ಐದು ಶಿಖರಗಳನ್ನು ಹೊಂದಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಸದಾ ಪೂಜಿತನಾದ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗವಿದೆ. ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಮತ್ತು ಗೋದಾವರಿ ನದಿಯ ಅಂಶಗಳನ್ನು ಈ ಜ್ಯೋತಿರ್ಲಿಂಗವು ಹೊಂದಿದೆ ಎನ್ನುವುದು ಜನಪ್ರಿಯ ನಂಬಿಕೆ. ದೇಗುಲ ಮತ್ತು ಅದರ ಸುತ್ತಮುತ್ತಲಿನ ಪರಿಸರದ ಪ್ರಸನ್ನತೆಯನ್ನು ಅನುಭವಿಸಿಯೇ ಅರಿಯಬೇಕು.

೭. ಪಾಂಡುಲೆಣಿ ಗುಹೆಗಳು

ಗೋದಾವರಿ ಘಟ್ಟಗಳು ಮತ್ತು ಸುತ್ತಲಿನ ಐತಿಹಾಸಿಕ ದೇಗುಲಗಳು
ಪಾಂಡುಲೆಣಿ ಗುಹೆಗಳು

ನಾಶಿಕ್ ನಗರದಿಂದ ಸುಮಾರು ೮ ಕಿಲೋಮೀಟರ್ ದೂರದಲ್ಲಿ ಸರಿಸುಮಾರು ಎರಡು ಸಾವಿರ ವರ್ಷಗಳಷ್ಟೇ ಹಳೆಯದಾದ ಪಾಂಡುಲೆಣಿ ಗುಹಾಂತರ್ದೇವಾಲಯಗಳಿದ್ದು, ಇವು ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ಅಜಂತಾ – ಎಲ್ಲೋರಾ ಗುಹೆಗಳನ್ನೇ ಹೋಲುವಷ್ಟು ಹಳೆಯವೂ, ಐತಿಹಾಸಿಕವಾಗಿ ಮಹತ್ವವುಳ್ಳವೂ ಆಗಿವೆ. ತ್ರಿರಶ್ಮಿ ಎಂದು ಕರೆಯಲ್ಪಡುವ ಬೆಟ್ಟಗಳ ಶ್ರೇಣಿಯಲ್ಲಿರುವ ಈ ಗುಹೆಗಳಲ್ಲಿ ಕ್ರಿಸ್ತಪೂರ್ವ ಮೂರನೇ ಶತಮಾನದಿಂದ ಕ್ರಿಸ್ತಶಕ ಎರಡನೇ ಶತಮಾನದವರೆಗಿನ ಹೀನಯಾನ ಬೌದ್ಧಮತದ ವಿಹಾರಗಳು ಮತ್ತು ಚೈತ್ಯಗಳನ್ನು ಕಾಣಬಹುದು. ೨೪ ಗುಹೆಗಳ ಈ ಸಂಕೀರ್ಣವನ್ನು ತಲುಪಲು ಸುಮಾರು ೨೫೦ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋಗಬೇಕು.

ಬುದ್ಧ ಮತ್ತು ಬೋಧಿಸತ್ತ್ವರ ಹಲವು ಭಂಗಿಗಳ ವಿಶಾಲ ಶಿಲ್ಪಗಳನ್ನು ಹೊಂದಿರುವ ಪಾಂಡವಲೆಣಿ ಗುಹೆಗಳಿಗೆ ಆ ಹೆಸರು ಬರುವುದಕ್ಕೂ ಮಹಾಭಾರತದ ಪಾಂಡವರಿಗೂ ಯಾವುದೇ ಸಂಬಂಧವಿಲ್ಲ. ಬೆಟ್ಟದಲ್ಲಿ ಹೇರಳವಾಗಿರುವ ಸುಣ್ಣ ಮಿಶ್ರಿತ ಕಲ್ಲುಗಳಿಂದಾಗಿ ಗುಹಾಂತರ್ದೇಗುಲಗಳು ತಿಳಿಹಳದಿ (ಪಾಂಡು) ಬಣ್ಣದಲ್ಲಿ ಕಂಗೊಳಿಸುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗುಂಗುರು ಕೂದಲಿನ ಆರೈಕೆ

ಗುಂಗುರು ಕೂದಲಿನ ಆರೈಕೆ ಹೇಗೆ?

ಹುತಾತ್ಮರ ದಿನ

ಜನವರಿ 30, ಹುತಾತ್ಮರ ದಿನ ಅಥವಾ ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ