1894-95ರಲ್ಲೂ, 1937-45 ರಲ್ಲೂ ಚೀನಕ್ಕೂ ಜಪಾನಿಗೂ ನಡುವೆ ನಡೆದ ಯುದ್ಧಗಳು. ಕೊರಿಯದ ಮೇಲಣ ಸ್ವಾಮ್ಯಕ್ಕಾಗಿ ಈ ರಾಷ್ಟ್ರಗಳ ನಡುವೆ ಹುಟ್ಟಿದ ವ್ಯಾಜ್ಯದಿಂದಾಗಿ 1894-95ರ ಯುದ್ಧ ಸಂಭವಿಸಿತು. ಕೊರಿಯ ಬಹುಕಾಲದಿಂದ ಚೀನದ ಅಧೀನದಲ್ಲಿತ್ತು. ಆದರೆ ಈ ಅಧೀನತೆಯ ಸ್ವರೂಪ ಅಸ್ಪಷ್ಟವಾಗಿತ್ತು. 1880ರಿಂದ ಚೀನ ಅದರ ಮೇಲೆ ತನ್ನ ಹತೋಟಿ ಹೆಚ್ಚಿಸಿಕೊಳ್ಳಲು ಆರಂಭಿಸಿತು. ಎರಡು ಶತಮಾನಗಳ ಪ್ರತ್ಯೇಕತೆಯ ಸ್ಥಿತಿಯಿಂದ ಹೊರಬಂದು ಬಲಿಷ್ಠವಾಗಿ ಬೆಳೆಯತೊಡಗಿದ್ದ ಜಪಾನ್, ಕೊರಿಯದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಕೊರಿಯದಲ್ಲಿದ್ದ ಕಲ್ಲಿದ್ದಲು ಮತ್ತು ಕಬ್ಬಿಣ ಅದಿರುಗಳ ನಿಕ್ಷೇಪಕ್ಕಾಗಿಯೂ ಅದರ ಆಯಕಟ್ಟಿನ ಸ್ಥಾನದಿಂದಾಗಿಯೂ ಜಪಾನಿಗೆ ಕೊರಿಯದಲ್ಲಿ ಆಸಕ್ತಿ ಬೆಳೆಯಿತು. ಅದೊಂದು ಸ್ವತಂತ್ರ ರಾಷ್ಟ್ರವೆಂಬಂತೆ ಅದರೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿತು. ಕೊರಿಯ ತನಗೆ ಪೊಗದಿ ಕೊಡುವ ದೇಶವೆಂದು ಹೇಳಿಕೊಳ್ಳುತ್ತಿದ್ದ ಚೀನ ಇದನ್ನು ಸಹಿಸಲಿಲ್ಲ. ಕೊರಿಯದಲ್ಲಿ ಆಗ ಎರಡು ಗುಂಪುಗಳಿದ್ದುವು. ಒಂದು ಗುಂಪು ಚೀನೀ ಪರ, ಇನ್ನೊಂದು ಜಪಾನೀ ಪರ. ಇವೆರಡರ ನಡುವೆ ಘರ್ಷಣೆ ಏರ್ಪಟ್ಟಾಗ ಚೀನ-ಜಪಾನ್‍ಗಳೆರಡೂ ಕೊರಿಯಕ್ಕೆ ತಂತಮ್ಮ ಸೈನ್ಯ ಕಳಿಸಿದುವು. ಚೀನೀಪರವಾದ ಗುಂಪಿನದು ಮೇಲುಗೈ ಆಗಿತ್ತು. ಆ ಸಮಯದಲ್ಲಿ ಜಪಾನು ಯುದ್ಧಮಾಡಲು ಇಚ್ಛಿಸಲಿಲ್ಲ (1887). ಇವುಗಳ ನಡುವೆ ಶಾಂತಿ ಕೌಲು ಏರ್ಪಟ್ಟಿತು.
1894ರಲ್ಲಿ ಇನ್ನೊಂದು ಬಿಕ್ಕಟ್ಟು ಒದಗಿತು. ಕೊರಿಯದಲ್ಲಿ ಎದಿದ್ದ ಭಾರಿ ಬಂಡಾಯವನ್ನು ಹತ್ತಿಕ್ಕಲು ಕೊರಿಯದ ದೊರೆಯ ಅಪೇಕ್ಷೆಯ ಮೇರೆಗೆ ಚೀನ ಅಲ್ಲಿಗೆ ಸೈನ್ಯ ಕಳಿಸಿತು. ಅದಕ್ಕೆ ಪ್ರತಿಯಾಗಿ ಜಪಾನೂ ಅಲ್ಲಿಗೆ ಸೈನ್ಯ ಕಳಿಸಿತು. ದಂಗೆಯನ್ನಡಗಿಸಿದ ಮೇಲೆ ಎರಡು ದೇಶಗಳ ಸೈನ್ಯಗಳು ವಾಪಸಾಗಬೇಕೆಂಬ ಚೀನೀ ಸಲಹೆಯನ್ನು ಜಪಾನ್ ಒಪ್ಪಲಿಲ್ಲ. ಇನ್ನೂ ಸಂಪೂರ್ಣವಾಗಿ ನೆಮ್ಮದಿ ನೆಲೆಸಿಲ್ಲವಾದ್ದರಿಂದ ಎರಡೂ ದೇಶಗಳು ಸಂಯುಕ್ತವಾಗಿ ಕೊರಿಯ ಸರ್ಕಾರದ ಸುಧಾರಣೆಗೆ ಶ್ರಮಿಸಬೇಕೆಂಬುದು ಅದರ ಅಭಿಪ್ರಾಯ. ಇದರಿಂದಾಗಿ ವಿರಸ ಬೆಳೆಯಿತು. 1894ರ ಆಗಸ್ಟಿನಲ್ಲಿ ಜಪಾನೀ ಹಡಗುಗಳ ಮೇಲೆ ಚೀನೀ ನೌಕೆಗಳು ಗುಂಡುಹಾರಿಸಿದುವು. ಯುದ್ಧ ಆರಂಭವಾಯಿತು.
ಈ ಯುದ್ಧದಲ್ಲಿ ಜಯ ಗಳಿಸುವ ಬಗ್ಗೆ ಚೀನಕ್ಕೆ ಆರಂಭದಿಂದಲೂ ಸಂದೇಹವಿತ್ತು. ಚಿಕ್ಕದಾದರೂ ದಕ್ಷವಾದ ಜಪಾನೀ ಸೈನ್ಯವನ್ನು ಅದು ಎದುರಿಸಲಾಗಲಿಲ್ಲ. ಆರೇ ತಿಂಗಳು ಕಳೆಯುವ ವೇಳೆಗೆ ಜಪಾನಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಚೀನ ಪ್ರಯತ್ನಿಸಿತು. 1895ರ ಮಾರ್ಚ್ ವೇಳೆಗೆ ವೈ-ಹೈ ಮತ್ತು ದಕ್ಷಿಣ ಮಂಚೂರಿಯಗಳು ಜಪಾನಿನ ವಶವಾದುವು. ಪೀಕಿಂಗಿಗೆ ವಿಪತ್ತು ಹತ್ತಿರವಾಗಿತ್ತು. ಚೀನದ ಪ್ರಮುಖ ರಾಜಕಾರಣ ಲಿ ಹ ಗ್-ಚಾಂಗ್ ಜಪಾನಿಗೆ ದಾವಿಸಿ ಶಾಂತಿ ಭಿಕ್ಷೆ ಬೇಡಿದ. 1895ರ ಏಪ್ರಿಲ್ 17ರಂದು ಚೀನ-ಜಪಾನುಗಳ ನಡುವೆ ಷಿಮೊನೊಸೆಕಿ ಕೌಲು ಏರ್ಪಟ್ಟಿತು. ಚೀನ ಜಪಾನಿಗೆ 20,00,000,000 ಟೇಲುಗಳನ್ನು (ಚೀನೀ ನಾಣ್ಯ) ಪರಿಹಾರದ್ರವ್ಯವಾಗಿ ಕೊಡಬೇಕಾಯಿತಲ್ಲದೆ ಕೊರಿಯವನ್ನು ಸ್ವತಂತ್ರ ದೇಶವೆಂದು ಒಪ್ಪಿಕೊಳ್ಳಬೇಕಾಯಿತು. ಫಾರ್ಮೋಸ ಮತ್ತು ಇತರ ದ್ವೀಪಗಳನ್ನೂ ಮಂಚೂರಿಯದ ಲಿಯೌಡುಂಗ್ ಪರ್ಯಾಯ ದ್ವೀಪವನ್ನೂ ಜಪಾನಿಗೆ ಕೊಡಬೇಕೆಂದೂ, ಚೀನದ ನಾಲ್ಕು ರೇವುಗಳಲ್ಲಿ ಜಪಾನಿಗೆ ಹೊಸದಾಗಿ ವ್ಯಾಪಾರಕ್ಕಾಗಿ ಪ್ರವೇಶ ದೊರಕಿಸಿಕೊಡಬೇಕೆಂಬುದೂ ಕೌಲಿನ ಇನ್ನೆರಡು ಷರತ್ತುಗಳು. ಈ ಕೌಲು ತುಂಬ ಕಠಿಣವೆಂದು ಜರ್ಮನಿ, ರಷ್ಯ, ಫ್ರಾನ್ಸ್‍ಗಳು ಭಾವಿಸಿ, ಇದನ್ನು ಬದಲಾಯಿಸಲು ಜಪಾನಿನ ಮೇಲೆ ಒತ್ತಾಯ ಹಾಕಿದುವು. ಜಪಾನು ವಿಧಿಯಿಲ್ಲದೆ ಇದರ ಷರತ್ತುಗಳನ್ನು ಸ್ವಲ್ಪ ಬದಲಾಯಿಸಬೇಕಾಯಿತು.
ಚೀನ ಈ ಯುದ್ಧದಲ್ಲಿ ಜಯ ಗಳಿಸುವುದೆಂಬ ಪಶ್ಚಿಮದ ರಾಷ್ಟ್ರಗಳ ನಿರೀಕ್ಷೆ ಸುಳ್ಳಾಯಿತು. ಚೀನದ ದೌರ್ಬಲ್ಯ ಅವಕ್ಕೆ ಅರಿವಾಗಿ, ಅವು ಅಬಾಧಿತವಾಗಿ ಚೀನದ ಶೋಷಣೆಯನ್ನು ಮುಂದುವರಿಸಿದುವು. ಆಂತರಿಕವಾಗಿ ಕ್ರಾಂತಿಯ ಚಳವಳಿ ಬಿರುಸಾಗಿ, ಮ್ಯಾನ್‍ಚೂ ಪ್ರಭುತ್ವದ ಪತನದ ದಿನಗಳು ಹತ್ತಿರವಾದುವು. ಜಪಾನೂ ಕ್ರಮಕ್ರಮವಾಗಿ ಆಕ್ರಮಣ ಮುಂದುವರಿಸಿತು.
ಚೀನದ ಸ್ವಾತಂತ್ರ್ಯ ಹಾಗೂ ಸಮಗ್ರತೆಗೆ ಜಪಾನ್ ಒಂದು ಸವಾಲಾಗಿತ್ತು. ಮಂಚೂರಿಯದಲ್ಲಿ ಜಪಾನೀಯರು ಪಡೆದಿದ್ದ ಸೌಲಭ್ಯಗಳಿಂದ ಅಲ್ಲಿಯ ಚೀನೀ ಜನ ಅಸಂತುಷ್ಟರಾಗಿದ್ದರು. ತಮ್ಮ ರೈಲುಮಾರ್ಗಗಳ ಮೂಲಕ ಜಪಾನೀಯರು ದಕ್ಷಿಣ ಮಂಚೂರಿಯದ ಬಹುಭಾಗದ ಮೇಲೆ ಹತೋಟಿ ಹೊಂದಿದ್ದರು. ಜಪಾನೀ ರೈಲ್ವೆಯನ್ನು ಸುತ್ತುಗಟ್ಟಿ, ಜಪಾನೀಯರ ಹತೋಟಿಯಿಂದ ವಿಮುಕ್ತರಾಗುವ ಉದ್ದೇಶದಿಂದ ಚೀನೀಯರೂ ಅಲ್ಲಿ ರೈಲುಮಾರ್ಗಗಳನ್ನು ನಿರ್ಮಿಸಿದರು. ಮಂಚೂರಿಯದ ದೊರೆ ಚಾಂಗ್ ಷುಯೆಲ್ಯಾಂಗ್ ಚೀನದೊಂದಿಗೆ ಹೆಚ್ಚು ಹೆಚ್ಚಾಗಿ ಸ್ನೇಹ ಬೆಳೆಸಿದ.
1931ರಲ್ಲಿ ದಕ್ಷಿಣಮಂಚೂರಿಯದಲ್ಲಿ ಸಂಭವಿಸಿದ ಒಂದು ಆಸ್ಪೋಟನೆಯ ನೆವದಿಂದ ಜಪಾನೀಯರು ಮ್ಯೂಕ್‍ಡೆನ್ ನಗರವನ್ನು ಆಕ್ರಮಿಸಿಕೊಂಡರು. ಕ್ರಮೇಣ ಇವರು ಮಂಚೂರಿಯದ ಇತರ ನಗರಗಳನ್ನೂ ಹಿಡಿದುಕೊಂಡು, ಜಾಂಗ್ ಷುಯೆಲ್ಯಾಂಗ್‍ನ ಅಧಿಕಾರವನ್ನು ದುರ್ಬಲಗೊಳಿಸಿ, ಸ್ಥಳೀಯ ನಾಯಕರು ಅಲ್ಲಲ್ಲಿ ಸರ್ಕಾರ ಸ್ತಾಪಿಸಲು ಪ್ರೋತ್ಸಾಹಿಸಿದರು. 1932ರಲ್ಲಿ ಇವನ್ನೆಲ್ಲ ಸಂಘಟಿಸಿ ಮ್ಯಾನ್ ಚೂಕೌ ಎಂಬ ರಾಜ್ಯ ಸ್ಥಾಪಿಸಿ ಚೀನದ ಕೊನೆಯ ಮ್ಯಾನ್‍ಚೂ ಚಕ್ರವರ್ತಿಯಾಗಿದ್ದ ಪ್ಯು-ಇ ಯನ್ನು ಅದರ ದೊರೆಯಾಗಿ ಮಾಡಿದರು.
ನ್ಯಾನ್‍ಕಿಂಗ್ ಸರ್ಕಾರ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಮೊರೆಹೊಕ್ಕಿತು. ಜಪಾನ್ ತನ್ನ ಸೇನೆಯನ್ನು ದಕ್ಷಿಣ ಮಂಚೂರಿಯ ರೈಲು ಮಾಗ್ ಪ್ರದೇಶಕ್ಕೆ ಹಿಂದೆಗೆದುಕೊಳ್ಳುವಂತೆ ರಾಷ್ಟ್ರಗಳ ಕೂಟ ಅದನ್ನು ಒಪ್ಪಿಸಿ, ವಿಚಾರಣಾ ಆಯೋಗವೊಂದನ್ನು ನೇಮಿಸಿತು. ಜಪಾನಿನದೇ ತಪ್ಪೆಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿತು. 1933ರಲ್ಲಿ ರಾಷ್ಟ್ರಗಳ ಕೂಟ ಜಪಾನಿನ ಮೇಲೆ ಕ್ರಮ ಕೈಗೊಂಡಿತು. ಜಪಾನು ಕೂಟವನ್ನೇ ತ್ಯಜಿಸಿತು.
ನ್ಯಾನ್‍ಕಿಂಗ್ ಸರ್ಕಾರ ಜಪಾನನ್ನು ಎದುರಿಸಿ ಹೋರಾಡುವಂತಿರಲಿಲ್ಲ. ಅದು ಜಪಾನಿನೊಡನೆ ವ್ಯಾಪಾರವನ್ನು ನಿಷೇಧಿಸಿತು. ಇದರ ಫಲವಾಗಿ ಘರ್ಷಣೆ ಉದ್ಭವಿಸಿತು. ಷಾಂಗ್‍ಹೈ ನಗರದ ಬಹುಭಾಗವನ್ನು ಜಪಾನ್ ನಾಶಪಡಿಸಿ, ಚೀನೀ ಸೇನೆಯನ್ನು ಹಿಮ್ಮೆಟ್ಟಿಸಿತು. ರಾಷ್ಟ್ರಗಳ ಕೂಟದ ಮಧ್ಯಪ್ರವೇಶದಿಂದಾಗಿ ಮೂರು ತಿಂಗಳುಗಳ ಅನಂತರ ಹೋರಾಟ ನಿಂತಿತು. ಮಂಚೂರಿಯದಲ್ಲಿ ಜಪಾನ್ ವಿರುದ್ಧ ಚಟುವಟಿಕೆಗಳು ಮುಂದುವರಿದುವು. ಮ್ಯಾನ್‍ಚೂಕೌಗೆ ಜೆಹೋಲ್ ಪ್ರಾಂತ್ಯವನ್ನು ಸೇರಿಸಲು ಜಪಾನ್ ಇಚ್ಚಿಸಿತು. 1933ರ ಏಪ್ರಿಲ್‍ನಲ್ಲಿ ಜಪಾನು ಮಹಾ ಗೋಡೆಯವರೆಗೆ ಮುನ್ನುಗ್ಗಿತು. ಚೀನೀಯರು ಹೆಮ್ಮೆಟ್ಟಿದರು. ಮೇ ತಿಂಗಳಲ್ಲಿ ನ್ಯಾನ್‍ಕಿಂಗ್ ಸರ್ಕಾರ ಶಾಂತಿ ಮಾಡಿಕೊಂಡು ಮಹಾ ಗೋಡೆಯ ಉತ್ತರದಲ್ಲಿ ನಿಸ್ಸೇನೀಕೃತ ವಲಯವನ್ನು ನಿರ್ಮಿಸಿತು. ಇಷ್ಟೆಲ್ಲ ಘರ್ಷಣೆಗಳು ನಡೆದರೂ ಅಧಿಕೃತವಾಗಿ ಈ ದೇಶಗಳ ನಡುವೆ ಯುದ್ಧ ಘೋಷಿತವಾಗಿರಲಿಲ್ಲ. ರಾಜತಾಂತ್ರಿಕ ಸಂಬಂಧಕ್ಕೆ ಚ್ಯುತಿ ಬಂದಿರಲಿಲ್ಲ.
ಮ್ಯಾನ್‍ಚೂಕೌ ವಿಚಾರದಲ್ಲಿ ಚೀನೀಯರು ಅಸಂತುಷ್ಟರಾಗಿದ್ದರು. ಆ ರಾಜ್ಯವನ್ನು ಜಪಾನ್, ಇಟಲಿ ಮತ್ತು ಎಲ್ ಸಾಲ್ವಡಾರ್ ಮಾತ್ರ ಮಾನ್ಯ ಮಾಡಿದ್ದುವು. ಜಪಾನು ಹೆಚ್ಚು ರೈಲುಮಾರ್ಗಗಳನ್ನು ನಿರ್ಮಿಸಿ ಅಲ್ಲಿಯ ಅನೇಕ ಪ್ರದೇಶಗಳಲ್ಲಿ ಸಂಪರ್ಕ ಕಲ್ಪಸಿದ್ದಲ್ಲದೆ ಕೊರಿಯಾಕ್ಕೂ ಅದಕ್ಕೂ ಸಂಬಂಧ ಏರ್ಪಡಿಸಿ, ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 1934ರಲ್ಲಿ ಪ್ಯು-ಇ ಕಿರೀಟಧಾರಣೆ ಮಾಡಿಕೊಂಡ.
ಚೀನದ ಮಹಾಗೋಡೆಯ ಉತ್ತರದಲ್ಲಿದ್ದ ಪ್ರದೇಶದಷ್ಟರಿಂದಲೇ ಜಪಾನು ತೃಪ್ತಿ ಹೊಂದಿದ್ದಂತೆ ಕಾಣಲಿಲ್ಲ. ಇಡೀ ಚೀನ ತನಗೆ ಮೀಸಲೆಂದು ತನ್ನ ಒಪ್ಪಿಗೆಯಿಲ್ಲದೆ ಅಲ್ಲಿ ಯಾವ ದೇಶವೂ ಯಾವುದೇ ಬಗೆಯ ಆಚರಣೆಯಲ್ಲೂ ತೊಡಗಕೂಡದೆಂದೂ ಜಪಾನ್ 1934ರಲ್ಲಿ ಒಂದು ಪ್ರಕಟಣೆ ಹೊರಡಿಸಿತು. ಚೀನದ ಹಲವು ಪ್ರದೇಶಗಳ ಮೇಲೆ ಜಪಾನು ಹತೋಟಿ ಹೊಂದಿತು. ಚಿಯಾಂಗ್ ಕೈ-ಷೇಕ್ ಇದನ್ನು ವಿರೋಧಿಸುವ ಧೈರ್ಯ ಇರಲಿಲ್ಲ.
1937ರ ಜುಲೈ ತಿಂಗಳಲ್ಲಿ ಪರಿಸ್ಥಿತಿ ವಿಷಮಿಸಿತು. ಚಿಯಾಂಗ್ ಕೈ-ಷೆಕ್ ಸರ್ಕಾರ ತಮಗೆ ಮಣಿಯುವುದಿಲ್ಲವೆಂದು ತಿಳಿದ ಜಪಾನೀಯರು ಅದನ್ನು ಕೊನೆಗಾಣಿಸಲು ತೀರ್ಮಾನಿಸಿದರು. ಚೀನದಲ್ಲಿ ಉದಯಿಸಿದ ರಾಷ್ಟ್ರೀಯತೆ ತಮ್ಮ ವಿರುದ್ಧವಾಗಿದ್ದುದನ್ನು ಅವರು ಸಹಿಸಲಿಲ್ಲ.
1937ರ ಜುಲೈ 7ರಂದು ಚೀನೀ-ಜಪಾನೀ ಸೈನ್ಯಗಳ ನಡುವೆ ನಡೆದ ಘರ್ಷಣೆ ವ್ಯಾಪಕವಾದ ಯುದ್ಧಕ್ಕೆ ನಾಂದಿಯಾಯಿತು. ಆದರೆ ಎರಡು ಪಕ್ಷಗಳಲ್ಲಿ ಯಾವುದೂ 1941ರ ವರೆಗೆ ಯುದ್ಧ ಘೋಷಿಸಲಿಲ್ಲ. 1937ರ ಶರತ್ಕಾಲದಲ್ಲಿ ಜಪಾನೀಯರು ಉತ್ತರ ಚೀನದ ಮೇಲೆ ಆಕ್ರಮಣ ನಡೆಸಿದರು. ಷಾಂಗ್‍ಹೈ ನಗರ ಅವರ ವಶವಾಯಿತು. ಆ ವರ್ಷದ ನವೆಂಬರ್ ವೇಳೆಗೆ ಯಾಂಗ್‍ಟ್ಸೀ ನದಿಯ ಮೇಲೆ ಜಪಾನೀ ಸೇನೆ ಮುನ್ನುಗ್ಗಿತು. ರೈಲುದಾರಿಗಳ ಉದ್ದಕ್ಕೂ ಇದ್ದ ನಗರಗಳು ಅದರ ಕೈಸೇರಿದುವು. 1937ರ ನವೆಂಬರಿನಲ್ಲಿ ನ್ಯಾನ್‍ಕಿಂಗ್ ಪತನವಾಯಿತು. ಮರುವರ್ಷ ಅಕ್ಟೋಬರ್ ವೇಳೆಗ್ ಕ್ಯಾಂಟನ್, ಹ್ಯಾಂಗ್‍ಕೌ ಅದರ ವಶವಾದುವು. ಆಗ ಜಪಾನೀಯರನ್ನು ಎದುರಿಸುತ್ತಿದ್ದ ಬಲಗಳು ಎರಡು-ಚಿಯಾಂಗ್ ಸರ್ಕಾರದ ಸೇನೆ ಮತ್ತು ಕಮ್ಯೂನಿಸ್ಟ್ ಸೇನೆ. ಜಪಾನನ್ನು ಸಂಯುಕ್ತವಾಗಿ ಎದುರಿಸಬೇಕೆಂಬ ಉದ್ದೇಶದಿಂದ ಕಮ್ಯೂನಿಸ್ಟರು ಚಿಯಾಂಗ್ ಸರ್ಕಾರದ ನಾಯಕತ್ವವನ್ನು ಒಪ್ಪಿಕೊಂಡರು.
ಎಷ್ಟೇ ಕಷ್ಟನಷ್ಟಗಳನ್ನು ಅನುಭವಿಸಿದರೂ ಚೀನೀಯರು ಶರಣಾಗತರಾಗಲಿಲ್ಲ. ಯುದ್ಧ ಮುಂದುವರಿಯಿತು. ನ್ಯಾನ್‍ಕಿಂಗ್ ಪತನದ ಅನಂತರ ಹ್ಯಾಂಗ್‍ಕೌಗೆ ವರ್ಗವಾಗಿದ್ದ ಚಿಯಾಂಗ್ ಸರ್ಕಾರ, ಆ ನಗರವೂ ಪತನವಾದಾಗ ಚುಂಗಕಿಂಗ್‍ನ್ನು ರಾಜಧಾನಿಯಾಗಿ ಮಾಡಿಕೊಂಡಿತು. ಚೀನೀ ನಾಯಕರು ಸಸ್‍ವಾನ್ ಮತ್ತು ಯುನ್ಯಾನ್ ಪ್ರದೇಶಗಳಲ್ಲಿ ವಲಸೆಹೋದರು. ಆಕ್ರಮಿತ ಪ್ರದೇಶದಲ್ಲಿ ಸರ್ಕಾರ ಸ್ಥಾಪಿಸುವ ಜಪಾನೀ ಯೋಜನೆಗೆ ಅಲ್ಲಿಯ ಗಣ್ಯರ ನೆರವು ದೊರೆಯದಾಯಿತು. ಕೆಲವು ಪಟ್ಟಣಗಳು ಮತ್ತು ರೈಲುಮಾರ್ಗಗಳಿಗೆ ಮಾತ್ರ ಜಪಾನಿನ ಹತೋಟಿ ಸೀಮಿತವಾಗಿತ್ತು. ಉಳಿದೆಡೆಗಳಲ್ಲಿ ಜಪಾನ್ ವಿರೋಧಿ ಚಟುವಟಿಕೆಗಳು ಮುಂದುವರಿದುವು. ಕಮ್ಯೂನಿಸ್ಟರು ಗ್ರಾಮೀಣ ಪ್ರದೇಶಗಳಲ್ಲಿ, ಜಪಾನೀ ಸೈನ್ಯದ ಹಿಂದೆ, ಕಾರ್ಯಾಚರಣೆ ನಡೆಸುತ್ತಿದ್ದರು. ಅಲ್ಲದೆ ಅವರು ಗ್ರಾಮರಕ್ಷಣಾ ತಂಡಗಳನ್ನು ಸಂಘಟಿಸಿ, ಸ್ಥಳೀಯ ಸರ್ಕಾರಗಳನ್ನು ಸ್ಥಾಪಿಸಿ, ತಮ್ಮ ಸೈನ್ಯವನ್ನು ವಿಸ್ತರಿಸಿದರು.
ಎರಡನೆಯ ಮಹಾಯುದ್ಧ ಆರಂಭವಾದ ಮೇಲೆ ಜಪಾನೀಯರು ರೇವುಗಳನ್ನೆಲ್ಲ ವಶಪಡಿಸಿಕೊಂಡು ಹೊರಗಿನಿಂದ ಸಮುದ್ರದ ಮೂಲಕ ಚೀನಕ್ಕೆ ಸಹಾಯ ಒದಗದಂತೆ ಮಾಡಿದರು. ಬರ್ಮದಿಂದ ಯುನ್ಯಾನಿನ ಕುನ್‍ಮಿಂಗಿಗೆ ಹೋಗುವ ಮಾರ್ಗವನ್ನು ಮುಚ್ಚುವಂತೆ ಜಪಾನು ಬ್ರಿಟನ್ನನ್ನು ಪ್ರೇರೇಪಿಸಿತು. ಬ್ರಿಟನ್ ಇದಕ್ಕೆ ಒಪ್ಪಿ ಆ ಮಾರ್ಗವನ್ನು ಸ್ವಲ್ಪಕಾಲ ಮುಚ್ಚಿತ್ತು.
ಜಪಾನು ಪರ್ಲ್ ಹಾರ್ಬರ್ ಮೇಲೆ ಹಠಾತ್ತನೆ ದಾಳಿ ನಡೆಸಿದಾಗ ಅಮೆರಿಕ, ಬ್ರಿಟನ್‍ಗಳಿಗೂ ಜಪಾನಿಗೂ ನಡುವೆ ಯುದ್ಧ ಆರಂಭವಾಯಿತು. ಜಪಾನು ಚೀನದ ಪೂರ್ವ ತೀರದಲ್ಲಿ ಪ್ರಬಲವಾಯಿತಲ್ಲದೆ ಬರ್ಮವನ್ನು ಆಕ್ರಮಿಸಿಕೊಂಡಿತು. ಆದರೂ ಚೀನದಲ್ಲಿ ಜಪಾನು ಹೆಚ್ಚು ಪ್ರಭಾವ ಗಳಿಸಿರಲಿಲ್ಲ.
1944 ರ ವೇಳೆಗೆ ಯುದ್ಧ ನಿರ್ಣಾಯಕ ಘಟ್ಟ ಮುಟ್ಟಿತ್ತು. ಅಮೆರಿಕನ್ನರು ಚೀನ ಸರ್ಕಾರಕ್ಕೆ ನೆರವು ನೀಡುತ್ತಿದ್ದುದಲ್ಲದೇ ಜಪಾನೀ ನೆಲೆಗಳನ್ನು ದಾಳಿ ಮಾಡುತ್ತಿದ್ದರು. ಆದರೆ ಚಿಯಾಂಗ್ ಸರ್ಕಾರ ಏಳು ವರ್ಷಗಳ ಯುದ್ಧದಿಂದ ದುರ್ಬಲವಾಗಿತ್ತು. ಚೀನೀ ಕಮ್ಯೂನಿಸ್ಟರು ಪ್ರಬಲರೂ ಪ್ರಭಾವಶಾಲಿಗಳೂ ಆಗಿದ್ದರು. ಪೆಸಿಫಿಕ್ ದ್ವೀಪಗಳಲ್ಲಿ ತೀವ್ರವಾಗಿದ್ದ ಕದನಗಳಲ್ಲಿ ಭಾಗವಹಿಸಲು ಜಪಾನು ತನ್ನ ಸೇನೆಗಳನ್ನು ಚೀನದಿಂದ ಹಿಂದಕ್ಕೆ ಕರೆಸಿಕೊಳ್ಳಲಾರಂಭಿಸಿತು. ಕೊನೆಗೆ ಜಪಾನು ಯುದ್ಧದಲ್ಲಿ ಸೋಲೊಪ್ಪಿ ಶರಣಾಗತವಾದಾಗ ಚೀನದಲ್ಲಿ ಅದರ ಆಕ್ರಮಣದ ತೆರವಾಯಿತು. ಚೀನ-ಜಪಾನ್ ಯುದ್ಧ ಕೊನೆಗೊಂಡಿತು. ಆದರೆ ಕಮ್ಯೂನಿಸ್ಟ್ ಸೇನೆಗಳಿಗೂ ಚಿಯಾಂಗ್ ಸರ್ಕಾರದ ಸೇನೆಗಳಿಗೂ ಹೋರಾಟ ಮುಂದುವರಿದು, 1949ರಲ್ಲಿ ಚೀನದಲ್ಲಿ ಕಮ್ಯೂನಿಸ್ಟರಿಂದ ಜನತಾ ಗಣರಾಜ್ಯ ಸ್ಥಾಪಿತವಾಯಿತು.
ಧನ್ಯವಾದಗಳು.
GIPHY App Key not set. Please check settings