in

ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ

ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ
ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ

ಬಿಲ್ವಪತ್ರೆ ಮರ ಮಧ್ಯಮ ಪ್ರಮಾಣದ ಮರ.ಇದು ಹಿಂದೂ ಧರ್ಮದಲ್ಲಿ ಪವಿತ್ರ ಮರ ಎಂದು ಪರಿಗಣಿತವಾಗಿದೆ. ಶಿವನಿಗೆ ಪ್ರೀತಿಪಾತ್ರ ಮರ ಎಂದು ಪುರಾಣಗಳು ಹೇಳುತ್ತವೆ.ದಕ್ಷಿಣ ಎಷ್ಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ದೇವಸ್ಥಾನಗಳ ಪಕ್ಕ, ಉದ್ಯಾನವನಗಳಲ್ಲಿ ನೆಟ್ಟು ಬೆಳೆಸುತ್ತಾರೆ. ಬಿಲ್ವವು ಭಾರತದ ಹಲವಾರು ಭಾಗಗಳಲ್ಲಿ ಕಂಡು ಬರುವ ಒಂದು ಸಾಮಾನ್ಯ ವೃಕ್ಷವಾಗಿದೆ. ಕಡಲ ಮಟ್ಟದಿಂದ ೩೬೦೦ ಅಡಿಗಳಷ್ಟು ಎತ್ತರದವರೆಗಿನ ಪ್ರದೇಶಗಳಿಂದ ಇದು ಬೆಳೆಯುತ್ತದೆ. ಪಶ್ಚಿಮ ಹಿಮಾಲಯ ಪರ್ವತ ಪ್ರದೇಶಗಳಲ್ಲೂ ಇದು ಬೆಳೆಯುತ್ತದೆ. ಅಂಡಮಾನ್ ದ್ವೀಪಗಳಲ್ಲೂ ಬಿಲ್ವ ಸಹಜವಾಗಿ ಬೆಳೆಯುತ್ತದೆ.

ಇದು ಪರ್ಣಪಾತಿ ಮರ. ಕೊಂಬೆಗಳಲ್ಲಿ ಮುಳ್ಳುಗಳಿವೆ. ತೊಗಟೆ ಬೂದು ಬಣ್ಣದ್ದಾಗಿದ್ದು, ಬೆಂಡು ಬೆಂಡಾಗಿರುವುದು. ಎಲೆಗಳು ತ್ರಿಪರ್ಣಿ ಹಾಗೂ ಸುವಾಸಿತವಾಗಿರುವುವು. ಸರಳ ಅಥವ ಸಂಯುಕ್ತ ಎಲೆಗಳು. ಹೆಚ್ಚಾಗಿ ಪರ್ಯಾಯ ಜೋಡಣೆಯಲ್ಲಿತ್ತವೆ. ಎಲೆಗಳಲ್ಲಿ ಸುಗಂಧ ತೈಲಯುಕ್ತ ಪಾರದರ್ಶಕ ಗ್ರಂಥಿಗಳ ಚುಕ್ಕಿಗಳಿವೆ. ಈ ಕುಟುಂಬದ ಸಸ್ಯಗಳಲ್ಲಿ ದ್ವಿಲಿಂಗಿ ಅಥವ ಏಕಲಿಂಗಿ ಹೂಗಳು ಬಿಡುತ್ತವೆ. ಬಿಲ್ವದ ಹೂಗಳು ಹಸಿರು ಮಿಶ್ರ ಬಿಳಿ ಬಣ್ಣದಾಗಿರುತ್ತದೆ. ಸಣ್ಣ ಗೊಂಚಲಿನಲ್ಲಿ ಹೂ ಬಿಡುತ್ತದೆ. ಹೂವು ಪರಿಮಳದಿಂದ ಕೂಡಿರುತ್ತದೆ. ಸೇಬಿನ ಆಕಾರ ಹಾಗೂ ಗಾತ್ರದ ಕಾಯಿ ಬಿಡುವುದು. ಬಿಲ್ವದ ಹಣ್ಣಿನ ಒಂದು ವಿಶೇಷತೆ ಎಂದರೆ ಅದು ಎಳೆ ಕಾಯಿ, ಅಪಕ್ವ ಫಲ, ಮಾಗಿದ ಫಲ – ಈ ಯಾವುದೇ ಹಂತದಲ್ಲಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಬಿಲ್ವದ ಮರದಲ್ಲಿ ಹಣ್ಣು ಪಕ್ವವಾಗಲು ದೀರ್ಘ ಕಾಲ ಆಗುತ್ತದೆ. ಹೂಗಳು ಪರಾಗಸ್ಪರ್ಶಕ್ಕೆ ಗುರಿಯಾಗಿ ಫಲಿತವಾಗಿ ಕಾಯಾಗಲು ಒಂದು ವರ್ಷವಾಗಲೂಬಹುದು. ಬಿಲ್ವದ ಹಣ್ಣು ದುಂಡಗಿರುತ್ತದೆ. ಮೊದಲು ಕಾಯಿಯು ಹಸಿರು ಬಣ್ಣದಾಗಿದ್ದು, ಬೂದು ಬಣ್ಣ ತಾಳುತ್ತದೆ. ಹಣ್ಣಿನ ಚಿಪ್ಪು ಗಟ್ಟಿಯಾಗಿರುತ್ತದೆ. ಒಳಗಿನ ತಿರುಳು ಕಿತ್ತಳೆ ಬಣ್ಣದ್ದಾಗಿರುತ್ತದೆ. ಬಿಲ್ವದ ಹಣ್ಣಿನಲ್ಲಿ ಎರಡು ವಿಧಗಳಿದ್ದು ಗ್ರಾಮ್ಯ ವಿಧದಲ್ಲಿ ಹಣ್ಣುಗಳು ದೊಡ್ಡದಾಗಿದ್ದು ಮುಳ್ಳುಗಳ ಪ್ರಮಾಣ ಕಡಿಮೆ ಇರುತ್ತದೆ. ವನ್ಯವಿಧದಲ್ಲಿ ಗಾತ್ರ ಚಿಕ್ಕದಿದ್ದು ಮುಳ್ಳುಗಳು ಹೆಚ್ಚಿರುತ್ತವೆ. ಬಿಲ್ವದ ದಾರುವು ಗಡುಸಾಗಿದ್ದು, ಬಾಳಿಕೆಯುತವಾಗಿದೆ.

ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ
ಬಿಲ್ವ ಪತ್ರೆ

ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ. ಬಿಲ್ವದ ಹಸಿಕಾಯಿ ಕಫ ಮತ್ತು ವಾತನಿವಾರಕವಾಗಿದೆ. ಹಸಿವನ್ನು ಹೆಚ್ಚಿಸುತ್ತದೆ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಹೊಟ್ಟೆ ನೋವು ಮತ್ತು ಭೇದಿಗೆ ಚಿಕಿತ್ಸೆ ಮಾಡಲು ನೆರವಾಗುತ್ತದೆ. ಪಕ್ವವಾದ ಬಿಲ್ವದ ಹಣ್ಣು ವಾತಪಿತ್ತವನ್ನು ಹೆಚ್ಚಿಸುತ್ತದೆ. ಕಫವನ್ನು ಕಡಿಮೆ ಮಾಡುತ್ತದೆ. ಇದನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟ. ಬಿಲ್ವದ ಎಲೆ ವಾತ ಮತ್ತು ಕಫ ತೊರೆದು ಹಾಕುತ್ತದೆ. ಅಜೀರ್ಣ ಮತ್ತು ಹೊಟ್ಟೆನೋವಿಗಾಗಿ ಮದ್ದಾಗಿ ಬಳಕೆಯಾಗುತ್ತಿದೆ. ತಿರುಳಿನಿಂದ ತೆಗೆದ ತೈಲವು ವಾತನಿವಾರಕವಾಗಿದೆ.

ದೇಹದ ಚರ್ಮದ ದುರ್ಗಂಧವನ್ನು ನಿವಾರಿಸಲು ತಾಜಾ ಬಿಲ್ವಪತ್ರೆ ರಸವನ್ನು ಪ್ರತಿದಿನ ಮೈಗೆ ಚೆನ್ನಾಗಿ ಲೇಪಿಸಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು. ದೇಹದ ಮೇಲೆ ಕುರುಗಳು ಇದ್ದಾಗ ಬಿಲ್ವ ವೃಕ್ಷದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುತ್ತಿರಬೇಕು.

ಎಲೆಗಳಲ್ಲಿ ನೋವು ನಿವಾರಕ, ನಂಜು ನಿವಾರಕ, ಮತ್ತು ಜ್ವರಹರ ಮತ್ತು ಕ್ಯಾನ್ಸರ್‌ ಗುಣಪಡಿಸುವ ಗುಣಗಳಿವೆ. ಎಲೆ ಹೈಪರ್‌ಥೈರಾಡಿಸಮ್‌ನಲ್ಲಿ ಪರಿಣಾಮಕಾರಿಯಾದ ಔಷಧಿಯಾಗಿದೆ.

ತಲೆನೋವು ಸಮಸ್ಯೆ ಇದ್ದಾಗ ಬಿಲ್ವದ ಮರದ ಒಣಬೇರನ್ನು ಅರೆದು ಹಣೆಗೆ ಲೇಪಿಸಬೇಕು.

ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ನಂತರ ಅದರ ತಿರುಳನ್ನು ತೆಗೆದು ನುಣ್ಣಗೆ ಅರೆದು ತಲೆಗೆ ಲೇಪಿಸಿಕೊಡು ಅರ್ಧ ಗಂಟೆಯ ನಂತರ ತೊಳೆಯಬೇಕು. ಇದನ್ನು ದಿನಕ್ಕೊಮ್ಮೆಯಂತೆ ಹದಿನೈದು ದಿನಗಳ ಕಾಲ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ತಲೆ ಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಿಕೊಳ್ಳಬೇಕು. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಅಕಾಲ ನರೆಕೂದಲು ಸಮಸ್ಯೆ ನಿವಾರಣೆಯಾಗುತ್ತದೆ.

ಚರ್ಮದ ದುರ್ಗಂಧವನ್ನು ನಿವಾರಿಸಲು ತಾಜಾ ಬಿಲ್ವಪತ್ರೆ ರಸವನ್ನು ಪ್ರತಿದಿನ ಮೈಗೆ ಲೇಪಿಸಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು.

ನಿದ್ರಾಹೀನತೆಯಿಂದ ಬಳಲುತ್ತಿರುವವರು ಬಿಲ್ವದ ಎಲೆಯನ್ನು ನೀರು ಸೇರಿಸದೆ ಅರೆದು ಹಣೆಗೆ ಲೇಪಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ. ನಿಶ್ಯಕ್ತಿ : ಬಿಲ್ವಪತ್ರೆಯ ರಸವನ್ನು ಪ್ರತಿದಿನ ೨ – ೩ ಚಮಚೆಯ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.ನಿಶ್ಯಕ್ತಿ , ಆಯಾಸದಿಂದ ಬಳಲುತ್ತಿರುವವರು ದಿನದಲ್ಲಿ ಮೂರು ಬಾರಿ ದಶಮೂಲಾರಿಷ್ಟವನ್ನು ಎರಡೆರಡು ಚಮಚೆಯಂತೆ ಸೇವಿಸಬೇಕು.

ಕಣ್ಣಿನಲ್ಲಿ ಉರಿ, ತುರಿಕೆ ಇದ್ದಾಗ ಬಿಲ್ವಪತ್ರೆಯನ್ನು ನುಣ್ಣಗೆ ಅರೆದು ಕಣ್ಣಿನ ಮೇಲೆ ಲೇಪಿಸಿಕೊಳ್ಳಬೇಕು. ಕಣ್ಣಿನ ಸೋಂಕು ಇದ್ದಾಗ ಅಥವಾ ಕಣ್ಣು ಕೆಂಪಾದಾಗ ಮಾಡಬಹುದಾದ ಚಿಕಿತ್ಸೆ ಇದು – ಒಂದು ಹಿಡಿಯ ಬಿಲ್ವದ ಎಳೆಯ ಎಲೆಗಳನ್ನು ಸಂಗ್ರಹಿಸಿ ಮಣ್ಣಿನ ಕುಡಿಕೆಗೆ ಹಾಕಿ ಹುರಿಯಬೇಕು. ಅದು ಸ್ವಲ್ಪ ಬಿಸಿ ಇರುವಾಗಲೇ ಒಂದು ಬಟ್ಟೆಯಲ್ಲಿ ಹಾಕಿ ಕಣ್ಣಿನ ಮೇಲಿಡಬೇಕು. ಸ್ವಲ್ಪ ನೀರಿನಲ್ಲಿ ಬಿಲ್ವದ ಹೂಗಳನ್ನು ನೆನೆಸಿಟ್ಟು ನಂತರ ಶೋಧಿಸಿ ಆ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳುತ್ತಿದ್ದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ.

ಸಮಪ್ರಮಾಣದ ಬಿಲ್ವದ ತಿರುಳು ಮತ್ತು ಎಳ್ಳನ್ನು ಅರೆದು ಸ್ವಲ್ಪ ಬೆಣ್ಣೆ ಮತ್ತು ತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ, ಮಲಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಬಾಯಿಯಲ್ಲಿ ಹುಣ್ಣಾಗಿದ್ದಾಗ ಬಿಲ್ವಪತ್ರೆ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನದಲ್ಲಿ ಒಂದು ಬಾರಿ ಸೇವಿಸಬೇಕು. ಅಜೀ ಸಮಸ್ಯೆಯಿಂದ ಅಥವಾ ಹೊಟ್ಟೆ ಹುಣ್ಣಿನ ಸಮಸ್ಯೆ ಯಿಂದ ವಾಂತಿ ಆಗುತ್ತಿದ್ದರೆ ಎರಡು ಚಮಚೆ ಬಿಲ್ವಪತ್ರೆ ರಸಕ್ಕೆ ಒಂದು ಚಮಚೆ ಜೇನುತುಪ್ಪ ಸೇರಿಸಿ ದಿನದಲ್ಲಿ ೨-೩ ಬಾರಿ ನೆಕ್ಕಬೇಕು. ಬಿಲ್ವ ಫಲದ ಚಿಪ್ಪನ್ನು ಅರೆದು ಜೀನುತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ ವಾಕರಿಕೆ ನಿಲ್ಲುತ್ತದೆ.

ನೆಗಡಿ, ಇದ್ದಾಗ ಬಿಲ್ವಪತ್ರೆ ಎಲೆಯ ರಸವನ್ನು ಸ್ವಲ್ಪ ನೀರಿಗೆ ಬೆರೆಸಿ, ಈ ನೀರನ್ನು ಮೂಗಿಗೆ ಹನಿಸಬೇಕು.

ನೆಗಡಿ, ಕೆಮ್ಮು, ದಮ್ಮು, ಶ್ವಾಸಕೋಶದ ಸಮಸ್ಯೆಗಳಿಗೆ ಉಪಯೋಗವಾಗುತ್ತದೆ. ಕ್ಷಯರೋಗದಿಂದ ಬಳಲುತ್ತಿರುವವರು ೪೦ ದಿನಗಳವರೆಗೆ ಊಟದ ನಂತರ ಬಿಲ್ವದ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಜೀನುತುಪ್ಪ ಸೇರಿಸಿ ತಿನ್ನಬೇಕು. ನೆಗಡಿಯಾದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮುಂಜಾನೆ ಎದ್ದಕೂಡಲೇ ಒಂದು ಬಿಲ್ವದ ಎಲೆಯನ್ನು ೨-೩ ಕಾಳುಮೆಣಸಿನೊಂದಿಗೆ ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು. ಇದನ್ನು ೩೦-೪೦ ದಿನಗಳ ಕಾಲ ಮಾಡಬೇಕು.

ಆಗಾಗ ಹೃದಯದ ಬಡಿತ ತಪ್ಪುವ ಪಾಲ್ಪಿಟೇಶನ್ ಸಮಸ್ಯೆ ಇರುವವರು ಬಿಲ್ವ ಮರದ ಬೇರಿನ ತೊಗಟೆಯ ಕಷಾಯವನ್ನು ಕುಡಿಯುತ್ತಿರಬೇಕು. ಬಿಲ್ವದ ಎಲೆಗಳನ್ನು ಚೆನ್ನಾಗಿ ಒಣಗಿಸಿ ಚೂರ್ಣ ಮಾಡಿ ಸಂಗ್ರಹಿಸಿಡಬೇಕು. ರಕ್ತದ ಅಧಿಕ ಒತ್ತಡ ಇರುವವರು ಅರ್ಧದಿಂದ ಒಂದು ಚಮಚೆಯ ಈ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಸೇರಿಸಿ ಕುದಿಸಿ, ತಣಿಸಿ ದಿನದಲ್ಲಿ ೨-೩ ಬಾರಿ ಕುಡಿಯುತ್ತ್ತಿದ್ದರೆ ಪ್ರಯೋಜನವಾಗುತ್ತದೆ.

ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ
ಬಿಲ್ವ ಪತ್ರೆ

ಭೇದಿ ಮುಂತಾದ ಹೊಟ್ಟೆಯ ಸಂಬಂಧಿ ಸಮಸ್ಯೆಗಳಿದ್ದಾಗ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಬಿಲ್ವದ ಹಣ್ಣನ್ನು ದಾಲ್ಚಿನ್ನಿ ಪುಡಿಯೊಂದಿಗೆ ಕಲೆಸಿ ಸೇವಿಸಬೇಕು. ಸಮಪ್ರಮಾಣದ ಬಿಲ್ವದ ತಿರುಳು ಮತ್ತು ಎಳ್ಳನ್ನು ಅರೆದು ಸ್ವಲ್ಪ ಬೆಣ್ಣೆ ಮತ್ತು ತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ, ಭೇದಿ ಮುಂತಾದ ಮಲಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಭೇದಿ, ಅತಿಸಾರದಿಂದ ಬಳಲುತ್ತಿರುವವರು ಎರಡು ಚಮಚೆಯ ಬಿಲ್ವಪತ್ರೆ ರಸವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ದಿನದಲ್ಲಿ ೩-೪ ಬಾರಿ ಸೇವಿಸಬೇಕು. ಬೇಲದ ಹಣ್ಣಿನ ತಿರುಳನ್ನು ಒಣಗಿಸಿ ಸ್ವಲ್ಪ ಸೋಂಪು ಕಾಳು ಸೇರಿಸಿ ಪುಡಿಮಾಡಿಟ್ಟು ಕೊಳ್ಳ ಬೇಕು. ರಕ್ತಭೇದಿ ಸಮಸ್ಯೆ ಇದ್ದಾಗ ಈ ಚೂರ್ಣವನ್ನು ಒಂದು ಚಮಚೆಯ ತೆಗೆದುಕೊಂಡು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬೇಕು. ಊಟ ಸೇರದಿರುವುದು, ಹಸಿವೆ ಇಲ್ಲದಿರುವುದು ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ನಾಲ್ಕೈದು ಬಿಲ್ವ ಪತ್ರೆ ಎಲೆಯನ್ನು ಪ್ರತಿದಿನ ಮುಂಜಾನೆ ಬೆಳಗ್ಗೆ ಚೆನ್ನಾಗಿ ಅಗಿದು ತಿನ್ನಬೇಕು. ಇದನ್ನು ಮೂರು ದಿನಗಳ ಕಾಲ ಮಾಡಬೇಕು.

ಬೊಜ್ಜಿನ ಸಮಸ್ಯೆ ಇರುವವರು ಬಿಲ್ವ, ಅಗ್ನಿಮಂಥ, ಆನೆಮೊಗ್ಗು, ಶಿವನಿ ಮತ್ತು ಪದರಿ ಈ ಮರಗಳ ಬೇರಿನ ಕಯವನ್ನು ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯುತ್ತಿದ್ದರೆ ಸಮಸ್ಯೆಯ ನಿವಾರಣೆಯಾಗುತ್ತದೆ.

ದೇಹದ ಮೇಲೆ ಗಾಯವಾಗಿ ಅದು ಕೊಳೆಯುವ ಸ್ಥಿತಿ ತಲಪಿದಾಗ (ಗ್ಯಾಂಗ್ರೀನ್ ) ಆ ಜಾಗದಲ್ಲಿ ಬಿಲ್ವಪತ್ರೆಯನ್ನು ಅರೆದು ಪೌಲ್ಟೀಸು ಕಟ್ಟಿದರೆ ಬೇಗ ಗುಣವಾಗುತ್ತದೆ. ಸುಟ್ಟ ಗಾಯದ ಮೇಲೆ ಬಿಲ್ವಪತ್ರೆ ರಸವನ್ನು ಲೇಪಿಸುತ್ತಿದ್ದರೆ ಬೇಗ ಮಾಯುತ್ತದೆ.

ಕಾಲು ಅಥವಾ ದೇಹದ ಬೇರಾವುದೇ ಭಾಗದಲ್ಲಿ ಊತ ಇದ್ದಾಗ ಬಿಲ್ವಪತ್ರೆ ರಸಕ್ಕೆ ಕಾಳುಮೆಣಸು ಪುಡಿ ಸೇರಿಸಿ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಮೈಕೈ ನೋವು ಸಮಸ್ಯೆ ಯಿಂದ ಬಳಲುತ್ತಿರುವವರು ಬಿಲ್ವಪತ್ರೆ ಎಲೆ, ಬೇವಿನ ಎಲೆ ಮತ್ತು ಹರಳು ಗಿಡದ ಎಲೆಗಳನ್ನು ನೀರಿಗೆ ಸೇರಿಸಿ ಕುದಿಸಿ ಆ ನೀರನ್ನು ಸ್ನಾನದ ನೀರಿಗೆ ಮಿಶ್ರ ಮಾಡಿ ಪ್ರತಿ ದಿನ ಸ್ನಾನ ಮಾಡಬೇಕು. ಬಿಲ್ವದ ತಿರುಳಿಗೆ ಸಾಸಿವೆ ಎಣ್ಣೆ ಸೇರಿಸಿ ಕಲೆಸಿ ಬಿಸಿ ಮಾಡಿ ಊತ, ಬಾವು ಇರುವಲ್ಲಿ ಇಟ್ಟರೆ ಪ್ರಯೋಜನವಾಗುತ್ತದೆ.

ಬಿಲ್ವಪತ್ರೆ, ಮಧುನಾಶನಿ, ಬೇವಿನಸೊಪ್ಪು , ನುಗ್ಗೆಸೊಪ್ಪುಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಬೇಕು. ಇದಕ್ಕೆ ಒಣಗಿಸಿದ ಹಾಗಲಕಾಯಿ ಚೂರ್ಣ ಮತ್ತು ಹುರಿದ ಮೆಂತ್ಯದ ಚೂರ್ಣವನ್ನು ಸಮಪ್ರಮಾಣದಲ್ಲಿ ಬೆರೆಸಿ ಇಡಬೇಕು. ಈ ಚೂರ್ಣವನ್ನು ಮಧುಮೇಹ ಸಮಸ್ಯೆ ಇರುವವರು ಒಂದು ಸಲಕ್ಕೆ ಮೂರು ಚಮಚೆಯಂತೆ ದಿನಕ್ಕೆ ಮೂರು ಬಾರಿ ನೀರಿನೊಂದಿಗೆ ಸೇವಿಸುತ್ತಿರಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಅಗಸೆ ಸೊಪ್ಪು , ಬಿಲ್ವ ಪತ್ರೆ ಸೊಪ್ಪು ಮತ್ತು ನಾಗದಾಳಿ ಸೊಪ್ಪನ್ನು ಸಮಪ್ರಮಾಣದಲ್ಲಿ ಅರೆದು ತೆಗೆದ ರಸವನ್ನು ದಿನದಲ್ಲಿ ಎರಡು ಬಾರಿ ಅರ್ಧ ಬಟ್ಟಲಿನಂತೆ ಕುಡಿಯಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಬಿಲ್ವಪತ್ರೆ, ಮಧುನಾಶಿನಿ, ತುಂಬೆ ಎಲೆ , ಬೇವಿನ ಕುಡಿ, ಕರಿಹಾಗಲ ಸೊಪ್ಪು – ಇವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ಚೂರ್ಣಮಾಡಿಡಬೇಕು. ಪ್ರತಿದಿನ ಒಂದು ಚಮಚೆ ಚೂರ್ಣವನ್ನು ಬಿಸಿ ನೀರಿನಲ್ಲಿ ಸೇರಿಸಿ ಕುಡಿಯಬೇಕು. ಇದನ್ನು ಮೂರು ತಿಂಗಳ ಕಾಲ ಮಾಡಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಎರಡು ಚಮಚೆಯ ಬಿಲ್ವಪತ್ರೆ ಎಲೆ, ಅರ್ಧ ಚಮಚೆ ಅರಿಶಿನಪುಡಿ, ಅಳಲೆ-ತಾರೆ-ಬೆಟ್ಟದನೆಲ್ಲಿ ಇವುಗಳ ಚೂರ್ಣ ತಲಾ ಅರ್ಧ ಚಮಚೆ ತೆಗೆದುಕೊಂಡು, ಎರಡು ಬಟ್ಟಲು ನೀರಿನಲ್ಲಿ ರಾತ್ರಿ ನೆನೆಸಿಡಬೇಕು.ಬೆಳಗ್ಗೆ ಈ ಕಷಾಯವನ್ನು ಶೋಧಿಸಿ ಎರಡು ಪಾಲು ಮಾಡಿ ಒಂದು ಪಾಲನ್ನು ಬೆಳಗ್ಗೆ, ಮತ್ತೊಂದನ್ನು ಸಂಜೆ ಕುಡಿಯಬೇಕು. ಇದನ್ನು ೨-೩ ತಿಂಗಳವರೆಗೆ ಮಾಡಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಒಂದು ಹಿಡಿ ಬಿಲ್ವಪತ್ರೆ, ಒಂದು ಹಿಡಿ ಬೇವಿನ ಎಲೆ ಮತ್ತು ಅರ್ಧ ಹಿಡಿ ತುಳಸಿ ಎಲೆ ಇವನ್ನು ನೀರು ಸೇರಿಸದೆ ನುಣ್ಣಗೆ ಅರೆದು ಗುಳಿಗೆಗಳಾಗಿ ಮಾಡಿಡಬೇಕು. ಪ್ರತಿ ದಿನ ಬೆಳಗ್ಗೆ ಒಂದು ಗುಳಿಗೆಯನ್ನು ಸ್ವಲ್ಪ ನೀರಿನೊಡನೆ ಸೇವಿಸುತ್ತಿದ್ದರೆ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ.

ಸಣ್ಣ ಮಕ್ಕಳಲ್ಲಿ ಹಲ್ಲು ಮೂಡುವ ಸಮಯದಲ್ಲಿ ಉಂಟಾಗುವ ಭೇದಿಗಳನ್ನು ತಡೆಗಟ್ಟಲು ಹೀಗೆ ಮಾಡಬೇಕು – ನಾಲ್ಕು ಚಮಚೆಯ ಬಿಲ್ವದ ಹಣ್ಣಿನ ತಿರುಳನ್ನು ಒಂದು ಲೋಟ ನೀರಿಗೆ ಬೆರೆಸಿ ನಿಧಾನವಾಗಿ ಕುದಿಸಬೇಕು. ಅದು ಕಾಲು ಲೋಟವಾದಾಗ ತಣಿಸಿ, ಶೋಧಿಸಿ ಒಂದು ಚಮಚೆ ಜೇನುತುಪ್ಪ ಸೇರಿಸಿ ಮೂರು ಪಾಲು ಮಾಡಿ ಒಂದು ದಿನದಲ್ಲಿ ಕುಡಿಸಬೇಕು. ಬಿಲ್ವಪತ್ರೆಯ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಹುರಿದು ಚೂರ್ಣ ಮಾಡಬೇಕು.ಅರ್ಧ ಚಮಚೆ ಜೇನುತುಪ್ಪದಲ್ಲಿ ಈ ಚೂರ್ಣವನ್ನು ನಾಲ್ಕು ಚಮಚೆ ಕಲೆಸಿ ಮಕ್ಕಳಿಗೆ ಕೊಟ್ಟರೆ ಶೀತ, ಕೆಮ್ಮು, ಗಂಟಲುನೋವು ನಿವಾರಣೆಯಾಗುತ್ತವೆ.

ಯಾವುದೇ ಬಗೆಯ ಜ್ವರವಿದ್ದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಆಗಾಗ ಕಾಡುವ ಜ್ವರದಿಂದ ಬಳಲುತ್ತಿರುವವರು ಬಿಲ್ವದ ತೊಗಟೆಯ ಕಷಾಯವನ್ನು ದಿನದಲ್ಲಿ ಮೂರು ಬಾರಿ ನಾಲ್ಕು ಚಮಚೆಯಂತೆ ಒಂದು ವಾರದವರೆಗೆ ಸೇವಿಸಬೇಕು. ಮಲೇರಿಯಾ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಯವನ್ನು ಮಾಡಿ ಕುಡಿಯುತ್ತಿರಬೇಕು. ಮಧ್ಯಭಾರತದ ಬಸ್ತಾರ್ ನ ಆದಿವಾಸಿಗಳು ಜ್ವರದ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಷಾಯವನ್ನು ಮದ್ದಾಗಿ ಬಳಸುತ್ತಾರೆ. ಸಾಮಾನ್ಯ ಬಗೆಯ ಜ್ವರಗಳಲ್ಲಿ ಬಿಲ್ವದ ಬೇರಿನ ಕಷಾಯವನ್ನು ಕೊತ್ತಂಬರಿ ಪುಡಿಯೊಡನೆ ಸೇವಿಸುತ್ತಿದ್ದರೆ ಪ್ರಯೋಜನವಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಹಸ ಸಿಂಹ ವಿಷ್ಣುವರ್ಧನ್

ಎಡಗೈಯಿಂದಲೇ ತನ್ನ ಗುರುತು ತೋರಿಸಿಕೊಟ್ಟವರು ಸಾಹಸ ಸಿಂಹ ವಿಷ್ಣುವರ್ಧನ್

ಬಾದಮಿ ಚಾಲುಕ್ಯರು

ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿದ ವಂಶ ಬಾದಮಿ ಚಾಲುಕ್ಯರು