ಉಪ್ಪಿಮುಳ್ಳು
ಈ ಗಿಡವು ಕಳ್ಳಿ ಕುರುಚಲು ಸಸ್ಯಾವರಣದಲ್ಲಿ, ಊರಹೊರವಲಯದಲ್ಲಿ ಮತ್ತು ಪಾಳುಕೋಟೆಯ ಗೋಡೆಯ ಮೇಲೆ ಪೊದೆಯಂತೆ ಬೆಳೆಯುತ್ತದೆ. ಕೆಲವು ಕಡೆಗಳಲ್ಲಿ ಇದನ್ನು ಬೇಲಿಗಿಡವಾಗಿಯೂ ಸಹ ಬೆಳೆಸುತ್ತಾರೆ. ಗಿಡದ ಪ್ರತಿ ಗಿಣ್ಣಿನಲ್ಲಿ ೪ ಮುಳ್ಳುಗಳಿರುತ್ತವೆ ಮತ್ತು ಅವುಗಳ ಉದ್ದ ಸುಮಾರು ೩ಸೆ.ಮೀ.ನಷ್ಟಿರುತ್ತದೆ. ಅಂಡಾಕಾರದ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಮಾಸಲು ಬಿಳುಪಿನ ಅತಿ ಸಣ್ಣ ಹೂಗಳು ಸಾಮಾನ್ಯವಾಗಿ ಎಲೆಯ ಕಂಕುಳಿನಲ್ಲಿರುತ್ತವೆ. ಬಲಿತ ಹಣ್ಣುಗಳು ಬಿಳಿ ಮಣಿಗಳಂತಿದ್ದು ನೋಡಲು ಆಕರ್ಷಕವಾಗಿರುತ್ತವೆ. ಈ ಹಣ್ಣುಗಳನ್ನು ತಿನ್ನುತ್ತಾರೆ.
ಉಪಯೋಗಗಳು
*ಬೇರಿನ ರಸ ಅಥವಾ ಚೂರ್ಣವನ್ನು ಜೇನುತುಪ್ಪದೊಡನೆ ಕಲಸಿ ಇಲಿ ಕಡಿದವರಿಗೆ ಕುಡಿಸುತ್ತಾರೆ.
*ಬೇರನ್ನು ಅರೆದು ಅಕ್ಕಿ ತೊಳೆದ ನೀರಿನೊಡನೆ ಕುಡಿಸುವುದರಿಂದ ಅಧಿಕ ರಜಸ್ರಾವ ಕಡಿಮೆಯಾಗುತ್ತದೆ.
*ವಿಷ ಸೇವಿಸಿದಾಗ ವಾಂತಿ ಮಾಡಿಸಬೇಕಾಗಿ ಬಂದಾಗ ಬೇರನ್ನು ಅರೆದು ಬಿಸಿ ನೀರಿನೊಡನೆ ಕುಡಿಸುತ್ತಾರೆ.
ಉಪ್ಪಿಮುಳ್ಳುಗಿಡದ ಬೇರು ಅಥವಾ ಕಾಂಡದ ತೊಗಟೆಯನ್ನು ಅರೆದು ಉಗುರು ಸುತ್ತಾಗಿರುವ ಬೆರಳಿಗೆ ಹಾಕಬೇಕು.
*ಬೇರು, ಎಲೆ ಮತ್ತು ತೊಗಟೆಯ ಕಷಾಯಕ್ಕೆ ಚೂರ್ಣಿಸಿದ ಬಜೆ, ಓಂಕಾಳು ಮತ್ತು ಉಪ್ಪು ಸೇರಿಸಿ ಕುಡಿಯುವುದರಿಂದ ಭೇದಿ ವಾಸಿಯಾಗುತ್ತದೆ.
*ಎಲೆಯ ಚೂರ್ಣ ಸೇವನೆಯಿಂದ ವಾತ ರೋಗಗಳು ವಾಸಿಯಾಗುತ್ತವೆ.
*ಎಲೆಯ ಕಷಾಯ ಅಥವಾ ಚೂರ್ಣ ಸೇವನೆಯಿಂದ ಕೆಮ್ಮು ಕಡಿಮೆಯಾಗುತ್ತದೆ.
*ಉಪ್ಪಿಮುಳ್ಳು ಗಿಡದ ಸ್ವರಸ ಕುಡಿಸುವುದರಿಂದ ಪಾದರಸ ಮತ್ತು ಬಿಳಿಪಾಷಾಣ ಸೇವಿಸಿದ ನಂಜು ಪರಿಹಾರವಾಗುತ್ತದೆ.
*ಉಪ್ಪಿಮುಳ್ಳಿನ ಸೊಪ್ಪನ್ನು ಸದಾಕಾಲ ತರಕಾರಿಯಂತೆ ಬಳಸುವುದರಿಂದ ಮೂಳೆಗೆ ಸಂಬಂಧಿಸಿದ ರೋಗಗಳು ಬರುವುದಿಲ್ಲ.
*ದದ್ದು-ಗಂಧೆ ಎದ್ದವರಿಗೆ ಬೆಳಿಗ್ಗೆ ರಾತ್ರಿ ಊಟದೊಡನೆ ಸೊಪ್ಪನ್ನು ಬೇಯಿಸಿ ತಿನ್ನಿಸಬೇಕು.
ಪಶುರೋಗ ಚಿಕಿತ್ಸೆಯಲ್ಲಿ
ಉಪ್ಪಿಮುಳ್ಳಿನ ಸೊಪ್ಪು ಮುಕ್ಕಾಲು ತೊಲ, ಬಾಗೆಮರದ ಚಕ್ಕೆ ಮುಕ್ಕಾಲು ತೊಲ, ಕಾಡುಮೆಣಸಿನ ಸೊಪ್ಪು ಮುಕ್ಕಾಲು ತೊಲ, ಕರಿಮೆಣಸು ಎರಡು ತೊಲ, ಬೆಳ್ಳುಳ್ಳಿ ಒಂದು ತೊಲ ಇವುಗಳನ್ನು ಅರೆದು ಬಿಸಿನೀರಿನಲ್ಲಿ ದಿವಸಕ್ಕೊಮ್ಮೆ ಕುಡಿಸುವುದರಿಂದ ನರಡಿ (ಗುಲ್ಮರೋಗ) ವಾಸಿಯಾಗುತ್ತದೆ.
ಹೊನಗೊನ್ನೆ ಸೊಪ್ಪು
ಹೊನಗೊನ್ನೆ ಸೊಪ್ಪು ಒಂದು ಔಷಧೀಯ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಆಲ್ಟರ್ ನ್ಯಾಂಥೀರ ಸೆಸ್ಸಿಲಿಸ್. ಇದು ಅಮರಾಂಥೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.
ಈ ಗಿಡವು ರಾಜ್ಯದ ಉಷ್ಣಪ್ರದೆಶಗಳಲ್ಲಿನ ಒದ್ದೆಭೂಮಿಯಲ್ಲಿ, ಗದ್ದೆ ಬಯಲಿನಲ್ಲಿ ಮತ್ತು ಕೆರೆಯಂಗಳದಲ್ಲಿ ಹುಲುಸಾಗಿ ಬೆಳೆಯುತ್ತದೆ. ಇದನ್ನು ಸೊಪ್ಪು ತರಕಾರಿಯಂತೆ ಕೆಲವು ಕಡೆ ಬಳಸುತ್ತಾರೆ. ಗಿಡವು ಕವಲೊಡೇದು ನೆಲದ ಮೇಲೆ ಹರಡಿ ಬೆಳಯುತ್ತದೆ. ನೆಲಕ್ಕೆ ತಾಗುವ ಗೆಣ್ಣೀನಲ್ಲಿ ಬೇರುಗಳು ಮೊಳೆತು ಕಾಂಡವನ್ನು ನೆಲಕ್ಕೆ ಭದ್ರಪಡಿಸುತ್ತದೆ. ಕಾಂಡದ ಮೇಲೆ ರಸಭರಿತವಾದ, ನೀಳಾವಾದ, ಸರಳವಾದ ಮತ್ತು ಹೊಳಪಾದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತದೆ. ಎಲೆಯ ಕಂಕುಳಲ್ಲಿ ಅಣ್ಣೇಸೊಪ್ಪಿನ ಹೂಗೊಂಚಲಿನಂತಿರುತ್ತದೆ.
ಉಪಯೋಗಗಳು
*ಹೊನಗೊನ್ನೆ ಬೇರನ್ನು ೨ ತೊಲದಷ್ಟು ತೆಗೆದುಕೊಂಡು ೧/೪ ಸೇರು ಆಡಿನ ಹಾಲಿನಲ್ಲಿ ಅರೆದು ಸೋಸಿ ದಿವಸಕ್ಕೂಮ್ಮೆ ಕುಡಿಸುವುದರಿಂದ ಮೂತ್ರವಿಸರ್ಜನೆ ಸಲೀಸಾಗುವುದು.
*ಹೊನಗೊನ್ನೆ ಸೊಪ್ಪಿನ ಪಲ್ಯ ಮಾಡಿ ತಿನ್ನುವುದರಿಂದ, ಜ್ವರ ಬಿಟ್ಟ ನಂತರ ರುಚಿಕೆಟ್ಟ ಬಾಯಿಗೆ ರುಚಿಯುಂಟು ಮಾಡುತ್ತದೆ. ೮ ದಿನ ಬಿಡದೆ ತಿಂದರೆ ಒಳ್ಳೆಯದು.
*ಹೊನಗೊನ್ನೆ ಸೊಪ್ಪಿನ ರಸ ೨ ತೊಲ, ಮೂಲಂಗಿ ಸೊಪ್ಪಿನ ರಸ ೨ ತೊಲ ಮಿಶ್ರ ಮಾಡಿ ಸ್ವಲ್ಪ ಸೈಂಧಲವಣ ಸೇರಿಸಿ ಕುಡಿಯುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.
*ಹೊನಗೊನ್ನೆ ಸೊಪ್ಪಿನ ರಸದಲ್ಲಿ ಉತ್ತರಾಣಿ ಬೇರನ್ನು ತೇಯ್ದು ಕಣ್ಣುಗಳಿಗೆ ಹಚ್ಚುವುದರಿಂದ ಕಣ್ಣಿನ ಪೊರೆ ನಿವಾರಣೆಯಾಗುತ್ತದೆ.
*ಹೊನಗೊನ್ನೆ ಗಿಡದ ಎಲೆ ೨ ಹಿಡಿಯಷ್ಟು ತೆಗೆದುಕೊಂಡು ಅದಕ್ಕೆ ಅವರೆಕಾಳು ಗಾತ್ರದ ಆರತಿಕರ್ಪೂರ ಸೇರಿಸಿ ನಯವಾಗಿ ಅರೆದು ಮುಲಾಮಿನಂತೆ ಮಾಡಿಕೊಂಡು ಎಲ್ಲಾ ಬಗೆಯ ಗಾಯಗಳಿಗೆ ಲೇಪನವಾಗಿ ಬಳಸಬಹುದು.
*ಹೊನಗೊನ್ನೆ ಬೇರಿನ ರಸ ೧ ತೊಲದಷ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಲ್ಲ ತುಪ್ಪ ಸೇರಿಸಿ, ಸ್ತೀಯರು ಕುಡಿಯುವುದರಿಂದ ರಕ್ತಪ್ರದರ ಗುಣವಾಗುತ್ತದೆ. ಇದನ್ನು ದಿವಸಕ್ಕೊಮ್ಮೆಯಂತೆ ೩ ದಿವಸ ಕುಡಿಯಬೇಕು.
*ಹೊನಗೊನ್ನೆ ಬೇರನ್ನು ಆಡಿನ ಹಾಲಿನಲ್ಲಿ ಅರೆದು ಕುಡಿಯುವುದರಿಂದ ಬಹುಮೂತ್ರ ರೋಗ ವಾಸಿಯಾಗುತ್ತದೆ. ಮಕ್ಕಳಲ್ಲಿ ಕಾಣಿಸುವ ಉರಿಮೂತ್ರಕ್ಕೂ ಇದು ಒಳ್ಳೆಯ ಮದ್ದು.
*ಹೊನಗೂನ್ನೆ ಸೊಪ್ಪಿನ ಸಾರು ಅಥವಾ ಪಲ್ಯ ಮಾಡಿ ಸೇವಿಸುವುದರಿಂದ ಕಣ್ಣುಗಳ ವ್ಯಾಧಿಗಳು ಬರುವುದಿಲ್ಲ.
*ಹೊನಗೊನ್ನೆ ಗಿಡವನ್ನು ಬೇರು ಸಹಿತ ಕಿತ್ತು ೧ ಸೇರಿನಷ್ಟು ರಸಮಾಡಿಕೂಂಡು ಅದಕ್ಕೆ ೧ ಪಾವು ಎಳ್ಳೆಣ್ಣೆ ಹಾಕಿ ಕಾಯಿಸಿ ರಸವೆಲ್ಲ ಇಂಗಿದ ಮೇಲೆ ಇಳಿಸಿಕೂಂಡು ಎಣ್ಣೆಯನ್ನು ಶೋಧಿಸಿ ಇಟ್ಟುಕೂಳ್ಳಬೇಕು. ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಮೆದುಳು ಮತ್ತು ಕಣ್ಣುಗಳ ಉಷ್ಣತೆಯು ಕಡಿಮೆಯಾಗಿ ಬಲ ಮತ್ತು ತೇಜಸ್ಸು ಹೆಚ್ಚಾಗುತ್ತದೆ. ಈ ಎಣ್ಣೆಯನ್ನು ಬೆಂದ ಗಾಯಗಳ ಮೇಲೆ ಕೂಡ ಉಪಯೋಗಿಸಬಹುದು.
*ಹೊನಗೂನ್ನೆ ಸೊಪ್ಪಿನ ರಸವನ್ನು ಒಂದು ಹೆಂಚಿಗೆ ಹಲವು ಸಲ ಸವರಿ ಒಣಗಿಸಿಟ್ಟುಕೊಳ್ಳುವುದು. ಅದರ ಮೇಲೆ ಹಸುವಿನ ತುಪ್ಪ ಹಾಕಿ ಉರಿಸಿದ ದೀಪದಿಂದ ಬರುವ ಕಾಡಿಗೆಯನ್ನು ರಸ ಲೇಪಿಸಿ ಆಗಲೇ ಒಣಗಿಸಿಟ್ಟುಕೂಂಡಿದ್ದ ಹೆಂಚಿನ ಮೇಲೆ ಶೇಖರಿಸಿಕೂಂಡು ಆ ಕಾಡಿಗೆಯನ್ನು ಹಸುವಿನ ತುಪ್ಪದಲ್ಲಿಯೇ ಕಲಸಿ, ಕಾಡಿಗೆಯಾಗಿ ಉಪಯೋಗಿಸುವುದರಿಂದ ಕಣ್ಣುಗಳು ಆರೋಗ್ಯಪೂರ್ಣವಾಗಿರುತ್ತವೆ.
ಧನ್ಯವಾದಗಳು.
GIPHY App Key not set. Please check settings