in

ಕಾರಿಂಜ ಕ್ಷೇತ್ರ

ಕಾರಿಂಜ ಕ್ಷೇತ್ರ
ಕಾರಿಂಜ ಕ್ಷೇತ್ರ

ಕಾರಿಂಜ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದಲ್ಲಿದೆ. ಮಂಗಳೂರಿನಿಂದ ೩೫ ಕಿ.ಮೀ. ಹಾಗೂ ಬಂಟ್ವಾಳದಿಂದ ೧೪ ಕಿ.ಮೀ. ಬಂಟ್ವಾಳದಿಂದ ಧರ್ಮಸ್ಥಳ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ೧೦ ಕಿ.ಮೀ. ದೂರದಲ್ಲಿ ಸಿಗುವ ‘ವಗ್ಗ’ ಎಂಬಲ್ಲಿ ಕಾರಿಂಜ ಕ್ರಾಸ್ ಸಿಗುವುದು. ಬಲಕ್ಕೆ ಕಾರಿಂಜ ದ್ವಾರವು ಸಿಗುತ್ತದೆ. (ಬೆಂಗಳೂರಿಂದ ಬರುವವರು—>ಧರ್ಮಸ್ಥಳ—>ಉಜಿರೆ–>ಬೆಳ್ತಂಗಡಿ–>ಗುರುವಾಯನಕೆರೆ–>ಅಲ್ಲಿಂದ ಬಿಸಿರೋಡಿಗೆ ಹೋಗುವ ಮುನ್ನ ವಗ್ಗ ಸಿಗುವುದು.) ಎಡಕ್ಕೆ ಸ್ವಲ್ಪ ದೂರದಲ್ಲಿದೆ ಕಾರಿಂಜ ಪ್ರವೇಶದ್ವಾರ. ಇಲ್ಲಿಂದ ೪ ಕಿ.ಮೀ. ಕೊಡ್ಯಮಲೆ ರಕ್ಷಿತಾರಣ್ಯದ ನಡುವಿನ ಡಾಂಬರು ರಸ್ತೆಯಲ್ಲಿ ಸಾಗಿದರೆ ಕಾರಿಂಜ ಬೆಟ್ಟವು ಸಿಗುವುದು.

ಕಾರಿಂಜ ಕ್ಷೇತ್ರದ ವಿಶೇಷತೆ : ಕಾರಿಂಜ ಬೆಟ್ಟವು ಸಮುದ್ರ ಮಟ್ಟದಿಂದ ೧೫೦೦ ಅಡಿ ಎತ್ತರದಲ್ಲಿದೆ. ಬಹಳ ಸುಂದರ ಸ್ಥಳ ಕಾರಿಂಜೇಶ್ವರ ದೇವಸ್ಥಾನ. ಬೆಟ್ಟವು ಬೃಹತ್ ಬಂಡೆಗಳಿಂದ ಮಾಡಲ್ಪಟ್ಟಿದು ಕಪಿಗಳಿಗೆ ಆಶ್ರಯವಾಗಿದೆ. ದೂರದಿಂದ ವೀಕ್ಷಿಸಿದಾಗ ಏಕಶಿಲಾ ಬೆಟ್ಟದಂತೆ ಭಾಸವಾಗುತ್ತದೆ. ಶಿವನಿಗೂ, ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ.

ಕಾರಿಂಜ ಕ್ಷೇತ್ರ
ಕ್ಷೇತ್ರದ ಕೆರೆ

ಗುಡ್ಡದ ಕೆಳಗಿನಿಂದ ಮೇಲಿನ ಶಿವ ದೇವಸ್ಥಾನ ತನಕ ಸುಮಾರು ೫೦೦ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ದರ್ಶನ ಮಾಡುವುದು ದೈವಭಕ್ತರಿಗೆ ಹಾಗೂ ಏಕದಿನ ಪಿಕ್ನಿಕ್ ಇಟ್ಟುಕೊಂಡವರಿಗೆ ಸೂಕ್ತ ಆಯ್ಕೆ. ಮೆಟ್ಟಲುಗಳಲ್ಲದೇ ಇತ್ತೀಚೆಗೆ ಕಾರಿಂಜ ಬೆಟ್ಟದ ಅರ್ಧದವರೆಗೆ, ಅಂದರೆ ಪಾರ್ವತಿ ದೇವಸ್ಥಾನ ತನಕ ಉತ್ತಮ ಡಾಂಬರು ರಸ್ತೆ ಕೂಡಾ ನಿರ್ಮಾಣವಾಗಿದೆ. ಧಾರ್ಮಿಕವಾಗಿ ನಾಲ್ಕು ಯುಗಗಳಲ್ಲಿ ವಿವಿಧ ಹೆಸರುಗಳಿಂದ ಅಸ್ತಿತ್ವದಲ್ಲಿದ್ದು ಭೂ ಕೈಲಾಸ ಎಂಬ ಪ್ರತೀತಿಯನ್ನು ಹೊಂದಿದೆ. ಈ ಕ್ಷೇತ್ರವನ್ನು ಕೃತ ಯುಗದಲ್ಲಿ ರೌದ್ರಗಿರಿ, ತ್ರೇತಾ ಯುಗದಲ್ಲಿ ಗಜೇಂದ್ರಗಿರಿ, ದ್ವಾಪರದಲ್ಲಿ ಭೀಮಶೈಲವೆಂದು ಕರೆಯುತ್ತಿದ್ದರೆಂಬ ಐತಿಹ್ಯವಿದೆ. ಇಡೀ ಬೆಟ್ಟ ಪ್ರದೇಶ ಸುಮಾರು ೨೫ ಎಕರೆ ವ್ಯಾಪಿಸಿದೆ. ಇಡೀ ಕ್ಷೇತ್ರವನ್ನು ಕೊಡ್ಯಮಲೆಯ ದಟ್ಟ ಅರಣ್ಯ ಆವರಿಸಿಕೊಂಡಿದೆ. ಮೊದಲು ಬೆಟ್ಟದ ಬುಡದಲ್ಲಿರುವ ಗದೆಯ ಆಕಾರದ ವಿಶಾಲ ’ಗದಾತೀರ್ಥ’ ಕಾಣಸಿಗುತ್ತದೆ. ಶುದ್ಧ ನೀರಿನ ಕೊಳವು ಸುಮಾರು ೨೩೭ ಮೀ. ಉದ್ದ ೫೫ ಮೀ. ಅಗಲವಿದೆ. ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತಲು ಶುರು ಮಾಡಬಹುದು. ಇದು ದೊಡ್ಡಗಾತ್ರದ ಮೀನುಗಳಿಗೆ ಆಶ್ರಯವನ್ನು ಕೊಟ್ಟಿದೆ. ಕೆರೆಯಪಕ್ಕದಲ್ಲಿ ವಿಶಾಲವಾದ ಅಶ್ವತ್ತವೃಕ್ಷ; ಅಲ್ಲೇ ಬಲಕ್ಕೆ ಹುಲ್ಲುಹಾಸಿದ ಹರ ಮತ್ತು ಕಾಡು ಮುಚ್ಚಿಹೋದ ಪುರಾತನ ಗುಹೆಯೊಂದಿದೆ.

ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ, ಸಾಗಿದರೆ ಪಾರ್ವತಿ ಗುಡಿ ಸಿಗುತ್ತದೆ. ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿರುವ ಗದಾತೀರ್ಥ, ಪಾರ್ವತಿ ಕ್ಷೇತ್ರದ ಸನಿಹ ಏಕಶಿಲಾ ಗಣಪತಿ ಕ್ಷೇತ್ರದ ಎದುರಿಗಿ ರುವ ಉಗ್ರಾಣಿ ಗುಹೆಗಳು, ಉಕ್ಕುಡದ ಬಾಗಿಲು, ಉಂಗುಷ್ಟ ಮತ್ತು ಮೊಣಕಾಲು ತೀರ್ಥ, ಮಹಾಭಾರತದ ಅರ್ಜುನ ಹಂದಿಗೆ ಬಾಣಬಿಟ್ಟು ಹೋದ ಲಂಬರೇಖೆ ನೋಡಲೇಬೇಕಾದ ಪ್ರಾಕೃತಿಕ ವಿಸ್ಮಯಗಳು. ನಡುವೆ ವಿನಾಯಕ ಗುಡಿಯನ್ನೂ ಹಾಗೂ ಸಣ್ಣಪುಟ್ಟ ತೀರ್ಥಗಳನ್ನು ಕಾಣಬಹುದು. ನಡು ನಡುವೆ, ಕಾಡಿನಿಂದ ಬರುವ ವಾನರ ಸೇನೆಯೂ ಸ್ವಾಗತಿಸುತ್ತದೆ.ಪಾರ್ವತಿ ದರ್ಶನದ ನಂತರ ತೀರಾ ಕಡಿದಾದ ಸುಸಜ್ಜಿತ ೧೪೨ ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ’ಉಕ್ಕಡದ ಬಾಗಿಲು’ ಕಾಣಸಿಗುತ್ತದೆ. ಇದು ಕಲ್ಲಿನಿಂದ ಮಾಡಿದ ದ್ವಾರ. ಅಲ್ಲಿಂದ ಮುಂದಕ್ಕೆ ಬಂಡೆ ಹಾಗೂ ಕುರುಚಲು ಮರ-ಗಿಡಗಳ ನಡುವೆ ೧೧೮ ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಬೆಟ್ಟದ ತುದಿಯಲ್ಲಿದೆ ಶಿಲಾಮಯ ಶಿವ ದೇವಸ್ಥಾನ. ಅದಕ್ಕೂ ಮೊದಲು ಮೆಟ್ಟಿಲುಗಳ ಪಕ್ಕ ಉಂಗುಷ್ಟ ತೀರ್ಥ, ಜಾನು ತೀರ್ಥ ಸಿಗುತ್ತದೆ. ಈ ಪುಟ್ಟ ಕೆರೆಗಳನ್ನು ಹಾಗೂ ಕೆಳಗಿನ ಗದಾತೀರ್ಥವನ್ನು ಮಹಾಭಾರತ ಕಾಲದಲ್ಲಿ ಭೀಮಸೇನ ನಿರ್ಮಿಸಿದ ಎಂಬ ನಂಬಿಕೆ. ವರ್ಷದ ಎಲ್ಲಾ ದಿನ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ವಿಶೇಷ.

ಕಾರಿಂಜ ಕ್ಷೇತ್ರ
ಕ್ಷೇತ್ರಕ್ಕೆ ಹೋಗುವ ಮೆಟ್ಟಿಲುಗಳು

ದೇವಳ ಪಕ್ಕದಲ್ಲಿರುವ ’ಹಂದಿಕೆರೆ’ಯೂ ಅರ್ಜುನನಿಂದಾಗಿ ಉಂಟಾಯಿತು ಎಂಬ ಕತೆಯಿದೆ. ಬೆಟ್ಟ ವಿಶೇಷಗಳು ಬೆಟ್ಟದ ತುದಿಯ ಶಿವ ದೇವಸ್ಥಾನದಿಂದ ನಾಲ್ಲೂ ದಿಕ್ಕಿನಲ್ಲಿ ಹಚ್ಚ ಹಸಿರು ದೃಶ್ಯ ವೈಭವ. ಇಲ್ಲಿಂದ ಕೆಳಗಿನ ಬೃಹತ್ ಶಿಲಾಬೆಟ್ಟದತ್ತ ಕೂಗಿಕೊಂಡರೆ ಸ್ಪಷ್ಟ ಪ್ರತಿಧ್ವನಿ ನೀಡುವ ಪ್ರತಿಧ್ವನಿ ಕಲ್ಲು ಇದೆ. ಸತ್ಯ ಪ್ರಮಾಣ ಮಾಡುತ್ತಿದ್ದ ಸೀತಾದೇವಿ ಪ್ರಮಾಣ ಕಲ್ಲು ಇದೆ. ವಾನರ ಸೇನೆಗೆ ನಿತ್ಯ ಅನ ನೈವೇದ್ಯ ನೀಡುವುದು ಇನೊಂದು ವಿಶೇಷ. ಇಲ್ಲಿ ಒಂದು ಭಾರೀ ಗಾತ್ರದ ಮಂಗ (ಕಾರಿಂಜ ದಡ್ಡ) ಇತ್ತಂತೆ.ದೇವರ ಪೂಜೆ ಆದ ಮೇಲೆ ದೇವರ ಪ್ರಸಾದವನ್ನು ಒಂದು ದೊಡ್ಡ ಪಾದೆ ಕಲ್ಲಿನ ಮೇಲೆ ಈ ಮಂಗ ಹಾಗೂ ಉಳಿದ ಮಂಗಗಳಿಗಾಗಿ ಹಾಕುತ್ತಿದ್ದರು. (ಈಗಲೂ ಕಾರಿಂಜ ದಡ್ಡ ಇಲ್ಲದಿದ್ದರೂ ಮಂಗಗಳಿಗೆ ಪ್ರಸಾದ ಹಾಕುವುದನ್ನು ಮುಂದುವರೆಸಿದ್ದಾರೆ) ಅನ್ನ ಬಿಸಿ ಇದ್ದರೆ ಈ ಕಾರಿಂಜದಡ್ಡ ಸಮೀಪ ಇದ್ದ ಮಂಗವನ್ನೇ ಹಿಡಿದು ಅನ್ನವನ್ನು ಕಲಸುತ್ತಿತ್ತಂತೆ. ನಿಜವೋ ಸುಳ್ಳೋ ಗೊತ್ತಿಲ್ಲ. ದೇವಸ್ಥಾನದ ಸುತ್ತಮುತ್ತ ಚಾರಣ ಕೈಗೊಳ್ಳಬಹುದಾದ ಸಾಕಷ್ಟು ತಾಣಗಳಿವೆ.

ಶಿವರಾತ್ರಿ ಇಲ್ಲಿನ ಪ್ರಧಾನ ಉತ್ಸವ. ನಾಲ್ಕು ದಿನ ನಡೆಯುತ್ತದೆ. ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ-ಪಾರ್ವತಿಯರ ಭೇಟಿ ನಡೆಯುತ್ತದೆ. (ಪೌರಾಣಿಕ ಕಥೆಯ ಪ್ರಕಾರ ಶಿವನು ಪಾರ್ವತಿಯ ಸಂಗ ಬಯಸಿ ಮೇಲಿನ ಬೆಟ್ಟದಿಂದ ಬಹಳ ಆತುರದಿಂದ ಇಳಿದು ಬರುತ್ತಾನೆ. ಆದರೆ ಇಲ್ಲಿ ಬಂದು ತಲಪಿದಾಗ ಪಾರ್ವತಿಯು ರಜಸ್ವಲೆಯಾಗಿರುವುದು ತಿಳಿದು, ಅತೀ ವೇಗದಲ್ಲಿ ಆ ಕಡಿದಾದ ಬೆಟ್ಟವನ್ನು ಏರಿ ತನ್ನ ಸ್ಥಾನವನ್ನು ಸೇರುತ್ತಾನೆ. ಇದನ್ನು ಈಗಲೂ ಉತ್ಸವದ ಸಮಯದಲ್ಲಿ ಅರ್ಚಕರು ದೇವರ ವಿಗ್ರಹವನ್ನು ತಲೆಯಲ್ಲಿ ಹೊತ್ತುಕೊಂಡು ಕಡಿದಾದ ಬೆಟ್ಟವನ್ನು ಓಡಿಕೊಂಡೇ ಹೋಗುವುದು ನಡೆದುಕೊಂಡು ಬಂದಿದೆ.) ಆಟಿ ಅಮವಾಸ್ಯೆ, ಶ್ರಾವಣ

ಅಮವಾಸ್ಯೆಯೂ ವಿಶೇಷ : ತುಳು ಪರಂಪರೆಯ ಆಷಾಢ (ಆಟಿ) ಅಮವಾಸ್ಯೆ ಮತ್ತು ಸೋಣ (ಶ್ರಾವಣ) ಅಮವಾಸ್ಯೆಯಂದು ಇಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಮುಂಜಾನೆಯೇ ಅಸಂಖ್ಯಾತ ಭಕ್ತರು ಜಿಲ್ಲೆಯ ನಾನಾಕಡೆಗಳಿಂದ ಬಂದು ದೇವರ ಸೇವೆಯನ್ನು ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ದೇವಸ್ಥಾನಗಳಲ್ಲಿ ಇದೊಂದು. ಇನ್ನೊಂದು ನರಹರಿ ಬೆಟ್ಟದ ಸದಾಶಿವ ದೇವಸ್ಥಾನ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಒಣ ಚರ್ಮಕ್ಕೆ ಸುಲಭ ಸಲಹೆಗಳು

ಒಣ ಚರ್ಮಕ್ಕೆ ಸುಲಭ ಸಲಹೆಗಳು

ಜಾರಂದಾಯ

ಜಾರಂದಾಯ