ಭೂತಾರಾಧನೆಯ ಪರಿಕಲ್ಪನೆ, ಭೂತಾರಾಧನೆಯನ್ನು ದೈವಾರಾಧನೆಯೆಂದು ಕರೆಯುತ್ತಾರೆ. ಭೂತಾರಾಧನೆ ಎಂಬುದು ತುಳುನಾಡಿನ ರಾಜಕೀಯ ಆಡಳಿತ ವ್ಯವಸ್ಥೆಯ ಐತಿಹಾಸಿಕ ಸಂಬಂಧವನ್ನು ಹೊಂದಿದ್ದು, ಅದು ತುಳು ಜನಪದರ ಸಾಂಸ್ಕೃತಿಕ ಬದುಕು. ಜನಪದರಲ್ಲಿ ಆರಾಧನೆಯನ್ನು ನಡೆಸುವವರು ಮತ್ತು ದೈವವನ್ನು ಕಟ್ಟುವವರು ಎಂಬ ಎರಡು ವರ್ಗವನ್ನು ಕಾಣಬಹುದು. ನಡೆಸುವವರು ಭೂತ ಸ್ಥಾನಕ್ಕೆ ಸಂಬಂಧಿಸಿದ, ಜಾಗಕ್ಕೆ ಸಂಬಂಧಿಸಿದ ಅಧಿಕಾರವುಳ್ಳವರು. ಅವರು ಮನೆಯ/ಗುತ್ತಿನ ಯಜಮಾನ, ಊರ/ಗ್ರಾಮದ ಮುಕ್ತೇಸರ ಅಥವಾ ಸೀಮೆಯ ಅರಸರಾಗಿರುತ್ತಾರೆ. ನಮ್ಮ ಸಾಂಸ್ಕøತಿಕ ಲೋಕದಲ್ಲಿ ಪರವ, ಪಂಬದ, ಪಾಣಾರ ನಲಿಕೆಯೆಂದು ಕರೆವ ತುಳುನಾಡಿನಾದ್ಯಂತ ಪ್ರಚಲಿತದಲ್ಲಿರುವ ಕೆಳವರ್ಗದವರು ಆರಾಧನೆಯನ್ನು ದೈವವನ್ನು ಕಟ್ಟುವವರು ಹಾಗೂ ಭೂತ ಮತ್ತು ಯಜಮಾನರ ನಡುವೆ ಸಂಪರ್ಕ ಸೃಷ್ಟಿಸುವ ಭೂತ ಕಟ್ಟುವವರು. ಹೀಗೆ ನಡೆಸುವವರು:ಯಜಮಾನ, ಭೂತ(ದೈವಾರಾಧನೆಯಲ್ಲಿ ಒಳಗೊಳ್ಳುವ ಯಾವುದೇ ಭೂತ)- ದೈವವನ್ನು ಕಟ್ಟುವವರು: ಪರವ, ಪಂಬದ, ಪಾಣಾರ ನಲಿಕೆ/ಅಜಲಾಯ. ಈ ತ್ರಿವಳಿ ಸಂಗಮದಲ್ಲಿ ನಡೆಯುವ ಒಂದು ಸಾಂಸ್ಕøತಿಕ ಅಭಿವ್ಯಕ್ತಿಯೇ ದೈವಾರಾಧನೆ.
ದೈವಾರಾಧನೆಯನ್ನು ಜಾಗೆ, ಊರು, ಮಾಗಣೆ ಹೀಗೆ ಆಯಾ ಸಂದರ್ಭಗಳಲ್ಲಿ ನಡೆವ ಭೂತಗಳಿಗೆ ಅನುಸರಿಸಿ ವಿಂಗಡಿಸಿಕೊಳ್ಳಬಹುದು. ನಡೆಸುವವರ ಜಾತಿಗೆ ಅನುಸಾರವಾಗಿಯೂ ಭೂತಗಳ ಆರಾಧನೆ, ಆಚರಣೆ, ಕಾರಣಿಕ ಮತ್ತು ಪ್ರಸರಣ ವ್ಯತ್ಯಾಸಗೊಳ್ಳುವುದನ್ನು ವಿದ್ವಾಂಸರಾದ ವಿವೇಕ ರೈ ಅವರ ತುಳು ಜಾನಪದ ಸಾಹಿತ್ಯ, ಚಿನ್ನಪ್ಪ ಗೌಡರ ಭೂತಾರಾಧನೆ ಜಾನಪದೀಯ ಅಧ್ಯಯನ, ಅಮೃತ ಸೋಮೇಶ್ವರರ ತುಳು ಜಾನಪದ ಕೆಲವು ನೋಟಗಳು, ಗಣೇಶ ಅಮೀನರ ಮಾಯ ಮತ್ತು ಜೋಗ ಮುಂತಾದ ಗ್ರಂಥಗಳಲ್ಲಿ ಚರ್ಚಿಸಿದ್ದಾರೆ.
ನ್ಯಾಯ-ಸತ್ಯ-ದಾನ-ಧರ್ಮ

ಆಡಳಿತ ವ್ಯವಸ್ಥೆಯ ರಾಜಕೀಯ ಅಂಗವು ನ್ಯಾಯಾಂಗ ಪದ್ಧತಿಯಾಗಿ ಭೂತಾರಾಧನೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಶ್ರೇಣೀಕರಣ ವ್ಯವಸ್ಥೆಯ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ-ಪಂಚಮರೆಂಬ ಐದು ವರ್ಗದಲ್ಲಿ ಮುಟ್ಟಿಸಿಕೊಳ್ಳದ ಬ್ರಾಹ್ಮಣ ಆಳುವ ವರ್ಗ ನಡೆಸುವವನ ಹಿಂದೆ ಇರುತ್ತಾನೆ. ವಾಸ್ತವದಲ್ಲಿ ಮುಟ್ಟಬಾರದೆಂಬ ಸ್ಥಾನದಲ್ಲಿರುವ ನಡೆಸಿಕೊಡುವ ದೈವವನ್ನು ಕಟ್ಟುವವರು ದೈವಗಳ ಪಾತ್ರಿಗಳು ತಾವೇ ದೈವ/ಭೂತವೆಂದು ಹೇಳುತ್ತಾ ಬಂದಿದ್ದಾರೆ. ತಮ್ಮನ್ನು ತಾವೇ ಭೂತವೆಂದು ಕರೆಸಿಕೊಳ್ಳಲು ಹೆಮ್ಮೆಪಡುತ್ತಾರೆ. ಅವರು ಸಿರಿಮುಡಿ ಕಟ್ಟಿಕೊಂಡು, ಕಾಲಿಗೆ ಚಪ್ಪಲಿ ಹಾಕದೆ, ಸೂತಕಗಳಿರುವ ಮನೆ, ಕುಟುಂಬದವರೊಂದಿಗೆ ಸಂಪರ್ಕ ಬಿಡುತ್ತಾರೆ. ನಡೆಸುವವರು ಮತ್ತು ದೈವವನ್ನು ಕಟ್ಟುವವರು ದೈವಾರಾಧನೆಯ ಸಂದರ್ಭದಲ್ಲಿ ಶುದ್ಧಾಚರಣೆಯಲ್ಲಿದ್ದು, ನಡಾವಳಿಯ ನ್ಯಾಯ-ಸತ್ಯ-ದಾನ-ಧರ್ಮದ ಸೂತ್ರದಾರರಾಗಿರುತ್ತಾರೆ.
ಒಂದಾನೊಂದು ಕಾಲದಲ್ಲಿ ದೈವಾರಾಧನೆಯ ಗುಡಿ ಅಥವಾ ಅಂಗಳವು ನ್ಯಾಯಾಂಗ ಕೊಠಡಿಯೇ ಆಗಿತ್ತು. ಇಂದಿಗೂ ಹಲವಾರು ಕುಟುಂಬ ಕಲಹ, ಒಳಜಗಳಗಳು ದೈವದ ಸಮಕ್ಷಮದಲ್ಲೇ ನೆರವೇರುತ್ತದೆ ಮತ್ತು ಇತ್ಯರ್ಥವಾಗುತ್ತದೆ. ಈ ಸಂದರ್ಭದಲ್ಲಿ ದೈವದ ಚಾಕರಿ ಮಾಡುವವರು ಮಾಯ-ಜೋಗವೆಂಬ ಅಲೌಕಿಕ ಲೋಕದಲ್ಲಿರುತ್ತಾರೆ. ಕೈಯಲ್ಲಿ ಆಯುಧ ಹಿಡಿದು, ವೇಷಭೂಷಣ ತೊಟ್ಟು, ವಿವಿಧ ಅಣಿಗಳನ್ನು ಕಟ್ಟಿಕೊಂಡು ನೆರೆದಿರುವ ಎಲ್ಲರಿಗಿಂತಲೂ ಹಿರಿಯ ಸ್ಥಾನದಲ್ಲಿ ನಿಂತು ದೈವವು ನ್ಯಾಯಾಧೀಶನಂತೆ ವರ್ತಿಸುತ್ತದೆ. ತನ್ನ ವ್ಯಕ್ತಿತ್ವವನ್ನು ಅಲೌಕಿಕಗೊಳಿಸುತ್ತದೆ. ಈ ಸಂದರ್ಭದಲ್ಲಿ ನ್ಯಾಯಮಾರ್ಗ, ಸತ್ಯದ ನುಡಿ, ದಾನದ ನಡೆ, ಧರ್ಮ ನಡಾವಳಿಯನ್ನು ದೈವ ಬಯಸುತ್ತದೆ. ‘ನಂಬುನಾಯಗ್ ಇಂಬು, ನಂಬಂದಿನಾಯಗ್ ಅಂಬು’ ಎಂಬ ಒಕ್ಕಣೆಯಲ್ಲಿ ದೈವ ನಡೆದುಕೊಳ್ಳುತ್ತದೆ.
ನ್ಯಾಯ ತೀರ್ಮಾನದ ನಿಯಮಗಳು

*ವಾದಿ-ಪ್ರತಿವಾದಿಗಳು ದೈವದ ಎದುರು ಹಾಜರಿರಬೇಕು.
*ಮನೆತನದ ಹಿರಿಯರ ಮಧ್ಯಸ್ಥಿಕೆಯಲ್ಲಿ ನ್ಯಾಯಪಂಚಾತಿಕೆ ನಡೆಯುತ್ತದೆ.
*ತರವಾಡು ಮನೆಯಲ್ಲಿ ನ್ಯಾಯತೀರ್ಮಾನವಾಗುತ್ತದೆ.
*ಧಾರ್ಮಿಕ ಕ್ಷೇತ್ರಗಳಲ್ಲಿ ತೀರ್ಮಾನವಾಗುತ್ತದೆ. ಉದಾ: ಕಾನತ್ತೂರು, ಧರ್ಮಸ್ಥಳಗಳಲ್ಲಿ ನಡೆಯುವ ನ್ಯಾಯ ತೀರ್ಮಾನ.
*ಎರಡೂ ಪಂಗಡದವರು ತಮ್ಮ ತಮ್ಮ ಅಭಿಪ್ರಾಯಗಳನ್ನು, ಸಮರ್ಥನೆಗಳನ್ನು ವಾದ ರೂಪದಲ್ಲಿ ಸಂಕ್ಷಿಪ್ತವಾಗಿ ದೈವದ ಮುಂದಿಡಬೇಕು.
*ವಾದಿಗಳು ತಮ್ಮ ತಮ್ಮ ಸಾಕ್ಷಿಗಳನ್ನು ಎದುರು ನಿಲ್ಲಿಸಿ ತಮಗೆ ಬೇಕಾದವರನ್ನು ಬಳಸಿಕೊಳ್ಳುವುದು.
*ಸರಿ-ತಪ್ಪುಗಳನ್ನು ದೈವ ಇತ್ಯರ್ಥ ಮಾಡಿದ ಮೇಲೆ ತಪ್ಪಿತಸ್ಥನು ಶಿಕ್ಷೆಯ ರೂಪದಲ್ಲಿ ದಂಡವನ್ನು ನೀಡುವುದು.
*ನ್ಯಾಯ ತೀರ್ಮಾನದ ಸಂದರ್ಭದಲ್ಲಿ ಮನೆಯ/ಕುಟುಂಬದ/ಗುತ್ತಿನ/ಸೀಮೆಯ ಹಿರಿಯರು ಉಪಸ್ಥಿತರಿರುವುದು.
*ಹೀಗೆ ಸಮಸ್ಯೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ದೈವವು ಪಡೆದುಕೊಂಡು ನ್ಯಾಯ ತೀರ್ಪನ್ನು ಕೊಡುವುದು.
*ಸಾಕಷ್ಟು ಸಾಕ್ಷ್ಯಾಧಾರಗಳು ಸಿಗದಿರುವಾಗ ಸತ್ಯ ಪರೀಕ್ಷೆ ನಡೆಯುವುದು.
*ಸತ್ಯ ಪರೀಕ್ಷೆಯಂತೆ ಸತ್ಯ ನಿರೂಪಣೆಯೂ ಇರುತ್ತದೆ. ಭೂತಗಳ ಸಮ್ಮುಖದಲ್ಲಿ ಪ್ರೇತ ಬಿಡಿಸುವ ಕ್ರಮ ಇರುತ್ತದೆ. ಆಣೆ-ಪ್ರಮಾಣ ಮಾಡುವುದು. ಎಷ್ಟೋ ನ್ಯಾಯಗಳು ಪರಸ್ಪರ ವಾದ-ವಿವಾದಗಳಿಂದ ಆರಂಭವಾಗಿರುತ್ತದೆ.
*ಮದುವೆ ಮಂಟಪದಲ್ಲಿ ನ್ಯಾಯ ಹುಟ್ಟಿಕೊಳ್ಳುತ್ತವೆ. ಆಸ್ತಿ ಪಾಲಿನಲ್ಲಿ ಹೆಚ್ಚುಕಡಿಮೆಯಾದಾಗ ಅಣ್ಣ ತಮ್ಮಂದಿರ ನಡುವೆ ನ್ಯಾಯ ಉಂಟಾಗುತ್ತದೆ.
*ತಂದೆ ಮಕ್ಕಳ ನಡುವೆ ಆಸ್ತಿ ವಿವಾದ ಬರುತ್ತದೆ. ನಾಯಿ, ಕೋಳಿ, ಹಸು-ಕರುಗಳ ನೆಪದಲ್ಲಿ ನೆರೆಕರೆಯಲ್ಲಿ ಜಗಳ ಬರುತ್ತದೆ. ನೆರೆಕರೆಯವರ ತೋಟ, ಗದ್ದೆ ವಿಚಾರದಲ್ಲಿ ಭೂ-ವಿವಾದದ ನ್ಯಾಯ ಬರುತ್ತದೆ.
*ಹೀಗೆ ಹಲವಾರು ವಿಧದಲ್ಲಿ ನ್ಯಾಯಗಳು ಎದ್ದಾಗ ಅವುಗಳ ನಿವಾರಣೆಯನ್ನು ಸತ್ಯದ ಎದುರು ನಿಂತು ಆಣೆ-ಪ್ರಮಾಣ ಮಾಡಿಸಿ ದೈವದ ಎದುರು ನಿಂತು ಬೂಳ್ಯಪ್ರಸಾದ, ಗಂಧಪ್ರಸಾದ ತೆಗೆದುಕೊಂಡು ಇತ್ಯರ್ಥ ಮಾಡುತ್ತಿದ್ದರು.
ನ್ಯಾಯ ತೀರ್ಮಾನದ ಕತೆ ಮುಂದುವರಿಸೋಣ ಮುಂದಿನ ಬರವಣಿಗೆಯಲ್ಲಿ……..
ಧನ್ಯವಾದಗಳು.
GIPHY App Key not set. Please check settings