in ,

ಅಶೋಕ ಹೂಗಳು

ಅಶೋಕ ಹೂಗಳು

‘ಅಶೋಕ’, ಒಂದು ಮಧ್ಯಮ ಗಾತ್ರದ ನಿತ್ಯ ಹಸುರಿನ ಸುಂದರವಾದ ಮರ. ಅಶೋಕ ನಿಧಾನವಾಗಿ ಬೆಳೆಯುವ ಮರ. ೬-೮ ಮೀಟರ್ ಎತ್ತರ ಬೆಳೆಯುತ್ತದೆ. ನೀಳವಾಗಿ ಚೂಪಾಗಿರುವ ಎಲೆಗಳಿಂದ ಕೂಡಿದ ಮರದ ತುಂಬಾ ಗೊಂಚಲ ಗೊಂಚಲ ಹೂಗಳ ಗೊಂಚಲುಗಳು, ಮನಸ್ಸಿಗೆ ಮುದನೀಡುತ್ತವೆ. ಈ ಗಿಡದ ಕಾಯಿಗಳು ಕಂದು ಬಣ್ಣದವು. ಹತ್ತು ಸೆಂಟಿಮೀಟರ್ ಉದ್ದವಾಗಿರುವ ಕಾಯಿಗಳ ಒಳಗಡೆ ಸಾಲಾಗಿ ಬೀಜಗಳಿರುತ್ತವೆ. ಸಮುದ್ರಮಟ್ಟದಿಂದ ೨-೩ ಸಾವಿರ ಅಡಿ ಎತ್ತರದ ಪೂರ್ವ, ಈಶಾನ್ಯ ಭಾರತದ ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಕರ್ಣಾಟಕದಲ್ಲೂ ಇದು ವಿಶೇಷವಾಗಿ ಕಾಣಬರುವ ಸಸ್ಯರಾಶಿ.

ಅಶೋಕ ಔಷಧೀಯ ಗುಣಗಳಿಗೆ ಹೆಸರುವಾಸಿ :

ಸರಕಾ ಇಂಡಿಕಾ ಎಂಬ ಸಸ್ಯಶಾಸ್ತ್ರದ ಹೆಸರನ್ನು ಗಳಿಸಿರುವ ಅಶೋಕ, ಫ್ಯಾಬೇಸಿ, ಕುಟುಂಬವರ್ಗಕ್ಕೆ ಸೇರಿದೆ. ಹೆಸರೇ ಹೇಳುವಂತೆ, ಅಶೋಕ ಎಂದರೆ ಶೋಕವನ್ನು ದೂರ ಮಾಡುವಂತದ್ದು ಎಂದರ್ಥ. ಭಾರತೀಯರು ಈ ವೃಕ್ಷವನ್ನು ಪವಿತ್ರತೆಯ ಸಂಕೇತವಾಗಿ ಪರಿಗಣಿಸುತ್ತಾರೆ. ಏಕೆಂದರೆ, ಅಶೋಕ ಮರದ ಜೊತೆಗೆ ಅನೇಕ ದಂತಕಥೆಗಳೂ, ಪುರಾಣಕಥೆಗಳೂ, ಸೇರಿಕೊಂಡಿವೆ. ನಮ್ಮ ರಾಮಾಯಣದ, ಸೀತಾಮಾತೆಯನ್ನು ರಾವಣನು ಅಶೋಕವಾಟಿಕೆಯಲ್ಲಿ ಇರಿಸಿದ್ದನಂತೆ. ಅಶೋಕದ ಹೂಗಳು ಅರಳುವ ಪರಿ ಅತಿ ಮೋಹಕ. ಮರದತುಂಬಾ ಗೊಂಚಲುಗಳೇ. ಗೊಂಚಲಿನಲ್ಲಿ ಅನೇಕ ಪುಟ್ಟಪುಟ್ಟ ಹೂಗಳಿರುತ್ತವೆ. ಈ ಹೂಗಳಿಗೆ ೪ ದಳಗಳು. ಹೂವಿನ ಮಧ್ಯೆ ನೀಳವಾದ ಕೇಸರಗಳಿರುತ್ತವೆ. ಹೂಗಳು ಅರಳಿದ ಸಮಯದಲ್ಲಿ ಕಿತ್ತಳೆ ಹಳದಿ ಬಣ್ಣದಲ್ಲಿದ್ದು, ಮಾರನೆಯದಿನ ಕಡುಕೆಂಪುಬಣ್ಣಕ್ಕೆ ತಿರುಗುತ್ತವೆ. ನೋಡುಗರಿಗೆ, ಒಂದೇ ಗೊಂಚಲಿನಲ್ಲಿ ಗೋಚರಿಸುವ ಎರಡು ಬಣ್ಣಗಳ ವೈವಿಧ್ಯತೆ ಮೂಗಿನಮೇಲೆ ಬೆರಳಿದುವಂತೆ ಮಾಡುವುದು ಸಹಜ. ಹೂಗಳಲ್ಲಿ ಸುಗಂಧದ ನಸುಲೇಪವಿರುವಂತೆ ಭಾಸವಾಗುತ್ತದೆ. ಸಂಜೆಯವೇಳೆ ಬಂದಂತೆ, ಆ ಪರಿಮಳಗಾಢವಾಗುತ್ತಾ ಹೋಗುವುದನ್ನು ನಾವು ಗಮನಿಸಬಹುದು.

ಅಶೋಕ ಹೂಗಳು
ಬುದ್ಧ

‘ಗೌತಮ ಬುದ್ಧದೇವ’ ನು ‘ಅಶೋಕವನ’ ದಲ್ಲಿ ಜನ್ಮಿಸಿದನೆಂದು ಪ್ರತೀತಿ ಇದೆ. ಹಾಗಾಗಿ ಬೌದ್ಧವಿಹಾರಗಳಲ್ಲಿ ಈ ಮರಕ್ಕೆ ವಿಶೇಷ ಪ್ರಾಮುಖ್ಯತೆ. ಕಾಮದೇವನಿಗೆ ಈ ಮರವನ್ನು ಕಂಡರೆ ಪ್ರಾಣವಂತೆ. ಇದು ಪುರಾಣಗಳಲ್ಲಿ ಅಲ್ಲಿ ಇಲ್ಲಿ ತಿಳಿಸಿರುವ ಮಾತು. ಕವಿಪುಂಗವರಿಗಂತೂ ಈ ಮರಹಾಗೂ ಇದರ ಹೂಗೊಂಚಲಿನಮೇಲೆ ಎಲ್ಲಿಲ್ಲದ ಆಸಕ್ತಿಕುವೆಂಪುರವರು, ಈ ಮರದ ಹೂಗಳ ವಿನ್ಯಾಸಕ್ಕೆ ಮಾರುಹೋಗಿ ಕೆಳಗಿನ ಕವಿತೆಯನ್ನು ರಚಿಸಿದ್ದಾರೆ. ಕುಪ್ಪಳ್ಳಿಯ ಕವಿಶೈಲದ ಹಿಂಭಾಗದಲ್ಲಿ’ನರ್ಜಿ,’ ಎಂಬ ಊರಿನ ಕಾಡಿನಲ್ಲಿ ಅಶೋಕಮರಗಳು ವ್ಯವಸ್ಥಿತವಾಗಿ ಬೆಳೆಸಲ್ಪಟ್ಟಿವೆ… ತೀವಿದಾ ಕತ್ತಲೆಗೆ ವನಲಕ್ಷ್ಮಿ ಬೇಸತ್ತು ಸಿರಿಗುರುಳಿರುಳ ಮುಡಿಯ ಕಿಡಿತಾರಗಳನಾಯ್ದು, ರಕ್ತಾರುಣನ ಮಿಂಚೊಳದ್ದಿ, ಗೊಂಚಲ ನೆಯ್ದು, ದೀವಟಿಗೆ ಹಿಡಿರೆಂದು ತರು ಹಸ್ತಗಳಿಗಿತ್ತು ಹೂವಿನ ಹಿಲಾಲುಗಳ ಹೊತ್ತಿಸಿರಲಲ್ಲಲ್ಲಿ ಜ್ವಲಿಸುತಿದೆ ನೋಡದೋ ಅಶೋಕ ಹೂ ವೇಷದಲ್ಲಿ ! ಕಾಡಿನ ಕತ್ತಲೆಯಲ್ಲಿ ಗಿಡಮರಗಳು ಹಿಡಿದ ದೀವಟಿಗೆಯಂತೆ, ಆದೂ ತಾರೆಗಳನ್ನು ರಕ್ತವರ್ಣದಲ್ಲಿ ಅದ್ದಿ ಗೊಂಚಲು ನೇಯ್ದು ದೀವಟಿಗೆಯಂತೆ ! ಕವಿಗೆ ಗೋಚರಿಸಿದೆ. ಆದಿಕವಿ ಪಂಪನೂ ತನ್ನ ಎರಡು ಕಾವ್ಯಗಳಲ್ಲಿ ಅಶೋಕವನ್ನು ಅಸುಗೆ, ರಕ್ತಾಶೋಕ ಎಂದು ಬಗೆ ಬಗೆಯಾಗಿ ವರ್ಣಿಸಿದ್ದಾನೆ. ಕಾಳಿದಾಸನ ” ಮಾಲವಿಕಾಗ್ನಿ ಮಿತ್ರ, ” ದಲ್ಲಿ ಮಾಲವಿಕೆ, ಪದಾಘಾತದಿಂದ ದೋಹದವೆಸಗಿದ ಐದನೆಯ ದಿನಕ್ಕೆ ಮರ ಹೂತಳೆಯಿತಂತೆ. ಇದು ಕವಿಸಮಯವಾಗಿ ಪಂಪನಲ್ಲೂ ವರ್ಣಿತವಾಗಿದೆ. ಅಶೋಕದ ಬೀಜೋತ್ಪತ್ತಿಮಾಡಿ ನಮ್ಮ ಅಂಗಳದಲ್ಲೂ ಸುಲಭವಾಗಿ ಬೆಳೆಸಬಹುದು.

ಔಷಧೀಯ ಗುಣಗಳಿಗೆ ಅಶೋಕ : ಚರಕ ಸಂಹಿತೆಯಲ್ಲಿ ಅಶೋಕವೃಕ್ಷದ ಔಷಧೀಯ ಗುಣಗಳ ಉಲ್ಲೇಖವಿದೆ. ಮರದ ತೊಗಟೆ, ಹೂ, ಬೀಜಗಳು ಒಣಗಿಸಿ, ತೊಗಟೆಯನ್ನು ಪುಡಿಮಾಡಿ, ಬಳಸುತ್ತಾರೆ. ‘ಅಶೋಕಾರಿಷ್ಟ’, ‘ಅಶೋಕಘೃತ’ ಎಂಬ ಔಷಧಿಗಳನ್ನು ನಾವು ಆಯುರ್ವೇದದ ಅಂಗಡಿಗಳಲ್ಲಿ ಕಾಣಬಹುದು. ಬಂಗಾಲ ಹೆಣ್ಣುಮಕ್ಕಳು, ಹೂವಿನ ಮೊಗ್ಗುಗಳನ್ನು ಸೇವಿಸುತ್ತಾರಂತೆ. ತೊಗಟೆಯಲ್ಲಿ “ಟ್ಯಾನಿನ್,” ಅಂಶವಿದೆ. ತೊಗಟೆಯ ಪುಡಿಯನ್ನು ಸ್ವಲ್ಪ ಸೇರಿಸುವುದರಿಂದ ಚಹದ ರುಚಿ ಹಾಗೂ ಬಣ್ಣದಲ್ಲಿ ಹೆಚ್ಚುವರಿ ಬರುವುದಂತೆ. ನಾವು ಈಗ ಅಲಂಕಾರಿಕವಾಗಿ ಬೆಳೆಸುವ ಎತ್ತರದ ಅಶೋಕ ಎಂದು ಹೆಸರಿಸುವ ಮರದಲ್ಲಿ ಒಂದು ಹೂ ಕಾಣಿಸುವುದಿಲ್ಲ.

ಅಶೋಕ ಹೂಗಳು
ಅಶೋಕ ಮರಗಳು

ಇದು ಅಶೋಕದ ಮರದ ತೊಗಟೆಗೆ ಅಪಮಿಶ್ರಕ ದ್ರವ್ಯವಾಗಿ ಉಪಯೋಗಿಸುತ್ತಾರೆ. ಫ್ಯಾಬೇಸೀ ಕುಟುಂಬ (ಲೆಗ್ಯುಮಿನೋಸೀ), ಸೇರಿದ ಸೀಸಾಲ್ ಪಿನಿಯಾಯ್ಡೀ ಉಪಕುಟುಂಬಕ್ಕೆ ಸೇರಿದ ಮರ. ಸಸ್ಯವೈಜ್ಞಾನಿಕ ಹೆಸರು ಸರಕ ಇಂಡಿಕ. ಉಷ್ಣವಲಯದಲ್ಲಿ ಬೆಳೆಯುತ್ತದೆ. ಉಗಮಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ತೋಟಗಾರಿಕೆ ಯನ್ನು ಕುರಿತು ಗ್ರಂಥ ರಚಿಸಿರುವ ಬೇಯಿಲೀ ಎಂಬ ಲೇಖಕನ ಅಭಿಪ್ರಾಯದಲ್ಲಿ ಈ ವೃಕ್ಷ ಭಾರತದ ಮೂಲವಾಸಿ ಎಂದಿದೆ; ಚಬ್ಬರ್‌ನ ಪ್ರಕಾರ ಇದು ಅಮೆರಿಕದ ಮೂಲದ್ದು; ಭಾರತೀಯ ಲೇಖಕ ರಾಂಧವಾ ಪ್ರಕಾರ ಇದು ಭಾರತ ಮತ್ತು ಶ್ರೀಲಂಕ ಮೂಲದ್ದು.ಎಲೆಗಳು ಕಿರಿ ಅಗಲದವೂ ಮತ್ತು ಉದ್ದವೂ ಇವೆ. ಒಂದು ಎಲೆಯಲ್ಲಿ ಸುಮಾರು 4-6 ಜೊತೆ ಕಿರುಎಲೆಗಳು ಎದುರು ಬದುರಾಗಿ ಇರುತ್ತವೆ. ಎಳೆಯ ಎಲೆಗಳು ಹಳದಿ ಬಣ್ಣಕ್ಕಿದ್ದು ಇಳಿಬಿದ್ದಿರುವುವು. ಕಾಂಡದ ತೊಗಟೆಯ ಬಣ್ಣ ಕಂದು. ಹೂಗೊಂಚಲು ದಪ್ಪ; ಸಣ್ಣಗಾತ್ರದ ಕೊಂಬೆಗಳ ತುದಿಯಲ್ಲಿ ಕಾಣಿಸಿಕೊಳ್ಳುತ್ತವೆ. ಎಳೆಯ ಹೂವಿನ ಬಣ್ಣ ಕಿತ್ತಲೆಯಿದ್ದು ಮುಂದೆ ಕೆಂಬಣ್ಣಕ್ಕೆ ತಿರುಗುವುದು. ಹಚ್ಚ ಹಸುರು ಎಲೆಗಳ ನಡುವೆ ಕೆಂಪು ಹೂರಾಶಿಗಳು ಚೆಲುವಾಗಿ ಕಾಣುತ್ತವೆ. ಹೂವು ಪತ್ರದ (ಕ್ಯಾಲಿಕ್ಸ್‌) ಕೆಳಗೆ ಕೆಂಪಾದ ಉಪಪತ್ರ (ಎಪಿಕೇಲಿಕ್ಸ್‌) ಇದೆ. ಹೂ ಬಿಡುವ ಕಾಲ ಜನವರಿಯಿಂದ ಮೇ ತಿಂಗಳವರೆಗೆ. ಹೂವಿನಲ್ಲಿ ಮಧುರವಾದ ಸುಗಂಧವೂ ಉಂಟು. ಬೀಜಗಳನ್ನು ನೆಟ್ಟು ಸಸ್ಯಗಳನ್ನು ಪಡೆಯಬಹುದು. ಎಳೆಯ ಗಿಡಕ್ಕೆ ನೆರಳು ಅಗತ್ಯ. ಬಿಸಿಲು ಹೆಚ್ಚಾಗಿದ್ದರೆ ಗಿಡಗಳು ಮುರುಟಿಕೊಳ್ಳುವುವು. ಮರದ ತೊಗಟೆಯಲ್ಲಿ ದೊರೆಯುವ ಗ್ಯಾಲಿಕ್ ಆಮ್ಲ ಔಷಧಿಗಳಿಗೆ ಉಪಯೋಗ ವಾಗುತ್ತದೆ. ಹೂವನ್ನು ಇದೇ ರೀತಿ ಬಳಸುವುದುಂಟು. ಶ್ರೀಲಂಕದಲ್ಲಿ ಈ ಮರವನ್ನು ಮನೆ ಕಟ್ಟುವ ಮರಮುಟ್ಟುಗಳಿಗಾಗಿ ಉಪಯೋಗಿಸುತ್ತಾರೆ. ಹಿಂದೂಗಳೂ ಬೌದ್ಧರೂ ಈ ಮರವನ್ನು ದೇವಾಲಯಗಳ ಸುತ್ತಲೂ ಬೆಳೆಸುವುದುಂಟು. ಇದರ ಹೂಗಳು ಪೂಜೆಗೆ ಒದಗುತ್ತವೆ. ಈ ವೃಕ್ಷವನ್ನು ಇತ್ತೀಚೆಗೆ ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ. ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಅಶೋಕವೃಕ್ಷಕ್ಕೆ ಕೊಟ್ಟಿರುವ ಸ್ಥಾನ ಬಹಳ ಮುಖ್ಯವಾದುದು.

ಅಶೋಕ ಹೂಗಳು
ಅಶೋಕ ಹೂವು

ರಾಮಾಯಣ, ಮಹಾಭಾರತ ಕಾಲದಿಂದಲೂ ಜನಪ್ರಿಯ ವೃಕ್ಷ. ಈ ವೃಕ್ಷಗಳಿಂದ ಕೂಡಿದ ವನದಲ್ಲಿ ರಾವಣ ಸೀತೆಯನ್ನು ಅವಿತಿ(ಅಡಗಿಸಿ)ಟ್ಟಿದ್ದನೆಂದು ಹೇಳುತ್ತಾರೆ. ಕಾಳಿದಾಸನ ಕಾಲದಲ್ಲಂತೂ ಈ ಮರಕ್ಕೆ ದೊರೆತ ಗೌರವ ಅಪಾರ. ವಸಂತಕಾಲದಲ್ಲಿ ಒಂದು ನಿಶ್ಚಿತದಿನ ಸುಂದರಿಯೊಬ್ಬಳು ತನ್ನ ಎಡೆಗಾಲಿನಿಂದ ಮೃದುವಾಗಿ ಅಶೋಕವೃಕ್ಷವನ್ನು ಒದ್ದರೆ ಆ ಮರದಲ್ಲಿ ಗರ್ಭಾಂಕುರವಾಗುತ್ತಿತ್ತೆಂದು ಭೋಜರಾಜನ ಸರಸ್ವತೀ ಕಂಠಾಭರಣ, ಕಾಳಿದಾಸನ ಮಾಲವಿಕಾಗ್ನೀಮಿತ್ರ, ಹರ್ಷನ ರತ್ನಾವಳೀ ಗ್ರಂಥಗಳಲ್ಲಿ ಹೇಳಲಾಗಿದೆ. ಇದನ್ನು ದೋಹದ ಕ್ರಿಯೆಯೆಂದು ಬಣ್ಣಿಸಲಾಗಿದೆ. ಚೈತ್ರ ಶುಕ್ಲ ಅಷ್ಟಮಿಯಂದು ವ್ರತಮಾಡಿ ಅಶೋಕದ ಎಂಟು ಎಲೆಗಳನ್ನು ತಿಂದಲ್ಲಿ ಸ್ತ್ರೀಯರ ಸಂತಾನ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ದೀಪಾವಳಿಗೆ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಸೂರ್ಯವಾದ್ಯ ಮತ್ತು ಚಂದ್ರವಾದ್ಯ

ಸೂರ್ಯವಾದ್ಯ ಮತ್ತು ಚಂದ್ರವಾದ್ಯ