in

ಶ್ರವಣ ಕುಮಾರ

ಹೆತ್ತವರ ಆಸೆ ತೀರಿಸಲೆಂದು ತಕ್ಕಡಿಯಲ್ಲಿ ಕೂಡಿಸಿಕೊಂಡು ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣಕುಮಾರನ ಕಥೆ ಅಜರಾಮರ. ನಮಗೆಲ್ಲ ತಿಳಿದಿರುವ ಪುರಾಣದ ಶ್ರವಣ ಕುಮಾರನ ಕಥೆ. ಪ್ರತಿ ತಂದೆ-ತಾಯಿಯರೂ,ಹಿರಿಯರು ತಮ್ಮ ತಮ್ಮ ಮಕ್ಕಳಿಗೆ ಹೇಳಿಕೊಡಬಹುದಾದ ಕಥೆ. ಸುಮ್ಮನೇ ಕಾಗಕ್ಕ ಗೂಬ್ಬಕ್ಕ ಕಥೆಗಳ ಬದಲು ಇಂತಹ ಅರ್ಥಪೂರ್ಣ ಕಥೆಗಳು, ಅದರ ನೀತಿ ಪಾಠಗಳು ಮಕ್ಕಳಲ್ಲಿ ಒಳ್ಳೆಯ ಬೆಳವಣಿಗೆ ಕಾಣಬಹುದು.

ಶ್ರವಣ ಕುಮಾರನ ತಂದೆತಾಯಿಗಳಾದ ಶಂತನು ಮತ್ತು ಜ್ಞಾನವಂತಿ  ವಿರಕ್ತರಾಗಿದ್ದರು. ಅವರಿಬ್ಬರೂ ಹುಟ್ಟು  ಕುರುಡರಾಗಿದ್ದರು. ಅವರು ವಯಸ್ಸಾದಾಗ, ಶ್ರವಣ ಅವರ ಆತ್ಮವನ್ನು ಶುದ್ಧೀಕರಿಸಲು ಹಿಂದೂ ತೀರ್ಥಯಾತ್ರೆಯ ನಾಲ್ಕು ಅತ್ಯಂತ ಪವಿತ್ರ ಸ್ಥಳಗಳಿಗೆ ಕರೆದೊಯ್ಯಬೇಕೆಂದು ಬಯಸಿದ್ದರು. ಶ್ರವಣ ಕುಮಾರನಿಗೆ ಸಾಗಿಸಲು ಸಾಧ್ಯವಾಗದ ಕಾರಣ, ಅವನು ಪೋಷಕರನ್ನು ಬುಟ್ಟಿಯಲ್ಲಿ ಹಾಕಲು ನಿರ್ಧರಿಸಿದನು ಮತ್ತು  ಬುಟ್ಟಿಯನ್ನು ಬಿದಿರಿನ ಕಂಬದ ತುದಿಗೆ ಕಟ್ಟಲು ನಿರ್ಧರಿಸಿದನು, ಅದನ್ನು ಅವನು ತಮ್ಮ ತೀರ್ಥಯಾತ್ರೆಯಲ್ಲಿ ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಾನೆ.

ತ್ರೇತಾಯುಗದಲ್ಲಿ ಶ್ರವಣಕುಮಾರ ಎಂಬ ಮುನಿಪುತ್ರನಿದ್ದ. ಅವನು ತನ್ನ ತಂದೆತಾಯಿಗಳಿಗೆ ಮುಪ್ಪಿನಲ್ಲಿ ಜನಿಸಿದ ಮಗನಾಗಿದ್ದ. ಅವನ ತಂದೆ ತಾಯಿ ಇಬ್ಬರೂ ಹುಟ್ಟು ಕುರುಡರು ಹಾಗೂ ವಯೋವೃದ್ಧರು. ಅವರಿಗೆ ಏನೇ ಬೇಕಾದರೂ ಎಲ್ಲದಕ್ಕೂ ಅವರು ಇನ್ನೊಬ್ಬರನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿ ಇದ್ದರು. ಶ್ರವಣಕುಮಾರನೇ ಅವರಿಬ್ಬರ ಸರ್ವಸ್ವವೂ ಆಗಿದ್ದ. ಹೀಗಾಗಿ ಶ್ರವಣಕುಮಾರ ಎಲ್ಲಿಯೂ ಹೋಗದೆ ತನ್ನ ತಂದೆತಾಯಿಗಳ ಸೇವೆಯನ್ನೇ ಮಾಡಿಕೊಂಡು ಅವರ ಬಳಿಯೇ ಇರುತ್ತಿದ್ದ. ತಂದೆತಾಯಿಗಳ ಸೇವೆಯೇ ದೇವರ ಸೇವೆ, ತನ್ನ ಬಾಳಿನ ಗುರಿ, ಪರಮಾರ್ಥ ಎಂದು ಭಾವಿಸಿದ್ದ. ಈಗಲೂ ತಂದೆ ತಾಯಿಯ ಸೇವೆಯನ್ನು ಮಾಡುವವರನ್ನು ಶ್ರವಣ ಕುಮಾರನಿಗೆ ಹೋಲಿಸುದುಂಟು.

ಹೀಗೆ ಒಂದು ಸಲ  ಶ್ರವಣನ ತಂದೆತಾಯಿಗಳಿಗೆ ತೀರ್ಥಯಾತ್ರೆ ಮಾಡಬೇಕೆಂಬ ಹಂಬಲವಾಯಿತು. ಅವರು ತಮ್ಮಾಸೆಯನ್ನು ಮಗನಲ್ಲಿ ಹೇಳಿಕೊಂಡರು. ಮಗನೂ ಒಪ್ಪಿದ. ಆದರೆ ವೃದ್ಧ ತಂದೆತಾಯಿಗಳನ್ನು ಕ್ಷೇತ್ರಗಳಲ್ಲೆಲ್ಲಾ ಸುತ್ತಾಡಿಸುವುದು ಹೇಗೆ ಎಂದು, ಶ್ರವಣಕುಮಾರ ಒಂದು ಉಪಾಯ ಮಾಡಿದ. ಒಂದು ಕಾವಡಿಯನ್ನು ತಯಾರಿಸಿದ. ಅದರ ಎರಡೂ ಬುಟ್ಟಿಗಳಲ್ಲಿ ತಂದೆ ತಾಯಿಯರನ್ನು ಕೂಡಿಸಿ ಕಾವಡಿಯನ್ನು ತನ್ನ ಹೆಗಲ ಮೇಲೆ ಹೊತ್ತು ಅವರು ನೋಡಬೇಕೆಂದ ಸ್ಥಳಗಳನ್ನೆಲ್ಲಾ ತೋರಿಸಿದ.  ಕಾಲ್ನಡಿಗೆಯಲ್ಲೇ ಓಡಾಡಬೇಕಿತ್ತು, ಹಾಗೂ ಕಾಡಿನಲ್ಲೆಲ್ಲಾ ಸಂಚರಿಸಬೇಕಿತ್ತು.

ಶ್ರವಣ ಕುಮಾರ
ಶ್ರವಣ ಕುಮಾರ

ಹೀಗೆಯೇ ಸುತ್ತಾಡುತ್ತಿರುವಾಗ  ಮಧ್ಯಾಹ್ನ ದಣಿವಾರಿಸಿಕೊಳ್ಳಲು  ಕಾಡಿನಲ್ಲಿ ಒಂದು ಮರದಡಿ ಕಾವಡಿ ಇಳಿಸಿದ. ವೃದ್ಧ ತಂದೆತಾಯಿಗಳು ಬಹಳ ಬಾಯಾರಿಕೆಯೆಂದೂ, ನೀರು ಬೇಕೆಂದರು. ಶ್ರವಣಕುಮಾರ ಅವರನ್ನು ಅಲ್ಲಿಯೇ ನೆರಳಲ್ಲಿ ಕೂಡಿಸಿ ತಾನು ನೀರನ್ನು ಹುಡುಕಿಕೊಂಡು ಹೊರಟ. ಸ್ವಲ್ಪ ದೂರ ನಡೆದಾಗ ಅಲ್ಲೊಂದು ತಿಳಿನೀರ ತೊರೆ ಕಾಣಿಸಿತು. ಸಂತಸದಿಂದ ಅತ್ತ ನಡೆದ ಕುಮಾರ ತಾನೂ ಅದರಲ್ಲಿ ಕೈಕಾಲು ತೊಳೆದು, ನೀರು ಕುಡಿದು ದಣಿವಾರಿಸಿಕೊಂಡು ತನ್ನ ತಂದೆತಾಯಿಗಳಿಗೆ ನೀರನ್ನು ತುಂಬಿಸಿಕೊಳ್ಳುತ್ತಿದ್ದ. ಅದೇ ಸಮಯಕ್ಕೆ ಅಯೋಧ್ಯೆಯ ರಾಜನಾದ ದಶರಥ ಬೇಟೆಗಾಗಿ ಕಾಡಿಗೆ ಬಂದಿದ್ದ. ಅವನಿಗೆ ಶಬ್ದ ಬಂದ ಕಡೆ ಬಾಣ ಬಿಡುವ ಕಲೆ (ಶಬ್ಧವೇಧಿ ವಿದ್ಯೆ) ಗೊತ್ತಿತ್ತು. ಶ್ರವಣಕುಮಾರ ನೀರು ತುಂಬಿಸುವಾಗ ಆದ ಗುಳುಗುಳು ಶಬ್ದ ದಶರಥನಿಗೆ ಪ್ರಾಣಿ ನೀರು ಕುಡಿಯುವಾಗ ಮಾಡುವ ಶಬ್ದದಂತೆ ಕೇಳಿಸಿತು. ಯಾವುದೋ ಪ್ರಾಣಿಯಿರಬೇಕೆಂದು ಉತ್ಸಾಹದಲ್ಲಿ ಶಬ್ದ ಬಂದ ಕಡೆ ಬಾಣ ಪ್ರಯೋಗಿಸಿದ. ಬಾಣವು ಶ್ರವಣಕುಮಾರನ ಎದೆಯನ್ನು ಹೊಕ್ಕಿತು. ಅಯ್ಯೋ ಎಂದು ಕೂಗಿದ ಮುನಿಪುತ್ರನ ಧ್ವನಿ ಕೇಳಿ ದಶರಥ ಅವಾಕ್ಕಾಗಿ ಕೂಗು ಕೇಳಿಬಂದ ಕಡೆ ಧಾವಿಸಿದ. ಮುನಿಕುಮಾರ ನೆಲದಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ. ಅವನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡ ದಶರಥ, ಅವನ ಪೂರ್ವೋತ್ತರಗಳನ್ನು ವಿಚಾರಿಸಿ ತಿಳಿದುಕೊಂಡ. ರಾಜನಿಗೆ ಪಶ್ಚಾತ್ತಾಪವಾಗಿತ್ತು. ಸಾಯುವ ಸ್ಥಿತಿಯಲ್ಲಿದ್ದ ಶ್ರವಣಕುಮಾರ ತನ್ನ ತಂದೆತಾಯಿಗಳ ಗತಿಯೇನೆಂದು ದುಃಖಿಸಿದ. ಅವನಿಗೆ ಸಮಾಧಾನ ಹೇಳಿದ ರಾಜ ಆ ವೃದ್ಧ ತಪಸ್ವಿಗಳನ್ನು ತಾನೇ ಪೋಷಿಸುವುದಾಗಿ ಮುನಿಪುತ್ರನಿಗೆ ಮಾತು ಕೊಟ್ಟ. ಶ್ರವಣಕುಮಾರ ನಿಶ್ಚಿಂತೆಯಿಂದ ಪ್ರಾಣಬಿಟ್ಟ.

ಶ್ರವಣ ಕುಮಾರ
ಶ್ರವಣ ಕುಮಾರ

ಮಗ ಇನ್ನೂ ಏಕೆ ಬರಲಿಲ್ಲವೆಂದು ಕಾಯುತ್ತಿದ್ದ ವೃದ್ಧರ ಬಳಿ ದಶರಥ ತಾನೇ ನೀರನ್ನು ತೆಗೆದುಕೊಂಡು ಬಂದ. ಕಣ್ಣು ಕಾಣದ ವೃದ್ಧರು ರಾಜನನ್ನೇ ಮಗನೆಂದು ತಿಳಿದು ಮಗನೇ “ಏಕೆ ತಡಮಾಡಿದೆ? ನಿನಗೇನಾದರೂ ಅಪಾಯವಾಯಿತೇನೋ ಎಂದು ಭಯವಾಯಿತು’ ಎಂದರು. ದಶರಥನಿಗೆ ತಡೆಯಲಾಗಲಿಲ್ಲ. ಅವನು ದುಃಖೀಸುತ್ತಾ ನಡೆದ ಸಂಗತಿಯನ್ನು ತಿಳಿಸಿದ. ಮಗನ ಸಾವಿನಿಂದ ಕಂಗಾಲಾದ ವೃದ್ಧರಿಗೆ ಎದೆಯೊಡೆದಂತಾಯ್ತು. ನೆಲದಲ್ಲಿ ಬಿದ್ದು ಗೋಳಾಡುತ್ತಾ ಕೋಪದಿಂದ ರಾಜನಿಗೆ “ನಮ್ಮ ವೃದ್ಧಾಪ್ಯದಲ್ಲಿ ಆಸರೆಯಾಗಿದ್ದ ಮಗನನ್ನು ಕೊಂದೆಯಲ್ಲವೇ ನೀನು?! ನಿನ್ನ ವೃದ್ಧಾಪ್ಯದಲ್ಲೂ ಮಕ್ಕಳಿಂದ ದೂರವಾಗಿ ಸಾಯುವಂತಾಗಲಿ’ ಎಂದು ಶಾಪವಿತ್ತು ದುಃಖ ತಡೆಯಲಾರದೆ ಸತ್ತುಹೋದರು. ಆ ಕಾರಣಕ್ಕಾಗಿ ದಶರಥ ತನ್ನ ವೃದ್ಯಾಪ್ಯದಲ್ಲಿ ತನ್ನ ಮಗ ರಾಮನನ್ನು ಕಾಡಿಗೆ ವನವಾಸಕ್ಕೆ ಕಳುಹಿಸಬೇಕಾಯಿತು.

ಭಾರತದ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಶ್ರವಣ ಸತ್ತ ಸ್ಥಳಕ್ಕೆ ‘ ಸರ್ವಣ ‘ ಎಂದು ಹೆಸರಿಡಲಾಯಿತು. ಮತ್ತು ದಶರಥನು ತನ್ನ ಬಾಣವನ್ನು ಹೊಡೆದ ಸ್ಥಳಕ್ಕೆ ‘ಸರ್ವರ’ ಎಂದು ಹೆಸರಾಯಿತು ಮತ್ತು ಶ್ರವಣನ ತಂದೆತಾಯಿಗಳು ಸತ್ತ ಸ್ಥಳವನ್ನು ‘ ಸಮಾಧ ‘ ಎಂದು ಸ್ಥಳೀಯ ಸಂಪ್ರದಾಯಗಳು ಹೇಳುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೇಸಿಗೆಯಲ್ಲಿ ಶುರುವಾಗುತ್ತೆ ಉರಿಮೂತ್ರ ಸಮಸ್ಯೆ, ಮನೆಯಲ್ಲೇ ಕೆಲವು ಪರಿಹಾರಗಳು ತಿಳಿಯೋಣ

ಬೇಸಿಗೆಯಲ್ಲಿ ಶುರುವಾಗುತ್ತೆ ಉರಿಮೂತ್ರ ಸಮಸ್ಯೆ, ಮನೆಯಲ್ಲೇ ಕೆಲವು ಪರಿಹಾರಗಳು ತಿಳಿಯೋಣ

ಚಳಿಗಾಲಕ್ಕೆ ಹೊಂದುವ ಹಣ್ಣುಗಳು