ಗಿಳಿ ಸಿಟ್ಟಸಿಫೋರ್ಮ್ಸ್ ವರ್ಗಕ್ಕೆ ಸೇರಿದ ಒಂದು ಪಕ್ಷಿ. ಗಿಳಿಗಳಲ್ಲಿ ಸುಮಾರು ೩೫೦ ತಳಿಗಳಿವೆ. ಗಿಳಿಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲೂ ಕಾಣಬರುತ್ತವೆ. ಗಿಳಿಗಳನ್ನು ಮುಖ್ಯವಾಗಿ ಎರಡು ಕುಟುಂಬಗಳನ್ನಾಗಿ ವಿಭಾಗಿಸಲಾಗಿದೆ. ಸಿಟ್ಟಿಸೀಡೇ ಅಥವಾ ನೈಜ ಗಿಳಿ ಮತ್ತು ಕಕಾಟುಯ್‌ಡೇ ಇವೇ ಆ ಎರಡು ಕುಟುಂಬಗಳು. ಸಂಪೂರ್ಣ ಉಷ್ಣವಲಯದ ಹೊರತಾಗಿ ದಕ್ಷಿಣ ಸಮಶೀತೋಷ್ಣವಲಯದಲ್ಲಿ ಸಹ ಗಿಳಿಗಳು ಕಂಡುಬರುತ್ತವೆ. ಅತ್ಯಂತ ಹೆಚ್ಚಿನ ಪ್ರಭೇದಗಳು ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯಾ ಗಳಲ್ಲಿ ಜೀವಿಸಿವೆ. ಗಿಳಿಗಳ ಲಕ್ಷಣಗಳೆಂದರೆ – ಶಕ್ತಿಯುತ ಬಾಗಿದ ಕೊಕ್ಕು, ನೇರ ನಿಲುವು, ಬಲಶಾಲಿ ಕಾಲುಗಳು. ಹೆಚ್ಚಿನ ಗಿಳಿಗಳು ಹಸಿರು ಬಣ್ಣದ್ದಾಗಿರುತ್ತವೆ. ಕೆಲವು ತಳಿಗಳು ಬೇರೆ ಹೊಳೆಯುವ ಬಣ್ಣವುಳ್ಳವಾಗಿದ್ದರೆ ಇನ್ನು ಕೆಲವು ಮಿಶ್ರವರ್ಣದವು. ಕೊಕ್ಯಾಟೂ ತಳಿಗಳು ಪೂರ್ಣ ಬಿಳಿಯಿಂದ ಪೂರ್ಣ ಕಪ್ಪು ಬಣ್ಣದವರೆಗೆ ವಿಭಿನ್ನ ಛಾಯೆಯವಾಗಿದ್ದು ತಲೆಯ ಮೇಲೆ ಪುಕ್ಕಗಳ ಕಿರೀಟವನ್ನು ಸಹ ಹೊಂದಿರುತ್ತವೆ. ಹೆಚ್ಚಿನ ಗಿಳಿಗಳು ಜೀವನಪರ್ಯಂತ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಅತಿ ಸಣ್ಣ ಗಿಳಿಯು ೩.೨ ಅಂಗುಲ ಉದ್ದ ಮತ್ತು ೧೦ ಗ್ರಾಂ ತೂಕವುಳ್ಳದ್ದಾಗಿದ್ದರೆ ಅತಿ ದೊಡ್ಡ ಗಿಳಿಯು ೩.೩ ಅಡಿ ಉದ್ದ ಮತ್ತು ೪ ಕಿಲೋಗ್ರಾಂ ತೂಕ ಹೊಂದಿರುತ್ತದೆ. ಹೀಗೆ ಪಕ್ಷಿಸಂಕುಲದಲ್ಲಿಯೇ ಅತಿ ಹೆಚ್ಚಿನ ದೇಹಪ್ರಮಾಣದ ವೈವಿಧ್ಯ ಗಿಳಿಗಳಲ್ಲಿ ಕಂಡುಬರುವುದು. ಗಿಳಿಗಳ ಆಹಾರವಸ್ತುಗಳು ಮುಖ್ಯವಾಗಿ ಬೀಜಗಳು, ಕಾಳು, ಹಣ್ಣು, ಮೊಗ್ಗು ಮತ್ತಿತರ ಸಸ್ಯಜನ್ಯವಸ್ತುಗಳು. ಕೆಲ ತಳಿಯ ಗಿಳಿಗಳು ಕೀಟ ಮತ್ತು ಸಣ್ಣ ಪ್ರಾಣಿಗಳನ್ನು ಸಹ ತಿನ್ನುವುದಿದೆ.
ಲೋರೀಸ್ ಮತ್ತು ಲೋರಿಕೀಟ್‌ಗಳು ಮಕರಂದವನ್ನು ಹೀರುವಲ್ಲಿ ನೈಪುಣ್ಯವನ್ನು ಹೊಂದಿವೆ. ಬಹುತೇಕ ಗಿಳಿಗಳು ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ಗಿಳಿಯ ಬಿಳಿ ಮೊಟ್ಟೆಯಿಂದ ಹೊರಬರುವ ಮರಿಯು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿರುತ್ತದೆ. ಗಿಳಿಯು ತೀಕ್ಷ್ಣಮತಿ ಪಕ್ಷಿಗಳ ಗುಂಪಿಗೆ ಸೇರಿದೆ. ಕೆಲವು ತಳಿಯ ಗಿಳಿಗಳು ಮಾನವನ ಧ್ವನಿಯನ್ನು ಬಲುಮಟ್ಟಿಗೆ ಅನುಕರಿಸುತ್ತವೆ. ಹೀಗಾಗಿ ಇವು ಮಾನವನಿಗೆ ಅತಿ ಮುದ್ದಿನ ಸಾಕುಪಕ್ಷಿಯಾಗಿ ಹೆಸರಾಗಿವೆ. ಪಳಗಿಸಲೋಸುಗ ಹಿಡಿಯುವಿಕೆ, ಬೇಟೆಯಾಡುವಿಕೆ ಮತ್ತು ಇತರ ಪಕ್ಷಿಕುಲಗಳಿಂದ ದಾಳಿ ಇವೇ ಮುಂತಾದ ಕಾರಣಗಳಿಂದ ಇಂದು ಕಾಡಿನ ಗಿಳಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇವನ್ನು ಉಳಿಸಿಕೊಳ್ಳುವಲ್ಲಿ ವಿಶ್ವದ ಹಲವೆಡೆ ಗಂಭೀರ ಯತ್ನಗಳು ಸಾಗಿವೆ.

ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲೇಷ್ಯಾಗಳಲ್ಲಿ ಕಾಣಬರುವ ಗಿಳಿಗಳ ವೈವಿಧ್ಯದಿಂದ ಇವುಗಳು ಮೂಲತಃ ಗೊಂಡ್ವಾನಾಗೆ ಸೇರಿರಬಹುದೆಂದು ತಿಳಿಯಲಾಗಿದೆ. ಸುಮಾರು ೭ ಕೋಟಿ ವರ್ಷಗಳಷ್ಟು ಹಳೆಯದಾದ ಗಿಳಿಯ ಪಳೆಯುಳಿಕೆಯೊಂದು ಈವರೆಗೆ ದೊರೆತಿರುವ ಅತಿ ಪ್ರಾಚೀನ ಮಾದರಿ. ಕೊಕ್ಯಾಟೂ ತಳಿಯ ಗಿಳಿಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು ತಲೆಯ ಮೇಲೆ ಪುಕ್ಕಗಳ ಗುಚ್ಛವನ್ನು ಹೊಂದಿರುತ್ತವೆ. ಇತರ ಜಾತಿಯ ಗಿಳಿಗಳಿಗಿಂತ ಇವುಗಳ ರಕ್ತನಾಳಗಳ ರಚನೆ, ತಲೆಬುರುಡೆ ಬೇರೆ ರೀತಿಯವಾಗಿವೆ. ಅಲ್ಲದೆ ಇವುಗಳ ಗರಿಗಳ ರೂಪುರೇಷೆಗಳು ಭಿನ್ನವಾಗಿದ್ದು ಬೆಳಕನ್ನು ಚದುರಿಸುವಲ್ಲಿ ಅಸಮರ್ಥವಾಗಿವೆ. ಈ ಕಾರಣದಿಂದಾಗಿ ಕೊಕ್ಯಾಟೂ ಗಿಳಿಗಳು ಸಿಟ್ಟಸೀಡೇ ಗಿಳಿಗಳಂತೆ ಹೊಳೆಯುವ ವಿಭಿನ್ನ ಆಕರ್ಷಕ ಬಣ್ಣವನ್ನು ಹೊಂದಿರುವುದಿಲ್ಲ. ಅಮೆಜಾನ್ ಗಿಳಿ, ಮಕಾವ್, ದೊಡ್ಡ ಕೊಕ್ಯಾಟೂ ಇಂತಹ ಗಿಳಿಗಳ ಜೀವಿತಾವಧಿ ೮೦ ವರ್ಷಗಳವರೆಗೆ ಇರುತ್ತದೆ. ನೂರು ವರ್ಷ ಬಾಳಿದ ಗಿಳಿಗಳ ಬಗ್ಗೆ ದಾಖಲೆಗಳು ಲಭ್ಯ. ಸಣ್ಣ ಜಾತಿಯ ಗಿಳಿಗಳು ಸಾಮಾನ್ಯವಾಗಿ ೧೫ ರಿಂದ ೨೦ ವರ್ಷಗಳವರೆಗೆ ಬಾಳುತ್ತವೆ.
ಬೀಜಗಳು, ಹಣ್ಣೂ, ಮಕರಂದ, ಮೊಗ್ಗು ಇವು ಗಿಳಿಗಳ ಮುಖ್ಯ ಆಹಾರವಾಗಿವೆ. ಕೆಲ ಜಾತಿಯವು ಕೀಟಗಳು ಮತ್ತು ಸಣ್ಣ ಪ್ರಾಣಿಗಳನ್ನು ಸಹ ತಿನ್ನುವುದಿದೆ. ಆದರೆ ಸಾಮಾನ್ಯವಾಗಿ ಬೀಜಗಳು ಗಿಳಿಗೆ ಅತಿ ಮುಖ್ಯ ಆಹಾರವಸ್ತು. ಬೀಜವನ್ನು ತಮ್ಮ ಕೊಕ್ಕಿನಿಂದ ಕಡಿಉ ಒಡೆದು ಒಳಗಿರುವ ತಿರುಳನ್ನು ಗಿಳಿಯು ಬಲು ಸರಾಗವಾಗಿ ಹೊರತೆಗೆಯಬಲ್ಲುದು. ದೊಡ್ಡ ಗಾತ್ರದ ಬೀಜವಾಗಿದ್ದರೆ ಗಿಳಿಯು ಅದನ್ನು ತನ್ನ ಕಾಲಿನಡಿಯಲ್ಲಿ ಬಿಗಿಯಾಗಿ ಹಿಡಿದಿಟ್ಟು ಕೊಖ್ಖಿನಿಂದ ಒಡೆಯುತ್ತದೆ. ವಿಷಕಾರಿ ಬೀಜಗಳ ಅರಿವಿರುವ ಗಿಳಿಗಳು ಅಂತಹ ಬೀಜಗಳ ಹೊರ ಪರೆಯನ್ನು ಕಳಚಿ ಎಸೆದು ಉಳಿದ ವಿಷರಹಿತ ಭಾಗವನ್ನು ಮಾತ್ರ ತಿನ್ನುತ್ತವೆ. ಲೋರೀ ಮತ್ತು ಲೋರಿಕೀಟ್‌ಗಳು ಮಕರಂದ ಮತ್ತು ಪರಾಗರೇಣುವನ್ನು ಸೇವಿಸುವ ಗಿಳಿಗಳು. ಇವುಗಳ ನಾಲಗೆ ತುದಿಯು ಬ್ರಷ್‌ನಂತಿರುತ್ತದೆ.
ಬಂಧನದಲ್ಲಿ ಇರಿಸಿದ ಕೆಲ ಗಿಳಿಗಳ ಮೇಲೆ ನಡೆಸಲಾದ ಅಧ್ಯಯನಗಳು ಹಲವು ಕೌತುಕಕಾರಿ ಸಂಗತಿಗಳನ್ನು ಹೊರಗೆಡವಿವೆ. ಸರ್ವೇಸಾಮಾನ್ಯವಾಗಿ ಗಿಳಿಯು ಮಾನವಧ್ವನಿಯನ್ನು ಅನುಕರಿಸಬಲ್ಲುದು. ಕೆಲ ಗಿಳಿಗಳು ಪದವನ್ನು ಅದರ ಅರ್ಥದೊಂದಿಗೆ ಜೋಡಿಸಬಲ್ಲ ಸಾಮರ್ಥ್ಯ ಹೊಂದಿದ್ದು ಸಣ್ಣ ಹಾಗೂ ಸರಳ ವಾಕ್ಯಗಳನ್ನು ನುಡಿಯಬಲ್ಲವು. ಕಾಗೆ, ರಾವೆನ್ ಮತ್ತು ಜೇ ಹಕ್ಕಿಗಳೊಂದಿಗೆ ಗಿಳಿಯು ಸಹ ಅತಿ ಬುದ್ಧಿಶಾಲಿ ಪಕ್ಷಿಯೆಂದು ಹೆಸರಾಗಿದೆ. ಇತರ ಹಕ್ಕಿಗಳಿಗೆ ಹೋಲಿಸಿದಾಗ ಗಿಳಿಯ ದೇಹ ಮತ್ತು ಮೆದುಳಿನ ಅನುಪಾತ ಗಮನಾರ್ಹವಾಗಿ ಹೆಚ್ಚಾಗಿದ್ದು ಕೆಲ ಮೇಲ್ಸ್ತರದ ಪ್ರಾಣಿಗಳ ಸಾಲಿನಲ್ಲಿ ನಿಲ್ಲುತ್ತದೆ. ಗಿಳಿಗಳು ಶೈಶವಾವಸ್ಥೆಯಿಂದಲೇ ಸಾಮಾಜಿಕ ನಡವಳಿಕೆಯನ್ನು ಕಲಿಯುತ್ತವೆ. ಅನೇಕ ತಳಿಗಳಲ್ಲಿ ಎಲ್ಲಾ ಮರಿಗಳನ್ನು ಒಂದೇ ಕಡೆ ಸೇರಿಸಿ ಬಾಲವಾಡಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವ್ಯವಸ್ಥೆಯು ಮರಿಗಳಿಗೆ ಸಾಮಾಜಿಕ ನಡವಳಿಕೆಗಳಲ್ಲಿ ಸಾಕಷ್ಟು ಅನುಭವ ನೀಡುತ್ತದೆ. ಆಹಾರಸೇವನೆಯ ರೀತಿನೀತಿಗಳನ್ನು ಮರಿಗಳು ತಂದೆತಾಯಿಯರಿಂದ ಕಲಿಯುತ್ತವೆ. ಈ ವಿದ್ಯಾಭ್ಯಾಸ ಬಲು ದೀರ್ಘಕಾಲದ್ದಾಗಿರುತ್ತದೆ. ಮಾನವಶಿಶುಗಳಂತೆಯೇ ಗಿಳಿಮರಿಗಳಲ್ಲಿ ಕೂಡ ಆಟವಾಡುವುದು ಕಲಿಯುವಿಕೆಯ ಬಲು ಮುಖ್ಯ ಅಂಗವಾಗಿದೆ.

ಗಿಳಿಗಳಲ್ಲಿ ಧ್ವನಿಪೆಟ್ಟಿಗೆ ಇರುವುದಿಲ್ಲ. ಹೀಗಾಗಿ ಗಿಳಿಯು ಹೊರಡಿಸುವ ಧ್ವನಿಯು ವಾಸ್ತವದಲ್ಲಿ ಶಿಳ್ಳೆಯಾಗಿದೆ. ಅನೇಕ ತಳಿಗಳ ಗಿಳಿಗಳು ಮಾನವಧ್ವನಿ ಯಾ ಇತರ ಶಬ್ದಗಳನ್ನು ಯಥಾವತ್ತಾಗಿ ಅನುಕರಿಸಬಲ್ಲವು. ಕೆಲ ಗಿಳಿಗಳು ವಸ್ತುಗಳನ್ನು ಗುರುತಿಸುವ, ವಿವರಿಸುವ ಹಾಗೂ ಎಣಿಸುವ ಸಾಮರ್ಥ್ಯವನ್ನು ಸಹ ಹೊಂದಿವೆ. ಸರಳ ವಾಕ್ಯಗಳನ್ನು ರಚಿಸಬಲ್ಲ ಕೆಲ ಗಿಳಿಗಳು ಒಂದು ಸಾವಿರ ಪದಗಳ ಶಬ್ದಭಾಂಡಾರವನ್ನು ಸಹ ಇರಿಸಿಕೊಳ್ಳಬಲ್ಲವು. ಈ ವಿಶಿಷ್ಟ ಸಾಮರ್ಥ್ಯವು ಗಿಳಿಗಳನ್ನು ಮಾನವನ ಅತಿ ಮುದ್ದಿನ ಮತ್ತು ಪ್ರಿಯವಾದ ಸಾಕುಪ್ರಾಣಿ(ಪಕ್ಷಿ)ಯನ್ನಾಗಿಸಿದೆ. ಗಮನಿಸಬೇಕಾದ ಅಂಶವೆಂದರೆ ಗಿಳಿಗೆ ಮಾತು ಕಲಿಸುವುದು ಒಂದು ದೀರ್ಘಕಾಲದ ಶ್ರಮದಾಯಕ ಕೆಲಸ ಹಾಗೂ ಎಲ್ಲಾ ಗಿಳಿಗಳು ಮಾತನಾಡುವಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪಲಾರವು.
ಗಿಳಿಗಳ ಮತ್ತು ಮಾನವನ ನಡುವಿನ ಸಂಬಂಧ ಸಂಕೀರ್ಣವಾದುದು. ಒಂದೆಡೆ ಸಾಕುಪಕ್ಷಿಗಳ ಮಾರಾಟದ ದಂಧೆ ಮತ್ತು ಪ್ರವಾಸಿ ಆಕರ್ಷಣೆಯಾಗಿ ಗಿಳಿಯು ಮಾನವನಿಗೆ ಆರ್ಥಿಕವಾಗಿ ಲಾಭದಾಯಕವಾಗಿದ್ದರೆ, ಇನ್ನೊಂದೆಡೆ ಕೆಲ ತಳಿಯ ಗಿಳಿಗಳು ಕೃಷಿಕನಿಗೆ ಪೀಡೆಯಾಗಿವೆ. ಆಸ್ಟ್ರೇಲಿಯಾದ ಕೊಕ್ಯಾಟೂ ಗಿಳಿಗಳು ಅಲ್ಲಿನ ರೈತರಿಗೆ ಬಲು ದೊಡ್ಡ ಪಿಡುಗಾಗಿವೆ. ಆದರೂ ಸಹ ತನ್ನ ಆಕರ್ಷಕ ಬಣ್ಣಗಳು, ಬುದ್ಧಿಮತ್ತೆ, ಮಾತನಾಡುವ ಸಾಮರ್ಥ್ಯ ಹಾಗೂ ಚಿನ್ನಾಟವಾಡುವ ಸರಸ ಸ್ವಭಾವದಿಂದಾಗಿ ಗಿಳಿಯು ಮಾನವನಿಗೆ ಸದಾ ಪ್ರಿಯವಾದ ಮುದ್ದಿನ ಜೀವಿ.
ಧನ್ಯವಾದಗಳು.
GIPHY App Key not set. Please check settings