in ,

ವೀಣೆ ಶೇಷಣ್ಣ : ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರು

ವೀಣೆ ಶೇಷಣ್ಣ
ವೀಣೆ ಶೇಷಣ್ಣ

‘ವೀಣೆ ಶೇಷಣ್ಣ’ ನವರು, (೧೮೫೨-೧೯೨೬) ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಇವರು ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರಾಗಿದ್ದರು. ವೀಣೆ ಶೇಷಣ್ಣನವರ ತಂದೆ, ’ಬಕ್ಷಿ ಚಿಕ್ಕರಾಮಪ್ಪ’ ನವರೂ ಸಹ ‘ಮುಮ್ಮಡಿ ಕೃಷ್ಣರಾಜ ಒಡೆಯರು’ ಅರಸರಾಗಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನದ ‘ಆಸ್ಥಾನ ವಿದ್ವಾಂಸ’ರಾಗಿದ್ದರು. ಅವರಿಂದ ಮತ್ತು ಮೈಸೂರು ‘ಸದಾಶಿವರಾಯ’ರಿಂದ ಸಂಗೀತವನ್ನು ಕಲಿತ ‘ಶೇಷಣ್ಣ’ನವರು ವೀಣೆ ನುಡಿಸುವುದರಲ್ಲಿ ಪರಿಣಿತಿಯನ್ನು ಪಡೆದರು. ವೀಣೆ ಮಾತ್ರವಲ್ಲದೆ ‘ಪಿಯಾನೊ’, ‘ಪಿಟೀಲು’, ‘ಸಿತಾರ್’ ಮೊದಲಾದ ವಾದ್ಯಗಳನ್ನೂ ನುಡಿಸುತ್ತಿದ್ದ ಶೇಷಣ್ಣನವರು ಕೆಲವು ರಚನೆಗಳನ್ನೂ ರಚಿಸಿದ್ದಾರೆ.

ಸ್ವಾತಂತ್ರ್ಯಪೂರ್ವ ಭಾರತದ ಅನೇಕ ಅರಸರು ಇವರನ್ನು ಸನ್ಮಾನಿಸಿದ್ದರು. ಬರೋಡದ ಮಹಾರಾಜರು ಬರೋಡದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ವೀಣೆ ಶೇಷಣ್ಣನವರನ್ನು ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿದ್ದರಂತೆ. ‘ವಿಕ್ಟೋರಿಯ ರಾಣಿ’ಯ ಮರಣಾನಂತರ ಗದ್ದುಗೆಗೆ ಬಂದ, ಇಂಗ್ಲೆಂಡಿನ ಅಂದಿನ ರಾಜ, ಐದನೇ ಜಾರ್ಜ್ ದೆಹಲಿಯಲ್ಲಿ ಆಯೋಜಿಸಿದ ಅವರ ದರ್ಬಾರ್ ಸಮಯದಲ್ಲಿ ಶೇಷಣ್ಣನವರ ಸಂಗೀತ-ಕಛೇರಿಯನ್ನು ಕೇಳಿ, ಸಂಪ್ರೀತರಾಗಿ ಅವರ ಒಂದು ‘ತೈಲ ಚಿತ್ರ’ವನ್ನು ತಮ್ಮ ಅರಮನೆಯಲ್ಲಿ ಇಟ್ಟುಕೊಳ್ಳಲು ‘ಲಂಡನ್ ನ ಬಕಿಂಗ್ ಹ್ಯಾಂ ಅರಮನೆ’ಗೆ ತೆಗೆದುಕೊಂಡು ಹೋಗಿದ್ದರಂತೆ. ೧೯೨೪ ರ, ‘ಬೆಳಗಾವಿಯ ಕಾಂಗ್ರೆಸ್ ಅಧಿವೇಶನ’ದಲ್ಲಿ ‘ಮಹಾತ್ಮ ಗಾಂಧಿ’ಯವರು, ಮತ್ತು ಅವರ ಜೊತೆಗಾರರು, ತಮ್ಮ ಇತರ ಕೆಲಸಗಳನ್ನು ಮುಂದೂಡಿ, ಹಲವು ತಾಸುಗಳ ಕಾಲ ಮಂತ್ರಮುಘ್ದರಾಗಿ, ಶೇಷಣ್ಣನವರ ಕಛೇರಿಯನ್ನೇ ಕೇಳುತ್ತಾ ಕುಳಿತಿದ್ದರಂತೆ. ತಮ್ಮ ಭಾವಪೂರ್ಣ ವೀಣಾವಾದನದ ವಿಶಿಷ್ಟ ವೈಖರಿಯಿಂದ ಹಾಗೂ ತಮ್ಮದೇ ಆದ ವಿಶೇಷ ಪ್ರತಿಭೆಯಿಂದ ಮೈಸೂರಿಗೆ, ಕರ್ನಾಟಕಕ್ಕೆ, ಕಲಾಪ್ರಪಂಚದಲ್ಲೇ ಅತ್ಯುನ್ನತವಾದ ಸ್ಥಾನವನ್ನು ಗಳಿಸಿಕೊಟ್ಟು ’ವೀಣೆಯ ಬೆಡಗಿದು ಮೈಸೂರು,’ ಎಂದು ಮೈಸೂರನ್ನು ಗುರುತಿಸುವಂತೆ ಮಾಡಿದವರು, ’ವೀಣೆ ಶೇಷಣ್ಣನವರು.”

ವೀಣೆ ಶೇಷಣ್ಣ : ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರು
ವೀಣೆ ಶೇಷಣ್ಣ

‘ಅಸ್ಥಾನದ ಪೋಷಾಕಿ’ ನಲ್ಲಿ ಶೇಷಣ್ಣನವರು ಅದ್ಭುತವಾಗಿ ಕಾಣಿಸುತ್ತಿದ್ದರು. ಅತ್ಯಂತ ಗೆಲುವಿನ ಹಾಗೂ ಗೌರವಾನ್ವಿತ, ಆಕರ್ಷಕ ವ್ಯಕ್ತಿತ್ವ ಅವರದು. ಬೇರೆಯವರಿಗೆ ಹೋಲಿಸಿದರೆ ಅತಿ ಸರಳವೂ ಆಡಂಬರವಿಲ್ಲದ ಉಡುಪಾಗಿತ್ತು. ಆಗಿನಕಾಲದ ಪೋಷಾಕಿನ ಪದ್ಧತಿಯಂತೆ, ಕೊಕ್ಕರೆ ಬಿಳುಪಿನ ಕಚ್ಚೆ ಪಂಚೆ, ಉದ್ದವಾದ ಕಪ್ಪು ಕೋಟಿನ ಮೇಲೆ ಬಿಳಿಯ ಮಡಿಸಿದ ಅಂಗವಸ್ತ್ರ, ಹಾಗೂ ಬಿಳಿಯ ಪೇಟ ಧರಿಸುತ್ತಿದ್ದರು. ದಟ್ಟವಾದ ಮೀಸೆ, ವಿಶಾಲವಾದ ಹಣೆಯ ಮೇಲೆ ನಾಮ ಹಾಗೂ ಅಕ್ಷತೆ ರಂಜಿಸುತ್ತಿತ್ತು. ಕುತ್ತಿಗೆಯನ್ನು ಯಾವಾಗಲೂ ಎತ್ತರದಲ್ಲಿ ಇಟ್ಟುಕೊಂಡೇ ನಡೆಯುತ್ತಿದ್ದ, ಹೊಳಪಿನ ಕಣ್ಣುಗಳ, ಅಷ್ಟೇನೂ ಭರ್ಜರಿ ಆಳಲ್ಲದಿದ್ದರೂ ದೂರದಿಂದಲೇ ಕಂಡುಹಿಡಿಯಬಹುದಾದ ಪ್ರಭಾವೀ ವ್ಯಕ್ತಿತ್ವ.

ವೀಣೆನುಡಿಸಲೋಸ್ಕರವೇ ದೇವರು ದಯಪಾಲಿಸಬಹುದಾದ ಉದ್ದವಾದ ಬೆರಳುಗಳು, ಅವರ ಇರುವಿಕೆಯಿಂದ ಸಭಾಂಗಣದ ಮಹತ್ವ ಉಜ್ವಲವಾಗಿರುತ್ತಿತ್ತು. ವೀಣೆನುಡಿಸಲು ಕುಳಿತರೆಂದರೆ ಯೋಗಿಯನ್ನು ಮೀರಿಸುವ ‘ತಪಶ್ಚರ್ಯೆ’ ಅವರ ಮುಖದಮೇಲೆ ಪ್ರಖರವಾಗಿ ಕಾಣಿಸುತ್ತಿತ್ತು. ತಮ್ಮ ೨೬ ವರ್ಷಗಳ ವಯಸ್ಸಿನಲ್ಲಿಯೇ, ದಕ್ಷಿಣ ಭಾರತದ ರಾಜಮಹಲ್ ಗಳಲ್ಲಿ ಮಠಗಳಲ್ಲಿ, ಜಮೀನ್ದಾರದ ಗೃಹಗಳಲ್ಲಿ, ಹಾಗೂ ಅವರ ವಾದ್ಯಸಂಗೀತಾಭಿಲಾಶಿಗಳ ಸಮ್ಮುಖದಲ್ಲಿ ನಡೆಸಿಕೊಟ್ಟಿದ್ದರು. ಆ ಸಮಯದಲ್ಲಿ ಈಗಿನಂತೆ ‘ಸಾರ್ವಜನಿಕ ಸಭೆ’ಗಳಲ್ಲಿ ಇಂತಹ ‘ಸಂಗೀತ ವಾದ್ಯ ಕಾರ್ಯಕ್ರಮಗಳು’ ಇರಲೇ ಇಲ್ಲ.

ಶೇಷಣ್ಣನವರ ಮನೆತನ :

ಶೇಷಣ್ಣನವರ ತಂದೆಯವರು, ‘ಚಿಕ್ಕರಾಮಯ್ಯನವರು’, ಅವರು ‘ಮಾಧ್ವ ಬ್ರಾಹ್ಮಣರು’, ಹಾಗೂ ‘ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನವಿದ್ವಾಂಸರಾಗಿದ್ದರು’. ಅವರಿಗೆ ‘ವೀಣಾಭಕ್ಷಿ ಚಿಕ್ಕರಾಮಪ್ಪ’ನವರೆಂದೇ ಹೆಸರಾಗಿತ್ತು. ‘ತಾಯಿ’ಯವರೂ ಸಂಗೀತ ವಂಶಜರೇ. ಸುಮಾರು ೧೦ ನೇ ವಯಸ್ಸಿನಲ್ಲೇ ‘ಮುಮ್ಮಡಿ ಕೃಷ್ಣರಾಜವೊಡೆಯರ ಮುಂದೆ ’ಪಲ್ಲವಿ’ಯನ್ನು ಹಾಡಿ ಸನ್ಮಾನಿತರಾಗಿದ್ದರು. ಪ್ರಾರಂಭದಲ್ಲಿ ತಂದೆಯವರಿಂದ ಸಂಗೀತ ಪಾಠ ನಡೆಯುತ್ತಿತ್ತು. ಆದರೆ, ವಿಧಿವಶಾತ್ ಶೇಷಣ್ಣನವರ ೧೩ ನೆ ವಯಸ್ಸಿನಲ್ಲಿಯೇ ತಂದೆಯವರು ಮರಣಹೊಂದಿದರು. ಆನಂತರ ಸಂಗೀತಾಭ್ಯಾಸವನ್ನು ನಿಲ್ಲಿಸದೆ, ‘ವೀಣಾ ಸುಬ್ಬಣ್ಣನವರ ತಂದೆ’, ‘ದೊಡ್ಡ ಶೇಷಣ್ಣನವರಲ್ಲಿ ಮುಂದುವರೆಸಿದರು. ’ಅಕ್ಕ ವೆಂಕಮ್ಮನವರು’ ತಮ್ಮನ ಸಂಗೀತಾಭ್ಯಾಸಕ್ಕೆ ವಿಶೇಷ ಕಾಳಜಿ ವಹಿಸಿ ಸಹಕಾರ ಕೊಟ್ಟರು. ಶೇಷಣ್ಣನವರಿಗೆ ದೈವದತ್ತವಾಗಿ ಸಂಗೀತ-ಕಲೆ ಒಲಿದಿತ್ತು. ಸತತವಾಗಿ ಸಾಧನೆಮಾಡಿ ಅವರು ತಮ್ಮದೇ ಅದ ಸ್ವತಂತ್ರ ವೀಣಾಶೈಲಿಯನ್ನು ರೂಪಿಸಿಕೊಂಡರು. ವೀಣೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದರು. ಎಂಥವರನ್ನೂ ಮರುಳುಮಾಡುವ ಮೋಡಿಗೊಳಿಸುವ ಸನ್ಮೋಹನಾಸ್ತ್ರ ಬೀರುವ ಅಧ್ಬುತ ಸಂಗೀತ ಅವರದು. ‘ಮನೋಧರ್ಮ ಸಂಗೀತ’ವೇ ಅವರ ಕಛೇರಿಯ ಪ್ರಮುಖಭಾಗವಾಗಿರುತ್ತಿತ್ತು. ಕೆಲವೇ ಆಯ್ದ ಕೀರ್ತನೆಗಳನ್ನು ತೆಗೆದುಕೊಂಡು ಅದ್ಭುತವಾಗಿ ನುಡಿಸುತ್ತಿದ್ದರು. ’ತಿಲ್ಲಾನ’ ’ಜಾವಳಿಗಳು’ ಕಛೇರಿಯ ಅಂತ್ಯದಲ್ಲಿ ನುಡಿಸಲ್ಪಡುತ್ತಿದ್ದವು. ರಸಿಕರಿಗೆ ಅವುಗಳ ಆಕರ್ಷಣೆ ಹೆಚ್ಚಾಗಿತ್ತು. ’ತಾನ ಪ್ರಸ್ತುತಿ’ಯಲ್ಲಿ ಎತ್ತಿದ ಕೈ. ತಮ್ಮ ಜೀವಮಾದದಲ್ಲಿ ಎಂದೂ ಅವರು ಅಹಂಭಾವದಿಂದ ನಡೆದುಕೊಂಡ ಕ್ಷಣಗಳಿರಲಿಲ್ಲ. ’ನಾದಾನು ಸಂಧಾನದ ಉದ್ಘಾರ’ಳೆಂಬ, ’ಭಲೆ’, ’ಆಹಾ’, ’ಭೇಷ್’ ಇತ್ಯಾದಿ ಪದಗಳು ಅವರಿಗೆ ಅರಿವಿಲ್ಲದೆ ಮೂಡಿಬರುತ್ತಿದ್ದವು. ಸುಮಾರು ೨ಂ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರಾಗಿದ್ದ ಶೇಷಣ್ಣನವರು ಪಿಟೀಲು, ಪಿಯಾನೋ, ಸ್ವರಬತ್, ಜಲತರಂಗ, ನಾಗಸ್ವರ, ಹಾರ್ಮೋನಿಯಮ್, ಮಯೂರ ವಾದ್ಯ, ಮೃದಂಗ, ಇತ್ಯಾದಿಗಳನ್ನು ನುಡಿಸುತ್ತಿದ್ದರು. ಹಲವು ವೇಳೆ ಯಾವುದಾದರೂ ಸಂಗೀತ ಕಛೇರಿಯಲ್ಲಿ ವೈಲಿನ್ ಪಕ್ಕವಾದ್ಯದವರು ಬರದಿದ್ದಾಗ, ವೈಲಿನ್ನನ್ನು ತಾವೇ ನುಡಿಸಿ ಸಹಕರಿಸಿದ ಸನ್ನಿವೇಶಗಳಿವೆ.

ವೀಣೆ ಶೇಷಣ್ಣ : ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರು
ಮುಮ್ಮಡಿ ಕೃಷ್ಣರಾಜ ಒಡೆಯರು

ವೈಣಿಖ ಶಿಖಾಮಣಿ’ ಬಿರುದು :

‘ಮುಮ್ಮಡಿ ಕೃಷ್ಣರಾಜ ಒಡೆಯರು ‘ಪಟ್ಟಕ್ಕೆ ಬಂದ ಸಮಯದಲ್ಲೇ ವೈಣಿಕ ಶೇಷಣ್ಣನವರ ವೀಣಾವಾದನದ ಮಾಧುರ್ಯದಿಂದ ಪ್ರಭಾವಿತರಾಗಿದ್ದ ಮಹಾರಾಜರು, ’ವೈಣಿಖ ಶಿಖಾಮಣಿ’ ಬಿರುದನ್ನು ದಯಪಾಲಿಸಿದ್ದರು. ‘ಜಯಚಾಮರಾಜ ವೊಡೆಯರು’, ‘ಶೇಷಣ್ಣ’ನವರನ್ನು ತಮ್ಮ ಅರಮನೆಯ ‘ಆಸ್ಥಾನವಿದ್ವಾಂಸ’ರ ನ್ನಾಗಿ ನೇಮಿಸಿದರು.’ಸುಬ್ಬಣ್ಣನವರ ಗಾಯನ’, ‘ಶೇಷಣ್ಣನವರ ವೀಣೆ’, ‘ಮಹಾರಾಜರ ಪಿಟೀಲು,’ ‘ಅಪರೂಪದ ಭಾವಾನು ಸಂಧನ’ದ ‘ಸಂಗೀತ ಮೇಳ’ವಾಗಿತ್ತೆಂದು ನೆನೆಸುತ್ತಿದ್ದರು. ಮೈಸೂರು ಸಂಸ್ಥಾನದ ಅರಸರ ಪ್ರತಿಷ್ಠೆ ಮತ್ತು ಭಾಗ್ಯದ ಸಂಕೇತವಾಗಿ ಶೇಷಣ್ಣನವರ ಸಂಗೀತ ಪರಿಗಣಿಸಲ್ಪಟ್ಟಿತ್ತು. ‘ರಾಮನಾಥ ಪುರಂ ಭಾಸ್ಕರ ಸೇತುಪತಿ ಮಹಾರಾಜರು’ ನವರಾತ್ರಿ ಮೊದಲ ದಿನದಲ್ಲಿ ಏರ್ಪಡಿಸಿದ್ದ ಶೇಷಣ್ಣನವರ ವೀಣೆಯನ್ನು ಸತತ ಕೇಳಬೇಕೆಂದು ವಿನಂತಿಸಿದರು. ಇಡೀ ನವರಾತ್ರಿ ಹಬ್ಬ ಅರಮನೆಯಲ್ಲಿ ‘ವೀಣಾಮೃತ ಸುಧೆ’ಯನ್ನು ಹರಿಸಿದ ಶೇಷಣ್ಣನವರಿಗೆ ’ಕನಕಾಭಿಶೇಕ’ಮಾಡಿಸಿ ಅಂಬಾರಿಯಮೇಲೆ ಮೆರವಣಿಗೆ ಮಾಡಿಸಿದರಂತೆ. ಅನಂತರ, ಪ್ರತಿವರ್ಷವೂ ಇದೇ ತರಹದ ಸಂಗೀತೋತ್ಸವ ಇದ್ದೇ ಇರುತ್ತಿತ್ತು.

ಬರೋಡಾ ಸಂಸ್ಥಾನದಲ್ಲಿ :

ವೀಣೆ ಶೇಷಣ್ಣ : ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರು
ಸಯ್ಯಾಜಿರಾವ್ ಗಾಯಕವಾಡ್

‘ಸಯ್ಯಾಜಿರಾವ್ ಗಾಯಕವಾಡ್ ‘ರವರು, ಮತ್ತು ಅವರ ಮಹಾರಾಣಿಯವರು ಸತತ ಮೂರು ದಿನಗಳ ವೀಣಾವಾದನವನ್ನು ಏರ್ಪಡಿಸಿ, ಸಕಲ ರಾಜಮರ್ಯಾದೆಗಳೊಂದಿಗೆ ಸನ್ಮಾನಿಸಿ ರಾಣಿಯವರು ಸ್ವತಃ ಬಳಸುತ್ತಿದ್ದ ಮೇನೆಯನ್ನು ಬಹುಮಾನವಾಗಿ ನೀಡಿದರು. ಶೇಷಣ್ಣನವರು ಮೈಸೂರಿಗೆ ವಾಪಸ್ ಬಂದಾಗ ಒಡೆಯರೂ ಹೆಮ್ಮೆಯಿಂದ ಬೀಗಿಹೋಗಿ ಮೈಸೂರಿನಲ್ಲೂ ‘ರಾಜಲಾಂಛನ’ದಲ್ಲಿ ವಿಶೇಷವಾಗಿ ಸತ್ಕಾರನೀಡಿದರು. ಮಹಾರಾಜರು, ಶೇಷಣ್ಣನವರಿಗೆ, ಮೇನೆಯಲ್ಲಿ ಉಪಾಸೀನರಾಗಬೇಕೆಂದು ಕೊಂಡಾಗ ಸುತರಾಂ ಒಪ್ಪದೆ, ’ನಾನು ಕಲಾವಿದನಷ್ಟೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ವೀಣೆಯನ್ನು ನುಡಿಸಿದ್ದೇನೆ. ವೀಣೆಯ ಸಾಮರ್ಥ್ಯಕ್ಕೆ ನಾನು ನುಡಿಸಬಲ್ಲೆನೇ’ ಎಂದು ಹೇಳಿ ವೀಣೆಯನ್ನು ಮೇನೆಯ ಪಲ್ಲಕ್ಕಿಯಲ್ಲಿ ಇಟ್ಟು ಮುಂದೆ ತಾವು ವಿನೀತರಾಗಿ ನಡೆದರಂತೆ. ತಂಜಾವೂರಿನಕೃಷ್ಣಸ್ವಾಮಿ ನಾಯಕರ ಮನೆಯಲ್ಲಿ ನಡೆದ ಒಂದು ‘ಸಂಗೀತ ಗೋಷ್ಠಿ’ಯಲ್ಲಿ ಶೇಷಣ್ಣನವರೊಂದಿಗೆ ಮಹಾವೈದ್ಯನಾಥ ಅಯ್ಯರ್, ಶರಭಶಾಸ್ತ್ರಿ, ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಮೊದಲಾದ ವಿದ್ವಾಂಸರುಗಳ ಕಲಾ ವಿನಿಕೆಯಲ್ಲಿ ಪರಸ್ಪರ ಅವರುಗಳಲ್ಲೇ ತೀರ್ಮಾನವಾಗುವ ‘ಶ್ರೇಷ್ಟ ವಿದ್ವಾಂಸರಿಗೆ’ ಅತ್ಯಂತ ಬೆಲೆ ಬಾಳುವ ’ಸೀಮೇಕಮಲದ ಉಂಗುರ’, ಬಹುಮಾನವಾಗಿತ್ತು. ಕಛೇರಿಯ ಕೊನೆಯಲ್ಲಿ ‘ಮಹಾವೈದ್ಯನಾಥ ಅಯ್ಯರ್’ ಮಾತನಾಡಿ, ವೀಣೆ ಶೇಷಣ್ಣನವರದ್ದು ಊಹೆಗೆ ನಿಲುಕದ ಮನೋಧರ್ಮ ಆ ನಾದ ಮಾಧುರ್ಯಕ್ಕೆ ನಾವೆಲ್ಲಾ ಮನಸೋತಿದ್ದೇವೆ. ಇಂದಿನ ಬಹುಮಾನ ನಿಷ್ಪಕ್ಷಪಾತವಾಗಿ ಅವರಿಗೇ ಸಲ್ಲಬೇಕು.

ಪ್ರತಿದಿನವೂ ಶೇಷಣ್ಣನವರ ಮನೆಯಲ್ಲಿ ‘ವಿದ್ವಾಂಸರ ಗೋಷ್ಟಿ ಕಛೇರಿಗಳು’ ನಡೆದಿರುತ್ತಿತ್ತು. ಇದಲ್ಲದೆ, ಶ್ರೀಕೃಷ್ಣ ಜನ್ಮಾಷ್ಟಮಿ, ರಾಮನವಮಿ ಹಬ್ಬಗಳಲ್ಲಿ ೧೦ದಿನಗಳು, ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತ ತಮ್ಮ ಮನೆಯ ಮಹಡಿಯ ಮೇಲೆ ವೀಣಾಸಂಗೀತದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಅರಮನೆಯಲ್ಲಿ ಹೋಗಲಾರದ ಶ್ರೋತೃಗಳಿಗೆ ಈ ಸೌಲಭ್ಯ ಮುದನೀಡಿತ್ತು. ಶೇಷಣ್ಣನವರು ತಮ್ಮ ಅಂತ್ಯದದಿನಗಳಲ್ಲಿ “ನನಗೆ ಸಾವಿನ ಭಯವಿಲ್ಲ ; ಆದರೆ, ಈ ವೀಣೆಯನ್ನು ಬಿಟ್ಟು ನಾನೊಬ್ಬನೆ ಹೋಗಬೇಕಲ್ಲಾ ಎನ್ನುವ ಸಂಕಟ,” ಎನ್ನುತ್ತಿದ್ದರು.

ಪಾಶ್ಚಾತ್ಯ ಸಂಗೀತ ವಿದ್ವಾಂಸರು,’ ‘ ಶೇಷಣ್ಣನವರ ವೀಣಾವಾದನದ ಅದ್ಭುತ ಶೈಲಿ’ಯನ್ನು ಕಂಡು ಬೆರಗಾಗಿ, ಈ ‘ಉಪಾಧಿ’ ಯನ್ನು ಕೊಟ್ಟರು. ನೆಲದ ಮೇಲೆ, ಪದ್ಮಾಸನದಲ್ಲಿ ಗಂಟೆಗಟ್ಟಲೆ ಕುಳಿತು, ‘ಸಂಗೀತದ ಅಮೃತಸುಧೆ’ಯನ್ನೇ ಹರಿಸುತ್ತಿದ್ದ ಅವರು, ‘ಸಂಗೀತಾಭಿಲಾಷಿಗಳಿಗೆಲ್ಲಾ,’ ಅನುಕರಣೀಯರೂ ಹಾಗೂ ಪ್ರಾತಃಸ್ಮರಣೀಯರೂ ಆಗಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗೋವರ್ಧನ ಪೂಜೆ

ಕೃಷ್ಣನ ಕಿರು ಬೆರಳಿನಲ್ಲಿ ನಿಂತ ಗೋವರ್ಧನ ಪೂಜೆ

ಪಪ್ಪಾಯದಷ್ಟೆ ಉಪಯೋಗಿ ಪಪ್ಪಾಯ ಎಲೆಗಳು

ಪಪ್ಪಾಯದಷ್ಟೆ ಉಪಯೋಗಿ ಪಪ್ಪಾಯ ಎಲೆಗಳು