ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸೂರ್ಯ ಶ್ರೀ ಸದಾಶಿವ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಕೃತಿ ರಮಣೀಯವಾದ ಸಣ್ಣ ಹಳ್ಳಿ ಸುರ್ಯ ಎಂಬಲ್ಲಿ ಶತಮಾನಗಳಿಂದ ನೆಲೆ ನಿಂತಿದೆ. ಈ ಕ್ಷೇತ್ರವು ಶ್ರೀ ಕ್ಷೇತ್ರ ಧರ್ಮಸ್ಥಳದ ಸಮೀಪವಿರುವ ಉಜಿರೆಯಿಂದ ೪ ಕಿ.ಮೀ ಹಾಗೂ ತಾಲೂಕು ಕೇಂದ್ರ ಬೆಳ್ತಂಗಡಿಯಿಂದ ಪೂರ್ವಕ್ಕೆ ೮ ಕಿ.ಮೀ ದೂರದಲ್ಲಿದೆ.
ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸುರ್ಯ ಶ್ರೀ ಸದಾಶಿವ ದೇವಸ್ಥಾನವು ಸುರ್ಯ ಎಂಬ ಹಳ್ಳಿಯಲ್ಲಿರುವ ಕಾರಣ ಇದಕ್ಕೆ ‘ಸುರ್ಯ ದೇವಸ್ಥಾನ’ವೆಂಬ ಹೆಸರು ಬಂದಿದೆ. ‘ಸುರ್ಯ’ ಎಂಬ ಹೆಸರು ಬರಲು ಕಾರಣವಾದ ಒಂದು ದಂತಕಥೆ ಇದೆ. ಹಿಂದೆ ಒಬ್ಬಾಕೆ ತನ್ನ ಮಗ ಸುರೆಯನ ಜೊತೆ ಈ ಪ್ರದೇಶದಲ್ಲಿದ್ದ ಕಾಡಿಗೆ ಸೊಪ್ಪು ತರಲೆಂದು ಹೋಗಿದ್ದಳಂತೆ. ಸೊಪ್ಪು ಕಡಿಯುವಾಗ ಸೊಪ್ಪಿನ ನಡುವೆ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ. ಆಗ ಗಾಬರಿಗೊಂಡ ಆಕೆ ತನ್ನ ಮಗನಿಗೆ “ಓ ಸುರೆಯ” ಎಂದು ಕರೆದಳು ಹಾಗೂ ಆ ಘಟನೆಯ ನಂತರ ಈ ಕ್ಷೇತ್ರಕ್ಕೆ ಸುರೆಯ, ಸುರಿಯ, ;ಸುರ್ಯ’ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಅದೇ ರೀತಿ ಆಲಿಂಗರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತು ಎಂಬುದು ಪ್ರತೀತಿ.
ದೇವಸ್ಥಾನದ ಉತ್ತರಕ್ಕೆ ಸುಮಾರು ೧೦೦ ಮೀ. ದೂರದಲ್ಲಿ ಪ್ರಶಾಂತವಾದ ವನರಾಶಿಯ ಮಧ್ಯೆ ಮೇಲಿನ ಘಟನೆ ನಡೆಯಿತೆಂದು ಹೇಳಲಾಗುವ ಪ್ರದೇಶ ಹರಕೆಬನ ಇದೆ. ಈ ಕ್ಷೇತ್ರದ ಮೂಲದ ಬಗ್ಗೆ ಒಂದು ಐತಿಹ್ಯವಿದೆ. ಹಿಂದೆ ಈ ಪ್ರದೇಶದಲ್ಲಿ ಭೃಗು ಮಹರ್ಷಿಯ ಶಿಷ್ಯರೊಬ್ಬರು ತಪಸ್ಸು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವ ಪಾರ್ವತಿಯರು ಪ್ರತ್ಯಕ್ಷವಾಗಿ ಲಿಂಗ ರೂಪದಲ್ಲಿ ಇಲ್ಲಿ ನೆಲೆಯಾದರು ಎಂಬ ಪ್ರತೀತಿಯಿದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆಗಳು ಹಾಗೂ ಶಿಲಾಪಾದಗಳೂ ಇವೆ. ಮಹರ್ಷಿಗಳ ತಪೋಭೂಮಿಯಾಗಿದ್ದ, ದೇವರೊಲಿದ ಪುಣ್ಯಕ್ಷೇತ್ರ, ಕಾಲಾಂತರದಲ್ಲಿ ಸೊಪ್ಪು ಕಡಿಯುವ ಮಹಿಳೆಯ ಮೂಲಕ ಊರಿನ ಮುಖ್ಯಸ್ಥರ, ಗ್ರಾಮಸ್ಥರ ಗಮನಕ್ಕೆ ಬಂದು, ಇದರ ಸಮೀಪದಲ್ಲಿ ದೇವಾಲಯ ನಿರ್ಮಾಣ ಮಾಡಿದರು ಎಂಬುದು ಕ್ಷೇತ್ರದ ಮೂಲದ ಬಗ್ಗೆ ಇರುವ ಐತಿಹ್ಯ. ಇಂದಿಗೂ ಲಿಂಗ ರೂಪಿ ಶಿಲೆಗಳಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಭಕ್ತರಿಂದ ಸಮರ್ಪಿತವಾದ ಹರಕೆ ಗೊಂಬೆಗಳನ್ನು ಈ ಲಿಂಗಗಳ ಸುತ್ತಲೂ ಜೋಡಿಸಿಡಲಾಗುತ್ತದೆ. ಭಕ್ತಾದಿಗಳಿಗೆ ಹಗಲು ವೇಳೆ ಈ ‘ಹರಕೆ ಬನ’ ಸಂದರ್ಶನಕ್ಕೆ ಅವಕಾಶವಿರುತ್ತದೆ.
ಮಣ್ಣಿನ ಹರಕೆಯ ಸಂಪ್ರದಾಯ
ಭಕ್ತ ಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವ ರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯ ಹೇಗೆ ಆರಂಭವಾಯಿತು ಎನ್ನುವುದಕ್ಕೆ ಯಾವುದೇ ಪುರಾವೆ, ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆ ಗೊಂಬೆಗಳ ರಾಶಿಯೇ ಸಾಕ್ಷಿ. ಬೆಳ್ಳಿ, ಬಂಗಾರ, ಹಣ, ದವಸ ಧಾನ್ಯ ಇವ್ಯಾವುದೂ ದುರ್ಲಭವಾದ ಸಂದರ್ಭದಲ್ಲೂ ಭೂಮಿಯಲ್ಲಿ ಲಭ್ಯವಿರುವ ಮಣ್ಣಿನಲ್ಲೇ ಗೊಂಬೆಗಳನ್ನು/ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸುವುದು ಬಹುಶಃ ಅತ್ಯಂತ ದೀನ-ದುರ್ಬಲರಿಗೂ ಸುಲಭಸಾಧ್ಯ ಸರಳ ಪದ್ದತಿಯಾಗಿ ಹಳ್ಳಿಯ ರೈತಾಪಿ ಜನರಿಂದ ಪ್ರಾರಂಭವಾಯ್ತೋ ಏನೋ? ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ.
ಭಕ್ತರು ತಮ್ಮ ಬಯಕೆ/ಸಂಕಲ್ಪಗಳನ್ನು ದೇವರಲ್ಲಿ ನಿವೇದಿಸಿಕೊಂಡು ಪ್ರಾರ್ಥಿಸಿ ಅದು ಈಡೇರಿದ ಮೇಲಷ್ಟೇ ಹರಕೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ. ಉದಾಹರಣೆಗೆ ಒಬ್ಬ ವ್ಯಕ್ತಿ ಒಂದು ಮನೆಯನ್ನು ಕಟ್ಟಿಸಬೇಕೆಂದು ಬಯಸಿದಲ್ಲಿ ಅದು ನಿರ್ವಿಘ್ನವಾಗಿ ನೆರವೇರಿಸಿದರೆ ಸುರ್ಯ ಸದಾಶಿವ ರುದ್ರ ದೇವರಿಗೆ ಹರಕೆ ಒಪ್ಪಿಸುತ್ತೇನೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಮನೆ ನಿರ್ಮಾಣ ಆದ ನಂತರ ಮನೆಯ ಮಣ್ಣಿನ ಆಕೃತಿಯನ್ನು ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ ಹಾಗೂ ಐದು ರೂಪಾಯಿ ಕಾಣಿಕೆಯ ಜೊತೆಗೆ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸುವ ಮೂಲಕ ಹರಕೆ ಒಪ್ಪಿಸಬಹುದು. ಇದೇ ರೀತಿ ಸಂತಾನ ಪ್ರಾಪ್ತಿಗಾಗಿ ತೊಟ್ಟಿಲು ಮಗು, ಮದುವೆಗಾಗಿ ಗಂಡು-ಹೆಣ್ಣಿನ ಗೊಂಬೆ, ವಿದ್ಯಾಭ್ಯಾಸದ ಸಫಲತೆಗಾಗಿ ಪುಸ್ತಕ ಪೆನ್ನು, ದೇಹಾರೋಗ್ಯಕ್ಕಾಗಿ ಮನುಷ್ಯಾಕೃತಿ ಇತ್ಯಾದಿಗಾಗಿ ಹರೆ ಒಪ್ಪಿಸುವ ಪದ್ಧತಿ ಇಲ್ಲಿದೆ. ಕೌಟುಂಬಿಕ ಸಮಸ್ಯೆ,ಆರೋಗ್ಯ, ವಿದ್ಯಾಭ್ಯಾಸ, ವ್ಯವಹಾರ, ಕೃಷಿ, ಇತ್ಯಾದಿ ಜೀವನದ ಎಲ್ಲಾ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ದೇವರಲ್ಲಿ ಪ್ರಾರ್ಥಿಸಿ ಅವು ಈಡೇರಿದಾಗ ಅದಕ್ಕೆ ಸೂಕ್ತವಾದ ಮಣ್ಣಿನ ಗೊಂಬೆಗಳನ್ನು ದೇವರಿಗೆ ಹರಕೆ ಒಪ್ಪಿಸುವುದನ್ನು ಇಲ್ಲಿ ಕಾಣಬಹುದಾಗಿದೆ. ಕಾರು, ಬಸ್ಸು, ವಿಮಾನ, ದೋಣಿ, ಹೆಲಿಕಾಫ್ಟರ್, ಕಟ್ಟಡ, ಕೈ-ಕಾಲು, ಹೃದಯ, ಕಿಡ್ನಿ, ಕಂಪ್ಯೂಟರ್, ಮೇಜು, ಕುರ್ಚಿ, ದನ, ಕರು, ನಾಯಿ, ಕೋಳಿ ಇತ್ಯಾದಿ ನೂರಾರು ತರದ ಮಣ್ಣಿನ ಹರಕೆಗಳನ್ನು ದೇವರಿಗೆ ಅರ್ಪಿಸಿರುವುದನ್ನು ಕಾಣಬಹುದು. ಒಬ್ಬನೇ ವ್ಯಕ್ತಿ ಎಷ್ಟು ಹರಕೆಗಳನ್ನೂ ಹೇಳಿಕೊಳ್ಳಬಹುದಾಗಿದೆ. ಭಕ್ತರು ದೇವಸ್ಥಾನದಲ್ಲಿ ಅರ್ಪಿಸಿದ ಮಣ್ಣಿನ ಹರಕೆ ಗೊಂಬೆಗಳು, ಅಕ್ಕಿ, ತೆಂಗಿನಕಾಯಿಗಳನ್ನು ಮದ್ಯಾಹ್ನದ ಮಹಾಪೂಜೆಯ ಮೊದಲು ದೇವಸ್ಥಾನದ ಬಳಿಯಿರುವ ಹರಕೆ ಬನಕ್ಕೆ ಒಯ್ಯಲಾಗುವುದು. ಅಲ್ಲಿ ಅರ್ಚಕರು ಪೂಜೆ ಸಲ್ಲಿಸಿ ಹರಕೆ ಗೊಂಬೆಗಳನ್ನು ಬನದಲ್ಲಿ ಜೋಡಿಸಿಡುತ್ತಾರೆ. ಈ ಮಣ್ಣಿನ ಗೊಂಬೆಗಳನ್ನು ಆವೆ ಮಣ್ಣಿನಿಂದ ಮಾಡಿ ಕುಲುಮೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ದೇವರಿಗೆ ಅರ್ಪಿಸುವಾಗ ಈ ಗೊಂಬೆಗಳಲ್ಲಿ ಯಾವುದೇ ರೀತಿಯ ಬಿರುಕಿರಬಾರದು. ದೂರದ ಊರಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಈಗ ಎಲ್ಲಾ ರೀತಿಯ ಹರಕೆ ಗೊಂಬೆಗಳನ್ನು ಕುಂಬಾರರಿಂದ ಮಾಡಿಸಿ ದೇವಸ್ಥಾನದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನ ಉತ್ತರಕ್ಕೆ ೫೦ ಮೀ ದೂರದಲ್ಲಿ ಒಂದು ಕೊಳವಿದೆ. ಸುಮಾರು ೭೦*೮೦ ಅಡಿ ವಿಸ್ತಾರವಿರುವ ಕೊಳವು ೩೫ ಅಡಿ ಆಳವಿದೆ. ಕೊಳದ ಮಧ್ಯೆ ಒಂದು ಮಂಟಪವಿದ್ದು, ಇದು ಮಳೆಗಾಲದಲ್ಲಿ ನೀರಿನಲ್ಲಿ ಮಳುಗಿ ಹೋಗುತ್ತದೆ. ಮಾರ್ಚ್ ಏಪ್ರಿಲ್ ನಲ್ಲಿ ನಡೆಯುವ ವರ್ಷಾವಧಿ ‘ಕೆರೆಕಟ್ಟೆ’ ಉತ್ಸವದ ಸಂದರ್ಭದಲ್ಲಿ ಈ ಮಂಟಪದಲ್ಲಿ ದೇವರಿಗೆ ಕೆರೆ ಕಟ್ಟೆ ಪೂಜೆ ನಡೆಯುತ್ತದೆ. ಈ ದೇವಸ್ಥಾನವನ್ನು ಯಾವಾಗ ನಿರ್ಮಾಣಮಾಡಲಾಯಿತು ಎನ್ನುವುದರ ಬಗ್ಗೆ ನಿಖರಮಾಹಿತಿಯಿಲ್ಲ. ದೇವಸ್ಥಾನದ ಒಳಾಂಗಣದಲ್ಲಿ ಮಂಟಪದಲ್ಲಿರುವ ನಂದಿಯ ವಿಗ್ರಹದ ಪೀಠದಲ್ಲಿ “ಪಿಂಗಲನಾಮ ಸಂವತ್ಸರದ ಮಿಥುನ ಮಾಸ ೧೭ನೇ ರವಿವಾರದೊಲು ಶ್ರೀಮತು ಮಗ ಲಕ್ಷ್ಮಪ್ಪರಸರಾದ ಬಂಗರಾಜ ಒಡೆಯರ ಕಾಲದಲ್ಲಿ ನೂಜಿಯ ಸಂಕು ಅಧಿಕಾರಿಯ ಮಗ ನಾರಾಯಣ ಸೇನ ಭೋಮನು ಸುರಾಯದ ದೇವರ ನನ್ನಿಧಿಯಲ್ಲಿ ಪ್ರತಿಷ್ಠೆಮಾಡಿದ ನಂದಿಕೇಶ್ವರನ್ಉ ನಡೆಸಿದ ಶಂಭುಗ್ರೇದು ಶಭಮಸ್ತು” ಎಂಬುದಾಗಿ ಬರೆಯಲಾಗಿದೆ. ಇದಲ್ಲದೇ ಯಾವುದೇ ಶಾಸನಗಳು ಇಲ್ಲಿ ಲಭ್ಯವಿರುವುದಿಲ್ಲ. ಅನುವಂಶಿಕವಾಗಿ ಸುರ್ಯಗುತ್ತು ಮನೆತನದ ಆಢಳಿತಕ್ಕೆ ಒಳಪಟ್ಟಿರುವ ಸುರ್ಯ ದೇವಸ್ಥಾನಕ್ಕೆ ‘ಅಮೃತಪಡಿ’ ನೈವೇದ್ಯಕ್ಕೆ ಈ ವಂಶಸ್ಥರಿಂದ ಹಿಂದೆ ಜಮೀನನ್ನು ಉಂಬಳಿಯಾಗಿ ಬಿಟ್ಟ ಬಗ್ಗೆ ದಾಖಲೆಗಳೀವೆ.
ಹಾಗಾದರೆ ತಡ ಯಾಕೆ? ನಿಮಗೂ ಯಾವುದಾದರೂ ಆಸೆ ಈಡೇರಬೇಕಾದರೆ ಸುರಿಯ ದೇವಾಲಯಕ್ಕೆ ಹೋಗಿ ದೇವರನ್ನು ಪ್ರಾರ್ಥಿಸಿ ನಿಮ್ಮ ಆಸೆ ಈಡೇರಿದ ಮೇಲೆ ಹರಕೆಯನ್ನು ಅರ್ಪಿಸಿ ಬನ್ನಿ ಇದು ಬರಿ ನಂಬಿಕೆ ಅಲ್ಲ ಸತ್ಯ ಕೂಡ ಅನ್ನಬಹುದು ಕಲಿಯುಗದಲ್ಲಿ ನನ್ನ ನಂಬಿಕೆಗೆ ಮಾತ್ರ ಬೆಲೆ.
ಧನ್ಯವಾದಗಳು.
Hi there! Do you know if they make any plugins to help with Search Engine Optimization?
I’m trying to get my blog to rank for some targeted keywords but I’m not seeing very good success.
If you know of any please share. Thanks! You can read similar article
here: Warm blankets