in ,

ವಿಮಾನ ಹುಟ್ಟಿನ ಸ್ವಾರಸ್ಯ

ವಿಮಾನ ಹುಟ್ಟಿನ ಸ್ವಾರಸ್ಯ
ವಿಮಾನ ಹುಟ್ಟಿನ ಸ್ವಾರಸ್ಯ

ಹಾರುವ ಆಸೆ ಮಾನವನ ಅತಿ ಪುರಾತನ ಕನಸುಗಳಲ್ಲೊಂದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು. ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಪುರಾಣಗಳಲ್ಲಿ ಹಾರಾಟದ ಚಿತ್ರಗಳು ಮೂಡಿಬಂದವು. ತಮ್ಮ ಇಚ್ಛಾಶಕ್ತಿಯಿಂದಲೇ ಆಕಾಶದಲ್ಲಿ ಹಾರಾಡುವ ದೇವಾನುದೇವತೆಗಳ ಕತೆಗಳು, “ತ್ರಿಲೋಕಸಂಚಾರಿ” ನಾರದನ ಪಾತ್ರ, ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನದ ಉಲ್ಲೇಖ, ಹನುಮಂತನ ಸಾಗರೋಲ್ಲಂಘನ ಹಾಗೂ ರಾಮಾಯಣ – ಮಹಾಭಾರತ ಎರಡರಲ್ಲೂ ಯುದ್ಧಗಳ ಸಂದರ್ಭದಲ್ಲಿ ಕಂಡುಬರುವ “ಹಾರಾಡುವ ರಥ”ಗಳ ಕಲ್ಪನೆಗಳು ಈ ತರ್ಕಕ್ಕೆ ಅತ್ಯುತ್ತಮ ನಿದರ್ಶನಗಳು. ಭಾರತವಷ್ಟೇ ಅಲ್ಲದೆ ಪುರಾತನ ಗ್ರೀಸ್, ಈಜಿಪ್ಟ್, ಫಿನ್‌ಲ್ಯಾಂಡ್ ಹಾಗೂ ಪೆರು ದೇಶಗಳ ಪುರಾಣ-ದಂತಕತೆಗಳಲ್ಲೂ ಹಾರಾಡುವ ಮಾನವರ ಹಾಗೂ ಗೂಳಿ, ಕುದುರೆಗಳಂತಹ ಪ್ರಾಣಿಗಳ ಉಲ್ಲೇಖಗಳಿವೆ.

ಹಾರುವ ಕನಸನ್ನು ಕಂಡು, ತಮ್ಮ ಸಂಶೋಧನೆ – ಪ್ರಯತ್ನಗಳಿಂದ ಅದನ್ನು ನನಸಾಗಿಸಲು ಶ್ರಮಿಸಿದ ಅನೇಕ ಕನಸುಗಾರನ್ನು ನಾವು ಆಧುನಿಕ ಇತಿಹಾಸದಲ್ಲಿ ಕಾಣಬಹುದು. ಇಂತಹ ಕನಸುಗಾರರ ಪಟ್ಟಿಯ ಮೊದಲನೆಯ ಸಾಲಿನಲ್ಲಿ ನಿಲ್ಲುವ ಹೆಸರು ಲಿಯೊನಾರ್ಡೊ ಡ ವಿನ್ಸಿಯದು.

ವಿಮಾನ ಹುಟ್ಟಿನ ಸ್ವಾರಸ್ಯ
ಲಿಯೊನಾರ್ಡೊ ಡ ವಿನ್ಸಿ

೧೪೫೨ರಲ್ಲಿ ಜನಿಸಿದ ಲಿಯೊನಾರ್ಡೊ ಡ ವಿನ್ಸಿ ಜನ್ಮತಃ ಇಟಲಿಯವನು; ಖ್ಯಾತ ಚಿತ್ರಕಾರ, ತತ್ವಜ್ಞಾನಿ, ಕವಿ, ಶಿಲ್ಪಿ, ಗಣಿತಜ್ಞ, ವಾಸ್ತುಶಿಲ್ಪಿ, ಅನ್ವೇಷಕ, ವಿಜ್ಞಾನಿ – ಎಲ್ಲವೂ ಆಗಿದ್ದ ಮಹಾನ್ ಮೇಧಾವಿ; ಮೋನಾಲಿಸಾ ಹಾಗೂ ದ ಲಾಸ್ಟ್ ಸಪ್ಪರ್‌ನಂತಹ ವಿಶ್ವವಿಖ್ಯಾತ ಕಲಾಕೃತಿಗಳ ಸೃಷ್ಟಿಕರ್ತ; ಪ್ಯಾರಾಚೂಟ್ ಹಾಗೂ ಹೆಲಿಕಾಪ್ಟರ್‌ಗಳ ಬಗೆಗಿನ ಮೊದಲ ಕಲ್ಪನೆಯೂ ಈತನದೇ.

ವಾಯುವಿಗಿಂತ ಭಾರವಾಗಿರುವ ಪಕ್ಷಿಗಳು ಗಾಳಿಯಲ್ಲಿ ಹಾರಬಲ್ಲವಾದರೆ ಮಾನವ ಹಾರಾಡುವುದು ಅಸಾಧ್ಯವೇನಲ್ಲ ಎಂದು ಬಲವಾಗಿ ನಂಬಿದ್ದ ಈತ ಈ ಉದ್ದೇಶಕ್ಕಾಗಿ ರೆಕ್ಕೆಯಂತಹ ರಚನೆಯುಳ್ಳ ಒಂದು ವಾಹನವನ್ನು ನಿರ್ಮಿಸುವ ಯೋಜನೆ ತಯಾರಿಸಿದ್ದ. ಈ ಯಂತ್ರದೊಳಗೆ ಒಬ್ಬ ವ್ಯಕ್ತಿ ನಿಂತು ಎರಡು ರೆಕ್ಕೆಗಳನ್ನು ಸತತವಾಗಿ ಚಲಿಸುವಂತೆ ಮಾಡಿದರೆ ಆತ ಸುಲಭವಾಗಿ ಹಾರಾಡಬಹುದೆಂದು ಡ ವಿನ್ಸಿಯ ಆಲೋಚನೆಯಾಗಿತ್ತು. ಈತನ ಯೋಜನೆಗಳು ಪ್ರಾಯೋಗಿಕವಾಗಿ ಕಷ್ಟಸಾಧ್ಯವಾಗಿದ್ದರೂ ಸಹ, ೧೫ನೆಯ ಶತಮಾನದಷ್ಟು ಹಿಂದೆಯೇ ಮಾನವನ ಹಾರಾಟಕ್ಕೆ ಅನುಕೂಲವಾಗುವ ವಾಹನಗಳ ರಚನೆಯ ಬಗೆಗೆ ಆಲೋಚಿಸಿದ್ದ ಲಿಯೊನಾರ್ಡೊ ಡ ವಿನ್ಸಿ ವಿಜ್ಞಾನದ ಇತಿಹಾಸದಲ್ಲಿ ಅಮರನಾಗಿ ಉಳಿದಿದ್ದಾನೆ.

ಅನಂತರ ಪೋರ್ಚುಗಲ್‌ನ ಬಾರ್ತೊಲೋಮಿಯೊ ಗುಸ್ಮಾವೊ ಎಂಬಾತ ಆಗಸ್ಟ್ ೮, ೧೭೦೯ರಂದು ಬಿಸಿಗಾಳಿ ತುಂಬಿದ ಬಲೂನಿನ ತಳಕ್ಕೆ ಅಳವಡಿಸಿದ ಬುಟ್ಟಿಯಲ್ಲಿ ಕುಳಿತು ಅಲ್ಪಕಾಲದ ಹಾರಾಟ ನಡೆಸಿದನೆಂದು ಹಳೆಯ ದಾಖಲೆಗಳಿಂದ ತಿಳಿದುಬರುತ್ತದೆ. ಇಂತಹ ಬುಟ್ಟಿಯಲ್ಲಿ ಕುಳಿತು ದಿನಕ್ಕೆ ೨೦೦ ಮೈಲುಗಳಷ್ಟು ದೂರವನ್ನು ಕ್ರಮಿಸಬಹುದೆಂದು ಗುಸ್ಮಾವೊ ನಂಬಿದ್ದನಂತೆ.

ನಂತರದ ದಿನಗಳಲ್ಲಿ ಇದೇ ಬಗೆಯ ಪ್ರಯತ್ನ ನಡೆದದ್ದು ಫ್ರಾನ್ಸಿನಲ್ಲಿ. ೧೭೮೩ರ ಜೂನ್ ೫ರಂದು ಜೋಸೆಫ್ ಮತ್ತು ಎಟೀನ್ ಮಾಂಟ್‌ಗಾಲ್ಫಿಯರ್ ಎಂಬ ಸೋದರರು ಬಟ್ಟೆಯಲ್ಲಿ ತಯಾರಿಸಿದ ಬಲೂನಿನಂತಹ ಬಿಸಿಗಾಳಿತುಂಬಿದ ಗೋಳವನ್ನು ಸುಮಾರು ಒಂದು ಮೈಲಿನಷ್ಟು ದೂರಕ್ಕೆ ಹಾರಿಸಿದ್ದರು. ಅದೇ ವರ್ಷ ಸೆಪ್ಟೆಂಬರ್ ೧೯ರಂದು ಈ ಸೋದರರು ಫ್ರಾನ್ಸಿನ ಅನೋನೇ ಪಟ್ಟಣದಲ್ಲಿ ಇಂತಹುದೇ ಬಲೂನಿನಲ್ಲಿ ಕುರಿ, ಕೋಳಿ ಹಾಗೂ ಬಾತುಕೋಳಿಗಳನ್ನಿರಿಸಿ ಹಾರಿಬಿಟ್ಟರಾದರೂ ಆ ಬಲೂನು ಸ್ವಲ್ಪ ಸಮಯದೊಳಗೇ ಸ್ಫೋಟಿಸಿ ನಾಶವಾಯಿತು. ೧೭೮೩ರ ನವೆಂಬರ್ ೨೧ರಂದು ನಡೆದ ಮತ್ತೊಂದು ಹಾರಾಟದಲ್ಲಿ ಜೀನ್ ಫ್ರಾಂಕಾಯ್ಸ್ ಪಿಯಾತ್ರೆ ಡಿ’ರೋಜ಼್ಯೆರ್ ಹಾಗೂ ಫ್ರಾಂಕಾಯ್ಸ್ ಲಾರೆಂಟ್ ಮಾರ್ಕ್ವಿಸ್ ಡಿ’ಆರ್ಲ್ಯಾಂಡ್ಸ್ ಎಂಬುವವರು “ಮಾಂಟ್‌ಗಾಲ್ಫಿಯರ್ ಬಲೂನ್”ನಲ್ಲಿ ಕುಳಿತು ೨೩ ನಿಮಿಷಗಳಲ್ಲಿ ಒಂಬತ್ತು ಕಿಲೋಮೀಟರುಗಳಷ್ಟು ದೂರ ಹಾರಾಟ ನಡೆಸಿದ್ದರು. ಸದ್ಯಕ್ಕೆ ಚಾಲ್ತಿಯಲ್ಲಿರುವ ದಾಖಲೆಗಳಂತೆ ಈ ಜೋಡಿಯನ್ನೇ ಆಕಾಶದಲ್ಲಿ ಸುದೀರ್ಘಕಾಲ ಹಾರಾಟ ನಡೆಸಿದ ಮೊದಲ ಮಾನವರೆಂದು ಗುರುತಿಸಲಾಗುತ್ತದೆ.

ನಂತರದ ದಿನಗಳಲ್ಲಿ ಬಲೂನುಗಳ ಹಾರಾಟ ಸಾಮಾನ್ಯವಾದ ಸಂಗತಿಯಾಯಿತು. ಈಗಲೂ ಕೂಡ ವೈಜ್ಞಾನಿಕ ಸಂಶೋಧನೆಗಳಿಗಾಗಿ ಇಂತಹ ಬಲೂನುಗಳ ಹಾರಾಟ ನಡೆಯುತ್ತಿರುತ್ತದೆ. ಇಂತಹ ಬಲೂನುಗಳ ಹಾರಾಟ ಜನಪ್ರಿಯ ಸಾಹಸಕ್ರೀಡೆಯೂ ಹೌದು.

ಒಟ್ಟೊ ಲಿಲಿಯಂಥಾಲ್‌ನ ಸಮಕಾಲೀನನಾಗಿದ್ದ ವಿಲಿಯಂ ಸ್ಯಾಮ್ಯುಯೆಲ್ ಹೆನ್ಸನ್ ಎಂಬ ಬ್ರಿಟಿಷ್ ತಂತ್ರಜ್ಞ ೧೮೪೩ರಲ್ಲೇ ಉಗಿ ಇಂಜನ್ ಬಳಸಿ ಕಾರ್ಯನಿರ್ವಹಿಸುವ (ಸ್ಟೀಂ-ಡ್ರಿವನ್) ವಿಮಾನವೊಂದರ ವಿನ್ಯಾಸ ರೂಪಿಸಿದ್ದ. ಆಧುನಿಕ ವಿಮಾನದ ಅನೇಕ ಭಾಗಗಳನ್ನು ಹೊಂದಿದ್ದ ತನ್ನ ಈ ವಿನ್ಯಾಸಕ್ಕೆ ಸ್ವಾಮ್ಯವನ್ನು (ಪೇಟೆಂಟ್) ಕೂಡ ಪಡೆದುಕೊಂಡ ಈತ ತಾನು ನಿರ್ಮಿಸಿದ ಮಾದರಿಗಳು ಹಾರಾಟ ಕೈಗೊಳ್ಳುವಲ್ಲಿ ವಿಫಲವಾದಾಗ ವಿಮಾನ ನಿರ್ಮಿಸುವ ಪ್ರಯತ್ನವನ್ನೇ ಕೈಬಿಟ್ಟ. ಇಂತಹ ಇನ್ನೂ ಅನೇಕ ಯತ್ನಗಳು ನಡೆದರೂ ಸಹ ಸ್ವಶಕ್ತಿಯಿಂದ ಗಾಳಿಯಲ್ಲಿ ಹಾರಬಲ್ಲ ಯಂತ್ರಗಳ ನಿರ್ಮಾಣ ಇನ್ನೂ ಸಾಧ್ಯವಾಗಿರಲಿಲ್ಲ.

ಗ್ಲೈಡರ್ ತಯಾರಿಕೆಯ ಪ್ರಯತ್ನಗಳ ಯಶಸ್ಸಿನಿಂದ ಉತ್ತೇಜಿತರಾದ ಅನೇಕ ಉತ್ಸಾಹಿಗಳು ಈ ರೀತಿಯ ಯಂತ್ರಗಳನ್ನು ತಯಾರಿಸಲು ಯತ್ನಿಸಿದರು. ಫ್ರಾನ್ಸಿನ ಕ್ಲೆಮೆಂಟ್ ಆಡರ್ ಹಾಗೂ ಅಮೆರಿಕಾದ ಸ್ಯಾಮ್ಯುಯೆಲ್ ಲ್ಯಾಂಗ್ಲಿ ಎಂಬ ವಿಜ್ಞಾನಿಗಳು ಅವರ ಪ್ರಯತ್ನಗಳಲ್ಲಿ ಅಲ್ಪಮಟ್ಟದ ಯಶಸ್ಸನ್ನೂ ಕಂಡಿದ್ದರು.

ಅಮೆರಿಕಾ ಸಂಜಾತ ಬ್ರಿಟಿಷ್ ವಿಜ್ಞಾನಿ ಹಿರಮ್ ಮ್ಯಾಕ್ಸಿಂ ಎಂಬಾತ ೧೮೯೪ರಲ್ಲಿ ಭಾರೀಗಾತ್ರದ ಯಂತ್ರವೊಂದನ್ನು ರೂಪಿಸಿದ. ವಿಮಾನದಂತೆ ಕಾರ್ಯನಿರ್ವಹಿಸಬೇಕಿದ್ದ ಈ ಯಂತ್ರ ಕೊಂಚಹೊತ್ತು ನೆಲ ಬಿಟ್ಟು ಮೇಲೆದ್ದಿತಾದರೂ ಯಶಸ್ವಿ ಹಾರಾಟ ಕೈಗೊಳ್ಳುವಲ್ಲಿ ವಿಫಲವಾಯಿತು.

ವಿಮಾನ ಹುಟ್ಟಿನ ಸ್ವಾರಸ್ಯ
ವಿಮಾನ ಹುಟ್ಟಿನ ಸ್ವಾರಸ್ಯ

ಸರಿಸುಮಾರು ಇದೇ ಸಮಯಕ್ಕೆ ಅಮೆರಿಕಾದ ವಿಲ್ಬರ್ ರೈಟ್ ಹಾಗೂ ಆರ್ವಿಲ್ ರೈಟ್ ಎಂಬ ಸಹೋದರರೂ ವಿಮಾನ ರಚನೆಯಲ್ಲಿ ಬಹಳಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಮೊದಲು ಗ್ಲೈಡೆರ್‌ಗಳನ್ನು ನಿರ್ಮಿಸಿ ಹಾರಾಟ ನಡೆಸಿದ ಇವರು ಅವುಗಳಿಗೆ ಇಂಜಿನ್‌ಗಳನ್ನು ಅಳವಡಿಸುವುದರಲ್ಲೂ ಯಶಸ್ಸುಗಳಿಸಿ ಮುಂದೆ ಆಧುನಿಕ ವಿಮಾನದ ಸೃಷ್ಟಿಕರ್ತರೆಂದು ವಿಶ್ವವಿಖ್ಯಾತರಾದರು.

ರೈಟ್ ಸಹೋದರರು

ರೈಟ್ ಸಹೋದರರು ಎಂದೇ ವಿಶ್ವವಿಖ್ಯಾತರಾದವರು ವಿಲ್ಬರ್ ರೈಟ್ (೧೮೬೭-೧೯೧೨) ಹಾಗೂ ಆರ್ವಿಲ್ ರೈಟ್ (೧೮೭೧-೧೯೪೮). ಚಿಕ್ಕಂದಿನಿಂದಲೂ ಬಹಳ ಪ್ರತಿಭಾನ್ವಿತರಾಗಿದ್ದ ಇವರು ತಾವೇ ಸ್ವತಃ ತಮ್ಮ ಆಟಿಕೆಗಳನ್ನು ತಯಾರಿಸಿಕೊಳ್ಳುವುದರಿಂದ ಹಿಡಿದು ಪತ್ರಿಕೆಯೊಂದನ್ನು ನಡೆಸುವುದು ಹಾಗೂ ಸೈಕಲ್ ಕಂಪನಿಯೊಂದನ್ನು ನಡೆಸುವವರೆಗೆ ಅನೇಕ ಕಾರ್ಯಗಳನ್ನು ನಿರ್ವಹಿಸಿ ತಮ್ಮ ಬಹುಮುಖಿ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ಪ್ರಪಂಚದ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ವಿಮಾನ ನಿರ್ಮಾಣ ಪ್ರಯೋಗಗಳ ಬಗೆಗೆ ಬಹು ಆಸಕ್ತಿಯಿಂದ ಮಾಹಿತಿ ಕಲೆಹಾಕುತ್ತಿದ್ದ ಇವರಿಗೆ ಹಾರುವ ಯಂತ್ರಗಳ ನಿರ್ಮಾಣದತ್ತ ಮೊದಲು ಸ್ಫೂರ್ತಿ ನೀಡಿದ್ದು ಜರ್ಮನಿಯ ಒಟ್ಟೊ ಲಿಲಿಯಂಥಾಲ್.

ಆಕ್ಟೇವ್ ಚೆನ್ಯೂಟ್‌ರ ಬರಹಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ ರೈಟ್ ಸಹೋದರರು ೧೯೦೦ರ ಸುಮಾರಿಗೆ ಮೊದಲ ಗ್ಲೈಡರುಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು.

ಅವರು ತಮ್ಮ ಗ್ಲೈಡರುಗಳ ಹಾರಾಟದ ಪರೀಕ್ಷೆ ನಡೆಸುವ ಸಲುವಾಗಿ ಉತ್ತರ ಕೆರೋಲಿನಾ ಪ್ರಾಂತ್ಯದ ಕಿಟ್ಟಿಹಾಕ್ ಎಂಬ ಸ್ಥಳವನ್ನು ಬಳಸಲು ವಾಷಿಂಗ್ಟನ್‌ನ ವೆದರ್ ಬ್ಯೂರೋ (ಈಗಿನ ನ್ಯಾಷನಲ್ ವೆದರ್ ಸರ್ವಿಸ್) ಅನುಮತಿ ನೀಡಿತು. ತಾವು ತಯಾರಿಸಿದ ಮೊದಲ ಗ್ಲೈಡರ್‌ನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾದ ಮೇಲೆ (ಇದು ನಡೆದದ್ದು ೧೯೦೦ರಲ್ಲಿ) ರೈಟ್ ಸಹೋದರರು ದೊಡ್ಡ ಗಾತ್ರದ ಮತ್ತೊಂದು ಗ್ಲೈಡರಿನ ಜೊತೆಗೆ ೧೯೦೧ರಲ್ಲಿ ಮತ್ತೆ ಕಿಟ್ಟಿಹಾಕ್‌ಗೆ ಮರಳಿದರು. ಈ ಗ್ಲೈಡರ್ ಕೂಡ ಹಾರಾಟ ಕೈಗೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಈ ಎರಡೂ ಗ್ಲೈಡರುಗಳು ರೈಟ್ ಸಹೋದರರು ನಿರೀಕ್ಷಿಸಿದಷ್ಟು ಮಟ್ಟದ ಕಾರ್ಯಕ್ಷಮತೆ ಹೊಂದಿರಲಿಲ್ಲ.

ವಿಮಾನ ಹುಟ್ಟಿನ ಸ್ವಾರಸ್ಯ
ರೈಟ್ ಸಹೋದರರು

ಈ ಹಿನ್ನಡೆಯಿಂದಾಗಿ ರೈಟ್ ಸಹೋದರರ ಉತ್ಸಾಹಕ್ಕೇನೂ ಕುಂದುಬರಲಿಲ್ಲ. ತಮ್ಮ ವಿನ್ಯಾಸದಲ್ಲಿದ್ದ ಕುಂದುಕೊರತೆಗಳನ್ನೆಲ್ಲ ತೀವ್ರ ಅಧ್ಯಯನದ ಮೂಲಕ ನಿವಾರಿಸಿಕೊಂಡ ಅವರು ೧೯೦೨ರಲ್ಲಿ ಗ್ಲೈಡರಿನ ಸುಧಾರಿತ ಮಾದರಿಯೊಂದನ್ನು ರೂಪಿಸಿದರು.
ಅವರ ನಿರೀಕ್ಷೆಗೂ ಮೀರಿ ಯಶಸ್ವಿಯಾದ ಈ ಮಾದರಿಯಲ್ಲಿ ಅವರು ಒಂದು ಸಾವಿರಕ್ಕೂ ಹೆಚ್ಚು ಯಾನಗಳನ್ನು ಕೈಗೊಂಡರು.

ಗ್ಲೈಡರಿನ ನಿರ್ಮಾಣದಲ್ಲಿ ಯಶಸ್ವಿಯಾದ ರೈಟ್ ಸಹೋದರರು ಈಗ ವಿಮಾನ ನಿರ್ಮಾಣದ ಬಗೆಗೆ ಯೋಚಿಸಲು ಪ್ರಾರಂಭಿಸಿದರು. ಪಟ್ಟುಹಿಡಿದು ಕೆಲಸ ಪ್ರಾರಂಭಿಸಿಯೇಬಿಟ್ಟ ಅವರು ೧೯೦೩ರಲ್ಲಿ ಮೊದಲ ಹಾರುವ ಯಂತ್ರ ಹಾಗೂ ಅದಕ್ಕೊಂದು ಪೆಟ್ರೋಲ್ ಇಂಜಿನ್‌ಅನ್ನೂ ತಯಾರಿಸಿಬಿಟ್ಟರು. ಹನ್ನೆರಡು ಅಶ್ವಶಕ್ತಿಯ ಈ ವಿಮಾನ ೩೪೧ ಕಿಲೋಗ್ರಾಂ ತೂಕ ಹೊಂದಿತ್ತು.

೧೯೦೩ರ ಡಿಸೆಂಬರ್ ೧೭ರಂದು ಮಾನವನ “ಹಾರುವ ಕನಸು” ಕೊನೆಗೂ ನನಸಾಗಿಬಿಟ್ಟಿತು! “ರೈಟ್ ಫ್ಲೈಯರ್” ವಿಮಾನದಲ್ಲಿ ಕುಳಿತ ಆರ್ವಿಲ್ ಹನ್ನೆರೆಡು ಸೆಕೆಂಡುಗಳ ಕಾಲ ಹಾರಾಟ ನಡೆಸಿ ಮೂವತ್ತೇಳು ಮೀಟರುಗಳ ದೂರವನ್ನು ಕ್ರಮಿಸಿದ. ಆನಂತರ ಹಾರಾಟ ಕೈಗೊಂಡ ವಿಲ್ಬರ್ ೫೯ ಸೆಕೆಂಡುಗಳ ಕಾಲಾವಧಿಯಲ್ಲಿ ೨೬೦ ಮೀಟರುಗಳ ದೂರವನ್ನು ಕ್ರಮಿಸುವಲ್ಲಿ ಸಫಲನಾದ.

ಕಿಟ್ಟಿಹಾಕ್‌ನಲ್ಲಿ ಐತಿಹಾಸಿಕ ಹಾರಾಟ ಕೈಗೊಂಡಿದ್ದ ರೈಟ್ ಫ್ಲೈಯರ್ ವಿಮಾನವನ್ನು ಆರ್ವಿಲ್ ರೈಟ್ ೧೯೨೮ರಲ್ಲೇ ಲಂಡನ್ನಿನ ವಿಜ್ಞಾನ ಸಂಗ್ರಹಾಲಯಕ್ಕೆ ಕೊಟ್ಟುಬಿಟ್ಟಿದ್ದ. ಇಪ್ಪತ್ತು ವರ್ಷಗಳ ನಂತರ, ೧೯೪೮ರಲ್ಲಿ ಅಮೆರಿಕಾಗೆ ಮರಳಿದ ಈ ವಿಮಾನ ಈಗ ವಾಷಿಂಗ್ಟನ್‌ನಲ್ಲಿರುವ ಸ್ಮಿತ್‌ಸೋನಿಯನ್ ಇನ್ಸ್‌ಟಿಟ್ಯೂಟ್‌ನ ರಾಷ್ಟ್ರೀಯ ಬಾಹ್ಯಾಕಾಶ ಮತ್ತು ವಿಮಾನಯಾನ ಸಂಗ್ರಹಾಲಯದಲ್ಲಿ ಪ್ರದರ್ಶಿಸಲ್ಪಟ್ಟಿದೆ.

ಈ ಪ್ರಯತ್ನದಿಂದ ಈಗ ನಾವು ಕೂಡ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಾಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

49 Comments

ಮಹಾಬಲಿಯ ವಂಶಸ್ಥರು ಬಾಣರು

ಮಹಾಬಲಿಯ ವಂಶಸ್ಥರು ಬಾಣರು

ಸಾಲ ಕೇಳಿದ ಹಾಲು ಮಾರುವ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಗೊತ್ತಾ.

ಸಾಲ ಕೇಳಿದ ಹಾಲು ಮಾರುವ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಗೊತ್ತಾ.