in

ಕಾವೇರಿ, ಕಪಿಲ, ಸ್ಪಟಿಕ ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮ

ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮ
ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮ

ತ್ರಿವೇಣಿ ಸಂಗಮ ಟಿ.ನರಸೀಪುರದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇದು ಪೌರಾಣಿಕವಾಗಿ, ಐತಿಹಾಸಿಕವಾಗಿ ಪ್ರಸಿದ್ದಿಗೊಂಡಿದೆ. ಇಲ್ಲಿನ ಸ್ಥಳ ಮಹಿಮೆ ತುಂಬಾ ವಿಶಿಷ್ಟವಾದುದು. ಇಲ್ಲಿ ಪ್ರಸಿದ್ಧ “ಕುಂಭ ಮೇಳ” ಮೂರು ವರ್ಷಗಳಿಗೊಮ್ಮೆ ಮಾಘ ಶುದ್ಧ ಹುಣ್ಣಿಮೆಯಂದು ನಡೆಯುತ್ತದೆ. ತಿರುಮಕೂಡಲಿನ ಈ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ಅಲ್ಲಿರುವ ಎಲ್ಲಾ ದೇವರುಗಳ ದರ್ಶನ ಮಾಡಿದರೆ, ಶ್ರೀ ಕ್ಷೇತ್ರ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ವಿಶ್ವನಾಥನ ದರ್ಶನ ಮಡಿದಾಗ ಲಭಿಸುವ ಪುಣ್ಯಕ್ಕಿಂತ ಒಂದು ಗುಲಗಂಜಿ ತೂಕ ಹೆಚ್ಚು ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ.

ತ್ರಿವೇಣಿ ಸಂಗಮ ಎಂದರೆ ಮೂರು ನದಿಗಳು ಸೇರುವ ಸ್ಥಳ ಎಂದು ಅರ್ಥ. ತಿರುಮಕೂಡಲು ನರಸೀಪುರದಲ್ಲಿ ನಾವು ಕಾಣಬಹುದಾದ ಸಂಗಮವು ನಮ್ಮ ದಕ್ಷಿಣ ಭರತದ ಒಂದು ಪ್ರಮುಖ ಸಂಗಮ ಎಂದರೆ ತಪ್ಪಾಗಲಾರದು. ಈ ತ್ರಿವೇಣಿ ಸಂಗಮದಲ್ಲಿ ಮೂರು ಪ್ರಮುಖ ನದಿಗಳು ಸೇರುತ್ತವೆ. ಅವು ಯಾವುವು ಎಂದರೆ ಕಾವೇರಿ, ಕಪಿಲಾ ಹಾಗು ಸ್ಪಟಿಕ ಸರೋವರ. ಕರ್ನಾಟಕದ ಪ್ರಮುಖ ನದಿಯಾದ ಕಾವೇರಿಯು ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಮಲೆಗಳ ಮಧ್ಯದಿಂದ ಮೈಸೂರನ್ನು ತಲುಪುತ್ತದೆ.

ಕಾವೇರಿ, ಕಪಿಲ, ಸ್ಪಟಿಕ ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮ
ತ್ರಿವೇಣಿ ಸಂಗಮ ಟಿ.ನರಸೀಪುರ

ನಂತರ ತಿರುಮಕೂಡಲಿನ ಈ ಪುಣ್ಯಸ್ಥಳದಲ್ಲಿ ಸಂಗಮಿಸಿ ನಂತರ ಕೃಷ್ಣಗಿರಿಯ ಮೂಲಕ ತಮಿಳುನಾಡು ಸೇರುತ್ತದೆ. ಕಾವೇರಿಯು ಒಂದೆಡೆಯಿಂದ ಈ ಸ್ಥಳಕ್ಕೆ ಬಂದರೆ, ಕಪಿಲಾ ನದಿ ಇನೊಂದೆಡೆಯಿಂದ ಈ ಸ್ಥಳ ತಲುಪುತ್ತದೆ. ಮೂರು ನದಿಗಳಲ್ಲಿ ಒಂದಾದ ಸ್ಪಟಿಕ ಸರೋವರವು ಗುಪ್ತಗಾಮಿನಿ. ಗುಪ್ತಗಾಮಿನಿ ಎಂದರೆ ಈ ನದಿಯು ಮನವನ ಕಣ್ಣಿಗೆ ಗೋಚರವಾಗುವುದಿಲ್ಲ.
ಈ ಸಂಗಮದ ಒಂದೆಡೆ ಒಂದು ರಸ್ತೆಯಷ್ಟಿರುವ ತಿರುಮಕೂಡಲು ಇದ್ದರೆ, ಮತ್ತೊಂದು ದಡದಲ್ಲಿ ನರಸೀಪುರ ಊರನ್ನು ನಾವು ಕಾಣಬಹುದು. ಈ ಊರು ನರಸೀಪುರ ತಾಲ್ಲೂಕು ಮೈಸೂರು ಜಿಲ್ಲೆಗೆ ಸೇರಿದೆ. ತಿರುಮಕೂಡಲು ನರಸೀಪುರದ ಈ ಪವಿತ್ರ ತ್ರಿವೇಣಿ ಸಂಗಮವು ಮೈಸೂರಿನಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿದೆ.

ಸ್ಥಳ ಮಹಿಮೆ

ತ್ರಿವೇಣಿ ಸಂಗಮದ ಬಳಿ ಒಂದು ಬೃಂದಾವನವಿದೆ. ಇದು ವ್ಯಾಸರಾಜ ಪೀಠದ ಗುರುಗಳಾದ ಶ್ರೀ ಶೇಷಚಂದ್ರಿಕಾಚಾರ್ಯರ ಬೃಂದಾವನ. ಇದನ್ನು ಹದಿನೈದನೆಯ ಶತನಮಾನದಲ್ಲಿ ಅಧಿಷ್ಠಾನಗೊಳಿಸಲಾಯಿತು ಎಂದು ಹೇಳಲಾಗಿದೆ. ಅಲ್ಲಿ ಅವರು ಸಮಾಧಿಯಾಗಿದ್ದಾರೆ. ಈ ಸಮಾಧಿಯು ಟಿಪ್ಪು ಸುಲ್ತಾನರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. ಅದರ ಪಕ್ಕದಲ್ಲಿ ಉತ್ತರಕ್ಕೆ ಬ್ರಹ್ಮಾಶ್ವತ್ಥವಿದೆ. ಈ ಬ್ರಹ್ಮಾಶ್ವತ್ಥದಲ್ಲಿ ನೂರಾರು ಜನ ನಾಗಪ್ರತಿಷ್ಠೆಗಳನ್ನು ಮಾಡಿದ್ದಾರೆ.

ಎಷ್ಟೊ ಮಂದಿ ಭಕ್ತಾದಿಗಳನ್ನು ತಮ್ಮ ಹರಕೆಯನ್ನು ಪೂರೈಸಿಕೊಳ್ಳಲು ಇಲ್ಲಿ ಬಂದು ನಾಗಪ್ರತಿಷ್ಠೆ ಮಾಡಿಸುತ್ತಾರೆ. ಈ ಜಾಗಕ್ಕೆ ಹೊಂದೆಕೊಂಡಂತೆಯೇ ಉತ್ತರದಲ್ಲಿ ಶೃಂಗೇರಿಯ ಜಗದ್ದುರುಗಳಾದ ಶ್ರೀ ದ್ವಿತೀಯ ಚಂದ್ರಶೇಖರ ಭರತಿ ಅವರ ಅಧಿಷ್ಠಾನ ಸಹ ಇದೆ. ವೈಷ್ಣವ ಸಂಪ್ರದಾ ಯದಲ್ಲಿ ಸಮಾಧಿಯ ಮೇಲೆ ಬೃಂದಾವನ ಕಟ್ಟುತ್ತಾರೆ ಹಾಗು ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಲ್ಲಿ ಸಮಾಧಿಯನ್ನು ಕಟ್ಟಿ ಅದರ ಮೇಲೆ ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸುತ್ತಾರೆ ಎಂದು ಹೇಳಲಾಗಿದೆ.

ಈ ಸಂಗಮವು ಎಂತಹ ಪುಣ್ಯ ಸ್ಥಳವೆಂದರೆ, ಇಲ್ಲಿನ ನದಿಯಲ್ಲಿ ಮಿಂದರೆ ಪುಣ್ಯ ಲಭಿಸುವುದು ಎಂಬ ಮಾತಿದೆ. ತಿರುಮಕೂಡಲಿನ ಈ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ಅಲ್ಲಿರುವ ಎಲ್ಲಾ ದೇವರುಗಳ ದರ್ಶನ ಮಾಡಿದರೆ, ಶ್ರೀ ಕ್ಷೇತ್ರ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ವಿಶ್ವನಾಥನ ದರ್ಶನ ಮಡಿದಾಗ ಲಭಿಸುವ ಪುಣ್ಯಕ್ಕಿಂತ ಒಂದು ಗುಲಗಂಜಿ ತೂಕ ಹೆಚ್ಚು ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಅಂತಹ ಪುಣ್ಯ ಸಂಗಮ ಸ್ಥಳ ಈ ತಿರುಮಕೂಡಲು ನರಸೀಪುರ.

ಶ್ರೀ ಅಗಸ್ತ್ಯೇಶ್ವರ ದೇವಾಲಯದ ಇತಿಹಾಸ :
ತಿರುಮಕೂಡಲಿನಲ್ಲಿ ನಾವು ಪ್ರಸಿದ್ಧ ದೇವಾಲಯವಾದ ಶ್ರೀ ಅಗಸ್ತ್ಯೇಶ್ವರ ದೇವಾಲಯವನ್ನು ಕಾಣಬಹುದು. ಪುರಾಣದ ಪ್ರಕಾರ ಇದನ್ನು ಮಹಾತ್ಮರಾದ ಶ್ರೀ ಅಗಸ್ತ್ಯ ಋಷಿಗಳು ಪ್ರತಿಷ್ಠಾಪಿಸಿದ್ದಾರೆ. ಈ ತ್ರಿವೇಣಿ ಸಂಗಮವು ಎಷ್ಟು ಪುಣ್ಯ ಸ್ಥಳವೆಂದರೆ ಒಮ್ಮೆ ಅಗಸ್ತ್ಯ ಋಷಿಗಳು ಈ ದಾರಿಯಲ್ಲಿ ಚಲಿಸುತ್ತಿದ್ದಾಗ ಈ ಪ್ರದೇಶದಲ್ಲಿ ನಿಲ್ಲುತ್ತಾರೆ. ಇಲ್ಲಿನ ನದಿಗಳು ಸೇರುವ ಸಂಗಮವನ್ನು ಕಂಡು ಈ ಸ್ಥಳ ಬಹಳ ಪುಣ್ಯ ಪವಿತ್ರ ಸ್ಥಳವೆಂದು ಅರಿಯತ್ತಾರೆ. ಹೀಗೆ ಈ ಪುಣ್ಯ ಸ್ಥಳದಲ್ಲಿ ಈಶ್ವರ ಲಿಂಗವೊಂದನ್ನು ಸ್ಥಾಪಿಸಬೇಕೆಂದು ನಿರ್ಧರಿಸುತ್ತಾರೆ.
ಹೀಗೆ ನಿರ್ಧರಿಸಿದಾಗ ಅವರು ಲಿಂಗವನ್ನು ಎಲ್ಲಿಂದ ತರಬೇಕೆಂದು ಯೋಚಿಸುತ್ತಾರೆ. ಆಗ ಅವರಿಗೆ ಪವನಪುತ್ರ ಹನುಮಂತನ ನೆನಪಾಗುತ್ತದೆ. ಅವರು ನೆನಸಿಕೊಂಡಾಗ ಹನುಮಂತನು ಅವರ ಬಳಿ ಪ್ರತ್ಯಕ್ಷನಾಗುತ್ತಾನೆ. ಆಗ ಅಗಸ್ತ್ಯರು ಈ ಸ್ಥಳದ ಬಗ್ಗೆ ವಿವರಿಸಿ, ಅವರ ಯೋಜನೆಯ ಕುರಿತು ತಿಳಿಸುತ್ತಾರೆ. ಅಗಸ್ತ್ಯರು ಹನುಮಂತನಿಗೆ ಶ್ರೀ ಕ್ಷೇತ್ರ ಕಾಶಿಗೆ ಹೋಗಿ ಶಿವ ಲಿಂಗವನ್ನು ತರುವಂತೆ ಆದೇಶಿಸುತ್ತಾರೆ. ಆಗ ಅಗಸ್ತ್ಯರ ಆದೇಶದಂತೆ ಶ್ರೀ ಕ್ಷೇತ್ರ ಕಾಶಿಗೆ ಹೋದ ಹನುಮಂತನು ಪವಿತ್ರ ಗಂಗೆಯಲ್ಲಿ ಮಿಂದು ಲಿಂಗವೊಂದನ್ನು ಹುಡುಕುತ್ತಾನೆ.

ಕಾವೇರಿ, ಕಪಿಲ, ಸ್ಪಟಿಕ ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮ
ಶ್ರೀ ಅಗಸ್ತ್ಯೇಶ್ವರ ದೇವಾಲಯ

ಆಗ ಅವನಿಗೆ ಒಂದು ಶಿವ ಲಿಂಗವು ದೊರೆಯುತ್ತದೆ. ಮಹಾ ಪರಾಕ್ರಮಿಯಾದ ಹನುಮಂತನಿಗೆ ಆ ಲಿಂಗವು ಗಾತ್ರದಲ್ಲಿ ಬಹಳ ಚಿಕ್ಕದೆಂಬ ಭಾವನೆ ಮೂಡುತ್ತದೆ. ಆದರೂ ವಿಧಿಯಿಲ್ಲದೆ ಅದೇ ಲಿಂಗವನ್ನು ತರುತ್ತಾನೆ. ಇತ್ತ ಅಗಸ್ತ್ಯ ಋಷಿಗಳು ಹನುಮಂತನಿಗಾಗಿ ಕಾಯುತ್ತಿರುತ್ತಾರೆ. ನಂತರ ಅಗಸ್ತ್ಯ ಋಷಿಗಳು ಲಿಂಗ ಪ್ರತಿಷ್ಠಾಪಿಸಲು ಶುಭ ಮುಹೂರ್ತ ಮಿಂಚಿ ಹೋಗುತ್ತದೆ ಎಂದು ಭಾವಿಸಿ ಸೈಕತ ಲಿಂಗವನ್ನು ತಿರುಮಕೂಡಲಿನ ಅಂದರೆ ತ್ರಿವೇಣಿ ಸಂಗಮದ ದಡದಲ್ಲಿ ಪ್ರತಿಷ್ಠಾಪಿಸುತ್ತಾರೆ. ಸೈಕತ ಲಿಂಗ ಎಂದರೆ ಮರಳಿನಿಂದ ಮಾಡಿದ ಲಿಂಗ ಎಂದು ಅರ್ಥ. ಆಗ ಹನುಮಂತನು ಬಂದು ಆಗಲೇ ಲಿಂಗ ಪ್ರತಿಷ್ಟಾಪನೆಗೊಂಡಿರುವುದನ್ನು ಕಂಡು ಬಹಳ ಕೋಪಗೊಳ್ಳುತ್ತಾನೆ. ಆ ಕೋಪದಲ್ಲಿ ಅವನು ತನ್ನ ವಜ್ರ ಮುಷ್ಠಿಯಿಂದ ಲಿಂಗದ ಮೇಲೆ ಹೊಡೆಯುತ್ತಾನೆ. ಆ ಹೊಡೆತಕ್ಕೆ ಶಿವ ಲಿಂಗದ ಮೇಲ್ಭಾಗವು ಸೀಳಿಕೊಂಡು ಅಲ್ಲಿಂದ ಗಂಗೆ ಉತ್ಪತ್ತಿಯಾಗಲು ಆರಂಭಿಸುತ್ತಾಳೆ. ಹನುಮಂತನು ಆಗ ಮೂರ್ಛೆ ಬೀಳುತ್ತಾನೆ. ಆಗ ಅಲ್ಲಿದ್ದ ಅಗಸ್ತ್ಯ ಋಷಿಗಳು ತಮ್ಮ ಕಮಂಡಲದಲ್ಲಿ ಇದ್ದಂತಹ ನೀರನ್ನು ಮಂತ್ರೋಪದೇಶದೊಂದಿಗೆ ಹನುಮಂತನ ಮೇಲೆ ಹಾಕುತ್ತಾರೆ. ಹನುಮಂತನು ಕಾಶಿಯಿಂದ ತಂದಿದ್ದಂತಹ ಲಿಂಗವನ್ನು ಊರಿನ ಮಧ್ಯದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ, ಲಿಂಗಕ್ಕೆ ಹನುಮಂತೇಶ್ವರ ಎಂದು ಹೆಸರಿಸುತ್ತಾರೆ. ಊರಿನ ಎಲ್ಲಾ ದೇವರುಗಳ ದರ್ಶನ ಪಡೆದು ಕೊನೆಗೆ ಹನುಮಂತೇಶ್ವರನ ದರ್ಶನ ಮಾಡದಿದ್ದರೆ ಫಲ ದೊರೆಯುವುದಿಲ್ಲ ಎಂಬ ನಂಬಿಕೆ ಇದೆ. ಈ ಅಗಸ್ತ್ಯೇಶ್ವರನ ದೇವಾಲಯದಲ್ಲಿ ಪೂರ್ಣಮಂಗಳ ಕಾಮಾಕ್ಷಿ ಅಮ್ಮನವರ ಸನ್ನಿಧಾನವನ್ನು ಸಹ ನಾವು ಕಾಣಬಹುದು. ಅಮ್ಮನವರ ಬಳಿ ಹರಕೆ ಹೊತ್ತು ವಸ್ತ್ರಗಳನ್ನು ದಾನವಾಗಿ ನೀಡಿದರೆ ಹರಕೆ ಪೂರೈಸುವುದು ಎಂಬ ನಂಬಿಕೆ ಇದೆ.

ಈ ದೇವಸ್ತಾನದಲ್ಲಿ ಅಗಸ್ತ್ಯೇಶ್ವರ ಸ್ವಾಮಿ ಹಾಗು ಪೂರ್ಣಮಂಗಳ ಕಾಮಾಕ್ಷಿ ಅಮ್ಮನವರ ವಿಗ್ರಹಗಳಲ್ಲದೆ ಹಲವಾರು ವಿವಿಧ ದೇವರುಗಳ ವಿಗ್ರಹಗಳನ್ನು ಸಹ ಕೆತ್ತನೆ ಮಾಡಲಾಗಿದೆ. ಅಗಸ್ತ್ಯೇಶ್ವರ ದೇವಾಲಯದಲ್ಲಿ ನಾಲ್ಕು ಲಿಂಗಗಳಿವೆ. ಕಂಬಗಳ ಮೇಲೆ ಹಲವಾರು ದೇವರು ವಿಗ್ರಹ ಗಳ ಕೆತ್ತನೆ ಮಾಡಲಾಗಿದೆ.
ಈ ದೇವಾಲಯದಲ್ಲಿ ಕೆತ್ತಲಾಗಿರುವ ದೇವರುಗಳು ಸುಬ್ರಮಣ್ಯೇಶ್ವರ, ಗಣಪತಿ, ದಕ್ಶಿಣಾಮೂರ್ತಿ, ಬಲಮುರಿ ವಿನಾಯಕ, ಚಾಮುಂಡೇಶ್ವರಿ, ನಾರಾಯಣ, ಚೌಡೇಶ್ವರಿ, ಚಂಡಿಕೇಶ್ವರ, ಕಾಮಾಕ್ಷಿ ಅಮ್ಮನವರ ಪಕ್ಕದಲ್ಲಿರುವ ಸೋಮೇಶ್ವರ ಹಾಗು ದೇವಾಲಯದ ಮುಂದೆ ಇರುವ ಬಸವಣ್ಣ. ಇಲ್ಲಿ ಕಾಲಭೈರವ, ಮಾರ್ಕಂಡೇಶ್ವರ ಹಾಗು ಮೇಲ್ಭಾಗದಲ್ಲಿ ಅಷ್ಠದಿಕ್ಪಾಲಕರ ಅಂದರೆ ನವಗ್ರಹಗಳ ಕೆತ್ತನೆಯನ್ನು ಸಹ ಕಾಣಬಹುದು. ದೇವಾಲಯದ ಮುಂದೆ ದೊಡ್ಡ ಗರುಡಗಂಭ ಸಹ ಇದೆ.
ಸಂಗಮದ ಒಂದು ಕೊನೆಯಲ್ಲಿ ಅಗಸ್ತ್ಯೇಶ್ವರ ದೇವಾಲಯವಿದ್ದರೆ, ಮತ್ತೊಂದೆಡೆ ಆನಂದೇಶ್ವರ ದೇವಾಲಯವನ್ನು ನಾವು ಕಾಣಬಹುದು. ಇದು ಆನಂದ ಋಷಿಗಳಸಮಾಧಿಯಾಗಿದೆ. ಈ ಆನಂದ ಮಹರ್ಷಿಗಳು ಹೈದರ್ ಅಲಿ ಒಮ್ಮೆ ಈ ಸ್ಥಳದಲ್ಲಿ ಸಂಚರಿಸುತ್ತಿದ್ದಾಗ ಅವನ ಬಳಿ ನೀನು ದೊರೆ ಆಗುತ್ತೀಯ ಎಂದು ಹೇಳಿದ್ದರು. ಸಂಗಮದ ದಕ್ಷಿಣಕ್ಕೆ ಭಿಕ್ಷುಕೇಶ್ವರ ದೇವಾಲಯವಿದೆ. ಈ ದೇವಾಲಯ ನದಿಯ ದಡದಲ್ಲೇ ಇದೆ. ಈ ದೇವಾಲಯದ ಎದುರಿಗೆ ನದಿಯಲ್ಲೆ ಕಂಭವೊಂದಿದೆ, ಅದರ ಮೇಲೆ ಬಸವಣ್ಣನನ್ನು ಕಾಣಬಹುದು.

ಸಂಗಮದ ಮತ್ತೊಂದು ಕೊನೆಯಲ್ಲಿ ಅಂದರೆ ನರಸೀಪುರದ ಊರಿನಲ್ಲಿ ಗುಂಜ ನರಸಿಂಹ ಸ್ವಾಮಿಯ ದೇವಾಲಯವಿದೆ. ಇದು ಸಹ ತ್ರಿವೇಣಿ ಸಂಗಮದ ಬಳಿ ಇರುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ತ್ರಿವೇಣಿ ಸಂಗಮ ಎಷ್ಟು ಪುಣ್ಯ ಸ್ಥಳವೆಂದರೆ ಈ ಸಂಗಮದ ಸುತ್ತಲೂ ದೇವಾಲಯಗಳನ್ನು ಕಾಣಬಹುದು.

ಗುಂಜ ನರಸಿಂಹ ಸ್ವಾಮಿ ದೇವಾಲಯದಿಂದ ಅರ್ಧ ಕಿಲೋಮೀಟರ್ ನಷ್ಟು ದೂರದಲ್ಲಿ ಮೂಲ ಸ್ತಾನೇಶ್ವರ ದೇವಾಲಯವಿದೆ. ಇಲ್ಲಿ ಇರುವ ಅಮ್ಮನವರ ಹೆಸರು ಶಿವಕಾಮ ಸುಂದರಿ. ಅಗಸ್ತ್ಯೇಶ್ವರ ದೇವಾಲಯದ ಬಳಿ ಶಂಕರ ಮಠವನ್ನು ಕಾಣಬಹುದು. ಈ ಮಠವನ್ನು ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಉದ್ಧವನಿಗೆ ಉಪದೇಶಿಸಿದ ಉದ್ಧವಗೀತೆ

ಉದ್ಧವಗೀತೆಯಲ್ಲಿ ದತ್ತಾತ್ರೇಯ ಸ್ವಾಮಿಯ 24ಮಾತುಗಳು

ನಟಿ ವೈಷ್ಣವಿ ಹೊಸ ಮನೆಯ ಗೃಹ ಪ್ರವೇಶ ಹೇಗಿತ್ತು ನೋಡಿ.

ನಟಿ ವೈಷ್ಣವಿ ಹೊಸ ಮನೆಯ ಗೃಹ ಪ್ರವೇಶ ಹೇಗಿತ್ತು ನೋಡಿ.