in ,

ಎಮು ಅತ್ಯಂತ ದೊಡ್ಡ ಪಕ್ಷಿ

ಎಮು
ಎಮು

ಎಮು ಅಥವಾ ಡ್ರೊಮೈಯಸ್‌ ನೊವೇಹೊಲ್ಯಾಂಡಿಯೇ ಎಂಬ ಶಾಸ್ತ್ರೀಯ ಹೆಸರಿನಿಂದ ಕರೆಯಲ್ಪಡುವ ಪಕ್ಷಿಯು ಆಸ್ಟ್ರೇಲಿಯಾ ಮೂಲದ ಒಂದು ಅತ್ಯಂತ ದೊಡ್ಡ ಪಕ್ಷಿಯಾಗಿದೆ ಮತ್ತು ಡ್ರೊಮೈಯಸ್‌ ಕುಲಕ್ಕೆ ಸೇರಿರುವ ಏಕೈಕ ಉಪಲಬ್ಧ ಸದಸ್ಯನಾಗಿದೆ. ಎತ್ತರದ ಆಧಾರದಲ್ಲಿ ಹೇಳುವುದಾದರೆ, ಇದು ವಿಶ್ವದಲ್ಲಿನ ಎರಡನೇ-ಅತಿದೊಡ್ಡ ಉಪಲಬ್ಧ ಪಕ್ಷಿಯಾಗಿದ್ದು, ತನ್ನ ಹಾರಲಾಗದ ಸಂಬಂಧಿಯಾದ ಉಷ್ಟ್ರಪಕ್ಷಿಯ ನಂತರದ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮೃದುವಾದ-ಗರಿಯನ್ನು ಹೊಂದಿರುವ, ಕಂದು ಬಣ್ಣದ ಈ ಹಾರಲಾರದ ಪಕ್ಷಿಯು 2 ಮೀಟರ್ (6.6 ಅಡಿ)ನಷ್ಟು ಎತ್ತರದವರೆಗೆ ಬೆಳೆಯುತ್ತದೆ. ಎಮು ಪಕ್ಷಿಯು ಹೆಚ್ಚು ಜನಸಾಂದ್ರತೆಯಿರುವ ಪ್ರದೇಶಗಳು, ದಟ್ಟ ಕಾಡು, ಮತ್ತು ಬಂಜರು ಅಥವಾ ಶುಷ್ಕ ಪ್ರದೇಶಗಳಿಂದ ದೂರವಾಗಿರುತ್ತದೆಯಾದರೂ, ಆಸ್ಟ್ರೇಲಿಯಾದ ಬಹುತೇಕ ಪ್ರಧಾನ ಭೂಭಾಗದಲ್ಲಿ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಎಮು ಪಕ್ಷಿಗಳು ಹೆಚ್ಚೆಚ್ಚು ದೂರವನ್ನು ಅತೀವವಾದ ವೇಗದಲ್ಲಿ, ಒಪ್ಪವಾಗಿ ಬಳಕೆಮಾಡಿಕೊಳ್ಳುವ ಕುಕ್ಕುಲೋಟದಲ್ಲಿ ಕ್ರಮಿಸಬಲ್ಲವು ಮತ್ತು, ಒಂದು ವೇಳೆ ಅವಶ್ಯಕತೆ ಕಂಡುಬಂದಲ್ಲಿ, ಏಕಕಾಲಕ್ಕೆ ಗಂಟೆಗೆ 50 ಕಿಮೀಗಳಷ್ಟು (ಗಂಟೆಗೆ 31 ಮೈಲಿಗಳು) ವೇಗದಲ್ಲಿ ನಿಗದಿತ ದೂರವನ್ನು ಪೂರ್ಣವೇಗದಲ್ಲಿ ಓಡಬಲ್ಲವು. ಸಮಯಸಾಧಕತನದ ರೀತಿಯಲ್ಲಿ ಅಲೆಮಾರಿ ಸ್ವಭಾವವನ್ನು ಹೊಂದಿರುವ ಅವು, ಆಹಾರವನ್ನು ಹುಡುಕಿಕೊಂಡು ಬಹುದೂರದ ಪ್ರದೇಶಗಳವರೆಗೆ ಸಾಗಬಹುದು. ವೈವಿಧ್ಯಮಯ ಸಸ್ಯಗಳು ಹಾಗೂ ಕೀಟಗಳನ್ನು ಅವು ತಿಂದುಕೊಂಡು ಇರಬಲ್ಲವು. ಟಾಸ್ಮೇನಿಯಾದಲ್ಲಿ ವಾಸವಾಗಿದ್ದ ಎಮು ಉಪಜಾತಿಯು 1788ರಲ್ಲಿ ಆಸ್ಟ್ರೇಲಿಯಾದ ಐರೋಪ್ಯ ವಸಾಹತು ನೆಲೆಗೊಂಡ ನಂತರ ನಿರ್ನಾಮವಾದವು; ಮತ್ತು ಪ್ರಧಾನ ಭೂಭಾಗದ ಉಪಜಾತಿಯ ಹರಡಿಕೆಯು ಮಾನವರ ಚಟುವಟಿಕೆಗಳಿಂದ ಪ್ರಭಾವಕ್ಕೆ ಒಳಗಾಗುತ್ತಾ ಬಂದಿದೆ. ಹಿಂದೊಮ್ಮೆ ಪೂರ್ವ ತೀರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಎಮು ಪಕ್ಷಿಗಳು ಈಗ ಅಪರೂಪವಾಗಿವೆ; ಅದಕ್ಕೆ ತದ್ವಿರುದ್ಧವಾಗಿ, ಆಸ್ಟ್ರೇಲಿಯಾ ಖಂಡದ ಒಳಭಾಗದಲ್ಲಿನ ಕೃಷಿಯ ಬೆಳವಣಿಗೆ ಮತ್ತು ಬೇಸಾಯದ ಪ್ರಾಣಿಗಳಿಗಾಗಿ ಮಾಡಲಾಗುತ್ತಿರುವ ನೀರಿನ ವ್ಯವಸ್ಥೆಯಿಂದಾಗಿ ಬಂಜರು ಪ್ರದೇಶ ಅಥವಾ ಶುಷ್ಕ ಪ್ರದೇಶಗಳಲ್ಲಿ ಎಮುವಿನ ಶ್ರೇಣಿಯು ಹೆಚ್ಚಾಗಲು ಕಾರಣವಾಗಿದೆ. ಎಮುಗಳನ್ನು ಅವುಗಳ ಮಾಂಸ, ತೈಲ, ಮತ್ತು ಚರ್ಮಕ್ಕಾಗಿ ಸಾಕಣೆ ಮಾಡಲಾಗುತ್ತದೆ.

1789ರಲ್ಲಿ ಪ್ರಕಟಗೊಂಡ ಅರ್ಥರ್‌ ಫಿಲಿಪ್‌ನ ವೋಯೇಜ್‌ ಟು ಬಾಟನಿ ಬೇ ಕೃತಿಯಲ್ಲಿನ ನ್ಯೂ ಹಾಲೆಂಡ್‌ ಕ್ಯಾಸವೇರಿ ಎಂಬ ಹೆಸರಿನಡಿಯಲ್ಲಿ ಎಮು ಮೊದಲು ವಿವರಿಸಲ್ಪಟ್ಟಿತು. ಆ ಸಮಯದಲ್ಲಿ ನ್ಯೂ ಹಾಲೆಂಡ್‌ ಎಂದು ಉಲ್ಲೇಖಿಸಲ್ಪಡುತ್ತಿದ್ದ, ಆಸ್ಟ್ರೇಲಿಯಾ ಪ್ರದೇಶದ ಸಿಡ್ನಿಗೆ ಸೇರಿದ ಮಾದರಿಯೊಂದರ ಮೇಲೆ ಸದರಿ ಜಾತಿಯ ಹೆಸರನ್ನು ಜಾನ್‌ ಲ್ಯಾಥಮ್‌ ಎಂಬ ಪಕ್ಷಿವಿಜ್ಞಾನಿ ಇರಿಸಿದ. ಫಿಲಿಪ್‌ನ ಪುಸ್ತಕದ ಕುರಿತಾಗಿ ಜತೆಗೂಡಿ ಕೆಲಸ ಮಾಡಿದ ಈತ, ಆಸ್ಟ್ರೇಲಿಯಾದ ಅನೇಕ ಪಕ್ಷಿ ಜಾತಿಗಳ ಹೆಸರುಗಳು ಹಾಗೂ ಅವುಗಳ ಮೊದಲ ವಿವರಣೆಗಳನ್ನು ಒದಗಿಸಿದ; ಇದರ ಹೆಸರು “ವೇಗದ-ಕಾಲನ್ನುಳ್ಳ ನ್ಯೂ ಹಾಲೆಂಡರ್‌” ಎಂಬುದಕ್ಕಿರುವ ಲ್ಯಾಟಿನ್‌ ಹೆಸರಾಗಿದೆ. ಎಮು ಎಂಬ ಸಾಮಾನ್ಯ ಹೆಸರಿನ ನಿಷ್ಪತ್ತಿಯು ಖಚಿತವಾಗಿ ತಿಳಿದಿಲ್ಲವಾದರೂ, ಬೃಹತ್‌ ಪಕ್ಷಿಗೆ ಸಂಬಂಧಿಸಿದ ಅರೇಬಿಕ್‌ ಪದವೊಂದರಿಂದ ಇದು ಬಂದಿರಬಹುದೆಂದು ಭಾವಿಸಲಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದಲ್ಲಿನ ಸಂಬಂಧಿತ ಕ್ಯಾಸವೇರಿಯನ್ನು ವಿವರಿಸಲು ಇದೇ ಪದವು ಪೋರ್ಚುಗೀಸ್‌ ಪರಿಶೋಧಕರಿಂದ ನಂತರದಲ್ಲಿ ಬಳಸಲ್ಪಟ್ಟಿತು. ವಿಕ್ಟೋರಿಯಾದಲ್ಲಿ, ಎಮುವಿಗೆ ಸಂಬಂಧಿಸಿದ ಕೆಲವೊಂದು ಪದಗಳು ವಿಭಿನ್ನವಾಗಿದ್ದವು. ಜಾ ಜಾ ವುರ್ರುಂಗ್‌ ಭಾಷೆಯಲ್ಲಿ ಇದರ ಹೆಸರು ಬರ್ರಿಮಾಲ್‌ ಎಂದಾಗಿದ್ದರೆ, ಗುನಾಯ್‌ ಭಾಷೆಯಲ್ಲಿ ಮೈಯೌರ್‌ ಎಂದೂ, ಮತ್ತು ಜರ್ದ್ವಾದ್‌ಜಾಲಿ ಭಾಷೆಯಲ್ಲಿ ಕೌರ್ನ್‌ ಎಂದೂ ಇದಕ್ಕೆ ಹೆಸರಿತ್ತು. ಸಿಡ್ನಿಯ ತಗ್ಗುಪ್ರದೇಶಕ್ಕೆ ಸೇರಿದ ಇಯೊರಾ ಹಾಗೂ ದಾರುಗ್‌ ವಲಯಗಳ ಸ್ಥಳೀಯ ನಿವಾಸಿಗಳಿಗೆ ಇದು ಮುರಾವುಂಗ್‌ ಅಥವಾ ಬಿರಾಬಯಿನ್‌ ಎಂದೇ ಪರಿಚಿತವಾಗಿತ್ತು. ಎಮುವಿಗೆ ಸಂಬಂಧಿಸಿದಂತೆ 1816ರಲ್ಲಿ ತಾನು ನೀಡಿದ ಮೂಲ ವಿವರಣೆಯಲ್ಲಿ, ವಿಯೆಲ್ಲಾಟ್‌ ಎಂಬಾತ ಎರಡು ಜಾತಿವಾಚಕ ಹೆಸರುಗಳನ್ನು ಬಳಸಿದ; ಮೊದಲಿಗೆ ಅದು ಡ್ರೊಮಿಷಿಯಸ್‌ ಎಂದಾಗಿದ್ದರೆ, ನಂತರದ ಕೆಲ ಪುಟಗಳಲ್ಲಿ ಅದು ಡ್ರೊಮೈಯಸ್‌ ಎಂದಾಗಿತ್ತು. ಯಾವುದು ಸರಿಯಾದ ಹೆಸರು ಎಂಬುದರ ಕುರಿತಾಗಿ ಅಂದಿನಿಂದಲೂ ಇದು ಚರ್ಚೆಗೆ ಗ್ರಾಸವಾಗುತ್ತಲೇ ಬಂದಿದೆ; ಎರಡನೆಯ ಹೆಸರು ಹೆಚ್ಚು ನಿಖರವಾಗಿ ರೂಪುಗೊಂಡಿದೆಯಾದರೂ, ಜೀವಿವರ್ಗೀಕರಣ ಶಾಸ್ತ್ರದಲ್ಲಿನ ವಿಧ್ಯುಕ್ತ ಸಂಪ್ರದಾಯದ ಪ್ರಕಾರ, ಮೊದಲ ಹೆಸರು ಸ್ಪಷ್ಟವಾಗಿ ಒಂದು ಮುದ್ರಣದ ದೋಷವಾಗಿರದ ಹೊರತು ಸೂಕ್ತವಾಗಿ ಕಂಡುಬರುತ್ತದೆ. ಆಸ್ಟ್ರೇಲಿಯಾದ ಸರ್ಕಾರದ ಪ್ರಕಟಣೆಗಳೂ ಸೇರಿದಂತೆ ತೀರಾ ಆಧುನಿಕವಾದ ಪ್ರಕಟಣೆಗಳು ಡ್ರೊಮೈಯಸ್‌ ಎಂಬ ಹೆಸರನ್ನೇ ಬಳಸುತ್ತಿದ್ದು, ಡ್ರೊಮಿಷಿಯಸ್‌ ಎಂಬ ಹೆಸರನ್ನು ಒಂದು ಪರ್ಯಾಯ ಕಾಗುಣಿತವಾಗಿ ಉಲ್ಲೇಖಿಸುತ್ತವೆ.

ಎಮು ಅತ್ಯಂತ ದೊಡ್ಡ ಪಕ್ಷಿ
ಎಮು ಕಣ್ಣುಗಳು ಹೊಂಬಣ್ಣದ ಕಂದಿನಿಂದ ಕಪ್ಪಗಿನವರೆಗೆ ಇವೆ. ಕತ್ತಿನ ಮೇಲಿನ ಬರಿಯ ಚರ್ಮವು ನೀಲಿಛಾಯೆಯ ಕಪ್ಪು ಬಣ್ಣದಲ್ಲಿದೆ.

ಎಮುಗಳ ಹತ್ತಿರದ ಸಂಬಂಧಿಗಳಾದ ಕ್ಯಾಸವೇರಿಗಳು, ಹಾರಲಾಗದ ಗಣವಾದ ಸ್ಟ್ರೂಥಿಯಾನಿಫಾರ್ಮೆಸ್‌ನಲ್ಲಿನ ಕ್ಯಾಸುಯೇರಿಡೇ ಕುಟುಂಬದಲ್ಲಿ ಸೇರಿಸಲ್ಪಡುವುದರೊಂದಿಗೆ ಎಮು ಪಕ್ಷಿಯು ವರ್ಗೀಕರಿಸಲ್ಪಟ್ಟಿತು. ಆದಾಗ್ಯೂ, ಕ್ಯಾಸುಯೇರಿಡೇ ಕುಟುಂಬವನ್ನು ಅವುಗಳ ಸ್ವಂತ ಗಣವಾದ ಕ್ಯಾಸುಯೇರಿಫಾರ್ಮೆಸ್‌ ಎಂಬುದಾಗಿ ವಿಭಜಿಸುವ ಮೂಲಕ ಒಂದು ಪರ್ಯಾಯ ವರ್ಗೀಕರಣವನ್ನು ಇತ್ತೀಚೆಗಷ್ಟೇ ಅಂಗೀಕರಿಸಲಾಗಿದೆ. ಐರೋಪ್ಯ ವಸಾಹತುವು ನೆಲೆಗಾಣುವುದಕ್ಕೆ ಮುಂಚಿತವಾಗಿ ಮೂರು ವಿಭಿನ್ನ ಡ್ರೊಮೈಯಸ್‌ ಜಾತಿಗಳು ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿದ್ದವು, ಮತ್ತು ಅವುಗಳಲ್ಲಿ ಒಂದು ಜಾತಿಯು ಪಳೆಯುಳಿಕೆಗಳಿಂದ ಅರಿಯಲ್ಪಟ್ಟಿದೆ. ಡ್ರೊಮೈಯಸ್‌ ಬೌದಿನಿಯಾನಸ್‌ ಮತ್ತು D. ಏಟರ್‌ ಎಂದು ಕರೆಯಲ್ಪಡುವ ಪುಟ್ಟ ಎಮುಗಳೆರಡೂ ಕೆಲವೇ ದಿನಗಳ ನಂತರದಲ್ಲಿ ನಿರ್ನಾಮವಾದವು; ಆದಾಗ್ಯೂ, D. 

ನೊವೇಹೊಲ್ಯಾಂಡಿಯೇ ಎಂಬ ಎಮು ಪಕ್ಷಿಯು ಸಾಮಾನ್ಯವಾಗಿ ಉಳಿದುಕೊಂಡಿದೆ. ಬಹುಮಟ್ಟಿಗೆ ಮಳೆಬೀಳುವಿಕೆಯನ್ನು ಅವಲಂಬಿಸಿರುವ ಎಮುಗಳ ಸಂಖ್ಯೆಯು ದಶಕದಿಂದ ದಶಕಕ್ಕೆ ಬದಲಾಗುತ್ತಲೇ ಬಂದಿದೆ; ಎಮು ಪಕ್ಷಿಗಳ ಸಂಖ್ಯೆ 625,000ದಿಂದ 725,000ರವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು, ಈ ಪೈಕಿ 100,000ದಿಂದ 200,000ದವರೆಗಿನ ಎಮುಗಳು ಪಶ್ಚಿಮ ಆಸ್ಟ್ರೇಲಿಯಾದಲ್ಲಿದ್ದರೆ, ಉಳಿದ ಎಮುಗಳು ಬಹುಮಟ್ಟಿಗೆ ನ್ಯೂ ಸೌತ್‌ ವೇಲ್ಸ್‌ ಮತ್ತು ಕ್ವೀನ್ಸ್‌ಲೆಂಡ್‌‌ನಲ್ಲಿ ನೆಲೆಗೊಂಡಿವೆ. ಟಾಸ್ಮೇನಿಯಾದ ಎಮು ಎಂದು ಹೆಸರಾಗಿರುವ D. ನೊವೇಹೊಲ್ಯಾಂಡಿಯೇ ಡೈಮೆನೆನ್ಸಿಸ್‌ ಎಂಬ ಒಂದು ಉಪಜಾತಿಯು 1865ರ ಸುಮಾರಿಗೆ ನಿರ್ನಾಮವಾಯಿತು. 20ನೇ ಶತಮಾನದ ಅವಧಿಯಲ್ಲಿ, ಟಾಸ್ಮೇನಿಯಾದ ಆಚೆಗಿರುವ ಮಾರಿಯಾ ದ್ವೀಪ ಮತ್ತು ದಕ್ಷಿಣ ಆಸ್ಟ್ರೇಲಿಯಾದ ಸಮೀಪದಲ್ಲಿರುವ ಕಾಂಗರೂ ದ್ವೀಪಗಳಿಗೆ ಎಮುಗಳು ಪರಿಚಯಿಸಲ್ಪಟ್ಟವು. ಕಾಂಗರೂ ದ್ವೀಪದ ಪಕ್ಷಿಗಳು ಅಲ್ಲಿ ಒಂದು ತಳಿ ಬೆಳೆಸುವಿಕೆ ಸಂಖ್ಯೆಯನ್ನು ನೆಲೆಗೊಳಿಸಿವೆ. ಮಾರಿಯಾ ದ್ವೀಪದಲ್ಲಿನ ಸದರಿ ಪಕ್ಷಿ ಸಂಕುಲದ ಸಂಖ್ಯೆಯು 1990ರ ದಶಕದ ಮಧ್ಯಭಾಗದಲ್ಲಿ ನಿರ್ನಾಮವಾಯಿತು. ಆಸ್ಟ್ರೇಲಿಯಾದಲ್ಲಿ ಮೂರು ಉಪಲಬ್ಧ ಉಪಜಾತಿಗಳು ಕಂಡುಬರುತ್ತವೆ.

ಆಗ್ನೇಯ ಭಾಗದಲ್ಲಿ ಕಂಡುಬರುವ, D. ನೊವೇಹೊಲ್ಯಾಂಡಿಯೇ ನೊವೇಹೊಲ್ಯಾಂಡಿಯೇ ಉಪಜಾತಿ. ತಳಿ ಬೆಳೆಸುವಿಕೆಯ ಸಮಯದಲ್ಲಿ ಇವು ನಸುಬಿಳಿಯ ಗರಿಗಳ ಕತ್ತುನೆರಿಗೆಯನ್ನು ಹೊಂದಿರುತ್ತವೆ.

ಉತ್ತರ ಭಾಗದಲ್ಲಿ ಕಂಡುಬರುವ D. ನೊವೇಹೊಲ್ಯಾಂಡಿಯೇ ವುಡ್‌ವರ್ಡಿ ಉಪಜಾತಿ. ಇದು ಸಣಕಲು ದೇಹ ಮತ್ತು ಮಸುಕಲು ಬಣ್ಣವನ್ನು ಹೊಂದಿರುತ್ತದೆ.

ನೈರುತ್ಯ ಭಾಗದಲ್ಲಿ ಕಂಡುಬರುವ D. ನೊವೇಹೊಲ್ಯಾಂಡಿಯೇ ರಾತ್‌ಷಿಲ್ಡಿ ಉಪಜಾತಿ. ಇದು ಗಾಢವರ್ಣದಲ್ಲಿದ್ದು ತಳಿ ಬೆಳೆಸುವಿಕೆಯ ಅವಧಿಯಲ್ಲಿ ಯಾವುದೇ ಗರಿಗಳ ಕತ್ತುನೆರಿಗೆಯನ್ನು ಹೊಂದಿರುವುದಿಲ್ಲ.

ಎಮುಗಳು ಕೇವಲ ಮೂರು ಕಾಲ್ಬೆರಳುಗಳನ್ನು ಹೊಂದಿದ್ದು ಅವು ಮೂರು ಕಾಲುಬೆರಳುಗಳ ಒಂದು ವ್ಯವಸ್ಥೆಯಲ್ಲಿರುತ್ತವೆ; ಓಡುವುದಕ್ಕಾಗಿ ಮಾಡಿಕೊಂಡಿರುವ ಈ ಮಾರ್ಪಾಡು ಹೆಬ್ಬಕ ಎಂಬ ದೊಡ್ಡ ಗಾತ್ರದ ಕೊಕ್ಕರೆಗಳು ಮತ್ತು ಲಾವಕ್ಕಿಗಳಂಥ ಇತರ ಪಕ್ಷಿಜಾತಿಗಳಲ್ಲಿ ಕಂಡುಬರುತ್ತವೆ. ಉಷ್ಟ್ರಪಕ್ಷಿಯು ಕೇವಲ ಎರಡು ಕಾಲ್ಬೆರಳುಗಳನ್ನು ಹೊಂದಿರುತ್ತದೆ.

ಎಮು ಅತ್ಯಂತ ದೊಡ್ಡ ಪಕ್ಷಿ
ಎಮುಗಳು ಕೇವಲ ಮೂರು ಕಾಲ್ಬೆರಳುಗಳನ್ನು ಹೊಂದಿದ್ದು ಅವು ಮೂರು ಕಾಲುಬೆರಳುಗಳ ಒಂದು ವ್ಯವಸ್ಥೆಯಲ್ಲಿರುತ್ತವೆ

ಎಮುಗಳು ಬೃಹತ್‌ ಗಾತ್ರದ ಪಕ್ಷಿಗಳಾಗಿವೆ. 

ಅವು ಪುಟ್ಟದಾದ, ಅವಶೇಷವಾಗಿರುವ ರೆಕ್ಕೆಗಳನ್ನು ಮತ್ತು ಒಂದು ಉದ್ದನೆಯ ಕತ್ತು ಹಾಗೂ ಕಾಲುಗಳನ್ನು ಹೊಂದಿರುತ್ತವೆ. ಗಂಟೆಗೆ 48 ಕಿಮೀಗಳಷ್ಟು (ಗಂಟೆಗೆ 30 ಮೈಲಿಗಳಷ್ಟು) ಉನ್ನತ ವೇಗದಲ್ಲಿ ಓಡಬಲ್ಲ ಅವುಗಳ ಸಾಮರ್ಥ್ಯವು, ಅತಿಶಯವಾಗಿ ವಿಶೇಷೀಕರಿಸಲ್ಪಟ್ಟ ಅಥವಾ ನಿರ್ದಿಷ್ಟ ಉದ್ದೇಶಕ್ಕಾಗಿ ಹೊಂದಾಣಿಕೆ ಮಾಡಲ್ಪಟ್ಟ ಅವುಗಳ ಶ್ರೋಣಿ ಕುಹರದ ಅವಯವ ಸ್ನಾಯುವ್ಯೂಹದಿಂದಾಗಿ ದಕ್ಕಿದೆ. ಅವುಗಳ ಪಾದಗಳು ಕೇವಲ ಮೂರು ಬೆರಳುಗಳನ್ನು ಹೊಂದಿವೆ ಮತ್ತು ಅದಕ್ಕನುಗುಣವಾಗಿ ಮೂಳೆಗಳು ಸಂಖ್ಯೆ ಹಾಗೂ ಸಂಬಂಧಿತ ಪಾದದ ಸ್ನಾಯುಗಳ ಸಂಖ್ಯೆಯೂ ತಗ್ಗಿಸಲ್ಪಟ್ಟದೆ. ಅಷ್ಟೇ ಅಲ್ಲ, ಅವು ಕೆಳಭಾಗದ ಕಾಲುಗಳ ಹಿಂಭಾಗದಲ್ಲಿ ಮೀನಖಂಡದ ಸ್ನಾಯುಗಳನ್ನು ಹೊಂದಿರುವ ಏಕೈಕ ಪಕ್ಷಿಗಳಾಗಿವೆ. ಎಮುಗಳ ಶ್ರೋಣಿ ಕುಹರದ ಅವಯವ ಸ್ನಾಯುಗಳು, ಹಾರುವ ಪಕ್ಷಿಗಳ ಹಾರುಸ್ನಾಯುಗಳ ರೀತಿಯಲ್ಲಿಯೇ ಒಟ್ಟಾರೆ ಪರಿಮಾಣ ದ್ರವ್ಯರಾಶಿಗೆ ಒಂದು ಕೊಡುಗೆಯನ್ನು ನೀಡುತ್ತವೆ. ಮೇಯುವುದಕ್ಕೆ ಅನುವಾಗುವಂತೆ ಅವು ಒಂದು ಮೃದುವಾದ ಕೊಕ್ಕನ್ನು ಹೊಂದಿವೆ.

ತಲೆ ಮತ್ತು ಮೇಲ್ಭಾಗದ ಕತ್ತು

ಎಮುವಿನ ಕತ್ತು ನಸು ನೀಲಿ ಬಣ್ಣದಲ್ಲಿದ್ದು ತನ್ನ ವಿರಳವಾದ ಗರಿಗಳ ಮೂಲಕ ಅದನ್ನು ಅದನ್ನು ಹೊರಹೊಮ್ಮಿಸುತ್ತದೆ. ಕೇಶಮಯವಾದ ನೋಟವನ್ನು ನೀಡುವ ಕಂದುಬಣ್ಣದಿಂದ ಬೂದು-ಕಂದು ಬಣ್ಣದವರೆಗಿನ ಪುಕ್ಕಗಳನ್ನು ಅವು ಹೊಂದಿವೆ. ಗರಿಗಳ ಗರಿದಿಂಡುಗಳು ಮತ್ತು ತುದಿಗಳು ಕಪ್ಪಗಿರುತ್ತವೆ. ಸೌರ ವಿಕಿರಣದ ಶಕ್ತಿಯು ರೆಕ್ಕೆಯ ತುದಿಗಳಿಂದ ಹೀರಲ್ಪಡುತ್ತದೆ, ಮತ್ತು ವಿರಳವಾಗಿ-ಜೋಡಣೆಗೊಂಡಿರುವ ಒಳಭಾಗದ ಪುಕ್ಕಗಳು ಚರ್ಮಕ್ಕೆ ಶಾಖನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪರಿಣಾಮಕವಾಗಿ ಕಂಡುಬರುವ ಶಾಖವು ಸದರಿ ಪದರದಿಂದ ಒದಗಿಸಲ್ಪಡುವ ನಿರೋಧನದಿಂದಾಗಿ ಚರ್ಮದೊಳಗೆ ಹರಿಯದಂತೆ ತಡೆಯಲ್ಪಟ್ಟು, ದಿನದ ಶಾಖದ ಅವಧಿಯಲ್ಲೂ ಪಕ್ಷಿಯು ಕ್ರಿಯಾಶೀಲವಾಗಿರುವಲ್ಲಿ ಅದಕ್ಕೆ ಅನುವುಮಾಡಿಕೊಡುತ್ತದೆ. ಎಮು ಪಕ್ಷಿಯ ಗರಿಯ ಒಂದು ವಿಶಿಷ್ಟ ಲಕ್ಷಣವೆಂದರೆ, ಒಂದು ಏಕ ಗರಿದಿಂಡಿನಿಂದ ಅದರ ಜೋಡಿ ಗರಿಯ ಕಾಂಡವು ಹೊರಹೊಮ್ಮುವುದೇ ಆಗಿದೆ. ಗಂಡು ಮತ್ತು ಹೆಣ್ಣು ಪಕ್ಷಿಗಳು ನೋಡಲಿಕ್ಕೆ ಒಂದೇ ಥರ ಇರುತ್ತವೆ. ತೀರಾ ಬಿಸಿಯಾಗಿರುವ ದಿನಗಳಲ್ಲಿ, ಎಮುಗಳು ತಮ್ಮ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ಏದುಸಿರು ಬಿಡುತ್ತವೆ, ಅವುಗಳ ಶ್ವಾಸಕೋಶಗಳು ಆವಿಯಾಗಿಸುವ ಶೈತ್ಯಕಾರಿಗಳಾಗಿ ಕೆಲಸ ಮಾಡುತ್ತವೆ ಮತ್ತು ಇತರ ಕೆಲವೊಂದು ಜಾತಿಗಳಿಗಿಂತ ಭಿನ್ನವಾಗಿ ಕಂಡುಬರುವ ರಕ್ತದಲ್ಲಿನ ಇಂಗಾಲದ ಡೈಯಾಕ್ಸೈಡ್‌ನ ಕಡಿಮೆ ಮಟ್ಟಗಳು ಕ್ಷಾರತೆಯನ್ನು ಉಂಟುಮಾಡುವುದು ಕಂಡುಬರುವುದಿಲ್ಲ. ತಂಪಾಗಿರುವ ವಾತಾವರಣದಲ್ಲಿ ಸಾಮಾನ್ಯವಾದ ರೀತಿಯಲ್ಲಿ ಉಸಿರಾಡಲು ಅವು ದೊಡ್ಡದಾದ ಬಹುಮಡಿಕೆಯ ಮೂಗಿನ ಮಾರ್ಗವನ್ನು ಅವು ಹೊಂದಿವೆ. ತಂಪಾದ ಗಾಳಿಯು ಶ್ವಾಸಕೋಶಗಳೊಳಗೆ ಹಾದುಹೋದಂತೆ ಬೆಚ್ಚಗಾಗುತ್ತದೆ, ತನ್ಮೂಲಕ ಮೂಗಿನ ಪ್ರದೇಶದಿಂದ ಶಾಖವನ್ನು ಹೊರತೆಗೆಯಲು ಸಾಧ್ಯವಾಗುತ್ತದೆ. ನಿಶ್ವಾಸದ ಅವಧಿಯಲ್ಲಿ, ಎಮುವಿನ ಮೂಗಿನ ತಂಪಾದ ಸುರುಳಿಯಂಥ ರಚನೆಗಳು ಗಾಳಿಯಿಂದ ಹಿಂದಕ್ಕೆ ಪಡೆದ ತೇವಾಂಶವನ್ನು ಬಾಷ್ಪೀಕರಿಸಿ, ಮರುಬಳಕೆಗಾಗಿ ಅದನ್ನು ಹೀರಿಕೊಳ್ಳುತ್ತದೆ. 

ಆಸ್ಟ್ರೇಲಿಯಾದಾದ್ಯಂತ ಇರುವ ಬಹುತೇಕ ಆವಾಸಸ್ಥಾನಗಳಲ್ಲಿ ಎಮುಗಳು ವಾಸಿಸುತ್ತವೆಯಾದರೂ, ಪೆಡಸುಪರ್ಣಿ ಕಾಡು ಮತ್ತು ಹುಲ್ಲುಗಾವಲು ಕಾಡುಪ್ರದೇಶದ ವಲಯಗಳಲ್ಲಿ ಅವು ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತವೆ ಮತ್ತು ತೇವದ ಕಾಲಗಳ ಅವಧಿಯನ್ನು ಹೊರತುಪಡಿಸಿ, ಜನನಿಬಿಡತೆಯನ್ನು ಹೊಂದಿರುವ ಮತ್ತು ಅತಿ ಶುಷ್ಕ ಪ್ರದೇಶಗಳಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಎಮುಗಳು ಪ್ರಧಾನವಾಗಿ ಜೊತೆಜೊತೆಯಾಗಿ ಸಂಚರಿಸುತ್ತವೆ, ಮತ್ತು ಅವು ಅಗಾಧವಾದ ಹಿಂಡುಗಳನ್ನು ರೂಪಿಸಬಲ್ಲ ಸಂದರ್ಭದಲ್ಲೇ, ಇದೊಂದು ಅಸಾಧಾರಣವಾದ ಸಾಮಾಜಿಕ ನಡವಳಿಕೆಯಾಗಿದ್ದು, ಆಹಾರದ ಮೂಲಗಳ ಕಡೆಗೆ ಚಲಿಸುವ ಒಂದು ಸಾಮಾನ್ಯ ಅಗತ್ಯದಿಂದ ಅದು ಉದ್ಭವಿಸುತ್ತದೆ. ಸಮೃದ್ಧವಾದ ಹುಲ್ಲುಗಾವಲು ಪ್ರದೇಶಗಳನ್ನು ತಲುಪುವ ಸಲುವಾಗಿ ಸುದೀರ್ಘ ಅಂತರವನ್ನು ಎಮುಗಳು ಕ್ರಮಿಸುತ್ತವೆ ಎಂದು ಕಂಡುಬಂದಿದೆ. ಪಶ್ಚಿಮ ಆಸ್ಟ್ರೇಲಿಯಾದಲ್ಲಿ, ಎಮುವಿನ ಚಲನೆಗಳು ಒಂದು ಸ್ಪಷ್ಟವಾದ ಋತುವಿನ ಮಾದರಿಯನ್ನು, ಅಂದರೆ ಬೇಸಿಗೆಯಲ್ಲಿ ಉತ್ತರದ ಕಡೆಗೂ ಚಳಿಗಾಲದಲ್ಲಿ ದಕ್ಷಿಣದ ಕಡೆಗೂ ಚಲಿಸುವ ಮಾದರಿಯನ್ನು ಅನುಸರಿಸುತ್ತವೆ. ಪೂರ್ವ ತೀರದಲ್ಲಿನ ಅವುಗಳ ಅಲೆದಾಟಗಳು ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸಿದಂತೆ ಕಾಣುವುದಿಲ್ಲ. ಅಗತ್ಯ ಕಂಡುಬಂದಾಗಲೆಲ್ಲಾ ಈಜುವ ಸಾಮರ್ಥ್ಯವನ್ನೂ ಸಹ ಎಮುಗಳು ಹೊಂದಿವೆ. ನಾಗರಿಕತೆಯ ಅಸ್ತಿತ್ವವಿರುವ ಪ್ರದೇಶವನ್ನು ಸಮೀಪಿಸುತ್ತಿರುವ ಕುರಿತು ಎಮು ಪಕ್ಷಿಯೊಂದಕ್ಕೆ ಎಚ್ಚರವಿರುತ್ತದೆಯಾದರೂ, ಕೃಷಿ ಮಾಡಿರದ ನೈಸರ್ಗಿಕ ಪರಿಸ್ಥಿತಿಯಲ್ಲಿ ವಾಸವಾಗಿರುವ ಮನುಷ್ಯರ ಸಣ್ಣ ಗುಂಪುಗಳು ಅವುಗಳನ್ನು ಆಹಾರದ ಮೂಲಕ ಪ್ರಚೋದಿಸಿದಾಗ ಎಮುಗಳು ಅವರ ಬಳಿಗೆ ಸಾಗುತ್ತವೆ. ವಾಸ್ತವವಾಗಿ, ಅವುಗಳಿಗೆ ಆಹಾರವನ್ನು ನೀಡದಿದ್ದರೂ ಸಹ, ಅವು ತಮ್ಮತಮ್ಮೊಳಗೇ ಸತತವಾಗಿ ನೆರವಾಗುವ ನಡವಳಿಕೆಯನ್ನು ತೋರಿಸುತ್ತವೆ.

ಹಗಲು ಹಕ್ಕಿಯೊಂದರ ಮಾದರಿಯಲ್ಲಿ ಎಮುಗಳು ಮೇವನ್ನು ಸಂಗ್ರಹಿಸುತ್ತವೆ. ಸ್ಥಳದಲ್ಲಿ ಲಭ್ಯವಿರುವ ಮತ್ತು ಪರಿಚಯಿಸಲ್ಪಟ್ಟಿರುವ ವೈವಿಧ್ಯಮಯ ಸಸ್ಯಜಾತಿಯನ್ನು ಅವು ತಿನ್ನುತ್ತವೆ. ಹೀಗೆ ಅವು ತಿನ್ನುವ ಸಸ್ಯಗಳು ಆಯಾ ಋತುವಿನಲ್ಲಿನ ಅವುಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ. ಎಮುಗಳು ಕೀಟಗಳನ್ನೂ ತಿನ್ನುತ್ತವೆ. ಅವುಗಳೆಂದರೆ, ಕುಪ್ಪಳಿಸುವ ಮಿಡತೆಗಳು ಮತ್ತು ಚಿಮ್ಮಂಡೆಗಳು, ಕಪ್ಪುಮಚ್ಚೆಯ ಕೆಂಗಂದು ಜೀರುಂಡೆಗಳು, ಬಂಟ ಇರುವೆ ಮತ್ತು ಚಕ್ಕೊತ್ತಿ ಸೊಪ್ಪಿನ ಮರಿಹುಳುಗಳು, ಬಾಗ್‌ನಾಗ್‌ ಪತಂಗಗಳು ಮತ್ತು ಹತ್ತಿಕಾಯಿಯ ಬೀಜಕೋಶದ ಪತಂಗದ ಬಾಲದ ಮರಿಹುಳುಗಳು ಹಾಗೂ ಇರುವೆಗಳು. ಪಶ್ಚಿಮ ಆಸ್ಟ್ರೇಲಿಯಾದಲ್ಲಿ, ಸಂಚರಿಸುವ ಎಮುಗಳಲ್ಲಿ ಆಹಾರದ ಆದ್ಯತೆಗಳು ಅಥವಾ ಇಷ್ಟಪಡುವಿಕೆಗಳು ಕಂಡುಬರುತ್ತವೆ; ಮಳೆಗಾಲ ಪ್ರಾರಂಭವಾಗುವವರೆಗೂ ಅವು ಅಕೇಷಿಯಾ ಅನ್ಯುರಾ ಸಸ್ಯದ ಬೀಜಗಳನ್ನು ತಿನ್ನುತ್ತವೆ. ಅದಾದ ನಂತರ ಅವು ತಾಜಾ ಹುಲ್ಲಿನ ಚಿಗುರುಗಳು ಹಾಗೂ ಮರಿಹುಳುಗಳನ್ನು ತಿನ್ನುತ್ತವೆ; ಚಳಿಗಾಲದಲ್ಲಿ ಅವು ಕ್ಯಾಸಿಯಾ ಸಸ್ಯದ ಎಲೆಗಳು ಮತ್ತು ಬೀಜಕೋಶಗಳನ್ನು ತಿನ್ನುತ್ತವೆ; ವಸಂತಕಾಲದಲ್ಲಿ ಅವು ಕುಪ್ಪಳಿಸುವ ಮಿಡತೆಗಳನ್ನು ಹಾಗೂ ಕ್ವಾನ್‌ಡಾಂಗ್‌ನ ಒಂದು ವಿಧವಾದ ಸಂಟಾಲಂ ಅಕ್ಯುಮಿನೇಟಂ ನ ಹಣ್ಣನ್ನು ತಿನ್ನುತ್ತವೆ. ಬೃಹತ್‌ ಪ್ರಮಾಣದ ಮೊಳೆಯಬಲ್ಲ ಬೀಜಗಳ ಪ್ರಸರಣದಲ್ಲೂ ಸಹ ಎಮುಗಳು ಒಂದು ಪ್ರಮುಖ ಮಧ್ಯವರ್ತಿಯ ಪಾತ್ರವನ್ನು ವಹಿಸುವ ಮೂಲಕ, ಇದರಿಂದಾಗಿ ಹೂವಿನ ಜೀವ ವೈವಿಧ್ಯತೆಗೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತವೆ. ತಾವು ಸೇವಿಸಿದ ಸಸ್ಯ ಸಾಮಗ್ರಿಯನ್ನು ಜೀರ್ಣಿಸಿಕೊಳ್ಳಲು ನೆರವಾಗುವಲ್ಲಿ ಉರುಟುಗಲ್ಲುಗಳು ಮತ್ತು ಕಲ್ಲುಗಳ ಅಗತ್ಯ ಎಮುಗಳಿಗೆ ಕಂಡುಬರುತ್ತದೆ. 

ಎಮು ಅತ್ಯಂತ ದೊಡ್ಡ ಪಕ್ಷಿ
ಎಮು ಹಕ್ಕಿಮರಿಗಳು ಉದ್ದುದ್ದದ ಪಟ್ಟೆಗಳನ್ನು ಹೊಂದಿದ್ದು, ಮೊಟ್ಟೆಗಳನ್ನು ಮರೆಮಾಚಿ ರಕ್ಷಿಸುವಲ್ಲಿ ಅವು ನೆರವಾಗುತ್ತವೆ.

ಡಿಸೆಂಬರ್‌ ಮತ್ತು ಜನವರಿಯ ಬೇಸಿಗೆ ತಿಂಗಳುಗಳ ಅವಧಿಯಲ್ಲಿ ಎಮುಗಳು ಮರಿಹಾಕುವಿಕೆಯ ಜೋಡಿಗಳನ್ನು ರೂಪಿಸುತ್ತವೆ, ಮತ್ತು ಈ ಜೋಡಿಗಳು ಸುಮಾರು ಐದು ತಿಂಗಳುಗಳವರೆಗೆ ಜೊತೆಯಲ್ಲಿರುವ ಸಾಧ್ಯತೆಯಿರುತ್ತದೆ. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಗಂಡು-ಹೆಣ್ಣಿನ ಕೂಡುವಿಕೆಯು ಸಂಭವಿಸುತ್ತದೆ‌. ಮರಿಹಾಕುವಿಕೆಯ ಋತುವಿನ ಅವಧಿಯಲ್ಲಿ, ಹಾರ್ಮೋನಿನಲ್ಲಿನ ಬದಲಾವಣೆಗಳನ್ನು ಗಂಡುಗಳು ಕಂಡುಕೊಳ್ಳುತ್ತವೆ. ಲ್ಯೂಟಿನೈಝಿಂಗ್‌ ಹಾರ್ಮೋನು ಮತ್ತು ಟೆಸ್ಟೋಸ್ಟೆರಾನ್‌ ಮಟ್ಟಗಳಲ್ಲಿನ ಒಂದು ಹೆಚ್ಚಳವು ಈ ಬದಲಾವಣೆಯಲ್ಲಿ ಸೇರಿರುತ್ತದೆ, ಹಾಗೂ ಅವುಗಳ ವೃಷಣಗಳ ಗಾತ್ರವು ದುಪ್ಪಟ್ಟು ಹೆಚ್ಚಾಗುತ್ತದೆ. ಗಂಡುಗಳು ತಮ್ಮ ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಅಪೇಕ್ಷೆಯಲ್ಲಿ ಮುಳುಗಿಹೋಗುತ್ತವೆ ಮತ್ತು ನೆಲದ ಮೇಲಿನ ಅರೆ-ಆಸರೆಯ ತಗ್ಗುಪ್ರದೇಶದವೊಂದರಲ್ಲಿ ಮರದ ತೊಗಟೆ, ಹುಲ್ಲು, ಕಡ್ಡಿಗಳು ಮತ್ತು ಎಲೆಗಳನ್ನು ಬಳಸಿ ಒಂದು ಒರಟಾದ ಗೂಡನ್ನು ನಿರ್ಮಿಸುತ್ತವೆ. ಪ್ರತಿ ಒಂದು ಅಥವಾ ಎರಡು ದಿನಕ್ಕೊಮ್ಮೆ ಸದರಿ ಜೋಡಿಯು ಒಂದಾಗುತ್ತದೆ, ಮತ್ತು ಪ್ರತಿ ಎರಡು ಅಥವಾ ಮೂರನೆಯ ದಿನದಂದು 11 (ಮತ್ತು ಸುಮಾರು 20ರವರೆಗೆ) ಅತಿದೊಡ್ಡದಾದ, ದಪ್ಪನೆಯ-ಚಿಪ್ಪನ್ನುಳ್ಳ, ದಟ್ಟ-ಹಸಿರಿನ ಮೊಟ್ಟೆಗಳ ಒಂದು ಸರಾಸರಿಯ ಪೈಕಿ ಒಂದನ್ನು ಹೆಣ್ಣು ಪಕ್ಷಿಯು ಇಡುತ್ತದೆ. ಮಳೆ ಬೀಳುವಿಕೆಯ ಸ್ವರೂಪದೊಂದಿಗೆ ಮೊಟ್ಟೆಗಳ ಸಂಖ್ಯೆಯೂ ಬದಲಾಗುತ್ತಾ ಹೋಗುತ್ತದೆ. 

 ತಳೀಯವಾಗಿ ತದ್ರೂಪವಾಗಿರುವ ಹಕ್ಕಿಯ ಅವಳಿಗಳ ಮೊಟ್ಟಮೊದಲ ಪ್ರಮಾಣೀಕೃತ ಸಂಭವಿಸುವಿಕೆಯು ಎಮು ಪಕ್ಷಿಯಲ್ಲಿ ನಿರೂಪಿಸಲ್ಪಟ್ಟಿತು. ತನ್ನ ಸಂಗಾತಿಯು ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತಿದ್ದಂತೆ ಗಂಡು ಪಕ್ಷಿಯು ಮೊಟ್ಟೆಗೆ ಕಾವುಕೊಡಲು ಬಯಸುತ್ತದೆ, ಮತ್ತು ಮೊಟ್ಟೆಗಳನ್ನು ಇಡುವ ಕಾಲವು ಸಂಪೂರ್ಣವಾಗುವುದಕ್ಕೆ ಮುಂಚೆಯೇ, ಮೊಟ್ಟೆಗಳಿಗೆ ಕಾವುಕೊಡಲು ಶುರುಮಾಡುತ್ತದೆ. ಇಲ್ಲಿಂದಾಚೆಗೆ ಗಂಡುಪಕ್ಷಿಯು ತಿನ್ನುವುದನ್ನು, ಕುಡಿಯುವುದನ್ನು, ಅಥವಾ ಮಲವಿಸರ್ಜನೆ ಮಾಡುವುದನ್ನು ನಿಲ್ಲಿಸಿಬಿಡುತ್ತದೆ, ಮತ್ತು ಮೊಟ್ಟೆಗಳನ್ನು ಮರಿಮಾಡುವ ಕೆಲಸಕ್ಕೆ ಮಾತ್ರವೇ ಅಂಟಿಕೊಳ್ಳುತ್ತದೆ. ಈ ಕೆಲಸವನ್ನು ಅದು ದಿನಕ್ಕೆ ಸುಮಾರು 10 ಬಾರಿ ಮಾಡುತ್ತದೆ. ಎಂಟು ವಾರಗಳ ಅವಧಿಯ ಕಾವುಕೊಡುವಿಕೆಯು ಮುಗಿದ ನಂತರ, ಗಂಡುಪಕ್ಷಿಯು ತನ್ನ ತೂಕದಲ್ಲಿ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಂಶದ ಮೇಲೆ ಹಾಗೂ ಗೂಡಿನಿಂದಲೇ ತಾನು ತಲುಪಬಲ್ಲ ಯಾವುದೇ ಮುಂಜಾನೆಯ ಇಬ್ಬನಿಯನ್ನು ಸೇವಿಸಿ ಅದು ಬದುಕಿರುತ್ತದೆ. ಸೂಪರ್‌ ಫೇರಿ-ರೆನ್‌ನಂಥ ಆಸ್ಟ್ರೇಲಿಯಾದ ಇತರ ಅನೇಕ ಪಕ್ಷಿಗಳಲ್ಲಿ ಕಂಡುಬರುವಂತೆ, ದಾಂಪತ್ಯ ದ್ರೋಹ ಎಂಬುದು ಎಮುಗಳಲ್ಲಿ ರೂಢಿಯ ನಡವಳಿಕೆಯಾಗಿದ್ದು, ಆರಂಭಿಕ ಜೋಡಿ-ಬಾಂಧವ್ಯದ ಹೊರತಾಗಿಯೂ ಇದು ಕಂಡುಬರುತ್ತದೆ: ಗಂಡುಪಕ್ಷಿಯು ಕಾವು ಕೊಡುವಿಕೆಯನ್ನು ಒಮ್ಮೆ ಶುರುಮಾಡುತ್ತಿದ್ದಂತೆ, ಹೆಣ್ಣು ಪಕ್ಷಿಯು ಇತರ ಗಂಡುಪಕ್ಷಿಗಳೊಂದಿಗೆ ದೇಹಸಂಪರ್ಕವನ್ನು ಬೆಳೆಸುತ್ತದೆ ಮತ್ತು ತತ್ಫಲವಾಗಿ ಅದು ಬಹುಸಂಖ್ಯೆಯ ಒಂದು ಕಾವಿನ ಮೊಟ್ಟೆಗಳನ್ನು ಇಡಬಹುದಾಗಿದೆ; ಈ ರೀತಿಯಾಗಿ, ಹೆಚ್ಚೂಕಮ್ಮಿ ಒಂದು ಸಲದ ಮರಿಗಳ ಒಂದು ಗುಂಪಿನಲ್ಲಿನ ಮರಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಇತರ ಗಂಡು ಪಕ್ಷಿಗಳು ಅಪ್ಪಂದಿರಾಗಿರುತ್ತವೆ, ಅಥವಾ ಎಮುಗಳು ತಳಿ ಪರಾವಲಂಬಿಕೆಯನ್ನೂ ಪ್ರದರ್ಶಿಸುವುದರಿಂದ ಅವಕ್ಕೆ ಎರಡೂ ಜನ್ಮದಾತರ ಕರ್ತೃತ್ವ ಅಥವಾ ಪಾಲನೆಯು ದೊರೆಯುವುದಿಲ್ಲ. ಮರಿಗಳು ಮೊಟ್ಟೆಯೊಡೆದು ಆಚೆಗೆ ಬರುವವರೆಗೂ ಕೆಲವೊಂದು ಹೆಣ್ಣು ಪಕ್ಷಿಗಳು ಗೂಡಿನಲ್ಲೇ ಉಳಿದು ಅದನ್ನು ರಕ್ಷಿಸುತ್ತವೆಯಾದರೂ, ಮತ್ತೊಂದು ಗೂಡುಕಟ್ಟುವ ಉದ್ದೇಶದಿಂದ ಬಹುತೇಕ ಹೆಣ್ಣು ಪಕ್ಷಿಗಳು ಸದರಿ ಗೂಡಿನ ಮರಿಯ ಪ್ರದೇಶವನ್ನು ಸಂಪೂರ್ಣವಾಗಿ ತೊರೆಯುತ್ತವೆ; ಒಂದು ಉತ್ತಮವಾದ ಋತುವಿನಲ್ಲಿ ಹೆಣ್ಣು ಎಮುವೊಂದು ಮೂರು ಬಾರಿ ಗೂಡನ್ನು ಕಟ್ಟಬಹುದು. ಕಾವು ಕೊಡುವಿಕೆಯು 56 ದಿನಗಳನ್ನು ತೆಗೆದುಕೊಳ್ಳುತ್ತದೆ, ಮತ್ತು ಮೊಟ್ಟೆಗಳು ಒಡೆದು ಆಚೆಗೆ ಬರುವುದಕ್ಕೆ ಸ್ವಲ್ಪ ಮುಂಚಿತವಾಗಿ ಗಂಡು ಪಕ್ಷಿಗಳು ಕಾವು ಕೊಡುವುದನ್ನು ನಿಲ್ಲಿಸುತ್ತವೆ. ಹೊಸದಾಗಿ ಮೊಟ್ಟೆಯೊಡೆದು ಹೊರಬಂದ ಮರಿಗಳು ಕ್ರಿಯಾಶೀಲವಾಗಿರುತ್ತವೆ ಮತ್ತು ಕೆಲವೇ ದಿನಗಳಲ್ಲಿ ಗೂಡನ್ನು ಬಿಟ್ಟುಹೋಗುವಷ್ಟು ಸಮರ್ಥವಾಗಿರುತ್ತವೆ. ಅವು ಸುಮಾರು ….12 centimetres (5 in)ನಷ್ಟು ಎತ್ತರವಿದ್ದು….5 kg (18 oz)ನಷ್ಟು  ತೂಗುತ್ತವೆ, ಮತ್ತು ಮರೆಮಾಚಿಸುವಿಕೆಗಾಗಿ ಸ್ಪಷ್ಟವಾದ ಕಂದು ಹಾಗೂ ಕೆನೆಬಣ್ಣದ ಪಟ್ಟಿಗಳನ್ನು ಹೊಂದಿರುತ್ತವೆ. ಈ ಪಟ್ಟಿಗಳು ಮೂರು ತಿಂಗಳ ಅಥವಾ ಅದರ ನಂತರದಲ್ಲಿ ಬಣ್ಣಗುಂದುತ್ತವೆ. ಬೆಳೆಯುತ್ತಿರುವ ಮರಿಗಳೊಂದಿಗೆ ಸುಮಾರು 7 ತಿಂಗಳುಗಳವರೆಗೆ ಗಂಡು ಉಳಿದುಕೊಂಡು, ಅವುಗಳನ್ನು ರಕ್ಷಿಸುತ್ತದೆ ಮತ್ತು ಆಹಾರವನ್ನು ಹೇಗೆ ಹುಡುಕುವುದು ಎಂಬುದನ್ನು ಹೇಳಿಕೊಡುತ್ತದೆ. ಮರಿಗಳು ಕ್ಷಿಪ್ರವಾಗಿ ಬಳೆಯುತ್ತವೆ ಮತ್ತು 5-6 ತಿಂಗಳುಗಳಲ್ಲಿ ಸಂಪೂರ್ಣವಾಗಿ ಬೆಳೆದ ಹಂತವನ್ನು ಮುಟ್ಟುತ್ತವೆ. ಅವು ತಮ್ಮ ಎರಡನೇ ಋತುವಿನಲ್ಲಿ ಮರಿಹಾಕುವುದಕ್ಕಾಗಿ ಬೇರ್ಪಡುವುದಕ್ಕೆ ಮುಂಚಿತವಾಗಿ ಆರು ತಿಂಗಳವರೆಗೆ ಅಥವಾ ಮತ್ತಷ್ಟು ಅವಧಿಯವರೆಗೆ ಅವು ತಮ್ಮ ಕುಟುಂಬ ತಂಡದೊಡನೆ ಉಳಿದುಕೊಳ್ಳಬಹುದು. ಕಾಡುಪ್ರದೇಶದಲ್ಲಿ ಎಮುಗಳು 10ರಿಂದ 20 ವರ್ಷಗಳವರೆಗೆ ಜೀವಿಸುತ್ತವೆ. ಸೆರೆಯಲ್ಲಿರುವ ಪಕ್ಷಿಗಳು ಕಾಡುಪ್ರದೇಶದಲ್ಲಿನ ಎಮುಗಳಿಗಿಂತ ಹೆಚ್ಚುಕಾಲದವರೆಗೆ ಬದುಕಬಲ್ಲವು.

ಎಮು ಅತ್ಯಂತ ದೊಡ್ಡ ಪಕ್ಷಿ
ಮೊಟ್ಟೆಗಳ ಗೂಡಿನ ಮೇಲೆ ಕುಳಿತಿರುವ ಗಂಡು ಎಮು

ಎಮುಗಳು ಸ್ಥಳೀಯ ಆಸ್ಟ್ರೇಲಿಯನ್ನರು ಹಾಗೂ ಆರಂಭಿಕ ಐರೋಪ್ಯ ವಲಸೆಗಾರರಿಂದ ಆಹಾರದ ಒಂದು ಮೂಲವಾಗಿ ಬಳಸಲ್ಪಡುತ್ತಿದ್ದವು. ಎಮು ಪಕ್ಷಿಗಳನ್ನು ಹಿಡಿಯಲು ಮೂಲನಿವಾಸಿಗಳು ವೈವಿಧ್ಯಮಯ ತಂತ್ರಗಳನ್ನು ಬಳಸುತ್ತಿದ್ದರು. ನೀರಿನ ಹಳ್ಳಗಳಲ್ಲಿ ಅವು ನೀರುಕುಡಿಯುತ್ತಿರುವಾಗ ಅವುಗಳನ್ನು ಭರ್ಜಿಯಿಂದ ತಿವಿಯುವುದು, ನೀರಿನ ಕುಳಿಗಳಿಗೆ ವಿಷ ಬೆರೆಸುವುದು, ಬಲೆಗಳಲ್ಲಿ ಎಮುಗಳನ್ನು ಸೆರೆಹಿಡಿಯುವುದು, ಮತ್ತು ಅವುಗಳ ಊಳಿಡುವಿಕೆಯನ್ನು ಅನುಕರಿಸುವ ಮೂಲಕ ಅಥವಾ ಗರಿಗಳು ಮತ್ತು ಚಿಂದಿಗಳಿಂದ ಮಾಡಿದ ಚೆಂಡೊಂದನ್ನು ಮರವೊಂದರಿಂದ ತೂಗುಬಿಟ್ಟು ಎಮುಗಳನ್ನು ಆಕರ್ಷಿಸುವುದು ಇವೇ ಮೊದಲಾದವು ಸದರಿ ತಂತ್ರಗಳಲ್ಲಿ ಸೇರಿದ್ದವು. ಆಹಾರದ ಅಗತ್ಯಗಳಿಗಾಗಿ ಯುರೋಪಿಯನ್ನರು ಎಮುಗಳನ್ನು ಕೊಲ್ಲುತ್ತಿದ್ದರು. ಅಷ್ಟೇ ಅಲ್ಲ, ಅವುಗಳು ತಮ್ಮ ವ್ಯವಸಾಯ ಪ್ರದೇಶದಲ್ಲಿ ಮಧ್ಯೆ ಪ್ರವೇಶಿಸಿದಾಗ, ಅಥವಾ ಜಲಕ್ಷಾಮದ/ಬಾಯಾರಿಕೆಯಾದ ಸಮಯದಲ್ಲಿ ನೀರನ್ನು ಹುಡುಕಿಕೊಂಡು ತಮ್ಮ ವಸಾಹತು ಪ್ರದೇಶಗಳನ್ನು ಅವು ಅತಿಕ್ರಮವಾಗಿ ಪ್ರವೇಶಿಸಿದಾಗಲೂ ಅವರು ಎಮುಗಳನ್ನು ಕೊಲ್ಲುತ್ತಿದ್ದರು. 1932ರಲ್ಲಿ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಕಂಡುಬಂದ ಎಮು ಯುದ್ಧವು ಇದಕ್ಕೊಂದು ಪರಮೋಚ್ಚ ಉದಾಹರಣೆಯಾಗಿತ್ತು. ಈ ಅವಧಿಯಲ್ಲಿನ ಒಂದು ಸುಡುಬೇಸಿಗೆಯಲ್ಲಿ ಎಮುಗಳ ಒಂದು ಹಿಂಡು ಕ್ಯಾಂಪಿಯನ್‌ ಮೇಲೆ ದಾಳಿಮಾಡಿ ಪಟ್ಟಣದ ವಾಸಿಗಳಲ್ಲಿ ಗಾಬರಿಯನ್ನುಂಟುಮಾಡಿದಾಗ, ಅವುಗಳನ್ನು ಓಡಿಸುವ ಒಂದು ವಿಫಲಯತ್ನವು ತೀವ್ರವಾಗಿತ್ತು. ಜಾನ್‌ ಗೌಲ್ಡ್‌‌ನ ಹ್ಯಾಂಡ್‌ಬುಕ್‌ ಟು ದಿ ಬರ್ಡ್ಸ್‌ ಆಫ್‌ ಆಸ್ಟ್ರೇಲಿಯಾ ಎಂಬ ಕೃತಿಯು 1865ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಟಾಸ್ಮೇನಿಯಾದಿಂದ ಎಮು ಪಕ್ಷಿಗಳು ಕಾಣೆಯಾಗುತ್ತಿರುವುದರ ಕುರಿತು, ಹಾಗೂ ಅಪರೂಪವಾಗುತ್ತಾ ಹೋಗುತ್ತಿರುವ ಕಾರಣದಿಂದಾಗಿ ಅವು ನಿರ್ನಾಮವಾಗಿರುವುದರ ಕುರಿತು ಆತ ಈ ಕೃತಿಯಲ್ಲಿ ವಿಷಾದಿಸುತ್ತಾನೆ. ಸಿಡ್ನಿಯ ಆಸುಪಾಸಿನಲ್ಲಿ ಎಮುಗಳು ಇನ್ನು ಮುಂದೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಉಲ್ಲೇಖಿಸುವ ಆತ, ಈ ಪಕ್ಷಿಜಾತಿಗೆ ಸಂರಕ್ಷಿತ ಪಕ್ಷಿ ಎಂಬ ಸ್ಥಾನಮಾನವನ್ನು ನೀಡಬೇಕು ಎಂದು ಪ್ರಸ್ತಾವಿಸುತ್ತಾನೆ. ಕಾಡುಪ್ರದೇಶದ ಎಮುಗಳು 1999ರ ಎನ್ವಿರಾನ್ಮೆಂಟ್‌ ಪ್ರೊಟೆಕ್ಷನ್‌ ಅಂಡ್‌ ಬಯೋಡೈವರ್ಸಿಟಿ ಕನ್ಸರ್ವೇಶನ್‌ ಆಕ್ಟ್‌ ಅಡಿಯಲ್ಲಿ ಆಸ್ಟ್ರೇಲಿಯಾದಲ್ಲಿ ಔಪಚಾರಿಕವಾಗಿ ಸಂರಕ್ಷಿಸಲ್ಪಟ್ಟಿವೆ. IUCN ಸಂಸ್ಥೆಯು ಅವುಗಳ ಸ್ಥಾನಮಾನವನ್ನು ಕನಿಷ್ಟ ಕಾಳಜಿಯ ವ್ಯಾಪ್ತಿಯಲ್ಲಿರುವಂತೆ ಗುರುತಿಸಿ ಶ್ರೇಯಾಂಕವನ್ನು ನೀಡಿದೆ. 

ಎಮುಗಳು ಕಾಣಿಸಿಕೊಂಡಿದ್ದ ಪ್ರದೇಶದಲ್ಲಿನ ಮೂಲನಿವಾಸಿಗಳಿಗೆ ಅವು ಮಾಂಸದ ಒಂದು ಪ್ರಮುಖ ಮೂಲವಾಗಿದ್ದವು. ಎಮು ಪಕ್ಷಿಯ ಕೊಬ್ಬಿನಂಶವನ್ನು ಸಾಂಪ್ರದಾಯಿಕ ಔಷಧಿಯಾಗಿ ಬಳಸಲಾಗುತ್ತಿತ್ತು, ಮತ್ತು ಚೆರ್ಮದ ಮೇಲೆ ಅದನ್ನು ಲೇಪಿಸಲಾಗುತ್ತಿತ್ತು. ಇದನ್ನು ಒಂದು ಅಮೂಲ್ಯವಾದ ಘರ್ಷಣಾಹ್ರಾಸಕಾರಕದ (ಲ್ಯೂಬ್ರಿಕಂಟ್‌) ರೂಪದಲ್ಲಿಯೂ ಬಳಸಲಾಗುತ್ತಿತ್ತು. ಇದನ್ನು ಕಾವಿಮಣ್ಣಿನ ಜೊತೆಯಲ್ಲಿ ಬೆರೆಸಿ, ಅದರಿಂದ ಔಪಚಾರಿಕವಾದ ದೇಹಾಲಂಕರಣಕ್ಕಾಗಿ ಬಳಸುವ ಸಾಂಪ್ರದಾಯಿಕ ಬಣ್ಣವನ್ನು ಹಾಗೂ ಮರದ ಸಾಧನಗಳಿಗೆ ಮತ್ತು ಕೂಲಮನ್‌ ಎಂದು ಕರೆಯಲಾಗುವ ಪಾತ್ರೆಗಳಿಗೆ ಬೇಕಾಗುವ ತೈಲದ ಲೇಪವನ್ನು ತಯಾರಿಸಲಾಗುತ್ತಿತ್ತು. ಎಮುವನ್ನು ಹೇಗೆ ಬೇಯಿಸಲಾಗುತ್ತಿತ್ತು ಎಂಬುದರ ಕುರಿತಾದ ಒಂದು ಉದಾಹರಣೆಯು ಮಧ್ಯ ಆಸ್ಟ್ರೇಲಿಯಾದ ಅರೆಂಟೆ ಜನಾಂಗದವರಿಂದ ತಿಳಿದುಬಂದಿದ್ದು, ಅವರು ಇದನ್ನು ಕೆರೆ ಅನ್‌ಕೆರೆ ಎಂದು ಕರೆಯುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಟೇಬಲ್ ಟೆನ್ನಿಸ್ ಆಟಗಾರ ಶರತ್ ಕಮಲ್

“ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ”ಗೆ ಟೇಬಲ್ ಟೆನ್ನಿಸ್ ಆಟಗಾರ ಶರತ್ ಕಮಲ್ ಅಚಂತ್‌ ಆಯ್ಕೆಯಾಗಿದ್ದಾರೆ

ನಾಗರಹಾವಿನ ಜಾತಿಗಳು

ನಾಗರಹಾವಿನ ಜಾತಿಗಳು ಮತ್ತು ವಿಶ್ಲೇಷಣೆ