in ,

ರಾಷ್ಟ್ರೀಯ ಗಣಿತ ದಿನ

ರಾಷ್ಟ್ರೀಯ ಗಣಿತ ದಿನ
ರಾಷ್ಟ್ರೀಯ ಗಣಿತ ದಿನ

ಇಂದು ರಾಷ್ಟ್ರೀಯ ಗಣಿತ ದಿನ. ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ ಅವರ ಜನ್ಮ ದಿನಾಚರಣೆ.

ಶ್ರೀನಿವಾಸ ರಾಮಾನುಜನ್, ಪೂರ್ಣ ಹೆಸರು – ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್. ಹುಟ್ಟಿದ್ದು ಡಿಸೆಂಬರ್ ೨೨, ೧೮೮೭ – ಏಪ್ರಿಲ್ ೨೬, ೧೯೨೦. ವಿಶ್ವದ ಶ್ರೇಷ್ಠ ಭಾರತೀಯ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. “ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ “ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ” ಅಪೂರ್ವ ಸಾಮರ್ಥ್ಯವಿತ್ತು.

ಗಣಿತ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ ಪ್ರತೀ ವರ್ಷ ಡಿ. 22ರಂದು “ರಾಷ್ಟ್ರೀಯ ಗಣಿತ ದಿನ’ವನ್ನು ಆಚರಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಆರ್ಯಭಟ, ಬ್ರಹ್ಮಗುಪ್ತ, ಮಹಾವೀರ ಸಹಿತ ವಿವಿಧ ವಿದ್ವಾಂಸರು ಗಣಿತ ಶಾಸ್ತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಶ್ರೀನಿವಾಸ ರಾಮಾನುಜನ್‌ ಅವರು ಚಿಕ್ಕ ವಯಸ್ಸಿನಲ್ಲಿಯೇ ಚಿಹ್ನೆ ಮತ್ತು ಭಿನ್ನರಾಶಿಗಳಿಗೆ ಸಂಬಂಧಿಸಿದಂತೆ ಕೆಲವು ಕೊಡುಗೆ ನೀಡಿದ್ದು, ಅನಂತ ಸರಣಿ, ಸಂಖ್ಯೆ ಸಿದ್ಧಾಂತ, ಗಣಿತ ವಿಶ್ಲೇಷಣೆ ಅವುಗಳಲ್ಲಿ ಪ್ರಮುಖವಾದವು.

ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು. ರಾಮಾನುಜನ್ನರ ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ತಾಯಿ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ.

ರಾಷ್ಟ್ರೀಯ ಗಣಿತ ದಿನ
ಶ್ರೀನಿವಾಸ ರಾಮಾನುಜನ್ ಮನೆ

ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ತಳೆದರು. ಅವರು ಬೆಳೆದಂತೆ ಧಾರ್ಮಿಕ ಉದ್ಗ್ರಂಥಗಳನ್ನು ಮತ್ತು ಭಕ್ತಿಸಾಹಿತ್ಯವನ್ನು ಓದಿ ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದರು. ಅವರು ವೇದ, ಉಪನಿಷತ್ತು, ತಿರುಕ್ಕುರುಳ್ ಮುಂತಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನೂ, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು. ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು. ೧೯೦೩ರಲ್ಲಿ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು.

ರಾಮಾನುಜನ್ ಅವರು ಎಫ್. ಎ ತರಗತಿಗಳಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಈ ನಿರಾಸಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೇ ಮೊಟಕುಗೊಳಿಸಿಬಿಟ್ಟವು. ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲೇ ಮುಳುಗಿಬಿಟ್ಟರು. ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಜೀವನದ ದಾರಿ ಬದಲಾಗಲಿ ಎಂದು ವಿವಾಹ ಏರ್ಪಡಿಸಿದರು.

ಮದುವೆ ಒಂದು ಬದಲಾವಣೆಯನ್ನು ತಂದಿತು. ಇನ್ನು ಮುಂದೆ ತಾನು ಹೆತ್ತವರಿಗೆ ಹೊರೆಯಾಗಬಾರದೆಂದು ರಾಮಾನುಜನ್ನರು ನಿರ್ಧರಿಸಿದರು. ಇವರ ಮೇಧಾವಿತನದ ಕುರಿತಾದ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ ಅದು ಕೇವಲ ಎರಡು ತಿಂಗಳಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆದುರಾಯಿತು. ಸ್ವಲ್ಪ ದಿನ ಮನೆಯ ಪಾಠಮಾಡಿದರು. ಈ ನಡುವೆ ತಮ್ಮ ಗಣಿತದ ಕುರಿತಾದ ಆಲೋಚನೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ೧೯೧೦ರಲ್ಲಿ ಅವರು ದಿವಾನ್ ಬಹದ್ದೂರರನ್ನು ಕಂಡಾಗ ಬಹದ್ದೂರರು ತಮಗೇನು ಬೇಕೆಂದು ಕೇಳಿದಾಗ “ಸಂಶೋಧನೆ ಮುದುವರಿಸಿಕೊಂದು ಹೋಗುವಷ್ಟರಮಟ್ಟಿಗೆ ಬದುಕಿರಲು ಸಾಕಾಗುವಷ್ಟು ಅನ್ನ” ಎಂದರು ರಾಮಾನುಜನ್. ಬಹದ್ದೂರರು ತಾವೇ ಸ್ವತಃ ಇಪ್ಪತ್ತೈದು ರೂಪಾಯಿಗಳ ಮಾಸಿಕ ಧನಸಹಾಯ ಮಾಡಲಾರಂಭಿಸಿದರು. ಆದರೆ ರಾಮಾನುಜನ್ ಅವರಿಗೆ ಹೀಗೆ ಹಣ ಪಡೆಯುವ ಮನಸ್ಸಿರಲಿಲ್ಲ. ಮತ್ತೆ ಅವರ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಅವರು ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು.

ಭಾರತದಲ್ಲಿ ವಿವಿಧ ಕಾಲ ಘಟ್ಟಗಳಲ್ಲಿ ಉನ್ನತ ಪ್ರತಿಭೆಯ ಗಣಿತಜ್ಞರಿದ್ದರು. ಕಾಲಾನುಕ್ರಮದಲ್ಲಿ ಅಂಥವರನ್ನು ಕೊನೆಯ ಗ್ರೀಕ್ ಕಾಲದವರೆಗೆ ಗುರುತಿಸಬಹುದು. ಆದರೆ ಉತ್ತುಂಗತೆಯ ನಿರಪೇಕ್ಷಮಾನದಿಂದ ಅಳೆದಾಗ ಪೌರ್ವಾತ್ಯ ಗಣಿತಜ್ಞರಲ್ಲೆಲ್ಲಾ, ರಾಮಾನುಜನ್ನರ ಮೇಧಾವಿ ಅತ್ಯುಚ್ಛವೆಂದೆನಿಸುತ್ತದೆ” ಎಂದು ಹೇಳಬಹುದು.

ರಾಷ್ಟ್ರೀಯ ಗಣಿತ ದಿನ
ಶ್ರೀನಿವಾಸ ರಾಮಾನುಜನ್ ಕುಟುಂಬ

ಶ್ರೀನಿವಾಸ ರಾಮಾನುಜನ್ನರ ಬಗ್ಗೆ ಬರೆಯುತ್ತ ಜವಾಹರಲಾಲ್ ನೆಹರೂರವರು ತಮ್ಮ “ಡಿಸ್ಕವರಿ ಆಫ್ ಇಂಡಿಯಾ”ದಲ್ಲಿ ಹೀಗೆ ನುಡಿಯುತ್ತಾರೆ: “ಭಾರತದಲ್ಲಿ ಗಣಿತದ ವಿಚಾರದಲ್ಲಿ, ಇತ್ತೀಚಿಗಿನ ಒಬ್ಬರು ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ. ಅವರೇ ಶ್ರೀನಿವಾಸ ರಾಮಾನುಜನ್. ದಕ್ಷಿಣ ಭಾರತದ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಸೂಕ್ತ ವಿದ್ಯಾಭ್ಯಾಸಕ್ಕೆ ಅವಕಾಶಗಳಿಲ್ಲದೆ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಒಬ್ಬ ಕಾರಕೂನರಾದರು. ಆದರೆ ಅವರು ಸಹಜ ಪ್ರತಿಭೆಯ ಯಾವುದೋ ತಡೆಯಲಾಗದ ಲಕ್ಷಣಗಳಿಂದ ಬುದ್ಬುದಿಸುತ್ತಿದ್ದರು; ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಅವರು ಬಿಡುವಿನ ಸಮಯದಲ್ಲಿ ಆಟವಾಡುತ್ತಿದ್ದರು. ಮುಂದೆ ಅವರು ಕೇಂಬ್ರಿಜ್ಗೆ ತೆರಳಿ ಅಲ್ಲಿ ಬಹಳ ಅಲ್ಪಾವಧಿಯಲ್ಲೇ ಮೂಲಭೂತ ಮೌಲ್ಯದ ಹಾಗೂ ವಿಸ್ಮಯಕರ ಸ್ವಂತಿಕೆಯ ಕಾರ್ಯವೆಸಗಿದರು. ಇಂಗ್ಲೆಂಡಿನ ರಾಯಲ್ ಸೊಸೈಟಿ ತನ್ನ ನಿಯಮಗಳನ್ನು ಭಾಗಶಃ ಸಡಿಲಿಸಿ ಅವರನ್ನು ಜೊತೆಗಾರನಾಗಿ ಆಯ್ಕೆ ಮಾಡಿತು. ಪ್ರೊಫೆಸರ್ ಜೂಲಿಯನ್ ಹಕ್ಸ್ಲಿಯವರು, ನಾನು ತಿಳಿದಿರುವಂತೆ ಎಲ್ಲೋ ಒಂದೆಡೆ ರಾಮಾನುಜರನ್ನು ಈ ಶತಮಾನದ ಶ್ರೇಷ್ಠತಮ ಗಣಿತಜ್ಞ” ಎಂದಿದ್ದಾರೆ.

ಕೆಂಬ್ರಿಡ್ಜ್ನಲ್ಲಿ ಅಪ್ರತಿಮ ಪ್ರತಿಭಾವಂತರಾಗಿ ತಮ್ಮ ಸಂಶೋಧನೆಗಳನ್ನು ನಿರೂಪಿಸಿದ ರಾಮಾನುಜನ್ ಐದು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ವಿದ್ವಾಂಸರಿಂದ ಅಭೂತಪೂರ್ವ ಮೆಚ್ಚುಗೆ ಮತ್ತು ಸ್ವಾಗತಗಳನ್ನು ಪಡೆದರು. ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಬಹು ನಾಜೂಕಾದ ಉಪಚಾರ ಮತ್ತು ಮೇಲ್ವಿಚಾರಣೆ ಇದ್ದರೂ ಅವರು ಏಪ್ರಿಲ್ ೨೬, ೧೯೨೦ರಂದು ೩೨ ವರ್ಷ, ೪ ತಿಂಗಳು, ೪ ದಿವಸಗಳ ತರುಣ ವಯಸ್ಸಿನಲ್ಲೇ ತೀರಿಕೊಂಡರು. ಭರತಖಂಡ ಹಾಗೂ ಜಗತ್ತು ಮತ್ತೆ ಅಂದಿನವರೆಗೆ ಕಂಡಿಲ್ಲದಂಥ ಮಹಾನ್ ಗಣಿತ ಪ್ರತಿಭೆಯನ್ನು ಕಳೆದುಕೊಂಡಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

48 Comments

ನಾಗಮಣಿ

ನಾಗಮಣಿ ನಿಜಕ್ಕೂ ಇದೆಯಾ?

ನೇರಳೆ ಹಣ್ಣು

ನೇರಳೆ ಹಣ್ಣು ಈಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ