in ,

ಕಡಲೆಕಾಯಿ ಪರಿಷೆ ನಡೆಯುವುದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ

ಕಡಲೆಕಾಯಿ ಪರಿಷೆ
ಕಡಲೆಕಾಯಿ ಪರಿಷೆ

ಶುರುವಾಗಿದೆ ಕಡಲೆಕಾಯಿ ಪರಿಷೆ………………

ಬಸವನಗುಡಿ ಕಡಲೆ ಕಾಯಿ ಪರಿಷೆ ಬೆಂಗಳೂರು ನಗರದ ಬಸವನಗುಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಜಾತ್ರೆ. ಬಸವನಗುಡಿ ಕಡಲೆ ಕಾಯಿ ಪರಿಷೆಯನ್ನು ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತುಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಸಲಾಗುತ್ತದೆ.

ಪ್ರತಿವರ್ಷದಂತೆ ವರ್ಷ, ಕಾರ್ತೀಕ ಮಾಸದ ಕೊನೆಯ ಸೋಮವಾರ, ಸುಂಕೇನ ಹಳ್ಳಿ ಎಂದು ಕರೆಯಲಾಗುತ್ತಿದ್ದ, ಬೆಂಗಳೂರಿನ ಬಸವನಗುಡಿಯಲ್ಲಿ ಪಾರಂಪಾರಿಕ ಕಡಲೆಕಾಯಿ ಪರಿಷೆ ನಡೆಯುತ್ತದೆ. ಬಸವನಗುಡಿಯ ಬೃಹತ್ ದೇವಾಲಯದಲ್ಲಿ ವಿಶೇಷಪೂಜೆ ಹಾಗೂ ಹೂವಿನ ಅಲಂಕಾರವನ್ನು ಮಾಡಿ, ಭಕ್ತರಿಗೆಲ್ಲಾ ಉಚಿತವಾಗಿ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುವುದು. ಭಕ್ತರು, ದೇಗುಲದ ಪ್ರಾಂಗಣದಲ್ಲೆ ಕಡಲೆಕಾಯಿ ಪ್ರಸಾದವನ್ನು ಸೇವಿಸಬೇಕೆಂಬ ನಂಬಿಕೆ ಜನರಿಗಿದೆ. ಇದಕ್ಕೆ ಮೊದಲು, ದೇವಾಲಯದ ಮುಂದೆ ವಿಶೇಷವಾಗಿ ನಿರ್ಮಿಸಿದ್ದ ಪೆಂಡಾಲಿನಲ್ಲಿ ಕಡಲೆಕಾಯಿಯನ್ನು ತಕ್ಕಡಿಯಲ್ಲಿ ಸಾಂಕೇತಿಕವಾಗಿ ತೂಕಮಾಡಿ, ಭಕ್ತರಿಗೆಲ್ಲಾ ಹಂಚಲಾಗುವದು. ಐ.ಟಿ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದರೂ, ಬೆಂಗಳೂರಿನ ಜನ ಇನ್ನೂ ತಮ್ಮ ಸಂಪ್ರದಾಯ ಪೂಜೆ-ಪುನಸ್ಕಾರಗಳನ್ನು ತಪ್ಪದೆ, ಅದ್ಧೂರಿಯಾಗಿ ನಡೆಸಿಕೊಂಡುಹೋಗುತ್ತಿದ್ದಾರೆ.

ಕಡಲೆಕಾಯಿ ಪರಿಷೆ ನಡೆಯುವುದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ
ದೊಡ್ಡ ಗಾತ್ರದ ನಂದಿ

ಕೇವಲ ಕಡಲೆ ಕಾಯಿ ಪರಿಷೆ ಮಾತ್ರವಲ್ಲದೇ ರಾಟೆ, ಉಯ್ಯಾಲೆಗಳು, ಮೇರಿಗೋರೌಂಡ್ ಆಟಿಕೆಗಳು ಇರುತ್ತವೆ. ಜಾತ್ರೆ ಎಂದರೆ ಕೇಳಬೇಕೇ? ಕೆಲವರು ಭಕ್ತಿ-ಭಾವದಲ್ಲಿ ಮಿಂದೆದ್ದರೆ, ಹಲವರು ಅಲ್ಲಿನ ಆಟಿಕೆಗಳಲ್ಲಿ ಕೂತು ಆಡಿ ಸಂಭ್ರಮಿಸುತ್ತಾರೆ. ಮತ್ತೆ ಕೆಲವರು ಬಳೆ, ಓಲೆ ಸೇರಿದಂತೆ ಜಾತ್ರೆಯಲ್ಲಿ ಸಿಗುವ ತರಹೇವಾರಿ ವಸ್ತುಗಳನ್ನು ಖರೀದಿಸುತ್ತಾರೆ. ಕಡ್ಲೆಪುರಿ, ಬೆಂಡು-ಬತ್ತಾಸು, ಕಲ್ಯಾಣ ಸೇವೆ, ಇರುತ್ತದೆ.  

ಪರಿಷೆಯ ವಿಶೇಷತೆ

ಬಡವರ ಬಾದಾಮಿಯೆಂದೇ ಹೆಸರಾದ ಕಡಲೆಕಾಯಿಯನ್ನು ತಿನ್ನುತ್ತಾ, ಚುಮು-ಚುಮು ಚಳಿಯಲ್ಲಿ ಪರಿವಾರದೊಂದಿಗೆ, ಗೆಳೆಯರ ಸಹಿತ, ಬಸವನಗುಡಿಯಲ್ಲಿ ಅಲೆಯುವುದೇ ಈ ಪರಿಷೆಯ ಒಂದು ಅನನ್ಯ ವಿಧಿಗಳಲ್ಲೊಂದು. ಬೆಳೆಗಾರ ಹಾಗೂ ಗ್ರಾಹಕನನ್ನು ಒಂದು ಗೂಡಿಸುವುದು ಕೂಡ ಈ ಜಾತ್ರೆಯ ವಿಶೇಷ. ರಾಮಕೃಷ್ಣ ಆಶ್ರಮದಿಂದ ಆರಂಭವಾಗಿ ಕಾಮತ್ ಬ್ಯೂಗಲ್‌ರಾಕ್ ಹೋಟೆಲ್ ತನಕ ರಸ್ತೆ ಅಂಚಲ್ಲಿ ಹರಡಿದ ರಾಶಿರಾಶಿ ಹಸಿದು, ಹುರದಿದ್ದು, ಎರಡು ಬೀಜ, ಮೂರು ಬೀಜ ಅಷ್ಟೆ ಅಲ್ಲ ಬೇಯಿಸಿದ ಕಡಲೆಕಾಯಿ ರುಚಿ ಸವಿ ಸವಿಯಬಹುದು. ಬೆಂಗಳೂರಿನ ಸುತ್ತಮುತ್ತಲ ಕಡಲೆಕಾಯಿ ಬೆಳೆಗಾರರು ತಮ್ಮ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿ ಬೆಳೆದ ಶ್ರಮಕ್ಕೆ ಪ್ರತಿಫಲ ಪಡೆಯಲು ರಸ್ತೆ ಅಂಚಲ್ಲಿ ಕಡಲೆಕಾಯಿ ರಾಶಿ ಸುರಿದು ಗ್ರಾಹಕರ ನೀರಿಕ್ಷೆಯಲ್ಲಿರುತ್ತಾರೆ.

ಪೌರಾಣಿಕ ಹಿನ್ನೆಲೆ

ಬೆಂಗಳೂರಿನ ಬಸವನಗುಡಿ ಬಡಾವಣೆಗೆ ಹಿಂದೆ ಸುಂಕೇನಹಳ್ಳಿ ಎಂಬ ಹೆಸರಿತ್ತು. ಇದರ ಸುತ್ತಮುತ್ತ ಹೊಸಕೆರೆ ಹಳ್ಳಿ, ಗುಟ್ಟಹಳ್ಳಿ, ಮಾವಳ್ಳಿ, ದಾಸರಹಳ್ಳಿ, ಮೊದಲಾದ ಹಳ್ಳಿಗಳಿದ್ದವು. ಈ ಎಲ್ಲ ಪ್ರದೇಶಗಳಲ್ಲೂ ಕಡಲೆಕಾಯಿ ಬೆಳೆಯುತ್ತಿದ್ದರು. ಪ್ರತಿ ಪೂರ್ಣಿಮೆಯಂದು ಬಸವ ಬಂದು ರೈತರು ಕಷ್ಟಪಟ್ಟು ಬೆಳೆಸಿದ ಕಡಲೆಕಾಯಿಯನ್ನು ತಿಂದುಕೊಂಡು ಹೋಗುತ್ತಿತ್ತು. ಒಂದು ದಿನ ಕಾವಲಿದ್ದ ರೈತರು ಈ ಬಸವನನ್ನು ಹಿಡಿಯಲು ಪ್ರಯತ್ನ ಪಟ್ಟರು. ಆ ಬಸವ ಬಹಳ ವೇಗವಾಗಿ ಓಡಿ ಒಂದು ಗುಡ್ಡ ಏರಿ ಮಾಯವಾಯಿತು. ಹಿಂಬಾಲಿಸಿ ಬಂದ ರೈತರು ಈ ಬಸವ ಗುಡ್ಡದಲ್ಲಿ ಮಾಯವಾದದ್ದನ್ನು ಕಂಡರು. ಅವರು ಈ ಬಸವ ಆ ಗುಡ್ಡದಲ್ಲಿ ಕಲ್ಲಾಗಿ ನಿಂತಿದ್ದನ್ನು ಕಂಡು ಆಶ್ಚರ್ಯ ಪಟ್ಟರು. ಅಷ್ಟೇ ಅಲ್ಲ ಆ ಕಲ್ಲಿನ ಬಸವ ಬೃಹದಾಕಾರವಾಗಿ ಬೆಳೆದ. ಇದೇ ಕಲ್ಲಿನ ಬಸವ ಈಗ ಇಲ್ಲಿರುವ ದೊಡ್ಡ ಬಸವಣ್ಣ. ಅಸ್ತ್ರಗಳೊಡನೆ ಬಂದಿದ್ದ ಜನ, ಈ ಕಲ್ಲು ಬಸವನನ್ನು ನೋಡಿ ದಂಗಾದರು. ಈಶ್ವರನ ವಾಹನವಾದ ನಂದಿಯೇ ಆ ಬಸವನೆಂದು ತಿಳಿದು ಭಕ್ತಿಯಿಂದ ಅಡ್ಡ ಬಿದ್ದರು.

ಕಡಲೆಕಾಯಿ ಪರಿಷೆ ನಡೆಯುವುದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ
ಕಡಲೆ ಕಾಯಿ ಪರಿಷೆ

ಈಶ್ವರನೇ ತಮ್ಮ ರಕ್ಷಣೆಗೆ ತನ್ನ ವಾಹನವನ್ನು ಕಳಿಸಿದ್ದಾನೆಂದು ತಿಳಿದರು. ಅವನನ್ನು ಪೂಜಿಸಲು ಪ್ರಾರಂಭಿಸಿದರು. ಬಸವನಿಗೆ ಪ್ರಿಯವಾದ ಕಡಲೆಕಾಯಿಯನ್ನು ತಿನ್ನುತ್ತಿದ್ದನೆಂದು ತಿಳಿದು, ಅದನ್ನು ತಪ್ಪಿಸಿದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಅದಕ್ಕಾಗಿ ಸುಂಕ ಕಟ್ಟಲು ಪ್ರಾರಂಭಿಸಿದರು. ತಾವು ಬೆಳೆಯುವ ಕಡಲೇಕಾಯಿ ಬೆಳೆಗೆ ಅವನೇ ಕಾವಲುಗಾರನೆಂದು ಆತನಿಗೆ ಎಲ್ಲ ಜವಾಬ್ದಾರಿ ವಹಿಸಿದರು. ಅಲ್ಲಿ ಅವನಿಗೆ ಒಂದು ಚಿಕ್ಕ ದೇವಸ್ಥಾನ ಕಟ್ಟಿಸಿದರು. ನಂತರ ಬೆಂಗಳೂರಿನ ನಿರ್ಮಾತವಾದ ಕೆಂಪೇಗೌಡರು ದಕ್ಷಿಣ ಶೈಲಿಯಲ್ಲಿರುವ ಈಗಿನ ದೇವಸ್ಥಾನ ಕಟ್ಟಿಸಿದರು. ಅದಕ್ಕಾಗಿ ಪ್ರತಿ ವರ್ಷ ಕಾರ್ತಿಕಮಾಸದ ಕಡೇ ಸೋಮವಾರ ತಾವು ಬೆಳೆದ ಕಡಲೇಕಾಯಿಯನ್ನು ಇಲ್ಲಿ ರಾಶಿ ಹಾಕುತ್ತಾರೆ ಮತ್ತು ಬಸವಣ್ಣನನ್ನು ಮನಸೋಇಚ್ಛೆ ತಿನ್ನೆಂದು ಪ್ರಾರ್ಥಿಸುತ್ತಾರೆ. ಈ ಸಂಪ್ರದಾಯ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಅಂದು ಅಲ್ಲಿಗೆ ಬರುವ ಭಕ್ತರು ಸಹ ಕಡಲೆಕಾಯಿಯನ್ನು ಕೊಂಡು ಬಸವಣ್ಣನಿಗೆ ಅರ್ಪಿಸುತ್ತಾರೆ. ಆಗ ಕಲ್ಲಾದ ಬಸವ ಬೆಳೆಯುತ್ತಲೇ ಹೋದ. ಆತ ಇನ್ನು ಬೆಳೆದರೆ ಪೂಜಿಸಲು ಆಗುವುದಿಲ್ಲವೆಂದು ಆತನ ತಲೆಮೇಲೆ ದೊಡ್ಡ ಮೊಳೆ ಹೊಡೆದಿದ್ದಾರೆ. ಅಂದಿನಿಂದ ಅವನ ಬೆಳವಣಿಗೆ ನಿಂತಿದೆ. ಆ ಮೊಳೆ ತ್ರಿಶೂಲದ ರೂಪದಲ್ಲಿ ಇದೆ.

ಕಡಲೆಕಾಯಿ ಪರಿಷೆ ನಡೆಯುವುದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ
ದೊಡ್ಡ ಗಣಪತಿ

ವಿವಿಧೆಡೆಯಿಂದ ಕಡಲೆಕಾಯಿ

ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಕಾಯಿಗಳನ್ನು ಹೊತ್ತು ರೈತರು ತರುತ್ತಾರೆ. ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸುತ್ತಾರೆ. ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಬಂದಿರುವ ಭಕ್ತರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಾನವನಿಂದ ಬಳಸಲ್ಪಡುವ ಇಂಧನಗಳು

ಮಾನವನಿಂದ ಬಳಸಲ್ಪಡುವ ಇಂಧನಗಳು ಹಂತ ಹಂತವಾಗಿ ಬದಲಾಯಿತು

ಹಕ್ಕಿಗಳ ವಲಸೆ

ಹಕ್ಕಿಗಳ ವಲಸೆ ಪ್ರಕ್ರಿಯೆಗಳು