in

ಕ್ಯಾಲ್ಸಿಯಂ, ಪ್ರೋಟಿನ್ ಇನ್ನೂ ಹಲವಾರು ಪೋಷಾಕಾಂಶಗಳನ್ನು ಹೊಂದಿದೆ ಹಾಲು

ಹಾಲು
ಹಾಲು

ಹಾಲು ಹೆಣ್ಣು ಸಸ್ತನಿಗಳ ಸ್ತನಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಒಂದು ಅಪಾರದರ್ಶಕ ಬಿಳಿ ದ್ರವ. ಸ್ತನಗ್ರಂಥಿಗಳು ಅತಿ ವಿಶಿಷ್ಟ ಸಿಹಿ ಗ್ರಂಥಿಗಳಾಗಿವೆ. ಸಸ್ತನಿ ಪ್ರಾಣಿಗಳ, ಮಾನವನೂ ಸೇರಿದಂತೆ ಹೆಣ್ಣುಗಳ ಹಾಲಿನ ಉತ್ಪಾದನಾ ಸಾಮರ್ಥ್ಯವು ಈ ಗುಂಪಿನ ಬಲು ಮುಖ್ಯ ಜೈವಿಕ ಗುಣವಾಗಿದೆ. ಹಾಲು ನವಜಾತ ಶಿಶುಗಳಿಗೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುವುದು. ಶಿಶುಗಳು ಬೇರೆ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಪಡೆಯುವವರೆಗೂ ತಾಯಹಾಲೇ ಏಕೈಕ ಆಹಾರ. ಶಿಶುವಿನ ಜನನದ ಅಲ್ಪಕಾಲದಲ್ಲಿಯೇ ಉತ್ಪತ್ತಿಯಾಗುವ ಹಾಲು ತಾಯಿಯ ದೇಹದಿಂದ ಪ್ರತಿಕಣಗಳನ್ನು ಶಿಶುವಿನ ದೇಹಕ್ಕೆ ಒಯ್ಯುತ್ತದೆ. ಶಿಶುವಿಗೆ ಇದು ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿಯನ್ನು ನೀಡುವುದು. ಹಾಲಿನಲ್ಲಿನ ಅಂಶಗಳು ಬೇರೆಬೇರೆ ಪ್ರಾಣಿಗಳಲ್ಲಿ ವಿಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಸಾಂದ್ರ ಕೊಬ್ಬು, ಪ್ರೊಟೀನ್, ಕ್ಯಾಲ್ಸಿಯಮ್ ಮತ್ತು ವಿಟಮಿನ್-ಸಿ ಗಳು ಗಣನೀಯ ಪ್ರಮಾಣದಲ್ಲಿರುತ್ತವೆ.

ಹಾಲು ಎರಡು ಸ್ಪಷ್ಟ ಬಗೆಗಳಲ್ಲಿ ಬಳಕೆಯಾಗುತ್ತದೆ. ಎಲ್ಲಾ ಸಸ್ತನಿ ಪ್ರಾಣಿಗಳ ಶಿಶುಗಳಿಗೆ ಪೋಷಕಾಂಶಗಳ ಪ್ರಾಕೃತಿಕ ಮೂಲವಾಗಿ ಮತ್ತು ಮಾನವನು ಇತರ ಪ್ರಾಣಿಗಳಿಂದ ದೊರಕಿಸಿಕೊಂಡ ಆಹಾರದ ರೂಪದಲ್ಲಿ. ಹೆಚ್ಚೂಕಡಿಮೆ ಎಲ್ಲಾ ಸಸ್ತನಿಗಳೂ ಸ್ತನ್ಯಪಾನದ ಮೂಲಕ ತಮ್ಮ ಶಿಶುಗಳಿಗೆ ಹಾಲೂಡುತ್ತವೆ. ಕೆಲ ಮಾನವ ಸಂಸ್ಕೃತಿಗಳಲ್ಲಿ ೭ನೆಯ ವಯಸ್ಸಿನವರೆಗೂ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ವಾಡಿಕೆ ಇದೆ.

ವಿಶ್ವದೆಲ್ಲೆಡೆ ಮಾನವನು ತನ್ನ ಶೈಶವಾವಸ್ಥೆಯನ್ನು ದಾಟಿದ ಮೇಲೆ ಕೂಡ ಹಾಲಿನ ಸೇವನೆಯನ್ನು ಮುಂದುವರಿಸುವನು. ಇದಕ್ಕಾಗಿ ಅವನು ಇತರ ಪ್ರಾಣಿಗಳಿಂದ ಹಾಲನ್ನು ಕರೆದುಕೊಳ್ಳುವನು. ಇವುಗಳಲ್ಲಿ ಹಸುವಿನ ಹಾಲು ಅತಿ ಹೆಚ್ಚಾಗಿ ಬಳಕೆಯಲ್ಲಿದೆ. ಹಾಲನ್ನು ನೇರವಾಗಿ ಸೇವಿಸುವುದು ಮಾತ್ರವಲ್ಲದೆ ಹಾಲಿನಿಂದ ವಿಭಿನ್ನ ಖಾದ್ಯವಸ್ತುಗಳನ್ನು ತಯಾರಿಸಲಾಗುತ್ತದೆ. ಹಸುವಿನ ಹಾಲನ್ನು ಹೈನುಗಾರಿಕೆಯ ಉತ್ಪನ್ನಗಳಾದ ಕೆನೆ, ಬೆಣ್ಣೆ, ಮೊಸರು, ಐಸ್ ಕ್ರೀಮ್ ಮತ್ತು ಗಿಣ್ಣುಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇವಲ್ಲದೆ ಹಾಲಿನ ಪುಡಿ, ಸಾಂದ್ರ ಹಾಲುಗಳ ತಯಾರಿಕೆಯಲ್ಲಿಯೂ ಹಸುವಿನ ಹಾಲನ್ನು ಉಪಯೋಗಿಸುವರು.

ಕ್ಯಾಲ್ಸಿಯಂ, ಪ್ರೋಟಿನ್ ಇನ್ನೂ ಹಲವಾರು ಪೋಷಾಕಾಂಶಗಳನ್ನು ಹೊಂದಿದೆ ಹಾಲು
ಹಸುವಿನ ಹಾಲು

ಪ್ರಾಣಿ ಜಗತ್ತಿನಲ್ಲಿ ಮಾನವನು ಮಾತ್ರ ಶೈಶವಾವಸ್ಥೆಯನ್ನು ದಾಟಿದ ಮೇಲೆ ಸಹ ಹಾಲನ್ನು ಬಳಸುವನು. ಹೆಚ್ಚಿನ ಮಾನವರು ಬಾಲ್ಯವನ್ನು ಕಳೆದ ಮೇಲೆ ಹಾಲನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುವರು. ಹಾಲಿನಲ್ಲಿರುವ ಮುಖ್ಯ ಸಿಹಿವಸ್ತು ಲ್ಯಾಕ್ಟೋಸ್. ಈ ಲ್ಯಾಕ್ಟೋಸ್ ಹಾಲನ್ನು ಬಿಟ್ಟರೆ ಜಗತ್ತಿನಲ್ಲಿ ಕೆಲವೇ ಹೂವು ಮತ್ತು ಸಸ್ಯಗಳಲ್ಲಿ ಇರುವುದು. ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಲ್ಯಾಕ್ಟೇಸ್ ಎಂಬ ಕಿಣ್ವದ ಅವಶ್ಯಕತೆಯಿರುತ್ತದೆ. ಈ ಕಿಣ್ವವು ನವಜಾತ ಶಿಶುವಿನ ಸಣ್ಣ ಕರುಳಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿದ್ದು ಕ್ರಮೇಣ ಕಡಿಮೆಯಾಗುತ್ತಾ ಹೋಗುವುದು. ಹಾಲನ್ನು ಸತತವಾಗಿ ಬಳಸದೆ ಹೋದರೆ ಈ ಕಿಣ್ವವು ಶರೀರದಲ್ಲಿ ಅತ್ಯಲ್ಪ ಪ್ರಮಾಣಕ್ಕೆ ಇಳಿದು ನಂತರ ಹಾಲನ್ನು ಅರಗಿಸಿಕೊಳ್ಳುವುದು ಅಸಾಧ್ಯ. ಮಾನವರು ಹಸುವಿನ ಹಾಲನ್ನು ಮಾತ್ರವಲ್ಲದೆ ಆಡು, ಕುರಿ, ಯಾಕ್, ಎಮ್ಮೆ, ಕುದುರೆ ಮತ್ತು ಒಂಟೆಗಳ ಹಾಲನ್ನು ಸಹ ಬಳಸುತ್ತಾರೆ.

ಈ ಪ್ರಾಣಿಜನ್ಯ ವಸ್ತು ಮಾತ್ರವಲ್ಲದೆ ವಾಡಿಕೆಯಲ್ಲಿ ಕೆಲ ಸಸ್ಯಜನ್ಯ ದ್ರವರೂಪದಲ್ಲಿರುವ ಬಿಳಿಯದಾದ ಸಾರಕ್ಕೂ ಹಾಲು ಎಂಬ ಪದವನ್ನು ಬಳಸುವರು. ಇದಕ್ಕೆ ಉದಾಹರಣೆಯೆಂದರೆ ಸೋಯಾ ಹಾಲು, ಅಕ್ಕಿಯ ಹಾಲು, ತೆಂಗಿನ ಹಾಲು ಇತ್ಯಾದಿ.

ತಾಯಿ ಮಾಸವನ್ನು ಹೊಂದಿರುವ ಸಸ್ತನಿ ಪ್ರಾಣಿಗಳ ವಿಕಾಸದಲ್ಲಿ ಹಾಲಿನ ಉತ್ಪಾದನೆ ಒಂದು ಮುಖ್ಯ ಘಟ್ಟ. ಇಂತಹ ಪ್ರಾಣಿಗಳ ನಿಕಟ ಪೂರ್ವಜರಾದ ಪ್ಲಾಟಿಪಸ್ ನಂತಹ ಪ್ರಾಣಿಗಳು ತಮ್ಮ ಚರ್ಮದಲ್ಲಿರುವ ಗ್ರಂಥಿಗಳಿಂದ ಹಾಲಿನಂತ ದ್ರವವನ್ನು ಮೊಟ್ಟೆಯೊಡೆದು ಬಂದ ತಮ್ಮ ಸಂತಾನಕ್ಕಾಗಿ ಒಸರಿಸುತ್ತವೆ. ಆದರೆ ಈ ಪ್ರಾಣಿಗಳಲ್ಲಿ ತೊಟ್ಟುಗಳಿರುವುದಿಲ್ಲ. ಹಾಗೆಯೇ ಕಾಂಗರೂ ನಂತಹ ಚೀಲವನ್ನು ಹೊಂದಿರುವ ಪ್ರಾಣಿಗಳು ತಮ್ಮ ಚೀಲದೊಳಗೆ ತೊಟ್ಟುಗಳನ್ನು ಹೋಲುವ ಅಂಗದ ಮೂಲಕ ಹಾಲನ್ನು ಹೋಲುವ ದ್ರವವನ್ನು ತಮ್ಮ ಶಿಶುಗಳಿಗಾಗಿ ನೀಡುತ್ತವೆ.

ಮಾನವನ ಇತಿಹಾಸದಲ್ಲಿ ಪ್ರಾಣಿಗಳನ್ನು ಪಳಗಿಸುವಿಕೆಯು ಆರಂಭವಾದಾಗಲೇ ಇಂತಹ ಕೆಲ ಸಾಕುಪ್ರಾಣಿಗಳ ಹಾಲನ್ನು ತನ್ನ ಸೇವನೆಗಾಗಿ ಬಳಸಿದನೆಂದು ನಂಬಲಾಗಿದೆ. ಎಲ್ಲಕ್ಕಿಂತ ಮೊದಲು ಮಧ್ಯ ಪ್ರಾಚ್ಯದಲ್ಲಿ ಹಸುವಿನ ಹಾಲನ್ನು ಆಹಾರದ ರೂಪದಲ್ಲಿ ಬಳಸಲಾಯಿತು. ಅಲ್ಲದೆ ಮಧ್ಯ ಪ್ರಾಚ್ಯದಲಿ ಕುರಿ ಮತ್ತು ಆಡುಗಳ ಸಾಕಣೆಯೂ ಮೊದಲಾಯಿತು. ಆರಂಭದಲ್ಲಿ ಇವುಗಳನ್ನು ಮಾಂಸ ಮತ್ತು ತೊಗಲಿಗಾಗಿ ಮಾತ್ರ ಬಳಸಿದರೂ ನಂತರ ಇವುಗಳನ್ನು ಹಾಲಿಗಾಗಿ ಸಾಕುವುದು ಸಹ ಲಾಭದಾಯಕವೆಂದು ಕಂಡುಕೊಳ್ಳಲಾಯಿತು. ಇದು ಕ್ರಿ.ಪೂ. ೯೦೦೦ ದಿಂದ ೮೦೦೦ದ ಮಧ್ಯೆ ಪ್ರಾರಂಭವಾಯಿತು. ಕ್ರಿ. ಪೂ. ಸುಮಾರು ೭೦೦೦ದ ವೇಳೆಗೆ ಟರ್ಕಿಯಲ್ಲಿ ತುರುಮಂದೆಗಳ ಸಾಕಣೆ ಮೊದಲಾಯಿತು. ಬ್ರಿಟಿಷ್ ದ್ವೀಪಗಳಲ್ಲಿ ನವಶಿಲಾಯುಗದಲ್ಲಿ ಹಾಲಿನ ಬಳಕೆ ಇತ್ತೆಂಬ ಬಗ್ಗೆ ಪುರಾವೆಗಳಿವೆ. ಬೆಣ್ಣೆ ಮತ್ತು ಗಿಣ್ಣುಗಳ ಬಳಕೆ ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಭಾಗಗಳಿಗೆ ಹಬ್ಬಿತು.

ಪಾಶ್ಚಿಮಾತ್ಯ ಜಗತ್ತಿನಲ್ಲಿ ಇಂದು ಹಸುವಿನ ಹಾಲಿನ ಉದ್ಯಮ ದೊಡ್ಡ ಕೈಗಾರಿಕೆಯಾಗಿ ಬೆಳೆದಿದೆ. ಸ್ವಯಂಚಾಲಿತ ಹಾಲುಕರೆಯುವ ಯಂತ್ರಗಳೂ ಸೇರಿದಂತೆ ಆಧುನಿಕ ಪದ್ಧತಿಗಳನ್ನು, ಸಲಕರಣೆಗಳನ್ನು ಹೊಂದಿರುವ ಬೃಹತ್ ಹೈನುಗಾರಿಕೆ ಸಂಸ್ಥೆಗಳು ಅಲ್ಲಿ ತಲೆಯೆತ್ತಿವೆ. ಅತಿ ಹೆಚ್ಚು ಹಾಲು ಕೊಡುವ ಹಾಲ್ ಸ್ಟೈನ್ ತಳಿಯ ಹಸುವನ್ನು ಹೆಚ್ಚಾಗಿ ಸಾಕಲಾಗುತ್ತದೆ. ಭಾರತವು ವಿಶ್ವದಲ್ಲಿ ಎಲ್ಲೆಕ್ಕಿಂತ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿದೆ. ನಂತರ ಯು.ಎಸ್.ಎ ಮತ್ತು ನ್ಯೂಜಿಲೆಂಡ್ ಗಳು.

ಕ್ಯಾಲ್ಸಿಯಂ, ಪ್ರೋಟಿನ್ ಇನ್ನೂ ಹಲವಾರು ಪೋಷಾಕಾಂಶಗಳನ್ನು ಹೊಂದಿದೆ ಹಾಲು
ಹಾಲಿನಲ್ಲಿರುವ ಇತರ ಪ್ರಮುಖ ಪೋಷಕಾಂಶ

ಸಂಸ್ಕರಣಗೊಂಡ ಒಂದು ಲೋಟ ೨% ಕೊಬ್ಬಿನ ಪ್ರಮಾಣವಿರುವ ಹಾಲಿನಲ್ಲಿ ೨೮೫ ಮಿಲಿಗ್ರಾಂ ನಷ್ಟು ಕ್ಯಾಲ್ಸಿಯಮ್ ಇರುತ್ತದೆ. ಇದು ಮಾನವನ ದೈನಂದಿನ ಅಗತ್ಯದ ೨೨% ದಿಂದ ೨೯% ದಷ್ಟು. ಅಲ್ಲದೆ ಇದರಲ್ಲಿ ೮ ಗ್ರಾಂ ಗಳಷ್ಟು ಪ್ರೋಟೀನ್ ಸಹ ಇರುವುದು.

ಇವುಗಳ ಜೊತೆಗೆ ಹಾಲಿನಲ್ಲಿರುವ ಇತರ ಪ್ರಮುಖ ಪೋಷಕಾಂಶಗಳೆಂದರೆ :

*ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಡಿ ಮತ್ತು ವಿಟಮಿನ್ ಕೆ ಗಳು,
*ಥೈರಾಯ್ಡ್ ಗ್ರಂಥಿಗೆ ಅತ್ಯಾವಶ್ಯಕವಾದ ಅಯೊಡಿನ್,
ರಕ್ತಪರಿಚಲನೆಗೆ ಸಹಕಾರಿಯಾಗುವ ವಿಟಮಿನ್ ಬಿ೧೨ ಮತ್ತು ರಿಬೋಫ್ಲಾವಿನ್
*ದೇಹದಲ್ಲಿ ಶಕ್ತಿಯ ಉತ್ಪಾದನೆಗೆ ಮುಖ್ಯವಾಗಿ ಬೇಕಾಗುವ ವಿಟಮಿನ್ ಬಿ,ಬಯೋಟಿನ್ ಮತ್ತು ಪ್ಯಾಂಟೋಥೀನಿಕ್ ಆಮ್ಲ.
*ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಟಮಿನ್ ಎ,
*ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೆ ಬೇಕಾಗುವ ಪೊಟ್ಯಾಸಿಯಮ್ ಮತ್ತು ಮ್ಯಾಗ್ನೀಸಿಯಮ್,
*ಕ್ಯಾನ್ಸರ್ ತಡೆಯುವಲ್ಲಿ ಸಹಕರಿಸುವ ಸೆಲೆನಿಯಮ್ ಮತ್ತು ಲಿನೊಲೆನಿಕ್ ಆಮ್ಲ.
*ಧಾರಣ ಶಕ್ತಿ ಮತ್ತು ನೆನಪಿನ ಶಕ್ತಿಗಳಿಗೆ ಸಹಕಾರಿಯಾಗುವ ಥಯಾಮೈನ್ ಎಂಬ ವಿಟಮಿನ್ ಬಿ.
ಈ ಲಾಭಗಳ ಹೊರತಾಗಿಯೂ ಸಂಸ್ಕರಣ ಹೊಂದದ

ಹಾಲಿನ ಅತಿಯಾದ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬ ಅಭಿಪ್ರಾಯವಿದೆ. ಇದಕ್ಕೆ ಕಾರಣ ಅದರಲ್ಲಿರುವ ಹೆಚ್ಚಿನ ಪ್ರಮಾಣದ ಕೊಬ್ಬಿನಂಶ. ಅಲ್ಲದೆ ಹಾಲಿನಲ್ಲಿರುವ ಬಿಳಿ ರಕ್ತ ಕಣಗಳ ಬಗ್ಗೆ ಸಾಕಷ್ಟು ವಿವಾದವು ಆಹಾರ ವಿಜ್ಞಾನದಲ್ಲಿ ಮತ್ತು ವೈದ್ಯಕೀಯ ವಲಯದಲ್ಲಿ ಇರುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಾರ್ತಿಕ ಪೂರ್ಣಿಮಾ

ಕಾರ್ತಿಕ ಪೂರ್ಣಿಮಾ ಪವಿತ್ರ ದಿನ

ಡಿಸ್ಕಸ್ ಎಸೆತ

ಪ್ರಾಚೀನ ಗ್ರೀಸ್‌ನ ಮೂಲ ಒಲಿಂಪಿಕ್ ಕ್ರೀಡೆ ಡಿಸ್ಕಸ್ ಎಸೆತ