in ,

ಕಸ್ತೂರಿ ಜಾಲಿ ಮತ್ತು ಅರಿಸಿನ ಬೂರುಗ

ಕಸ್ತೂರಿ ಜಾಲಿ ಮತ್ತು ಅರಿಸಿನ ಬೂರುಗ
ಕಸ್ತೂರಿ ಜಾಲಿ ಮತ್ತು ಅರಿಸಿನ ಬೂರುಗ

ಸುಗಂಧಯುಕ್ತ ಹೂಗಳಿಗಾಗಿ ಪ್ರಸಿದ್ಧವಾಗಿರುವ ಒಂದು ಜಾತಿಯ ಪೊದೆ ಸಸ್ಯ ಅಥವಾ ಮರ ಕ್ಯಾಸಿ ಫ್ಲವರ್. ಲೆಗ್ಯುಮಿನೋಸೀ ಕುಟುಂಬದ ಮೈಮೋಸೀ ಉಪಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ನಾಮ ಅಕೇಸಿಯ ಫಾರ್ನೇಸಿಯಾನ.

ಮೂಲತಃ ದಕ್ಷಿಣ ಅಮೆರಿಕದ ನಿವಾಸಿಯಾದ ಇದು ಈಗ ಭಾರತ, ಸಿಂಹಳ ಮತ್ತು ಬರ್ಮ ದೇಶಗಳಲ್ಲೆಲ್ಲ ಬೆಳೆಯುತ್ತಿದೆ. ನದಿದಂಡೆಯ ಮರಳಿನಲ್ಲಿ, ಪಂಜಾಬಿನ ಒಣಹವೆಯ ಮೈದಾನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೆಲವೆಡೆ ಇದನ್ನು ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದೂ ಉಂಟು.

ಸುಮಾರು ಹದಿನೈದು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಮುಳ್ಳು ಮರ ಇದು. ಎಲೆಗಳು ಸಂಯುಕ್ತ ಮಾದರಿಯವು. ಒಂದೊಂದರಲ್ಲೂ ಒಂದು ಪತ್ರಕಾಂಡವೂ ಅದರ ಎರಡೂ ಕಡೆ ಮೂರರಿಂದ ಎಂಟು ಜೊತೆ ಉಪವರ್ಣಗಳೂ ಈ ಉಪವರ್ಣಗಳಲ್ಲಿ ಒಂದೊಂದರಲ್ಲೂ ಹತ್ತರಿಂದ ಇಪ್ಪತ್ತೈದು ಜೊತೆ ಕಿರುಎಲೆಗಳೂ ಇವೆ. ಬುಡದಲ್ಲಿ ಮುಳ್ಳುಗಳಾಗಿ ಮಾರ್ಪಾಡಾದ ವೃಂತಪರ್ಣಗಳಿವೆ. ಹೂಗಳು ಚಂಡುಮಂಜರಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲುಗಳು ಎಲೆಗಳ ಕಕ್ಷಗಳಲ್ಲಿ ಒಂಟೊಂಟಿಯಾಗಿ ಮೂಡುತ್ತವೆ. ಒಮ್ಮೊಮ್ಮೆ ಎರಡು ಅಥವಾ ಮೂರು ಹೂಗೊಂಚಲುಗಳು ಒಂದೇ ಕಕ್ಷದಲ್ಲಿ ಹುಟ್ಟುವುದೂ ಉಂಟು. ಹೂಗಳು ಬಹಳ ಸುವಾಸನೆಯುಳ್ಳವಾಗಿವೆ ; ಇವುಗಳ ಬಣ್ಣ ಹಳದಿ. ಮರಕ್ಕೆ ಮೂರು ವರ್ಷ ವಯಸ್ಸಾದ ಅನಂತರ ಹೂಗಳು ಅರಳಲಾರಂಭಿಸುತ್ತವೆ. ಹೂ ಬಿಡುವ ಕಾಲ ನವೆಂಬರಿನಿಂದ ಮಾರ್ಚ್.

ಉಪಯೋಗಗಳು :

ಕಸ್ತೂರಿ ಜಾಲಿ ಮತ್ತು ಅರಿಸಿನ ಬೂರುಗ
ಕಸ್ತೂರಿ ಜಾಲಿ

ಕಸ್ತೂರಿ ಜಾಲಿಯ ಹೂಗಳಿಂದ ಕ್ಯಾಸಿ ಎನ್ನುವ ಸುಗಂಧವನ್ನು ತಯಾರಿಸುತ್ತಾರೆ. ಹೂಗಳನ್ನು ನೀರಿನಲ್ಲಿ ನೆನೆಸಿ ಮೆತುಮಾಡಿ ಕರಗಿಸಿದ ಕೋಕೋ ಬೆಣ್ಣೆಯಲ್ಲೋ ಕೊಬ್ಬರಿ ಎಣ್ಣೆಯಲ್ಲೋ ಹಲವಾರು ಗಂಟೆಗಳ ಕಾಲ ನೆನೆಹಾಕುತ್ತಾರೆ. ಇದರಿಂದ ಹೂವಿನಲ್ಲಿರುವ ಸುಗಂಧ ಬೇರ್ಪಟ್ಟು ಕೊಬ್ಬಿನಲ್ಲಿ ಕರಗುತ್ತದೆ. ಈ ರೀತಿ ಹಲವಾರು ಬಾರಿ ಮಾಡಿದ ಮೇಲೆ ಬರುವ ಸುಗಂಧಪೂರಿತ ಕೊಬ್ಬನ್ನು ಕರಗಿಸಿ, ಸೋಸಿ, ತಂಪುಗೊಳಿಸುತ್ತಾರೆ. ಹೀಗೆ ಪಡೆಯಲಾಗುವ ವಸ್ತುವೇ ಸುಗಂಧಾಂಜನ. ಕ್ಯಾಸಿ ಸುಗಂಧವನ್ನು ಶುದ್ಧರೂಪದಲ್ಲಿ ಪಡೆಯುವುದಕ್ಕೆಂದು, ಸುಗಂಧಾಂಜನವನ್ನು ಆಲ್ಕೊಹಾಲಿನಲ್ಲಿ ಬೆರೆಸಿ 3-4 ವಾರಗಳ ವರೆಗೂ 250 ಸೆಂ. ಉಷ್ಣತೆಯಲ್ಲಿ ಇಡುತ್ತಾರೆ. ಆಗ ಸುಗಂಧವೆಲ್ಲ ಆಲ್ಕೊಹಾಲಿಗೆ ವರ್ಗಾಯಿಸಲ್ಪಡುತ್ತದೆ. ಅನಂತರ ಆಲ್ಕೊಹಾಲನ್ನು ಬಟ್ಟಿಯಿಳಿಸಿ ಬೇರ್ಪಡಿಸುತ್ತಾರೆ. ಆಗ ಶುದ್ಧವಾದ ಆಲಿವ್ ಹಸಿರು ಬಣ್ಣದ ಸುಗಂಧ ದೊರೆಯುತ್ತದೆ. ಗಾಳಿ ಬೆಳಕುಗಳಿಗೆ ತೆರೆದಿಟ್ಟರೆ ಇದು ಬೇಗ ಹಾಳಾಗುವುದರಿಂದ ಅವಕ್ಕೆ ಸೋಂಕದಂತೆ ಇದನ್ನು ಶೇಖರಿಸಿಡಬೇಕು. ಬಹಳ ಮಧುರ ವಾಸನೆಯುಳ್ಳ ಈ ಸುಗಂಧದ್ರವ್ಯವನ್ನು ಸುಗಂಧಾಂಜನ, ಉಡುಪುಗಳೊಂದಿಗೆ ಇಡಲಾಗುವ ಸುಗಂಧ ಚೀಲ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದಲ್ಲದೆ ಕಸ್ತೂರಿಜಾಲಿಯ ತೊಗಟೆ, ಎಲೆ, ಕಾಯಿಗಳಲ್ಲಿ ಔಷಧೀಯ ಗುಣಗಳಿವೆ. ಇವನ್ನು ಪ್ರತಿಬಂಧಕವಾಗಿಯೂ ಕೆಲವು ಬಗೆಯ ಮೇಹರೋಗ ನಿವಾರಣೆಗೂ ಉಪಯೋಗಿಸುತ್ತಾರೆ. ತೊಗಟೆಯಲ್ಲಿ ಟ್ಯಾನಿನ್ ಎಂಬ ವಸ್ತುವಿದೆ. ಆದ್ದರಿಂದ ತೊಗಟೆಯನ್ನು ಚರ್ಮ ಹದಮಾಡಲೂ ಬಳಸುವುದುಂಟು. ಮರದಿಂದ ದೊರೆಯುವ ಅಂಟನ್ನು ಸಿಹಿತಿಂಡಿ ತಯಾರಿಕೆಯಲ್ಲಿ ಬಳಸುತ್ತಾರೆ.

ಅರಿಸಿನ ಬೂರುಗ

ಕಾಕ್ಲೊಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಮರ. ಕಾಕ್ಲೊಸ್ಪರ್ಮಮ್ ರಿಲಿಜಿಯೋಸಮ್ ಇದರ ವೈಜ್ಞಾನಿಕ ಹೆಸರುಯೆಲೊ ಸಿಲ್ಕ್ ಕಾಟನ್. ಇದು ಹಿಮಾಲಯದ ವಾಯವ್ಯ ಪ್ರದೇಶಗಳು, ಬಿಹಾರ್, ಮಧ್ಯ ಪ್ರದೇಶ, ಒರಿಸ್ಸ, ಗುಜರಾತ್ ಮತ್ತು ದಖನ್ ಪ್ರದೇಶಗಳಲ್ಲಿ ಬೆಳೆಯುವುದು ಹೆಚ್ಚು.ದಕ್ಷಿಣ ಅಮೇರಿಕ ಮೂಲ. ಈಗ ದಕ್ಷಿಣ ಏಷ್ಯಾದಲ್ಲಿ ಬಹಳಷ್ಟು ಕಡೆ ಕಂಡುಬರುತ್ತದೆ.

ಕಸ್ತೂರಿ ಜಾಲಿ ಮತ್ತು ಅರಿಸಿನ ಬೂರುಗ
ಅರಿಸಿನ ಬೂರುಗ

ಇದು ಸಾಮಾನ್ಯ ಎತ್ತರ ಹಾಗೂ ಗಾತ್ರದ್ದಾಗಿದ್ದು ಎಲೆ ವರ್ಷಕ್ಕೊಮ್ಮೆ ಉದುರಿಹೋಗುತ್ತದೆ. ತೊಗಟೆ ದಪ್ಪ, ನಾರು ಹಳದಿ ಮತ್ತು ಮಿಶ್ರ ಬಣ್ಣ ಉಳ್ಳದ್ದು. ತೊಗಟೆಯ ಮೇಲೆ ಹಳ್ಳದಿಣ್ಣೆಗಳುಂಟು. ಎಳೆಯ ಕೊಂಬೆಗಳ ಮೇಲೆ ದಟ್ಟವಾದ ಕೂದಲಿನ ಹೊದಿಕೆ ಇದೆ. ಕೊಂಬೆಗಳ ಮೇಲೆ ಅಲ್ಲಲ್ಲಿ ಎಲೆ ಉದುರಿದ ಜಾಗದಲ್ಲಿ ಗುರುತುಗಳಿರುತ್ತವೆ. ಕೊಂಬೆಗಳ ತುದಿಯಲ್ಲಿ ಎಲೆಗಳು ವಿರಳವಾಗಿರುತ್ತವೆ. ಎಲೆಯ ಮೇಲೆ ಅಂಗೈ ಬೆರಳುಗಳಂತೆ 3-5 ನರಗಳೂ ಎಲೆಯ ಕೆಳಭಾಗದಲ್ಲಿ ದಟ್ಟವಾದ ರೋಮದ ಹೊದಿಕೆಯೂ ಇರುತ್ತವೆ. ಎಲೆಯ ಬಣ್ಣ ಬೂದು; ತೊಟ್ಟು ತೆಳುವಾಗಿದ್ದು ನೀಲಿಯಾಗಿರುತ್ತದೆ. ಹೂಗಳು ದೊಡ್ಡವು. ಐದು ಅಂಗುಲ ಉದ್ದದವೂ ಉಂಟು. ಬಣ್ಣ ಬಂಗಾರಹಳದಿ; ಕೆಲವೇ ಹೂಗಳಿದ್ದು ಗೊಂಚಲು ಕೊಂಬೆಗಳ ತುದಿಯಲ್ಲಿದ್ದು ಮಿಶ್ರ ಮಂಜರಿಯಾಗಿರುತ್ತದೆ. ಐದು ದಳಗಳಿದ್ದು ಪರಸ್ಪರ ಹರಡಿಕೊಂಡಿರುತ್ತದೆ. ಶುಷ್ಕಫಲಗಳು ಜೋತುಬೀಳುತ್ತವೆ. ಹಣ್ಣುಗಳು ಆಕಾರದಲ್ಲಿ ಅಂಜೂರದಂತಿವೆ. ದಪ್ಪ ಎರಡು ಮೂರು ಅಂಗುಲ, ಬಣ್ಣ ಕಂದು, ಒಂದೊಂದು ಫಲವೂ 3-5 ಭಾಗಗಳಾಗಿಸೀಳುತ್ತವೆ. ಬೀಜಗಳು ಅಸಂಖ್ಯಾತ, ಬಣ್ಣ ಕಂದು. ಮೇಲೆ ಮೃದುವಾದ ರೇಷ್ಮೆಯಂಥ ಹೊದಿಕೆಯುಂಟು.

ತೊಗಟೆಯಿಂದ ಸ್ರವಿಸುವ ಬಿಳಿಯಾದ ಅಂಟುದ್ರವ ಸುಗಂಧ ದ್ರವ್ಯಗಳ ತಯಾರಿಕೆಯಲ್ಲೂ ಐಸ್‍ಕ್ರೀಯನ್ನು ಮಂದಗೊಳಿಸುವುದಕ್ಕೂ ಪುಸ್ತಕಗಳಿಗೆ ರಟ್ಟು ಹಾಕುವುದಕ್ಕೂ ಚರ್ಮ ಹದಮಾಡುವ ಕೆಲಸಕ್ಕೂ ಬಳಕೆಯಾಗುತ್ತದೆ. ಔಷದಿಯಾಗಿಯೂ ಇವನ್ನು ಬಳಸುತ್ತಾರೆ. ಇದರ ಹತ್ತಿ ಕುರ್ಚಿ, ಸೋಫ ಮುಂತಾದವುಗಳ ದಿಂಬು ತುಂಬುವುದಕ್ಕೆ ಉಪಯುಕ್ತವೆನಿಸಿದೆ.

ತೊಗಟೆಯಿಂದ ಹಗ್ಗ ಮತ್ತು ಹುರಿಗೆ ಯೋಗ್ಯವಾದ ನಾರು ದೊರೆಯುತ್ತದೆ. ಕೆಲವುಕಡೆ ಮೆದುವಾದ ಕಾಂಡವನ್ನು ಆಹಾರ ರೂಪದಲ್ಲಿ ಬಳಸುವುದೂ ಉಂಟು. ಕೊಂಬೆ,ಕಾಂಡ ಹಸಿಯಾಗಿದ್ದರೂ ಸರಾಗವಾಗಿ ಉರಿಯುವುದರಿಂದ ಕೊಳ್ಳಿ ದೀಪವಾಗಿ ಉಪಯೋಗಿಸುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಬಿಳಿ ಹುಲಿ

ಬಿಳಿ ಹುಲಿ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್