ವಿಜಯದಶಮಿ ಅಥವಾ ದಸರಾ, ವಾಸ್ತವವಾಗಿ ಭಾರತದಲ್ಲಿ ಎರಡು ಆಚರಣೆಗಳನ್ನು ಗುರುತಿಸುತ್ತದೆ. ಮೊದಲನೆಯದು ರಾವಣನ ಮೇಲೆ ರಾಮನ ವಿಜಯ ಮತ್ತು ಎರಡನೆಯದು ರಾಕ್ಷಸನ ಮೇಲೆ ದುರ್ಗಾ ದೇವಿಯ ವಿಜಯ.
ವಿಜಯ ದಶಮಿ ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ – ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ‘ದಶ ಅಹರ್’ – ದಶಹರ ->ದಶರಾ -ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. ‘ದಶಹರ’ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರ ಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ.

ಭಾರತೀಯರು ದಸರಾದಂದು ರಾವಣನ ಪ್ರತಿಕೃತಿಯನ್ನು ಸುಡುತ್ತಾರೆ. ರಾವಣನ ಪ್ರತಿಕೃತಿ ದಹನವು ಒಬ್ಬರ ಪಾಪದ ಆತ್ಮದ ಶುದ್ಧೀಕರಣದ ಸಂಕೇತವಾಗಿದೆ. ಈ 10 ತಲೆಗಳು ಅಹಂಕಾರ, ಕ್ರೌರ್ಯ, ಅನ್ಯಾಯ, ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹ, ಸ್ವಾರ್ಥ ಮುಂತಾದ 10 ಕೆಟ್ಟ ಗುಣಗಳನ್ನು ಪ್ರತಿನಿಧಿಸುತ್ತವೆ.
ವಿಜಯದಶಮಿ ಎರಡು ಪದಗಳ ಸಂಯೋಜನೆಯಿಂದ ಹುಟ್ಟಿಕೊಂಡಿದೆ. ವಿಜಯ ಮತ್ತು ದಶಮಿ ಎಂದರೆ ಚಂದ್ರನ ಕ್ಯಾಲೆಂಡರ್ನ 10ನೇ ದಿನ. ಇದು ದುರ್ಗೆಯು ರಾಕ್ಷಸ ಮಹಿಷಾಸುರನನ್ನು ಸೋಲಿಸಿದ ದಿನವನ್ನು ಸೂಚಿಸುತ್ತದೆ.
ಮಹಾಭಾರತದಂತೆ ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ.

ಈ ವಿಜಯ ದಶಮಿ ದಿನದಂದೇ, ‘ದ್ವೈತ ವೇದಾಂತ’ ಅಥವ ‘ತತ್ವ ಸಿದಾಂತ’ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ “ಪಾಜಕ” ಎಂಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯಂದೇ ಮಧ್ವ ಜಯಂತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ.
17ನೇ ಶತಮಾನದಲ್ಲಿ ಮೈಸೂರು ರಾಜರ ಆದೇಶದ ಮೇರೆಗೆ ದಸರಾದ ಮೊದಲ ಭವ್ಯವಾದ ಆಚರಣೆಯು ನಡೆಯಿತು ಎಂದು ಹೇಳಲಾಗುತ್ತದೆ. ಅಂದಿನಿಂದ ಭಾರತದಾದ್ಯಂತ ಈ ಹಬ್ಬವನ್ನು ಅತ್ಯಂತ ಶಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.
ಜಯವು ಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರು. ಇನ್ನೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರೆಯಿತು.
ಶಮೀವೃಕ್ಷವನ್ನು ಕನ್ನಡದಲ್ಲಿ ಬನ್ನಿಮರ ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ.

ಮೈಸೂರು ಪ್ರಾಂತ್ಯದ ಜನಸಾಮಾನ್ಯರಿಗೆ ವಿಜಯದಶಮಿಯ ದಿನದ ಜಂಬೂಸವಾರಿಯನ್ನು ನೋಡುವುದೆಂದರೆ ಪರಮ ಸಂತೋಷ. ರಾಮಲೀಲ ಉತ್ಸವಗಳು ದೆಹಲಿ ಮತ್ತು ಇತರೆಡೆಗಳಲ್ಲಿ ವಿಜ್ರಂಭಣೆಯಿಂದ ನೆರವೇರುತ್ತದೆ. ಕಾಳಿ ವಿಗ್ರಹಗಳನ್ನು ಉತ್ಸವ ಸಮೇತವಾಗಿ ಕೊಂಡೊಯ್ದು ನೀರಿನಲ್ಲಿ ವಿಸರ್ಜಿಸುವ ಪದ್ಧತಿಯೂ ಪಶ್ಚಿಮ ಬಂಗಾಳ ಮತ್ತು ಇತರ ಹಲವೆಡೆಗಳಲ್ಲಿ ನಡೆಯುತ್ತಿದೆ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ. ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನ ವಿಜಯದಶಮಿ ಎನ್ನಲಾಗಿದೆ.
ದಸರಾ ದಿನದಂದು ಶಮೀ ವೃಕ್ಷವನ್ನು ಅಥವಾ ಬನ್ನಿ ಮರವನ್ನು ಪೂಜಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಈ ದಿನದಂದು ರಾವಣನ ಪ್ರತಿಗೆ ಬೆಂಕಿಯನ್ನಿಟ್ಟು ಹಿಂದಿರುಗಿ ಬರುವಾಗ ತಮ್ಮೊಂದಿಗೆ ಶಮಿ ಎಲೆಗಳನ್ನೂ ತರುವ ಪದ್ಧತಿಯಿದೆ. ಆ ಎಲೆಗಳನ್ನು ಚಿನ್ನದ ನಾಣ್ಯಗಳ ಸಂಕೇತವಾಗಿ ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ.
ಭಗವಾನ್ ಶ್ರೀರಾಮನು ಲಂಕಾವನ್ನು ಆಕ್ರಮಣ ಮಾಡುವ ಮೊದಲು ಶಮಿ ವೃಕ್ಷದ ಮುಂದೆ ತಲೆಬಾಗಿ ತನ್ನ ವಿಜಯಕ್ಕಾಗಿ ಪ್ರಾರ್ಥಿಸಿದನು ಎಂದು ನಂಬಲಾಗಿದೆ. ನಂತರ, ಯುದ್ಧದಲ್ಲಿ ರಾವಣನನ್ನು ಹತ್ಯೆಗೈದು ಲಂಕಾವನ್ನು ಪಡೆದುಕೊಳ್ಳುತ್ತಾನೆ. ಇದರ ಬಳಿಕ ರಾಮನು ಶಮಿಗೆ ಪೂಜೆಯನ್ನು ಮಾಡುತ್ತಾನೆ.
ಮಹಾಭಾರತದ ಪ್ರಕಾರ, ಪಾಂಡವರು ತಮ್ಮ ವನವಾಸದ ಕೊನೆಯ ವರ್ಷದಲ್ಲಿ ಶಮಿ ವೃಕ್ಷದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟರು. ಬಳಿಕ ಅವರು ತಮ್ಮ ವನವಾಸದ ಅವಧಿಯನ್ನು ಮುಗಿಸಿ ಹಿಂದಿರುಗುವಾಗ ಅಲ್ಲಿಂದ ಆಯುಧಗಳನ್ನು ಪಡೆದು ಶಮಿಯನ್ನು ಪೂಜಿಸಿದರು.
ಮಹರ್ಷಿ ವರ್ತಂತು ತನ್ನ ಶಿಷ್ಯ ಕೌತ್ಸರಿಂದ ದಕ್ಷಿಣದಲ್ಲಿ 14 ಕೋಟಿ ಚಿನ್ನದ ನಾಣ್ಯಗಳನ್ನು ಕೇಳಿದರು. ಆಗ ಕೌತ್ಸನ ಬಳಿ ಅಷ್ಟೊಂದು ಚಿನ್ನದ ನಾಣ್ಯಗಳಿಲ್ಲದ ಕಾರಣ ರಾಜ ರಘುವಿನ ಬಳಿ ಈ ವಿಷಯದಲ್ಲಿ ಸಹಾಯವನ್ನು ಕೇಳಿದನು. ಆಗ ರಾಜ ರಘುವು ಅಷ್ಟೊಂದು ಚಿನ್ನದ ನಾಣ್ಯವನ್ನು ತರಲು ಕುಬೇರನ ನಿಧಿಗಾಗಿ ಸ್ವರ್ಗವನ್ನು ಆಕ್ರಮಿಸಲು ಯೋಜನೆಯನ್ನು ಹಾಕಿಕೊಳ್ಳುತ್ತಾನೆ. ಇದನ್ನು ತಿಳಿದ ಇಂದ್ರ ದೇವನು ಸ್ವರ್ಗದ ಮೇಲಿನ ಆಕ್ರಮಣವನ್ನು ತಪ್ಪಿಸಲು ಶಮಿ ವೃಕ್ಷದ ಮೂಲಕ ಚಿನ್ನದ ನಾಣ್ಯಗಳ ಮಳೆಗೆರೆಯುತ್ತಾನೆ.
ಉತ್ತರ ಭಾರತದಲ್ಲಿ ಆಶ್ವಯುಜ ಮಾಸದ ಮೊದಲ ದಿನದಂದು ಬಾರ್ಲಿ ಬೀಜಗಳನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿಡುತ್ತಾರೆ. ವಿಜಯದಶಮಿಯ ದಿನ ಮೊಳಕೆಗಳು ಬಂದಿರುವ ಈ ಬಾರ್ಲಿಗಳನ್ನು ತೆಗೆದುಕೊಂಡು ಹೋಗಿ ನೆಡುತ್ತಾರೆ. ಅವರ ಪ್ರಕಾರ ಇವು ಅದೃಷ್ಟವನ್ನು ತರುವ ಸಸಿಗಳಾಗಿರುತ್ತವೆಯಂತೆ. ಇವನ್ನು “ನೊರಾತ್ರಗಳು” ಎಂದು ಕರೆಯುತ್ತಾರೆ. ಅಂದರೆ, ಒಂಬತ್ತು ರಾತ್ರಿಯಷ್ಟು ವಯಸ್ಸಾದವು ಎಂದು ಹೆಸರು.
ಧನ್ಯವಾದಗಳು.
GIPHY App Key not set. Please check settings