in

ಶ್ರಾವಣ ಸಂಭ್ರಮ

ಶ್ರಾವಣ ಸಂಭ್ರಮ
ಶ್ರಾವಣ ಸಂಭ್ರಮ

ಶ್ರಾವಣ ಮಾಸ ಸಮೀಪಿಸುತ್ತಿದ್ದಂತೆ ಮುತ್ತೈದೆ ಸ್ತ್ರೀಯರಿಗೆ ಏನೋ ಖುಷಿ, ಸಂಭ್ರಮ. ಶ್ರಾವಣ ಮಂಗಳವಾರ ಮತ್ತು ಶುಕ್ರವಾರದ ವ್ರತಗಳು, ವರಮಹಾಲಕ್ಷ್ಮೀ ವ್ರತ, ನಾಗರ ಪಂಚಮಿ, ನೂಲ ಹುಣ್ಣಿಮೆ, ಅಷ್ಟಮಿಗಳಂತಹ ಸಾಲಾಗಿ ಬರುವ ಹಬ್ಬಗಳು, ತಯಾರಿಸುವ ವಿವಿಧ ಭಕ್ಷಗಳು, ಹೀಗೆ ಬಿಡುವಿಲ್ಲದ ಕೆಲಸಗಳಿಂದ ವ್ಯಸ್ತರಾದರೂ ವರ್ಷದಿಂದ ವರ್ಷಕ್ಕೆ ಅವರ ಸಂಭ್ರಮ, ಉತ್ಸಾಹ ಜಾಸ್ತಿಯಾಗುವುದೇ ವಿನಃ ಕಡಿಮೆಯಾಗುವುದಿಲ್ಲ. ಶ್ರಾವಣ ಮಾಸವನ್ನು ಮಹಿಳೆಯರ ಮಾಸ ಎಂದು ಕರೆದರೂ ತಪ್ಪಾಗದು.

ಶ್ರಾವಣ ಮಾಸದ ಕೇಂದ್ರ ಬಿಂದು ಚೂಡಿ ಪೂಜೆ. ಶ್ರಾವಣ ಮಾಸದ ಶುಕ್ರವಾರ ಮತ್ತು ಆದಿತ್ಯವಾರ ತುಳಸಿ ಮತ್ತು ಹೊಸ್ತಿಲಿಗೆ ಮಾಡುವ ಪೂಜೆಯೇ ಈ ಚೂಡಿ ಪೂಜೆ.

ಮಳೆಗಾಲದಲ್ಲಿ ಗದ್ದೆ ಬದುವಿನಲ್ಲಿ, ಮಣ್ಣಿನ ಗೋಡೆಗಳಲ್ಲಿ ಯತೇಚ್ಛವಾಗಿ ಬೆಳೆಯುವ ಗರಿಕೆ, ಆರತಿ, ಮಾಜ್ರಾ ನಾಂಕುಟ,ಬೆಕ್ಕಿನ ಉಗುರು, ಕಾಯ್ಳೆ ದೊಳೊ ಕಾಗೆ ಕಣ್ಣು, ಅನ್ವಾಳಿ, ಲಾಯೆ ಮಾಡ್ಡೋ, ಗಾಂಟೆ ಮಾಡ್ಡೊ ಎಂಬ ತರಹವಾರಿ ಸಣ್ಣ ಸಣ್ಣ ಗಿಡಗಳು. ರತ್ನಗಂಧಿ, ಶಂಖ ಪುಷ್ಪ, ಕಣಗಿಲೆ, ಕರವೀರ, ರಥದ ಹೂ, ಗೌರಿ ಹೂ ಇಂತಹುದೇ ಮೊದಲಾದ ಹೂಗಳನ್ನು ಕಲಾತ್ಮಕವಾಗಿ ಜೋಡಿಸಿ ಬಾಳೆ ನಾರಿನಲ್ಲಿ ಕಟ್ಟಿದ ಸೂಡಿಯೇ ಈ ಚೂಡಿ. ಸೂಡಿ ಎಂಬುದೇ ಆಡು ಭಾಷೆಯಲ್ಲಿ ಕ್ರಮೇಣವಾಗಿ ಚೂಡಿ ಆಗಿರಬಹುದು.

ನಮ್ಮ ಬಾಲ್ಯದಲ್ಲಿ ಈ ಎಲ್ಲಗಿಡ, ಹೂಗಳನ್ನು ಅಮ್ಮಂದಿರಿಗೆ ತಂದು ಕೊಡುವ ಕೆಲಸ ಮಕ್ಕಳಾದ ನಮ್ಮದಾಗಿತ್ತು. ಈಗ ಹೇಳಿದರೆ ತರುವ ಮಕ್ಕಳು ಇಲ್ಲ, ಗದ್ದೆಯೇ ವಿರಳವಾಗಿರುವಾಗ, ಬದು ಎಲ್ಲಿಂದ, ಮಣ್ಣಿನ ಗೋಡೆಗಳೂ ಇಲ್ಲ. ಬಹುತೇಕ ಮಹಿಳೆಯರು ಕೆಲಸಕ್ಕೆ ಹೋಗುವ ಕಾರಣ ಅವರಿಗೆ ಇದನ್ನೆಲ್ಲಾ ಹುಡುಕಿ ತರುವ ಸಮಯ ಮತ್ತು ವ್ಯವಧಾನ ಎರಡೂ ಇಲ್ಲ.

ಶ್ರಾವಣ ಸಂಭ್ರಮ
ಚೂಡಿ ಪೂಜೆ

ಈಗ ಮಾರ್ಕೆಟ್‌ನಲ್ಲಿ ಚೂಡಿಗೆ ಬೇಕಾದ ಎಲ್ಲ ಸಾಮಾಗ್ರಿಗಳು ಸಿಗುತ್ತವೆ, ಕಟ್ಟಿ ತಯಾರಿರುವಂತಹ ಚೂಡಿಯೂ ಸಿಗುತ್ತವೆ. ಕಟ್ಟುವ ಉತ್ಸಾಹ, ಸಮಯ, ವ್ಯವಧಾನ ಇರುವವರು ತಂದು ಕಟ್ಟುತ್ತಾರೆ. ಉಳಿದವರು ತಯಾರಿರುವ ಚೂಡಿ ತಂದು ಪೂಜಿಸುತ್ತಾರೆ.

ಪೂಜೆಯ ದಿನ ಬೆಳಿಗ್ಗೆ ಮನೆಯನ್ನು ಗುಡಿಸಿ ಸಾರಿಸಿ ಸ್ವಚ್ಛ ಮಾಡಿ, ತಲೆಗೆ ಸ್ನಾನ ಮಾಡಿ ಶುಭ್ರರಾಗಿ, ಒಳ್ಳೆಯ ಸೀರೆ ಉಟ್ಟು, ಜಿ.ಎಸ್.ಬಿ. ಮಹಿಳೆಯರ ಪ್ರಸಿದ್ಧ ಆಭರಣವಾದ ಮಂಗಳಸೂತ್ರ ಜಿ.ಎಸ್.ಬಿ. ಮಹಿಳೆಯರಿಗೆ ಎರಡು ಪ್ರತ್ಯೇಕ ತಾಳಿಸರ ಒಂದು ತಾಯಿ ಮನೆದ್ದು, ಇನ್ನೊಂದು ಪತಿಮನೆದ್ದು ಧರಿಸಿ, ಸಂಭ್ರಮದಿಂದ ಸುಂದರವಾಗಿ ತಯಾರಾಗುತ್ತಾರೆ. ತುಳಸಿ ಮುಂದೆ ಮತ್ತು ಹೊಸ್ತಿಲಿಗೆ ಸುಂದರ ರಂಗವಲ್ಲಿಯ ಚಿತ್ತಾರ ಬಿಡಿಸುತ್ತಾರೆ. ಪೂಜೆ ಆಗುವ ತನಕ ಅಕ್ಕಿಯಿಂದ ತಯಾರಿಸಿದ ತಿನಿಸುಗಳನ್ನು ತಿನ್ನಬಾರದು. ನಂತರ ಪೂಜೆಗೆ ಅಣಿ ಮಾಡಿಕೊಳ್ಳುತ್ತಾರೆ.

ಒಂದು ದೊಡ್ಡ ಹರಿವಾಣದಲ್ಲಿ, ಕಟ್ಟಿದ ಚೂಡಿಗಳನ್ನು ಸುಂದರವಾಗಿ ಜೋಡಿಸಿ ಇಡುತ್ತಾರೆ, ವೀಳ್ಯದೆಲೆಯ ವೀಡೊ ಎರಡು ಎಲೆ ಮತ್ತು ಅಡಿಕೆ ಇಟ್ಟು ಮಡಚಿ ಮಾಡಿದ ವೀಡೊ ತಯಾರಿಸಿ ಇಡುತ್ತಾರೆ. ಪೂಜೆಗೆ ಬೇಕಾದ ಅರಶಿನ, ಕುಂಕುಮ, ಅಕ್ಕಿ ಕಾಳು ಅಕ್ಷತೆ, ಉದುಬತ್ತಿ, ಆರತಿ, ದೀಪ, ಹಣ್ಣು ಕಾಯಿ, ನೈವೇದ್ಯ ನೈವೇದ್ಯಕ್ಕೆ ಸಿಹಿ ಅವಲಕ್ಕಿ, ಪಂಚಕಜ್ಜಾಯದಂತಹ ಸಿಹಿ ಭಕ್ಷಗಳನ್ನು ತಯಾರಿಸುವುದು ವಾಡಿಕೆ. ಸಮಯದ ಅನುಕೂಲ ಇಲ್ಲದಿದ್ದರೆ ಸಕ್ಕರೆ ಅಥವಾ ಹಣ್ಣುಗಳನ್ನು ನೈವೇದ್ಯ ಮಾಡಬಹುದು ಎಲ್ಲವನ್ನು ವ್ಯವಸ್ಥಿತವಾಗಿ ಜೋಡಿಸಿ ತಯಾರಿ ಮಾಡಿಕೊಳ್ಳುತ್ತಾರೆ.

ಜೋಡಿಸಿಟ್ಟ ಪೂಜಾ ಸಾಮಾಗ್ರಿಗಳನ್ನು ತುಳಸಿ ಮುಂದೆ ಇಟ್ಟು ಕಲಶ ತುಂಬಿ, ಅರಶಿನ, ಕುಂಕುಮ ತುಳಸಿಗೂ ಹಚ್ಚಿ ತಾವೂ ಹಚ್ಚಿಕೊಂಡು, ಮಾಂಗಲ್ಯಕ್ಕೂ ಹಚ್ಚುತ್ತಾರೆ. ದೀಪ ಹಚ್ಚಿ, ಧೂಪ, ಆರತಿ ಬೆಳಗಿ, ಹಣ್ಣು ಕಾಯಿ ಮಾಡಿ, ತಂದ ಭಕ್ಷಗಳ ನೈವೇದ್ಯ ಮಾಡಿ ಪೂಜೆ ಮಾಡುತ್ತಾರೆ. ಕೈಯಲ್ಲಿ ಅಕ್ಷತೆ ತೆಗೆದುಕೊಂಡು ತುಳಸಿಗೂ, ಮೇಲೆ ಸೂರ್ಯನಿಗೂ ಹಾಕಿ ತುಳಸಿ ಸ್ತೋತ್ರ ಹೇಳುತ್ತಾ, ಐದು ಪ್ರದಕ್ಷಿಣೆ ಹಾಕುತ್ತಾರೆ.

ತುಳಸಿಗೆ ಒಂದು ಚೂಡಿ ಮತ್ತು ವೀಡೊ ಇಡುತ್ತಾರೆ ಅತ್ತೆ ಮುತ್ತೈದೆಯಾಗಿ ತೀರಿಕೊಂಡಿದ್ದರೆ ಅಂತಹವರು ಎರಡು ಚೂಡಿ ಇಡುವುದು ಕ್ರಮ, ಒಂದು ಚೂಡಿಯನ್ನು ಮಾಡಿನ ಮೇಲೆ ಹಾಕುತ್ತಾರೆ. ಈ ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಂಡು ಮುಂಬಾಗಿಲಿನ ಹೊಸ್ತಿಲ ಬಳಿ ಬಂದು, ಹೊಸ್ತಿಲಿಗೆ ಅರಶಿನ, ಕುಂಕುಮ, ಅಕ್ಷತೆ ಹಾಕಿ ವೀಡೊ ಜೊತೆ ಚೂಡಿಯನ್ನು ಹೊಸ್ತಿಲಿನ ಎರಡು ಬದಿಗೆ ಇಟ್ಟು ಆರತಿ ಬೆಳಗುತ್ತಾರೆ. ಬಲಗಾಲಿಟ್ಟು ಮನೆಯೊಳಗೆ ಪ್ರವೇಶ ಮಾಡಿ ದೇವರ ಮನೆಯ ಹೊಸ್ತಿಲಿಗೂ ಇದೇ ತರಹ ಪೂಜೆ ಮಾಡುತ್ತಾರೆ. ದೇವರ ಮಂಟಪದಲ್ಲಿ ಕೂಡಿಸಿದ ದೇವರುಗಳಿಗೆಲ್ಲಾ ತಯಾರಿಸಿದ ಚೂಡಿ ಕಡಿಮೆ ಇದ್ದರೆ, ಕುಲದೇವರು, ಗ್ರಾಮದೇವರು, ಇಷ್ಟ ದೇವರಿಗೆ ಚೂಡಿ ಇಟ್ಟು ಆರತಿ ಬೆಳಗಿ ನಮಸ್ಕರಿಸುತ್ತಾರೆ. ಪತಿದೇವರಿಗೆ ವೀಡೊ ಜೊತೆಯಲ್ಲಿ ಚೂಡಿ ಕೊಟ್ಟು ಅವರ ಆಶೀರ್ವಾದ ಪಡೆದು, ಅವರಿಂದ ಮರಳಿ ಪಡೆದ ಚೂಡಿಯನ್ನು ತಾವು ಮುಡಿದುಕೊಳ್ಳುವುದು ಪದ್ಧತಿ.

ಸಾಧಾರಣವಾಗಿ ಈ ಚೂಡಿ ಪೂಜೆಯನ್ನು ಅತ್ತೆ, ಸೊಸೆ, ಓರಗಿತ್ತಿಯರು ಸೇರಿ ಮಾಡುವುದು ಪದ್ಧತಿ. ಪರವೂರಿನಲ್ಲಿರುವವರು ಪ್ರತ್ಯೇಕವಾಗಿ ಮಾಡುತ್ತಾರೆ.

ಕುಲದೇವರ ಆಲಯಕ್ಕೆ ಮತ್ತು ಗ್ರಾಮದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಚೂಡಿ ಸಮರ್ಪಿಸುವುದು ಕ್ರಮ. ಅನುಕೂಲವಿದ್ದವರು ಎಲ್ಲಾ ದೇವಸ್ಥಾನಗಳಿಗೂ ಮುಖ್ಯವಾಗಿ ದೇವಿ ದೇವಸ್ಥಾನ ಭೇಟಿ ನೀಡಿ ಚೂಡಿ ಸಮರ್ಪಿಸುತ್ತಾರೆ.

ಪೂಜೆಯ ನಂತರ ಪೂಜಿಸಿದ ಚೂಡಿಯನ್ನು ಒಬ್ಬರು ಇನ್ನೊಬ್ಬರಿಗೆ ಕೊಡುವ ಕ್ರಮ ಇದೆ. ಮೊದಲಿಗೆ ಕಿರಿಯರು ಹಿರಿಯರಿಗೆ ಕುಂಕುಮ ಹಚ್ಚಿ ಚೂಡಿ ಮತ್ತು ವೀಡೊ ನೀಡಿ ನಮಸ್ಕಾರ ಮಾಡುತ್ತಾರೆ. ಹಿರಿಯರು ಕಿರಿಯರಿಗೆ ಆಶೀರ್ವಾದ ನೀಡಿ, ತಾವು ಪೂಜಿಸಿದ ಚೂಡಿಯನ್ನು ಕುಂಕುಮ ಹಚ್ಚಿ ಕಿರಿಯರಿಗೆ ನೀಡುತ್ತಾರೆ‌.

ಶ್ರಾವಣ ಸಂಭ್ರಮ
ಚೂಡಿ ಪೂಜೆ

ಮದುವೆಯಾದ ಮೊದಲ ವರ್ಷದ ವಧುವಿಗೆ ಅತ್ತೆ ಮನೆ, ತವರು ಮನೆ ಎರಡೂ ಕಡೆ ಚೂಡಿ ಪೂಜೆಯನ್ನು ವಿಜೃಂಭಣೆಯಿಂದ ಮಾಡುತ್ತಾರೆ. ಎಲ್ಲರಿಗೂ ಅನುಕೂಲವಾಗುವ ಒಂದು ದಿನ ನಿಗದಿ ಮಾಡಿ, ಶುಕ್ರವಾರ ಅಥವಾ ಭಾನುವಾರ ನೆಂಟರಿಷ್ಟರು, ಆಪ್ತರು, ಸ್ನೇಹಿತರು ಎಲ್ಲರನ್ನೂ ಆಹ್ವಾನಿಸುತ್ತಾರೆ, ಎಲ್ಲರೂ ಕೂಡಿ ಚೂಡಿ ಪೂಜೆ ಮಾಡುತ್ತಾರೆ. ಪೂಜೆಯ ನಂತರ ತಾವು ಪೂಜಿಸಿದ ಚೂಡಿಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ನವವಧುವಿಗೆ ಮೊದಲ ಚೂಡಿಗೆ ಪತಿ ಉಡುಗೊರೆ ಕೊಡುವ ಕ್ರಮ ಇದೆ. ಕೆಲವು ಕುಟುಂಬಗಳಲ್ಲಿ ಅತ್ತೆ, ಅಮ್ಮ, ಬಂದವರೆಲ್ಲರೂ ಉಡುಗೊರೆ ಕೊಡುವುದೂ ಇದೆ. ಪೂಜೆಯ ನಂತರ ಸುಗ್ರಾಸ ಭೋಜನದ ವ್ಯವಸ್ಥೆಯೂ ಇರುತ್ತದೆ.

ಇದು ಇತ್ತೀಚೆಗೆ ಬೆಳೆದು ಬಂದ ಕ್ರಮ, ದೇವಸ್ಥಾನಗಳಲ್ಲಿ ಸಾಮೂಹಿಕ ಚೂಡಿ ಪೂಜೆಯನ್ನು ಏರ್ಪಡಿಸುತ್ತಾರೆ. ನಿಗದಿತ ದಿನದಂದು ಊರಿನ ಮಹಿಳೆಯರು ಶುಚಿರ್ಭೂತರಾಗಿ ತಾವು ಕಟ್ಟಿದ ಚೂಡಿಗಳನ್ನು ಸಾಮಾನ್ಯವಾಗಿ ಐದು ತೆಗೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಹಿರಿಯ ಮಹಿಳೆಯರ ನೇತೃತ್ವದಲ್ಲಿ ಎಲ್ಲರೂ ಸೇರಿ ಪೂಜೆ ಮಾಡುತ್ತಾರೆ. ದೇವರಿಗೂ ಚೂಡಿ ಕೊಟ್ಟು, ಪರಸ್ಪರ ಚೂಡಿ ವಿನಿಮಯ ಮಾಡಿಕೊಳ್ಳುತ್ತಾರೆ.

ಮೊದಲಿನ ಕಾಲದಲ್ಲಿ ಪರವೂರಿನಲ್ಲಿರುವ ಹಿರಿಯ ನೆಂಟರಿಷ್ಟರಿಗೆ ಅಂಚೆಯಲ್ಲಿ ಚೂಡಿ ಮತ್ತು ಅರಶಿನ, ಕುಂಕುಮ ಕಳುಹಿಸುವ ಕ್ರಮವಿತ್ತು. ದೊಡ್ಡ ಚೂಡಿಯನ್ನು ಅಂಚೆಯಲ್ಲಿ ಕಳುಹಿಸುವುದು ಕಷ್ಟ ಎಂದು ಎರಡು ಗರಿಕೆ ಮತ್ತು‌ ಒಂದು ಸಣ್ಣ ಹೂ ಮಾತ್ರ ಇಟ್ಟು ಸಣ್ಣ ಚೂಡಿ ಮಾಡಿ ಕಳುಹಿಸುತ್ತಿದ್ದರು. ಅದರ ಜೊತೆ ಆಶೀರ್ವಾದ ಬೇಡಿ ಪತ್ರವನ್ನೂ ಬರೆಯುತ್ತಿದ್ದರು. ಈಗ ಪತ್ರ ಬರೆಯುವುದೇ ವಿರಳವಾಗಿರುವಾಗ ಚೂಡಿ ಕಳುಹಿಸುವ ಮಾತೆಲ್ಲಿ.

ಅನಾದಿಕಾಲದಿಂದ ನಮ್ಮ ಹಿರಿಯರು ಆರಂಭಿಸಿ, ಪಾಲಿಸಿ, ಬೆಳೆಸಿಕೊಂಡು ಬಂದಂತಹ ಈ ಸಂಪ್ರದಾಯ ಮುಂದಿನ ಪೀಳಿಗೆಯವರು ಮುಂದುವರಿಸಿಕೊಂಡು ಹೋಗುವರೇ? ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ. ನಮ್ಮ ಸಂಪ್ರದಾಯಕ್ಕೆ ದಕ್ಕೆ ಬರದಂತೆ ಮುಂದುವರಿಸಿಕೊಂಡು ಹೋದರೆ ಅದೇ ನಾವು ನಮ್ಮ ಹಿರಿಯರಿಗೆ ಕೊಡುವ ಗೌರವ ಅಲ್ಲವೇ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ ಅಮೂಲ್ಯ…

ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ ಅಮೂಲ್ಯ…

ಜೂನ್ 23 ಗುರುವಾರ ಈ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ. ತಿರುಕನು ಕುಬೇರ ನಾಗುತ್ತಾನೇ.

ಜೂನ್ 23 ಗುರುವಾರ ಈ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ. ತಿರುಕನು ಕುಬೇರ ನಾಗುತ್ತಾನೇ.