ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳತಾಲೂಕಿನ ಕರೋಪಾಡಿ ಗ್ರಾಮದಲ್ಲಿದೆ. ಪ್ರಕೃತಿಯ ಮಡಿಲಲ್ಲಿರುವ ಈ ಕ್ಷೇತ್ರದಲ್ಲಿ ಆಂಜನೇಯ, ದತ್ತಾತ್ರೇಯ, ಗುಹಾಂತರ್ಗತ ಪಂಚಮುಖೀ ಆಂಜನೇಯ ಮಂದಿರಗಳಿವೆ. ಶ್ರೀ ದತ್ತಾಂಜನೇಯ ಇಲ್ಲಿನ ಆರಾಧ್ಯಮೂರ್ತಿ, ಶ್ರೀ ವಜ್ರಮಾತಾದೇವಿಯೂ ಇಲ್ಲಿನ ಆರಾಧ್ಯದೇವರು. ದತ್ತಾತ್ರೇಯನೆಂದರೆ ಬ್ರಹ್ಮ-ವಿಷ್ಣು-ಶಿವ ಸ್ವರೂಪಿ. ಒಳ್ಳೆಯ ಚಿಂತನೆಗಳನ್ನು ಸೃಷ್ಟಿಸಿ, ದೈವಿಕ-ಮಾನವೀಯ ಗುಣಗಳನ್ನು ಸ್ಥಿರಗೊಳಿಸಿ, ಅರಿಷಡ್ವರ್ಗಗಳನ್ನು ನಾಶಗೊಳಿಸುವ ದೇವರೆಂದು ನಂಬಿಕೆ. ಆಂಜನೇಯನು ಶಕ್ತಿಯ ಖಣಿ. ದಿನಾಂಕ ೧೫-೦೨-೧೯೮೯ ರಂದು ನಾರಾಯಣಸ್ವಾಮಿ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಓಂ ಶ್ರೀ ವೀರಾಂಜನೇಯಸ್ವಾಮೀ ಕ್ಷೇತ್ರವೇ ಮುಂದೆ ಶ್ರೀ ಗುರುದೇವದತ್ತ ಸಂಸ್ಥಾನವಾಯಿತು. ನಾರಾಯಣಸ್ವಾಮಿಯವರೇ ಮುಂದೆ ಶ್ರೀ ಗುರುದೇವಾನಂದರಾದರು. ಈ ಅವಧೂತರೇ ಇಲ್ಲಿನ ಕರ್ತೃತ್ವ ಶಕ್ತಿ.
ಕೃಷ್ಣಶಿಲೆಯ ಗರ್ಭಗುಡಿಯ ಗೋಪುರವು ೩೫ ಅಡಿ ಎತ್ತರವಿದೆ. ವಿಶೇಷವಾದ ಪದ್ಮಪೀಠದಿಂದ ಗೋಪುರವು ಮೇಲೇರಿದೆ. ತಮಿಳುನಾಡಿನ ಶಿಲೆಗಳನ್ನು ಆಯ್ದು, ತಮಿಳುನಾಡಿನ ಕಾರೈಕುಡಿಯಲ್ಲಿ ಕೆತ್ತನೆಯನ್ನು ಮಾಡಲಾಗಿದೆ. ಗರ್ಭಗುಡಿಯು ಹೊಯ್ಸಳರ ವಾಸ್ತುಶಿಲ್ಪ ಶೈಲಿಯ ವೇಸರಶಿಲ್ಪ ಶೈಲಿಯಲ್ಲಿದೆ. ಆಕಾರದಲ್ಲಿ ಅಷ್ಟಪ್ರಾಸಾದವಾಗಿ ಕಂಗೊಳಿಸುತ್ತದೆ. ಖ್ಯಾತ ಸ್ಥಪತಿ ದಕ್ಷಿಣಾಮೂರ್ತಿಯವರುನಿರ್ಮಾಣದ ನೇತೃತ್ವ ವಹಿಸಿದವರು. ಆಂಜನೇಯನ ವಿಗ್ರಹವೂ ಇವರ ಕೊಡುಗೆಯೇ.
ದೇಗುಲದ ಗರ್ಭಗುಡಿಯ ಹೊರಗೆ ಅಷ್ಟಪಟ್ಟಿ ಆಕಾರದಲ್ಲಿ ಸುಂದರವಾದ ಸುತ್ತುಗೋಪುರವಿದೆ. ಇದರಲ್ಲಿ ಕಲಾತ್ಮಕವಾದ ಬೇರೆಬೇರೆ ವರ್ಣಚಿತ್ರಗಳ ಕಥಾಮಾಲಿಕೆಯಿದೆ. ೪೦ ಅಡಿ ಎತ್ತರದ ರಾಜಗೋಪುರದಲ್ಲಿ ಪುರಾಣೇತಿಹಾಸದ ಬೋಧನೆ ನೀಡುವ ಚಿತ್ರಕಾವ್ಯಗಳಿವೆ. ಗೋಪುರದ ಪೂರ್ವಭಾಗದಲ್ಲಿ ಹನುಮದ್ವಿಲಾಸದ ಕಥಾನಕ, ದಕ್ಷಿಣಭಾಗದಲ್ಲಿ ಶಿವಲೀಲೆಯ ಕಥೆಗಳು, ಪಶ್ಚಿಮದಲ್ಲಿ ಗುರುದತ್ತಾತ್ರೇಯರ ಮಹಿಮೆಯನ್ನು ಸಾರುವ ಕಲಾಕೃತಿಗಳು ಹಾಗೂ ಉತ್ತರದಲ್ಲಿ ಶ್ರೀಮನ್ನಾರಾಯಣನ ಮೂರ್ತಿಯಿದೆ.
ಶ್ರೀ ದತ್ತಾತ್ರೇಯ ಪ್ರಭು ಮತ್ತು ಶ್ರೀ ಆಂಜನೇಯ ಸ್ವಾಮಿ ಇಲ್ಲಿಯ ಆರಾಧ್ಯ ದೇವರುಗಳು. ೧ ಅಡಿ ೧ ಇಂಚು ಎತ್ತರದ ದತ್ತಾತ್ರೇಯರ ಸ್ಫಟಿಕ ವಿಗ್ರಹ, ಕೃಷ್ಣಶಿಲೆಯಿಂದ ರೂಪುಗೊಂಡಂತಹ ೫ ಅಡಿ ೪ ಇಂಚು ಎತ್ತರದ ಅಭಯ ಹಸ್ತದ ಆಂಜನೇಯ ಸ್ವಾಮಿಯ ವಿಗ್ರಹ ಗರ್ಭಗುಡಿಯೊಳಗಿದೆ. ಪರಿವಾರ ದೇವತೆಗಳಾಗಿ ವಿಘ್ನನಾಶಕ ಬಲಮುರಿಗಣಪತಿ, ಶ್ರೀ ಮಹಾವಜ್ರಮಾತೆ ಪ್ರಸನ್ನರೂಪಿಯಾಗಿ ಪರ್ವಕಾಲಗಳಲ್ಲಿ ಸೇವೆ ಸ್ವೀಕರಿಸುವ ಜಗದ್ಧಾತ್ರಿ, ಸುಬ್ರಹ್ಮಣ್ಯ ಸ್ವಾಮಿ, ಮೂಲರಾಮ, ಶಕ್ತಿ ಸ್ವರೂಪಿಣಿ ಭದ್ರಕಾಳಿ ಆರಾಧಿಸಲ್ಪಡುತ್ತಿದ್ದಾರೆ. ನೈಋತ್ಯಭಾಗದಲ್ಲಿ ನಾಗನ ಬಿಂಬವನ್ನು ಪ್ರತಿಷ್ಠಾಪಿಸಲಾಗಿದೆ. ನಮಸ್ಕಾರ ಮಂಟಪದ ಹೊರಗೆ ಸುತ್ತು ಗೋಪುರದ ಮಧ್ಯೆ ಔದುಂಬರ (ಅತ್ತಿ), ಆಮಲಕ (ನೆಲ್ಲಿ), ಹಾಗೂ ಪಾರಿಜಾತ ವೃಕ್ಷಗಳು ಪ್ರಾಕೃತಿಕವಾಗಿ ಹುಟ್ಟಿಬೆಳೆದಿವೆ. ಅತ್ತಿಮರದಲ್ಲಿ ಲಕ್ಷೀನಾರಾಯಣ, (ಇಲ್ಲಿ ದತ್ತನ ಸಾನಿಧ್ಯ), ಪಾರಿಜಾತದಲ್ಲಿ ಪ್ರಾಣದೇವರು, ನೆಲ್ಲಿಮರ ವಿಷ್ಣು ಸಾನಿಧ್ಯದ ಪ್ರತೀಕವಾಗಿರುತ್ತದೆ. ತ್ರೇತಾಯುಗದಲ್ಲಿ ಆಂಜನೇಯನು ಸಂಜೀವಿನಿಯನ್ನು ಹುಡುಕಲು ಹೋಗಿ ಚಂದ್ರದ್ರೋಣ ಪರ್ವತವನ್ನು ತರುತ್ತಿರುವಾಗ ಇಲ್ಲಿದ್ದ ಮಾಯಾಶಕ್ತಿಗಳು ಪ್ರಾಣದೇವರಿಗೆ ತಡೆಯೊಡ್ಡಿದಾಗ ಆ ಶಕ್ತಿಗಳನ್ನು ಪ್ರಾಣದೇವರು ನಾಶಪಡಿಸಿ, ಈ ಪ್ರದೇಶವನ್ನು ಸತ್ವಭರಿತವಾಗಿಸಿದನು ಎಂಬ ನಂಬಿಕೆಯಿದೆ. ಹನುಮಗಂಗಾ ಪುಷ್ಕರಿಣಿಯನ್ನು ೨೦೧೯ ರಲ್ಲಿ ನಿರ್ಮಿಸಲಾಗಿದೆ.
ವೃತ್ತಾಕಾರದ ಎರಡು ಅಂತಸ್ತಿನ ದತ್ತಪೀಠವಿದೆ. ಶ್ರೀ ಗುರುದೇವದತ್ತಪೀಠ ಎಂದು ಕರೆಯಲ್ಪಡುವ ಇಲ್ಲಿ ಭಕ್ತರ ಭೇಟಿ ಶ್ರೀಗಳೊಂದಿಗೆ ನಡೆಯುತ್ತದೆ. ಪ್ರತೀ ಶನಿವಾರದಂದು ರಾತ್ರೆ ದತ್ತೋಪಾಸನೆ ಮತ್ತು ಆಂಜನೇಯ ಸೇವೆ, ಪ್ರತೀ ಸಂಕ್ರಮಣದಂದು ಬೆಳಗ್ಗೆ ನಾಗಾರಾಧನೆ, ಸಾಮೂಹಿಕ ಗಾಯತ್ರಿ ಹವನ ಜರುಗುವುದು.
ಒಡಿಯೂರಿನಿಂದ ಮೂರು ಕಿಲೋಮೀಟರ್ ದೂರದ ಕನ್ಯಾನದಲ್ಲಿ ಶ್ರೀ ಗುರುದೇವ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲಿದೆ.
ಯಕ್ಷಗಾನ, ನಾಟಕ, ನೃತ್ಯ ಮತ್ತು ಸಂಗೀತದಲ್ಲಿ ಯುವಪ್ರತಿಭೆಗಳಿಗೆ ತರಬೇತಿ ನೀಡಲಾಗುತ್ತದೆ. ಯಕ್ಷಗಾನ ಹವ್ಯಾಸಿ ತಂಡವು ಪರಿಣತ ತರಬೇತುದಾರರಿಂದ ಶಿಕ್ಷಣ ಪಡೆದು ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಿದೆ. ಮಹಿಳಾ ಯಕ್ಷಗಾನ ತಂಡ, ನಾಟಕ ತಂಡಗಳು ಕ್ರಿಯಾಶೀಲವಾಗಿವೆ.
ಪಂಚ ಪರ್ವಗಳು
ಪ್ರತಿಷ್ಠಾಮುಹೂರ್ತವನ್ನು ಲಕ್ಷಿಸಿ, ಪ್ರತಿಷ್ಠಾವರ್ಧಂತಿ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ ಜರುಗುವುದು. ಆ ದಿನ ಬೆಳಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕೈಗೊಳ್ಳಲಾಗುವುದು.
ಹನುಮಜ್ಜಯಂತಿ : ಶ್ರೀ ರಾಮನವಮಿಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭಗೊಂಡು, ಹನುಮಯಾಗ, ಧಾರ್ಮಿಕ ಗೋಷ್ಠಿ, ವಿಶೇಷ ವೈದಿಕ ಕಾರ್ಯಕ್ರಮಗಳೊಂದಿಗೆ ಹನುಮಜಯಂತಿ ಸಮಾಪನಗೊಳ್ಳುವುದು.
ನಾಗರಪಂಚಮಿ : ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಸಾನ್ನಿಧ್ಯವಿರುವ ಇಲ್ಲಿ ನಾಗರಪಂಚಮಿಯಂದು ಸಾರ್ವಜನಿಕ ಆಶ್ಲೇಷ ಬಲಿಪೂಜೆ ಜರಗುವುದು. ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ಸೇವೆಗಳನ್ನು ಶ್ರೀ ಸುಬ್ರಾಯ ದೇವರಿಗೆ ಈ ಸಂದರ್ಭದಲ್ಲಿ ಸಲ್ಲಿಸಲಾಗುವುದು.
ಲಲಿತಾಪಂಚಮಿ : ನವರಾತ್ರಿಯ ಸಮಯದಲ್ಲಿ ಲಲಿತಾ ಪಂಚಮಿಯಂದು ಶ್ರೀ ಚಂಡಿಕಾಯಾಗ, ಶ್ರೀ ಲಲಿತಾಸಹಸ್ರನಾಮ ಪಠಣ, ಸಪ್ತಶತೀ ಪಾರಾಯಣ, ಅಷ್ಟಾವಧಾನ ಸೇವೆಗಳು ನಡೆಯುವವು. ಅಲ್ಲದೇ ಶ್ರೀ ಶಾರದಾ ದೇವಿಯ ಆರಾಧನೆ, ಸಾಮೂಹಿಕ ವಿದ್ಯಾರಂಭ, ಶ್ರೀ ಸರಸ್ವತಿ ಹವನ ಮಾಡಲಾಗುವುದು.
ದತ್ತಜಯಂತಿ : ಈ ಉತ್ಸವವು ಒಂದುವಾರಗಳ ಕಾಲ ಜರುಗುವುದು. ಗುರುಚರಿತ್ರೆ ಪಾರಾಯಣ, ದತ್ತಾರಾಧನೆ, ದತ್ತಮಾಲಾ ಧಾರಣೆ ನಡೆಯುವುದು. ಹುಣ್ಣಿಮೆಯ ದಿನ ಶ್ರೀ ದತ್ತಮಹಾಯಾಗ ಪೂರ್ಣಾಹುತಿಯಾದ ಬಳಿಕ ಶ್ರೀಗಳವರಿಂದ ಮಧುಕರೀ ಸೇವೆ ಜರಗುವುದು.
ಕೇರಳ – ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಒಡಿಯೂರಿನಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಒಡಿಯೂರು ಪೆರ್ಗಡೆ ಶೆಟ್ರು- ಅಂತಕ್ಕ ರವರ ಪುತ್ರನಾಗಿ ೦೮-೦೮-೧೯೬೧ ರಲ್ಲಿ ಜನಿಸಿದರು. ಸಣ್ಣ ಪ್ರಾಯದಲ್ಲೇ ಪಾರಮಾರ್ಥಿಕದತ್ತ ಒಲವು, ಆಧ್ಯಾತ್ಮಿಕ ಜೀವನವನ್ನು ತನ್ನದಾಗಿಸಿಕೊಂಡು ಸಮಾಜದ ಹಿತಕ್ಕಾಗಿ ತನ್ನ ಬದುಕನ್ನು ರೂಪಿಸಿಕೊಂಡರು. ಕೆಲವು ವರ್ಷ ಗಾಣಗಾಪುರದಲ್ಲಿದ್ದು ಸಾಧನೆಯನ್ನು ಮಾಡಿದರು. ಅವಧೂತ ಮುನಿ ಶ್ರೀ ವಿವೇಕಾನಂದ ಮುನಿಗಳು ಇವರ ಗುರುಗಳು. ತಾನು ಹುಟ್ಟಿ ಬೆಳೆದ ಊರಿನ ಉದ್ಧಾರವನ್ನು ಮೊದಲಾಗಿ ಪ್ರಾರಂಭಿಸಲು ತೊಡಗಿ, ಅವಧೂತ ಪರಂಪರೆಯ ಪಥವನ್ನು ಹಿಡಿದು, ಸಮಾಜಸೇವೆಯಲ್ಲಿ ಆನಂದವನ್ನು ಪಡೆದರು. ‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಿದ್ದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕೃತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನುಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕು’ ಎನ್ನುವ ಶ್ರೀಗಳು ಸಾಮಾಜಿಕ ಸ್ಪಂದನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ.
ಧನ್ಯವಾದಗಳು.
GIPHY App Key not set. Please check settings