in

ಮಹಾಶಿವರಾತ್ರಿ ಆರಂಭವಾಗಿದ್ದು ಹೇಗೆ ಶಿವರಾತ್ರಿ ಪೂಜೆ ಮಾಡುವುದು ಹೇಗೆ?

ಮಹಾಶಿವರಾತ್ರಿ
ಮಹಾಶಿವರಾತ್ರಿ

ಮಹಾಶಿವರಾತ್ರಿ ಬರುವ ಸಮಯ, ಇನ್ನೇನು ಮಾರ್ಚ್ ತಿಂಗಳಲ್ಲಿ ಮಹಾಶಿವರಾತ್ರಿ ಆಚರಣೆ ಶುರುವಾಗುತ್ತದೆ ರಾತ್ರಿಯಿಡೀ ಜಾಗರಣೆ, ಹಿಂದೂಗಳ ಶ್ರೇಷ್ಟ ಹಬ್ಬಗಳಲ್ಲಿ ಒಂದು. ಮಹಾಶಿವ ತ್ರಿಮೂರ್ತಿಗಳಲ್ಲಿ ಒಬ್ಬ. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಇದರ ಮುಂದಿನ ದಿನ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸುವರು. ತಂಬಿಟ್ಟು ಈ ಹಬ್ಬದ ಪ್ರಮುಖ ತಿನಿಸು. ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ.

ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.

ಮಹಾಶಿವರಾತ್ರಿ ಆರಂಭವಾಗಿದ್ದು ಹೇಗೆ ಶಿವರಾತ್ರಿ ಪೂಜೆ ಮಾಡುವುದು ಹೇಗೆ?
ಮಹಾಶಿವ

ಶಿವಪುರಾಣದಲ್ಲಿ ಶಿವಾರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ…. ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ.

ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಫದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಬ್ರಮ್ಮನ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.

ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ.

ಮಹಾಶಿವರಾತ್ರಿ ಆರಂಭವಾಗಿದ್ದು ಹೇಗೆ ಶಿವರಾತ್ರಿ ಪೂಜೆ ಮಾಡುವುದು ಹೇಗೆ?
ಶಿವರಾತ್ರಿ ಪೂಜೆ

ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.

ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ… ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂಬುದು ಎಲ್ಲರ ಕೋರಿಕೆ.. ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಮಹಾ ಶಿವರಾತ್ರಿ, ರುದ್ರನ ಮಂಗಳಕರ ರಾತ್ರಿ
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ. ಇದು ಸ್ಕಂದ ಪುರಾಣ ಒಂದು ಭಾಗ.

ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಇನ್ನೊಂದು ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಫಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ.

೪ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ.. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು… ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಮಹಾಶಿವರಾತ್ರಿಯ ಉಪವಾಸ ಮತ್ತು ಜಾಗರಣೆಯ ಮಹತ್ವ

ಮಹಾಶಿವರಾತ್ರಿ ಆರಂಭವಾಗಿದ್ದು ಹೇಗೆ ಶಿವರಾತ್ರಿ ಪೂಜೆ ಮಾಡುವುದು ಹೇಗೆ?
ಜಾಗರಣೆಯ ಮಹತ್ವ

ಶಿವನನ್ನು ಪೂಜಿಸುವುದರಿಂದ ಕರುಣಾಮಯಿಯಾದ ಶಿವನು ಸರ್ವರನ್ನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ. ಬೇಡರ ಕಣ್ಣಪ್ಪನು ಶಿವನನ್ನು ಪೂಜಿಸಿದ್ದರಿಂದ ಅವನನ್ನು ಅನುಗ್ರಹಿಸಿ ಮುಕ್ತಿ ಮಾರ್ಗ ತೋರಿಸಿದನು.. ‘ ಸ್ಕಂದ ಪುರಾಣ ‘ದ ಪ್ರಕಾರ ಬೇಡ ಚಂದನನಿಗೂ ಶಿವನು ಅನುಗ್ರ ನೀಡಿದ್ದಾನೆ… ‘ ಗರುಡ ಮತ್ತು ಅಗ್ನಿ ಪುರಾಣ ‘ ಗಳಲ್ಲಿ ಉಲ್ಲೇಖವಿರುವಂತೆ, ಬೇಡ ಸುಂದರ ಸೇನನಿಗೂ ಶಿವನು ಆಶೀರ್ವಾದಿಸಿದ್ದಾನೆ.. ಹೀಗಾಗಿ ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ, ಬಿಲ್ವ ಪತ್ರೆಗಳನ್ನು ಅರ್ಪಿಸುವುದರಿಂದ ಎಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು.
ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ. ಭೂ-ಸಂಚಾರ ಮಾಡುತ್ತಾನೆ.. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ.

ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ.
ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ.

ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ.
ಮರುದಿನ ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇರುವುದು. ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು. ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು. ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ. ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು. ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು. ಇದಕ್ಕೆ ಒಂದು ರುದ್ರವೆಂದು ಕರೆಯುವರು. ಬೆಳಗ್ಗೆ, ಸಂಜೆ ಮತ್ತು ರಾತ್ರೆ ಹೀಗೆ ೨೪ ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ. ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಶ್ವಿನಿ ಮೇಡಂ ಅವರು ಅಪ್ಪು ಜೊತೆ ಫಾರಿನ್ ಪ್ರವಾಸ.

ಅಶ್ವಿನಿ ಮೇಡಂ ಅವರು ಅಪ್ಪು ಜೊತೆ ಫಾರಿನ್ ಪ್ರವಾಸ.

ಮಗನನ್ನು ಅಪ್ಪು ಎತ್ತಿಕೊಂಡಿರುವ ಫೋಟೋ ನೋಡಿ ಕಣ್ಣೀರಿಟ್ಟ ಮೇಘನರಾಜ್ ಹೇಳಿದ್ದೇನು ಗೊತ್ತಾ.

ಮಗನನ್ನು ಅಪ್ಪು ಎತ್ತಿಕೊಂಡಿರುವ ಫೋಟೋ ನೋಡಿ ಕಣ್ಣೀರಿಟ್ಟ ಮೇಘನರಾಜ್ ಹೇಳಿದ್ದೇನು ಗೊತ್ತಾ.