ಕರ್ನಾಟಕದ ಪ್ರಸಿದ್ಧ ದೇವಾಲಯಗಳು ಹಲವಾರು ಇವೆ. ಅವುಗಳಲ್ಲಿ ಅತೀ ಮುಖ್ಯವಾದ ಎರಡು ದೇವಾಲಯಗಳ ಕಿರುಪರಿಚಯ.
ದೇವರಾಯನ ದುರ್ಗ :
ಸಂರಂಕ್ಷಿತ ಕಾಡನ್ನು ಒಳಗೊಂಡ ಬೆಟ್ಟಗುಡ್ಡಗಳನ್ನು ಹೊಂದಿರುವ ಧಾರ್ಮಿಕ ಕ್ಷೇತ್ರ.
ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ, ಹಳೆಯ ಕೋಟೆ, ಸೂರ್ಯಾಸ್ತ ನೋಡಲು ಸುಂದರಾವಾದ ಜಾಗ ಕೂಡ ಇದೆ. ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ದೇವರಾಯನದುರ್ಗ ತುಮಕೂರಿನಿಂದ ೧೬ ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ ೧೦ ಕಿ.ಮೀ. ದಾಟಿದರೆ , ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ ೮ ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗೆಯೇ ಸಮೀಪದಲ್ಲಿ “ನಾಯಕನ ಕೆರೆ” ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ.
ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ.
ದುರ್ಗದ ಮೇಲೆ ಸರ್ಕಾರದ ಪ್ರವಾಸಿ ಬಂಗಲೆಗಳಿವೆ. ಜಿಲ್ಲೆಯ ಪೋಲಿಸ್ ನಿಸ್ತಂತು ಜಾಲದ ನಿಯಂತ್ರಣ ಕೇಂದ್ರವೂ ಸಹ ಇದೆ. ಬೆಟ್ಟದ ತುದಿಯಿಂದ ನಿಂತು ನೋಡಿದರೆ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಕಾಣುತ್ತದೆ. ಸುತ್ತಲೂ ಹತ್ತಾರು ಕೆರೆಗಳು ನೀರಿನಿಂದ ತುಂಬಿರುವುದೂ ಸಹ ಗೋಚರಿಸುತ್ತದೆ.
ಇಲ್ಲಿನ ನರಸಿಂಹ ದೇವರ ಜಾತ್ರೆಯು ಬಹಳ ಪ್ರಸಿದ್ದ. ಪ್ರತಿ ವರ್ಷವೂ ಇಲ್ಲಿ ನೆಡೆಯುವ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹತ್ತಿರದಲ್ಲಿರುವ ದುರ್ಗದ ಹಳ್ಳಿಯಲ್ಲಿರುವ ಶ್ರೀ ವಿದ್ಯಾಶಂಕರ ಸ್ವಾಮಿಯ ದೇವಾಲಯವೂ ಬಹಳ ಸುಂದರವಾಗಿದೆ. ಈ ದೇವಾಲಯವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ, ಇದು ದೇವರಾಯನ ದುರ್ಗಕ್ಕೆ ಹೋಗುವ ದಾರಿಯಲ್ಲಿರುವ ನಾಮದ ಚಿಲುಮೆಗೆ ಕೇವಲ ೩ ಕಿ.ಮೀ ದೂರದಲ್ಲಿದೆ.
ಮಲ್ಲಪಟ್ಟಣ ಎಂದೂ ಕರೆಸಿಕೊಂಡಿದ್ದ ದೇವರಾಯನ ದುರ್ಗದಲ್ಲಿ ಮೊದಲನೇ ಕಂಠೀರವ ನರಸರಾಜ ಒಡೆಯರು ದುರ್ಗಾನರಸಿಂಹ ದೇವಾಲಯ ಕಟ್ಟಿಸಿದ್ದಾರೆ. ಕುಂಬಿ ಬೆಟ್ಟಕ್ಕೆ ಹೋಗುವಾಗ ಮೈಸೂರು ಅರಸರ ಕಾಲದ ಕೋಟೆಯ ಪಳೆಯುಳಿಕೆಗಳು ಗೋಚರಿಸುತ್ತವೆ. ಬೆಟ್ಟದ ಮೇಲೆ ಇರುವ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಊರಿನ ಈಶಾನ್ಯ ದಿಕ್ಕಿನಲ್ಲಿರುವ ಕುಂಭಿಬೆಟ್ಟವಿದೆ. ಬೆಟ್ಟದ ಬಲಕ್ಕೆ ತಿರುಗಿದರೆ ಬಿಲ್ಲಿನ ದೋಣೆ, ಸೀತಾದೇವಿ ಕೊಳ ಹಾಗೂ ರಾಮಲಕ್ಷ್ಮಣರು ತಪವನ್ನಾಚರಿಸಿದ ಗುಹೆ ಇದೆ. ಈ ಗುಹೆಯಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ ಪಕ್ಕದಲ್ಲಿಯೇ ಬ್ರಿಟಿಷರ ಕಾಲದ ಬಂಗ್ಲೆ ಇರುವ ಬಂಗ್ಲೆ ಬೆಟ್ಟ ನೋಡಬಹುದು.
ಬ್ರಹ್ಮದೇವರು ಇಲ್ಲಿ ತಪವನ್ನಾಚರಿಸಿದಾಗ, ವಿಷ್ಣು ಲಕ್ಷ್ಮೀನರಸಿಂಹ ರೂಪದಲ್ಲಿ ಪ್ರತ್ಯಕ್ಷನಾದನಂತೆ, ವಿಷ್ಣುವಿಗೆ ಬ್ರಹ್ಮದೇವರು ಕುಂಭಾಭಿಷೇಕ ಮಾಡಿದರಂತೆ ಇಲ್ಲಿ ನೆಲೆನಿಂತ ವಿಷ್ಣು ಕುಂಬಿ ನರಸಿಂಹ ಎಂದೂ ಖ್ಯಾತನಾಗಿದ್ದಾನೆ. ಭಕ್ತರು ಯೋಗಾನರಸಿಂಹ, ಲಕ್ಷ್ಮೀನರಸಿಂಹ ಎಂದೂ ಪೂಜಿಸುತ್ತಾರೆ. ಇಲ್ಲಿರುವ ದೇವಾಲಯದಲ್ಲಿ ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಖಮಂಟಪವಿದೆ. ಇಲ್ಲಿ ನರಸಿಂಹತೀರ್ಥ, ಪಾದ ತೀರ್ಥ, ಪರಾಶರತೀರ್ಥ ಇದೆ. ದಾಸಶ್ರೇಷ್ಠ ಪುರಂದರದಾಸರು ಕ್ಷೇತ್ರಕ್ಕೆ ಭೇಟಿ ನೀಡಿ, ಕರಿಗಿರಿ ನರಸಿಂಹ ಭಕ್ತರ ದಂತಿಸಿಂಹ ಪರಿಪಾಲಿಸು ಮೊರೆಹೊಕ್ಕೆನು ನಾನು ವರದಪುರಂದರ ವಿಠಲ ಎಂದು ಹಾಡಿದ್ದಾರೆ.
ಸೋಮನಾಥಪುರದ ಶ್ರೀ ಚನ್ನಕೇಶವ ದೇವಾಲಯ :
ಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥ 1258ರ ಸುಮಾರಿನಲ್ಲಿ ನಿರ್ಮಿಸಿ, ತನ್ನ ಹೆಸರನ್ನೇ ಇಟ್ಟು ಸೋಮನಾಥಪುರವೆಂದು ಕರೆದ. ಪ್ರಶಾಂತವಾಗಿ ಕಾವೇರಿ ನದಿ ಹರಿಯುವ ಈ ಸ್ಥಳದಲ್ಲಿ ಹಲವು ದೇವಾಲಯ ಗಳನ್ನು ನಿರ್ಮಿಸಿದ ಎನ್ನುತ್ತದೆ ಇತಿಹಾಸ.
ಶ್ರೀ ಚನ್ನಕೇಶವ ದೇವಾಲಯವು ಕರ್ನಾಟಕದ ಸೋಮನಾಥಪುರ ಗ್ರಾಮದಲ್ಲಿ ಇದೆ. ಇದು ಕನ್ನಡದ ಮೇರು ದೊರೆಗಳಾದ ಹೊಯ್ಸಳರ ಕಾಲದ ಶಿಲ್ಪಕಲೆಯ ಬೀಡಾಗಿದೆ.೧೨೬೮ರಲ್ಲಿ ಹೊಯ್ಸಳ ದೊರೆ ಮೂರನೇ ನರಸಿಂಹ ಅವರಿಂದ ಕಟ್ಟಲ್ಪಟ್ಟಿತು. ಅದು ದಕ್ಷಿಣ ಭಾರತದಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜ್ರಂಭಣೆಯಿಂದ ನಡೆಯುತ್ತಿದ್ದ ಸಮಯವಾಗಿತ್ತು.
ಕಲಾಶ್ರೀಮಂತಿಕೆಯ ತಾಣ ಮೈಸೂರಿಗೆ 38 ಕಿ.ಮೀ. ದೂರದಲ್ಲಿರುವ ಸೋಮನಾಥಪುರ. ಪ್ರಶಾಂತ ಪರಿಸರದಲ್ಲಿರುವ ಈ ಶಿಲ್ಪಕಲಾವೈಭವದ ದೇಗುಲವನ್ನು ಪ್ರವೇಶಿಸಿದರೆ ಆಗುವ ಸಂತೋಷ ಅಪರಿಮಿತ. ಹಲ್ಲುಹಾಸಿನ ನಡುವೆ ಸಾಗಿ ನಾಲ್ಕು ಮೆಟ್ಟಿಲೇರುತ್ತಿದ್ದಂತೆಯೇ ಹೊಸದೊಂದು ಶಿಲ್ಪಕಲಾಲೋಕವೇ ತೆರೆದುಕೊಳ್ಳುತ್ತದೆ. ಜೀವಕಳೆಯಿಂದ ಕಂಗೊಳಿಸುತ್ತಿರುವ ಶಿಲ್ಪವೈಭವವನ್ನು ಕಂಡಾಗ ರೋಮಾಂಚನವಾಗುತ್ತದೆ. ಶಿಲ್ಪಿಯ ಜಾಣ್ಮೆ, ಚಾಕಚಕ್ಯತೆ ಕೌಶಲಕ್ಕೆ ಶಿರಬಾಗುತ್ತದೆ. 13ನೆಯ ಶತಮಾನದಲ್ಲಿ ಸೋಮನಾಥಪುರ ಒಂದು ಪುಟ್ಟ ಅಗ್ರಹಾರವಾಗಿತ್ತು. ಚತುರ್ವೇದಿಮಂಗಲ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಎಂಬುದು ಇದರ ಪೂರ್ವ ಹೆಸರು. ಇಲ್ಲಿರುವ 7 ಶಾಸನಗಳು ಈ ಅಪೂರ್ವ ದೇವಾಲಯದ ಬಗ್ಗೆ ಹಾಗೂ ಕಲೆಗೆ ಹಾಗೂ ವಿದ್ಯೆಗೆ ಆಗರವಾಗಿದ್ದ ಈ ಊರಿನ ಬಗ್ಗೆ ಮಹತ್ವದ ಮಾಹಿತಿ ಒದಗಿಸುತ್ತವೆ.
ವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾಗಿರುವ ಈ ದೇಗುಲ ಪೂರ್ವಾಭಿಮುಖವಾಗಿದ್ದು ಜಗತಿಯ ಸುತ್ತಲೂ ಇಡೀ ದೇವಾಲಯವನ್ನೇ ಆನೆಗಳು ಹೊತ್ತಿವೆಯೇನೋ ಎಂದು ಭಾಸವಾಗುವಂತೆ ಸುಂದರ ಗಜಶಿಲ್ಪಗಳನ್ನು ಕೆತ್ತಲಾಗಿದೆ. ದೇವಾಲಯದ ಆವರಣ ಭಿತ್ತಿಗಳ ಏಳಂಗುಲದ ಪಟ್ಟಿಕೆಗಳಲ್ಲಿ ರಾಮಾಯಣ, ಭಾಗವತ, ಮಹಾಭಾರತದ ಕಥೆಯನ್ನು ವರ್ಣಿಸುವ ಶಿಲ್ಪಗಳಿಂದ ತುಂಬಿದೆ. ಆನೆ, ಅಶ್ವಾರೋಹಿಗಳು, ಲತೆ, ಮಕರ, ಹಂಸಗಳಿವೆ. ಗರ್ಭಗುಡಿಯ ಸುತ್ತಲೂ ಹೊರಭಾಗದಲ್ಲಿ ನಾರಸಿಂಹ, ಮನ್ಮಥ, ಇಂದ್ರ, ಸರಸ್ವತಿ, ಮಹಿಷಾಸುರ ಮರ್ದಿನಿ ಮೊದಲಾದ ಸುಂದರವಾದ 194 ದೊಡ್ಡ ಶಿಲ್ಪಗಳಿವೆ. ಈ ವಿಗ್ರಹಗಳ ಪೀಠದ ಮೇಲೆ ಮಲ್ಲಿತಮ್ಮ, ಚೌಡಯ್ಯ, ಬಾಲಯ್ಯ, ಮಸಣಿತಮ್ಮ, ಲೋಹಿತ ಮೊದಲಾದ ಹೆಸರುಗಳಿದ್ದು, ಇವರೆ ಇವನ್ನು ಕೆತ್ತಿದ್ದು ಎಂದು ಸೂಚಿಸಲಾಗಿದೆ.
ಸೋಮನಾಥಪುರದ ದೇವಾಲಯದ ಸೌಂದರ್ಯಕ್ಕೆ ಶಿಖರಪ್ರಾಯವಾಗಿರುವುದು ಮೂರು ಶಿಖರಗಳೇ. ಹೀಗಾಗೇ ಇದನ್ನು ತ್ರಿಕುಟಾಚಲವೆನ್ನುತ್ತಾರೆ. ಹದಿನಾರು ಕೋಣಗಳ ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಶಿಖರಗಳು ದೇವಾಲಯ ರಮ್ಯತೆಯನ್ನು ನೂರ್ಮಡಿಗೊಳಿಸಿವೆ. ಎಲ್ಲ ಹೊಯ್ಸಳ ದೇವಾಲಯದಲ್ಲಿರುವಂತೆ ಮುಖಮಂಟಪ, ನವರಂಗ, ಗರ್ಭಗೃಹ, ಸುಖನಾಸಿಗಳು ಇಲ್ಲೂ ಇವೆ. ಮಧ್ಯದ ಭುನವೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಅದರ ಮೇಲೆ 32 ತೊಲೆಗಳಿಂದ ಮಾಡಿದ ಕಮಾನು, ಅದರ ಮಧ್ಯದಲ್ಲಿ ತೂಗಾಡುವ ರೀತಿಯ ಕಮಲದ ಮೊಗ್ಗು ಮನಮೋಹಕ. ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು, ಉತ್ತರ ಗರ್ಭಗೃಹದಲ್ಲಿ ಜನಾರ್ದನ ದಕ್ಷಿಣ ಗರ್ಭಗೃಹದಲ್ಲಿ ತ್ರಿಭಂಗಿಯಲ್ಲಿ ನಿಂತ ವೇಣುಗೋಪಾಲ ವಿಗ್ರಹ ಇದೆ. ಮಧ್ಯದ ಗರ್ಭಗೃಹದಲ್ಲಿ ಯಾವ ವಿಗ್ರಹವೂ ಇಲ್ಲ. ಹಿಂದೆ ಇಲ್ಲಿ ವಿಗ್ರಹ ಇತ್ತೆಂದು ಹೇಳಲಾಗುತ್ತದೆ. ಈ ಶಿಲ್ಪಕಲಾಮಯ ದೇಗುಲದ ಪ್ರಮುಖವಾದ ತಾಂಡವ ಗಣಪತಿಯ ಶಿಲ್ಪ ಗಮನಾರ್ಹವಾದುದು. ಕೇಶವ ದೇವಾಲಯಕ್ಕೆ ಈಶಾನ್ಯದಲ್ಲಿ ಪಂಚಲಿಂಗೇಶ್ವರ ದೇವಾಲಯವಿದೆ. ಹೊಯ್ಸಳ ದೇವಾಲಯಗಳಲ್ಲಿಯೇ ಇದೊಂದು ಅಪೂರ್ವ ಮಾದರಿ.
ಧನ್ಯವಾದಗಳು.
GIPHY App Key not set. Please check settings