ಸೌಗಂಧಿಕಾ ಪುಷ್ಪ – ಸುಗಂಧಿ ಪುಷ್ಪ, ಸುರುಳಿ ಸುಗಂಧಿ ಒಂದು ಪರಿಮಳ ಭರಿತವಾದ ಹೂವು. ಮಹಾಭಾರತದಲ್ಲಿ ಈ ಹೂವನ್ನು ಭೀಮನು ತನ್ನ ಪತ್ನಿಯಾದ ದ್ರೌಪದಿಗೆ ತಂದುಕೊಟ್ಟನೆಂಬ ಕಥೆ ಇದೆ.
ಸುಗಂಧಿ ಪುಷ್ಪ ತನ್ನದೇ ಆದ ವಿಶಿಷ್ಟ ಸುಗಂದವನ್ನು ಹೊಂದಿರುವ ಈ ಹೂವು ತನ್ನ ಪರಿಮಳದಿಂದ ಹಾಗೂ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಗಂಗಾನದಿಯ ಬಯಲಿನಲ್ಲಿ ಹಾಗೂ ಅಸ್ಸಾಂನ ಕಡೆ ಹೆಚ್ಚಾಗಿ ಕಾಣಸಿಗುವ ಇದನ್ನು ದಕ್ಷಿಣ ಭಾರತದ ಎಲ್ಲಾ ಕಡೆಗಳಲ್ಲಿಯೂ ಕಾಣಬಹುದು. ಕನ್ನಡದಲ್ಲಿ “ಸುಗಂದಿ ಹೂ” ಎನ್ನುವ ಇದಕ್ಕೆ ಸ್ತಳೀಯವಾಗಿ “ಸುರುಳಿ” ಹಾಗೂ ಸಂಸ್ಕೃತದಲ್ಲಿ “ಅನಂಥ”, ಗೋಪಕನ್ಯ, ಗೋಪಸುತ ಮುಂತಾದ ಹೆಸರುಗಳಿವೆ.
ನೀರಿನ ಆಸರೆ ಇರುವಲ್ಲಿ ಕೆರೆಯ ಬದಿಯಲ್ಲಿ ತಂಪಾದ ಜಾಗದಲ್ಲಿ ಸೊಂಪಾಗಿ ಬೆಳೆಯುವ ಇದು ನೋಡಲು ಅರಶಿನದ ಗಿಡವನ್ನೇ ಹೋಲುತ್ತದೆ. ಗೆಡ್ಡೆಯಿಂದ ಸಸ್ಯಾಭಿವೃದ್ಧಿಗೊಳಿಸಬಹುದಾದ ಈ ಸಸ್ಯದ ಬುಡದಲ್ಲಿ ಬಾಳೆ ಗಿಡದಂತೆ ಸಣ್ಣ ಸಣ್ಣ ಪಿಳ್ಳೆಗಳು ಹುಟ್ಟಿಕೊಂಡು ಗುಂಪು ಗುಂಪಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೂಬಿಡುವ ಈ ಸಸ್ಯವನ್ನು ಕುಂದಿಕೆಯಾಕಾರದ ಮೊತೆ ಬಂದು ಅದರಲ್ಲಿ ಸುಂದರ ಮೊಗ್ಗುಗಳನ್ನು ಕಾಣಬಹುದು.
ಸುರುಳಿ ಸುಗಂಧಿ ಕ್ಯೂಬ ದೇಶದ ರಾಷ್ಟ್ರೀಯ ಹೂವು. ಅಲ್ಲಿ ಈ ಹೂವನ್ನು ‘ಮರಿಪೊಸ’ ಅಂದರೆ ಚಿಟ್ಟೆ ಎಂದೂ ಕರೆಯಲಾಗುತ್ತದೆ, ಇದಕ್ಕೆ ಕಾರಣ ಅದರ ಆಕಾರ. ಸುರುಳಿ ಸುಗಂಧಿ ವರ್ಷಪೂರ್ತಿ ಹೂ ಬಿಡುವ ಗಿಡ. ಇದು ಮೂಲತಃ ನೇಪಾಳ ಮತ್ತು ಭಾರತದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತದೆ. ಇದನ್ನು ಮೊದಲು ಪರಿಚಯ ಮಾಡಿದ್ದು ಬ್ರೆಜಿಲ್ ದಾಸ್ಯ ಪದ್ಧತಿಯ ಕಾಲದಲ್ಲಿ, ಈ ಹೂವಿನ ಎಲೆಗಳನ್ನು ಹಾಸಿಗೆಯ ಹಾಗೆ ಬಳಸುತ್ತಿದ್ದರು ಮತ್ತು ಈಗ ಅದನ್ನು ಆಕ್ರಮಣಶೀಲ ಗಿಡವೆಂದೇ ಪರಿಗಣಿಸಲಾಗಿದೆ. ಸ್ಪ್ಯಾನಿಷ್ನ ವಸಾಹತು ಕಾಲದಲ್ಲಿ ಮಹಿಳೆಯರು ಈ ಹೂವನ್ನು ಮುಡಿದುಕೊಂಡು ತಮ್ಮನ್ನು ತಾವು ಸಿಂಗರಿಸಿಕೊಳ್ಳುತ್ತಿದ್ದರು. ಇದರ ಹೂಗೊಂಚಲಿನ ವಿಭಿನ್ನವಾದ ಸಂಕೀರ್ಣ ರಚನೆಯಿಂದ, ತಮ್ಮ ಸ್ವಾತಂತ್ರ್ಯಕ್ಕೆ ಕಾರಣವಾದ ಗುಪ್ತ ಮತ್ತು ಮಹತ್ವ ಸಂದೇಶಗಳನ್ನು ಮಹಿಳೆಯರು ಈ ಹೂವಿನಲ್ಲಿ ಅಡಗಿಸಿಕೊಂಡು ರವಾನಿಸುತ್ತಿದ್ದರು.
ಬೆಳಿಗ್ಗೆ ಕಂಡ ಮೊಗ್ಗುಗಳು ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತಿಗೆ ಮೆಲ್ಲನೆ ಅರಳಲು ಶುರುವಾಗಿ ಸಂಜೆ ಆಗುತಿದ್ದಂತೆ ಪೂರ್ತಿ ಅರಳಿ ತನ್ನ ಸುಗಂಧದಿಂದ ಎಲ್ಲರ ಗಮನ ಸೆಳೆಯುತ್ತದೆ. ಇವುಗಳಲ್ಲಿ ಹಲವಾರು ಬಣ್ಣಗಳಿವೆಯಾದರೂ ಸಾಮಾನ್ಯವಾಗಿ ಶುಭ್ರ ಬಿಳಿ, ಹಳದಿ, ಬಿಳಿ ಬಣ್ಣದ ಮಧ್ಯ ದಲ್ಲಿ ಹಳದಿ ನಾಮದ ಹೂವುಗಳನ್ನು ಕಾಣಬಹುದು. ಒಂದು ಮೋತೆಯಲ್ಲಿ ಹಲವಾರು ಮೊಗ್ಗುಗಳಿದ್ದು ಅವೆಲ್ಲ ಒಮ್ಮೆಲೇ ಅರಳುವಾಗ ನೋಡುವುದೇ ಕಣ್ಣಿಗೆ ಹಬ್ಬ.
ಈ ಹೂವಿನ ಗಿಡದ ಆಕಾರದ ಬಗ್ಗೆ ಹೇಳುವುದಾದರೆ, ಇದರ ಎಲೆಗಳು ಚೂಪಾಗಿ ಮತ್ತು ಭರ್ಜಿ ಆಕಾರದಿಂದ ಕೂಡಿದೆ. ಎಲೆಗಳ ಬಣ್ಣ ಹಸಿರು. ಉದ್ದ ಸುಮಾರು ೮ ರಿಂದ ೨೪ ಸೆ.ಮೀ ಮತ್ತು ೨ ರಿಂದ ೫ ಸೆ.ಮೀ ಅಗಲ. ಅದಲ್ಲದೆ ಎಲೆಗಳು ಎರಡು ಶ್ರೇಣಿಗಳಲ್ಲಿ ಜೊಡಿಸಲಾಗಿದೆ. ಹೂವಿನ ಬಣ್ಣ- ಬಿಳಿ/ಬಿಳುಪು. ಗಿಡದ ಎತ್ತರ- ೫೦ ರಿಂದ ೧೦೦ ಸೆ.ಮೀ. ಗಿಡದ ಸುತ್ತಳತೆ- ೫೦ ರಿಂದ ೧೦೦ ಸೆ.ಮೀ. ಅದಲ್ಲದೆ ಎಲೆಗಳು ಎರಡು ಶ್ರೇಣಿಗಳಲ್ಲಿ ಜೋಡಿಸಲಾಗಿದೆ. ಹೂ ಬಿಡುವ ಕಾಲ- ನಡುಬೇಸಿಗೆಯಿಂದ ಶರತ್ಕಾಲದವರೆಗೆ. ಈ ಹೂವುಗಳ ಅಳತೆ ೬ ರಿಂದ ೧೨ ಸೆ.ಮೀ. ಈ ಮೇಲೆ ವಿವರಿಸಿದ ಆಕಾರದಿಂದ ಸುರುಳಿ ಸುಗಂಧಿ ಹೂ ನೋಡಲು “ಚಿಟ್ಟೆ”ಯಂತೆ ಕಾಣುತ್ತದೆ. ಈ ಹೂವುಗಳು ಹೊಳೆಯುವ ಕೆಂಪು ಬಣ್ಣದ ಬೀಜಗಳನ್ನು ಕೊಡುತ್ತವೆ.ಈ ಹೂವು ಯುಗ್ಮರೂಪಿ, ಉಭಯಲಿಂಗ ಸ್ವರೂಪದ,ಮಕರಂದ ಭರಿತವಾದ ಮತ್ತು ರಾತ್ರಿಚಟುವಟಿಕೆಯನ್ನು ತೋರುವಂತಹದ್ದು. ಇವು ಸ್ವಯಂ ಹೊಂದಬಲ್ಲ ಜಾತಿಗಳು. ಈ ಹೂವು ಸಾಮಾನ್ಯವಾಗಿ ಸಂಜೆ ಹೊತ್ತು ಅರಳುತ್ತದೆ. ಹೂವಿನ ಜೀವಿತಾವಧಿ ಕೇವಲ ಒಂದು ದಿನ. ಈ ಸುನಾಸನೆಯುಕ್ತ ಗಿಡವು ಶುಂಠಿ ಸಸ್ಯವರ್ಗಕ್ಕೆ ಸೇರುತ್ತದೆ. ಈ ಗಿಡದ ರೆಂಬೆಗಳು ಗುಂಪಿನ ಆಕಾರದಲ್ಲಿರುತ್ತವೆ ಹಾಗೂ ಅವು ಮೇಲ್ಮುಖವಾಗಿ ಬೆಳೆಯುತ್ತದೆ. ಎಲೆಯ ಕಾಂಡ ೩-೪ ಅಡಿ ಉದ್ದವಿರುತ್ತದೆ ಹಾಗೂ ಹೂವುಗಳು ಈ ಕಾಂಡದ ಕೊನೆಯಿಂದ ಗೊಂಚಲಾಗಿ ಹುಟ್ಟುತ್ತದೆ.
ಇದನ್ನು ಬೆಳೆಯಲು ಬೇಕಾದ ಅವಶ್ಯಕ ಅಂಶಗಳು :
ಈ ಗಿಡಕ್ಕೆ ಆಳವಾದ ಫಲವತ್ತಾದ ಮಣ್ಣು ಅಗತ್ಯ.
ಹೂವು ಬಿಡುವ ಕಾಲದಲ್ಲಿ ವಾತಾವರಣವು ಶೀತಲ ಹಾಗೂ ತೇವಾಂಶದಿಂದ ಕೂಡಿರಬೇಕು.
ಏಪ್ರಿಲ್-ನವೆಂಬರ್ ವರೆಗೆ ನೀರಿನ ಅಗತ್ಯ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ ಈ ಗಿಡವನ್ನು ನೀರುತುಂಬಿದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ಹೂ ಬಿಟ್ಟ ತದನಂತರ, ಹೂವಿನ ಕಾಂಡವನ್ನು ಕತ್ತರಿಸಬೇಕು. ಇದರಿಂದ ಗಿಡದ ಬೆಳೆವಣಿಗೆ ವೃದ್ಧಿಯಾಗುತ್ತದೆ.
ಈ ಹೂವಿಗೆ ಭಾಗಶ:ಸೂರ್ಯನ ಬೆಳಕು ಸೂಕ್ತವಾದುದು.
ವಾರಕ್ಕೊಮ್ಮೆ ಈ ಗಿಡಕ್ಕೆ ಸಮತೂಕದ ಗೊಬ್ಬರವನ್ನು ಹಾಕಿ ಫಲವತ್ತಾಗಿರಿಸಬೇಕು.ಅಲ್ಲದೆ ಈ ಹೂವಿನ ಗಿಡವನ್ನು ವರ್ಷಕ್ಕೊಮ್ಮೆ ವಿಭಜಿಸಬೇಕು, ಕಾರಣ ಇದು ಬಹಳ ವೇಗವಾಗಿ ಬೆಳೆಯುವಂತಹದ್ದು.
ಈ ಹೂವು ಹೊಳೆಯುವ ಕೆಂಪು ಬೀಜಗಳನ್ನು ಕೊಡುತ್ತದೆ. ಬೀಜಗಳನ್ನು ೩ ರಿಂದ ೪ ವಾರದವರೆಗೆ ೭೦ ರಿಂದ ೭೫ ಡಿಗರಿ ಫ್ಯಾರನ್ಹೀಟ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕು ಹಾಗೂ ತೊಗಟೆ ಮೃದುವಾಗಲು ಬಿಸಿ ನೀರಿನಲ್ಲಿ ೨ ತಾಸು ನೆನೆಸಿ ಇಡಬೇಕು. ಅರ್ಧ ಇಂಚು ಮಿಶ್ರಗೊಬ್ಬರದಲ್ಲಿ ನೆಡಬೇಕು. ಗೊಬ್ಬರವನ್ನು ತೇವವಾದ, ಪ್ರಕಾಶವಾದ, ಅಚಲವಾದ ತಾಪಮಾನ ಅಂದರೆ ೬೮ ರಿಂದ ೭೭ ಡಿಗರಿ ಫ್ಯಾರನ್ಹೀಟ್ನಲ್ಲಿ ಇಡಬೇಕು. ಬೀಜಗಳು ೨ ರಿಂದ ೬ ವಾರದ ಒಳಗೆ ಮೊಳಕೆಯೊಡೆಯಬೇಕು.
ಭಾರತೀಯ ಔಷಧೀಯ ಸಸ್ಯ ಎಂದು ಕರೆಯುವ ಇದರ ಹೂವು ಹಾಗೂ ಬೇರನ್ನು ಆಯುರ್ವೇದದ ಹಲವಾರು ಚಿಕಿತ್ಸೆಗಳಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ. ಇದರ ಬೇರಿನ ಕಷಾಯವನ್ನು ಉರಿಮೂತ್ರ, ಕಟ್ಟುಮೂತ್ರದ ತೊಂದರೆಗಳ ಪರಿಹಾರಕ್ಕಾಗಿ, ರಕ್ತ ಶುದ್ಧಿಗಾಗಿ, ಜ್ವರ ಮತ್ತು ವಾಂತಿಯ ಶಮನಕ್ಕಾಗಿ ಹಾಗೂ ಆನೇಕಾಲು ರೋಗದ ಔಷಧಿಗಳಲ್ಲಿ ಉಪಯೋಗಿಸುವ ಉಲ್ಲೇಖವಿದೆ.
ಚರ್ಮದ ತುರಿಕೆಯ ಶಮನಕ್ಕಾಗಿ ಇದರ ಬೇರನ್ನು ನುಣ್ಣಗೆ ಅರೆದು ಹಚ್ಚುತ್ತಾರೆ. ವಿಪರೀತ ಜ್ವರದಿಂದ ಬಳಲುತ್ತಿರುವಾಗ ಜ್ವರ ತಗ್ಗಿಸಲು ಈ ಸಸ್ಯದ ಬೇರನ್ನು ಅರೆದು ಹಣೆಗೆ ಹಚ್ಚುತ್ತಾರೆ. ತಂಪು ಗುಣವನ್ನು ಹೊಂದಿರುವ ಇದರ ಹೂವನ್ನು ಉಷ್ಣದಿಂದ ಕಣ್ಣು ಉರಿಯುತ್ತಿದ್ದರೆ ಕಣ್ಣಿನ ಮೇಲೆ ಇಡಿಯಾಗಿ ಅಥವಾ ಅರೆದು ಇಡುತ್ತಾರೆ. ಇದರ ಬೇರಿನ ಕಷಾಯವನ್ನು ಹೆಂಗಸರ ಮುಟ್ಟಿನ ಸಮಯದ ಅಧಿಕ ಸ್ರಾವದ ಪರಿಹಾರಕ್ಕಾಗಿ ಹಾಗೂ ಚಿಕ್ಕ ಮಕ್ಕಳಿಗೆ ಭೇದಿ ಯಾದಾಗ ಇದರ ಬೇರನ್ನು ತಾಯಿಯ ಎದೆ ಹಾಲಿನ ಜೊತೆಗೆ ಅರೆದು ಕುಡಿಸುತ್ತಾರೆ. ಇದರ ಬೇರನ್ನು ಒಣಗಿಸಿ ಪುಡಿ ಮಾಡಿ ಕಫದ ಪರಿಹಾರಕ್ಕಾಗಿಯೂ ಔಷಧಿಯಾಗಿ ಉಪಯೋಗಿಸುತ್ತಾರೆ.
ಇದನ್ನು ಸಾಮಾನ್ಯವಾದ ನೆಗಡಿ, ಕೆಮ್ಮು ಹಾಗೂ ಗಾಯಗಳಿಗೆ ಉಪಾಯುಕ್ತವಾದುದು. ಈ ಗಿಡದ ಬೇರು ಕಾಂಡದಿಂದ ಉಪಯುಕ್ತ ಎಣ್ಣೆಯನ್ನು ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಸುಗಂಧ ದ್ರವ್ಯ ಹಾಗೂ ಔಷಧಗಳಲ್ಲಿ ಹೇರಳವಾಗಿ ಬಳಸಲಾಗುತ್ತದೆ.
ತಲೆನೋವು ಹಾಗೂ ಉರಿಯೂತದಿಂದ ಉಂಟಾಗುವ ನೋವನ್ನು ನಿವಾರಿಸಲು ಉಪಯೋಗಿಸಲಾಗುತ್ತದೆ.
ಈ ಗಿಡದ ಬೇರುಗಳನ್ನು ಕ್ಷಾಮ ಆಹಾರವಾಗಿ ಸೇವಿಸಲಾಗುತ್ತದೆ.
ಗಲೋದ್ರೇಕ, ಸಕ್ಕರೆ ಕಾಯಿಲೆಗಳನ್ನು ನಿವಾರಿಸಲು ಬಳಸಲಾಗುತ್ತದೆ.
ಇದರ ಬೇರುಕಾಂಡವನ್ನು ಜ್ವರ ಶಾಮಕವಾಗಿ ಉಪಯೋಗಿಸಲಾಗುತ್ತದೆ.
ಭಾರತದಲ್ಲಿ ಇದರ ಸಾರವನ್ನು(ಗುಲ್ಬಕವಾಲಿ ಆರ್ಕ್) ಕಣ್ಣಿನ ಬಲವರ್ಧಕವಾಗಿ – ಕಣ್ಣಿನ ಪೊರೆಯನ್ನು ನಿವಾರಿಸಲು ಬಳಸಲಾಗುತ್ತದೆ.
ಇದನ್ನು ಉದ್ರೇಕಕಾರಿಯಾಗಿ ಬಳಸಲಾಗುತ್ತದೆ .
ಬೇಯಿಸಿದ ಎಲೆಗಳನ್ನು ನೋಯುತ್ತಿರುವ ಕೀಲುಗಳಿಗೆ (ಸಂಧಿವಾತ) ಹಚ್ಚಲಾಗುತ್ತದೆ.
ಅದಲ್ಲದೆ ಇದನ್ನು ಉತ್ಕರ್ಷಣ ನಿರೋಧಕವಾಗಿಯೂ ಬಳಸುತ್ತಾರೆ.
ಈ ಗಿಡದ ಸಾರವು ಆಂಟಿಮೈಕ್ರೊಬಿಯಲ್ ಚಟುವಟಿಕೆಯನ್ನು ಎಲ್ಲ ರೀತಿಯ ಆಹಾರ ಸೂಕ್ಷ್ಮಜೀವಿಗಳ ವಿರುದ್ಧ ಹಾಜರಿಪಡಿಸುತ್ತದೆ.
ಇದರ ಎಣ್ಣೆಯನ್ನು ಪರ್ಯಾಯವಾಗಿ ಪೂರಕ ರಕ್ತಸಾರ ಚಿಕಿತ್ಸೆಗೆ ಬಳಸಲಾಗುತ್ತದೆ.
ಈ ಹೂವಿನ ಸಾರವು ಅನುಕೂಲಕರವಾದ ಗುರುತು ಶಾಯಿಯಾಗಿ ಉಪಯೋಗಿಸುತ್ತಾರೆ.
ಹೀಗೆ ಔಷಧಿಯಾಗಿ ಹಲವು ಉಪಯೋಗವಿರುವ ಈ ಸಸ್ಯದ ಹೂವುಗಳನ್ನು ದೇವಿ ಪೂಜೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರ ಸುವಾಸನೆಗೆ ಹಾಗೂ ಸೌಂದರ್ಯಕ್ಕೆ ಮಾರು ಹೋಗಿ ಎಷ್ಟೋ ಹೆಂಗಳೆಯರು ಇದನ್ನು ಇಷ್ಟಪಟ್ಟು ತಮ್ಮ ಮುಡಿಗೂ ಏರಿಸುತ್ತಾರೆ. ಹೆಚ್ಚು ಆರೈಕೆಯನ್ನು ಬೇಡದ ಇದನ್ನು ನಮ್ಮ ಹಿತ್ತಲಲ್ಲಿ, ತೋಟದಲ್ಲಿ, ಆವರಣ ಗೋಡೆಯ ಪಕ್ಕದಲ್ಲಿ, ತಂಪು ಇರುವ ಕಡೆ, ನೀರಿನ ಆಸರೆ ಇರುವಲ್ಲಿ ಹಾಗೂ ಕೆರೆಯ ಬದಿಗಳಲ್ಲಿ ಬಹಳ ಸುಲಭವಾಗಿ ಬೆಳೆಸಬಹುದು. ಇದರ ಗಿಡವನ್ನು ಹೂ ತೋಟದ ಯಜಮಾನರಲ್ಲಿ ಕೇಳದೆ ಕದ್ದು ತರಬೇಕು ಎಂಬುದು ತುಳುನಾಡಿನಲ್ಲಿರುವ ವಿಶೇಷ ನಂಬಿಕೆ.
ಈ ಹೂವು ಪರಿಸರದ ಮೇಲೆ ಬಲವಾದ ಪರಿಣಾಮ ಬೀರುತ್ತದೆ. ಅವು ಯಾವುವೆಂದರೆ – ಸುರುಳಿ ಸುಗಂಧಿಯು ತೇವವಾದ ಪ್ರದೇಶಗಳಲ್ಲಿ ವ್ಯಾಪಕವಾದ ಕುರುಚಲು ಗಿಡಗಳಾಗಿ ಬೆಳೆದು ಅಲ್ಲಿನ ಸ್ಥಳೀಯ ಪಂಗಡದ ಪುನರುತ್ಪಾದನೆಯನ್ನು ದಮನಮಾಡುತ್ತದೆ. ಅದಲ್ಲದೆ ಇದು ಬಾಳೆಹಣ್ಣು ಮತ್ತು ಕೊಕೊವ ಗಿಡಗಳಿಗೆ ಕಳೆಯಾಗಿ ತಲೆಯೆತ್ತುತ್ತದೆ. ಈ ಹೂವನ್ನು ದಕ್ಷಿಣ ಆಫ಼್ರೀಕಾದಲ್ಲಿನ ಹಾನಿಕಾರಕ ಕಳೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇದು ಮಹಾಭಾರತದ ಅರಣ್ಯ ಪರ್ವದಲ್ಲಿ ಬರುವ ಒಂದು ಪ್ರಸಂಗ. ಗಾಳಿಯಲ್ಲಿ ತೇಲಿ ಬಂದ ಸೌಗಂಧಿಕಾ ಪುಷ್ಪದ ಪರಿಮಳಕ್ಕೆ ಮನಸೋತು ದ್ರೌಪದಿ ಅದನ್ನು ತಂದುಕೊಡುವಂತೆ ಭೀಮನನ್ನು ಕೇಳುತ್ತಾಳೆ. ಆಗ ಭೀಮ ಹೂವನ್ನು ತರಲು ಹೋದಾಗ ದಾರಿಯಲ್ಲಿ ಒಂದು ವಯಸ್ಸಾದ ಕಪಿಯು ಮಲಗಿರುತ್ತದೆ. ಅದರ ಬಾಲವನ್ನು ದಾಟದೆ, ಬಾಲವನ್ನು ತೆಗೆದು ದಾರಿಬಿಡುವಂತೆ ಕೇಳಿಕೊಳ್ಳುತ್ತಾನೆ. ಆಗ ಭೀಮ ಬಾಲವನ್ನು ಎತ್ತಲು ಪ್ರಯತ್ನಿಸುತ್ತಾನೆ. ಭೀಮ ಬಹಳ ಪ್ರಯತ್ನಿಸಿದರೂ ಬಾಲವನ್ನು ಸ್ವಲ್ಪವೂ ಸರಿಸಲು ಸಾಧ್ಯವಾಗುವುದಿಲ್ಲ. ಅದು ಭೀಮನಂತಹ ಶಕ್ತಿಶಾಲಿಗೂ ಅಲುಗಾಡಿಸಲಾಗದಷ್ಟು ಭಾರವಾಗಿರುತ್ತದೆ. ಆಗ ಭೀಮನಿಗೆ ತಾನು ಮಹಾನ್ ಶಕ್ತಿವಂತನೆಂಬ ಇದ್ದ ಗರ್ವ ಭಂಗವಾಗುತ್ತದೆ. ಹೀಗೆ ಸೋತ ಭೀಮನಿಗೆ ತಾನು ಯಾರೆಂದು ಕಪಿಯು ತಿಳಿಸುತ್ತದೆ. ಆ ಕಪಿಯೇ ತ್ರೇತಾಯುಗದಲ್ಲಿ ರಾಮನ ಬಂಟನಾಗಿದ್ದ ಹನುಮಂತನೆಂದು ಭೀಮನಿಗೆ ತಿಳಿದು ಬರುತ್ತದೆ.
ಧನ್ಯವಾದಗಳು.
GIPHY App Key not set. Please check settings