ಡಾ. ಸರ್ವಪಲ್ಲಿ ರಾಧಾೃಷ್ಣನ್ ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಅವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ (೧೯೦೫-೧೯೦೬) ಶಿಕ್ಷಣ ಪಡೆದಿದ್ದರು. ಶಿಕ್ಷಕರಾಗಿದ್ದ ‘ಡಾ. ಸರ್ವಪಲ್ಲಿ ರಾಧಾಕೃಷ್ಣನ್’ ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು. ಇವರು ಒಬ್ಬ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು.
ಡಾ. ಸರ್ವಪಲ್ಲಿ ರಾಧಾೃಷ್ಣನ್ ‘ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ‘ತಿರುತ್ತಣಿ’ ಎಂಬಲ್ಲಿ ಸೆಪ್ಟೆಂಬರ್ ೫, ೧೮೮೮ ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ‘ರಾಧಾಕೃಷ್ಣನ್’ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.
ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ರೆವಿನ್ಯೂ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು.
‘ಸ್ಕಾಲರ್‌ಶಿಪ್ ಹಣ’ ದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್ ನಲ್ಲಿ ‘ತತ್ವಜ್ಞಾನ’ ವಿಷಯದ ಮೇಲೆ ‘ಬಿ.ಎ’ ಮತ್ತು ‘ಎಂ.ಎ. ಪದವಿ’ಗಳನ್ನು ಪಡೆದು ಕೊಂಡರು. ‘ಸ್ನಾತಕೋತ್ತರ ಪದವಿ’ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ ‘ದಿ ಎಥಿಕ್ಸ್ ಆಫ್ ವೇದಾಂತ’ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ ೨೦ ವರ್ಷದ ಬಾಲಕನ ತಲೆಯಲ್ಲಿದ್ದ ‘ಹಲವು ಬಗೆಯ ಸಿದ್ಧಾಂತಗಳು’, ‘ವೇದಾಂತ ವಿಚಾರಗಳು’ ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.

ವೆಲ್ಲೂರಿನಲ್ಲಿರುವಾಗಲೇ ಕೇವಲ ೧೬ ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, ೧೯೦೯ ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆ ಯನ್ನಾರಂಭಿಸಿದರು.
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು.
ರಾಧಾಕೃಷ್ಣನ್ 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್’ ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು “ರಾಧಾಕ್ರಿಶ್ಣಯ್ಯ”ಎಂದು ಹಾಕುತಿದ್ದರು. ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.
ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ ‘ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್’ ಮತ್ತು ‘ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ’ ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ‘ಧರ್ಮ ಮತ್ತು ನೀತಿಶಾಸ್ತ್ರ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು.
ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.

ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು.ಸೆಪ್ಟೆಂಬರ್ 5, 1888 ರಂದು ಜನಿಸಿದ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ತಮ್ಮ ‘ರಾಷ್ಟ್ರಪತಿ ಹುದ್ದೆ’ಯ ಅಧಿಕಾರಾವಧಿ ಮುಗಿದ ನಂತರ ೧೯೬೭ ರಲ್ಲಿ ತಮ್ಮ ‘ನಿವೃತ್ತಿ ಜೀವನ’ವನ್ನು ಮದ್ರಾಸಿನ ‘ಮೈಲಾಪುರ’ದಲ್ಲಿರುವ ತಮ್ಮ ಅಧಿಕೃತ ನಿವಾಸ ‘ಗಿರಿಜಾ’ದಲ್ಲಿ ಕಳೆದ ರಾಧಾಕೃಷ್ಣನ್, ೧೯೭೫ ರ ಏಪ್ರಿಲ್ ೧೭ ರಂದು ಇಹಲೋಕ ತ್ಯಜಿಸಿದರು.
ಲಂಡನ್‌ನಲ್ಲಿ ಡಾ. ರಾಧಾಕೃಷ್ಣನ್ ಉಪನ್ಯಾಸಗಳನ್ನು ಕೇಳಿದ ಎಚ್.ಎನ್. ಸ್ಪಾಲ್ಡಿಂಗ್ ಅವರು ತಮ್ಮ ವಿಷಯ ಮತ್ತು ಅವರ ವ್ಯಕ್ತಿತ್ವದಿಂದ ಆಕರ್ಷಿತರಾದರು, ಮತ್ತು ರಾಧಾಕೃಷ್ಣನ್ ಅವರು ತಮ್ಮ ವಾಕ್‌ಚಾತುರ್ಯದಿಂದ ಆಕ್ಸ್‌ಪರ್ಡ್‌ನಲ್ಲಿ ಉತ್ತಮ ಹುದ್ದೆಯನ್ನು ಅಲಂಕರಿಸಿದ್ದರು. ಈ ಹುದ್ದೆಯನ್ನು 1936 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದನ್ನು ರಾಧಾಕೃಷ್ಣನ್ ಅವರಿಗೆ ಅರ್ಪಿಸಲಾಯಿತು.
ಆಂಧ್ರ ಯೂನಿವರ್ಸಿಟಿಯಲ್ಲಿ ಅವರು ವೈಸ್ ಚಾನ್ಸಲರ್ ಹುದ್ದೆಯನ್ನು ಅಲಂಕರಿಸಿದ್ದರು (1931-1936) ಮತ್ತು ಬನಾರಸ್ ಯೂನಿವರ್ಸಿಟಿಯಲ್ಲಿ ಕೂಡ ಅದೇ ಪದವಿಯನ್ನು ಅಲಂಕರಿಸಿದ್ದರು (1939-1948).
ದೆಹಲಿ ಯೂನಿವರ್ಸಿಟಿಯಲ್ಲಿ ಕೂಡ ಅವರು ಚಾನ್ಸಲರ್ ಆಗಿ ಕಾರ್ಯನಿರ್ವಹಿಸಿದ್ದರು (1953-1962).
ಅವರು ಉಪಾಧ್ಯಕ್ಷರಾಗಿದ್ದಾಗ ರಾಧಾಕೃಷ್ಣನ್ ರಾಜ್ಯಸಭೆ (ಮೇಲ್ಮನೆ) ಅಧಿವೇಶನಗಳ ಅಧ್ಯಕ್ಷತೆ ವಹಿಸಬೇಕಾಯಿತು. ಆಗಾಗ್ಗೆ, ಬಿಸಿಯಾದ ಚರ್ಚೆಯ ಸಮಯದಲ್ಲಿ, ರಾಧಾಕೃಷ್ಣನ್ ಅವರು ಸಂಸ್ಕೃತ ಶ್ಲೋಕಗಳಿಂದ ಸಭಾಸದರನ್ನು ಶಾಂತಗೊಳಿಸುತ್ತಿದ್ದರು.
ಧನ್ಯವಾದಗಳು.
GIPHY App Key not set. Please check settings