in

ವರಗಳನ್ನು ಕೊಡುವ ವರಮಹಾಲಕ್ಷ್ಮೀ ವ್ರತ

ವರಮಹಾಲಕ್ಷ್ಮೀ ವ್ರತ
ವರಮಹಾಲಕ್ಷ್ಮೀ ವ್ರತ

ಅಧಿಕೃತ ಹೆಸರು ಆಚರಿಸಲಾಗುತ್ತದೆ ರೀತಿ ಮಹತ್ವ ಆವರ್ತನ ಶ್ರಾವಣಮಾಸದ ಪ್ರಸಿದ್ಧಹಿಂದೂಪರ್ವ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ವ್ರತವೂ ಒಂದು.

ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ. ಒಮ್ಮೆ ದುರ್ವಾಸಮಹರ್ಷಿಗಳ ಶಾಪದಿಂದ ಇಂದ್ರನು ರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು. ಆಗ ಪರಮದುಃಖಾಕ್ರಾಂತರಾದ ದೇವತೆಗಳೆಲ್ಲರೂ ಚತುರ್ಮುಖಬ್ರಹ್ಮನನ್ನು ಮುಂದಿಟ್ಟುಕೊಂಡು, ವೈಕುಂಠದಲ್ಲಿ ಪರಮಾತ್ಮನನ್ನು ಶರಣುಹೊಂದಿದರು. ಪರಮದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು, ಮಹೇಂದ್ರನ ಸಂಪತ್ಸ್ವರೂಪಿಣಿಯಾದ ಮಹಾಲಕ್ಷ್ಮಿಯು ಅಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುವಿನ ಪಾಣಿಗ್ರಹಣ ಮಾಡಿದಳು ಅಂದರೆ ವಿವಾಹವಾದಳು.

ನಿತ್ಯ ಶುದ್ಧ-ಬುದ್ಧ-ಮುಕ್ತಸ್ವರೂಪಳೂ, ನಿತ್ಯಸಿದ್ಧಳೂ ಆದ ಈ ಮಂಗಲದೇವತೆಯ ಮಹಿಮೆಯನ್ನು ವರ್ಣಿಸುವ ಶಾಸ್ತ್ರಗಳಲ್ಲೇ ಆಕೆಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಯಜ್ಞಕುಂಡದಲ್ಲಿ ಉದ್ಭವವಾದವಳು, ಕಮಲದಲ್ಲಿ ಆವಿರ್ಭವಿಸಿದವಳು-ಇತ್ಯಾದಿ ಅಭಿಪ್ರಾಯಗಳನ್ನು ಕಾಣುತ್ತೇವೆ.

ನಿಜಶ್ರಾವಣ ಶುಕ್ಲಪೂರ್ಣಿಮೆ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ, ಅಥವಾ ಶುಕ್ಲಪೂರ್ಣಿಮೆಯ ಅತಿಹತ್ತಿರದ ಶುಕ್ರವಾರದಂದು, ವರಲಕ್ಷ್ಮೀ ಆರಾಧನೆ ಮಾಡಬೇಕು ಎಂಬ ಶಾಸ್ತ್ರವಿಧಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು ನವರಾತ್ರಿಯ ಶುಕ್ರವಾರದಂದು ಮಾಡಬಹುದು.

ವ್ರತ ಆಚರಿಸುವ ವಿಧಾನ

ಶುಕ್ರವಾರದ ದಿನ, ಸಾಯಂಕಾಲದವರೆವಿಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸುವರು. ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ,ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸುವರು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ.

ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಲಾಗುತ್ತದೆ. ಈ ಪೂಜೆಯಲ್ಲಿ ವಿಶೇಷವಾದ ದಾರಗಳಿಗೆ ಪೂಜೆಯನ್ನು ಸಲ್ಲಿಸುವರು. ಈ ದಾರವನ್ನು ದೋರವೆಂದು ಕರೆವರು. ಹೊಸದಾದ ೧೨ ದಾರಗಳಿಗೆ ೧೨ ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವರು.

ವರಗಳನ್ನು ಕೊಡುವ ವರಮಹಾಲಕ್ಷ್ಮೀ ವ್ರತ
ವ್ರತ ಆಚರಿಸುವ ವಿಧಾನ

ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವರು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶನಾಮಾವಳಿಯೆಂದು ಪೂಜಿಸುವರು. ಆ ನಾಮಾವಳಿಗಳು ಹೀಗಿವೆ -ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ. ಈ ದಾರಕ್ಕಾಗಿ ವಿಶೇಷವಾದ ನೈವೇದ್ಯವಾದ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀಸೂಕ್ತವನ್ನು ಪಠಿಸುವುದೂ ಒಳ್ಳೆಯದು.

ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ, ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಕೊಡುವರು.

ಭಾರತದ ದಕ್ಷಿಣದ ಭಾಗಗಳಲ್ಲಿ ಹೆಚ್ಚು ವಿಜೃಂಭಣೆಯಿಂದ ನಡೆಸುವ ವರಮಹಾಲಕ್ಷ್ಮಿ ಪೂಜೆಯನ್ನು ಉತ್ತರದ ಭಾಗಗಳಲ್ಲಿ ಮಹಾಲಕ್ಷ್ಮಿ ವ್ರತದ ಮೂಲಕ ಆಚರಿಸುತ್ತಾರೆ. ಎರಡೂ ಭಾಗಗಳಲ್ಲೂ ಒಂದೇ ದೇವರಾದ ಲಕ್ಷ್ಮಿಯನ್ನು ಕುಟುಂಬದ ಅಭ್ಯುದಯ ಮತ್ತು ಪ್ರಗತಿಗಾಗಿ ಪೂಜಿಸಲಾಗುತ್ತದೆ.

ಇಲ್ಲಿ ವರ ಎಂದರೆ ದೇವರ ಕೃಪಾಕಟಾಕ್ಷವಾಗಿದೆ. ಅಂದರೆ ವರವನ್ನು ನೀಡುವ ದೇವರು ವರಮಹಾಲಕ್ಷ್ಮಿಯಾಗಿದ್ದಾರೆ ಎಂಬುದು ನಂಬಿಕೆಯಾಗಿದೆ. ವರಮಹಾಲಕ್ಷ್ಮಿ ವ್ರತವನ್ನು ವಿವಾಹವಾದ ಮುತ್ತೈದೆಯರು ಕೈಗೊಳ್ಳುತ್ತಾರೆ. ವರಮಹಾಲಕ್ಷ್ಮಿ ವ್ರತವನ್ನು ಮಾಡುವುದು ಅಷ್ಟಲಕ್ಷ್ಮಿಯರ (ಎಂಟು ಲಕ್ಷ್ಮಿಯರು) ವ್ರತಕ್ಕೆ ಸಮನಾದುದು ಎಂಬುದು ಹಿಂದಿನಿಂದಲೂ ಬಂದ ನಂಬಿಕೆ.

ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಮತ್ತು ಶಕ್ತಿಯ ಎಂಟು ದೇವತೆಗಳನ್ನು ಪೂಜಿಸಿದ ಮಹತ್ವ ಪುಣ್ಯ ವರಮಹಾಲಕ್ಷ್ಮಿ ದೇವರನ್ನು ಪೂಜಿಸುವುದರಲ್ಲಿದೆ ಎಂದು ಹೇಳುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನಕ್ಕಿಂತ ಮೊದಲು ಶುಕ್ರವಾರದಂದು ಈ ವ್ರತವನ್ನು ಕೈಗೊಳ್ಳಲಾಗುತ್ತದೆ. 2021ನೇ ಸಾಲಿನಲ್ಲಿ ವರಮಹಾಲಕ್ಷ್ಮಿ ವ್ರತ ಆಗಸ್ಟ್ 20ರಂದು ಆಚರಿಸಲಾಗುತ್ತಿದೆ.

ವಿವಾಹವಾದ ಮಹಿಳೆಯರು ಹೆಚ್ಚು ಶ್ರದ್ಧೆ ಭಕ್ತಿಯಿಂದ ಈ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲೇ ಸ್ನಾನವನ್ನು ಮುಗಿಸಿ ದಿನದ ಅರ್ಧ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ. ಕುಟುಂಬ ಶಾಂತಿ ಸಮಾಧಾನಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಾರೆ. ಅಷ್ಟ ಲಕ್ಷ್ಮಿಯರ ಪೂಜೆಯನ್ನು ಮಾಡಿದಂತಹ ಪುಣ್ಯ ವರಮಹಾಲಕ್ಷ್ಮಿ ವ್ರತದಲ್ಲಿ ದೊರೆಯುವುದರಿಂದ ಶ್ರದ್ಧೆ ಭಕ್ತಿ ಪೂಜಿಸುವಾಗ ಇರಲೇಬೇಕು.

ವರಗಳನ್ನು ಕೊಡುವ ವರಮಹಾಲಕ್ಷ್ಮೀ ವ್ರತ
ವರಮಹಾಲಕ್ಷ್ಮೀ ವ್ರತ

ಪುರಾಣದ ಕಥೆಯಂತೆ ಸರ್ಮಾದಿ ಎಂಬ ಮಹಿಳೆಯ ಕನಸಿನಲ್ಲಿ ಲಕ್ಷ್ಮೀ ದೇವರು ಕಾಣಿಸಿಕೊಂಡು ನಿನ್ನ ಭಕ್ತಿಗೆ ನಾನು ಸಂಪ್ರೀತರಾಗಿದ್ದು ನನ್ನನು ಪೂಜಿಸುವಂತೆ ಹೇಳಿ ಅಪ್ರತ್ಯಕ್ಷಗೊಳ್ಳುತ್ತಾರೆ. ಕನಸಿನಲ್ಲಿ ದೇವರು ಹೇಳಿದಂತೆಯೇ ಸರ್ಮಾದಿಯು ಪ್ರಾತಃ ಕಾಲದಲ್ಲೇ ಎದ್ದು ಸ್ನಾನಾದಿಗಳನ್ನು ಪೂರೈಸಿ ದೇವರ ವ್ರತವನ್ನು ಮಾಡುತ್ತಾಳೆ. ಇದರಿಂದ ಆಕೆಗೆ ಶ್ರೀಮಂತಿಕೆ, ಸಮಾಧಾನ ಪ್ರಾಪ್ತವಾಗಿ ಆಕೆ ನೆಮ್ಮದಿಯ ಜೀವನ ನಡೆಸುತ್ತಾಳೆ. ಇದನ್ನು ಕೇಳಿದ ಹಳ್ಳಿಯ ಇನ್ನೊಬ್ಬ ಮಹಿಳೆ ಕೂಡ ವ್ರತವನ್ನು ಕೈಗೊಳ್ಳುತ್ತಾಳೆ, ಹೀಗೆ ವರಲಕ್ಷ್ಮೀ ವ್ರತಾಚರಣೆ ಪ್ರವರ್ಧಮಾನಕ್ಕೆ ಬಂದಿತು ಎಂಬುದು ಪ್ರತೀತಿ.

ಈ ಪೂಜೆಯನ್ನು ಸಾಮಾನ್ಯವಾಗಿ ಮಹಿಳೆಯರು ನಿರ್ವಹಿಸುತ್ತಾರೆ. ಆದ್ದರಿಂದ ಅವರು ಮುಂಜಾನೆಯೇ ಎದ್ದು, ಸ್ನಾನವನ್ನು ಪೂರ್ಣಗೊಳಿಸುತ್ತಾರೆ. ಸಾಂಪ್ರದಾಯಿಕವಾಗಿ ಅವರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನವನ್ನು ಮುಗಿಸಿ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ.

ಪೂಜಾ ಸ್ಥಳವನ್ನು ಶುದ್ಧಗೊಳಿಸಿದ ನಂತರ ಪೂಜಾ ಸ್ಥಳದಲ್ಲಿ ಸುಂದರವಾದ ರಂಗೋಲಿಯನ್ನು ಬಿಡಿಸುತ್ತಾರೆ. ಮನೆಯ ಮಧ್ಯಭಾಗಕ್ಕೆ ಸರಿಹೊಂದುವಂತೆ ರಂಗೋಲಿ ಇರಬೇಕು. ಇದು ಅದೃಷ್ಟವನ್ನು ತರುವ ಧನಲಕ್ಷ್ಮಿಗೆ ಸ್ವಾಗತವನ್ನು ಕೋರುವ ರೀತಿಯಾಗಿದೆ.

ಕಲಶವನ್ನು ಬೆಳ್ಳಿ ಅಥವಾ ಹಿತ್ತಾಳೆಯಿಂದ ತಯಾರಿಸಲಾಗುತ್ತದೆ. ಗಂಧದಿಂದ ಸ್ವಸ್ತಿಕ ಚಿಹ್ನೆಯನ್ನು ಕಲಶದ ಮೇಲೆ ಬರೆಯಲಾಗುತ್ತದೆ. ಅಕ್ಕಿ, ನೀರು, ನಾಣ್ಯ, ಪೂರ್ಣ ಲಿಂಬೆ, ಐದು ಪ್ರಕಾರದ ಎಲೆಗಳು, ಅಡಿಕೆಯನ್ನು ಕಲಶದಲ್ಲಿ ಇರಿಸುತ್ತಾರೆ. ಕೆಲವರು ಅರಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಳೆಗಳು ಕಪ್ಪು ಮಣಿಗಳನ್ನು ಇರಿಸುತ್ತಾರೆ. ನಂತರ ಅರಶಿನದ ಮಿಶ್ರಣವನ್ನು ತೆಂಗಿನ ಕಾಯಿಗೆ ಹಚ್ಚಿ ಕಲಶದ ಬಾಯಿಗೆ ಇರಿಸಲಾಗುತ್ತದೆ. ಎಲೆಯಿಂದ ಆವೃತವಾದ ಕುಂಭದ ಬಾಯಿಗೆ ತೆಂಗಿನಕಾಯಿಯನ್ನು ಇರಿಸುವುದು ವಾಡಿಕೆ. ನಂತರ ಇದರ ಮೇಲೆ ಲಕ್ಷ್ಮೀ ದೇವರ ಫೋಟೋವನ್ನಿಟ್ಟು ಪೂಜಿಸಲಾಗುತ್ತದೆ.

ಗಣೇಶನ ನಾಮವನ್ನು ಪ್ರಾರಂಭಿಸುವುದರೊಂದಿಗೆ ಪೂಜೆಯನ್ನು ಆರಂಭಿಸಲಾಗುತ್ತದೆ. ನಂತರ ಲಕ್ಷ್ಮಿ ಸ್ತ್ರೋತ್ರವನ್ನು ಪಠಿಸಲಾಗುತ್ತದೆ. ನಂತರ ದೇವಿಗೆ ಆರತಿಯನ್ನು ಬೆಳಗಿ ಪ್ರಸಾದವನ್ನು ಅರ್ಪಿಸಲಾಗುತ್ತದೆ. ಕೆಲವು ಮಹಿಳೆಯರು ದೇವಿಯ ಪ್ರಸಾದವೆಂದು ಹಳದಿ ದಾರವನ್ನು ಕೈಗಳಿಗೆ ಕಟ್ಟಿಕೊಳ್ಳುತ್ತಾರೆ. ಪೂಜೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಅಡಿಕೆ ವೀಳ್ಯದೆಲೆಯೊಂದಿಗೆ ತಾಂಬೂಲವನ್ನು ನೀಡಲಾಗುತ್ತದೆ. ನಂತರ ಅಕ್ಕಪಕ್ಕದಲ್ಲಿರುವ ಮಹಿಳೆಯರನ್ನು ಸಂಜೆಯ ಆರತಿಗೆ ಆಹ್ವಾನಿಸುತ್ತಾರೆ.

ಮುಂದಿನ ದಿನ, ಶನಿವಾರದಂದು ಸ್ನಾನವನ್ನು ಮುಗಿಸಿದ ನಂತರ ಕಲಶವನ್ನು ಕೆಡವಲಾಗುತ್ತದೆ ಮತ್ತು ಕಲಶದ ನೀರನ್ನು ಮನೆಯೊಳಗೆ ಪ್ರೋಕ್ಷಿಸಲಾಗುತ್ತದೆ. ನಂತರ ಅಕ್ಕಿಯನ್ನು ಅನ್ನ ತಯಾರಿಸಲು ಬಳಸುವ ಅಕ್ಕಿಯೊಂದಿಗೆ ಮಿಶ್ರ ಮಾಡಲಾಗುತ್ತದೆ. ಪೂಜೆಯ ವಿಧಿ ವಿಧಾನಗಳು ತುಂಬಾ ಸರಳವಾಗಿದ್ದು ಯಾವುದಾದರೂ ವಿಧಾನ ಬಿಟ್ಟು ಹೋದಲ್ಲಿ ಚಿಂತಿಸದಿರಿ ಏಕೆಂದರೆ ದೇವಿಗೆ ನೀವು ಅರ್ಪಿಸುವ ಪ್ರಾರ್ಥನೆ ಇಲ್ಲಿ ಅತೀ ಮುಖ್ಯವಾಗಿರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನಾಗ ಪಂಚಮಿ ವಿಶೇಷತೆ

ನಾಗ ಪಂಚಮಿ ವಿಶೇಷತೆ

ಆರೋಗ್ಯಕ್ಕೆ ಯೋಗ್ಯವಾದ ಲೋಹ ಕಂಚು

ಹಿಂದಿನ ಕಾಲದಿಂದಲೂ ಆರೋಗ್ಯಕ್ಕೆ ಯೋಗ್ಯವಾದ ಲೋಹ ಕಂಚು