in

ರಾಕ್ಷಸ ಗುರು ಶುಕ್ರರಿಂದ ದೇವ ಹುಡುಗ ಕಚ ಕಲಿತ ವಿಧ್ಯೆ

ದೇವಗುರು ಬೃಹಸ್ಪತಿಯ ಮಗ ಕಚ
ದೇವಗುರು ಬೃಹಸ್ಪತಿಯ ಮಗ ಕಚ

ಸಾಗರ ಮಥನದಲ್ಲಿ ಅಸುರಾದಿ ರಾಕ್ಷಸರಿಗೆ ಅಮೃತ ಸಿಗಲಿಲ್ಲ. ಹಾಗೆಂದೇ ಮಹಾದೇವ ಅವರಿಗೆ ಮೃತಸಂಜೀವಿನಿ ವಿದ್ಯೆಯನ್ನು ಕೊಟ್ಟ. ಶುಕ್ರಾಚಾರ್ಯರಿಗೆ ಅದನ್ನು ಬೋಧಿಸಿ, ನಿಮ್ಮವರನ್ನು ಬದುಕಿಸಿಕೋ ಅಂದ.

ಕಾಲಾನಂತರದಲ್ಲಿ ದೇವಬಣಕ್ಕೆ ತಮ್ಮಲ್ಲೂ ಯಾರಾದರೊಬ್ಬರು ಮೃತಸಂಜೀವಿನಿ ಕಲಿಯುವುದು ಒಳ್ಳೆಯದು ಅನ್ನಿಸಿತು. ಆದರೆ ಮಹಾದೇವ ಅದನ್ನು ಬೋಧಿಸಲು ಸಾಧ್ಯವಿಲ್ಲ ಅಂದ. ಅದನ್ನವರು ಅಸುರ ಗುರು ಶುಕ್ರಾಚಾರ್ಯರಿಂದಲೇ ಕಲಿಯಬೇಕು ಎಂದ ಶಿವ. ಅಸುರರು ಇದ್ದಲ್ಲಿಗೇ ಹೋಗಿ ಅದನ್ನು ಕಲಿತು ಬರಲಿಕ್ಕೆ ಗಟ್ಟಿ ಗುಂಡಿಗೆಯ ಬುದ್ಧಿವಂತನೇ ಬೇಕು. ಯಾರನ್ನು ಕಳಿಸೋದು ಎಂದು ಯೋಚಿಸುತ್ತಿದ್ದಾಗ ದೇವಗುರು ಬೃಹಸ್ಪತಿಯ ಮಗ ಕಚ ಮುಂದೆ ಬಂದ. ನಾನು ಆ ವಿದ್ಯೆಯನ್ನು ಖಂಡಿತವಾಗಿಯೂ ಕಲಿತುಬರುತ್ತೇನೆಂದು ಶಪಥ ಮಾಡಿದ.

ಹೀಗೆ ಸುರ ಪಾಳಯದ ಹುಡುಗ ಕಚ ಸಂಜೀವನಿ ಮಂತ್ರ ಕಲಿಯೋಕೆ ಬಂದ. ಅದನ್ನ ತನ್ನ ಆಶ್ರಯದಾತರಾದ ದೈತ್ಯರಿಗೇ ಹೇಳಿಕೊಟ್ಟಿದ್ದಿಲ್ಲ ಶುಕ್ರ. ಇನ್ನು ಈ ಶತ್ರುವಿಗೇನು ಹೇಳಿಕೊಟ್ಟಾನು? ಆದರೂ ಆಚೆಯಿಂದ ಯಾರದರೂ ‘ವಿದ್ಯಾಮ್ ದೇಹಿ’ಯೆಂದು ಬಂದಾಗ ಒಪ್ಪಿಕೊಳ್ಳೋದು ಪ್ರತಿಷ್ಟೆಯ ಸಂಗತಿಯೆಂದು ಬಳಿ ಸೇರಿಸಿಕೊಂಡಿದ್ದ.

ರಾಕ್ಷಸ ಗುರು ಶುಕ್ರರಿಂದ ದೇವ ಹುಡುಗ ಕಚ ಕಲಿತ ವಿಧ್ಯೆ
ದೇವಗುರು ಬೃಹಸ್ಪತಿಯ ಮಗ ಕಚ

ಶುಕ್ರನ ರಾಜಕಾರಣ ಬಡ್ಡು ದೈತ್ಯರ ತಲೆ ಹೊಕ್ಕದು. ಅವರಂತೂ ಆ ಚೆಂದದ ಮೈಕಟ್ಟಿನ ಸುಂದರ ಯುವಕನ್ನ ಕಂಡು ಹಲ್ಲು ಕಡಿಯುತ್ತಿದ್ದರು. ಅವನು ವಿದ್ಯೆ ಅಪಹರಿಸುತ್ತಾನೆ ಅನ್ನೋದು ಒಂದು ಕಾರಣವಾದರೆ, ತಮ್ಮ ಹೆಣ್ಣುಗಳ ಚಿತ್ತವನ್ನೂ ಅಪಹರಿಸ್ತಾನೆ ಅನ್ನೋದು ಅದಕ್ಕಿಂತ ಮುಖ್ಯ ಕಾರಣ. ಸಾಲದ್ದಕ್ಕೆ ಅವನು ಗುರುಮಗಳು ದೇವಯಾನಿಯ ಬಳಿ ನಗುನಗುತ್ತ ಮಾತಾಡುತ್ತಾನೆ! ಅವಳ ಕಣ್ಣುಗಳಲ್ಲಿ ಇತ್ತೀಚೆಗೆ ಏನೋ ಥರದ ಹೊಳಪು- ಶುಕ್ರನ ಕಣ್ಣಿಗೂ ಬಿದ್ದಿದೆ. ಆದರೆ ಆಗಲಿ, ಸುರರ ಕಡೆಯವನೊಬ್ಬನನ್ನ ತಮ್ಮ ಕಡೆಗೆ ಎಳೆದುಕೊಂಡ ಹಾಗೆ ಆಗುವುದು ಅಂತ ಅವರೂ ಸುಮ್ಮನಿದ್ದಾರೆ.

ಶುಕ್ರರೇನೋ ಸುಮ್ಮನಿದ್ದರು. ದೈತ್ಯ ಯುವಕರು ಸುಮ್ಮನಿರಬೇಕಲ್ಲ? ‘ಆ ಮುದುಕನಿಗೆ ಮೊದಲೇ ಒಂದು ಕಣ್ಣು ಕಡಿಮೆ!’ ಅಂತ ಆಡಿಕೊಳ್ಳುತ್ತ ತಾವೇ ಕಚನಿಗೊಂದು ಗತಿ ಕಾಣಿಸೋಕೆ ತೀರ್ಮಾನಿಸಿದರು. ಹಸು ಮೇಯಿಸಲು ಹೋದ ಕಚನನ್ನ ಕತ್ತರಿಸಿ ಬಿಸಾಡಿದರು.

ಇತ್ತ ಎಂದಿನಂತೆ ಸಂಜೆ ಕಚ ಬರೋದನ್ನೆ ಕಾಯ್ತಿದ್ದ ದೇವಯಾನಿಗೆ ಆತಂಕ. ‘ಓ ದೇವಯಾನೀ… ನಮ್ಮ ಪ್ರೀತಿಯಾಣೆ! ಕಾಪಾಡು!!’ ಸುಳಿದು ಬಂದ ಸದ್ದು ಎದೆಹೊಕ್ಕಿತು. ಅಪ್ಪನ್ನ ಕೂಗಿದಳು. ಶುಕ್ರನಿಗೆ ಮಗಳೆಂದರೆ ವಿಪರೀತ ವ್ಯಾಮೋಹ. ಅವಳ ಕಣ್ಣೀರು ಕಥೆ ಹೇಳಿತು. ಶುಕ್ರ ತಡ ಮಾಡಲಿಲ್ಲ. ಸಂಜೀವನಿ ಮಂತ್ರ ಅವನ ಕಂಚಿನ ಕಂಠ ನೂಕಿ ಬಂತು. ಕಚ ನಿದ್ದೆಯಿಂದಲೆನ್ನುವಂತೆ ಎದ್ದು ಬಂದ.

ಅದೊಂದು ಬೆಳಗು… ಕಚ ಶುಕ್ರನ ಪೂಜೆಗೆ ನೀರು ತರಲೋಗಿದ್ದ. ದೈತ್ಯರು ನುಗ್ಗಿ ಬಂದರು. ಅವನ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಲ್ಲು ಕಟ್ಟಿ ನೀರಿಗೆ ತಳ್ಳಿದರು.
ಅಪ್ಪನ ಪೂಜೆಗೆ ಅಣಿ ಮಾಡುತ್ತಿದ್ದ ದೇವಯಾನಿಯ ಎದೆಯಲ್ಲಿ ತಳಮಳ…. ‘…..ಪ್ರೀತಿಯಾಣೆ! ಕಾ….’
ನೀಲಾಂಜನದ ದೀಪ ಆರಿತು. ದೇವಯಾನಿ ನಲುಗಿಹೋದಳು. ಮಡಿಯುಟ್ಟ ಬಂದ ಶುಕ್ರನ ಪಾದಬಿದ್ದಳು. ಶುಕ್ರನಿಗೆ ಇದೇನಿದು ಪದೇಪದೇ ಅನ್ನುವ ಕಿರಿಕಿರಿ. ಮಗಳ ಮುಖ ನೋಡಿ ಸಹಿಸಿಕೊಂಡ. ಮತ್ತೆ ಸಂಜೀವನಿ ಶಬ್ದವಾಯ್ತು. ಕಚ ಮೈಮುರಿಯುತ್ತ ಎದ್ದು ಬಂದ.

ದೈತ್ಯ ಹುಡುಗರು ಕುದ್ದು ಹೋದರು. ಮುಸ್ಸಂಜೆಗೆ ಕಾದರು. ಅಡ್ಡಾಡುತ್ತಿದ್ದ ಕಚನನ್ನ ಹೊತ್ತೊಯ್ದು ಚೂರುಚೂರೆ ಸಿಗಿದರು. ಸುಟ್ಟು ಭಸ್ಮ ಮಾಡಿದರು. ಇರುಳು ಹೊತ್ತಿಗೆ ದುಷ್ಟರ ಬುದ್ಧಿ ಬಲು ಚುರುಕು! ಭಸ್ಮವನ್ನ ಮದ್ಯದ ಗಡಂಗಿಗೆ ತುಂಬಿದರು. ಶುಕ್ರನ ಮುಂದೆ ಇಟ್ಟರು.
ಶುಕ್ರ ಉಲ್ಲಸಿತನಾದ. ಮದ್ಯಗೋಷ್ಟಿ ಶುಕ್ರನಿಗೆ ಅಪ್ರಿಯವೆ? ‘….ಪ್ರೀತಿಯಾಣೆ…..ದೇ ವ ಯಾ ನೀ….’ ಎಲ್ಲಿಂದಲೊ ಕ್ಷೀಣ ದನಿ. ಅಪ್ಪನ ಪಕ್ಕ ಕುಂತು ಹರಟುತ್ತಿದ್ದ ದೇವಯಾನಿಯ ಬಲಗಣ್ಣು ಅದುರಿತು. ಶುಕ್ರ ತನ್ನ ಗಂಟಲಿಗೆ ಮದ್ಯ ಹೊಯ್ದುಕೊಳ್ಳುತ್ತಿದ್ದ. ಎದುರಲ್ಲಿ ದೈತ್ಯ ಕನ್ಯೆಯರ ನರ್ತನ.ಪಕ್ಕದಲ್ಲಿ ಕುಂತ ಯುವಕರು ಅವನನ್ನ ಹುರಿದುಂಬಿಸ್ತಿದ್ದರು.

‘ಪ್ರೀತಿಯಾಣೆ….’ ಮತ್ತೆ ಮತ್ತೆ ಗಾಳಿ ಕೊರೆದಂತೆ ಕೇಳುತ್ತಿದೆ ದೇವಯಾನಿಗೆ. ‘ಅಪ್ಪಾ!’ ಅಂದರೆ ಅವನೆಲ್ಲಿ? ದೈತ್ಯ ಹುಡುಗಿಯೊಬ್ಬಳ ಹೆಗಲಿಗೆ ಕೈಹಚ್ಚಿ ನಡೆದಿದ್ದಾನೆ. ಇನ್ನು ಅವನು ಈಚೆ ಬರುವುದು ಬೆಳಗು ಕಲೆದ ಮೇಲೇನೆ! ಅಷ್ಟರಲ್ಲೆ ತಡೆಯಬೇಕು.
ದೇವಯಾನಿಯೆಂದರೆ ಸ್ವಾಭಿಮಾನದ ಪರ್ಯಾಯ. ಈ ಹೊತ್ತು ಅಪ್ಪನ್ನ ತಡೆಯುವುದೆ? ಪ್ರಿಯತಮನಿಗಾಗಿ? ಎಲ್ಲರೆದುರು ಕಣ್ಣೀರಿಡುವುದೆ? ತನ್ನ ಪ್ರಾಣಕ್ಕಾಗಿ!?
ಯೋಚಿಸುತ್ತ ಉಳಿಯಲಿಲ್ಲ. ತಾನು ಎಲ್ಲರ ಕಣ್ಣಲ್ಲಿ ಸತ್ತರೂ ಅವನನ್ನ ಬದುಕಿಸಿಯೇ ಸಿದ್ಧ! ಎದ್ದೋಡಿದಳು. ಬಾಗಿಲಿಗಡ್ಡ ನಿಂತಳು. ಕೈಮುಗಿದಳು, ‘ತಂದೆ, ಒಂದೇ ಒಂದು ಸಲ… ಕೊನೆಯ ಬಾರಿಗೆ… ನನ್ನ ಪ್ರೇಮದಾಣೆಯಿದೆ ತಂದೆ!’

ಶುಕ್ರ ಕರಗಿದ. ಮಗಳಂದರೆ ವ್ಯಾಮೋಹ . ಸಂಜೀವನಿ ಶುರುವಿಟ್ಟ. ದೈತ್ಯರು ನಗತೊಡಗಿದರು. ಶುಕ್ರ ತಡೆದು ಕೇಳಿದ, ‘ಯಾಕೆ?!’
‘ಕಚನ ಭಸ್ಮವನ್ನ ನಿಮ್ಮ ಮದ್ಯಕ್ಕೆ ಬೆರೆಸಿದ್ದೆವು. ಅವ ಬದುಕಿ ಬರಬೇಕಂದರೆ ನಿಮ್ಮ ಹೊಟ್ಟೆಯೊಡೆದು ಬರಬೇಕಾಗುತ್ತೆ!! ಗುರು, ಬಿಟ್ಟುಬಿಡಿ, ಅವನು ನಾಳೆಗೆ ಗೊಬ್ಬರವಾಗುತ್ತಾನೆ!!’

ದೇವಯಾನಿ ಕುಸಿದು ಕೂತಳು. ಕಚನ ಕರೆ ಅವಳೊಳಗೆ ಮೊರೆಯುತಿತ್ತು… ಇತ್ತ ತನ್ನ ತಂದೆಯನ್ನೂ ಬಿಟ್ಟುಕೊಡಲಾರಳು. ಶುಕ್ರನೆಂದರೆ ಅವಳ ಮತ್ತೊಂದು ಪ್ರಾಣವೇ. ಹಾಗೆಯೇ ಕಚನೂ.

ದೇವಯಾನಿಯನ್ನ ಸಂತೈಸುತ್ತ ಶುಕ್ರನೆಂದ, ‘ದೇವಾ, ನಾನು ಸಂಜೀವನಿ ಪಠಿಸಿ ಅವನನ್ನ ಬದುಕಿಸಿಕೊಡ್ತೀನಿ. ನಾನು ಹೊಟ್ಟೆಯೊಡೆದು ಬಿದ್ದರೆ, ಅದೇ ಸಂಜೀವನಿ ಹೇಳಿ ನನ್ನ ಮರಳಿ ಬದುಕಿಸಬಲ್ಲೆಯಾ?’
ಅಷ್ಟು ಸುಲಭವಾಗಿರಲಿಲ್ಲ ಆ ಮಂತ್ರ ಕಲಿಯುವುದು. ಅಷ್ಟು ಸುಲಭವಿದ್ದರೆ ಮೊದಲ ಸಲ ಬದುಕಿಸಿಕೊಳ್ಳುವಾಗ ಕೇಳಿದ್ದ ಕಚ ಕಲಿತುಬಿಟ್ಟಿರುತ್ತಿದ್ದ, ಈ ಹೊತ್ತಿಗೆ ದೇವಲೋಕ ಸೇರಿರುತ್ತಿದ್ದ. ಮೂರು ಬಾರಿ ಕೇಳಿ ಸಾಕಷ್ಟು ಕಲಿತಿದ್ದ ಆತ ಇನ್ನೊಂಚೂರು ಪಳಗಬೇಕಿತ್ತು.
ದೇವಯಾನಿ ತಲೆಯಾಡಿಸಿದಳು. ಕಚನ ದನಿ ಎಲ್ಲಿಂದಲೋ ತೇಲಿಬಂತು, ‘ನಾನು ಬದುಕಿಸ್ತೀನಿ ಗುರುವೇ, ನಿಮ್ಮಿಂದಲೇ ಸಾಕಷ್ಟು ಕಲಿತಿದ್ದೀನಿ…’

ರಾಕ್ಷಸ ಗುರು ಶುಕ್ರರಿಂದ ದೇವ ಹುಡುಗ ಕಚ ಕಲಿತ ವಿಧ್ಯೆ
ತಾನೂ ಅದೇ ಮಂತ್ರವನ್ನ ಹೇಳಿ ಗುರುವನ್ನ ಬದುಕಿಸಿಕೊಂಡ

ಶುಕ್ರರು ಮಂತ್ರ ಮೊಳಗಿದರು. ಕೊನೆಯ ಪದದೊಂದಿಗೆ ಉರುಳಿ ಬಿದ್ದರು, ಅವರ ಹೊಟ್ಟೆಯಿಂದ ಕಚನೆದ್ದು ಬಂದ. ಹಾಗೆ ಬಂದವ ತಾನೂ ಅದೇ ಮಂತ್ರವನ್ನ ಹೇಳಿ ಗುರುವನ್ನ ಬದುಕಿಸಿಕೊಂಡ.
‘ನೀನಿನ್ನು ಇಲ್ಲೇ ಇದ್ದರೆ ಅಪಾಯ. ಹೇಗಿದ್ದರೂ ನಿನ್ನ ಕೆಲಸ ಮುಗಿಯಿತು ಅನ್ನಿಸತ್ತೆ. ತಗೋ, ಈ ನನ್ನ ಮಗಳ ಕೈ ನಿನಗೆ ಕೊಡುತ್ತೇನೆ. ಇಬ್ಬರೂ ಹೊರಟುಹೋಗಿ!’ ಎಂದ ಶುಕ್ರ

ಕಚನೇನೋ ಹೊರಡಲು ತುದಿಗಾಲಲ್ಲಿ ನಿಂತಿದ್ದ. ಆದರೆ ದೇವಯಾನಿಯೊಟ್ಟಿಗೆ ಅಲ್ಲ!
‘ಹೇಗಾಗುವುದು ಗುರುವೇ? ನಮ್ಮಲ್ಲಿ ಈ ಪದ್ಧತಿ ಸಮ್ಮತವಲ್ಲ. ಗುರು ತಂದೆಗೆ ಸಮ. ಗುರುಪುತ್ರಿ ಸಹೋದರಿಯಂತಾಗೋದಿಲ್ವೆ? ನಾವು ಅಸುರರಂತಲ್ಲ!’
‘ಕಚ….! ನಮ್ಮ ಪ್ರೀತಿಯಾಣೆ….?’ ದೇವಯಾನಿ ಬಿಕ್ಕಿದಳು.
ಅವ, ‘ಅದು ಸಹೋದರ ಪ್ರೀತಿ ಕಣೇ ರಾಕ್ಷಸಿ!’ ಅನ್ನುತ್ತ ನಕ್ಕು ಹೊರಟುಹೋದ.

ಮುಂದೆ ದೇವಯಾನಿ ಯಯಾತಿಯನ್ನು ಮದುವೆಯಾದಳು. ಆದರೆ ಕಚನ ವೃತ್ತಾಂತ ಅವಳ ಮನಸ್ಸಿನಿಂದ ಕೊನೆವರೆಗೂ ಆರದ ಗಾಯವಾಗಿ ಉಳಿದುಬಿಟ್ಟಿತ್ತು. ಆ ದುಃಖವನ್ನು ಮೀರಲು ಕಠಿಣ ಹೃದಯಿಯಾದ ದೇವಯಾನಿ, ಆ ಕಾರಣದಿಂದಲೇ ಮತ್ತಷ್ಟು ನೋವು ಅನುಭವಿಸಬೇಕಾಗಿ ಬಂದಿದ್ದು ದುರಂತ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

56 Comments

ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ

ಒಬ್ಬ ಮುಸ್ಲಿಮ್ ವ್ಯಾಪಾರಿಯಿಂದ ಶಾಂಭವಿ ನದಿ ದಡ ಮುಲ್ಕಿ ಯಲ್ಲಿ ನೆಲೆಯಾದ ದುರ್ಗಾ ಪರಮೇಶ್ವರಿ

ಇಂದು ಭಯಂಕರವಾದ ಭಾನುವಾರ ಇಂದಿನ ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಮುಂದಿನ 20ವರ್ಷ

ಇಂದು ಭಯಂಕರವಾದ ಭಾನುವಾರ ಇಂದಿನ ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಮುಂದಿನ 20ವರ್ಷ