ಬೇಡರ ಕಣ್ಣಪ್ಪ ವೀರಶೈವರು ಆರಾಧಿಸುವ 63 ಪುರಾತನರಲ್ಲಿ ಪ್ರಸಿದ್ಧನಾದವ. ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಶಿವಸಾನ್ನಿಧ್ಯವನ್ನು ಪಡೆದ ಶರಣ.ತಮಿಳಿನ ಪೆರಿಯಪುರಾಣದಲ್ಲೂ ಕನ್ನಡದಲ್ಲಿ ಹರಿಹರನ ರಗಳೆಗಳಲ್ಲೂ ಷಡಕ್ಷರಿಯ ವೃಷಭೇಂದ್ರ ವಿಜಯದಲ್ಲೂ ಈತನ ಕಥೆ ಬರುತ್ತದೆ. ಈ ಕಥೆಯನ್ನು ಆದರಿಸಿ ಚಲನಚಿತ್ರವೂ ಸಿದ್ಧವಾಗಿದೆ. ಕಣ್ಣಪ್ಪ ಬೇಡರ ಜಾತಿಯವನಾದುದರಿಂದ ಬೇಡರ ಕಣ್ಣಪ್ಪನೆಂದು ಪ್ರಸಿದ್ಧನಾಗಿದ್ದಾನೆ.
ಬೇಡರ ಕಣ್ಣಪ್ಪನ ಕಥೆ :
ಚೋಳಮಂಡಲದ ತಿರುಕಾಲತ್ತಿ (ಶ್ರೀಕಾಳಹಸ್ತಿ) ಒಂದು ಶೈವಕ್ಷೇತ್ರ. ಆ ಬೆಟ್ಟದ ತಪ್ಪಲಲ್ಲಿ ಕಿರಾತರ ಗುಂಪೊಂದಿತ್ತು. ಅದರ ಒಡೆಯ ಕಣ್ಣಪ್ಪ. ಒಂದು ಸಂಜೆ ಮರದಡಿಯಲ್ಲಿ ಮಲಗಿದ್ದಾಗ ಕಣ್ಣಪ್ಪನ ಕನಸಿನಲ್ಲಿ ಶಿವ ಬಂದು ಆ ಕಾಡಿನಲ್ಲಿ ಶಿವಲಿಂಗವಿರುವುದನ್ನು ತಿಳಿಸಿ ಅದನ್ನು ಅನುನಯದಿಂದ ಪೂಜಿಸಬೇಕೆಂದು ಹೇಳುತ್ತಾನೆ. ಕನಸು ನಿಜವೆನ್ನುವಂತೆ ದೂರದಲ್ಲಿ ಶಿವಲಿಂಗ ಕಾಣುತ್ತದೆ. ಅದನ್ನು ನೋಡಿದ ಕಣ್ಣಪ್ಪ ಆನಂದಭರಿತನಾಗಿ ಮುಗ್ಧಮನಸ್ಸಿನಿಂದ ಶಿವಲಿಂಗವನ್ನು ಅಪ್ಪಿ ಎಳೆಯ ಮಕ್ಕಳನ್ನು ಲಾಲಿಸುವಂತೆ ಮಾತನಾಡಿಸಿ ಪೂಜಾಕೈಂಕರ್ಯವನ್ನರ್ಪಿಸುತ್ತಾನೆ. ಶಿವನಿಗೆ ಆಹಾರವಾಗಿ ಜಿಂಕೆಯ ಮಾಂಸವನ್ನು ಬೇಯಿಸಿ ತಂದು, ನೆಕ್ಕಿ, ನೋಡಿ, ರುಚಿಯಾದ ಭಾಗವನ್ನು ಶಿವನ ಪಾದದಡಿಯಿಟ್ಟು ತಾನು ಮುಡಿದಿದ್ದ ಕಕ್ಕೆ ಮೊದಲಾದ ಹೂಗಳಿಂದಲೇ ಪೂಜಿಸಲು ಉದ್ಯುಕ್ತನಾಗುತ್ತಾನೆ. ಆ ಮೊದಲೇ ವಿಧ್ಯುಕ್ತವಾಗಿ ಪೂಜೆಗೊಂಡಿದ್ದ ಲಿಂಗದ ತಲೆಯ ಮೇಲಿದ್ದ ಹೂವುಗಳನ್ನು ತನ್ನ ಕೆರದ ಕಾಲಿನಿಂದ ಅತ್ತ ನೂಕಿ ತನ್ನ ಬಾಯಲ್ಲಿ ನೀರನ್ನು ತುಂಬಿ ತಂದು ಲಿಂಗಕ್ಕೆ ಅಭಿಷೇಕ ಮಾಡಿ ತಾನು ಮುಡಿದಿದ್ದ ಹೂಗಳನ್ನೇ ಸೂಡಿ ಮಾಂಸವನ್ನು ನೈವೇದ್ಯ ಮಾಡುತ್ತಾನೆ. ಅಕಳಂಕ ನಿಸ್ಸ್ವಾರ್ಥ ಭಕ್ತಿಯಿಂದ ಮಾಡಿದ ಈ ಪೂಜೆಯಿಂದ ಶಿವ ಸಂಪ್ರೀತನಾಗುತ್ತಾನೆ. ಹೀಗೆ ಪೂಜಾವಿಧಾನ ನಿತ್ಯವೂ ನಡೆಯುತ್ತಿರುತ್ತದೆ. ಶಿವದೇವಾಲಯದಲ್ಲಿ ನಿತ್ಯವೂ ಮಾಂಸ ಮೂಳೆಗಳಿರುವುದನ್ನು ಕಂಡು ಪೂಜಾರಿ ಭಯಗೊಂಡು ಪಾತಕಿಯನ್ನು ಪತ್ತೆಹಚ್ಚಲು ಒಂದು ದಿನ ಲಿಂಗದ ಹಿಂದೆ ಅವಿತು ಕುಳಿತು ಕಣ್ಣಪ್ಪ ಮಾಡುವ ವಿಚಿತ್ರ ಲಿಂಗಪೂಜೆಯನ್ನು ಕಂಡು ಕೆಂಡವಾಗುತ್ತಾನೆ. ಕಣ್ಣಪ್ಪನ ಪುಜಾನಿಷ್ಠೆಯನ್ನು ಪುಜಾರಿಗೂ ಆ ಮೂಲಕ ಲೋಕಕ್ಕೂ ಪ್ರಕಟಗೊಳಿಸಬೇಕೆಂದು ಬಗೆದ ಶಿವ ತನ್ನ ಕಣ್ಣಿನಿಂದ ನೀರು ಹರಿಸುತ್ತಾನೆ. ಶಿವನ ದುಃಖಕ್ಕೆ ಕಾರಣವನ್ನು ತಿಳಿಯದ ಕಣ್ಣಪ್ಪ ಬಹಳವಾಗಿ ಪೇಚಾಡಿ ಇದು ಏನೋ ಕಣ್ಣಿನ ರೋಗವಿರಬೇಕೆಂದು ಬಗೆದು ತನ್ನ ನಿರ್ಮಲವಾದ ಕಣ್ಣನ್ನು ಬಾಣದ ಕೊನೆಯಿಂದ ಕಿತ್ತು ನೀರೊಸರುತ್ತಿದ್ದ ಶಿವನ ಕಣ್ಣಿದ್ದ ಕಡೆ ಇಡುತ್ತಾನೆ. ಕ್ಷಣದಲ್ಲಿ ಕಣ್ಣು ಒಸರುವುದು ನಿಲ್ಲುತ್ತದೆ. ಆದರೆ ಶಿವನ ಇನ್ನೊಂದು ಕಣ್ಣು ಜಿನುಗಲು ಪ್ರಾರಂಭವಾಗುತ್ತದೆ. ಆಗ ಕಣ್ಣಪ್ಪ ತನ್ನ ಕಾಲಿನ ಉಂಗುಷ್ಠವನ್ನು ಗುರುತಿಗಾಗಿ ಶಿವನ ಕಣ್ಣಿನ ಬಳಿಯಿಟ್ಟುಕೊಂಡು ತನ್ನ ಇನ್ನೊಂದು ಕಣ್ಣನ್ನೂ ಕೀಳಲು ಉದ್ಯುಕ್ತನಾಗುತ್ತಾನೆ. ಮುಗ್ಧ ಭಕ್ತನ ಅದ್ವಿತೀಯ ತ್ಯಾಗಕ್ಕೆ ಶಿವ ಪ್ರಸನ್ನನಾಗುತ್ತಾನೆ. ಕಣ್ಣಪ್ಪ ಕಳೆದುಕೊಂಡಿದ್ದ ಕಣ್ಣುಗಳನ್ನು ಪಡೆಯುತ್ತಾನೆ. ಲಿಂಗದ ಹಿಂದೆ ಅವಿತು ನಿಂತಿದ್ದ ಪುಜಾರಿ ಪಶ್ಚಾತ್ತಾಪ ಪಟ್ಟು ಮುಂದೆ ಬಂದು ಕಣ್ಣಪ್ಪನನ್ನು ಹೃದಯ ತುಂಬಿ ಪ್ರೀತಿಸುತ್ತಾನೆ. ಅಂದಿನಿಂದ ಕಣ್ಣಪ್ಪನ ಕಥೆ ಲೋಕಪ್ರಸಿದ್ಧವಾಗುತ್ತದೆ.
ಭಕ್ತ ಮಾರ್ಕಂಡೇಯನ ಕಥೆ :
ಒಂದಾನೊಂದು ಕಾಲದಲ್ಲಿ ಮೃಕಂಡು ಎಂಬ ಮುನಿವರ್ಯನಿದ್ದ. ಆತನಿಗೆ ಮದುವೆಯಾಗಿ ಬಹಳ ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ. ಇದರಿಂದ ದುಃಖಗೊಂಡ ಮೃಕಂಡು ಪರಮೇಶ್ವರನನ್ನು ಕುರಿತು ಘೋರವಾದ ತಪಸ್ಸು ಮಾಡಿದ.ಅವನ ತಪಸ್ಸಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನಾಗಿ, “ಮೃಕಂಡು, ನಿನ್ನ ಭಕ್ತಿಗೆ ನಾನು ಒಲಿದಿದ್ದೇನೆ. ಹೇಳು, ನಿನಗೆ ಮಂದಬುದ್ಧಿಯ ನೂರು ವರ್ಷ ಬದುಕುವ ಮಗ ಬೇಕೋ? ಹದಿನಾರೇ ವರ್ಷಬಾಳುವ ಅಲ್ಪಾಯುವಾದ ಸುಜ್ಞಾನಿ ಮಗ ಬೇಕೋ?” ಎಂದು ಕೇಳಿದನು.
ಮೃಕಂಡುವು “ದೇವಾ, ಮೂರ್ಖನಾಗಿ ಬದುಕುವ ಸಂತಾನ ಬೇಡ? ಅಲ್ಪಾಯುವಾದರೂ ಸುಜ್ಞಾನಿಯಾಗಿ ಬಾಳುವ ಮಗನನ್ನೇ ನನಗೆ ಅನುಗ್ರಹಿಸು” ಎಂದು ಬೇಡಿಕೊಂಡ.
ಶಿವನ ವರಪ್ರಸಾದದಿಂದ ಮೃಕಂಡು ದಂಪತಿಗಳಿಗೆ ಮುದ್ದಾದ ಬಾಲಕ ಜನಿಸಿದ. ಅವನಿಗೆ ಮಾರ್ಕಂಡೇಯ ಎಂದು ಅವರು ನಾಮಕರಣ ಮಾಡಿದರು. ಮಾರ್ಕಂಡೇಯ ಅತ್ಯಂತ ತೇಜಸ್ವಿಯಾಗಿ ಬೆಳೆದ. ಚಿಕ್ಕಂದಿನಲ್ಲೇ ವೇದ ಶಾಸ್ತ್ರ ಪುರಾಣಗಳನ್ನೆಲ್ಲಾ ಅಧ್ಯಯನ ಮಾಡಿ ಬುದ್ಧಿವಂತ ಆದ. ಮಹಾ ಶಿವಭಕ್ತನಾದ. ಅದರೆ ಅವನ ಹದಿನಾರನೇ ಹುಟ್ಟುಹಬ್ಬ ಹತ್ತಿರ ಬಂದ ಹಾಗೆ ತಂದೆ ತಾಯಿ ಅಳತೊಡಗಿದರು.
“ಯಾಕೆ ಅಳುತ್ತೀರಿ?” ಎಂದು ಮಾರ್ಕಂಡೇಯ ಅವರನ್ನು ಆಶ್ಚರ್ಯದಿಂದ ಕೇಳಿದ. ಅವನು ಬಹಳ ಹೊತ್ತು ಪೀಡಿಸಿದ ಮೇಲೆ ಮೃಕಂಡು ನಿಜಸಂಗತಿಯನ್ನು ಅರುಹಿದ. ಅದನ್ನು ಕೇಳಿ ಮಾರ್ಕಂಡೇಯ ಹೆದರಲಿಲ್ಲ. ಅವನು ತಂದೆಯ ಪಾದಕ್ಕೆ ನಮಿಸಿ “ಅಪ್ಪಾ, ಈಶ್ವರನ ವರಪ್ರಸಾದದಿಂದ ನಾನು ಹುಟ್ಟಿದೆ. ಅದೇ ದೇವರ ಹರಕೆಯಿಂದ ನಾನು ಸಾವನ್ನೂ ಜಯಿಸಿ ಬರುತ್ತೇನೆ. ಅಪ್ಪಣೆ ಕೊಡು” ಎಂದು ಗೊಂಡಾರಣ್ಯದೊಳಗೆ ಹೊರಟು ಹೋದ.
ಪರ್ವತದ ತಪ್ಪಲೊಂದರಲ್ಲಿ ಮಾರ್ಕಂಡೇಯ ಕುಳಿತು ಶಿವಲಿಂಗದ ಮುಂದೆ ತಪಸ್ಸು ಮಾಡಲಾರಂಭಿಸಿದ. ಅವನ ತಪಸ್ಸಿನ ಮಹಿಮೆಗೆ ಭೂಮಿ ನಡುಗಲಾರಂಭಿಸಿತು. ಅದೇ ವೇಳೆಗೆ ಅವನ ಆಯುಷ್ಯ ತೀರಿದುದರಿಂದ ಯಮದೂತ ಅವನನ್ನು ಕೊಂಡೊಯ್ಯಲು ಬಂದ. ಅದರೆ ಅವನಿಗೆ ಮಾರ್ಕಂಡೇಯನ ಹತ್ತಿರ ಕೂಡ ಸುಳಿಯಲಾಗಲಿಲ್ಲ. ಅವನು ಯಮಧರ್ಮರಾಯನ ಬಳಿಗೆ ಹಿಂತಿರುಗಿ ಈ ಸಂಗತಿ ತಿಳಿಸಿದ. ಯಮಧರ್ಮನು ಸಿಟ್ಟಿನಿಂದ ತಾನೇ ಅಲ್ಲಿಗೆ ಬಂದ. ಆದರೆ ಶಿವಲಿಂಗ ಹಿಡಿದು ಕುಳಿತಿದ್ದ ಮಾರ್ಕಂಡೇಯನ ಬಳಿಗೆ ಹೋಗಲು ಅವನಿಗೂ ಸಾಧ್ಯ ಆಗಲಿಲ್ಲ.
“ಮಾರ್ಕಂಡೇಯ ಶಿವಲಿಂಗ ಬಿಟ್ಟು ಇತ್ತ ಬಾ. ನಿನ್ನ ಆಯುಷ್ಯ ತೀರಿತು” ಎಂದು ಅಬ್ಬರಿಸಿದ ಯಮರಾಯ.
“ನಾನು ನನ್ನ ದೇವರನ್ನು ಬಿಟ್ಟು ಬರಲೊಲ್ಲೆ” ಎಂದು ಹಟ ಹಿಡಿದ ಮಾರ್ಕಂಡೇಯ.
“ಅದು ಹೇಗೆ ಬರುವುದಿಲ್ಲವೋ ನೋಡ್ತೇನೆ” ಎಂದು ಯಮ ತನ್ನ ಪಾಶವನ್ನು ಬೀಸಿದ.
ಆ ಕ್ಷಣ ಈಶ್ವರ ಪ್ರತ್ಯಕ್ಷನಾಗಿ. “ನಿಲ್ಲು ಯಮಧರ್ಮ” ಎಂದು ಕೂಗಿದ. ಯಮನು ವಿಸ್ಮಯದಿಂದ ನಿಂತ. ಮಾರ್ಕಂಡೇಯ ದೇವರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡ.
ಈಶ್ವರ ಮಂದಸ್ಮಿತನಾಗಿ “ಮಾರ್ಕಂಡೇಯ, ನಿನ್ನ ತಪಸ್ಸಿಗೆ ನಾನು ಮೆಚ್ಚಿದೆ. ನೀನು ಚಿರಂಜೀವಿಯಾಗು” ಎಂದು ಆಶೀರ್ವದಿಸಿದ.
ಸಾವಿನಿಂದ ಗೆದ್ದ ಮಾರ್ಕಂಡೇಯ ತಂದೆತಾಯಿಗಳಲ್ಲಿಗೆ ಹಿಂತಿರುಗಿದ. ತೇಜೋವಂತನಾಗಿ ಬಾಳಿದ.
ಧನ್ಯವಾದಗಳು.
prodamus промокод [url=prodamus-promokod1.ru]prodamus-promokod1.ru[/url] .