in

ಹಿಮದ ಮನೆ ಹಿಮಾಲಯ

ಹಿಮಾಲಯ
ಹಿಮಾಲಯ

ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ “ಹಿಮಾಲಯ” ಎಂದರೆ “ಹಿಮದ ಮನೆ” ಎಂದರ್ಥ ಹಿಮ+ಆಲಯ=ಹಿಮಾಲಯ.

ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತಶ್ರೇಣಿಗಳಲ್ಲಿ ಒಂದು. ಸುಮಾರು ೨೫ ಕೋಟಿ ವರ್ಷಗಳ ಹಿಂದೆ “ಪ್ಯಾಂಜಿಯ” ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು. ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ ಸುಮಾರು ವರ್ಷಕ್ಕೆ ೨ ಸೆಮೀ, ಮತ್ತು ಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ.

ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು. ಸಿಂಧೂ ನದಿ ಟಿಬೆಟ್ ನಲ್ಲಿ ಸೆಂಗೆ ಮತ್ತು ಗಾರ್ ನದಿಗಳ ಸಂಗಮದಲ್ಲಿ ಹುಟ್ಟಿ ಪಾಕಿಸ್ತಾನದ ಮೂಲಕ ಸಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗಂಗಾ ನದಿ ಭಾಗೀರಥಿಯಾಗಿ ಗಂಗೋತ್ರಿ ಹಿಮನದಿಯಲ್ಲಿ ಜನ್ಮ ತಾಳಿ ಅಲಕನಂದಾ, ಯಮುನಾ ನದಿಗಳನ್ನು ಸೇರಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಸೇರುತ್ತದೆ. ಬ್ರಹ್ಮಪುತ್ರ ನದಿ ಪಶ್ಚಿಮ ಟಿಬೆಟ್ ನಲ್ಲಿ ಹುಟ್ಟಿ, ದಕ್ಷಿಣಪೂರ್ವಕ್ಕೆ ಹರಿದು ನಂತರ ತನ್ನ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇನ್ನಿತರ ಕೆಲವು ಹಿಮಾಲಯ ನದಿಗಳೆಂದರೆ ಇರವಡ್ಡಿ, ಸಲ್ವೀನ್ ಮೊದಲಾದವು ಬರ್ಮಾ ದತ್ತ ಹರಿಯುತ್ತವೆ.

ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪಂಚದ ಅತಿ ದೊಡ್ಡ ಹಿಮನದಿಯಾದ ಸಿಯಾಚೆನ್ ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆಂದರೆ ಗಂಗೋತ್ರಿ, ಯಮುನೋತ್ರಿ, ನುಬ್ರಾ ಮತ್ತು ಖುಂಬು.

ಹಿಂದೂ ಪುರಾಣಗಳಲ್ಲಿ ಹಿಮಾಲಯವನ್ನು ಹಿಮವತ ಪಾರ್ವತಿಯ ತಂದೆ ಎಂಬ ದೇವನನ್ನಾಗಿ ವ್ಯಕ್ತಿತ್ವಾರೋಪಣೆ ಮಾಡಲಾಗಿದೆ. ಇದಲ್ಲದೆ, ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಹಿಮಾಲಯದ ಹಲವಾರು ಸ್ಥಳಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ.

ಹಿಮದ ಮನೆ ಹಿಮಾಲಯ
ಕೇದಾರನಾಥ್

*ಹರಿದ್ವಾರ – ಇಲ್ಲಿ ಗಂಗಾ ನದಿಯು ಪರ್ವತಗಳಿಂದಾಚೆಗೆ ಬಂದು ಸಮತಳ ಭೂಮಿಯನ್ನು ಹೊಕ್ಕುತ್ತದೆ.
*ಬದರೀನಾಥ್ – ಇಲ್ಲಿ ವಿಷ್ಣುವಿಗೆ ಮುಡಿಪಾದ ಮಂದಿರವಿದೆ.
*ಕೇದಾರನಾಥ್ – ೧೨ ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಇಲ್ಲಿ ಕಾಣಬಹುದು.
*ಗೋಮುಖ್ – ಇದು ಭಾಗೀರಥಿಯ ಉಗಮ ಸ್ಥಳ. ಗಂಗೋತ್ರಿ ನಗರದಿಂದ ಕೆಲವೇ ಮೈಲಿಗಳ ಅಂತರದಲ್ಲಿದೆ.
*ದೇವಪ್ರಯಾಗ – ಇಲ್ಲಿ ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮವಾಗಿ ಗಂಗೆಯಾಗಿ ಮುಂದೆ ಹರಿಯುತ್ತದೆ.
*ಹೃಷಿಕೇಶ – ಇಲ್ಲಿ ಲಕ್ಷ್ಮಣನ ದೇವಸ್ಥಾನವಿದೆ.
*ಕೈಲಾಸ ಪರ್ವತ – ಇದು ೬,೬೩೮ ಮೀ. ಎತ್ತರದ ಶಿಖರ. ಹಿಂದೂ ಧರ್ಮೀಯರು ಇದನ್ನು ಶಿವನ ವಾಸಸ್ಥಾನ ಎಂದು ಪರಿಗಣಿಸುತ್ತಾರೆ. ಈ ಶಿಖರವನ್ನು ಬೌದ್ಧ ಧರ್ಮೀಯರೂ ಪೂಜ್ಯ ಭಾವನೆಯಿಂದ ನೋಡುತ್ತಾರೆ. ಬ್ರಹ್ಮಪುತ್ರ ನದಿಯ ಉಗಮ ತಾಣವಾದ ಈ ಪರ್ವತವು ಮಾನಸ ಸರೋವರವನ್ನು ತನ್ನ ತಪ್ಪಲಿನಲ್ಲಿ ಹೊಂದಿದೆ.
*ಅಮರನಾಥ – ಇಲ್ಲಿ ಹಿಮದಿಂದ ಸ್ವಾಭಾವಿಕವಾಗಿ ಶಿವಲಿಂಗವು ಮೂಡುತ್ತದೆ. ಈ ಲಿಂಗವು ಪ್ರತಿ ವರ್ಷವೂ ಚಳಿಗಾಲದಲ್ಲಿ ಕೆಲವು ವಾರಗಳಲ್ಲಿ ಕಂಡುಬರುತ್ತದೆ. ಈ ಕೆಲವು ವಾರಗಳಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗದ ದರ್ಶನ ಪಡೆಯಲು ಆಗಮಿಸುತ್ತಾರೆ.
*ವೈಷ್ಣೋದೇವಿ – ದುರ್ಗಾ ಭಕ್ತರಲ್ಲಿ ಈ ಮಂದಿರವು ಪ್ರಸಿದ್ಧಿಯನ್ನು ಹೊಂದಿದೆ.

ದಲೈಲಾಮಾ ಅವರ ನಿವಾಸ ಸೇರಿದಂತೆ ಟಿಬೆಟ್ಟಿನ ಬೌದ್ಧ ಧರ್ಮದ ಹಲವಾರು ಸ್ಥಳಗಳು ಹಿಮಾಲಯದಲ್ಲಿ ಕಾಣಸಿಗುತ್ತವೆ.

ಹಿಮದ ಮನೆ ಹಿಮಾಲಯ
ಯೆತಿ

ಯೆತಿ – ಇದು ವಾನರ ಜಾತಿಗೆ ಸೇರಿದ ಅತಿ ದೊಡ್ಡ ಹಾಗೂ ಪ್ರಸಿದ್ಧ ಪ್ರಾಣಿ. ಇದು ಹಿಮಾಲಯದಲ್ಲಿ ನೆಲೆಸಿದೆಯೆಂದು ಹಲವಾರು ಗಾಳಿಸುದ್ದಿಗಳಿವೆ. ಆದರೆ ಪ್ರಾಚಲಿತ್ಯದಲ್ಲಿರುವ ವಿಜ್ಞಾನಿಗಳು ಯೆತಿಯ ಇರುವಿಕೆಯ ಬಗ್ಗೆ ಸಿಕ್ಕಿರುವ ಪುರಾವೆಗಳನ್ನು ಅವೈಜ್ಞಾನಿಕವೆಂದೋ, ಕೀಟಲೆ/ಸುಳ್ಳಿನ ವದಂತಿಯೆಂದೋ ಅಥವಾ ಬೇರಾವುದೋ ಸಾಮಾನ್ಯವಾದ ಪ್ರಾಣಿಯನ್ನು ಗುರುತು ಹಿಡಿಯುವಾಗ ಆಗಿರಬಹುದಾದಂಥ ತಪ್ಪೆಂದೋ ಪರಿಗಣಿಸುತ್ತಾರೆ.
ಶಂಭಾಲ – ಇದು ಬೌದ್ಧ ಧರ್ಮದಲ್ಲಿ ಸಿಗಬರುವ ಒಂದು ದೈವಿಕ ನಗರಿ. ಈ ನಗರಿಯ ಬಗ್ಗೆ ಹಲವಾರು ಐತಿಹ್ಯಗಳಿವೆ. ಕೆಲವು ಐತಿಹ್ಯಗಳ ಪ್ರಕಾರ ಇದೊಂದು ನಿಜವಾದ ಭೌತಿಕ ನಗರ ಮತ್ತು ಇಲ್ಲಿ ಪುರಾತನವಾದ ಮತ್ತು ರಹಸ್ಯವಾದ ಬೌದ್ಧಿಕ ಉಪದೇಶಗಳನ್ನು ರಕ್ಷಿಸಲಾಗುತ್ತಿದೆ. ಇನ್ನು ಕೆಲವು ನಂಬಿಕೆಗಳ ಪ್ರಕಾರ ಈ ನಗರವು ಭೌತಿಕ ಅಸ್ತಿತ್ವದಲಿಲ್ಲ ಹಾಗೂ ಇದನ್ನು ಮಾನಸಿಕವಾಗಿ ಮಾತ್ರ ಎಟುಕಿಸಿಕೊಳ್ಳಬಹುದು.
ಶ್ರೀ ಹೇಮಕುಂಡ ಸಾಹೇಬ್ – ಇದು ಸಿಖ್ ಧರ್ಮದ ಒಂದು ಗುರುದ್ವಾರ. ಸಿಖ್ಖರ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರು ತಮ್ಮ ಹಿಂದಿನ ಒಂದು ಅವತಾರದಲ್ಲಿ ಈ ಸ್ಥಳದಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆದರೆಂಬ ನಂಬಿಕೆಗಳಿವೆ.

ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ – ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ ಮಿಜೋರಂ, ಮೇಘಾಲಯ, ಇತ್ಯಾದಿ ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೆಳ್ಳಿ ವಸ್ತು, ಚಿನ್ನದ ವಸ್ತುಗಳ ಸ್ವಚ್ಛತೆ

ಬೆಳ್ಳಿ, ವಸ್ತು ಚಿನ್ನದ ವಸ್ತುಗಳ ಸ್ವಚ್ಛತೆಗೆ ಮನೆ ಬಳಕೆ ವಸ್ತುಗಳು

ಉಪ್ಪಿನ ಸತ್ಯಾಗ್ರಹ

ಉಪ್ಪಿನ ಮೇಲಿನ ಕರವನ್ನು ವಿರೋಧಿಸಿದ ಉಪ್ಪಿನ ಸತ್ಯಾಗ್ರಹ