in

ಕಲ್ಲಿದ್ದಲು ಉಂಟಾಗುವ ಬಗೆ

ಕಲ್ಲಿದ್ದಲು
ಕಲ್ಲಿದ್ದಲು

ರಾಜ್ಯದಲ್ಲಿ 153.669 ಮಿ.ಯೂನಿಟ್‌ ವಿದ್ಯುತ್‌ ಬೇಡಿಕೆ ಇದೆ. ಆದರೆ ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವ ಕಾರಣ ರಾಯಚೂರು, ಬಳ್ಳಾರಿ ಮತ್ತು ಯರಮರಸ್‌ನ 13 ಉಷ್ಣ ವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ 6 ಘಟಕಗಳನ್ನು ಮಾತ್ರ ಚಾಲನೆಯಲ್ಲಿಡಲಾಗಿದೆ.

ಕಲ್ಲಿದ್ದಲು ಸಸ್ಯಪದಾರ್ಥಗಳು ಸಹಸ್ರಾರು ವರ್ಷ ಭೂಗರ್ಭದಲ್ಲಿ ಹೂತುಹೋಗಿ, ಕೊಳೆತು, ಅನೇಕ ಭೌತ ಜೈವ ರಾಸಾಯನಿಕ ಪರಿವರ್ತನೆಗಳನ್ನು ಹೊಂದಿ ಉತ್ಪನ್ನವಾಗುವ, ಒತ್ತಾದ ಪದರವಿರುವ ಇಂಗಾಲದ ವಸ್ತು (ಕೋಲ್). ಮುಖ್ಯವಾದ ಖನಿಜೇಂಧನಗಳಲ್ಲಿ ಇದು ಒಂದು. ಉಷ್ಣಶಕ್ತಿಗೆ ಒಂದು ಪ್ರಧಾನ ಮೂಲ. ಪ್ರಪಂಚದಲ್ಲಿನ ಶಕ್ತಿಯ ಉತ್ಪನ್ನದಲ್ಲಿ ಸುಮಾರು ಅರ್ಧದಷ್ಟು ಕಲ್ಲಿದ್ದಲಿನಿಂದಲೇ ಆಗುವುದು. ಆದ್ದರಿಂದ ಇದನ್ನು ಕೈಗಾರಿಕೆಯ ಬೆನ್ನುಮೂಳೆ ಎನ್ನುವುದುಂಟು. ಕೋಕ್ ಕುಲುಮೆಯಂತ್ರಗಳಲ್ಲಿಯೂ ಅನಿಲ ಕಾರ್ಖಾನೆಗಳಲ್ಲಿಯೂ ಕಲ್ಲಿದ್ದಲೇ ಮೂಲ ಕಚ್ಚಾ ಸಾಮಗ್ರಿ.

ಕಲ್ಲಿದ್ದಲು ಉಂಟಾಗುವುದು ಹೇಗೆ?

ನಿಸರ್ಗದಲ್ಲಿ ಕಲ್ಲಿದ್ದಲು ಉಂಟಾಗುವ ಬಗೆಯಲ್ಲಿ ಎರಡು ಸ್ಪಷ್ಟ ಹಂತಗಳನ್ನು ಗುರುತಿಸಲಾಗಿದೆ. ಮೊದಲಿನದು ಜೀವರಾಸಾಯನಿಕ ಪ್ರಕ್ರಿಯೆ (ಹ್ಯೂಮಿಫಿಕೇಶನ್ ಪ್ರೋಸೆಸ್). ಪ್ರಾಚೀನ ಕಾಲದಲ್ಲಿ ಸರೋವರಗಳ ಸುತ್ತಮುತ್ತ, ಜೌಗುಪ್ರದೇಶಗಳಲ್ಲಿ, ಕಣಿವೆಗಳಲ್ಲಿ ವಿಪುಲವಾಗಿ ಬೆಳೆದಿದ್ದ ಮರಗಳು ಬಿದ್ದು ಕೊಳೆತು ಏಕಾಣುಜೀವಿಗಳ ನಿರಂತರ ಕ್ರಿಯೆಯಿಂದ ಶಿಥಿಲವಾಗಿ ವಿಘಟನಗೊಂಡುವು. ಇದರ ಪರಿಣಾಮ ಸಸ್ಯಗಳಲ್ಲಿದ್ದ ಪ್ರೋಟೀನುಗಳು, ಕೊಬ್ಬುಗಳು, ಕಾರ್ಬೊಹೈಡ್ರೇಟುಗಳು ಮುಂತಾದ ರಾಸಾಯನಿಕ ವಸ್ತುಗಳು ರಾಸಾಯನಿಕ ಕ್ರಿಯೆಗಳಿಗೆ ಒಳಗಾಗಿ ಸಾರಜನಕದಿಂದ ತುಂಬಿರುವ ಕೆಲವು ಕಪ್ಪು ಬಣ್ಣದ ಹ್ಯೂಮಿನ ವಸ್ತುಗಳಾಗಿ ಪರಿವರ್ತನೆಗೊಂಡುವು. ಇವು ಸೂಕ್ಷ್ಮತಂತುಗಳಿಂದ ಕೂಡಿದ ಪುಡಿಮಾಡಬಹುದಾದ ಕಪ್ಪು ಬಣ್ಣದ ಸರಂಧ್ರಕ ವಸ್ತುಗಳು, ಪೀಟ್ ಅಥವಾ ಸಸ್ಯಾಂಗಾರ ಎಂದು ಇವುಗಳ ಹೆಸರು. ಸಸ್ಯಗಳ ಮೂಲ ರಚನೆಯನ್ನು ಸಸ್ಯಾಂಗಾರದ ಮೇಲೆ ಚೆನ್ನಾಗಿ ಗುರುತಿಸಬಹುದು.

ಕಲ್ಲಿದ್ದಲು ಉಂಟಾಗುವ ಬಗೆ
ಕಲ್ಲಿದ್ದಲು ಗಣಿ

ಸಸ್ಯಾಂಗಾರ ವಸ್ತುಗಳು ಪದರ ಪದರವಾಗಿ ಶೇಖರಣೆಗೊಂಡಂತೆ ಅವುಗಳ ಭಾರದಿಂದ ತಳದ ನೆಲ ಕುಸಿಯಿತು; ಬದಿಯ ಬರೆಗಳು ಕುಸಿದು ಈ ರಾಶಿಯ ಮೇಲೆ ಕೆಡೆದುವು. ಹೀಗೆ ಸಸ್ಯಾಂಗಾರ ಆಳ ಆಳಕ್ಕೆ ಸಾಗಿದಂತೆ ಅದರ ಮೇಲೆ ಹೇರಲಾದ ಒತ್ತಡ ಮತ್ತು ಅದರಿಂದ ಜನಿಸಿದ ತೀವ್ರ ಉಷ್ಣ ಇವುಗಳ ಪ್ರಭಾವದಿಂದ ಎರಡನೆಯ ಪ್ರಕ್ರಿಯೆ ಆರಂಭವಾಯಿತು. ಇದರಿಂದ ಸಸ್ಯಾಂಗಾರ ದಟ್ಟೈಸಿ ಕ್ರಮೇಣ ಕಲ್ಲಿದ್ದಲಾಗಿ ಪರಿವರ್ತನೆಗೊಂಡಿತು. ಈ ಪರಿವರ್ತನದ ಪ್ರಮಾಣವನ್ನು ಅನುಸರಿಸಿ ಲಿಗ್ನೈಟ್, ಬಿಟುಮಿನಸ್ ಕೋಲ್ ಮತ್ತು ಆಂಥ್ರಸೈಟ್ ಮುಂತಾದ ಬಗೆಬಗೆಯ ನಮೂನೆಗಳನ್ನು ವಿಂಗಡಿಸುತ್ತಾರೆ.

ಸಸ್ಯಾಂಗಾರ ಕಲ್ಲಿದ್ದಲಾಗಿ ಪರಿಣಮಿಸುವಾಗ ಪ್ರಥಮ ನಿರ್ದಿಷ್ಟ ಘಟ್ಟ ಲಿಗ್ನೈಟ್ ಅಥವಾ ಕಂದುಬಣ್ಣದ ಕಲ್ಲಿದ್ದಲು. ಇದು ಮರದ ರಚನೆಯನ್ನು ತೋರಿಸುತ್ತದೆ. ಇದು ಬಲು ಮೃದುವಾಗಿದ್ದು ಹಿಸುಕಿದರೆ ದೂಳಾಗುವಂತಿರುವುದು. ಇದರೊಳಗೆ ಸ್ಥಿರ ಪ್ರಮಾಣದಲ್ಲಿ ಇಂಗಾಲ ಶೇ. ೨೩ ಭಾಗದವರೆಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಮುಂದಿನ ಘಟ್ಟ ಬಿಟ್ಟುಮಿನಸ್ ಕಲ್ಲಿದ್ದಲು. ಇದು ಹೆಚ್ಚು ಬಳಕೆಯ ಅತ್ಯುಪಯುಕ್ತ ಕಲ್ಲಿದ್ದಲು. ಬಲು ಕಠಿಣವಾಗಿರುವ ವಸ್ತು. ಇದರಲ್ಲಿ ಸ್ಥಿರವಾಗಿರುವ ಇಂಗಾಲಾಂಶ ಶೇ. ೫೦-೬೦ ವರೆಗಿರುತ್ತದೆ. ಆಂಥ್ರಸೈಟ್ ಎಂಬುದು ಗಟ್ಟಿಯಾಗಿಯೂ ಸಾಂದ್ರವಾಗಿಯೂ ಕಡುಕಪ್ಪಾಗಿಯೂ ಇದೆ ಮತ್ತು ಇದು ಕಲ್ಲಿದ್ದಲಿನ ಅತ್ಯಂತ ಶುದ್ಧರೂಪ. ಇದರ ಸ್ಥಿರ ಇಂಗಾಲದ ಪ್ರಮಾಣ ಸುಮಾರು ಶೇ.೯೦. ಕಲ್ಲಿದ್ದಲಿನ ಸಾಪೇಕ್ಷ ಗುರುತ್ವ ಮತ್ತು ಉಷ್ಣೋತ್ಪಾದನ ಮೌಲ್ಯ ಲಿಗ್ನೈಟಿನಿಂದ ಆಂಥ್ರಸೈಟಿನವರೆಗೆ ಏರುತ್ತ ಹೋಗುತ್ತದೆ.

ರಾಸಾಯನಿಕವಾಗಿ ಕಲ್ಲಿದ್ದಲು ಸಂಕೀರ್ಣ ಇಂಗಾಲ (ಕಾರ್ಬನ್) ಸಂಯುಕ್ತಗಳನ್ನೂ ಜೊತೆಗೆ ಸ್ವಲ್ಪ ಇಂಗಾಲೇತರ ದ್ರವ್ಯವನ್ನೂ ನೀರನ್ನು ಒಳಗೊಂಡಿದೆ. ಕಲ್ಲಿದಲಿನ ಮೂಲ ಧಾತುಗಳು ತುಂಬ ಸರಳ-ಕಾರ್ಬನ್, ಜಲಜನಕ ಮತ್ತು ಆಮ್ಲಜನಕ ಇವು ಪ್ರಧಾನ ಘಟಕಗಳು. ಸಾರಜನಕ ಹಾಗೂ ಗಂಧಕ ಅಂಶಗಳೂ ಇವೆ. ಕಲ್ಲಿದ್ದಲಿನ ಪರಿವರ್ತನ ಪ್ರಕ್ರಿಯೆ ಮುಂದುವರಿದಂತೆಲ್ಲ ಇಂಗಾಲದ ಪ್ರಮಾಣ ಸಮತೂಕವಾಗಿ ಹೆಚ್ಚುತ್ತದೆ. ಆದರೆ ಆಕ್ಸಿಜನ್ ಮತ್ತು ಹೈಡ್ರೊಜನ್ನುಗಳ ಪ್ರಮಾಣಗಳು ಸಮತೂಕವಾಗಿ ಕಡಿಮೆ ಹಾಗುತ್ತ ಹೋಗುತ್ತವೆ.

ಕಲ್ಲಿದ್ದಲು ಉಂಟಾಗುವ ಬಗೆ
ಕೋಲ್ ಇಂಡಿಯಾ ಭವನ, ನ್ಯೂ ಟೌನ್, ರಾಜರಹತ್

ಕಲ್ಲಿದ್ದಲಿನ ಜಲಾಂಶ, ಬಾಷ್ಪಶೀಲದ್ರವ್ಯಾಂಶ ಬೂದಿಯ ಶತಾಂಶ, ಸ್ಥಿರ, ಇಂಗಾಲ ಮತ್ತು ಉಷ್ಣಜನಕ ಕೆಲೊರಿ ಮೌಲ್ಯಗಳನ್ನು ನಿರ್ಣಯಿಸಿ ಈ ಅಂಶಗಳ ಮೇಲೆ ಕಲ್ಲಿದ್ದಲಿನ ದರ್ಜೆಯನ್ನು ಸಾಮಾನ್ಯವಾಗಿ ಗೊತ್ತು ಮಾಡಲಾಗುತ್ತದೆ. ಲೋಹ ತಯಾರಿಕೆಯ ಕಾರ್ಯಗಳಲ್ಲಿ ಉಪಯೋಗಿಸಲು ಅರ್ಹವಾದ ಕಲ್ಲಿದ್ದಲಿನ ಮತ್ತೊಂದು ಮುಖ್ಯ ಲಕ್ಷಣ ಅದರ ಕೋಕಿಂಗ್ ಗುಣ. ಹೆಚ್ಚು ಉಷ್ಣತೆಗೆ ಕಲ್ಲಿದ್ದಲನ್ನು ಕೋಕ್ ಒಲೆಗಳಲ್ಲಿ ಕಾಯಿಸಿದ ಮೇಲೆ, ಎಂದರೆ ಅದರೊಳಗಿನ ಬಾಷ್ಪಶೀಲ ದ್ರವ್ಯಗಳನ್ನು ಕರಗಿಸಿ ಹೊರಗೆ ಹಾಕಿದ ಮೇಲೆ, ಉಳಿದುಕೊಳ್ಳುವ ಅಂಶವೇ ಕೋಕ್. ಕಲ್ಲಿದ್ದಲುಗಳಿಂದ ಪಡೆದ ಕೋಕ್ ದುರ್ಬಲ ಸರಂಧ್ರಕ ಮತ್ತು ಪುಡಿಯಾಗುವಂಥದು ಆಗಿರಬಹುದು ಅಥವಾ ಒಡೆಯದ ಹಾಗೆ ಗಟ್ಟಿಯಾಗಿರಬಹುದು. ಲೋಹ ತಯಾರಿಕೆಯಲ್ಲಿ ಗಟ್ಟಿ ಕೋಕನ್ನು ಉತ್ಪತ್ತಿಮಾಡುವ ಕಲ್ಲಿದ್ದಲನ್ನು ಮಾತ್ರ ಅದುರನ್ನು ಕರಗಿಸಲು ಉಪಯೋಗಿಸಬೇಕು.

ಅವಸಾದೀ ಶಿಲೆಗಳ (ಸೆಡಿಮೆಂಟರಿ ರಾಕ್ಸ್‌) ತಳಗಳಲ್ಲಿ ಅಥವಾ ಪದರಗಳಲ್ಲಿನ ಕಲ್ಲಿದ್ದಲಿರುತ್ತದೆ. ಪ್ರತಿಯೊಂದು ತಳಕ್ಕೂ ಒಂದು ಸೀಮ್ ಅಥವಾ ನಾಳ ಎಂದು ಹೆಸರು. ಇಂಥ ಕಲ್ಲಿದ್ದಲಿನ ಶ್ರೇಣಿಗಳು ಒಂದರ ಮೇಲೊಂದು ಒಂದು ನಿಯತ ಕ್ರಮದಲ್ಲಿರುತ್ತವೆ. ಪದರದ ನಡುವೆ ಶೇಲುಗಳ ಮತ್ತು ಮರಳುಗಲ್ಲುಗಳ ದಪ್ಪ ಪದರಗಳಿವೆ. ಒಂದು ನಾಳ ಕೆಲವು ಅಡಿಗಳಷ್ಟು ದಪ್ಪವಾಗಿರಬಹುದು ಅಥವಾ ನೂರಾರು ಅಡಿಗಳಷ್ಟೂ ಇರಬಹುದು. ಕಲ್ಲಿದ್ದಲು ಒಂದಾದ ಮೇಲೊಂದು ಬರುವ ಮಂಕಾದ ಮತ್ತು ಹೊಳಪಾದ ಪದರಗಳಿಂದ ಕೂಡಿದೆ.

ಹೊಳಪುಳ್ಳ ದ್ರವ್ಯಗಳನ್ನು ವಿಟ್ರೇನ್ ಮತ್ತು ಕ್ಲಾರ್ಯೇನ್ ಎಂದು ಕರೆಯುತ್ತಾರೆ. ಮಂಕಾಗಿರುವ ಅಂಶಕ್ಕೆ ಡುರ್ಯೇನ್ ಎಂದು ಹೆಸರು. ಮರದ ಇದ್ದಲಿನಂತಿರುವ ಮತ್ತೊಂದು ಅಂಶವೂ ಕಲ್ಲಿದ್ದಲಿನಲ್ಲಿ ಸೇರಿದೆ; ಇದಕ್ಕೆ ಪ್ಯುಸೇನ್ ಎಂದು ಹೆಸರು. ಭೂಮಿಯ ಚರಿತ್ರೆಯನ್ನು ನೋಡಿದ್ದೇ ಆದರೆ ಎರಡು ಅವಧಿಗಳಲ್ಲಿ, ಕಾರ್ಬಾನಿ ಫರಸ್-ಪರ್ಮಿಯನ್ (ಸುಮಾರು ೨೭೫-೨೦೦ ದಶಲಕ್ಷ ವರ್ಷಗಳ ಕೆಳಗೆ), ಮತ್ತು ಟರ್ಷಿಯರಿ ಅವಧಿ (೪೦-೬೦ ದಶಲಕ್ಷ ವರ್ಷಗಳ ಕೆಳಗೆ) ಗಳಲ್ಲಿ, ವಿಸ್ತಾರವಾದ ಕ್ಷೇತ್ರಗಳಲ್ಲಿ ಕಲ್ಲಿದ್ದಲಿನ ರಚನಾಪ್ರಕ್ರಿಯೆಗಳು ಜರುಗುತ್ತಿದ್ದುದಾಗಿ ಕಂಡುಬರುತ್ತದೆ. ಜಗತ್ತಿನಲ್ಲಿರುವ ಕಲ್ಲಿದ್ದಲುಗಳೆಲ್ಲ ಇವೆರಡರ ಪೈಕಿ ಒಂದು ಅವಧಿಯಲ್ಲಿ ರೂಪಗೊಂಡವು. ಕಾರ್ಬಾನಿಫರಸ್-ಪರ್ಮಿಯನ್ ಕಾಲದ ಕಲ್ಲಿದ್ದಲುಗಳು ಹೆಚ್ಚು ಭೂಭಾಗವನ್ನು ಆಕ್ರಮಿಸಿಕೊಂಡಿವೆ. ಇವುಗಳ ಗುಣ ಶ್ರೇಷ್ಠತರವಾಗಿದೆ. ಪ್ರಪಂಚದ ಅತ್ಯುತ್ತಮ ಕಲ್ಲಿದ್ದಲುಗಳು ಈ ಅವಧಿಯವು. ಆದರೆ ಟರ್ಷಿಯರಿ ಅವಧಿಯ ಕಲ್ಲಿದ್ದಲುಗಳು ಸಾಮಾನ್ಯವಾಗಿ ಲಿಗ್ನೈಟುಗಳು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

11 Comments

ಜಾನ್ಸಿ ರಾಣಿ ಲಕ್ಷ್ಮಿ ಬಾಯಿ

ಸ್ವಾತಂತ್ರ್ಯ ಸಂಗ್ರಾಮದ ವೀರ ಹೋರಾಟಗಾರ್ತಿ, ಜಾನ್ಸಿ ರಾಣಿ ಲಕ್ಷ್ಮಿ ಬಾಯಿ ಜನ್ಮ ದಿನ

ಕೆಂಗಣ್ಣು

ಕರಾವಳಿಯ ಎಲ್ಲ ಕಡೆ ಕೆಂಗಣ್ಣು ಹುಷಾರು ಜಾಗೃತೆ ವಹಿಸಿ